ದಶಕಗಳ ಕಾಲ ಜಾತಿಗಣತಿಯನ್ನು ಮೂಲೆಗೆ ತಳ್ಳಿದ್ದ ಕಾಂಗ್ರೆಸ್ ಕೂಡ, ರಾಹುಲ್ ಗಾಂಧಿ ಯುಗದಲ್ಲಿ ಸಾಮಾಜಿಕ ನ್ಯಾಯದತ್ತ ಮುಖ ಮಾಡಿದ್ದು ದೊಡ್ಡ ಬೆಳವಣಿಗೆ. ಜನಸಾಮಾನ್ಯರ ನೋವುಗಳನ್ನು ಸರಿಯಾಗಿ ಅರಿಯಬಲ್ಲ ಮತ್ತು ಆಕ್ಟಿವಿಸ್ಟ್ ರಾಜಕಾರಣಿಯಾಗಿ ಕಾಣಿಸುವ ರಾಹುಲ್ ಗೆಲುವು ಇರುವುದೇ ಇಲ್ಲಿ!
ಮರು ಜಾತಿ ಸಮೀಕ್ಷೆ ನಡೆಸುವ ದಿನಾಂಕವನ್ನು ಘೋಷಿಸಿದೆ ರಾಜ್ಯ ಸರ್ಕಾರ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆ ಮತ್ತು ಅದರ ಮುಂದುವರಿದ ಭಾಗವಾಗಿ ಬಂದ ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿ ಸಂಬಂಧ ಎದ್ದ ಗೊಂದಲ, ಟೀಕಾಪ್ರಹಾರದ ಕಾರಣ ಮರುಸಮೀಕ್ಷೆ ಮಾಡುವ ಅನಿವಾರ್ಯತೆಯೂ ಸೃಷ್ಟಿಯಾಯಿತು.
ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಹೊಸದಾಗಿ ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯನ್ನು ಮತ್ತೊಮ್ಮೆ ನಡೆಸಲು ನಿರ್ಧರಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಅಂದರೆ 15 ದಿನಗಳ ಕಾಲ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
“ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಅದರಂತೆ, ರಾಜ್ಯದ ಎಲ್ಲಾ 7 ಕೋಟಿ ಜನರ ಸಮೀಕ್ಷೆಯನ್ನು ನಡೆಸಲಾಗುವುದು. ಜಾತಿ ತಾರತಮ್ಯವನ್ನು ಹೋಗಲಾಡಿಸುವುದು ಜನಗಣತಿಯ ಮುಖ್ಯ ಉದ್ದೇಶವಾಗಿದೆ” ಎಂದಿದೆ ಸಿಎಂ ಕಚೇರಿ.
ಮುಖ್ಯಮಂತ್ರಿ ಕಚೇರಿಯ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೊಂಕುನುಡಿ ಆಡಿದ್ದಾರೆ. “ಸಿಎಂ ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ. ಈಗ ಹೊಸ ಗಣತಿ ಮಾಡಿಸುತ್ತಾರೆಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ” ಎಂದಿದ್ದಾರೆ.
ಮುಂದುವರಿದು, “ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕಾಟಾಚಾರಕ್ಕೆ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಈ ಹಿಂದಿನ ಜಾತಿಗಣತಿ ಬಿಡುಗಡೆಯಾಗಿ ಹತ್ತು ವರ್ಷವಾಗಿದೆ. ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲ ಕಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಬೆಲೆ ಇಲ್ಲ. ಜಾತಿಗಳ ನಡುವೆ ಕಂದಕ ತಂದು ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಈ ಹುನ್ನಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮರಳಿ ಜಾತಿ ಗಣತಿ ಮಾಡಲಿದೆ ಎಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ. ಇದರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ನಡೆಸುವ ಗಣತಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಸಾಕು” ಎನ್ನುತ್ತಾರೆ.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಚುನಾವಣಾ ಅಕ್ರಮ | ನಮ್ಮ ಅನುಮಾನ ನಿಜವಾಗಿದೆ: ಸಿಎಂ ಸಿದ್ದರಾಮಯ್ಯ
ಆರ್.ಅಶೋಕ್ ಅವರು ಹಿಟ್ ಅಂಡ್ ರನ್ ಮಾಡುವ ವಿಪಕ್ಷ ನಾಯಕ ಎಂದರೆ ತಪ್ಪಾಗಲಾರದು. ಸರ್ಕಾರವನ್ನು ಟೀಕಿಸುವುದೇ ಅವರ ಉದ್ಯೋಗ ಎಂದು ಭಾವಿಸಿದಂತಿದೆ. ಅದು ಒಳಮೀಸಲಾತಿ ಗಣತಿ ಇರಲಿ, ಜಾತಿ ಸಮೀಕ್ಷೆ ಇರಲಿ- ಎಲ್ಲದ್ದಕ್ಕೂ ಕೊಂಚು ನುಡಿಯುವುದೇ ಅವರ ಕೆಲಸ ಆಗಿರುವುದಾಗಿ ಭಾಸವಾಗುತ್ತಿದೆ.
