ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ನಡುವಿನ ಆಂತರಿಕ ಬಿಕ್ಕಟ್ಟು ಆರಂಭವಾಗಿ ಒಂದು ವರ್ಷಕ್ಕೂ ಅಧಿಕ ಕಾಲವಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಡುವಿನ ಭಿನ್ನಾಭಿಪ್ರಾಯ ಇದಾಗಿದ್ದು, ಸಮಾಪ್ತಿಗೊಳ್ಳುವ ಅಥವಾ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ. ಇವೆಲ್ಲವುದರ ನಡುವೆಯೇ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ನೀಡಿರುವುದು, ಮೋದಿ ಆಡಳಿತದ ಬಗ್ಗೆ ಇರುವ ಅಸಮಾಧಾನವನ್ನು ಎತ್ತಿತೋರಿಸುತ್ತದೆ.
75 ವರ್ಷ ಪೂರೈಸುತ್ತಿರುವ ಪ್ರಧಾನಿ ಮೋದಿ ಅವರ ನಾಯಕತ್ವವೇ ಗಂಭೀರ ಅಪಾಯದಲ್ಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಸದ್ಯಕ್ಕೆ ಏನನ್ನೂ ಖಚಿತವಾಗಿ ಹೇಳಲಾಗದು. ಆದಾಗ್ಯೂ, ಕೇಂದ್ರ ಆಡಳಿತದ ಒಳಗೆ ಒಂದು ‘ಬಿಕ್ಕಟ್ಟು’ ಉಂಟಾಗಿರುವುದು ಖಚಿತ. ಅವೆಲ್ಲವೂ ಎಳೆಎಳೆಯಾಗಿ ಒಂದೊಂದೇ ಬಹಿರಂಗಗೊಳ್ಳುತ್ತಿದೆ. ಇನ್ನೊಂದೆಡೆ ಧನಕರ್ ಅನಿರೀಕ್ಷಿತ ರಾಜೀನಾಮೆಯು ದೇಶದಲ್ಲಿ ಪ್ರತಿಯೊಂದು ಸಂಸ್ಥೆಯೂ, ದೊಡ್ಡ ಅಥವಾ ಸಣ್ಣ ಯಾವುದೇ ಹುದ್ದೆಯನ್ನು ಹೊಂದಿರುವವರು ಒಬ್ಬರ ಬಿಗಿ ನಿಯಂತ್ರಣದಲ್ಲಿರಬೇಕು ಎಂಬ ಆರಂಭಿಕ ಸರ್ವಾಧಿಕಾರಿ ಆಡಳಿತ ಮಾದರಿಯಲ್ಲಿರುವ ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ.
ಇದನ್ನು ಓದಿದ್ದೀರಾ? ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ
ಈಗಾಗಲೇ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳನ್ನು ಖರೀದಿಸಿ ಅಥವಾ ಇತರೆ ವಿಧಾನಗಳನ್ನು ಬಳಸಿ ತಮ್ಮ ನಿಯಂತ್ರಣದಲ್ಲಿಡುವ ಯತ್ನ ಮಾಡಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಕುಗ್ಗಿಸುವ ಅಥವಾ ಸಂಸತ್ತಿನಿಂದಲೇ ಹೊರಹಾಕುವ ಯತ್ನ ಈಗಾಗಲೇ ನಡೆದಿದೆ. ಇನ್ನಷ್ಟು ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಲೇ ಇದೆ. ಈವರೆಗೂ ಸಫಲವಾಗಿಲ್ಲ.
ಇವೆಲ್ಲವುದಕ್ಕೂ ಮೊದಲು ತಾವು ಉಳಿಯಬೇಕಾದರೆ ಕಡ್ಡಾಯವಾಗಿ ಮಾಡಲೇಬೇಕಾದ ಅಸಹಾಯಕ ನಾಗರಿಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಕಾರ್ಯವನ್ನು ಆಡಳಿತ ಮಾಡಿದೆ. ಮೊದಲಿಗೆ ಜನರನ್ನು ಧಾರ್ಮಿಕ(ಕೋಮುವಾದ) ಅಥವಾ ಅತಿ ದೇಶಭಕ್ತಿ ಅಥವಾ ಸಂಸ್ಕೃತಿ ಎಂಬ ಸೂತ್ರದಿಂದ ಕಟ್ಟಿಹಾಕಿ ಅಧಿಕಾರವನ್ನು ಪಡೆಯುವ ಗುರಿಯನ್ನು ಈ ಸರ್ವಾಧಿಕಾರಿ ಸರ್ಕಾರ ತಲುಪಿದೆ. ಆದರೆ ದಬ್ಬಾಳಿಕೆ ಆರಂಭವಾದಾಗ, ಬಂಡವಾಳಶಾಹಿಗಳಿಗೆ ಲಾಭವನ್ನುಂಟು ಮಾಡುವ ನೀತಿಗಳನ್ನು ಸರ್ಕಾರ ರೂಪಿಸಿದಾಗ ಜನರು ಸಾಮಾನ್ಯವಾಗಿಯೇ ಎದುರು ನಿಂತಿದ್ದಾರೆ. ಈ ವೇಳೆ ಜನರನ್ನು ಸಂಪೂರ್ಣವಾಗಿ ಆಡಳಿತ ನಿರ್ಲಕ್ಷಿಸುತ್ತಿದೆ.
