ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಮತ್ತು ರಾಜಕೀಯ ಲೆಕ್ಕಾಚಾರ…!

Date:

Advertisements

ಬಹುಮುಖ್ಯವಾದ ತಂತ್ರಗಾರಿಕೆ ಎಂದರೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಾಂಗ್ರೆಸ್ ಸರಕಾರ ಹಾಗೂ ನಾಯಕರ ಕುರಿತು ಸಕಾರಾತ್ಮಕ ಭಾವನೆ ತಳೆಯುವಂತೆ ಮಾಡುವುದು. ಆ ಮೂಲಕವಾಗಿ ಇಡೀ ರಾಜ್ಯದಾದ್ಯಂತ ಕಾರ್ಯಪ್ರವೃತ್ತವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘಗಳ ಕಾರ್ಯಕರ್ತರು, ಸದಸ್ಯರು ಕಾಂಗ್ರೆಸ್ ನತ್ತ ಅಭಿಮಾನ ತಳೆಯುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರವೂ ಇದ್ದಂತೆ ಕಾಣಿಸುತ್ತಿದೆ.

ಕಳೆದ ಎರಡು ಮೂರು ತಿಂಗಳುಗಳಿಂದ ರಾಜ್ಯದೆಲ್ಲೆಡೆ ಹೆಚ್ಚು ಪ್ರಚಾರ ಪಡೆದದ್ದು ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಹೆಣಗಳನ್ನು ಹೂತು ಹಾಕಲಾಗಿದೆ ಎನ್ನುವ ಸುದ್ದಿ…! ಅಲ್ಲಿ ಎರಡು ಮೂರು ದಶಕಗಳಿಂದ ಪೌರ ಕಾರ್ಮಿಕನಾಗಿದ್ದ ಚಿನ್ನಯ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅನಂತರ ಮೆಜಿಸ್ಟ್ರೇಟ್ ಎದುರು ಬಿಎನ್‌ಎಸ್ 183ರ ಅಡಿಯಲ್ಲಿ ನೀಡಿದ್ದ ಹೇಳಿಕೆಯ ಅನಂತರ ಜನರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್ ಐ ಟಿ)ವನ್ನು ರಚಿಸಿ, ಮಾಸ್ಕ್ ಮ್ಯಾನ್ ಚಿನ್ನಯ್ಯನ ದೂರಿನ ಜೊತೆಗೆ ಕಳೆದ ಇಪ್ಪತ್ತು ವರ್ಷಗಳಲ್ಲಿ ರಾಜ್ಯದಾದ್ಯಂತ ದಾಖಲಾಗಿರುವ ಕಾಣೆಯಾಗಿರುವವರ ಕುರಿತಾದ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದು ಸೇರಿದಂತೆ ಮುಂದೆ ನಡೆದ ಎಲ್ಲಾ ಪ್ರಹಸನ, ಬೆಳವಣಿಗೆ ಎಲ್ಲರಿಗೂ ತಿಳಿದ ವಿಚಾರ. ದೂರುದಾರ ಚಿನ್ನಯ್ಯ ಈಗ ತನ್ನ ಹೇಳಿಕೆ ಬದಲಿಸಿ, ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದು ಅಚ್ಚರಿಯ ಸಂಗತಿಯಾದರೂ, ಅದು ತೀರಾ ಅನಿರೀಕ್ಷಿತವಲ್ಲ ಎನ್ನುವುದು ಈ ಪ್ರಕರಣದ ಕುರಿತು ಹತ್ತಿರದಿಂದ ಗಮನಿಸಿದವರ ಅಭಿಪ್ರಾಯ. ಅದೇನೇ ಇದ್ದರೂ ಮೊದಲ ಹಂತದಿಂದ ಈ ವರೆಗೆ ಹಲವು ತಿರುವುಗಳನ್ನು ಪಡೆದುಕೊಂಡ ಈ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್ ಲೆಕ್ಕಾಚಾರ ಒಂದು ತೆರನಾದರೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿನ ಲೆಕ್ಕಾಚಾರವೇ ಬೇರೆ…! ಅದು 2028ರ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದಾದಂತಹ ತಂತ್ರಗಾರಿಕೆ ಹೆಣೆದಿರುವಂತೆ ಈಗ ಮೇಲ್ನೋಟಕ್ಕೆ ಕಂಡುಬರುತ್ತಿದೆ.

