ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ ವಿಚಾರವಾಗಿ ಪಕ್ಷದ ಕಚೇರಿಗಿಂತಲೂ ನಾಯಕರ ಮನೆ ಸುತ್ತಿರುವ ಕಾರ್ಯಕರ್ತರಿಗೆ ಸರ್ಕಾರ ಒತ್ತುಕೊಟ್ಟಂತೆ ಕಾಣುತ್ತದೆ. ಎಂದಿನಂತೆ ಬಲಾಢ್ಯ ಸಮುದಾಯಗಳಿಗೆ ಸರ್ಕಾರ ಮಣೆ ಹಾಕಿದೆ. ಪ್ರದೇಶವಾರು ಗಮನಿಸಿದೆ ಬೆಂಗಳೂರಿಗೆ 12, ಮಂಗಳೂರಿಗೆ 5 ಹಾಗೂ 11 ಜಿಲ್ಲೆಗೆ ಪ್ರಾತಿನಿಧ್ಯವೇ ಇಲ್ಲ!
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಎರಡೂವರೆ ವರ್ಷಗಳ ಅಧಿಕಾರಾವಧಿ ತುಂಬುತ್ತಿರುವ ಬೆನ್ನಲ್ಲೇ ರಾಜ್ಯದ ಒಟ್ಟು 39 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಹಲವು ಸರ್ಕಸ್‌ಗಳ ನಡುವೆ ಅಧ್ಯಕ್ಷರ ನೇಮಕ ಮಾಡಿ ಈಗಾಗಲೇ ಆದೇಶಿಸಿದೆ.
ಒಟ್ಟು 39 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಕ್ಕೆ ಎಐಸಿಸಿ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೊದಲು ಐದು ಸ್ಥಾನಗಳನ್ನು ಕೈಬಿಟ್ಟು 34 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನವನ್ನು ಫೈನಲ್ ಮಾಡಿದ್ದರು.
ನಂತರ ಮತ್ತೆ ಪರಿಶೀಲಿಸಿ ಅಧ್ಯಕ್ಷ ಸ್ಥಾನದಿಂದ ನಾಲ್ವರನ್ನು ಉಪಾಧ್ಯಕ್ಷ ಸ್ಥಾನಕ್ಕೂ ನೇಮಿಸಿದರು. ಬಳಿಕ ಬಾಕಿ ಇದ್ದ ಐದು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದರು. ಅದಲು ಬದಲು ಕಾರ್ಯದಲ್ಲಿ ಯಾರು ಯಾವುದಕ್ಕೆ ಆಯ್ಕೆಯಾದರು ಎನ್ನುವ ಗೊಂದಲ ಇನ್ನೂ ಕೆಲವರಲ್ಲಿ ಹಾಗೇ ಇದೆ.
ಪರಿಷ್ಕೃತ ಅಂತಿಮ ಪಟ್ಟಿಯನ್ನು ಪರಿಶೀಲಿಸಿದಾಗ ನಿಗಮ, ಮಂಡಳಿ ಹಾಗೂ ಪ್ರಾಧಿಕಾರ ಅಧ್ಯಕ್ಷ ಸ್ಥಾನ ವಿಚಾರದಲ್ಲಿ 11 ಜಿಲ್ಲೆಗಳಿಗೆ ಸರ್ಕಾರದ ಪ್ರಾತಿನಿಧ್ಯವೇ ಇಲ್ಲ ಎಂಬುದು ಗಮನಾರ್ಹ ಸಂಗತಿ. ಅದರಲ್ಲೂ ಬೆಂಗಳೂರು ಮತ್ತು ಮಂಗಳೂರಿನ ಪ್ರಭಾವವೇ ನಿಗಮ, ಮಂಡಳಿ ಹಾಗೂ ಪ್ರಾಧಿಕಾರ ಅಧ್ಯಕ್ಷ ಸ್ಥಾನದಲ್ಲಿ ಹೆಚ್ಚಿದೆ.