ಈ ಎಲ್ಲ ಬೆಳವಣಿಗೆಗಳು ಆಡಳಿತಗಾರ(ಮೋದಿ) ಚಿಂತೆಗೆ ಒಳಗಾಗುವಂತೆ ಮಾಡಿದೆ. ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಯಾವುದೇ ಒಂದು ತುದಿಯಿಂದ ಆಡಳಿತದ ವಿರುದ್ಧ ಪರೋಕ್ಷವಾಗಿ ಒಂದು ಸಣ್ಣ ಪ್ರಶ್ನೆ ಎದ್ದರೂ ನಮ್ಮ ಆಡಳಿತಗಾರರು ತೀವ್ರ ಚಿಂತೆಗೆ ಒಳಗಾಗುವ ಸ್ಥಿತಿಯಿದೆ. ಹಾಗಾಗಿ ಸಂಘಟನೆ ಬಿಡಿ ಓರ್ವ ವ್ಯಕ್ತಿಯೂ ತನ್ನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಅವಕಾಶ ದೇಶದಲ್ಲಿಲ್ಲ. ವಾಸ್ತವದಲ್ಲಿ ಹೇಳುವುದಾದರೆ ಸದ್ಯ ನಮ್ಮ ದೇಶದಲ್ಲಿ ಪ್ರಶ್ನಿಸುವುದನ್ನೇ ನಿಷೇಧಿಸಲಾಗಿದೆ!
ಇತ್ತೀಚೆಗೆ ಗಾಝಾ ನರಮೇಧದ ವಿರುದ್ಧ ಪ್ರತಿಭಟನೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ನೀಡಿದ ಹೇಳಿಕೆಯು ನಮ್ಮ ದೇಶದ ಸ್ಥಿತಿ ಸದ್ಯ ಹೇಗಿದೆ ಎಂಬುದಕ್ಕೆ ಸಾಕ್ಷಿ. ನ್ಯಾಯಾಧೀಶರು ಮತ್ತು ನ್ಯಾಯಾಲಯವೇ ಆಗಲಿ ಸರ್ಕಾರದ ಪರವಾದ ನಿಲುವನ್ನು ಹೊಂದಿರುವಂತಿದೆ. ಇತ್ತೀಚೆಗೆ ಗಾಝಾದಲ್ಲಿ ನಡೆಯುತ್ತಿರುವ ನರಹತ್ಯಾಕಾಂಡದ ವಿರುದ್ಧ ಪ್ರತಿಭಟನೆಗೆ ಅವಕಾಶ ಕೊಡಲು ಮುಂಬೈ ಪೊಲೀಸರು ನಿರಾಕರಿಸಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್ನಲ್ಲಿ ಸಿಪಿಐಎಂ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ತಿರಸ್ಕರಿಸಿದ ಪೀಠ ಬಾಂಬೆ ಹೈಕೋರ್ಟ್, “ನಮ್ಮ ದೇಶದಲ್ಲೇ ಸಾಕಷ್ಟು ಸಮಸ್ಯೆಗಳಿವೆ. ನೀವು ‘ದೂರದೃಷ್ಟಿ ಇಲ್ಲದವರು’ ಎಂದು ಹೇಳಲು ವಿಷಾದಿಸುತ್ತೇವೆ. ನಿಮ್ಮ ದೇಶವನ್ನೇ ಒಮ್ಮೆ ನೋಡಿ. ದೇಶಪ್ರೇಮಿಗಳಾಗಿ. ಇದು ದೇಶಪ್ರೇಮವಲ್ಲ” ಎಂದು ಹೇಳಿದೆ. ಅಂದರೆ ಬೇರೆ ದೇಶದಲ್ಲಾಗುವ ಅನ್ಯಾಯವನ್ನು ಪ್ರಶ್ನಿಸುವಂತಿಲ್ಲವೇ?
