ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಪೀಕಲಾಟ!

Date:

Advertisements
ಗ್ರಾಮ ಪಂಚಾಯಿತಿ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಫೋರ್ಜರಿ ಆಗಿರುವುದು ಮೇಲುನೋಟಕ್ಕೆ ಕಾಣುತ್ತಿದೆ. ವೋಚರ್ ತುಂಬಿದವನ ಕೈಬರೆಹಕ್ಕೂ, ವೋಚರ್ ಸ್ವೀಕರಿಸಿದವನ ಸಹಿಗೂ ತಾಳೆಯಾಗುತ್ತಿದೆ.

ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಶವಗಳನ್ನು ಹೂತುಹಾಕಿರುವ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೌಜನ್ಯ ಪರ ಹೋರಾಟಗಾರ ವಿಠ್ಠಲಗೌಡರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಸ್ಥಳ ಮಹಜರಿಗೆ ಕರೆದುಕೊಂಡ ಹೋದ ಬಳಿಕ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಪ್ರಕರಣದ ಗಂಭೀರತೆ ಅರಿತ ಎಸ್‌ಐಟಿ, ಇಡೀ ಪ್ರದೇಶವನ್ನು ಕಣ್ಗಾವಲಿನಲ್ಲಿ ಇರಿಸಿದೆ. ಎಸ್‌ಐಟಿ ಶೀಘ್ರದಲ್ಲೇ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ಪುನರಾರಂಭಿಸುವ ಸೂಚನೆಗಳಂತೂ ಕಾಣುತ್ತಿವೆ.

ದೂರುದಾರ ಚಿನ್ನಯ್ಯ ಉಲ್ಟಾ ಹೊಡೆದ ಮೇಲೆ ಪ್ರಕರಣ ಸಂಪೂರ್ಣ ಹಳ್ಳಹಿಡಿಯಿತು ಎಂದೇ ಕೇಕೆ ಹಾಕಿದವರು ಈಗ ದಿಗ್ಭ್ರಾಂತರಾಗಿದ್ದಾರೆ. 2023ರ ವೇಳೆಗೆ ಸೌಜನ್ಯ ಹೋರಾಟಗಾರರ ಸಂಪರ್ಕಕ್ಕೆ ಬಂದಿದ್ದ ಚಿನ್ನಯ್ಯ, ಆರಂಭದಲ್ಲೇ ಹೋರಾಟಗಾರರಿಗೆ ಶವ ಹೂತ ಸ್ಥಳಗಳನ್ನು ತೋರಿಸಿದ್ದ. ಅದರ ಭಾಗವಾಗಿ ಸೌಜನ್ಯ ಅವರ ಮಾವ ವಿಠ್ಠಲ ಗೌಡರತ್ತ ವಿಚಾರಣೆ ತಿರುಗಿತು. ಬುರುಡೆ ತಂದ ಸ್ಥಳವನ್ನು ತೋರಿಸಲೆಂದು ವಿಠ್ಠಲರನ್ನು ಕರೆದೊಯ್ದಾಗ ಎಸ್‌ಐಟಿಗೆ ಆಘಾತ ಕಾದಿತ್ತು. ವಿಠ್ಠಲ ಅವರೇ ಹೇಳಿರುವಂತೆ, “ಮೊದಲ ದಿನದ ಮಹಜರಿನ ವೇಳೆ ಮೂರು, ಎರಡನೇ ದಿನ ಮಹಜರಿನ ಸಂದರ್ಭದಲ್ಲಿ ಐದು ಕಳೇಬರಗಳು ಸಿಕ್ಕಿವೆ. ಜೊತೆಗೆ ಒಂದು ಮಗುವಿನ ಬುರುಡೆಯೂ ದೊರೆತಿರುವುದು ದಿಗ್ಭ್ರಾಂತಿ ಉಂಟುಮಾಡಿದೆ. ವಾಮಾಚಾರಕ್ಕೆ ಬಳಸುವ ಕುಡಿಕೆಗಳು, ಹೆಂಗಸಿನ ಬಟ್ಟೆಗಳು ಪತ್ತೆಯಾಗಿವೆ”. ಈ ಎಲ್ಲ ಬೆಳವಣಿಗೆಗಳ ನಡುವೆ ಅಕ್ಷರಶಃ ಪೇಚಿಗೆ ಸಿಲುಕಿರುವುದು ಧರ್ಮಸ್ಥಳ ಗ್ರಾಮ ಪಂಚಾಯಿತಿ!

