ಪಂಚಮಸಾಲಿ ಪೀಠ ಫಜೀತಿ | ಸಮುದಾಯದ ‘2ಎ ಮೀಸಲಾತಿ’ ಹೋರಾಟ ಬಲಿ ಕೊಟ್ಟರೇ ಸ್ವಾಮೀಜಿ?

Date:

Advertisements
ಸ್ವಾಮೀಜಿ ತಾವು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ ಅಂತ ಸ್ಪಷ್ಟನೆ ನೀಡಿದರೂ ಯತ್ನಾಳ್‌ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದು ಪೀಠದಲ್ಲಿನ ಒಡನಾಡಿಗಳು ಆರೋಪಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು '2ಎ ಮೀಸಲಾತಿ' ಹೋರಾಟದಲ್ಲಿ ಬಲಿಕೊಡಲು ಆರ್‌ಎಸ್‌ಎಸ್‌ನ ಅಜೆಂಡಾ ಕೂಡ ಕಾರಣ ಎನ್ನಲಾಗುತ್ತಿದೆ. ಏನಿದು ಅಸಲಿ ಕಥೆ?

ಭಾಗ- 2

ಪಂಚಮಸಾಲಿ ಸಮುದಾಯದ ‘2ಎ ಮೀಸಲಾತಿ’ ಹೋರಾಟದಲ್ಲಿ ದೀರ್ಘಕಾಲ ಹೆಜ್ಜೆ ಹಾಕಿದ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ನಡುವೆ ಸೃಷ್ಟಿಯಾದ ಬಿರುಕು ಹಲವು ಆಯಾಮಗಳಲ್ಲಿ ವಿಸ್ತರಾಗೊಳ್ಳುತ್ತಿದೆ.

ಪಂಚಮಸಾಲಿ ಸಮುದಾಯವು ಸ್ವಾಮೀಜಿಯ ಮೇಲೆ ನಂಬಿಕೆ ಇರಿಸಿ ಮೀಸಲಾತಿ ಹೋರಾಟವನ್ನು ಅವರ ಮುಂದಾಳತ್ವದಲ್ಲೇ ಕೊಂಡೊಯ್ಯುತ್ತಿದೆ. ಆದರೆ, ಇಡೀ ಹೋರಾಟದ ಸ್ವರೂಪವನ್ನು ಸ್ವಾಮೀಜಿ ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ವ್ಯಕ್ತವಾಗುತ್ತಿವೆ.

ಇದಕ್ಕೆ ಮುಖ್ಯವಾಗಿ ಕಾಣುವ ಕಾರಣ ಮೀಸಲಾತಿ ಹೋರಾಟದಲ್ಲಿ ಗುರುತಿಸಿಕೊಂಡ ಕಾಂಗ್ರೆಸ್‌ ಮತ್ತು ಬಿಜೆಪಿಯ ಪಂಚಮಸಾಲಿ ನಾಯಕರು. ಸಮುದಾಯದ ವಿಚಾರದಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟಿನಿಂದಿರುವಂತೆ ಕಂಡರೂ ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ಮುಳುಗೆದ್ದಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಪರಿಸ್ಥಿತಿಯಲ್ಲಿ ಕೆಲವರಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿಯ ಪಂಚಮಸಾಲಿ ನಾಯಕರನ್ನು ಸಮುದಾಯದ ಹಿತಕ್ಕೆ ಕಟ್ಟಿಹಾಕುವಲ್ಲಿ ವಿಫಲರಾಗಿರುವ ಸ್ವಾಮೀಜಿ, ಕೆಲವರ ರಾಜಕೀಯ ಲಾಭಕ್ಕೆ ದಾಳವಾಗಿ ಬಳಕೆಯಾಗುತ್ತಿದ್ದಾರೆ ಎಂಬುದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ನವರ ಆರೋಪ. ತಾವೇ ಮಾಡಿಕೊಂಡ ಎಡವಟ್ಟಿನಿಂದ ಪೀಠವನ್ನೇ ತೊರೆಯುವ ಪರಿಸ್ಥಿತಿ ಅವರಿಗೆ ಎದುರಾಗಿದೆ. ಇದಕ್ಕೆ 2ಎ ಮೀಸಲಾತಿ ಹೋರಾಟ ಸಾಗಿ ಬಂದ ಹಾದಿ ಅವಲೋಕಿಸಿದರೆ ಇನ್ನೂ ಸ್ಪಷ್ಟತೆ ಸಿಗುತ್ತದೆ.