ತುಸು ಹಿಂದಕ್ಕೆ, ಅಂದರೆ ಏಪ್ರಿಲ್ 13ರಂದು ಆಗಿರುವ ವರದಿಗೆ ಹೋಗೋಣ. “ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು ಹಾಗೂ ಮೂರನೆಯವರು ದಲಿತರು ಎಂದಿತ್ತು. ಆದರೆ ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು, ಅದನ್ನು ಬೇರೆ ಮಾಡಿಲ್ಲ. ಒಕ್ಕಲಿಗರಲ್ಲೇ ಕೆಲವು ಜಾತಿಗಳನ್ನು ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ, ದಲಿತರಿಗೆ ನಾಮ ಹಾಕಿದ್ದಾರೆ” ಎಂದಿದ್ದರು ಅಶೋಕ್. ಮಾಧ್ಯಮಗಳಲ್ಲಿ ಬಂದ ಅರೆಬರೆ ಅಂಕಿ-ಅಂಶಗಳೇ ಅವರ ಟೀಕಾಪ್ರಹಾರಕ್ಕೆ ಸರಕಾಗಿದ್ದವು. ಸೂಕ್ಷ್ಮವಾಗಿ ನೋಡಿ, ಮರು ಸಮೀಕ್ಷೆ ಮಾಡಬೇಕು ಎನ್ನುವವರು ಅವರೇ, ರಾಜ್ಯ ಸರ್ಕಾರದ ಜಾತಿ ಗಣತಿಗೆ ಮಾನ್ಯತೆ ಇಲ್ಲ ಎನ್ನುವವರು ಅವರೇ. ತಾನು ಈ ಹಿಂದೆ ಏನು ಹೇಳಿದ್ದೆ ಎಂಬುದು ಅವರಿಗೆ ನೆನಪಿನಲ್ಲಿ ಇಲ್ಲ. ಶಾರ್ಟ್ ಟೈಮ್ ಮೆಮೊರಿ ಲಾಸ್ ಯಾವುದೇ ರಾಜಕಾರಣಿಗಳಿಗೆ ಒಳ್ಳೆಯದಲ್ಲ- ಅದು ಅಶೋಕ್ ಇರಲಿ, ಕುಮಾರಸ್ವಾಮಿ ಇರಲಿ, ಸಿದ್ದರಾಮಯ್ಯ ಇರಲಿ, ಪ್ರಧಾನಿ ನರೇಂದ್ರ ಮೋದಿ ಇರಲಿ.
