ಈದಿನ.ಕಾಮ್ ಗ್ರೌಂಡ್‌ ರಿಪೋರ್ಟ್‌ |ತೆವಳುತ್ತಿರುವ ಜಾತಿವಾರು ಸಮೀಕ್ಷೆ- ಸಮಸ್ಯೆಗಳ ಸುರಿಮಳೆ, ಶೇ.2ರಷ್ಟು ಗುರಿ ಮುಟ್ಟಲೂ ವಿಫಲ!

Date:

Advertisements

ಪ್ರಬಲ ಸಮುದಾಯಗಳ ವಿರೋಧ, ರಾಜಕೀಯ ಆಡಂಬೊಲ, ಗುಂಪುಗಾರಿಕೆ, ತಕರಾರುಗಳ ಹಲವು ಹತ್ತು ಸಮಸ್ಯೆಗಳ ನಡುವೆಯೂ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ಆರಂಭಗೊಂಡಿದೆ. ರಾಜ್ಯದ ಎಲ್ಲ ಸಮುದಾಯಗಳಲ್ಲಿ ಎಷ್ಟು ಜನರಿದ್ದಾರೆ, ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದರ ಮಾಹಿತಿಯನ್ನು ಸಮೀಕ್ಷಕರು ಕಲೆ ಹಾಕುತ್ತಿದ್ದಾರೆ. ವೈರುಧ್ಯಗಳ ನಡುವೆ ಆರಂಭವಾಗಿರುವ ಸಮೀಕ್ಷೆ ಆರಂಭದಲ್ಲಿಯೇ ಎಡವುತ್ತಿರುವ ಸೂಚನೆಗಳಿವೆ. ತಾಂತ್ರಿಕ ಸಮಸ್ಯೆಗಳು ಮತ್ತು ಸ್ಥಳೀಯ ಕಾರಣಗಳಿಂದಾಗಿ ಸಮೀಕ್ಷೆ ತೆವಳುತ್ತಿದೆ. ಸರ್ಕಾರದಿಂದ ಶೀಘ್ರ ಸ್ಪಂದನೆಗಾಗಿ ಎದುರು ನೋಡುತ್ತಿದೆ.

ಸೆಪ್ಟೆಂಬರ್ 22ರಿಂದ ಆರಂಭಗೊಂಡಿರುವ ಸಮೀಕ್ಷೆ, ಅಕ್ಟೋಬರ್ 6ರ ಒಳಗೆ ಮುಗಿಯಬೇಕು ಎಂಬುದು ಸರ್ಕಾರದ ಗಡುವು. ಆದರೆ, ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳ್ಳುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಬೇರು ಮಟ್ಟದಲ್ಲಿ ಗೋಚರಿಸಿದೆ. ಸಮೀಕ್ಷೆ ಆರಂಭವಾಗಿ ಮೂರು ದಿನಗಳ ಕಳೆದಿವೆ. ಈ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ನಡೆಯಬೇಕಿತ್ತು. ಆದರೆ, ಈವರೆಗೆ ಕೇವಲ 2,76,016 ಕುಟುಂಬಗಳ ಸಮೀಕ್ಷೆ ಮಾತ್ರವೇ ನಡೆದಿದೆ. ಅಂದರೆ, ಗುರಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣ, 1.92% ರಷ್ಟು ಗುರಿಯನ್ನು ಮಾತ್ರವೇ ತಲುಪಲಾಗಿದೆ.

ಸಮೀಕ್ಷೆ ತೆವಳು ಗತಿ ಹಿಡಿದಿರುವುದಕ್ಕೆ ಹಲವಾರು ಕಾರಣಗಳಿವೆ. ಆ ಕಾರಣಗಳ ಬಗ್ಗೆ ‘ಈದಿನ.ಕಾಮ್‌’ ಖುದ್ದು ಸಮೀಕ್ಷಾ ಸ್ಥಳಗಳಿಗೆ ತೆರಳಿ, ‘ಬೇರುಮಟ್ಟದ’ ವರದಿ ಮಾಡಿದೆ. ಈ ವೇಳೆ ಕಂಡುಕೊಂಡಂತೆ, ರಾಜ್ಯಾದ್ಯಂತ ಸಮೀಕ್ಷಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಸಮೀಕ್ಷೆಗೆ ಬಳಸಲಾಗುತ್ತಿರುವ ಆ್ಯಪ್‌ ತಾಂತ್ರಿಕ ಸಮಸ್ಯೆಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಲವೆಡೆ, ಮೊಬೈಲ್‌ ನೆಟ್‌ವರ್ಕ್‌ಗಳ ಸಮಸ್ಯೆ ತಲೆದೂರಿದೆ. ಪರಿಣಾಮ, ಸಮೀಕ್ಷೆಗೆ ತೆರಳಿದ ಸಮೀಕ್ಷಕರು (ಶಿಕ್ಷಕರು) ಸಮೀಕ್ಷೆ ನಡೆಸಲಾಗದೆ, ಹಿಂದಿಗುತ್ತಿದ್ದಾರೆ.