ಲಿಂಗಾಯತ ನಾಯಕರು ಹೇಳುವ ಪ್ರಕಾರ ರಾಜ್ಯದ 6.9 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿ ಜನರು ಲಿಂಗಾಯತರು ಇದ್ದಾರೆ. (ಇದು ವೀರಶೈವ ಮಹಾಸಭಾದ ಮುಖ್ಯಸ್ಥ ಶಾಮನೂರು ಶಿವಶಂಕರಪ್ಪ ಹೇಳಿದ ಮಾತು). ಪಂಚಮಸಾಲಿ ಸಮುದಾಯದವರು ಲಿಂಗಾಯತರ ಪೈಕಿ ರಾಜ್ಯದಲ್ಲಿ ಶೇ. 60-70ರಷ್ಟಿದ್ದಾರೆ ಎಂದು 2ಎ ಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿರುವವರು ಹೇಳುವ ಮಾತು. ಅಂದರೆ ಒಂದು ಲಕ್ಷಕ್ಕೆ 60-70 ಸಾವಿರ!

ಪಂಚಮಸಾಲಿಗಳ ಮೂಲ ಕಸುಬು ಕೃಷಿ. 1990ಕ್ಕಿಂತ ಮುಂಚೆ ಪ್ರತೀ ಪಂಚಮಸಾಲಿ ಕುಟುಂಬಗಳ ಹಿಡುವಳಿ ಜಮೀನು ಅಧಿಕ ಪ್ರಮಾಣದಲ್ಲಿತ್ತು. ಆಗ ಇಡೀ ಸಮುದಾಯವೂ ಆರ್ಥಿಕವಾಗಿ ಸಬಲವಾಗಿತ್ತು. ಕೃಷಿಕರಾಗಿದ್ದ ಪಂಚಮಸಾಲಿಗಳು ತಮ್ಮ ಲಿಂಗಾಯತ ಜಾತಿ ಸಮುದಾಯದ ಉಪಜಾತಿಗಳಾದ ಕುಂಬಾರ, ಕಂಬಾರ, ಗಾಣಿಗ, ಜಂಗಮಕ್ಕೆ ದಾರಾಳವಾಗಿ ದಾನವಾಗಿ ಕಾಳುಕಡಿ ಕೊಡುವ ಪದ್ಧತಿ ರೂಢಿಯಲ್ಲಿತ್ತು. ಉಳಿದಿದ್ದನ್ನು ಬಣಜಿಗರಿಗೆ ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿಯೇ ಪಂಚಪೀಠಗಳು ಒಂದು ಕಾಲದಲ್ಲಿ ಆರ್ಥಿಕವಾಗಿ ಉಚ್ಚ್ರಾಯ ಸ್ಥಿತಿಯಲ್ಲಿ ಇದ್ದವು ಎನ್ನುವ ಮಾತಿದೆ. ಹೀಗೆ ಪಂಚಮಸಾಲಿ ಮತ್ತು ಲಿಂಗಾಯತ ಉಪ ಜಾತಿಗಳು ಪರಸ್ಪರ ಬೆಸೆದುಕೊಂಡಿವೆ.

ಬದಲಾದ ಕಾಲಘಟ್ಟದ್ದಲ್ಲಿ ಪಂಚಮಸಾಲಿಗಳ ಜಮೀನು ಮನೆಯ ಉಳಿದ ಸದಸ್ಯರಿಗೆ ಹಂಚಿಕೆಯಾಗುತ್ತ, ಸಾಗುವಳಿ ಭೂಮಿ ಕ್ರಮೇಣವಾಗಿ ಕಡಿಮೆಯಾಗುತ್ತ ಬಂದಿದೆ. ಇದರ ಜೊತೆಗೆ ಕೃಷಿ ಈಗ ಲಾಭದಾಯಕವಲ್ಲ ಎನ್ನುವ ಬಿಕ್ಕಟ್ಟು ಇಡೀ ದೇಶವನ್ನು ಬಾಧಿಸುತ್ತಿದೆ. ಒಂದು ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಹೊಂದಿ, ನಂತರ ಸಾಗುವಳಿ ಜಮೀನು ಕಡಿಮೆಯಾದಂತೆ ಆರ್ಥಿಕವಾಗಿಯೂ ದುರ್ಬಲವಾದ ಸಮುದಾಯದವರು ಮೀಸಲಾತಿ ಕೇಳಲು ಮುಂದಾದರು. ಕರ್ನಾಟಕದಲ್ಲಿ ಲಿಂಗಾಯತರು, ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠರು ಹಾಗೂ ಉತ್ತರ ಪ್ರದೇಶದಲ್ಲಿ ಜಾಟರು ಇತ್ಯಾದಿ.