SIT 4

ಎಸ್ ಐ ಟಿಯನ್ನು ರಚಿಸಿದಾಗಿನಿಂದ ರಾಜ್ಯ ಸರಕಾರದ ಉಪಮುಖ್ಯಮಂತ್ರಿಗಳು ಧರ್ಮಸ್ಥಳದ ಇದೊಂದು ಷಡ್ಯಂತ್ರ ಅಂತ ನೇರವಾಗಿ ಹೇಳಿದ್ದಲ್ಲದೆ ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಮಹೇಶ ಶೆಟ್ಟಿ ತಿಮರೋಡಿಯನ್ನು ಜೈಲಿಗೆ ಒದ್ದು ಕಳುಹಿಸಿದ್ದೇವೆ ಎಂದು ಮಾಧ್ಯಮಗಳ ಮುಂದೆಯೇ ಹೇಳಿದ್ದರು. ಇಷ್ಟು ಮಾತ್ರವಲ್ಲದೆ ಧರ್ಮಸ್ಥಳದ ರಕ್ಷಣೆಗೆ ಸಾವಿರ ಡಿಕೆಶಿ ಇರ್ತಾರೆ ಅಂತೆಲ್ಲ ಹೇಳಿ ಎಸ್ ಐ ಟಿಯವರಿಗೆ ತನಿಖೆಯ ದಿಕ್ಕು ಯಾವ ಕಡೆಯಿರಬೇಕೆಂಬ ಪರೋಕ್ಷ ಸೂಚನೆ ನೀಡಿದ್ದರು. ಅದರ ಜೊತೆಗೆ ಗೃಹಮಂತ್ರಿಗಳು ಹಾರಿಕೆಯ ಉತ್ತರದಲ್ಲೇ ದಿನದೂಡುತ್ತಿದ್ದಾರೆ. ಇತ್ತ ಎಸ್ ಐ ಟಿ ಒಂದೇ ಒಂದು ಪತ್ರಿಕಾ ಪ್ರಕಟಣೆಯನ್ನೂ ನೀಡದೆ ತನ್ನ ತನಿಖಾ ಹಾದಿಯನ್ನು ನಿಗೂಢವಾಗಿರಿಸಿಕೊಂಡಿದೆ. ಇದೆಲ್ಲದರ ನಡುವೆ ಬಿಜೆಪಿ ಧರ್ಮಸ್ಥಳ ಚಲೊ ಮಾಡಿ, ಶ್ವೇತಾಂಬರರಾದ ವಿರೇಂದ್ರ ಹೆಗ್ಗಡೆಯವರಿಗೆ ಕೊನೆಗೂ ಕೇಸರಿ ಶಾಲು ಹಾಕಿ ಸಮಾವೇಶ ಮಾಡಿ ತನ್ನ ಹರಕೆ ತೀರಿಸಿಕೊಂಡಿದೆ. ಹಸಿರು ಬಿಟ್ಟು ಕೇಸರಿಯನ್ನು ಅಪ್ಪಿದ್ದ ಜೆಡಿಎಸ್ ತಾನೇನೂ ಕಡಿಮೆ ಎನ್ನುವಂತೆ ಧರ್ಮಸ್ಥಳಕ್ಕೆ ಬಂದು ತಮ್ಮ ಹರಕೆಯನ್ನೂ ಸಂದಾಯ ಮಾಡಿ, ಖಾವಂದರ ಜೊತೆ ತಾವಿದ್ದೇವೆ ಎಂದು ಗುಟುರು ಹಾಕಿದ್ದು ರಾಜಕೀಯ ಪ್ರಹಸನದ ಭಾಗವಾಗಿ ನಾವೆಲ್ಲ ಕಂಡಿದ್ದೇವೆ…! ಅದೇ ಸಮಯದಲ್ಲಿ ಕಾಂಗ್ರೆಸ್ ಒಳಗಿದ್ದ ಸಾಫ್ಟ್ ಹಿಂದುತ್ವದ ನಾಯಕರು ತಾವೂ ಧರ್ಮಸ್ಥಳದ ಜೊತೆಗಿದ್ದೇವೆ, ಈ ತನಿಖೆ ವಿರೋಧಿಗಳ ಷಡ್ಯಂತ್ರವನ್ನು ಬಯಲು ಮಾಡಿ, ಕ್ಷೇತ್ರಕ್ಕೆ ಅಂಟಿದ್ದ ಕಳಂಕವನ್ನು ಸ್ವಚ್ಚಗೊಳಿಸುತ್ತದೆ ಎಂದೆಲ್ಲ ತಮ್ಮ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿದ್ದು ತಾವು ಹಿಂದೂ ವಿರೋಧಿಗಳಲ್ಲ ಎಂಬುದನ್ನು ಜಗಜ್ಜಾಹೀರ ಮಾಡಲೋಸುಗ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ.