ಈ ಸಮಸ್ಯೆಗಳು ಮಾತ್ರವಲ್ಲದೆ, ಹಲವು ಜಿಲ್ಲೆಗಳ ಸಮೀಕ್ಷರು ಸ್ಥಳೀಯವಾಗಿ ನಾನಾ ತೊಂದರೆಗಳು, ಸಮಸ್ಯೆಗಳು, ಸವಾಲುಗಳನ್ನು ಎದುರಿಸುತ್ತಿದ್ದಾರೆ. ತಾಂತ್ರಿಕ ತೊಂದರೆಗಳಿಂದಾಗಿ ಜಿಯೋ ಟ್ಯಾಗ್ ಮೂಲಕ ಮನೆಗಳ ಲೋಕೇಷನ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಶಾಲಾ ವ್ಯಾಪ್ತಿಯನ್ನು ಮೀರಿ, ಬೇರೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ನಿಯೋಜಿಸಿರುವುದಿರಂದ ಸರಿಯಾದ ಸಂವಹನ ನಡೆಸಲಾಗುತ್ತಿಲ್ಲ. ಸಮೀಕ್ಷೆಗೆ ಒಳಪಡುವವರಲ್ಲಿ ಹಲವರು 60 ಪ್ರಶ್ನೆಗಳಿಗೆ ಉತ್ತರಿಸಲು ಅಸಹಕಾರ ತೋರುತ್ತಿದ್ದು, ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.

ದೀರ್ಘಾವಧಿಯ ಸಮೀಕ್ಷೆಗೆ ಮೊಬೈಲ್‌ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತ್ವರಿತವಾಗಿ ಚಾರ್ಜ್‌ ಕಡಿಮೆಯಾಗುವುದು, ಹ್ಯಾಂಗ್ ಆಗುವ ಸಮಸ್ಯೆಗಳು ತಲೆದೋರುತ್ತಿವೆ. ಹಲವೆಡೆ, ನೆಟ್‌ವರ್ಕ್‌ ಸಮಸ್ಯೆಯಿಂದ ಮನೆ ಮುಖ್ಯಸ್ಥ ಒಟಿಪಿ ಪಡೆಯುವುದೇ ಸವಾಲಾಗಿದೆ. ಸಮೀಕ್ಷೆಗೆ ಮಹಿಳೆಯರು ಸ್ಪಂದಿಸದೆ, ಗಂಡಸರು ಬರುವವರೆಗೂ ಕಾಯಿರಿ ಎಂದೇ ಹೇಳುತ್ತಿರುವುದು ರಾಜ್ಯದ ನಾನಾ ಭಾಗಗಳಲ್ಲಿ ಕಂಡುಬಂದಿದೆ. ಟೈಮ್ ಔಟ್, ಸರ್ವರ್ ಡೌನ್‌ನಂತಹ ಸಮಸ್ಯೆಗಳನ್ನೂ ಸಮೀಕ್ಷಕರು ಎದುರಿಸುತ್ತಿದ್ದಾರೆ. ಅಲ್ಲದೆ, ನಾಯಿ ದಾಳಿಯ ಆತಂಕವೂ ಗಣತಿದಾರರನ್ನು ತೀವ್ರವಾಗಿ ಕಾಡುತ್ತಿದೆ.

ಈ ಲೇಖನ ಓದಿದ್ದೀರಾ?: ‘ಭಾರತದಲ್ಲಿ ಜಾತಿಗಳು’: ಅವುಗಳ ಹುಟ್ಟು, ವಿಕಾಸವನ್ನು ಬಾಬಾಸಾಹೇಬರು ನೋಡಿದ್ದು ಹೇಗೆ?

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಂತಹ ಜಿಲ್ಲೆಗಳು ಮಲೆನಾಡು ಮತ್ತು ಕರಾವಳಿ ಪ್ರದೇಶಗಳು. ಈ ಜಿಲ್ಲೆಗಳ ಜನರು ಬಯಲು ಸೀಮೆಯಂತೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಟ್ಟಿಗೆ ವಾಸವಾಗಿಲ್ಲ. ಬದಲಾಗಿ, ತಮ್ಮ ಜಮೀನುಗಳ ಬಳಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಸಮೀಕ್ಷಕರಿಗೆ ಮನೆಗಳನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಮನೆಗಳನ್ನು ಪತ್ತೆ ಮಾಡಲು ಸಮೀಕ್ಷಕರಿಗೆ ಹಳ್ಳಿಗಳಲ್ಲಿ ಮನೆಗಳ ಪಟ್ಟಿಯನ್ನೂ ನೀಡಲಾಗಿಲ್ಲ.