ಬೆಂಗಳೂರಿಗೆ 12, ದಕ್ಷಿಣ ಕನ್ನಡ ಮುಖ್ಯವಾಗಿ ಮಂಗಳೂರಿಗೆ 5, ಕಲಬುರಗಿ 3, ದಾವಣಗೆರೆ 3, ಬೆಳಗಾವಿ 2 ಹಾಗೂ ತುಮಕೂರು 2 ಅಧ್ಯಕ್ಷ ಸ್ಥಾನಗಳು ಲಭಿಸಿವೆ. ಉಳಿದಂತೆ ಧಾರವಾಡ, ಬಾಗಲಕೋಟೆ, ಚಿತ್ರದುರ್ಗ, ಬೀದರ್, ಮೈಸೂರು,
ಮಂಡ್ಯ, ಹಾಸನ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಯಾದಗಿರಿ ಜಿಲ್ಲೆಗಳಿಗೆ ತಲಾ ಒಂದು ಸ್ಥಾನ ಲಭಿಸಿದೆ.
ಕಲ್ಯಾಣ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ, ಹಾವೇರಿ, ಚಿಕ್ಕಮಗಳೂರು, ರಾಮನಗರ, ಕೋಲಾರ, ಚಾಮರಾಜನಗರ, ಕೊಡಗು ಹಾಗೂ ಗದಗ ಜಿಲ್ಲೆಗೆ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷ ಸ್ಥಾನದಲ್ಲಿ ಪ್ರಾತಿನಿಧ್ಯವೇ ಇಲ್ಲ.
39 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಗಮನಿಸಿದರೆ ಕೇವಲ ಇಬ್ಬರು ಮಹಿಳೆಯರಿಗೆ ಮಾತ್ರ ಅಧ್ಯಕ್ಷ ಸ್ಥಾನ ಲಭಿಸಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಕೆಪಿಸಿಸಿ ವಕ್ತಾರರಾದ ಲಾವಣ್ಯ ಬಲ್ಲಾಳ್ ಜೈನ್ ಅವರಿಗೆ ಲಭಿಸಿದೆ.
ಜಾತಿವಾರು ವಿವರ ಹೇಗಿದೆ?
ಪಕ್ಷದ ಕಚೇರಿಗಿಂತಲೂ ನಾಯಕರ ಮನೆ ಸುತ್ತಿರುವ ಕಾರ್ಯಕರ್ತರಿಗೆ ಸರ್ಕಾರ ಒತ್ತುಕೊಟ್ಟಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಡಿಮೆಯೇ. ಎಂದಿನಂತೆ ಬಲಾಢ್ಯ ಸಮುದಾಯಗಳಿಗೆ ಸರ್ಕಾರ ಮಣೆ ಹಾಕಿದೆ. ಲಿಂಗಾಯತ ಹಾಗೂ
ಅಲ್ಪಸಂಖ್ಯಾತರಿಗೆ ಬಹುಪಾಲು ಸಿಕ್ಕಿದೆ. ಎಸ್ಸಿಗೆ ಸಮಪಾಲು. ಒಬಿಸಿಗೆ ತೃಪ್ತಿದಾಯಕ.
ಯಾರಿಗೆ ಎಷ್ಟು ಸ್ಥಾನಮಾನ?
ಲಿಂಗಾಯತ – 7, ಒಕ್ಕಲಿಗ – 3, ಕುರುಬ – 3, ಅಲ್ಪಸಂಖ್ಯಾತ – 5, ಪರಿಶಿಷ್ಟ ಜಾತಿ – 5, ಬಲಿಜ – 2, ಬಿಲ್ಲವ -2, ಮರಾಠ- 2, ಗಾಣಿಗ – 1, ಕುಂಬಾರ – 1, ಉಪ್ಪಾರ – 1, ಬೆಸ್ತ -1 , ಗೊಲ್ಲ- 1, ಕುಂಬಾರ – 1, ಜೈನ- 1, ಸವಿತಾ- 1, ಮಡಿವಾಳ – 1, ವಿಶ್ವಕರ್ಮ -1
ಮತ್ತೆ 11 ಜನ ಕಾರ್ಯಕರ್ತರನ್ನು ಉಪಾಧ್ಯಕ್ಷರು ಗಳನ್ನಾಗಿ ನೇಮಕ ಮಾಡಿದೆ. ಅವರಲ್ಲಿ ಇಬ್ಬರೂ ಕುರುಬರು. ಒಬ್ಬರು ಗಣೇಶ್ ಮತ್ತೊಬ್ಬರು ಐಶ್ವರ್ಯ. ಇವರಿಬ್ಬರೂ ಸೇರಿದರೆ ಒಟ್ಟು 5 ಜನ ಕುರುಬರಾಗುತ್ತಾರೆ.
