ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ ರೈತರ 1,777 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಿಸಿದ ಇಲಾಖೆಯ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದೊಂದಿಗೆ ಶನಿವಾರ ಮಹತ್ವದ ಸಭೆ ನಡೆಸಿದ್ದಾರೆ.
ಜುಲೈ 15ರಂದು ಭೂಸ್ವಾಧೀನ ಕುರಿತಂತೆ ಸರ್ಕಾರದ ಅಂತಿಮ ತೀರ್ಮಾನವನ್ನು ತಿಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು 10 ದಿನಗಳ ಸಮಯಾವಕಾಶ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರದ ಸಭೆಯ ತೀರ್ಮಾನವೇ ಬಹುತೇಕ ಜು.15 ರಂದು ಪ್ರಕಟವಾಗಲಿದೆ. ಹೀಗಾಗಿ ಇಂದಿನ (ಜು.12) ಸಭೆ ಬಹಳ ಮಹತ್ವ ಪಡೆದುಕೊಂಡಿದೆ.
ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದ ಚನ್ನರಾಯಪಟ್ಟಣ ಹೋಬಳಿಯ ರೈತರ ಹೋರಾಟ 1,200 ದಿನಗಳನ್ನು ದಾಟಿದೆ. ಯಾವುದೇ ಆಮಿಷಕ್ಕೂ ಒಳಗಾಗದೇ ಬಹುಪಾಲು ರೈತರು ಹೋರಾಟದ ಕಿಚ್ಚು ಆರದಂತೆ ನೋಡಿಕೊಂಡಿದ್ದಾರೆ. ಇಂದಿನ ಸಭೆಯಲ್ಲೂ ಈ ರೈತರ ಹೋರಾಟವನ್ನು ಮೆಲುಕು ಹಾಕಿರುವ ಸಿದ್ದರಾಮಯ್ಯ, ರೈತರ ಪರವಾಗಿಯೇ ಸರ್ಕಾರದ ತೀರ್ಮಾನ ಇರಬೇಕು ಎಂದು ಬಲವಾಗಿ ಚರ್ಚಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಸಭೆಯಲ್ಲಿ ಭಾಗಿಯಾದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ದೇವಹಳ್ಳಿ ಕ್ಷೇತ್ರದ ಶಾಸಕರೂ ಆಗಿರುವ ಆಹಾರ ಇಲಾಖೆಯ ಸಚಿವ ಕೆ ಎಚ್ ಮುನಿಯಪ್ಪ ಅವರು ಒಂದಿಷ್ಟು ರೈತರು ಭೂಮಿ ಕೊಡಲು ಮುಂದೆ ಬಂದಿರುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದಾರೆ. ಸಚಿವರ ಮಾತು ಕೇಳಿಸಿಕೊಂಡ ಮೇಲೆ ಸಿದ್ದರಾಮಯ್ಯ ಅವರು, “ಯಾವುದೇ ಕಾರಣಕ್ಕೂ ಬಲವಂತವಾಗಿ ರೈತರಿಂದ ಜಮೀನು ಭೂಸ್ವಾಧೀನ ಮಾಡಿಕೊಳ್ಳುವುದು ಬೇಡ” ಎಂಬ ಸ್ಪಷ್ಟ ಅಭಿಪ್ರಾಯವನ್ನು ಸಭೆಗೆ ತಿಳಿಸಿದ್ದಾರೆ ಎನ್ನಲಾಗಿದೆ.