ಇದನ್ನು ಓದಿದ್ದೀರಾ? ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಗೃಹ ಇಲಾಖೆಗೆ ರವಾನೆ
ಸರ್ವಾಧಿಕಾರ ಆಡಳಿತದಲ್ಲಿ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡುವುದು ನಾಯಕನ ನಿಯಂತ್ರಣದಲ್ಲಿರುವ ಅಡಿಪಾಯವನ್ನೇ ಅಲುಗಾಡಿಸುತ್ತದೆ ಎಂಬ ಆತಂಕ ಆಡಳಿತಕ್ಕೆ ಇರುತ್ತದೆ. ಪ್ರಶ್ನೆಗಳು ಎಂದಿಗೂ ಆಡಳಿತ ಮಾಡುವವರನ್ನು ದುರ್ಬಲಗೊಳಿಸುತ್ತದೆ, ಚಿಂತೆಗೆ ದೂಡುತ್ತದೆ. ನಮ್ಮ ದೇಶದಲ್ಲಿ ‘ಬಾಸ್’ ಎನಿಸಿಕೊಂಡವರನ್ನು ಪ್ರಶ್ನೆಗಳು ಹೆದರಿಸುತ್ತವೆ. ಆದ್ದರಿಂದಾಗಿ ರಾಷ್ಟ್ರಕ್ಕೆ ನೀಡಿದ ಸೇವೆಗಳ ಗುಣಗಾನ ಮಾಡಿಸಲಾಗುತ್ತದೆ. ಹಾಗೆಯೇ ಭಿನ್ನಮತೀಯರಿಗೆ ‘ರಾಷ್ಟ್ರ ವಿರೋಧಿ’ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಈ ‘ಬಾಸ್’ ಎನಿಸಿಕೊಂಡವರು ಎಲ್ಲವನ್ನೂ ತಿಳಿದವರು ಎಂಬಂತೆ ಚಿತ್ರಿಸಲಾಗುತ್ತದೆ.
ಜೊತೆಗೆ ನಮ್ಮನ್ನು ಪ್ರತಿನಿಧಿಸುವ, ನಮ್ಮ ಪ್ರಶ್ನೆಯನ್ನು ಸಂಸದರು ಅಥವಾ ಶಾಸಕರು ಎತ್ತಬಹುದಾದಂತಹ ಸ್ಥಳವಾದ ಸಂಸತ್ತು ಅಥವಾ ಬಿಜೆಪಿ ನಿಯಂತ್ರಿತ ರಾಜ್ಯದ ಶಾಸಕಾಂಗದ ಕಾರ್ಯವೈಖರಿಯನ್ನು ಅರ್ಥಹೀನವನ್ನಾಗಿ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಸಂಸತ್ತು ಅಥವಾ ವಿಧಾನಸಭೆ ಸರಿಯಾಗಿ ನಡೆದರೆ ತಾನೆ ನಮ್ಮ ಪ್ರಶ್ನೆಗಳನ್ನು ಎತ್ತಲಾಗುವುದು?
ಇವೆಲ್ಲವುದರ ನಡುವೆ ನಮ್ಮ ಕೇಂದ್ರವು ಯಾರಿಗೂ, ಕನಿಷ್ಠ ಜನರಿಗೆ ಉತ್ತರಿಸುವ ಅಗತ್ಯವೂ ಇಲ್ಲ ಎಂಬಂತೆ ವರ್ತಿಸುತ್ತಿದೆ. ರಾಷ್ಟ್ರೀಯ ಹಿತಾಸಕ್ತಿ ಮೇಲುಗೈ ಸಾಧಿಸಬೇಕಾದರೆ ಎಲ್ಲರೂ ತಮ್ಮೆದುರು ತಲೆಬಾಗಲೇಬೇಕು ಎಂಬಂತಹ ಸರ್ವಾಧಿಕಾರಿ ಧೋರಣೆ ನಮ್ಮ ಕೇಂದ್ರ ನಾಯಕರಿಗಿದೆ.
ಕಾನೂನುಗಳನ್ನು ರಚಿಸುವ ಮತ್ತು ಜನರ ಕುಂದುಕೊರತೆಗಳನ್ನು ಚರ್ಚಿಸುವ ಸಂಸತ್ತಿನ ಎರಡೂ ಸದನಗಳ(ಲೋಕಸಭೆ, ರಾಜ್ಯಸಭೆ) ನಿರ್ಧಾರಕ್ಕೆ ಅಂತಿಮವಾಗಿ ಸಹಿ ಹಾಕಿ ಅನುಮೋದನೆ ನೀಡುವುದು ರಾಷ್ಟ್ರಪತಿ ಭವನ ಅಂದರೆ ರಾಷ್ಟ್ರಪತಿಗಳು. ಲೋಕಸಭೆಯಾಗಲಿ, ರಾಜ್ಯಸಭೆಯಾಗಲಿ ವಿಶ್ವಾಸಾರ್ಹತೆ ಮುಖ್ಯ. ಆದರೆ ರಾಜ್ಯಸಭೆಯಲ್ಲಿ ಜುಲೈ 21ರವರೆಗೆ ಮಾತ್ರ ಈ ವಿಶ್ವಾಸಾರ್ಹತೆ ಉಳಿದಿದೆ. ಅದೇ ದಿನ ಧನಕರ್ ರಾಜೀನಾಮೆ ನೀಡಿರುವುದು. ಆರೋಗ್ಯ ಕಾರಣ ನೀಡಿದ್ದರೂ ಈ ದಿಢೀರ್ ರಾಜೀನಾಮೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿವೆ.