ಕೊಡಗು ಜಿಲ್ಲೆಯಲ್ಲಿ ಒಟ್ಟು 1,38,112 ಕುಟುಂಬಗಳನ್ನು ಸಮೀಕ್ಷೆ ಮಾಡಬೇಕಾಗಿದೆ. ಆದರೆ, ಕಳೆದ ಮೂರು ದಿನಗಳಲ್ಲಿ ಕೇವಲ 1,133 ಮನೆಗಳ ಗಣತಿ ಮಾತ್ರವೇ ನಡೆದಿದೆ. ನೆಟ್ವರ್ಕ್ ಸಮಸ್ಯೆ, ಆನೆ ದಾಳಿಯ ಆತಂಕ, ಮನೆಗಳ ಹುಡುಕಾಟ, ಮಳೆ, ಮನೆಗಳಿಗೆ ತೆರಳಿದಾಗ ಕಾರ್ಮಿಕರು ಸಿಗದೇ ಇರುವುದು, ಭೂಮಾಲೀಕರು ಸಮೀಕ್ಷೆಗೆ ಸಹಕಾರ ನೀಡದೇ ಇರುವುದು, ಬಿಜೆಪಿ ಬೆಂಬಲಿಗರಿಂದ ಅಸಹಕಾರ, ಲೈನ್ ಮನೆಗಳಲ್ಲಿ ವಾಸಿಸುವ ಬಡ ಜನರಿಗೆ ಸಮೀಕ್ಷೆ ಕುರಿತ ಅರಿವು ಇಲ್ಲದಿರುವುದು, ಆದಿವಾಸಿಗಳಲ್ಲಿ ದಾಖಲೆಗಳ ಕೊರತೆಯಂತಹ ಗಂಭೀರ ಸಮಸ್ಯೆಗಳು ತಲೆದೋರಿವೆ. ಸಮೀಕ್ಷೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೊಡಗಿನ ಸಮೀಕ್ಷಕರ ವ್ಯಥೆ.

“ಒಂದು ಮನೆಯ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸುಮಾರು 3 ಗಂಟೆಗಳು ಬೇಕಾಗುತ್ತವೆ. ಒಟಿಪಿ ಪಡೆಯಲು ಆದಿವಾಸಿಗಳು ಮತ್ತು ಲೈನ್ ಮನೆಗಳಲ್ಲಿ ವಾಸಿಸುವ ಜನರ ಬಳಿ ಮೊಬೈಲ್ ಇಲ್ಲದಿರುವುದು. ಮೊಬೈಲ್ ಇದ್ದರೂ, ನೆಟ್‌ವರ್ಕ್‌ ಸಿಗುವುದಿಲ್ಲ. ರಿಚಾರ್ಜ್‌ ಮಾಡಿಸಿರುವುದಿಲ್ಲ. ಸುದೀರ್ಘ ಸಮಯ ನೀಡಲು ಜನರು ಸಿದ್ದರಿಲ್ಲ. ಭೂಮಾಲೀಕರು ತಮ್ಮ ಆರ್ಥಿಕತೆ ಮತ್ತು ಜಮೀನಿನ ಮಾಹಿತಿ ನೀಡಲು ಹಿಂದೇಟು ಹಾಕುತ್ತಾರೆ. ಒಂದು ಮನೆಯಿಂದ ಮತ್ತೊಂದು ಮನೆಗೆ ತೆರಳುವುದು ಕಷ್ಟಕರ. ಎಲ್ಲವನ್ನೂ ನಿಭಾಯಿಸಿ ಸಮೀಕ್ಷೆ ಪೂರ್ಣಗೊಳಿಸೋಣ ಎಂದರೆ, ಸರ್ವರ್‌ ಕೈಕೊಡುತ್ತದೆ” ಎಂದು ಸಮೀಕ್ಷಕರು ಹೇಳಿಕೊಂಡಿದ್ದಾರೆ.