ಆ ಪ್ರಕಾರ ಒಂದಿಷ್ಟು ಮೀಸಲಾತಿಯೂ ನಿಗದಿಯಾಯಿತು. ಕರ್ನಾಟಕದಲ್ಲಿ ಲಿಂಗಾಯತರಿಗೆ ‘3ಬಿ’ ಅಡಿ ಮೀಸಲಾತಿ ಕಲ್ಪಿಸಲಾಯಿತು. ಆದರೆ ಜನಸಂಖ್ಯೆ ಹೆಚ್ಚಳವಾದರೂ ಮೀಸಲಾತಿ ಪ್ರಮಾಣ ವೈಜ್ಞಾನಿಕವಾಗಿ ಏರಿಕೆಯಾಗಲೇ ಇಲ್ಲ. ಇದರಿಂದ ಎಚ್ಚೆತ್ತುಕೊಂಡ ಪಂಚಮಸಾಲಿ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂಬ ಬೇಡಿಕೆಯನ್ನು 2011ರಲ್ಲಿ ಮುಂದಿಟ್ಟಿತು. ಆಗ ಹುಟ್ಟಿಕೊಂಡಿದ್ದೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟ.

ಮೀಸಲಾತಿ ಹೋರಾಟ 2

ಪಂಚಮಸಾಲಿ ಸಮುದಾಯ ‘ಪ್ರವರ್ಗ 3ಬಿ’ಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯ ಹೋರಾಟ ಆರಂಭಿಸುತ್ತದೆ. ಆಗ ರಾಜ್ಯದಲ್ಲಿ ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ. 2011ರಲ್ಲಿ ಬೆಳಗಾವಿ ಅಧಿವೇಶನ ಆರಂಭವಾದಾಗ ಮೀಸಲಾತಿಗಾಗಿ ಆಗ್ರಹಿಸಿ ಸ್ವಾಮೀಜಿ ನೇತೃತ್ವದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಯತ್ನವೂ ನಡೆಯಿತು.

ಪ್ರತಿಭಟನೆಯ ಬಿಸಿ ಅರಿತ ಯಡಿಯೂಪ್ಪ, ಧರಣಿ ಸ್ಥಳಕ್ಕೆ ಆಗಮಿಸಿ, “ನಾನು ಮುಖ್ಯಮಂತ್ರಿಯಾಗುವಲ್ಲಿ ಪಂಚಮಸಾಲಿ ಸಮುದಾಯದ ಋಣ ಬಹಳಷ್ಟಿದೆ. ನನ್ನ ಅವಧಿಯಲ್ಲೇ ನಾನು 2ಎ ಮೀಸಲಾತಿಯನ್ನು ಸಮುದಾಯಕ್ಕೆ ಕೊಡಿಸುವೆ” ಎಂದು ಭರವಸೆ ನೀಡುತ್ತಾರೆ.

ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸರಣಿ ಭಾಗ 1 – ಪಂಚಮಸಾಲಿ ಪೀಠವೇ ರಾಜಕೀಯ ಆಡುಂಬೊಲ: ಇದು ಸ್ವಾಮೀಜಿಯಿಂದಾದ ಸ್ವಯಂಕೃತ ಅಪರಾಧ

2008ರಲ್ಲಿ ಪಂಚಮಸಾಲಿ ಪೀಠ ಅಸ್ತಿತ್ವಕ್ಕೆ ಬಂದಾಗ ಬಾಡಿಗೆ ಕಟ್ಟಡದಲ್ಲಿ ಪೀಠ ನಡೆಯುತ್ತಿರುತ್ತದೆ. ಯಡಿಯೂರಪ್ಪ ಅವರು ಸ್ವಂತ ಕಟ್ಟಡ ನಿರ್ಮಾಣಕ್ಕೆ ಒಂದಿಷ್ಟು ಅನುದಾನ ನೀಡುತ್ತಾರೆ. ಅದೇ ವೇಳೆ ಅಕ್ರಮ ಗಣಿಗಾರಿಕೆ ಮತ್ತು ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಅಲ್ಲಿಗೆ 2ಎ ಮೀಸಲಾತಿ ಹೋರಾಟವೂ ಸ್ವಲ್ಪ ಸ್ಥಗಿತವಾಗುತ್ತದೆ. ಮುಂದೆ ಮುಖ್ಯಮಂತ್ರಿಯಾಗಿ ಬಂದ ಡಿ.ವಿ ಸದಾನಂದಗೌಡರು ಪೀಠದ ಕಟ್ಟಡ ನಿರ್ಮಣಕ್ಕೆ ಎರಡನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿದ್ದರಿಂದ ಕಟ್ಟಡ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ತಲುಪುತ್ತದೆ.