ಬಿಜೆಪಿ 38
ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿದ ಬಿಜೆಪಿ ಮುಖಂಡರು

ಮಾಸ್ಕಮ್ಯಾನ್ ಚಿನ್ನಯ್ಯ ತೋರಿಸಿದ ಸ್ಥಳಗಳಲ್ಲಿ ಅಸ್ಥಿಪಂಜರ ಹೆಚ್ಚೇನೂ ದೊರೆಯದಿದ್ದರೂ ವಿಠ್ಠಲಗೌಡ ತೋರಿಸಿದಲ್ಲಿ ಭೂಮಿಯ ಮೇಲೆ ಆರೇಳು ತಲೆ ಬುರುಡೆ, ಅಸ್ಥಿಪಂಜರದ ಪಳೆಯಳಿಕೆಗಳು ದೊರೆತಿವೆ ಎನ್ನುವ ವರದಿ ನಂಬಲರ್ಹ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಒಂದೆಡೆ ಸರಕಾರ ಹೈಕೋರ್ಟನಲ್ಲಿ ಈ ಪ್ರಕರಣದಲ್ಲಿ ಷಡ್ಯಂತ್ರವಿದೆ ಎಂದು ಹೇಳಿದರೆ ಅದೇ ಕೋರ್ಟ್ ನಲ್ಲಿ ಎಸ್ ಐ ಟಿ ಪರ ವಕೀಲರು ಷಡ್ಯಂತ್ರದ ಕುರಿತು ತಮಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ವಾದಿಸಿದ್ದಾರೆ. ಇದೇ ಹೊತ್ತಲ್ಲಿ ಅತ್ಯಾಚಾರಿಗಳ ವಿರುದ್ದ ಸಮರ ಸಾರಿದ್ದೇವೆ ಎಂದು ಹೇಳುತ್ತಿರುವ ಮಹೇಶ ಶೆಟ್ಟಿ ತಿಮರೋಡಿಯವರ ಗುಂಪಿನಲ್ಲಿರುವ ಗಿರೀಶ ಮಟ್ಟೆಣ್ಣನವರ್, ಜಯಂತ್ ಹಾಗೂ ಯೂಟ್ಯೂಬರ್ ಗಳಾದ ಅಭಿಷೇಕ್, ಮನಾಫ್ ಹಾಗೂ ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟ ವಿಠ್ಠಲ ಗೌಡರ ವಿಚಾರಣೆಯಾಗಿದೆ. ಆಚೆ ಕಡೆಯಿಂದ ಪ್ರಾರಂಭದಲ್ಲಿ ಚಿನ್ನಯ್ಯನ ಆರೋಪಕ್ಕೆ ಕೌಂಟರ್ ಕೊಡುತ್ತಿದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರನ್ನು ಎಸ್ ಐ ಟಿ ವಿಚಾರಣೆ ನಡೆಸಿದೆ. ಆಗಾಗ ಎಸ್ ಐ ಟಿ ಮುಖ್ಯಸ್ಥರಾದ ಮೊಹಂತಿಯವರು ಸಿ.ಎಂ. ಮತ್ತು ಗೃಹಮಂತ್ರಿಗಳನ್ನು ಭೇಟಿಯಾಗಿ ಮಾಹಿತಿ ನೀಡಿ, ನಿರ್ದೇಶನ ಪಡೆದು ಬರುತ್ತಿದ್ದಾರೆ. ಹಾಗಾದರೆ ಈಗ ಈ ಪ್ರಕರಣದ ಮುಂದಿನ ಬೆಳವಣಿಗೆ ಏನು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದೇ ಹೊತ್ತಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ಲೆಕ್ಕಾಚಾರದಲ್ಲಿ ಈ ಪ್ರಕರಣವನ್ನು ಬಳಸಿಕೊಳ್ಳಲು ಮುಂದಾದಂತೆ ಕಾಣಿಸುತ್ತಿದೆ. ಹಾಗಂತ ಅದು ತಪ್ಪಲ್ಲ, ಅದು ರಾಜಕೀಯ ತಂತ್ರಗಾರಿಕೆಯ ಭಾಗ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಾಗಿದೆ.