WhatsApp Image 2025 09 26 at 11.25.14 AM

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೇ ಕಥೆ. ಸಮೀಕ್ಷೆ ತೀರಾ ತೆವಳುತ್ತಿದೆ. ಜಿಲ್ಲೆಯ 4.31 ಲಕ್ಷ ಮನೆಗಳ ಪೈಕಿ ಕಳೆದ ಮೂರು ದಿನಗಳಲ್ಲಿ ಕೇವಲ 990 ಮನೆಗಳ ಸಮೀಕ್ಷೆ ಮಾತ್ರವೇ ನಡೆದಿದೆ. ತಾಂತ್ರಿಕ ಸಮಸ್ಯೆ ಮತ್ತು ಗೊಂದಲದ ಕಾರಣಗಳನ್ನು ನೀಡಿ, 50%ಗೂ ಹೆಚ್ಚು ಸಮೀಕ್ಷಕರು ಒಂದು ದಿನ ಸಮೀಕ್ಷೆಯನ್ನೇ ಕೈಗೊಂಡಿಲ್ಲವೆಂದು ಗೊತ್ತಾಗಿದೆ.

ಸಮೀಕ್ಷರಿಗೆ ಉಲ್ಲೇಖಿಸಲಾದ ಯುಎಚ್‌ಐಡಿ ಸಂಖ್ಯೆಗಳಿಗೂ, ಅವರಿಗೆ ಗುರುತಿಸಿದ ಪ್ರದೇಶದಲ್ಲಿನ ಮನೆಗಳ ಸಂಖ್ಯೆಗಳಿಗೂ ವ್ಯತ್ಯಾಸಗಳಿವೆ. ಅಲ್ಲದೇ, ನೆಟ್‌ವರ್ಕ್ ಸಮಸ್ಯೆಯಿಂದ ಆ್ಯಪ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. 60 ಪ್ರಶ್ನೆಗಳಿಗೆ ಉತ್ತರ ಪಡೆದು ಭರ್ತಿ ಮಾಡಲು ವಿಳಂಬ ಆಗುತ್ತಿದೆ. ದಿನವೊಂದಕ್ಕೆ ಕನಿಷ್ಠ 5 ಮನೆಯ ಸಮೀಕ್ಷೆ ಪೂರ್ಣಗೊಳಿಸುವುದೂ ಕಷ್ಟಕರವಾಗಿದೆ ಎಂದು ಸಮೀಕ್ಷಾನಿರತ ಶಿಕ್ಷಕರು ದೂರುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿಯೂ ತಾಂತ್ರಿಕ ಸಮಸ್ಯೆಯಿಂದಾಗಿ ಸಮೀಕ್ಷೆ ನಡೆಸುವುದು ವಿಳಂಬವಾಗುತ್ತಿದೆ. ಸಮೀಕ್ಷಕರು ದಿನಕ್ಕೆ ಐದಾರು ಕುಟುಂಬಗಳ ಸಮೀಕ್ಷೆಯನ್ನು ಮಾತ್ರವೇ ಮಾಡಲು ಸಾಧ್ಯವಾಗುತ್ತಿದೆ. 645 ಸಮೀಕ್ಷಕರು ಈವರೆಗೆ ಲಾಗಿನ್‌ ಕೂಡ ಮಾಡಿಕೊಂಡಿಲ್ಲ. ಜಿಲ್ಲೆಯಲ್ಲಿ ಸಮೀಕ್ಷೆಯು ತೆವಳುತ್ತಿದ್ದು, ಗಣತಿ ಹಿಂದುಳಿದಿರುವುದಕ್ಕೆ ಕಾರಣ ಕೇಳಿ ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮಾಲೂರು. ಕೆಜಿಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿಯೂ ಸಮೀಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರ ಭಾಗದಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷರಿಗೆ ಪ್ರವೇಶವನ್ನೇ ನೀಡುತ್ತಿಲ್ಲ. ಪ್ರವೇಶ ಪಡೆದರೂ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ಹಲವರು ಸಮೀಕ್ಷೆಗೆ ಸ್ಪಂದಿಸುತ್ತಿಲ್ಲ. ಮಾಹಿತಿ ನೀಡುತ್ತಿಲ್ಲ. ಅಲ್ಲದೆ, ಜಿಲ್ಲೆಯ ಜನರು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುತ್ತಿರುವ ಕಾರಣ, ಹೆಚ್ಚಿನ ಮನೆಗಳಲ್ಲಿ ಸಮೀಕ್ಷೆಗೆ ಯಾರೂ ಸಿಗುತ್ತಿಲ್ಲ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ನಿಗದಿತ ಗುರಿಯಲ್ಲಿ ಕೇವಲ 5% ಅಷ್ಟು ಮಾತ್ರವೇ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಆರಂಭವಾದ ಮೊದಲ ದಿನದಿಂದಲೇ 50 ವರ್ಷ ಮೇಲ್ಪಟ್ಟ ಶಿಕ್ಷಕರು ಮತ್ತು ಗರ್ಭಿಣಿ ಶಿಕ್ಷಕಿಯರಿಗೆ ಸಮೀಕ್ಷಾ ಕೆಲಸದಿಂದ ವಿನಾಯತಿ ನೀಡಬೇಕೆಂದು ಆಗ್ರಹಿಸಿ ಶಿಕ್ಷಕರು ಸಮೀಕ್ಷೆಗೆ ಹೋಗಿರಲಿಲ್ಲ. 2ನೇ ದಿನದಿಂದ ಸಮೀಕ್ಷೆ ಆರಂಭಗೊಂಡಿದ್ದು, ತಾಂತ್ರಿಕ ಸಮಸ್ಯೆಗಳು ಸಮೀಕ್ಷಕರನ್ನು ಕಾಡುತ್ತಿವೆ. ಜೊತೆಗೆ, ರಜೆ ಹಿನ್ನೆಲೆ ಹಲವಾರು ಜನರು ಪ್ರವಾಸ, ಸಂಬಂಧಿಗಳ ಮನೆಗೆಳಿಗೆ ಹೋಗಿದ್ದು, ಹೆಚ್ಚಿನ ಮನೆಗೆಳಲ್ಲಿ ಜನರು ಸಿಗುತ್ತಿಲ್ಲ. ಕೆಲವರು ಸಮೀಕ್ಷೆಗೆ ಸ್ಪಂದಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಸಮೀಕ್ಷೆ ನಡೆಸುವುದೇ ಸವಾಲಾಗಿದೆ ಎಂದು ಶಿಕ್ಷಕರು ಹೇಳಿಕೊಂಡಿದ್ದಾರೆ. ಅಲ್ಲದೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ‘ಸಮೀಕ್ಷೆ ನಡೆಯುತ್ತಿರುವುದು ಹಿಂದುಳಿದ ವರ್ಗದವರಿಗಾಗಿ, ನಮ್ಮ ಬಳಿ ಮಾಹಿತಿ ಕೇಳಬೇಡಿ’ ಎಂದು ಸಮೀಕ್ಷೆಗೆ ಒಳಪಡದೇ ಇರುವ ಉದಾಹರಣೆಗಳೂ ಸಾಕಷ್ಟಿವೆ.