ಮೋದಿ ‘ಅನುಯಾಯಿ’ ಧನಕರ್!
ಈ ಹಿಂದೆ ಪಶ್ಚಿಮ ಬಂಗಾಳದ ರಾಜ್ಯಪಾಲ ಮತ್ತು ನಂತರ ರಾಜ್ಯಸಭೆ ಸಭಾಧ್ಯಕ್ಷರಾಗಿದ್ದ ಧನಕರ್ ಅವರನ್ನು ಈವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ‘ಅನುಯಾಯಿ’ ಎಂದೇ ಪರಿಗಣಿಸಲಾಗುತ್ತಿತ್ತು. ಮೋದಿಯವರ ವಿರೋಧಿಗಳ ವಿರುದ್ಧ ಅವರು ಪದೇ ಪದೇ ಹರಿಹಾಯ್ದ ರೀತಿ, ಅಗೌರವದಿಂದ ವರ್ತಿಸಿದ ಪರಿಯಿಂದಲೇ ಹೆಚ್ಚು ಚರ್ಚೆಯ ವಿಷಯವಸ್ತುವಾಗಿದ್ದರು. ಧನಕರ್ ಅವರ ಕೆಲವು ಮಾತುಗಳು ಅವರ ಉಪರಾಷ್ಟ್ರಪತಿ ಸ್ಥಾನಕ್ಕೆ ಶೋಭೆಯಾಗಿರಲಿಲ್ಲ. ಆದರೆ ಪ್ರಧಾನಿ ಹೇಳಿದಂತೆ ನಡೆ ಎಂಬ ಹಾದಿಯಲ್ಲಿದ್ದ ಧನಕರ್ ಅವರು ದಿಢೀರ್ ಆಗಿ ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಯಿದೆ. ಇವೆಲ್ಲವುದಕ್ಕೂ ಇನ್ನೂ ಸ್ಪಷ್ಟವಾದ ಉತ್ತರಗಳಿಲ್ಲ. ಬರೀ ಅಸ್ಪಷ್ಟ, ಊಹಾಪೋಹಗಳು ಮಾತ್ರ ಇವೆ. ಜೊತೆಗೆ ಧನಕರ್ ರಾಜೀನಾಮೆ ಬಗ್ಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಜನತಾದಳ (ಯುನೈಟೆಡ್) ಮೌನ ಮುರಿದಿಲ್ಲ.
ಆದರೆ ನಮಗೆ ತಿಳಿದಿರುವುದೇನು?
- ರಾಜ್ಯಸಭಾ ಸ್ಪೀಕರ್ ಆದ ಧನಕರ್ ಅವರ ಕೊನೆಯ ದಿನದಂದು, ಬಿಜೆಪಿ ಅಧ್ಯಕ್ಷ ಮತ್ತು ಸದನದ ನಾಯಕ ಜೆ.ಪಿ. ನಡ್ಡಾ ಎದ್ದು ನಿಂತು ‘ನಾನು ಹೇಳಿದ್ದು ಮಾತ್ರ ದಾಖಲಿಸಬೇಕು. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರಲ್ಲಿ ಯಾವುದೇ ವಿಷಯವಿಲ್ಲ’ ಎಂದು ಘೋಷಿಸಿದ್ದರು. ನೈಜವಾಗಿ ಆಡಳಿತ ಪಕ್ಷದ ಮುಖ್ಯಸ್ಥರಾಗಿರಲಿ, ಪ್ರಧಾನಿ ಆಪ್ತರಾಗಿರಲಿ ಅಥವಾ ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ವಿರುದ್ಧ ಮೋದಿಯ ಪರವಾಗಿ ನಿಂತಿದ್ದರೂ ಯಾರು ಮಾತನಾಡಬೇಕು, ಯಾರ ಮಾತನ್ನು ದಾಖಲಿಸಬೇಕು ಎಂಬುದನ್ನು ನಿರ್ಧರಿಸುವುದು ಸ್ಪೀಕರ್. ಆದರೆ ಧನಕರ್ ಅವರ ಅಧಿಕಾರವನ್ನು ಈಗಾಗಲೇ ಕಸಿದುಕೊಂಡಂತಿತ್ತು, ನಡ್ಡಾ ಮಾತಿಗೆ ಧನಕರ್ ಮೌನವಾಗಿದ್ದರು. ಸದನದಲ್ಲಿಯೇ ತಮ್ಮನ್ನು ತಾವು ಪ್ರತಿನಿಧಿಸಲು ಸಾಧ್ಯವಾಗದ ಉಪರಾಷ್ಟ್ರಪತಿಗಳು ಬಳಿಕ ರಾಜೀನಾಮೆ ನೀಡಿದರು.
