ಆರ್ಎಸ್ಎಸ್ ಎಂಬ ವಿಪ್ರಪಡೆ ದೇಶದ ಶಿಕ್ಷಣ ಕ್ಷೇತ್ರವನ್ನು ಹೇಗೆ ಕೇಸರಿಮಯವಾಗಿಸುತ್ತಿದೆ. ಅದರ ಉಸ್ತುವಾರಿಗೆ ಎಂಥವರನ್ನು ನೇಮಿಸಲಾಗಿದೆ. ಏನೇನು ಬದಲಾವಣೆಗಳನ್ನು ತರುತ್ತಿದೆ ಎಂಬುದಕ್ಕೆ ಧರ್ಮೇಂದ್ರ ಪ್ರಧಾನ್ ನಡೆದುಬಂದ ಹಾದಿಯನ್ನೊಮ್ಮೆ ಅವಲೋಕಿಸಿದರೆ ಅರ್ಥವಾಗುತ್ತದೆ.
1997ರಲ್ಲಿ ಒರಿಸ್ಸಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ದೊಡ್ಡ ಸುದ್ದಿಯಾಗಿತ್ತು. ಕಷ್ಟಪಟ್ಟು ಓದುತ್ತಿದ್ದ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗಿತ್ತು. ಆಗ ವಿದ್ಯಾರ್ಥಿಗಳ ಪರವಾಗಿ ನಿಂತವರು, ಅವರನ್ನು ಸಂಘಟಿಸಿ ಒರಿಸ್ಸಾ ಸರ್ಕಾರದ ವಿರುದ್ಧ ಬಹಳ ದೊಡ್ಡ ಹೋರಾಟ ಮಾಡಿದ್ದವರು- ಇಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್!
1983ರಲ್ಲಿ ಒರಿಸ್ಸಾದ ತಲ್ಚರ್ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಧರ್ಮೇಂದ್ರ ಪ್ರಧಾನ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP- ಎಬಿವಿಪಿ ಎನ್ನುವುದು ಆರ್‍ಎಸ್ಎಸ್‌ನ ವಿದ್ಯಾರ್ಥಿ ವಿಭಾಗ) ಸದಸ್ಯರಾಗಿದ್ದರು. 1985ರಲ್ಲಿ ಆರ್‍ಎಸ್ಎಸ್‌ನಿಂದ ತರಬೇತಿ ಪಡೆದಿದ್ದರು. 1994ರಿಂದ 1997ರವರೆಗೆ ಪ್ರಧಾನ್ ಎಬಿವಿಪಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಪ್ರಧಾನ್ ಎಬಿವಿಪಿಯ ಪ್ರಧಾನ ಕಾರ್ಯದರ್ಶಿಯಾಗಿರುವಾಗಲೇ, 1997ರಲ್ಲಿ ಒರಿಸ್ಸಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ಪ್ರಧಾನ್ ನೇತೃತ್ವದಲ್ಲಿ ಒರಿಸ್ಸಾ ಸರ್ಕಾರದ ವಿರುದ್ಧ ಸಚಿವಾಲಯದ ಮುಂದೆ ಸುಮಾರು 1,500 ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿದ್ದರು. ಆಗ ಪೊಲೀಸರು ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಪ್ರಧಾನ್ ಅವರಿಗೆ ಕೈ ಕಾಲು ಮುರಿಯುವಂತೆ ಹೊಡೆದಿದ್ದರು.