39 ನಿಗಮ, ಮಂಡಳಿ ಹಾಗೂ ಪ್ರಾಧಿಕಾರ ಅಧ್ಯಕ್ಷ ಸ್ಥಾನ ವಿವರ
1 ಪಿ.ರಘು – ಸಫಾಯಿ ಕರ್ಮಚಾರಿ ಆಯೋಗ
2 ಶಿವಲೀಲಾ ವಿನಯ್ ಕುಲಕರ್ಣಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
3 ವಡ್ನಾಳ್ ಜಗದೀಶ್ – ಜೀವವೈವಿಧ್ಯ ಮಂಡಳಿ
4 ಮುರಳಿ ಅಶೋಕ್ ಸಾಲಪ್ಪ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
5 ಡಾ.ಮೂರ್ತಿ – ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
6 ಕರ್ನಲ್ ಮಲ್ಲಿಕಾರ್ಜುನ್ – ಮಾಜಿ ಸೈನಿಕರ ಕಲ್ಯಾಣ ಮಂಡಳಿ
7 ಡಾ.ಬಿ.ಸಿ.ಮುದ್ದುಗಂಗಾಧರ್ – ಮಾವು ಅಭಿವೃದ್ಧಿ ನಿಗಮ
8 ಶಾರ್ಲೆಟ್ ಪಿಂಟೋ – ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
9 ಮರಿಯೋಜಿ ರಾವ್ – ಮರಾಠ ಅಭಿವೃದ್ಧಿ ನಿಗಮ
10 ಎಂ.ಎ.ಗಫೂರ್ – ಕರಾವಳಿ ಅಭಿವೃದ್ಧಿ ಪ್ರಾಧಿಕಾರ
11 ಕೆ. ಹರೀಶ್ ಕುಮಾರ್ – ಮೆಸ್ಕಾಂ
12 ಎನ್. ಸಂಪಂಗಿ – ಕರ್ನಾಟಕ ವೇರ್‌ಹೌಸಿಂಗ್ ಕಾರ್ಪೊರೇಷನ್
13 ವೈ. ಸಯೀದ್ ಅಹ್ಮದ್ -ದೇವರಾಜ ಅರಸು ಟ್ರಕ್ ಟರ್ಮಿನಲ್
14 ಮಹೇಶ್ – ಕಾಡುಗೊಲ್ಲ ಅಭಿವೃದ್ಧಿ ನಿಗಮ
15 ಹೆಚ್ ಬಿ ಮಂಜಪ್ಪ – ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
16 ಭರಮಣ್ಣ ಉಪ್ಪಾರ – ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
17 ಅಗಾ ಸುಲ್ತಾನ್ – ಕೇಂದ್ರ ಪರಿಹಾರ ಸಮಿತಿ
18 ಎಸ್.ಜಿ. ನಂಜಯ್ಯನಮಠ – ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
19 ಅರುಣ್ ಕುಮಾರ್ ಪಾಟೀಲ್ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
20 ಬಾಬು ಹೊನ್ನಾ ನಾಯ್ಕ್ – ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕೃಷ್ಣಾ ಮೇಲ್ದಂಡೆ ಯೋಜನೆ, ಕಲಬುರಗಿ
21 ಯುವರಾಜ್ ಕದಂ – ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ
22 ಪ್ರವೀಣ್ ಕುಮಾರ್ ಪಾಟೀಲ್ – ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)
23 ಮಂಜುನಾಥ ಪೂಜಾರಿ – ನಾರಾಯಣ ಗುರು ಅಭಿವೃದ್ಧಿ ನಿಗಮ
24 ಎಂ.ಎಸ್. ಮುತ್ತುರಾಜ್ – ಸವಿತಾ ಸಮಾಜ ಅಭಿವೃದ್ಧಿ ನಿಗಮ
25 ನಂಜಪ್ಪ ಸಿ – ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
26 ವಿಶ್ವಾಸ್ ಕುಮಾರ್ ದಾಸ್ – ಗಾಣಿಗ ಅಭಿವೃದ್ಧಿ ನಿಗಮ
27 ಎಸ್ ಗಂಗಾಧರ್ – ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್
28 ಪಟೇಲ್ ಶಿವಣ್ಣ – ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