- ಇದಾದ ಬಳಿಕ ಪ್ರಧಾನಿ ಮೋದಿ ಅವರ ಎಕ್ಸ್ ಖಾತೆಯಿಂದ ನಿಗೂಢ ಪೋಸ್ಟ್ ಒಂದನ್ನು ಮಾಡಲಾಗಿದೆ. “ಧನಕರ್ ಅವರಿಗೆ ಈಗಾಗಲೇ ಉನ್ನತ ಹುದ್ದೆಗಳಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಮತ್ತು ಅವರ ಆರೋಗ್ಯ ಸುಧಾರಿಸಲಿ” ಎಂದು ಪ್ರಧಾನಿ ಹಾರೈಸಿದರು.
- ಧನಕರ್ ರಾಜೀನಾಮೆ ನೀಡುವ ಕೆಲವೇ ಗಂಟೆಗಳ ಮೊದಲು ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಹಾರ ಸಲಹಾ ಸಮಿತಿ ಸಭೆಗೆ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿ ಆಡಳಿತ ಪಕ್ಷದಿಂದ ಯಾವುದೇ ಪ್ರತಿನಿಧಿಗಳು ಹಾಜರಾಗದ ಕಾರಣ ಸಭೆ ಮುಂದೂಡಿಕೆ.
ಈ ಮೂರು ಮಾಹಿತಿಗಳಿಗೆ ದಾಖಲೆಗಳಿದ್ದು ಊಹಾಪೋಹವಲ್ಲ. ಇವೆಲ್ಲವೂ ಆಡಳಿತ ಪಕ್ಷವು ಧನಕರ್ ಜೊತೆ ಸಮರಕ್ಕೆ ನಿರ್ಧರಿಸಿದೆ ಎಂಬುದನ್ನು ಸೂಚಿಸುತ್ತವೆ. ಜೊತೆಗೆ ಧನಕರ್ ವಿರುದ್ಧ ಹಲವು ಆರೋಪಗಳೂ ಕೇಳಿಬಂದಿವೆ.
ಅದರಲ್ಲಿ ಪ್ರಮುಖವಾದದ್ದು ಧನಕರ್ ಅವರು ದೆಹಲಿ ಮಾಜಿ ಸಿಎಂ, ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯಂತಹ ವಿಪಕ್ಷಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು. ಸಂಪರ್ಕದಲ್ಲಿರುವುದು ನಿಜವಾಗಿದ್ದರೂ ಇದು ಮುಖ್ಯವೇ? ವಿರೋಧ ಪಕ್ಷದ ನಾಯಕರು ದೇಶದ್ರೋಹಿಗಳು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವುದು ದೇಶದ್ರೋಹದ ಕೃತ್ಯ ಎಂದರ್ಥವೇ?
ಪ್ರಜಾಪ್ರಭುತ್ವ ದೇಶದಲ್ಲಿ ಈ ಪ್ರಶ್ನೆಗೆ ಉತ್ತರ ‘ಇಲ್ಲ’ ಎಂಬುದು. ಆದರೆ ಆಡಳಿತ ಪಕ್ಷದ ಸದಸ್ಯರ ಬಳಿ ನಾವು ಈ ಪ್ರಶ್ನೆಯನ್ನು ಕೇಳಿದರೆ ಬರುವ ಉತ್ತರ ‘ಹೌದು’. ಅದಕ್ಕಾಗಿಯೇ ಹೈಕೋರ್ಟ್ ನ್ಯಾಯಾಧೀಶರನ್ನು ದೋಷಾರೋಪಣೆ ಮಾಡಲು ಕೋರುವ ವಿಷಯದ ಕುರಿತು ವಿರೋಧ ಪಕ್ಷಗಳ ನಿರ್ಣಯವನ್ನು ಅಂಗೀಕರಿಸಿರುವುದು ದೇಶದ್ರೋಹ ಎಂಬಂತೆ ಬಿಂಬಿಸಿರುವುದು. ಒಟ್ಟಾರೆಯಾಗಿ ಈ ನಿರಂಕುಶವಾದ ವ್ಯವಸ್ಥೆಯಲ್ಲಿ ಪ್ರಧಾನಿ ಒಪ್ಪಿಗೆ ಪಡೆಯದೆ ಏನೇ ಮಾಡಿದರೂ ಅದು ಅದನ್ನು ತಪ್ಪೆಂದು ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ವಿರೋಧ ಪಕ್ಷಗಳ ನಿರ್ಣಯವನ್ನು ಅಂಗೀಕರಿಸುವುದು ಉಪ ರಾಷ್ಟ್ರಪತಿ ಮೇಲೆ ಪರಿಣಾಮ ಬೀರುವ ಪ್ರಾಥಮಿಕ ಕಾರಣವೆಂದು ಪರಿಗಣಿಸಲಾಗದು. ಧನಕರ್ ಅಧಿಕಾರ ಹೊಂದಿರುವವರ(ಮೋದಿ) ನೆಚ್ಚಿನ, ಪ್ರಶ್ನಾತೀತ ವ್ಯಕ್ತಿಯಾಗಿದ್ದರೂ ಕೂಡಾ ಮೊದಲಿಗಿಂತ ಭಿನ್ನವಾಗಿ ವರ್ತಿಸಲು ಏಕೆ ಪ್ರಾರಂಭಿಸಿದರು ಎಂಬ ಪ್ರಶ್ನೆ ಹುಟ್ಟುತ್ತದೆ.