ಎಬಿವಿಪಿಯಲ್ಲಿ ಪಳಗಿದ ನಂತರ ಪ್ರಧಾನ್ ಭಾರತೀಯ ಜನತಾ ಪಕ್ಷ ಸೇರಿದರು. 2000 ಇಸವಿಯಲ್ಲಿ ಪಲ್ಲಹಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಶಾಸಕರಾದರು. 2004ರಲ್ಲಿ ದಿಯೋಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾದರು. 2014ರಲ್ಲಿ ಪ್ರಧಾನಿ ಮೋದಿಯವರ ಕ್ಯಾಬಿನೆಟ್‌ನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾದರು. 2017ರಲ್ಲಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದರು. 2019ರಲ್ಲಿ ಉಕ್ಕು ಮತ್ತು ಪೆಟ್ರೋಲಿಯಂ ಖಾತೆ ಸಚಿವರಾದರು. ನಂತರ ಜುಲೈ 2021ರಲ್ಲಿ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಪ್ರಧಾನ್ ಶಿಕ್ಷಣ ಸಚಿವರಾಗುತ್ತಿದ್ದಂತೆ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾದವು. ಪಠ್ಯಕ್ರಮ, ಬೋಧನಾ ವಿಧಾನ, ಕುಲಪತಿಗಳ ಆಯ್ಕೆ ಎಲ್ಲವೂ ಕೇಸರಿಮಯವಾಯಿತು. 2024ರಲ್ಲಿ ನೀಟ್ ಪ್ರಶ್ನೆಪರೀಕ್ಷೆ ಸೋರಿಕೆಯಾಗಿ ದೇಶದಾದ್ಯಂತ ಸುದ್ದಿಯಾಯಿತು. 2026ರಲ್ಲಿ ಮತ್ತೊಮ್ಮೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಹದಿನೇಳು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ದೇಶದ ಭವಿಷ್ಯ ಎಂದು ಬಣ್ಣಿಸುವ ಯುವಜನತೆಯ ಭವಿಷ್ಯಕ್ಕೇ ಕತ್ತಲಾವರಿಸಿತು.
ಈಗ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‍ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಧರಣಿ ಕೂತಿದ್ದಾರೆ. ಅವರ ಮೇಲೆ ಪ್ರಧಾನ್ ಪೋಷಿತ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಧಾನ್, ತಮ್ಮ ಮೂಗಿನ ಕೆಳಗೆ ನಡೆದಿರುವ ಅಕ್ರಮ ಮತ್ತು ಅನ್ಯಾಯವನ್ನು ಒಪ್ಪಿಕೊಳ್ಳದೆ, ರಾಜೀನಾಮೆ ನೀಡದೆ ಭಂಡತನ ಮೆರೆಯುತ್ತಿದ್ದಾರೆ.
ಆಗ ವಿದ್ಯಾರ್ಥಿಗಳ ಪಾಲಿಗೆ ನಾಯಕರಾಗಿದ್ದ ಧರ್ಮೇಂದ್ರ ಪ್ರಧಾನ್, ಈಗ ಖಳನಾಯಕರಾಗಿದ್ದಾರೆ.
ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ, ಆರ್‍ಎಸ್ಎಸ್ ಎಂಬ ವಿಪ್ರಪಡೆ ದೇಶದ ಶಿಕ್ಷಣ ಕ್ಷೇತ್ರವನ್ನು ಹೇಗೆ ಕೇಸರಿಮಯವಾಗಿಸುತ್ತಿದೆ. ಅದರ ಉಸ್ತುವಾರಿಗೆ ಎಂಥವರನ್ನು ನೇಮಿಸಿದೆ. ಏನೇನು ಬದಲಾವಣೆಗಳನ್ನು ತರುತ್ತಿದೆ ಎಂಬುದಕ್ಕೆ ಧರ್ಮೇಂದ್ರ ಪ್ರಧಾನ್ ನಡೆದುಬಂದ ಹಾದಿಯನ್ನೊಮ್ಮೆ ಅವಲೋಕಿಸಿದರೆ ಅರ್ಥವಾಗುತ್ತದೆ. ಆದಷ್ಟು ಬೇಗ ಈ ಸಂಘಪರಿವಾರ, ಬಿಜೆಪಿಯಿಂದ ಭಾರತವನ್ನು ಮುಕ್ತಗೊಳಿಸಬೇಕಾಗಿದೆ.