ಮಟ್ಟಣ್ಣನವರ್
ಗಿರೀಶ್‌ ಮಟ್ಟಣ್ಣನವರ್‌, ಜಯಂತ್‌, ವಿಠಲ ಗೌಡ

ಒಂದು ಆಡಳಿತರೂಢ ಪಕ್ಷದಲ್ಲಿ ಯಾವಾಗಲೂ ಪದೇ ಪದೇ ಈ ಅಧಿಕಾರ ತಮ್ಮ ಕೈಯಲ್ಲೇ ಇರಬೇಕೆನ್ನುವ ಅತ್ಯಾಸೆ, ದೂರಾಲೋಚನೆ ಇರುವುದು ಸಹಜ. ಆ ಪ್ರಯತ್ನದ ಹಾದಿಯಲ್ಲಿ ತಮಗೆ ದೊರೆತ ಅವಕಾಶವನ್ನು ನುರಿತ ರಾಜಕೀಯ ಮುತ್ಸದ್ದಿಗಳು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಈಗಲೂ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದವರು ಬಿಜೆಪಿ ಹಾಗೂ ಜೆಡಿಎಸ್ ಈ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿರುವುದನ್ನು ಮನಗಂಡು ಅದಕ್ಕೆ ಅವಕಾಶ ನೀಡದೆ ತಾವು ಇದರ ಸಂಪೂರ್ಣ ಲಾಭ ಪಡೆದುಕೊಳ್ಳುವ ಯತ್ನದಲ್ಲಿದ್ದಂತೆ ಕಾಣಿಸುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲವೇನೋ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಪ್ರಬಲ ಬಿಲ್ಲವ ಸಮುದಾಯಕ್ಕೆ ಸೇರಿದವರಾದರೂ ಅಲ್ಪಸಂಖ್ಯಾತ ಜೈನ ಸಮುದಾಯದ ಧನಂಜಯ ಕುಮಾರ್ ಅವರ ಎದುರು ತೊಂಬತ್ತರ ದಶಕದಲ್ಲೇ ಸೋತು ಹೋದ ಮೇಲೆ ಇಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಾಗಾಗಿ ಇಲ್ಲಿ‌ನ ಕಾಂಗ್ರೆಸ್ ಮುಖಂಡರು ಹಿಂದುತ್ವದ ವಿಚಾರದಲ್ಲಿ ಈಗ ಬಿಜೆಪಿಗೆ ಪೈಪೋಟಿ ಕೊಡುವಷ್ಟರ ಮಟ್ಟಿಗೆ ಜಾಗೃತೆಯಿಂದ ಹೇಳಿಕೆ ಕೊಡುತ್ತಾರೆ. ಹಾಗಾಗಿ ಇಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಹುಮುಖ್ಯವಾಗಿ ಸ್ಪೀಕರ್ ಖಾದರ್ ಇರಬಹುದು, ಪುತ್ತೂರು ಶಾಸಕ ಅಶೋಕ ರೈ ಇರಬಹುದು, ಮಾಜಿ ಸಚಿವರಾದ ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್ ಇರಬಹುದು ಎಲ್ಲರೂ ಧರ್ಮಸ್ಥಳ ಪ್ರಕರಣದಲ್ಲಿ ಖಾವಂದರ ಪರವಾಗಿ ನಿಂತಿರುವುದು ಬಹಿರಂಗ ಸತ್ಯ. ಇದೆಲ್ಲವನ್ನು ನೋಡಿದಾಗ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮ್ಮದೇ ಸರಕಾರದ ಪ್ರಭಾವಿ ಮಂತ್ರಿಗಳ ಮೇಲೆ ಒತ್ತಡ ಹಾಕಿ ಈ ಪ್ರಕರಣವನ್ನು ತುಂಬ ನಾಜೂಕಾಗಿ ನಿರ್ವಹಿಸುವಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಬಹುದು.