ತರುವಾಯ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ (2013-2018) ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 2ಎ ಮೀಸಲಾತಿ ಹೋರಾಟದ ಧ್ವನಿಯೇ ಏಳಲಿಲ್ಲ. ಆದರೆ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಬೆಳವಣಿಗೆ ಎದುರಾದಾಗ ಮೃತ್ಯುಂಜಯ ಸ್ವಾಮೀಜಿ ಆ ಹೋರಾಟದಲ್ಲಿ ಗುರುತಿಸಿಕೊಂಡು ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಮುಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರದಲ್ಲೂ 2ಎ ಮೀಸಲಾತಿ ಧ್ವನಿ ಅಷ್ಟಾಗಿ ಕೇಳಿ ಬರುವುದಿಲ್ಲ. ಯಾವಾಗ ಮೈತ್ರಿ ಸರ್ಕಾರ ಕೆಡವಿ ಆಪರೇಷನ್‌ ಕಮಲದ ಮೂಲಕ ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾದರೋ ಆಗ 2ಎ ಮೀಸಲಾತಿ ಹೋರಾಟ ಮತ್ತೆ ಮೈಗೊಡವಿ ಎದ್ದು ನಿಂತಿತು.

ಆಪರೇಷನ್ ಕಮಲ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪಂಚಮಸಾಲಿ ಸಮುದಾಯ ಬೆನ್ನಿಗೆ ನಿಲ್ಲಬೇಕು ಎಂದು ಯಡಿಯೂರಪ್ಪ ಮೃತ್ಯುಂಜಯ ಸ್ವಾಮೀಜಿ ಬಳಿ ಬೇಡಿಕೆ ಇಟ್ಟಾಗ, ಸಮುದಾಯ ಪ್ರತಿಯಾಗಿ 2ಎ ಮೀಸಲಾತಿ ಬೇಡಿಕೆ ಇಡುತ್ತದೆ. ಆ ಒಪ್ಪಂದಲ್ಲಿ ಯಡಿಯೂರಪ್ಪ 2ಎ ಮೀಸಲಾತಿ ಕೊಡುವ ವಚನವನ್ನು ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಮುಖಂಡರಿಗೆ ನೀಡುತ್ತಾರೆ. ಮುಂದೆ ಯಡಿಯೂರಪ್ಪ ಮುಖ್ಯಮಂತ್ರಿ ಅಧಿಕಾರಕ್ಕೆ ಏರಿದರೂ 2ಎ ಮೀಸಲಾತಿ ಬಗ್ಗೆ ತಲೆ ಕಡಿಸಿಕೊಳ್ಳುವುದಿಲ್ಲ. ಇದೇ ಯಡಿಯೂರಪ್ಪಗೆ ಮುಳುವಾಗುತ್ತದೆ.

ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿ ಸ್ವಾಮೀಜಿ ನೇತೃತ್ವದಲ್ಲಿ 2021ರಲ್ಲಿ ರಾಜಧಾನಿಯತ್ತ ಸಮುದಾಯದಿಂದ ಬೃಹತ್‌ ಪಾದಯಾತ್ರೆ ಆರಂಭಗೊಳ್ಳುತ್ತದೆ. ಪಾದಯಾತ್ರೆಯನ್ನು ಹತ್ತಿಕ್ಕಲು ಯಡಿಯೂರಪ್ಪ ಸಾಕಷ್ಟು ಶ್ರಮಿಸುತ್ತಾರೆ. ಹೋರಾಟದಲ್ಲಿ ಸಕ್ರಿವಾಗಿದ್ದ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ ಯಾವುದೇ ಕಾರಣಕ್ಕೂ ಹೋರಾಟ ಸ್ಥಗಿತಗೊಳ್ಳಲು ಬಿಡುವುದಿಲ್ಲ ಎನ್ನುವ ಘೋಷಣೆ ಕೂಗುತ್ತಾರೆ.

ಅರಮನೆ ಮೈದಾನದಲ್ಲಿ ಸುಮಾರು 10 ಲಕ್ಷ ಪಂಚಮಸಾಲಿ ಸಮುದಾಯದ ಜನರು ಸೇರಿ ಯಡಿಯೂರಪ್ಪ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಡೀ ಪಾದಯಾತ್ರೆ ಉದ್ದಕ್ಕೂ ಪಂಚಮಸಾಲಿ ಹೋರಾಟವನ್ನು ಯತ್ನಾಳ್ ಯಡಿಯೂರಪ್ಪ ವಿರುದ್ಧ‌ ಕಿಡಿಕಾರಲು ಬಳಸಿಕೊಂಡಿದ್ದೇ ಹೆಚ್ಚು ಎನ್ನುವ ಆರೋಪ ಸಹ ಇದೆ. ಅಲ್ಲಿಗೆ ಯಡಿಯೂರಪ್ಪ ಮತ್ತು ಸ್ವಾಮೀಜಿ ನಡುವೆ ಅಂತರ ಹೆಚ್ಚಾಗುತ್ತದೆ.