ಬೆಳಗಾವಿ ಮತ್ತು ರಾಯಚೂರು ಜಿಲ್ಲೆಯೂ ಸಮೀಕ್ಷಕರು ಹಲವು ಸವಾಲುiಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಮನೆಗಳಿಗೆ ಅಂಟಿಸಲಾಗಿದ್ದ ವಿದ್ಯುತ್‌ ಮೀಟರ್‌ ರೀಡರ್‌ನಲ್ಲಿರುವ ಸಂಖ್ಯೆಗಳನ್ನು ನೀಡಿ, ಸಮೀಕ್ಷೆ ನಡೆಸಲು ಸೂಚಿಸಿರುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಹಲವೆಡೆ ಆ ಸಂಖ್ಯೆಗಳುಳ್ಳ ಸ್ಟಿಕ್ಕರ್‌ಗಳೇ ಇಲ್ಲದಂತಾಗಿವೆ. ಪರಿಣಾಮವಾಗಿ, ಮನೆಗಳನ್ನು ಹುಡುಕಲು ಸಮೀಕ್ಷರು ಹೈರಾಣುಗುತ್ತಿದ್ದಾರೆ. ಕನಿಷ್ಠ ಪಕ್ಷ, ಮತದಾರ ಪಟ್ಟಿಯ ಆಧಾರದ ಮೇಲೆ ಮನೆಗಳ ಪಟ್ಟಿಯನ್ನು ನೀಡಿದ್ದರೆ, ಸಮೀಕ್ಷೆ ಸುಲಭವಾಗುತ್ತಿತ್ತು ಎಂದು ಜಿಲ್ಲೆಯ ಸಮೀಕ್ಷಕರು ಹೇಳುತ್ತಿದ್ದಾರೆ.

ಸಮೀಕ್ಷೆ ಆರಂಭವಾಗಿ, ಅರ್ಧ ಮುಗಿದ್ದಿದ್ದಾಗ, ಇದ್ದಕ್ಕಿದ್ದಂತೆ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಜನರು ಕಾಯುವ ತಾಳ್ಮೆ ಕಳೆದುಕೊಂಡು, ಸಮೀಕ್ಷೆಗೆ ಒಳಪಡಲು ನಿರಾಕರಿಸುವ ಸವಾಲುಗಳೂ ಎದುರಾಗುತ್ತಿವೆ ಎಂಬುದು ಸಮೀಕ್ಷಕರ ಬೇಸರ.