449 ಎಕರೆ ಭೂಮಿ ಕೊಡಲು ಮುಂದೆ ಬಂದ ರೈತರು
2023ರಲ್ಲಿ ಕೆಲವು ರೈತರು ಭೂಮಿ ಕೊಡಲು ತಯಾರಿದ್ದೇವೆ ಎಂದು ಹೋರಾಟವೊಂದು ನಡೆದಿತ್ತು. ಆದರೆ, ಆ ಹೋರಾಟದಲ್ಲಿ ಸಂಬಂಧ ಪಡದೇ ಇರುವ ರೈತರೇ ಭಾಗಿಯಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಭೂಸ್ವಾಧೀನ ವಿರುದ್ಧ ಹೋರಾಟ ನಡೆಯುತ್ತಿದ್ದರೂ ಎಲ್ಲೂ ಕಾಣಿಸಿಕೊಳ್ಳದ ಈ ರೈತರು ಸರ್ಕಾರ 10 ದಿನ ಸಮಯ ತೆಗೆದುಕೊಂಡ ಅವಧಿಯಲ್ಲೇ ಏಕಾಏಕಿ ಕಾಣಿಸಿಕೊಂಡು, ತಾವೂ ಜಮೀನು ಕೊಡಲು ಸಿದ್ಧ ಎಂದು ಮುಂದೆ ಬಂದಿದ್ದಾರೆ. ಇವರ ಹಿಂದೆ ಸಚಿವರ ಕೈವಾಡ ಇದೆ ಎಂಬ ಆರೋಪವೂ ಕೇಳಿಬಂದಿದೆ.
ಶನಿವಾರದ ಸಿಎಂ ಸಭೆಗೂ ಮುನ್ನ ಜಮೀನು ಕೊಡಲು ಒಪ್ಪಿರುವ ರೈತರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಕೆಲವು ಷರತ್ತುಗಳೊಂದಿಗೆ 449 ಎಕರೆಯನ್ನು ತಾವು ನೀಡಲು ಸಿದ್ಧವಿರುವುದಾಗಿ ತಿಳಿಸಿ, ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ನ್ಯಾಯಯುತವಾದ ಸೂಕ್ತ ಬೆಲೆ ನಿಗದಿ ಪಡಿಸಲು ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ಭೂಸ್ವಾಧೀನ | ಸಿದ್ದು ಸರ್ಕಾರ ರೈತಪರ ತೀರ್ಪು ಕೈಗೊಳ್ಳಲು ಕಾಂಗ್ರೆಸ್ ವರಿಷ್ಠರಿಗೆ ಜನಪರ ನಿಯೋಗ ಮನವಿ
ಮನವಿ ಪತ್ರದಲ್ಲಿ ನೂರಾರು ರೈತರು ಸಹಿ ಮಾಡಿದ್ದು, ಪ್ರತಿ ಎಕರೆಗೆ 3.50 ಕೋಟಿ ರೂ. ದರ ನಿಗದಿ ಮಾಡಬೇಕು, ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗ ಕೊಡಬೇಕು, ಯಾವುದೇ ಕಾರಣಕ್ಕೂ ಭೂಮಿಯನ್ನು ‘ಹಸಿರು ವಲಯ’ವಾಗಿ ಪರಿವರ್ತಿಸಬಾರದು ಹಾಗೂ ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ‘ಹಳದಿ ವಲಯ’ ಎಂದು ಪರಿವರ್ತಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭೂಮಿಯನ್ನು ಕೊಡಬೇಕು ಎನ್ನುವ ಒಂದಿಷ್ಟು ರೈತರ ಮನವಿಗೂ ಸರ್ಕಾರ ಸ್ಪಂದಿಸುವತ್ತ ಯೋಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟಗಾರರಿಗೂ ಮತ್ತು ಭೂಸ್ವಾಧೀನ ಪರ ಇರುವ ಹೋರಾಟಗಾರರಿಗೂ ಅವರ ಹಕ್ಕು, ಆಗ್ರಹಗಳಿಗೆ ಧಕ್ಕೆಯಾಗದಂತೆ ಸಮತೋಲಿತ ತೀರ್ಮಾನವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆ ಇದೆ ಹೆಚ್ಚಿದೆ ಎಂದು ಬಲ್ಲ ಮೂಲಗಳು ಹೇಳಿವೆ. ಇದೆಲ್ಲದಕ್ಕೂ ಸ್ಪಷ್ಟತೆ ಸಿಗಲು ಜು.15ರವರೆಗೂ ಕಾಯಲೇಬೇಕು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.