ಜಿಎಸ್‌ಟಿ ಕಡಿತ | ಬಿಜೆಪಿ ಸಂಭ್ರಮಿಸುವಂಥಾದ್ದು ಏನಿದೆ?

Date:

Advertisements
ಮೋದಿ ಸರ್ಕಾರದ ತೆರಿಗೆ ನೀತಿಯು ಕೇಂದ್ರ ಸರ್ಕಾರ, ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ರಾಜ್ಯಗಳು ನಷ್ಟದ ಹೊರೆ ಹೊರುವಂತಾಗಿದೆ. ಜನಸಾಮಾನ್ಯರಿಗೆ ಹೆಚ್ಚಿನ ಲಾಭ ದೊರೆಯದೇ ಇದ್ದರೂ, ಕೊಂಚ ನಿರಾಳತೆಯಂತೂ ಸಿಗುತ್ತಿದೆ. ಸರ್ಕಾರ ತನ್ನ ದುಬಾರಿ ತೆರಿಗೆಯಿಂದ ತಾನೇ ಹಿಂದೆ ಸರಿದಿರುವಾಗ ಬಿಜೆಪಿಗರು ಸಂಭ್ರಮಿಸುವುದೇನಿದೆ?

ಸೋಮವಾರದಿಂದ (ಸೆ.22) ಜಿಎಸ್‌ಟಿ 2.0 ಜಾರಿಗೆ ಬಂದಿದೆ. ಮೋದಿ ಸರ್ಕಾರವು ಈ ಹಿಂದೆ ಇದ್ದ, ‘5%, 12%, 18% ಹಾಗೂ 28%’ ಜಿಎಸ್‌ಟಿ ದರವನ್ನು 5% ಮತ್ತು 18%ಗೆ ಪರಿಷ್ಕರಿಸಿದೆ. ಜೊತೆಗೆ, 40% ಜಿಎಸ್‌ಟಿ ಎಂಬ ಹೊಸ ದರವನ್ನು ಪರಿಚಯಿಸಿದೆ. ಹಲವು ದಿನ ಬಳಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿತವಾಗಿದೆ. ಜಿಎಸ್‌ಟಿ ದರ ಇಳಿಕೆಯನ್ನು ಬಿಜೆಪಿಗರು ದೇಶಾದ್ಯಂತ ಸಂಭ್ರಮಿಸುತ್ತಿದ್ದಾರೆ. ‘ಜಿಎಸ್‌ಟಿ ಬಚತ್ ಉತ್ಸವ’ ನಡೆಸುತ್ತಿದ್ದಾರೆ.

ಆದರೆ, 2017ರಲ್ಲಿ ಇದೇ ಮೋದಿ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಿತು. ನಾಲ್ಕು ಹಂತಗಳಲ್ಲಿ ತೆರಿಗೆಯನ್ನು ನಿಗದಿ ಮಾಡಿತು. ಜಿಎಸ್‌ಟಿ ಮೂಲಕ ಆರ್ಥಿಕತೆಯನ್ನು ಸರಳಗೊಳಿಸುತ್ತೇವೆಂದು ಹೇಳಿಕೊಂಡಿತ್ತು. ಆದರೆ, ಜಿಎಸ್‌ಟಿಯಲ್ಲಿ ಜಾರಿಗೆ ಬಂದ ದರಗಳು ಹಲವು ವಸ್ತುಗಳ ಬೆಲೆಯನ್ನು ಹೆಚ್ಚಿಸಿತು. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಹೊರೆಯಾಗಿ ಪರಿಣಮಿಸಿತು. ಅಂದು, ಜನರ ಮೇಲೆ ಹೊರೆ ಹೇರಿದ್ದ ಮೋದಿ ಸರ್ಕಾರವೇ ಈಗ ಜಿಎಸ್‌ಟಿ ದರ ಪ್ರಮಾಣವನ್ನು ಕಡಿಮೆ ಮಾಡಿದೆ, ಜನರ ಮೇಲಿನ ಹೊರೆಯನ್ನು ತಗ್ಗಿಸಿದೆ.