ಈ ಲೇಖನ ಓದಿದ್ದೀರಾ?: ಒಳಮೀಸಲಾತಿ ಅನ್ಯಾಯ ಸರಿಪಡಿಸಲು ರಾಹುಲ್‌ ಗಾಂಧಿಗೆ ಪರಿಶಿಷ್ಟ ಜಾತಿಗಳ ಮಹಾ ಒಕ್ಕೂಟ ಪತ್ರ

ಗದಗ ಜಿಲ್ಲೆಯಲ್ಲಿ ಮತಪಟ್ಟಿ ಆಧಾರದ ಮೇಲೆ ನೀಡಲಾಗಿರುವ ಮನೆಯ ಮುಖ್ಯಸ್ಥರ ಹೆಸರುಗಳೊಂದಿಗೆ ಗುರುತಿಸಲಾದ ಮನೆಗಳೇ ಒಂದೆಡೆ ಇದ್ದರೆ, ಆ್ಯಪ್‌ನಲ್ಲಿ ನೀಡಲಾದ ಗೂಗಲ್ ಯುಎಚ್‌ಐಡಿ ಲೋಕೇಷನ್‌ ಬೇರೆ ಕಡೆ ತೋರಿಸುತ್ತದೆ. ಆ್ಯಪ್‌ನಲ್ಲಿ ಹೇಗೆಂದರೆ ಹಾಗೆ ಮನೆಗಳ ನಂಬರ್‍‌ಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ, ಮನೆಗಳನ್ನು ಹುಡುಕಲು ಹರಸಾಹಸ ಪಡಬೇಕಾಗಿದೆ. ಜೊತೆಗೆ, ಸಮೀಕ್ಷೆಗೆ ಒಳಪಡುವವರು ಸರಿಯಾಗಿ ಸ್ಪಂದಿಸುತ್ತಿಲ್ಲ. ತಾವು ನೀಡುವ ಮಾಹಿತಿಗೆ ಯಾವುದೇ ಪುರಾವೆಗಳನ್ನು ತೋರಿಸುವುದಿಲ್ಲ. ಒಟಿಪಿ ಕೊಡಲು ಹಲವರು ನಿರಾಕರಿಸುತ್ತಿದ್ದಾರೆ. ತಾಂತ್ರಿಕ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮೇಲ್ವಿಚಾರಕರು ಸಮಯಕ್ಕೆ ಸರಿಯಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಸಮೀಕ್ಷರು ‘ಈದಿನ.ಕಾಮ್‌ಗೆ ತಿಳಿಸಿದ್ದಾರೆ.

ಹಾಸನ, ಮಂಡ್ಯ ಜಿಲ್ಲೆಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಆರಂಭವಾಗಿಲ್ಲ. ಹಲವೆಡೆ ಸಮೀಕ್ಷೆ ವೇಳೆ, ಯುಎಚ್‌ಐಡಿ ಹಾಗೂ ಆಧಾರ್ ಮಾಹಿತಿ ಒದಗಿಸಿದರೂ, ಒಟಿಪಿ ಜನರೇಟ್ ಆಗುತ್ತಿಲ್ಲ. ಒಟಿಪಿ ದೊರೆಯದಿದ್ದರೆ, ಆ ಕುಟುಂಬದ ಸಮೀಕ್ಷೆಯನ್ನೇ ನಡೆಸಲಾಗುತ್ತಿಲ್ಲ. ಒಟಿಪಿ ದೊರೆತರೂ, ಅದು ಅಪ್‌ಡೇಟ್‌ ಆಗದೆ, ಸಮಸ್ಯೆ ಉಂಟು ಮಾಡುತ್ತಿದೆ.

ಹಾಸನ ನಗರದಲ್ಲಿ ಹಲವರು ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ. ನಮ್ಮ ಹಳ್ಳಿಗಳಲ್ಲಿ ಸಮೀಕ್ಷೆ ಮಾಡಿಸುತ್ತೇವೆ. ಇಲ್ಲಿ ಬೇಡವೆಂದು ಹೇಳುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಜೊತೆಗೆ, ಮಾಹಿತಿ ಕೊರತೆಯಿಂದ ಹಲವರು ಸಮೀಕ್ಷೆಗೆ ಸಹಕರಿಸಲು ನಿರಾಕರಿಸುತ್ತಿದ್ದಾರೆ.