ಮುಂದೆ ಬಿಜೆಪಿಯ ಒಳಸಂಘರ್ಷಗಳಿಂದ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಮೀಸಲಾತಿ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ. ಫ್ರೀಡಂ ಪಾರ್ಕ್‌ನಲ್ಲಿ ಬೊಮ್ಮಾಯಿ ಸರ್ಕಾರದ ವಿರುದ್ಧ ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೂ ಮುಂದಾಗುತ್ತಾರೆ. ಕೊನೆಗೆ ಬೊಮ್ಮಾಯಿ ಸರ್ಕಾರ 2023ರ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆಗೆ ಮುಸ್ಲಿಂ ಮೀಸಲಾತಿ ಕಿತ್ತು 2ಸಿ ಹಾಗೂ 2ಡಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿ ತೀರ್ಮಾನ ಕೈಗೊಳ್ಳುತ್ತದೆ. 3ಎನಲ್ಲಿರುವ ಒಕ್ಕಲಿಗರನ್ನು 2ಸಿಗೆ ಸೇರಿಸುವುದು, 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಭರವಸೆ ಕೊಡುತ್ತದೆ.

ಬೊಮ್ಮಾಯಿ ಸರ್ಕಾರದ ಈ ತೀರ್ಮಾನವನ್ನು ಕಾಶಪ್ಪನವರ ವಿರೋಧಿಸಿ ಪ್ರತಿಭಟನಾ ಸ್ಥಳದಿಂದಲೇ ಎದ್ದು ಹೊರಡುತ್ತಾರೆ. ಯತ್ನಾಳ್‌ ಮತ್ತು ಸ್ವಾಮೀಜಿ ಆರಂಭದಲ್ಲಿ ವಿರೋಧಿಸಿದರೂ 2ಡಿ ಮೀಸಲಾತಿಯನ್ನು ಒಪ್ಪಿಕೊಳ್ಳುತ್ತಾರೆ. ಪ್ರವರ್ಗ 3ಬಿಗೆ ಇದ್ದ ಶೇ.5ರಷ್ಟು ಮೀಸಲಾತಿಯನ್ನು ಪ್ರವರ್ಗ 2ಡಿ ಎಂದು ಬದಲಿಸಿ ಮೀಸಲಾತಿಯ ಪ್ರಮಾಣವನ್ನು ಶೇ.7ರಷ್ಟು ಹೆಚ್ಚಳ ಮಾಡಿದ್ದರಿಂದ ಸಮುದಾಯದಿಂದಲೂ ಅಷ್ಟು ವಿರೋಧ ವ್ಯಕ್ತವಾಗಲಿಲ್ಲ. ಆದರೆ ಸ್ವಾಮೀಜಿ ಮತ್ತು ಯತ್ನಾಳ್‌ ನಿರ್ಧಾರ ಕಾಶಪ್ಪನವರಿಗೆ ಎಳ್ಳಷ್ಟೂ ಹಿಡಿಸಿರಲಿಲ್ಲ. ಕೊನೆಗೆ ಬೊಮ್ಮಾಯಿ ಸರ್ಕಾರದ ಅಸಲಿ ಆಟ ಅರಿತ ಪಂಚಮಸಾಲಿ ಸಮುದಾಯ ಜನರು ಬಿಜೆಪಿ ವಿರುದ್ಧ ತಿರುಗಿ ಬಿದ್ದು, ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಇದೂ ಒಂದು ಕಾರಣವಾಯಿತು.