ಜಾತಿ ಗಣತಿಯನ್ನು ವಿರೋಧಿಸಿದ್ದ ಪ್ರಧಾನಿ ಮೋದಿಯವರು, “ಇಂಥವುಗಳು ಮಾವೋವಾದಿ ಅಲೋಚನೆಗಳು” ಎಂದು ಜರೆದಿದ್ದರು. ಜಾತಿ ಹೆಸರಲ್ಲಿ ಜನರನ್ನು ಒಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು. ಬಿಹಾರ ಚುನಾವಣೆ ಮುಂದಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ, ದೇಶದ್ಯಾಂತ ಜಾತಿಗಣತಿ ಮಾಡುವುದಾಗಿ ಘೋಷಿಸಿತು. ಕ್ಷಿಪ್ರಕ್ರಾಂತಿ ಎಂಬ ಮಾತು ಕೇಳಿದ್ದೆವು, ಆದರೆ ಕ್ಷಿಪ್ರ ಸೈದ್ಧಾಂತಿಕ ತಿರುವುನೋಟವನ್ನು ನಾವು ನೋಡಿದೆವು. ಮಂಡಲ್ ವಿರೋಧಿ ರಾಜಕಾರಣಕ್ಕೆ ಪ್ರತಿಯಾಗಿ ಬಂದ ಕಮಂಡಲ ರಾಜಕಾರಣವು, ಹಿಂದುಳಿದ ವರ್ಗಗಳಲ್ಲಿ ತಪ್ಪು ಕಲ್ಪನೆಗಳನ್ನು ಬಿತ್ತುವ ಪ್ರಯತ್ನ ಮಾಡಿತ್ತು. “ಇದು ಎಸ್‌ಸಿಗಳ ಮೀಸಲಾತಿ ಹೆಚ್ಚಿಸಲು ಬಂದ ವರದಿ” ಎಂದು ನಂಬಿಸಿದ ಕಾರಣ ಮಂಡಲ್ ವಿರೋಧಿ ಸಮರದಲ್ಲಿ ಹಿಂದುಳಿದ ವರ್ಗಗಳ ಸುಮಾರು 260 ಜನರು ಆತ್ಮಾಹುತಿಯಾಗಿದ್ದರು. ಆದರೆ ಇಂದು ಕಮಂಡಲ ವರ್ಕ್ ಆಗಲ್ಲ ಎಂಬುದು ಅರ್ಥವಾದ ಮೇಲೆ, ಮಂಡಲ್ ಕಡೆಗೆ ಹೊರಡುವ ಬೂಟಾಟಿಕೆಯನ್ನು ಬಿಜೆಪಿ ಶುರುಮಾಡಿದೆ. ದಶಕಗಳ ಕಾಲ ಜಾತಿ ಗಣತಿಯ ಅಗತ್ಯತೆಗಳ ಕುರಿತು ಅಸಹನೆ ಹೊಂದಿದ್ದವರು, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದವರು ಈಗ ಮತ್ತೆ ಜಾತಿಗಣತಿಯ ಜಪ ಮಾಡುತ್ತಿರುವುದು ಏತಕ್ಕೆ? ಈ ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗಿರುವುದಕ್ಕೆ ಜನ ಚಳವಳಿಗಳು ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಹುಮುಖ್ಯ ಕಾರಣ ಎಂಬುದನ್ನು ದಾಖಲಿಸದೆ ಹೋದರೆ ಚರಿತ್ರೆಗೆ ಅಪಚಾರ ಎಸಗಿದಂತೆ.
ದಶಕಗಳ ಕಾಲ ಜಾತಿಗಣತಿಯನ್ನು ಮೂಲೆಗೆ ತಳ್ಳಿದ್ದ ಕಾಂಗ್ರೆಸ್ ಕೂಡ, ರಾಹುಲ್ ಯುಗದಲ್ಲಿ ಸಾಮಾಜಿಕ ನ್ಯಾಯದತ್ತ ಮುಖ ಮಾಡಿದ್ದು ದೊಡ್ಡ ಬೆಳವಣಿಗೆ. ಜನಸಾಮಾನ್ಯರ ನೋವುಗಳನ್ನು ಸರಿಯಾಗಿ ಅರಿಯಬಲ್ಲ ಮತ್ತು ಆಕ್ಟಿವಿಸ್ಟ್ ರಾಜಕಾರಣಿಯಂತೆ ಕಾಣುವ ರಾಹುಲ್ ಗಾಂಧಿಯವರ ಗೆಲುವು ಇರುವುದೇ ಇಲ್ಲಿ! ಚುನಾವಣೆಗಳ ಸೋಲುಗೆಲುವುಗಳ ಲೆಕ್ಕ ಹಾಕದೆ, ಪದೇಪದೇ ಜಾತಿಗಣತಿಯ ಮಾತುಗಳನ್ನು ಆಡುತ್ತಿದ್ದ ರಾಹುಲ್ ಅವರ ಒತ್ತಡವನ್ನು ಎದುರಿಸುವುದು ಬಿಜೆಪಿಗೂ ಕಷ್ಟವಾಗಿತ್ತು.