2025ರ ಸೆಪ್ಟೆಂಬರ್ 3ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಿತು. ಸಭೆಯಲ್ಲಿ ಜಿಎಸ್‌ಟಿ ಪರಿಷ್ಕೃತ ದರಗಳ ಬಗ್ಗೆ ಘೋಷಿಸಿತು. ‘ಪರಿಷ್ಕೃತ ದರಗಳು ಆರ್ಥಿಕತೆಗೆ 2 ಲಕ್ಷ ಕೋಟಿ ರೂ. ಉತ್ತೇಜನ ನೀಡುತ್ತದೆ. ಜಿಡಿಪಿಯನ್ನು 0.2-0.3% ಹೆಚ್ಚಿಸುತ್ತದೆ’ ಎಂದು ಸರ್ಕಾರ ಹೇಳಿತು.

Advertisements

ಆ ಸಭೆಯಲ್ಲಿ ಹಲವು ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಜಿಎಸ್‌ಟಿ ಪ್ರಮಾಣ ಕಡಿತವು ಜನರಿಗೆ ಅನುಕೂಲವಾಗುತ್ತದೆ ಎಂದು ಪರಿಷ್ಕರಣೆಗೆ ಎಲ್ಲ ರಾಜ್ಯಗಳು ಸಮ್ಮತಿ ಸೂಚಿಸಿದವು. ಇದೇ ವೇಳೆ, ಪರಿಷ್ಕೃತ ತೆರಿಗೆಯಿಂದ ರಾಜ್ಯಗಳಿಗೆ ಸುಮಾರು ಒಂದರಿಂದ ಒಂದೂವರೆ ಲಕ್ಷ ಕೋಟಿ ರೂ. ನಷ್ಟವಾಗುತ್ತದೆ. ರಾಜ್ಯಗಳು ಆದಾಯ ನಷ್ಟ ಅನುಭವಿಸದಂತೆ ಕೇಂದ್ರವು ನೋಡಿಕೊಳ್ಳಬೇಕು ಎಂದು ರಾಜ್ಯಗಳು ಒತ್ತಾಯಿಸಿದ್ದವು.

”ರಾಜ್ಯಗಳು 1 ರಿಂದ 1.5 ಲಕ್ಷ ಕೋಟಿ ರೂ. ಆದಾಯ ಕಳೆದುಕೊಳ್ಳುವ ಸಾಧ್ಯತೆಯಿದೆ. ಪರಿಣಾಮ, ರಾಜ್ಯಗಳ ಹಣಕಾಸಿನ ಸ್ಥಿರತೆಯ ಮೂಲವೇ ನಾಶವಾಗಲಿದೆ. ಆದಾಯ ನಷ್ಟವು ರಾಜ್ಯಗಳು ಕೇಂದ್ರವನ್ನು ಅವಲಂಬಿಸುವಂತೆ ಮಾಡುತ್ತದೆ. ರಾಜ್ಯಗಳು ಆದಾಯ ಕಳೆದುಕೊಳ್ಳುತ್ತಿರುವಾಗ, ಕೇಂದ್ರವು 50ರಿಂದ 60 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸುವ ಸಾಧ್ಯತೆಗಳಿವೆ. ರಾಜ್ಯಗಳು ಆದಾಯ ನಷ್ಟ ಅನುಭವಿಸದಂತೆ ನೋಡಿಕೊಳ್ಳಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೆವು. ಆದರೆ, ನಮ್ಮ ಬೇಡಿಕೆಯನ್ನು ಕೇಂದ್ರ ಕಡೆಗಣಿಸಿದೆ. ಕೇಂದ್ರವು ಒಕ್ಕೂಟ ವ್ಯವಸ್ಥೆಯ ಮೂಲಕ್ಕೇ ಧಕ್ಕೆ ತರುತ್ತಿದೆ” ಎಂದು ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ದೂರಿದ್ದಾರೆ.

ತೆರಿಗೆ ಪ್ರಮಾಣ ಇಳಿಸಿ, ರಾಜ್ಯಗಳಿಗೆ ನಷ್ಟದ ಹೊರೆ ಹೇರಿ, ತಾನು ಲಾಭ ಮಾಡಿಕೊಳ್ಳುತ್ತಿದೆ ಕೇಂದ್ರ ಸರ್ಕಾರ. ‘ದೇಶವಾಸಿಗಳಿಗೆ ಮೋದಿ ಅವರ ದೀಪಾವಳಿ ಉಡುಗೊರೆ’ ಎಂದು ಮೋದಿ ಭಕ್ತರು, ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ.