ಆರೋಪಿ ಚಿನ್ನಯ್ಯನ ದೂರು ಮುನ್ನೆಲೆಗೆ ಬಂದ ಆರಂಭದ ದಿನಗಳಲ್ಲಿ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳು ಮತ್ತು ಆನಂತರದಲ್ಲಿ ಆರ್‌ಟಿಐ ಅರ್ಜಿಯ ಕಾರಣಕ್ಕೆ ಗ್ರಾಪಂ ಬಿಡುಗಡೆ ಮಾಡಿರುವ ದಾಖಲೆಗಳು ಈಗ ಇಡೀ ಗ್ರಾಮ ಪಂಚಾಯಿತಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಸ್ಪಷ್ಟ.

ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ: ಸಾಕ್ಷಿದಾರ ಪ್ರದೀಪ್ ಹೇಳಿಕೆ ಕೋರ್ಟ್‌ನಲ್ಲಿ ದಾಖಲು

“ನಾವೇ ಹಲವು ಶವಗಳನ್ನು ಹೂತುಹಾಕಿಸಿದ್ದೇವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಚಿನ್ನಯ್ಯ ತೋರಿಸಿದ ಜಾಗಗಳಲ್ಲೇ ಶವಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಹೂಳಲಾಗಿದೆ” ಎಂದಿದ್ದರು ಶ್ರೀನಿವಾಸ್.

ಚಿನ್ನಯ್ಯ ಹೇಳಿರುವ ಪ್ರಕಾರ, ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಗೆ ಸೇರಿದ ಸಿಬ್ಬಂದಿ ಆತ. ಚಿನ್ನಯ್ಯನಿಗೂ ಧರ್ಮಸ್ಥಳ ಗ್ರಾಮ ಪಂಚಾಯಿತಿಗೂ ಸಂಬಂಧವಿಲ್ಲ. ಹೀಗಿರುವಾಗ ಗ್ರಾಮ ಪಂಚಾಯಿತಿಯವರು ಹೂತು ಹಾಕಿಸಿರುವ ಶವಗಳು ಯಾವುವು? ಯಾರದ್ದು?

ಗ್ರಾಮ ಪಂಚಾಯಿತಿ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಫೋರ್ಜರಿ ಆಗಿರುವುದು ಮೇಲುನೋಟಕ್ಕೆ ಕಾಣುತ್ತಿದೆ. ಶವ ವಿಲೇವಾರಿಗೆ ಸಂಬಂಧಿಸಿದ ವೋಚರ್‌ಗಳಲ್ಲಿ, “ವೋಚರ್ ಸ್ವೀಕರಿಸಿದ ವ್ಯಕ್ತಿಯ ಸಹಿಗೂ, ವೋಚರ್ ತುಂಬಿದ ವ್ಯಕ್ತಿಯ ಕೈಬರೆಹಕ್ಕೂ ತಾಳೆಯಾಗುತ್ತಿದೆ.” ಜೊತೆಗೆ ವೋಚರ್ ಸ್ವೀಚರಿಸಿದ ವ್ಯಕ್ತಿಯ (ಶವ ಹೂತವನು) ಹೆಸರುಗಳು ಒಂದೇ ತೆರನಾಗಿದ್ದರೂ, ತಂದೆಯ ಹೆಸರುಗಳು ಬೇರೆ ಬೇರೆ ಇವೆ. ಒಂದೇ ಹೆಸರಿನ ಪೌರಕಾರ್ಮಿಕರು ಎಷ್ಟು ಮಂದಿ ಇದ್ದರು ಎಂಬುದು ಸದ್ಯದ ಪ್ರಶ್ನೆ. ಉದಾಹರಣೆಗೆ- “ಬಾಬು ಸನ್ ಆಫ್ ಗುರುವ, ಬಾಬು ಸನ್ ಆಫ್ ಅಂಗರ, ಬಾಬು ಸನ್ ಆಫ್‌ ಕೊರಗು, ಬಾಬು ಸನ್ ಆಫ್‌ ಬಾಡ, ಬಾಬು ಸನ್ ಆಫ್‌ ಚಿಂಕ್ರ”- ಹೀಗೆ ಐದು ಜನ ಬಾಬುಗಳು ಕಂಡು ಬರುತ್ತಾರೆ. ಬಹುಶಃ ಬಾಬು ಎಂಬ ಹೆಸರಿನ ಐದು ಜನ ವ್ಯಕ್ತಿಗಳು ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿರಬಹುದೆಂದು ಭಾವಿಸಬಹುದಾದರೂ, ಎಲ್ಲರ ಸಹಿಯೂ ಒಂದೇ ತೆರನಾಗಿ ಇರುವುದು ಹೇಗೆ?- “ಧರ್ಮಸ್ಥಳ ಗ್ರಾಮ ಪಂಚಾಯಿತಿಗೂ ಚಿನ್ನಯ್ಯನಿಗೂ ಸಂಬಂಧವಿಲ್ಲ” ಎಂದ ಮೇಲೆ “ಗ್ರಾಮ ಪಂಚಾಯಿತಿಯವರು ಹೂತು ಹಾಕಿಸಿದ ಶವಗಳು ಯಾವುವು?”, “ಚಿನ್ನಯ್ಯ ಹೂತು ಹಾಕಿದ ಶವಗಳು ಯಾವುವು?”