ಮೀಸಲಾತಿ ಹೋರಾಟ

ಕಾನೂನು ತೊಡಕು ಮತ್ತು ಹೊಸ ಸರ್ಕಾರ ಬಂದ ಮೇಲೆ ‘2ಡಿ ಮೀಸಲಾತಿ’ ಕೂಡ ಜಾರಿಯಾಗಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ಪ್ರಯೋಜನವಾಗಿಲ್ಲ ಎಂದು ದೊಡ್ಡ ಮಟ್ಟದ ಮತ್ತು ನಿರ್ಣಾಯಕ ಹೋರಾಟಕ್ಕೆ ಮತ್ತೆ ಸ್ವಾಮೀಜಿ ಸಿದ್ಧವಾಗುತ್ತಾರೆ. ಮೂಲಗಳು ಹೇಳುವ ಹಾಗೇ ಕಾಶಪ್ಪನವರ ಸ್ವಾಮೀಜಿ ಬಳಿ ಹೋಗಿ “ಸರ್ಕಾರದ ವಿರುದ್ಧ ಪ್ರತಿಭಟನೆ ಬೇಡ. ಸರ್ಕಾರಕ್ಕೂ ಸಮಯ ಕೊಡೋಣ. ನಮ್ಮದೇ ಸರ್ಕಾರವಿದೆ. ಸಿದ್ದರಾಮಯ್ಯ ಅವರ ಕಾಲು ಬಿದ್ದಾದರೂ ಸರಿ 2ಎ ಮೀಸಲಾತಿ ಜಾರಿಮಾಡಿಕೊಂಡು ಬರುವೆ” ಎಂದು ಬೇಡಿಕೊಂಡಿದ್ದರಂತೆ. ಆದರೂ ಸ್ವಾಮೀಜಿ ಪ್ರತಿಭಟನೆಗೆ ಮುಂದಾಗುತ್ತಾರೆ. ಅಲ್ಲಿಗೆ ಕಾಂಗ್ರೆಸ್‌ ನಾಯಕರು ಮೀಸಲಾತಿ ಹೋರಾಟದೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಯವರು ವಿರೋಧ ಪಕ್ಷದಲ್ಲಿರುವುದರಿಂದ ಸಹಜವಾಗಿಯೇ ರಾಜಕೀಯ ಲೆಕ್ಕಾಚಾರದ ಮೇಲೆ ಮೀಸಲಾತಿ ಹೋರಾಟ ನಡೆಯುತ್ತಿದೆ.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ 2ಎ ಮೀಸಲಾತಿ ಹೋರಾಟವನ್ನು ಎತ್ತಿಕಟ್ಟಲಾಗುತ್ತಿದೆ ಎನ್ನುವ ಆರೋಪವನ್ನು ವಿಜಯಾನಂದ ಕಾಶಪ್ಪನವರ ಮಾಡಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ದಿನ.ಕಾಂ ಅವರನ್ನು ಮಾತನಾಡಿಸಿದಾಗ, “ಬೆಳಗಾವಿಯಲ್ಲಿ ಕಲ್ಲು ತೂರಾಟ ನಡೆಸಿ ಹೋರಾಟ ಮಾಡಿಸಿದ್ದು ಯತ್ನಾಳ್‌ ಮತ್ತು ಸ್ವಾಮೀಜಿ. ಆರ್‌ಎಸ್‌ಎಸ್‌ ಪುಂಡರನ್ನು ಮುಂದಿಟ್ಟುಕೊಂಡು ಸ್ವಾಮೀಜಿ ಕಲ್ಲು ಹೊಡೆಸಿದ್ದಾರೆ. ಸ್ವಾಮೀಜಿ ಮಾತನ್ನು ನಂಬಿ ಬಂದ ಸಮುದಾಯದ ಜನರಿಗೆ ಗಾಯಗಳಾದವು. ಇತ್ತೀಚೆಗೆ ಅವರು ಬಿಜೆಪಿ ವಕ್ತಾರರಂತೆ ನಡೆದುಕೊಳ್ಳುತ್ತಿದ್ದಾರೆ. ಯತ್ನಾಳ್‌ ಹೇಳಿದಂತೆ ಕೇಳುತ್ತಾರೆ. ಹೋರಾಟ ಕಟ್ಟಿದಾಗ ಪಕ್ಷಾತೀತವಾಗಿರಬೇಕು ಎನ್ನುವ ನಿಲುವಿತ್ತು. ಆದರೆ ಈಗ ಅದು ಸ್ವಾಮೀಜಿಯಿಂದ ಹಾಳಾಗಿದೆ. 2ಎ ಮೀಸಲಾತಿ ಹೋರಾಟ ಆರ್‌ಎಸ್‌ಎಸ್‌, ಬಿಜೆಪಿ ಪ್ರೇರಿತ ಹೋರಾಟದಂತೆ ಕಾಣುತ್ತಿದೆ. ಹಿಂದೆ ಬಿಜೆಪಿಯ 2ಡಿ ಮೀಸಲಾತಿಗೆ ಸ್ವಾಮೀಜಿ ಯಾಕೆ ಒಪ್ಪಿಕೊಳ್ಳಬೇಕಿತ್ತು? ಇದು ಯತ್ನಾಳ್‌ ಅವರ ತಂತ್ರಗಾರಿಕೆ ಅಷ್ಟೇ” ಎಂದು ಆರೋಪಿಸಿದರು.