ಜೊತೆಗೆ ಧನಕರ್ ಅವರನ್ನು ಭಾಗವತ್ ಅವರ ಗುಂಪಿನ ಏಜೆಂಟ್ ಎಂದು ನೋಡಲಾಗುತ್ತಿದೆಯೇ ಎಂಬ ಪ್ರಶ್ನೆಯಿದೆ. ಧನಕರ್ ಆರ್ಎಸ್ಎಸ್ ಹಿನ್ನೆಲೆಯನ್ನು ಹೊಂದಿಲ್ಲದಿದ್ದರೂ, ಇತ್ತೀಚೆಗೆ ರಾಜ್ಯಸಭೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಆರ್ಎಸ್ಎಸ್ ಮತ್ತು ಅದರ ಆದರ್ಶಗಳ ಬಗ್ಗೆ ತಮಗಿರುವ ಗೌರವ, ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇವೂ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಉಪರಾಷ್ಟ್ರಪತಿಗಳು ಮೋದಿ ವೈಮನಸ್ಸು ಹೊಂದಿರುವ ಸಂಘಪರಿವಾರದ ಪರವಾಗಿ ನಿಂತು ಈ ಬಣ ಸಂಘರ್ಷದಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೋ ಇಲ್ಲವೋ ಎಂಬುದು ಈಗ ಮುಖ್ಯವಲ್ಲ. ಆದರೆ ಇದರಿಂದಾಗಿ ಆಡಳಿತವು ಅಸಮಾಧಾನ ಹೊಂದಿದೆ ಎಂಬುದು ಸ್ಪಷ್ಟ. ಇವೆಲ್ಲ ಸೂಕ್ಷ್ಮ ಬೆಳವಣಿಗೆಗಳು ಧನಕರ್ ಅವರ ರಾಜೀನಾಮೆಗೆ ಕಾರಣವಾಗಿದೆ, ಸದ್ಯ ತೀವ್ರ ಬಿಕ್ಕಟ್ಟಿನ ಕ್ಷಣ ಎನ್ನಬಹುದು. ಉಪ ರಾಷ್ಟ್ರಪತಿ ವಿರುದ್ಧ ಮಂಡಿಸಲಿದ್ದ ಅವಿಶ್ವಾಸ ನಿರ್ಣಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಸಂಸದರ ಸಹಿ ಸಂಗ್ರಹ ಪ್ರಾರಂಭಿಸಲಾಗಿದೆ ಎಂದು ಅದಾನಿ ಮಾಲೀಕತ್ವದ ಎನ್ಡಿಟಿವಿ ಚಾನೆಲ್ ಮೊದಲು ವರದಿ ಮಾಡಿದೆ. ಇವೆಲ್ಲ ಬೆಳವಣಿಗೆ ನಡುವೆ ಧನಕರ್ ರಾಜೀನಾಮೆ ನೀಡಿದ್ದಾರೆ ಎಂಬುದೂ ಗಮನಾರ್ಹ.