ಗ್ರಾಮ ಪಂಚಾಯಿತಿಯ ಆಡಳಿತ ವರ್ಗವನ್ನು ತೀವ್ರ ವಿಚಾರಣೆಗೆ ಒಳಪಡಿಸುವುದು ಖಚಿತ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಬೆಳ್ತಂಗಡಿಗೆ ಭೇಟಿ ನೀಡಿರುವುದು ತನಿಖೆಯನ್ನು ತೀವ್ರಗೊಳಿಸುವ ಸೂಚನೆಯನ್ನು ಕೊಟ್ಟಿದೆ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಸಮಾಧಿ ಸ್ಥಳ ಅಗೆಯುವ ಕಾರ್ಯಾಚರಣೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿರಿ: ‘ಧರ್ಮಸ್ಥಳ ಕೇಸ್‌ನಲ್ಲಿ ಬಿಜೆಪಿ ಮೌನ ತಾಳಿದ್ದೇಕೆ?’; ಪ್ರಿಯಾಂಕ್‌ ಪ್ರಶ್ನೆ

ಶವ ಹೂತ ಸ್ಥಳಗಳು ಹಾಗೂ  ಅಪರಿಚಿತ ಸಾವುಗಳಿಗೆ ಸಂಬಂಧಿಸಿದ ಪಂಚಾಯಿತಿ ದಾಖಲೆಗಳನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಮಾಧ್ಯಮ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಧಿಕಾರಿಗಳು, “ಬಂಗ್ಲೆಗುಡ್ಡ ಪ್ರದೇಶದಲ್ಲಿ ಶವಗಳನ್ನು ಹೂತಿರುವುದಾಗಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟವರು ಹೇಳಿದ್ದು ಏಕೆ?” ಎಂದು ಪ್ರಶ್ನಿಸುತ್ತಿದ್ದಾರೆ.

ಇದರ ಜೊತೆಗೆ ಫಾರೆನ್ಸಿಕ್ ತಜ್ಞ ಡಾ.ಮಹಾಬಲಶೆಟ್ಟಿಯವರು, “ದೂರುದಾರ ಚಿನ್ನಯ್ಯ ತೋರಿಸಿರುವ ಜಾಗದಲ್ಲೇ ಹಲವು ಶವಗಳನ್ನು ಹೂತುಹಾಕಲಾಗಿದೆ. ಸ್ಥಳದಲ್ಲೇ ಪೋಸ್ಟ್ ಮಾರ್ಟಮ್‌ ಮಾಡಿ, ದಫನ್ ಮಾಡಲಾಗಿದೆ” ಎಂದು ಹೇಳಿಕೆ ನೀಡಿದ್ದರು. ಗ್ರಾಮ ಪಂಚಾಯಿತಿ ಜೊತೆಗೆ ಮಹಾಬಲ ಶೆಟ್ಟಿಯವರಿಗೂ ತನಿಖೆಯ ಬಿಸಿ ತಟ್ಟಿದೆ. ಅಂತೂ ಧರ್ಮಸ್ಥಳ ಪ್ರಕರಣ ಊಹೆಗೂ ಮೀರಿದ ತಿರುವುಗಳನ್ನು ತೆಗೆದುಕೊಂಡಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

Download Eedina App Android / iOS

X