ಮುಂದುವರಿದು, “ಮೃತ್ಯುಂಜಯ ಸ್ವಾಮೀಜಿ ಪೀಠದ ಬೈಲಾ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ನಾನು ಕಾಂಗ್ರೆಸ್‌ನವನಾಗಿದ್ದರೂ ನಮ್ಮ ಪಂಚಮಸಾಲಿ ಪೀಠ ಪಕ್ಷಾತೀತವಾಗಿರಬೇಕು ಎಂಬುದು ನನ್ನ ನಿಲುವು. ಸ್ವಾಮೀಜಿ ಮಠದ ನಿಯಮಗಳಿಗೆ ಬದ್ಧರಾಗಿಬೇಕು. ಮೀಸಲಾತಿ ಹೋರಾಟ ಎಷ್ಟು ಮುಖ್ಯವೋ ಧಾರ್ಮಿಕ ಕಾರ್ಯಕ್ರಮಗಳು ಅಷ್ಟೇ ಮುಖ್ಯ. ಸ್ವಾಮೀಜಿಗೆ ಪೀಠ ಇದ್ದರೂ ಇಲ್ಲಿ ಅವರು ದಿನಗಳನ್ನು ಕಳೆಯುವುದೇ ಇಲ್ಲ. ಬರೀ ರಾಜಕೀಯ ಮಾಡಿಕೊಂಡು ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ ಅಂತ ತಿರುಗಾಡುತ್ತಿರುತ್ತಾರೆ. ಪೀಠ ಕಟ್ಟಿರುವುದು ಇವರು ಸಂಚಾರ ಮಾಡಲಿಕ್ಕಾ? ಹೀಗಾಗಿ ನಾವು ಇವರನ್ನು ಬದಲಾಯಿಸುವ ಯೋಚನೆಗೆ ಬಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಮೀಸಲಾತಿ ಹೋರಾಟ (1)

ಪಂಚಮಸಾಲಿ ಮೀಸಲಾತಿ ಹೋರಾಟ ಇಷ್ಟು ದೀರ್ಘಕಾಲಿಕವಾಗಿ ನಡೆಯುತ್ತ ಬರುತ್ತಿರುವುದಕ್ಕೆ ಬೇರೆಯೇ ಕಾರಣವಿದೆ ಎನ್ನುತ್ತವೆ ಮೂಲಗಳು. ಈ ಮೀಸಲಾತಿ ಹೋರಾಟ ಏನಾದರೂ ಒಂದು ಕಾರಣ ಮುಂದಿಟ್ಟುಕೊಂಡು ಸದಾ ಜೀವಂತವಾಗಿರಬೇಕು ಎಂಬುದು ಆರ್‌ಎಸ್‌ಎಎಸ್‌ನವರ ಸೂಚನೆ ಅಂತೆ. ಲಿಂಗಾಯತ ಸಮುದಾಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಯತ್ನಾಳ್‌ ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಲು ಮೀಸಲಾತಿ ಹೋರಾಟ ಅಸ್ತ್ರವಾಗಬೇಕು ಎಂಬುದು ಅವರ ಅಜೆಂಡಾ. ಬಿಎಸ್‌ವೈ ಕುಟುಂಬದ ವಿರುದ್ಧ ಯತ್ನಾಳ್‌ ಬಾಯಿಗೆ ಬಂದ ಹಾಗೆ ಮಾತನಾಡುವುದು ಇದೇ ಕಾರಣಕ್ಕೆ ಎನ್ನಲಾಗುತ್ತಿದೆ. ಮುಂದೆ ಯಡಿಯೂರಪ್ಪ ಕುಟುಂಬಕ್ಕೆ ಬಿಜೆಪಿ ಸೀಮಿತವಾಗದಂತೆ ತಡೆಯಲು ಲಿಂಗಾಯತದ ಇನ್ನೊಂದು ಕವಲು ಪಂಚಮಸಾಲಿ ಸಮುದಾಯ ಆಗಿರಬೇಕು ಎಂಬುದು ಸಂಘಪರಿವಾರದ ಒಳಗಿನ ತಂತ್ರ. ಯಡಿಯೂರಪ್ಪ ವಿಚಾರದಲ್ಲಿ ಪರಿಸ್ಥಿತಿ ಕೈ ಮೀರಿದಾಗ ಮಹಾರಾಷ್ಟ್ರದಂತೆ ಶಿವಸೇನೆ ತರ ಕರ್ನಾಟಕದಲ್ಲಿ ‘ಪಂಚಮಸಾಲಿ ಸೇನೆ’ ಸ್ಥಾಪಿಸುವ ಇರಾದೆಯೂ ಇದೆ ಅಂತೆ. ಹೀಗಾಗಿ ದೆಹಲಿಯ ಬಿಜೆಪಿ ವರಿಷ್ಠರೇ ಸ್ವಾಮೀಜಿಗೆ 2ಎ ಮೀಸಲಾತಿ ಹೋರಾಟ ಯಾವ ಕಾರಣಕ್ಕೂ ಸ್ಥಗಿತಗೊಂಡಿರಬಾರದು ಎನ್ನುವ ಸೂಚನೆಯನ್ನು ತನು-ಮನ-ಧನ ಸಹಾಯದೊಂದಿಗೆ ನೀಡಿದ್ದಾರೆ ಎನ್ನುವ ಆರೋಪವಿದೆ. ಕಾಕತಾಳೀಯ ಎಂಬಂತೆ ಈಗ ಸ್ವಾಮೀಜಿ ವಿರುದ್ಧ ಕೇಳಿಬರುತ್ತಿರುವ ಪಂಚಮಸಾಲಿ ಸಮುದಾಯವನ್ನು ‘2ಎ ಮೀಸಲಾತಿ’ ಹೋರಾಟದಲ್ಲಿ ಬಲಿಕೊಟ್ಟ ಆರೋಪ ಆರ್‌ಎಸ್‌ಎಸ್‌ನ ಅಜೆಂಡಾಗೆ ಇಂಬು ನೀಡುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಒಳಗಿನ ಪಂಚಮಸಾಲಿ ನಾಯಕರ ಭಿನ್ನಾಭಿಪ್ರಾಯಗಳು ಏನೇ ಇರಲಿ. ಅವುಗಳಿಂದ ಅಂತರ ಕಾಯ್ದುಕೊಂಡು ಪೀಠ ಸ್ಥಾನದಲ್ಲಿ ಕುಳಿತು ಧಾರ್ಮಿಕ ಕಾರ್ಯಕ್ರಮದಲ್ಲಿ ಮುಂದೆ ಸಾಗಿದ್ದರೆ ಸ್ವಾಮೀಜಿ-ಕಾಶಪ್ಪನವರ ನಡುವೆ ಈ ವಿವಾದವೇ ಏಳುತ್ತಿರಲಿಲ್ಲ. ಸ್ವಾಮೀಜಿ ತಾವು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ ಅಂತ ಸ್ಪಷ್ಟನೆ ನೀಡಿದರೂ ಯತ್ನಾಳ್‌ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದು ಪೀಠದಲ್ಲಿನ ಒಡನಾಡಿಗಳು ಆರೋಪಿಸುತ್ತಿದ್ದಾರೆ. ಇಡೀ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಂಘಪರಿವಾರ ಹಿನ್ನೆಲೆಯಿಂದ ಬಂದ ಹಾರ್ಡ್‌ಕೋರ್‌ ಕೋಮುವಾದಿ ಯತ್ನಾಳ್‌ ತೆಕ್ಕೆಗೆ ಜಾರುತ್ತಿರುವುದು ಕಾಂಗ್ರೆಸ್‌ ನಾಯಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.