ಜಾತಿಗಣತಿಯ ಮಹತ್ವದ ಕುರಿತು ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರರ ಹೋರಾಟದ ಕಾಲಕ್ಕೇ ಹೋಗಬೇಕು. 1881ರಲ್ಲಿ ಜನಗಣತಿ ಶುರುವಾದ ಮೇಲೆ ಬ್ರಿಟಿಷರು ಕಾಲಾನಂತರದಲ್ಲಿ ಪರಿಶಿಷ್ಟರ ಜಾತಿ ಸಂಖ್ಯೆಯನ್ನು ಎಣಿಸಲು ಆರಂಭಿಸಿದರು. ಅಂದು ಇದೇ ಹಿಂದೂ ಧರ್ಮ ರಕ್ಷಕರು, ಧರ್ಮವನ್ನು ಒಡೆಯಲಾಗುತ್ತಿದೆ ಎಂದು ಗುಲ್ಲೆಬ್ಬಿಸಿದರು. ಹೇಗಾದರೂ ಜಾತಿಗಣತಿಯನ್ನು ತಡೆದು ಪರಿಶಿಷ್ಟರ ಸಂಖ್ಯೆ ಎಷ್ಟೆಂಬುದು ತಿಳಿಯದಂತೆ ಮರೆಮಾಚುವ ಸಾಹಸ ಮಾಡಿದರು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಬ್ರಿಟಿಷರು ಜಾತಿ ಗಣತಿಗಳನ್ನು ಮುಂದುವರಿಸಿದರು. ಬಾಬಾಸಾಹೇಬರು ಬ್ರಿಟಿಷರ ಈ ನಡೆಯನ್ನು ಮುಕ್ತವಾಗಿ ಸ್ವಾಗತಿಸಿದ್ದಷ್ಟೇ ಅಲ್ಲದೆ, ಪರಿಶಿಷ್ಟರ ಪ್ರಾತಿನಿಧ್ಯದ ಪ್ರಶ್ನೆಯನ್ನು ಈ ಗಣತಿಯ ಆಧಾರದಲ್ಲಿ ಮುನ್ನೆಲೆಗೆ ತಂದರು. 1931ರ ಜನಗಣತಿಯೇ ಕೊನೆಯ ಜಾತಿಗಣತಿಯಾಗಿತ್ತು. 1941ರಲ್ಲಿ ಬ್ರಿಟಿಷರು ಎರಡನೇ ಮಹಾಯುದ್ಧದ ಪರಿಣಾಮ ಜಾತಿಗಣತಿಯನ್ನು ಪೂರ್ಣಗೊಳಿಸಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ನಮ್ಮದೇ ಸರ್ಕಾರವನ್ನು ರಚಿಸಿಕೊಂಡ ಬಳಿಕ 1951ರಲ್ಲಿ ಜವಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಗಣತಿಯ ಜೊತೆ ಜಾತಿಗಣತಿಯನ್ನು ನಡೆಸಬೇಕಿತ್ತು. ಆದರೆ ಅದನ್ನು ಮೂಲೆಗೆ ತಳ್ಳಿದ್ದು ಚಾರಿತ್ರಿಕ ಪ್ರಮಾದ. “ನೆಹರೂ ಸರ್ಕಾರ ಮಾಡಿದ ದೊಡ್ಡ ತಪ್ಪುಗಳಲ್ಲಿ ಇದೂ ಒಂದು” ಎಂದಿದ್ದರು ಅಂಬೇಡ್ಕರ್. ಆದರೆ ನಿಧಾನಕ್ಕೆ ಕಾಂಗ್ರೆಸ್‌ಗೂ ಕಣ್ಣು ಕಾಣಿಸಲು ಶುರುವಾಯಿತು. ಯುಪಿಎ ಅವಧಿ ಶುರುವಾದ ಸಮಯಕ್ಕೆ ಜಾತಿಗಣತಿಯ ಮಹತ್ವಗಳು ಮುನ್ನಲೆಗೆ ಬಂದವು. ಯುಪಿಎ- 2 ಅವಧಿಯಲ್ಲಿ ಜನಗಣತಿಯ ಜೊತೆ ಜಾತಿಗಣತಿಯನ್ನು ಮಾಡಿದರೂ ಹಲವು ಕಾರಣಗಳಿಂದ ವಿವರಗಳನ್ನು ಬಿಡುಗಡೆ ಮಾಡಲಿಲ್ಲ. ಸರಿಯಾದ ಮಾಹಿತಿ ಇಲ್ಲ ಎಂಬ ಕಾರಣವೊಡ್ಡಿ, ಮೋದಿ ಸರ್ಕಾರವೂ ಆ ಅಂಕಿ-ಅಂಶಗಳನ್ನು ಮೂಲೆಗೆ ತಳ್ಳಿದ್ದು ದುರಂತ. ಅದೇನೇ ಜಾತಿ ಗಣತಿಗೆ ಮಹತ್ವ ಬಂದಿದ್ದು ಇತಿಹಾಸದ ಮಹತ್ವದ ಮುಂಚಲನೆ. ಆದರೆ ಜಾತಿ ಗಣತಿಯನ್ನು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂಬುದು ಸತ್ಯವಾದರೂ, ಜಾತಿ ಗಣತಿಯ ತದ್ರೂಪವೇ ಆದ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬುದನ್ನು ಗಮನಿಸಬೇಕು. “ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲ ಕಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಬೆಲೆ ಇಲ್ಲ” ಎಂದಿದ್ದಾರೆ ಅಶೋಕ್. ಆದರೆ ಇವರಿಗೆ ಜಾತಿ ಸಮೀಕ್ಷೆಯ ಗಂಧಗಾಳಿ ಗೊತ್ತಿಲ್ಲ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ವಿದುರಾಶ್ವತ್ಥ | ನಕಲಿ ಮರುಮತಾಂತರ ನಡೆಸಿ ಪೇಚಿಗೆ ಸಿಲುಕಿದರೆ ಬಿಜೆಪಿ ಮುಖಂಡ ರವಿನಾರಾಯಣ ರೆಡ್ಡಿ?
ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಭದ್ರಬುನಾದಿ ಎಂದೇ ಹೇಳಲಾಗುವ ಮಂಡಲ್ ಕಮಿಷನ್ ವರದಿಯ ಕಾಲಕ್ಕೆ ಕೊಂಚ ಹೋಗೋಣ. ಮಂಡಲ್ ವಿರುದ್ಧ ಎದ್ದ ಬಿರುಗಾಳಿಯ ವೇಳೆ ಈ ವರದಿಯ ವಿರುದ್ಧ ಅನೇಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಅಂಥವರ ಪೈಕಿ ಇಂದ್ರಾ ಸಹಾನಿ ಎಂಬವರ ಅರ್ಜಿಯನ್ನು ಮುಖ್ಯವಾಗಿ ಪರಿಗಣಿಸಿ ಕೋರ್ಟ್ ನೀಡಿದ ತೀರ್ಪು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಎತ್ತಿಹಿಡಿಯಿತು. ಅಲ್ಲದೇ ಆ ತೀರ್ಪಿನಲ್ಲಿ ಜಾತಿ ಸಮೀಕ್ಷೆಗೆ ಸಂಬಂಧಿಸಿದ ವಿವರಗಳನ್ನೂ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರ್ದೇಶಿಸಿತು. ರಾಜ್ಯಗಳು ಶಾಶ್ವತ ಹಿಂದುಳಿದ ವರ್ಗಗಳನ್ನು ರಚಿಸಿ, ಅವುಗಳ ಮೂಲಕ ಕಾಲಕಾಲಕ್ಕೆ ಜಾತಿ ಸಮೀಕ್ಷೆಗಳನ್ನು ನಡೆಸಬೇಕು ಎಂದು ಸೂಚಿಸಿತು.
ಕೆಲವು ದಿನಗಳ ಹಿಂದೆ ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿಯ ಒಂದು ಭಾಗ ಸೋರಿಕೆಯಾದ ಸಂದರ್ಭದಲ್ಲಿ ಜಾಗೃತ ಕರ್ನಾಟಕ ಸಂಘಟನೆ ಏರ್ಪಡಿಸಿದ್ದ ಚರ್ಚೆಯಲ್ಲಿ ಖ್ಯಾತ ರಾಜಕೀಯ ವಿಶ್ಲೇಷಕ ಎ.ನಾರಾಯಣ ಅವರು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳಿಗೆ ಸುಪ್ರೀಂಕೋರ್ಟ್ ನೀಡಿರುವ ಸೂಚನೆಗಳನ್ನು ವಿವರಿಸುತ್ತಾ ಆಡಿರುವ ಮಾತುಗಳು ಉಲ್ಲೇಖಾರ್ಹ. “ಸಿದ್ದರಾಮಯ್ಯನವರು ಬಿಡುಗಡೆ ಮಾಡಲು ಹೊರಟಿರುವ ವರದಿಯು ರಾಜಕೀಯಪ್ರೇರಿತವಾದದ್ದು, ಕೆಲವು ಜಾತಿಗಳನ್ನು ಮಣಿಸಬೇಕು ಎಂಬ ಹುನ್ನಾರದಿಂದ ಒಬ್ಬ ನಾಯಕ ಮಾಡಿದ ವರದಿ ಇದು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಖಂಡಿತ ಹಾಗೆ ಇಲ್ಲ. ಮಂಡಲ್ ಕಮಿಷನ್‌ಗೆ ಸಂಬಂಧಿಸಿದ ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಿಂದ ಕರ್ನಾಟಕ ಜಾತಿ ಸಮೀಕ್ಷೆಯ ಇತಿಹಾಸ ಶುರುವಾಗುತ್ತದೆ. ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಹೀಗಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಬೇಕು. ಆಯೋಗವು ನಿರಂತರವಾಗಿ ಪರಿಶೀಲನೆಗಳನ್ನು ನಡೆಸಬೇಕು. ಯಾರನ್ನು ಒಬಿಸಿ ಪಟ್ಟಿಯಿಂದ ಹೊರಗಿಡಬೇಕು ಅಥವಾ ಸೇರಿಸಬೇಕು ಎಂಬುದನ್ನು ಶಿಫಾರಸ್ಸು ಮಾಡಬೇಕು ಹಾಗೂ ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸೂಚಿಸಲಾಗಿದೆ. ಹೀಗಾಗಿ ಈ ಜಾತಿ ಸಮೀಕ್ಷೆಯು ಸಿದ್ದರಾಮಯ್ಯ ಅವರು ಮಾಡಿದ್ದಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ರಚಿತವಾಗಿರುವ ಆಯೋಗವು ಈ ಕೆಲಸವನ್ನು ಕಾಲಕಾಲಕ್ಕೆ ಮಾಡಲೇಬೇಕಾಗುತ್ತದೆ. ಎಲ್ಲ ರಾಜ್ಯಗಳಲ್ಲಿ ಆಯೋಗಗಳು ರಚನೆಯಾದರೂ ಸಮೀಕ್ಷೆಗಳನ್ನು ನಡೆಸಲಿಲ್ಲ. ಕೋರ್ಟ್‌ನ ಆದೇಶದಂತೆ ಕೆಲಸವನ್ನು ಕೈಗೆತ್ತಿಕೊಂಡಿದ್ದು ಸಿದ್ದರಾಮಯ್ಯನವರ ಸರ್ಕಾರ ಮಾತ್ರ. ಸುಪ್ರೀಂ ಕೋರ್ಟ್ ಹೇಳಿದ್ದನ್ನು ಜಾರಿಗೆ ತರುವಲ್ಲಿ ಎಲ್ಲಿದೆ ರಾಜಕೀಯ?” ಎಂದು ಪ್ರಶ್ನಿಸಿದ್ದರು ಎ.ನಾರಾಯಣ.
ಪದೇಪದೇ ದ್ವಂದ್ವಕಾರಿ ಹೇಳಿಕೆ ನೀಡುವ ಅಶೋಕ್ ಅಂತಹ ಬಿಜೆಪಿ ನಾಯಕರ ಎದೆಯಲ್ಲಿರುವ ಆತಂಕಗಳನ್ನು ಈಗಲಾದರೂ ನಾವು ಅರ್ಥಮಾಡಿಕೊಳ್ಳಬೇಕು. ಜಾತಿಗಣತಿಯ ಬಗ್ಗೆ ಅವರಿಗಿರುವ ಅಸಹನೆಯ ಮೂಲ- ಅದುವೆ ಸಂಘಪರಿವಾರದ ಸಂಸ್ಕಾರ ಎಂದೆನ್ನದೆ ವಿಧಿ ಇಲ್ಲ. ಯಾವ ಜಾತಿಯ ಬಳಿ ಎಷ್ಟು ಸಂಪತ್ತು ಇದೆ ಎಂಬುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಹೊರಬೀಳುತ್ತದೆ ಎಂಬ ಭಯ ಅವರಿಗೆ ಇರಬಹುದು!