ಹಿಂದೆ, ಕೇಂದ್ರವೇ ದುಬಾರಿ ಜಿಎಸ್‌ಟಿ ಹೇರಿತ್ತು. ಈಗ, ಕೇಂದ್ರವೇ ಕಡಿತ ಮಾಡಿದೆ. ತನ್ನ ಧೋರಣೆಯಿಂದ ಮೋದಿ ಸರ್ಕಾರ ತಾನೇ ಹಿಂದೆ ಸರಿದಿದೆ. ತನ್ನ ತಪ್ಪನ್ನು ಬರೋಬ್ಬರಿ 8 ವರ್ಷಗಳ ಬಳಿಕ, ತಿದ್ದಿಕೊಂಡಿದೆ. ಇದರಲ್ಲಿ ರಾಜಕೀಯ ಲಾಭಾಭಿಲಾಷೆ ಇದೆ ಎಂಬುದು ಸ್ಪಷ್ಟ.

2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ, ಆರೋಗ್ಯ ವಿಮೆ, ಪೆನ್ಸಿಲ್, ರಬ್ಬರ್, ಪುಸ್ತಕ ಸೇರಿದಂತೆ ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳ ಮೇಲೆ 12% ಮತ್ತು 18% ಜಿಎಸ್‌ಟಿ ವಿಧಿಸಲಾಗಿತ್ತು. ಇದೀಗ, ಈ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಸಲಾಗಿದೆ. 0% ಜಿಎಸ್‌ಟಿ ಬಗ್ಗೆ ಮೋದಿ ಭಕ್ತರು ಮತ್ತು ಗೋದಿ ಮೀಡಿಯಾಗಳು ಭಾರೀ ಚರ್ಚೆ ಮಾಡುತ್ತಿವೆ. ಮೋದಿ ಅವರನ್ನು ಕೊಂಡಾಡುತ್ತಿವೆ. ಆದರೆ, ಕಳೆದ 8 ವರ್ಷಗಳಲ್ಲಿ ಈ ವಸ್ತುಗಳ ಮೇಲೆ ದುಬಾರಿ ಜಿಎಸ್‌ಟಿ ವಿಧಿಸಿ, ಜನರನ್ನು ಸುಲಿಗೆ ಮಾಡಿದ್ದು ಯಾಕಾಗಿ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ.

ಇನ್ನು, ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, ”ಜಿಎಸ್‌ಟಿ ಪರಿಷ್ಕರಣೆಯಿಂದ ಜನರಿಗೆ 2.5 ಲಕ್ಷ ಕೋಟಿ ರೂ. ಉಳಿತಾಯ ಆಗುತ್ತದೆ” ಎಂದು ಹೇಳಿಕೊಂಡಿದ್ದಾರೆ. ಅಂದರೆ, ದುಬಾರಿ ಜಿಎಸ್‌ಟಿ ಹೇರಿಕೆಯಿಂದ ಈ ಎಂಟು ವರ್ಷಗಳಲ್ಲಿ ಜನರಲ್ಲಿ ಉಳಿತಾಯವಾಗಬೇಕಿದ್ದ 20 ಲಕ್ಷ ಕೋಟಿ ರೂ.ಗಳನ್ನು ಸರ್ಕಾರ ಸುಲಿಗೆ ಮಾಡಿದೆ ಎಂಬುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂದಮೇಲೆ, ಜನರನ್ನು ಸುಲಿಗೆ ಮಾಡಿದ್ದನ್ನು ಹೇಳದ ಸರ್ಕಾರ, ಈಗ ಸುಧಾರಣೆಯ ಮಾತನಾಡುತ್ತಿದೆ. ಇದು ಬಿಜೆಪಿಗರ ಸೋಗಲಾಡಿತನವಲ್ಲವೇ?

ಒಂದಂತೂ ಸ್ಪಷ್ಟ, ಭಾರತದ ಉತ್ಪನ್ನಗಳ ಮೇಲೆ ಅಮೆರಿಕ 50% ಆಮದು ತೆರಿಗೆ ವಿಧಿಸಿದೆ. ಇದು ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲಿದೆ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು, ಭಾರತದಲ್ಲಿಯೇ ಹೆಚ್ಚು ವಹಿವಾಟು ನಡೆಯುವಂತೆ ಮಾಡಲು ಜಿಎಸ್‌ಟಿ ಪರಿಷ್ಕರಣೆ ನಡೆದಿದೆ. ಈ ಬಗೆಗಿನ ಚರ್ಚೆಗಳೂ ಚಾಲ್ತಿಯಲ್ಲಿವೆ.