ಪ್ರಧಾನಿ ಮತ್ತು ಇತರೆ ಬಿಜೆಪಿ ನಾಯಕರಲ್ಲಿ ಇರುವ ಆತಂಕಕ್ಕೆ ಸ್ಪಷ್ಟ ಕಾರಣ 2024ರ ಚುನಾವಣೆಯ ಫಲಿತಾಂಶ. ಬಿಜೆಪಿಯ ಲೋಕಸಭಾ ಸ್ಥಾನಗಳಲ್ಲಿನ ಸಂಖ್ಯೆಯು 303ರಿಂದ 240ಕ್ಕೆ ಕುಸಿತ ಕಂಡಿತು. ಸಾಂಪ್ರದಾಯಿಕವಾಗಿ ಆರ್ಎಸ್ಎಸ್ ಕಾರ್ಯಕರ್ತರು ಬಿಜೆಪಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ 2024ರ ಚುನಾವಣೆ ವೇಳೆ ಸಹಕರಿಸದೆ ಇರುವುದೇ ಈ ಫಲಿತಾಂಶ ಬರಲು ಕಾರಣ ಎಂಬ ವಾದವಿದೆ. ಅದರಲ್ಲೂ ಬಿಜೆಪಿಯ ಪ್ರಮುಖ ಭದ್ರಕೋಟೆಯಾದ ಉತ್ತರ ಪ್ರದೇಶದಲ್ಲಿಯೂ ಈ ನಷ್ಟ ಸ್ಪಷ್ಟವಾಗಿ ಗೋಚರಿಸಿದೆ.
ಇದರಿಂದಾಗಿ ಸಾಮಾನ್ಯವಾಗಿಯೇ ಬಿಜೆಪಿ ಸಂಸದರು ಬಹಿರಂಗವಾಗಿ ಆರ್ಎಸ್ಎಸ್ ವಿರುದ್ಧ ಅಸಮಾಧಾನ ಹೊರಹಾಕಲು ಆರಂಭಿಸಿದರು. ಆರ್ಎಸ್ಎಸ್ನಿಂದಾಗಿ ಮೋದಿಗೆ ಹಿನ್ನೆಡೆಯಾಗಿದೆ ಎಂಬುದು ಬಹುತೇಕ ಸಂಸದರ ಅರಿವಿಗೆ ಬಂದಿದೆ. ಚುನಾವಣಾ ಆಯೋಗವನ್ನು ನಿಯಂತ್ರಿಸುತ್ತಿದ್ದರೂ ಪ್ರಧಾನಿಗೆ ತಮ್ಮ ಪಕ್ಷವನ್ನು ಬಹುಮತದ ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹಾಗೆಯೇ ಹೊಸದಾಗಿ ಆಯ್ಕೆಯಾದ ಬಿಜೆಪಿ ಸಂಸದರಿಗೆ ಸದನದಲ್ಲಿ ಸ್ಥಾನ ಸಿಕ್ಕಿಲ್ಲ. ವಾಸ್ತವವಾಗಿ ಬಿಜೆಪಿ ಸಂಸದೀಯ ಪಕ್ಷದ ನಾಯಕರ ಆಯ್ಕೆಗಾಗಿ ಸಭೆಯನ್ನು ಅಧಿಕೃತವಾಗಿ ಕರೆದಿರಲಿಲ್ಲ. ಸಂಸದರನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸುವುದರಿಂದ ಬಿಜೆಪಿಯಲ್ಲಿ ಬಣಗಳು ಇನ್ನಷ್ಟೂ ಹೆಚ್ಚಾಗುತ್ತಿದೆ.

ಪ್ರಧಾನಿ ಮೋದಿ, ಭಾಗವತ್ ವೈಮನಸ್ಸು
ಈ ಸಂದರ್ಭದಲ್ಲಿ ಬಿಜೆಪಿಯಲ್ಲಿ ನಿವೃತ್ತಿ ವಯಸ್ಸು 75 ಎಂದು ಆಗಾಗ ಹೇಳುವ ಆರ್ಎಸ್ಎಸ್ ನಾಯಕ ಮೋಹನ್ ಭಾಗವತ್ ಮಾತು ಬಿಜೆಪಿಯಲ್ಲಿ ಚರ್ಚೆಯಾಗದೆ ಉಳಿದಿಲ್ಲ. ಹಿರಿಯ ನಾಯಕರನ್ನು ತೊಡೆದುಹಾಕಲು ಮೋದಿಯವರೇ ನಿಗದಿಪಡಿಸಿದ ವಯೋಮಿತಿಯಿದು. ಈಗ ಪ್ರಧಾನಿ ಮೋದಿ ಅವರ ವಯಸ್ಸು 74. ಈ ವಯೋಮಿತಿ ಪ್ರಕಾರ ಪ್ರಧಾನಿಗಿರುವುದು ಇನ್ನು ಒಂದು ವರ್ಷ ಅವಕಾಶವಷ್ಟೇ. ಅಂದರೆ ಮುಂದಿನ ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಕೊಡಲಿ ಬೀಳುತ್ತದೆಯೇ? ಮೋದಿ ಪ್ರತಿದಾಳಿ ನಡೆಸುತ್ತಾರೆಯೇ, ಮೋದಿ ಮುಂದಿನ ನಡೆಯೇನು? – ಹೀಗೆ ಹಲವು ಪ್ರಶ್ನೆಗಳು ಹುಟ್ಟಿವೆ.