29 ಡಾ. ಶ್ರೀನಿವಾಸ ವೇಲು – ಕುಂಬಾರ ಅಭಿವೃದ್ಧಿ ನಿಗಮ
30 ಟಿ.ಎಂ. ಶಹೀದ್ ಥೆಕ್ಕಿಲ್ – ರಾಜ್ಯ ಕನಿಷ್ಠ ವೇತನ ಮಂಡಳಿ
31 ಚೇತನ್ ಕೆ. ಗೌಡ – ಕೈಮಗ್ಗ ಅಭಿವೃದ್ಧಿ (ಪವರ್‌ಲೂಮ್) ಮಂಡಳಿ
32 ಲಾವಣ್ಯ ಬಲ್ಲಾಳ್ ಜೈನ್ -ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ
33 ಹೆಚ್ ಡಿ ಗಣೇಶ್ – ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್
34 ವಿ ಎಸ್ ಆರಾಧ್ಯ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
35 ಸೈಯದ್ ಮೆಹಮೂದ್ ಚಿಸ್ಟಿ – ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ
36 ಶರಣಪ್ಪ ಸಲಾದ್ ಪುರ್ – ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
37 ನೀಲಕಂಠರಾವ್ ಎಸ್ ಮೂಲಗೆ – ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡ ಅಧ್ಯಕ್ಷಳಿ – ಕಲಬುರಗಿ (ಲಿಂಗಾಯತ)
38 ಅನಿಲ್ ಕುಮಾರ್ ಜಮಾದಾರ್ – ಜವಾಹರ ಬಾಲಭವನ ಸೊಸೈಟಿ ಉಪಾಧ್ಯಕ್ಷ
39 ಬಿ.ಎಸ್. ಕವಲಗಿ -ನಿಂಬೆ ಅಭಿವೃದ್ಧಿ ಮಂಡಳಿ
ಕಾಗವಾಡ ಶಾಸಕ ರಾಜು ಕಾಗೆ ಅಧ್ಯಕ್ಷರಾಗಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಅರುಣ್ ಕುಮಾರ್ ಪಾಟೀಲ್ ಹೆಸರನ್ನು ಎಐಸಿಸಿ ಪಟ್ಟಿ ಮಾಡಿತ್ತು. ಇದು ಮುದ್ರಣ ದೋಷ ಎಂಬ ಸ್ಪಷ್ಟನೆಯೊಂದಿಗೆ ಅರುಣ್ ಪಾಟೀಲ್‌ರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕಕ್ಕೆ ಸೂಚಿಸಲಾಗಿದೆ. ಎಐಸಿಸಿ ಅನುಮೋದಿತ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ನೀಲಕಂಠ ಮುಳ್ಗೆ ಅವರನ್ನು ಶಿಫಾರಸು ಮಾಡಲಾಗಿದೆ.
ಹೈಕಮಾಂಡ್ ಕಳುಹಿಸಿದ್ದ ಪಟ್ಟಿಯಲ್ಲಿ ನಿಕೇತ್ ರಾಜ್ ಮೌರ್ಯ ಹೆಸರೇ ಇರಲಿಲ್ಲ. ಬಳಿಕ ಸಿಎಂ ಸಿದ್ದರಾಮಯ್ಯ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಬಿಎಂಟಿಸಿ ಅಧ್ಯಕ್ಷರನ್ನಾಗಿ ನಿಕೇತ್ ರಾಜ್ ಮೌರ್ಯ ಅವರನ್ನು ನೇಮಕ ಮಾಡಿದ್ದರು. ಇದರಿಂದ ಫುಲ್ ಖುಷ್ ಆಗಿದ್ದ ನಿಕೇತ್ ರಾಜ್ ಮೌರ್ಯ ಅಧಿಕಾರ ಸ್ವೀಕಾರ ಸಹ ಮಾಡಿ ಮುಗಿಸಿದ್ದರು. ಆದರೆ, ಇದೀಗ ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ. ಇನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ವಿಎಸ್ ಆರಾಧ್ಯ ಎಂಬುವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ. ಸರ್ಕಾರದ ಬದಲಾವಣೆಗೆ ನಿಕೇತ್ ರಾಜ್ ಮೌರ್ಯ ಹಾಗೂ ಅವರ ಬೆಂಬಲಿಗರಿಗೆ ನಿರಾಸೆಯಾಗಿದ್ದು, ಒಂದು ರೀತಿ ಕೊಟ್ಟು ಕಿತ್ತುಕೊಂಡು ಅವಮಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.