ಇವೆಲ್ಲದರ ನಡುವೆ ಸೌಜನ್ಯ ಪರ ಹೋರಾಟಗಾರರು ಈ ಪ್ರಕರಣದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಅದು ಅವರ ನಿರಂತರ ಹೋರಾಟದ ಮುಂದುವರೆದ ಭಾಗ ಎಂದರೆ ತಪ್ಪಾಗಲಾರದು. ಆದರೆ ಈ ಹೋರಾಟಗಾರರ ಮುಖಂಡ ಮಹೇಶ ಶೆಟ್ಟಿ ತಿಮರೋಡಿ ಹಿಂದೂ ಸಂಘಟನೆಯ ಮುಖಂಡರು, ಗಿರೀಶ ಮಟ್ಟಣ್ಣನವರ್ ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಯಿಂದ ಬಂದವರು ಹಾಗೆಯೇ ಬಹುತೇಕ ಬೆಂಬಲಿಗರು ಹಿಂದುತ್ವದ ಪ್ರತಿಪಾದಕರು. ಇವರಿಗೆ ಸಂಘ ಪರಿವಾರದಲ್ಲಿ ಬೆಂಬಲಕ್ಕೆ ನಿಂತವರು ಕಲ್ಲಡ್ಕ ಪ್ರಭಾಕರ ಭಟ್ಟರು ಎನ್ನುವ ಸುದ್ದಿ ಇದೆ. ಆದರೆ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಅಸ್ತಿತ್ವ ಹೊಂದಿರುವ ಈಗಿನ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ನಿರ್ದೇಶನದ ರಾಜ್ಯ ಬಿಜೆಪಿ ತಂಡ ಖಾವಂದರ ಪರವಾಗಿ ನಿಂತಿದೆ. ಅಲ್ಲಿಗೆ ಈ ಪ್ರಕರಣ ಬಲಪಂಥೀಯ ಹಿಂದೂ ಸಂಘಟನೆಗಳ ಎರಡು ಬಣಗಳ ನಡುವಿನ ಹೋರಾಟ ಎನ್ನುವುದು ಸ್ಪಷ್ಟ. ಹಾಗೆಂದು ಹೋರಾಟಗಾರರು ಸುಳ್ಳು ಆರೋಪ ಮಾಡುತ್ತಿದ್ದಾರೆಂದಾಗಲೀ ಅತ್ಯಾಚಾರ ಕೊಲೆಗಳು ಇಲ್ಲಿ ನಡೆಯಲೇ ಇಲ್ಲ ಎಂದಾಗಲೀ ಹೇಳುತ್ತಿಲ್ಲ. ಅಥವಾ ಧರ್ಮಸ್ಥಳದಲ್ಲಿ ಅನಾಚಾರ ತಾಂಡವ ಆಡುತ್ತಿದೆ ಎನ್ನುವುದಾಗಲೀ, ಅಲ್ಲಿ ಆಗಿರುವ ಸಾವುಗಳೆಲ್ಲ ಕೊಲೆ, ಅತ್ಯಾಚಾರದಿಂದಲೇ ಆಗಿವೆ ಎನ್ನುವುದಾಗಲೀ ಸತ್ಯಕ್ಕೆ ಹತ್ತಿರ ಆಗಿದೆ ಎನ್ನಲಾಗದು. ಆದರೆ ಒಂದಷ್ಟು ಅಸಹಜತೆ ಇಲ್ಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುವುದಂತೂ ನಿಜ…! ಹಾಗಾಗಿ ಕಾಂಗ್ರೆಸ್ ಪಕ್ಷ ಈಗ ತಿಮರೋಡಿಯ ತಂಡದ ಕಡೆ ಸಹಾನೂಭೂತಿ ಹೊಂದಲು ಒಲವು ಹೊಂದಿಲ್ಲ ಹಾಗೆಯೇ ಖಾವಂದರ ಕುರಿತಾದ ವಿಚಾರದಲ್ಲಿ ನಿಷ್ಠುರವಾಗಿ ನಡೆದುಕೊಳ್ಳಲು ಸಿದ್ದವಿಲ್ಲ. ಇದರ ಪರಿಣಾಮವೇ ಎಸ್ ಐ ಟಿಯ ನಡೆ ನಿಗೂಢವಾಗುತ್ತಿರುವುದು ಹಾಗೂ ತಿಮರೋಡಿಯನ್ನು ಇದೇ ಹೊತ್ತಲ್ಲಿ ಗಡಿಪಾರು ಮಾಡಿರುವುದು ಎನ್ನುವ ಮಾತು ಈಗ ಕರಾವಳಿ ಭಾಗದಲ್ಲಿ ಕೇಳಿಬರುತ್ತಿದೆ.