ಆದಾಗ್ಯೂ, ಜಿಎಸ್‌ಟಿ ಪರಿಷ್ಕರಣೆಯಿಂದ ಬಹುತೇಕ ಉತ್ಪನ್ನಗಳ ಬೆಲೆ ಇಳಿಕೆಯಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಯಾಕೆಂದರೆ, ಎಲ್ಲ ಸರಕು ಮತ್ತು ಸೇವಾ ವಲಯದಲ್ಲಿ ಉತ್ಪಾದನಾ ವ್ಯವಸ್ಥೆಗೆ ಅಗತ್ಯವಾಗಿ ಬೇಕಿರುವ ಶಕ್ತಿ ಇಂಧನದ ಮೂಲವಾದ ಕಲ್ಲಿದ್ದಲು ಮತ್ತು ಪೈಪ್ ಮೂಲಕ ಸಾಗಾಟವಾಗುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು 5%ನಿಂದ 18%ಗೆ ಮೋದಿ ಸರ್ಕಾರ ಏರಿಕೆ ಮಾಡಿದೆ. ಹೀಗಾಗಿ, ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಉತ್ಪಾದನಾ ವೆಚ್ಚ ಹೆಚ್ಚಾದರೆ, ಆ ಹೆಚ್ಚುವರಿ ವೆಚ್ಚವನ್ನು ಕಂಪನಿಗಳು/ಉತ್ಪಾದಕರು ವಸ್ತುಗಳ ಬೆಲೆಯ ಮೇಲೆ ಹಾಕುತ್ತಾರೆ. ಪರಿಣಾಮವಾಗಿ, ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗಿದ್ದರೂ, ಉತ್ಪನ್ನಗಳ ಬೆಲೆ ಇಳಿಯುವುದಿಲ್ಲ. ಬದಲಾಗಿ, ಹೆಚ್ಚಾಗುತ್ತದೆ. ಇನ್ನು ಇಳಿಸಲೇಬೇಕೆನ್ನುವ ಇಕ್ಕಟ್ಟಿಗೆ ಸಿಲುಕಿದವರು, ಸರಕಿನ ಗಾತ್ರ ಹೆಚ್ಚುಮಾಡಿ, ಅದೇ ಹಳೆಯ ಬೆಲೆಗೆ ಮಾರಾಟ ಮಾಡುತ್ತಾರೆ.

ಇನ್ನು, ಎಲೆಕ್ಟ್ರಾನಿಕ್‌ ಉಪಕರಣಗಳಾದ ಐಫೋನ್, ಸ್ಮಾರ್ಟ್‌ಫೋನ್ ಹಾಗೂ ಲ್ಯಾಪ್‌ಟಾಪ್‌ಗಳ ಮೇಲಿನ ಜಿಎಸ್‌ಟಿಯಲ್ಲಿ ಯಾವುದೇ ಕಡಿತವಿಲ್ಲ. ಜಿಎಸ್‌ಟಿ ಪರಿಷ್ಕರಣೆಯಿಂದ ಕಣ್ಣಿಗೆ ಕಾಣುವಂತೆ ದರ ಬದಲಾಗಿರುವುದು ಸಣ್ಣ ಕಾರುಗಳ ಮೇಲೆ ಮಾತ್ರ. ಈ 4,000 ಎಂ.ಎಂ. ಉದ್ದದ, 1200 ಸಿಸಿಯೊಳಗಿನ ಪೆಟ್ರೋಲ್ ಮತ್ತು 1,400 ಸಿಸಿವರೆಗಿನ ಡೀಸೆಲ್ ಕಾರುಗಳ ಬೆಲೆಯಲ್ಲಿ ಸುಮಾರು 70,000 ರೂ.ವರೆಗೆ ಕಡಿತವಾಗಿದೆ ಎಂದು ವರದಿಯಾಗಿದೆ. ಆದರೆ, ಬಹುಸಂಖ್ಯಾತ ಭಾರತೀಯರು ಕಾರುಗಳನ್ನು ಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ದುಬಾರಿ ತೆರಿಗೆಗಳು ಮತ್ತು ಬಂಡವಾಳಶಾಹಿ ಪರವಾದ ನೀತಿಗಳ ಮೂಲಕ ಜನರ ಕೊಳ್ಳುವ ಸ್ಥಿತಿಯನ್ನು ಮೋದಿ ಸರ್ಕಾರವೇ ಕಸಿದುಕೊಂಡಿದೆ.