(ಮುಂದುವರಿಯುವುದು…)

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

2 COMMENTS

  1. 2013ರಿಂದ 2019 ವರೆಗೆ ಏಕೆ ಹೋರಾಟ ಸ್ಥಗಿತವಾಗಿತ್ತು, ಬಿಜೆಪಿ ಸರ್ಕಾರ ಬಂದಾಗ ಪುನಃ ಪ್ರಾರಂಭ, ಕಾಂಗ್ರೆಸ್ ಬಂದಾಗ ಮೌನ ಎಲ್ಲಾ ರಾಜಕೀಯ ಪ್ರೇರಿತ ಕಾಶಪ್ಪನವರ ನಾಟಕ ಎಲ್ಲಾ ರಾಜಕೀಯ ನಾಯಕರು ಅಷ್ಟೇ ಸ್ವಾಮೀಜಿಯವರನ್ನು ಬಲಿಪಶು

  2. ನೀವು ಸರಿಯಾಗಿ ಅರಿತು ಕೊಳ್ಳದಯೆ ಬರೆದದ್ದು, ವಾರದಿಗಾರರಾಗಿ ನಿಮಗೆ ಭೂಷಣ ವಲ್ಲ, ಈ ರೀತಿ ತಪ್ಪು ತಪ್ಪು ಮಾಹಿತಿ ಹಾಗೂ ಬಿಜೆಪಿ ವಿರೋಧಿಸಲು ಹೋಗಿ ಇನ್ನರನ್ನೋ ಓಲೈಕೆ ವಾರದಿಗಾರಿಕೆಯನ್ನ ಯಾರು ಮೆಚ್ಚಾಲಾರರು, ವಾರದಿಗಾರಿಕೆ ವಸ್ತುನಿಷ್ಟ ವಾಗಿದ್ದಾಗ ವರದಿಗಾರಿಕೆಗೆ ಬೆಲೆ, ಇಲ್ಲದಿದ್ದರೆ ಅದು ಅಪ್ರ ಭುದ್ದ ವರದಿಗಾರಿಕೆ ಎಂದೇ ಹೇಳಬೇಕಾಗುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

5 ಹುಲಿ, 20 ನವಿಲು, 19 ಕೋತಿಗಳ ಸಾವು ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು,...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

Download Eedina App Android / iOS

X