timarodi 1

ಧರ್ಮಸ್ಥಳದ ಈ ಪ್ರಕರಣವನ್ನು ಕಾಂಗ್ರೆಸ್ ಹೇಗೆ ರಾಜಕೀಯಕ್ಕೆ ಬಳಸಿಕೊಳ್ಳಬಹುದು ಎನ್ನುವುದನ್ನು ವಿಶ್ಲೇಷಿಸುವುದಾದರೆ, ಬಹುಮುಖ್ಯವಾಗಿ ಧರ್ಮಸ್ಥಳದ ಭಕ್ತರು ಹಾಗೂ ಬಲಪಂಥೀಯ ಚಿಂತನೆ ಇರುವವರ ವಿಶ್ವಾಸವನ್ನು ಗಳಿಸಿಕೊಳ್ಳಬಹುದು ಹಾಗೂ ಮುಂದೆ ಅವರು ಕಾಂಗ್ರೆಸ್ ನತ್ತ ವಾಲುವಂತೆ ಮಾಡಬಹುದು ಎನ್ನುವುದು. ಅದರ ಜೊತೆಗೆ ಮಹೇಶ ಶೆಟ್ಟಿ ತಿಮರೋಡಿಯವರಂತಹ ಹಿಂದೂಪರ ರೆಬಲ್ ನಾಯಕರನ್ನು ನಿಯಂತ್ರಿಸುವ ಮೂಲಕ ರಸ್ತೆಗಿಳಿದು ಹೋರಾಡುವ ಹಿಂದೂಪರ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿ ಅತ್ತ ಬಿಜೆಪಿಯೂ ಇಲ್ಲ ಇತ್ತ ಹೋರಾಟ ಮಾಡಲು ಅವಕಾಶ ಇಲ್ಲದಂತೆ ಅನಾಥ ಪ್ರಜ್ಞೆ ಮೂಡುವಂತೆ ಮಾಡುವುದು. ಇದರಿಂದ ತನ್ನಿಂತಾನೇ ಕರಾವಳಿ ಭಾಗದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳ ಮೇಲೆ ನಿಯಂತ್ರಣ ಸಾಧಿಸುವುದು. ಇದೆಲ್ಲಕ್ಕಿಂತ ಬಹುಮುಖ್ಯವಾದ ತಂತ್ರಗಾರಿಕೆ ಎಂದರೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಾಂಗ್ರೆಸ್ ಸರಕಾರ ಹಾಗೂ ನಾಯಕರ ಕುರಿತು ಸಕರಾತ್ಮಕವಾದ ಭಾವನೆ ತಳೆಯುವಂತೆ ಮಾಡುವುದು. ಅದರ ಮೂಲಕವಾಗಿ ಇಡೀ ರಾಜ್ಯದಾದ್ಯಂತ ಕಾರ್ಯಪ್ರವೃತ್ತವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘಗಳ ಕಾರ್ಯಕರ್ತರು, ಸದಸ್ಯರು ಕಾಂಗ್ರೆಸ್ ನತ್ತ ಅಭಿಮಾನ ತಳೆಯುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರವೂ ಇದ್ದಂತೆ ಕಾಣಿಸುತ್ತಿದೆ. ಈಗ ಎಸ್ ಐ ಟಿ ನೀಡುವ ವರದಿಯನ್ನು ಗೌಪ್ಯವಾಗಿಟ್ಟು, ಅದನ್ನು ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ನಡೆಸದೇ ಮುಂದಿನ ಚುನಾವಣೆಯವರೆಗೆ ಕಾಲಹರಣ ಮಾಡಿದರೆ ಚುನಾವಣೆಯ ಸಂದರ್ಭದಲ್ಲಿ ಧರ್ಮಸ್ಥಳ ಸಂಘದವರ ಬೆಂಬಲ ಕಾಂಗ್ರೆಸ್ ಗೆ ಸಿಗುವಂತೆ ಮಾಡಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ‌ ಈ ಸರಕಾರ ಕ್ಷೇತ್ರದ ವಿರುದ್ದವಾಗಲೀ ಖಾವಂದರ ವಿರುದ್ದವಾಗಲೀ ನಿಂತಿಲ್ಲ ಬದಲಾಗಿ ಧರ್ಮಾಧಿಕಾರಿಗಳ ಮೇಲೆ ಈ ವರೆಗೆ ಬಂದಿರುವ ಆರೋಪಗಳನ್ನೆಲ್ಲಾ ತೊಡೆದು ಹಾಕಿ ಶುಭ್ರಗೊಳಿಸಿದೆ ಎಂದು ಹೇಳಿಕೊಳ್ಳಬಹುದಲ್ಲವೇ…?

ಇದನ್ನೂ ಓದಿ ನ್ಯಾಯ ಸಮಾವೇಶ | ಹಾಸನದಲ್ಲಿ ಒಬ್ಬ ಅಪರಾಧಿಯಾದರೆ, ಧರ್ಮಸ್ಥಳದಲ್ಲಿ ಇಡೀ ವ್ಯವಸ್ಥೆಯೇ ಅಪರಾಧಿ- ಸುಭಾಷಿಣಿ ಅಲಿ