ಹತ್ತು ವರ್ಷಗಳ ಹಿಂದೆ ನಡೆದ ಸಮೀಕ್ಷೆ ಸರಿ ಇಲ್ಲ ಎಂದು ಗುಲ್ಲು ಹಬ್ಬಿಸಿದ್ದರಿಂದ ರಾಜ್ಯ ಸರ್ಕಾರ ಅನಿವಾರ್ಯವಾಗಿ ಹೊಸ ಸಮೀಕ್ಷೆಯನ್ನು ಕೈಗೆತ್ತಿಕೊಂಡಿತು. ಅತ್ತ ರಾಜ್ಯ ಸರ್ಕಾರವು ಸಮೀಕ್ಷೆ ನಡೆಸಲಿ, ಕೇಂದ್ರ ಸರ್ಕಾರವೂ ಜಾತಿಗಣತಿ ನಡೆಸಲಿ. ಅದರಲ್ಲೇನಿದೆ ತಪ್ಪು? ಕೇಂದ್ರ ಸರ್ಕಾರ ಮಾಡಿರುವ ಘೋಷಣೆಯು ತುರ್ತಾಗಿ ಕಾರ್ಯರೂಪಕ್ಕೆ ಬರುವ ಸೂಚನೆಯಂತೂ ಇಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಈ ಕೆಲಸವನ್ನು ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ ನಿಲುವು. ಒಂದು ಕಾಲದಲ್ಲಿ ಮಂಡಲ್ ವಿರುದ್ಧ ಕಮಂಡಲ ರಾಜಕಾರಣ ಮಾಡಿದವರು, ಇಂದು ಜಾತಿ ಗಣತಿಯ ಪರ ಮಾತನಾಡುತ್ತಿರುವುದೇ ಅವರ ಹಿಪೋಕ್ರಸಿಯನ್ನು ತೋರಿಸುತ್ತದೆ. ಆದರೆ ಕಾಲಚಕ್ರದ ಜೊತೆ ಉರುಳುವುದು ಅವರಿಗೆ ಗೊತ್ತಿದೆ. ಆದರೂ ಅವರ ನಡೆಯನ್ನು ಮುಕ್ತವಾಗಿ ಸ್ವಾಗತಿಸುವುದು ನಾಗರಿಕರೆಲ್ಲರ ಕರ್ತವ್ಯ.
ಇದನ್ನೂ ಓದಿರಿ: ಜಾತಿಗಣತಿ | ಕೇಂದ್ರ-ರಾಜ್ಯಕ್ಕೆ ಸಂಘರ್ಷವಿಲ್ಲ, ತಂತ್ರಜ್ಞಾನ ಬಳಸಿ 16 ದಿನದಲ್ಲಿ ಸಮೀಕ್ಷೆ: ಸಚಿವ ಪರಮೇಶ್ವರ್
ಬಿಜೆಪಿ ಮಿತ್ರ ಪಕ್ಷ ಜೆಡಿಯು ಅಧಿಕಾರದಲ್ಲಿರುವ ಬಿಹಾರದಲ್ಲಿ ರಾಜ್ಯ ಸರ್ಕಾರವೇ ಜಾತಿಗಣತಿ ನಡೆಸಿತ್ತು. ಅದರ ವಿವರಗಳು ಹೊರಬಿದ್ದಿದ್ದವು. ಅದನ್ನೂ ಅಶೋಕ್ ಅಂಥವರು ನಗಣ್ಯ ಎನ್ನುತ್ತಾರೆಯೇ? ಕಾಂತರಾಜ ಆಯೋಗದ ವರದಿಯ ಮುಂದುವರಿದ ಭಾಗವಾಗಿ ವರದಿ ನೀಡಿದ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ಅವಧಿಯಲ್ಲಿ ಹಿಂದುಳಿದ ವರ್ಗದ ಆಯೋಗಕ್ಕೆ ಅಧ್ಯಕ್ಷರಾಗಿದ್ದವರು. ಅಂದು ಜಯಪ್ರಕಾಶ್ ನೀಡಿದ ವರದಿಯನ್ನು ಒಪ್ಪಿದ್ದ ಬಿಜೆಪಿ ನಂತರ ತಿರಸ್ಕಾರದಿಂದ ನೋಡಿತ್ತು. ಇದೆಲ್ಲವೂ ಬಿಜೆಪಿಗೆ ಜಾತಿಗಣತಿ ಮೇಲಿರುವ ಬೂಟಾಟಿಕೆಯನ್ನು ಅನಾವರಣ ಮಾಡುತ್ತವೆ. ಇನ್ನಾದರೂ ರಾಜ್ಯ ಸರ್ಕಾರದ ನಿಲುವನ್ನು, ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನಡೆಯಬೇಕಾದ ಸಾಂವಿಧಾನಿಕ ನಡೆಯನ್ನು ಬಿಜೆಪಿಯವರು ಮುಕ್ತವಾಗಿ ನೋಡುವಂತಾಗಲಿ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.