ಮೋದಿ-ಭಾಗವತ್ ನಡುವಿನ ಭಿನ್ನಾಭಿಪ್ರಾಯಕ್ಕೆ ಇನ್ನೊಂದು ಆಯಾಮವಿದೆ. ಮುಂದಿನ ಬಿಜೆಪಿ ಅಧ್ಯಕ್ಷರು ಯಾರು ಎಂಬುದನ್ನು ತಾವು ನಿರ್ಧರಿಸಬೇಕು ಎಂಬುದು ಆರ್ಎಸ್ಎಸ್ ಬಯಕೆ. ಆದರೆ ತಾವೊಬ್ಬರೇ ಈ ತೀರ್ಮಾನ ಕೈಗೊಳ್ಳಬೇಕು ಎಂಬುದು ಪ್ರಧಾನಿ ಮೋದಿ ಇಚ್ಛೆ. ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಒಪ್ಪಂದವಾಗಿಲ್ಲದ ಕಾರಣ, ನಡ್ಡಾ ಈಗಲೂ ಅಧ್ಯಕ್ಷರಾಗಿಯೇ ಮುಂದುವರೆದಿದ್ದಾರೆ. ಬಿಜೆಪಿಯಲ್ಲಿ ಅಧ್ಯಕ್ಷರ ಅಧಿಕಾರವಧಿ ಐದು ವರ್ಷ, ಆದರೆ ನಡ್ಡಾ ಆರನೇ ವರ್ಷಕ್ಕೆ ತಲುಪುತ್ತಿದ್ದಾರೆ.
ಈ ಸಂದರ್ಭಗಳಲ್ಲಿಯೇ ಬಿಹಾರ ವಿಧಾನಸಭಾ ಚುನಾವಣೆಯನ್ನು ಈ ವರ್ಷದ ಕೊನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿಚಾರದಲ್ಲಿಯೂ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಪ್ರಕ್ರಿಯೆ ವಿಪಕ್ಷಗಳ ಮತಗಳನ್ನು ಕಡಿತಗೊಳಿಸಲು, ಬಡವರಿಂದ ಮತದಾರರ ಹಕ್ಕನ್ನು ದೋಚಲು ಮಾಡಲಾಗುತ್ತಿದೆ ಎಂಬ ಆರೋಪ ವಿಪಕ್ಷಗಳದ್ದು. ಇನ್ನು ಚುನಾವಣೆಗೆ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ದಂಗೆ ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಗಳಿವೆ.
ಆದರೆ ನಿಜವಾಗಿ ನಾವು ರಾಜಕೀಯವಾಗಿ ದುರ್ಬಲವಾದ, ಅನಿಶ್ಚಿತತೆಯ ಕ್ಷಣದಲ್ಲಿದ್ದೇವೆ. ಅದಕ್ಕೆ ಮುಖ್ಯ ಕಾರಣ ಪ್ರಧಾನಿ ಮತ್ತು ಆರ್ಎಸ್ಎಸ್ ಮುಖ್ಯಸ್ಥರ ನಡುವಿನ ಭಿನ್ನಾಭಿಪ್ರಾಯ. ಇದು ನೋಡಲು ಸಾಮಾನ್ಯದಂತೆ ಕಂಡರೂ ಸಾಮಾನ್ಯ ವಿಷಯವಲ್ಲ. ದೇಶದ ಉನ್ನತ ಸ್ಥಾನಗಳಲ್ಲಿ ಒಂದಾದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆಯೂ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ನಡೆದಿರುವುದು ಎಂಬುದು ಗಮನಾರ್ಹ. ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ವಿರೋಧಭಾಸಗಳು ಸದ್ಯ ಕಣ್ಣಿಗೆ ಕಾಣುವಂತೆ ರಾಚುತ್ತಿದೆ. ಒಟ್ಟಿನಲ್ಲಿ ಪ್ರಧಾನಿಯಾದ 11 ವರ್ಷಗಳ ಅವಧಿಯಲ್ಲಿ ಇಂತಹ ಸಂದಿಗ್ಧ ಸ್ಥಿತಿಯನ್ನು ಮೋದಿ ಎಂದೂ ಎದುರಿಸಿರಲಿಲ್ಲ ಎಂಬುದು ಸ್ಪಷ್ಟ.

Hey! Someone in my Myspace group shared this website with us so I came to give it a look. I’m definitely enjoying the information. I’m book-marking and will be tweeting this to my followers! Wonderful blog and superb design and style.