ಇದು ಖಂಡಿತವಾಗಿಯೂ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆ ಹಿಂದೂಪರ ತಟಸ್ಥ ಮತಗಳು ಬೀಳಲು ಸಹಕಾರಿಯಾಗುತ್ತದೆ. ಸ್ಥಳೀಯವಾಗಿ ಹೇಳುವುದಾದರೆ ಮುಂದಿನ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಸ್ಥಳದ ಭಕ್ತರು ಹಾಗೂ ಖಾವಂದರ ಬೆಂಬಲಿಗರು ಖಂಡಿತವಾಗಿಯೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ನಿಂತೇ ನಿಲ್ಲುತ್ತಾರೆ. ಹಾಗಾಗಿ ಅಭಯಚಂದ್ರ ಜೈನ್ ಆಗ್ರಹ ಮಾಡಿದಂತೆ ತಿಮರೋಡಿಯ ಮೇಲೆ ಗಡಿಪಾರಿನ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಕರಾವಳಿಯಲ್ಲೇ ಒಂದು ವರ್ಷ ವಾಸಿಸದಂತೆ ಮಾಡಿದ್ದಾರೆ ಎನ್ನಬಹುದು. ಆದೇಶವನ್ನು ಸಹಾಯಕ ಆಯುಕ್ತರು ನೀಡಿದರೂ ಅವರ ಸರಕಾರದ ಸೂಚನೆ, ಒಲವು ಇರದೇ ಹಾಗೆ ಮಾಡಲಾಗದು. ಇಪ್ಪತ್ತೈದಕ್ಕೂ ಹೆಚ್ಚು ಜನರಿಗೆ ಗಡಿಪಾರಿನ ಕುರಿತು ನೊಟೀಸ್ ಜಾರಿ ಮಾಡಿದ್ದರೂ ಗಡಿಪಾರು ಆದೇಶ ಆಗಿದ್ದು ತಿಮರೋಡಿಯ ಮೇಲೆ ಮಾತ್ರ ಎನ್ನುವಲ್ಲೇ ಸಂದೇಹ ಮೂಡದೇ ಇರದು. ಅದೇನೇ ಇರಲಿ ಕರಾವಳಿಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಈ ಧರ್ಮಸ್ಥಳ ಪ್ರಕರಣವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ ಎನ್ನುವ ವಿಚಾರ ರಾಜಕೀಯ ವಿಶ್ಲೇಷಕರ ಚಾವಡಿಯಲ್ಲಿ ಚರ್ಚೆಯಾಗುತ್ತಿರುವ ಸಂಗತಿ. ಈ ಪ್ರಯತ್ನ ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಹೇಗೆ ಸಹಕಾರಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಡಾ ಸುಬ್ರಹ್ಮಣ್ಯ ಭಟ್
ಡಾ ಸುಬ್ರಹ್ಮಣ್ಯ ಭಟ್‌, ಬೈಂದೂರು
+ posts

ಬೈಂದೂರಿನಲ್ಲಿ ವೈದ್ಯರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಸುಬ್ರಹ್ಮಣ್ಯ ಭಟ್‌, ಬೈಂದೂರು
ಡಾ ಸುಬ್ರಹ್ಮಣ್ಯ ಭಟ್‌, ಬೈಂದೂರು
ಬೈಂದೂರಿನಲ್ಲಿ ವೈದ್ಯರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

ಲಡಾಖ್ | ಅಭಿವೃದ್ಧಿಯ ಆಶ್ವಾಸನೆ ನೀಡಿ ಜನರನ್ನು ವಂಚಿಸಿದ ಕೇಂದ್ರ ಸರ್ಕಾರ

ಲಡಾಖ್‌ನಲ್ಲಿ ನಡೆಯುತ್ತಿರುವ ಹೋರಾಟವು ಕೇವಲ ರಾಜ್ಯ ಸ್ಥಾನಮಾನ ಅಥವಾ ಆರನೆಯ ಅನುಸೂಚನೆ...

ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ

"ಭಾರತದ ತುಂಬೆಲ್ಲ ಬಲಿ ಕಥೆಗಳೇ ತುಂಬಿವೆ. ಅದಕ್ಕೆ ಇಲ್ಲಿ ಸೊಳ್ಳೆಯಷ್ಟು ಇರುವವರು...

ಶಾಲೆಗಾಗಿ ಕೊಠಡಿ, ಮಕ್ಕಳಿಗಾಗಿ ಆಟೋ ರಿಕ್ಷಾ; ಹಳ್ಳಿಯ ಹಳೆ ವಿದ್ಯಾರ್ಥಿಯಿಂದ ಸರ್ಕಾರಿ ಶಾಲೆಗೆ ಹೊಸ ಜೀವ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕಚಂಗಾವಿ ಗ್ರಾಮದ ಸುಮಾರು ಅರವತ್ತು ವರ್ಷಗಳ...

Download Eedina App Android / iOS

X