ತುಮಕೂರು ಜಿಲ್ಲೆಯಲ್ಲಿಯೂ ಗಣತಿದಾರರಿಗೆ ಆ್ಯಪ್ ಕೈಕೊಡುತ್ತಿದೆ. ಹಳ್ಳಿಗಾಡು ಪ್ರದೇಶದಲ್ಲಿ ಇಂಟರ್‍‌ನೆಟ್ ಕೊರತೆಯಿಂದ ಸಮೀಕ್ಷೆಗೆ ತೊಡಕಾಗಿದೆ. ಪ್ರತಿನಿತ್ಯ 12 ಸಾವಿರ ಕುಟುಂಬಗಳ ಗಣತಿ ನಡೆಸುವ ಗುರಿ ನಿಗದಿ ಮಾಡಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ, ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಗುರುವಾರ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದು, ನಿಗದಿತ ಸಮಯದೊಳಗೆ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸದಲ್ಲಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕಿಯೊಬ್ಬರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಈದಿನ.ಕಾಮ್‌’ ಸಿಬ್ಬಂದಿಯ ಬಳಿ ಹೇಳಿಕೊಂಡಿದ್ದಾರೆ. “ಸಮೀಕ್ಷೆಗೆ ತೆರಳಿದ ಸಮಯದಲ್ಲಿ ಜನರು, ‘ನಮ್ಮ ಸಾಲ ನೀವು ತೀರಿಸ್ತೀರಾ, ಅಥವಾ ಸರ್ಕಾರ ಸಾಲ ಮನ್ನಾ ಮಾಡುತ್ತಾ. ನಮ್ಮ ಆಸ್ತಿ ಮಾಹಿತಿ ನಿಮಗೇಕೆ ನೀಡಬೇಕು’ ಎಂದು ಪ್ರಶ್ನಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತತ್ತರಿಸುತ್ತಿದ್ದೇವೆ. ಒಂದು ಸಮೀಕ್ಷೆ ಸಮಯದಲ್ಲಿ, ಕನಿಷ್ಠ ಎರಡರಿಂದ ಮೂರು ಬಾರಿ ಕುಟುಂಬದ ಮುಖ್ಯಸ್ಥರ ಫೋಟೊ ಕ್ಲಿಕ್ಕಿಸಿ, ಉತ್ತರ ಪಡೆಯಬೇಕಾಗುತ್ತಿದೆ. ಕೆಲವರು ಸಹಕಾರ ನೀಡಿದರೆ, ಕೆಲವರು ಅಸಮಾಧಾನದಿಂದ ಸಾಗ ಹಾಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ | ಕಾಲಂ 27ಸಿ ಅಡಿಯಲ್ಲಿ ಸ್ವಯಂ ಸೇವಾ ಕ್ಷೇತ್ರದ ನೌಕರರು ತಮ್ಮ ವೃತ್ತಿ ದಾಖಲಿಸಲು ಕರೆ!

 “ನಾವು ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಶಾಲೆಯ ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶಕ್ಕೆ ಸಮೀಕ್ಷೆ ಮಾಡುವಂತೆ ನಿಯೋಜನೆ ಮಾಡಲಾಗಿದೆ. ಅಲ್ಲಿನ ಜನರು ನಮಗೆ ಪರಿಚಿತರಲ್ಲ. ಹೀಗಾಗಿ, ಅವರು ಸರಿಯಾಗಿ ಸ್ಪಂದಿಸುವುದಿಲ್ಲ. ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ. ಸರಿಯಾದ ಮಾಹಿತಿ ನೀಡುವುದಿಲ್ಲ” ಎಂದು ಹೇಳಿಕೊಂಡಿದ್ದಾರೆ.