ಆಹಾರದ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ ಎಂದು ಮೋದಿ ಭಕ್ತರು ಭಜನೆ ಮಾಡುತ್ತಿದ್ದಾರೆ. ಆದರೆ, ಇಲ್ಲೂ ಮೋದಿ ಸರ್ಕಾರ ತನ್ನ ಕಟುಕತನವನ್ನು ಪ್ರದರ್ಶಿಸಿದೆ. ಪರಿಷ್ಕೃತ ಜಿಎಸ್‌ಟಿಯಂತೆ ಆಹಾರವನ್ನು ಹೋಟೆಲ್‌ಗಳೇ ಡೆಲಿವರಿ ಮಾಡಿದರೆ 5% ತೆರಿಗೆ ವಿಧಿಸಲಾಗುತ್ತದೆ. ಅದೇ ಆಹಾರವನ್ನು ಸ್ವಿಗ್ಗಿ/ಜೊಮೆಟೊದಂತಹ ಮಧ್ಯವರ್ತಿಗಳು ಡೆಲಿವರಿ ಮಾಡಿದರೆ, 5%+18% ಜಿಎಸ್‌ಟಿ ಅಂದರೆ, ಒಟ್ಟು 23% ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಿಂದ ಬೆಲೆ ಇಳಿಕೆ ಹೇಗೆ ಸಾಧ್ಯ?

ಹಾಗೆ ನೋಡಿದರೆ, 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ಸಮಯದಲ್ಲೂ ಮೋದಿ ಭಕ್ತರು ಮತ್ತು ಗೋದಿ ಮಾಧ್ಯಮಗಳು ಏಕರೂಪ ತೆರಿಗೆಯಿಂದ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತದೆ ಎಂದು ಬೊಬ್ಬೆ ಹೊಡೆದಿದ್ದವು. ಆದರೆ, ಆ ಸಂದರ್ಭದಲ್ಲಿ ಯಾವುದೇ ವಸ್ತುಗಳ ಬೆಲೆ ಇಳಿಕೆಯಾಗಲಿಲ್ಲ. ಅಂದು ಜಿಎಸ್‌ಟಿಯ ಲಾಭದಲ್ಲಿ 25%ಗಿಂತ ಕಡಿಮೆ ಲಾಭ ಗ್ರಾಹಕರಿಗೆ ದೊರೆತರೆ, 75%ಗಿಂತ ಹೆಚ್ಚು ಲಾಭ ಉತ್ಪಾದಕರು ಮತ್ತು ಮಾರಾಟಗಾರರಿಗೆ ದೊರೆತಿದೆ ಎಂಬುದನ್ನು ಸಿಎಎ ವರದಿ ವಿವರಿಸಿದೆ.

ಈ ಲೇಖನ ಓದಿದ್ದೀರಾ?: ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಜಿಎಸ್‌ಟಿ ಜಾರಿಗೆ ಬಂದ ಬಳಿಕವೂ, ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಇದರ ಜೊತೆಗೆ, ಲಾಭದ ಲಾಲಸೆಯಲ್ಲಿರುವ ಉತ್ಪಾದಕರು, ಅಳಿದುಳಿದ ಜಿಎಸ್‌ಟಿ ಕಡಿತದ ಲಾಭವನ್ನು ಜನಸಾಮಾನ್ಯರ ಜೇಬಿಗೆ ಹಾಕುವ ಸಾಧ್ಯತೆಗಳೇ ಇಲ್ಲ. ಉತ್ಪಾದಕರು ತಾವು ಖರೀದಿಸುವ ಕಚ್ಚಾ ವಸ್ತುಗಳು, ಅವುಗಳ ಸಂಗ್ರಹಣೆ, ನಿರ್ವಹಣೆ, ಮಾರ್ಪಡಿಸುವಿಕೆ, ಹೊಸ ಉತ್ಪನ್ನವಾಗಿ ಪರಿವರ್ತಿಸುವಿಕೆ, ಸರಬರಾಜು ಹಾಗೂ ಮಾರಾಟ ವೆಚ್ಚ ಎಲ್ಲವನ್ನೂ ಒಟ್ಟುಗೂಡಿ ಗ್ರಾಹಕರ ಮೇಲೆ ಜಿಎಸ್‌ಟಿಯ ಹೊರೆಯನ್ನು ವಿಧಿಸುತ್ತಾರೆ. ಆದ್ದರಿಂದ, ಜಿಎಸ್‌ಟಿ ಕಡಿತವನ್ನು ಇತರ ವೆಚ್ಚಗಳೊಂದಿಗೆ ಸರಿದೂಗಿಸಿ, ಕಡಿತದ ಲಾಭವನ್ನು ಉತ್ಪಾದಕರು ಮತ್ತು ಮಾರಾಟಗಾರರು ಗ್ರಾಹಕರಿಗೆ ನೀಡದೇ ಇರಬಹುದು.

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ, ‘ಎಂಆರ್‌ಪಿ’ಯಲ್ಲಿ ತಮಗೆ ಬೇಕಾದ ಬದಲಾವಣೆಗಳನ್ನು ಮಾಡುವ ಮೂಲಕ, ಜಿಎಸ್‌ಟಿಯನ್ನು ಕಡಿಮೆ ತೋರಿಸಿ, ಮಾರಾಟ ಬೆಲೆಯನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ, ಕೆಲವು ಕಂಪನಿಗಳು ತೆರಿಗೆ ಕಡಿತದ ಹೆಸರಿನಲ್ಲಿ ತಮ್ಮ ಉತ್ಪನ್ನಗಳ ಮೇಲಿನ ಬೆಲೆಯಲ್ಲಿ ಅತೀ ಕಡಿಮೆ ಮೊತ್ತವನ್ನು ಮಾತ್ರವೇ ಕಡಿಮೆ ಮಾಡಿವೆ.

ಮೋದಿ ಸರ್ಕಾರದ ಜಿಎಸ್‌ಟಿ ಪರಿಷ್ಕರಣೆಯು ಮೂಗಿಗೆ ಸವರಿದ ತುಪ್ಪವಾಗಿ ಉಳಿದಿದೆ. ಅದನ್ನು ನೇರವಾಗಿ ನೋಡಲೂ ಸಾಧ್ಯವಿಲ್ಲ? ಸವಿಯಲೂ ಸಾಧ್ಯವಿಲ್ಲ. ಅಂತೆಯೇ, ಜಿಎಸ್‌ಟಿ ಪರಿಷ್ಕರಣೆಯನ್ನೂ ಜನರ ಮೂಗಿನ ಮೇಲೆ ಇರಿಸಲಾಗಿದೆ. ತೆರಿಗೆ ನೀತಿಯು ಕೇಂದ್ರ ಸರ್ಕಾರ, ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ರಾಜ್ಯಗಳು ನಷ್ಟದ ಹೊರೆ ಹೊರುವಂತಾಗಿದೆ. ಜನಸಾಮಾನ್ಯರಿಗೆ ಹೆಚ್ಚಿನ ಲಾಭ ದೊರೆಯದೇ ಇದ್ದರೂ, ಕೊಂಚ ನಿರಾಳತೆಯಂತೂ ಸಿಗುತ್ತಿದೆ. ಸರ್ಕಾರ ತನ್ನ ದುಬಾರಿ ತೆರಿಗೆಯಿಂದ ತನ್ನ ಅನುಕೂಲಕ್ಕಾಗಿ ತಾನೇ ಹಿಂದೆ ಸರಿದಿದ್ದರೂ, ಬಿಜೆಪಿಗರು ಸಂಭ್ರಮಿಸುವುದೇನಿದೆ? ಅಭಿಯಾನಗಳ ಮೂಲಕ ಜನರ ಬಾಯಿಗೆ ಚೂರು ಸಿಹಿ ತಿನಿಸಿ ಪ್ರಚಾರ ಪಡೆದು ಬೀಗುತ್ತಿರುವುದೇಕೆ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

ಲಡಾಖ್ | ಅಭಿವೃದ್ಧಿಯ ಆಶ್ವಾಸನೆ ನೀಡಿ ಜನರನ್ನು ವಂಚಿಸಿದ ಕೇಂದ್ರ ಸರ್ಕಾರ

ಲಡಾಖ್‌ನಲ್ಲಿ ನಡೆಯುತ್ತಿರುವ ಹೋರಾಟವು ಕೇವಲ ರಾಜ್ಯ ಸ್ಥಾನಮಾನ ಅಥವಾ ಆರನೆಯ ಅನುಸೂಚನೆ...

ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ

"ಭಾರತದ ತುಂಬೆಲ್ಲ ಬಲಿ ಕಥೆಗಳೇ ತುಂಬಿವೆ. ಅದಕ್ಕೆ ಇಲ್ಲಿ ಸೊಳ್ಳೆಯಷ್ಟು ಇರುವವರು...

Download Eedina App Android / iOS

X