“ಪ್ರತಿ 20 ಸಮೀಕ್ಷೆದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸಮಸ್ಯೆಗಳಿದ್ದಲ್ಲಿ ಅವರಿಗೆ ತಿಳಿಸಬೇಕೆಂದು ತರಬೇತಿ ವೇಳೆ ಹೇಳಲಾಗಿತ್ತು. ಆದರೆ, ಸಮೀಕ್ಷೆ ಆರಂಭಗೊಂಡು 3 ದಿನಗಳ ಕಳೆದರೂ ಮೇಲ್ವಿಚಾರಕರು ಯಾರು ಎಂಬ ಪಟ್ಟಿಯನ್ನೇ ನಮಗೆ ಇನ್ನೂ ನೀಡಲಾಗಿಲ್ಲ. ಆ್ಯಪ್‌ನಲ್ಲಿ ದಾಖಲಾದ ಯುಎಚ್‌ಐಡಿ ಸಂಖ್ಯೆಗಳು ಸಮೀಕ್ಷೆಗೆ ನಿಯೋಜಿಸಿದ ಪ್ರದೇಶದಲ್ಲಿ ಪತ್ತೆಯಾಗದೆ ಸಮೀಕ್ಷಕರು ಪರದಾಡುವಂತಾಗಿದೆ” ಎಂದು ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯದ ಬಹುಭಾಗದ ಸಮೀಕ್ಷಕರು ತಾಂತ್ರಿಕ ಮತ್ತು ಸ್ಥಳೀಯ ಸಮಸ್ಯೆಗಳಿಂದಾಗಿ ಹೈರಾಣಾಗಿದ್ದಾರೆ. ಹಲವೆಡೆ, ವಯಸ್ಸಾದ, ಅನಾರೋಗ್ಯಕ್ಕೆ ತುತ್ತಾಗಿರುವ, ವಿಶೇಷ ಚೇತನ ಶಿಕ್ಷಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕೆಂಬ ಒತ್ತಾಯಗಳು ಕೇಳಿಬಂದಿವೆ.

ಅಲ್ಲದೆ, ಸ್ಥಳೀಯವಾಗಿ ಪ್ರತಿ ಹಳ್ಳಿಗಳಲ್ಲಿಯೂ ಸಮೀಕ್ಷೆ ಕುರಿತು ಪ್ರಚಾರ ಮಾಡಬೇಕು. ನಗರ ಸಭೆ, ಗ್ರಾಮ ಪಂಚಾಯತಿ ಸದಸ್ಯರು ಸಮೀಕ್ಷೆಗೆ ಒಳಪಡುವಂತೆ ತಮ್ಮ ವ್ಯಾಪ್ತಿಯ ನಿವಾಸಿಗಳಿಗೆ ಸೂಚನೆ ನೀಡಬೇಕು. ಹಲವೆಡೆ, ಸಮೀಕ್ಷೆ ತೆರಳಿದ ಶಿಕ್ಷಕರನ್ನು ತಾವು ಗಣತಿದಾರರೇ ಎಂಬುದಕ್ಕೆ ದಾಖಲೆ ಕೊಡಿ ಎಂದು ಜನರು ಕೇಳುತ್ತಿದ್ದಾರೆ. ಆದರೆ, ಶಿಕ್ಷಕರಿಗೆ ಸಮೀಕ್ಷಾ ನಿಯೋಜನೆಯ ಆದೇಶ ಪ್ರತಿಯನ್ನೂ ಕೊಡಲಾಗಿಲ್ಲ. ಆದೇಶದ ಪ್ರತಿ ನೀಡಬೇಕು. ಮನೆ ಪಟ್ಟಿಗಳು ಅಸಮರ್ಪಕವಾಗಿದ್ದು, ಸರಿಯಾದ ಮನೆ ಪಟ್ಟಿಗಳನ್ನು ಒದಗಿಸಬೇಕು ಎಂದು ಸಮೀಕ್ಷಾನಿರತ ಶಿಕ್ಷಕರು ಒತ್ತಾಯಿಸಿದ್ದಾರೆ.

ಸರ್ಕಾರವು ಕಡಿಮೆ ಅವಧಿಯಲ್ಲಿ ಬೃಹತ್ ಸಮೀಕ್ಷೆ ನಡೆಸುವ ಗುರಿಯನ್ನು ಹೊಂದಿದೆ. ಆ ಗುರಿಯನ್ನು ಸಾಧಿಸಿ, ಸಮೀಕ್ಷೆ ಯಶಸ್ಸುಗೊಳ್ಳಬೇಕಾದರೆ, ಸಮೀಕ್ಷಕರು ಎದುರಿಸುತ್ತಿರುವ ನಾನಾ ಬಗೆಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಸರಿಪಡಿಸುವಂತೆ ಸಮೀಕ್ಷೆ ನಡೆಸುವ ಗುತ್ತಿಗೆ ಪಡೆದಿರುವ ಸಂಸ್ಥೆಗೆ ಸೂಚಿಸಬೇಕು. ಶಿಕ್ಷಕರಿಗೆ ಅಗತ್ಯ ನೆರವುಗಳನ್ನು ಒದಗಿಸಬೇಕು. ಆಗ ಮಾತ್ರವೇ ಸಮೀಕ್ಷೆ ತನ್ನ ಗುರಿಯನ್ನು ಮುಟ್ಟುತ್ತದೆ. ಸಮೀಕ್ಷೆಯ ಉದ್ದೇಶವನ್ನು ಸಾಧಿಸಲು ಕೂಡ ಸಾಧ್ಯವಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

Download Eedina App Android / iOS

X