‘ಈ ದಿನ’ ಸಂದರ್ಶನ | ದಿನೇಶ್‌ ಅಮೀನ್‌ ಮಟ್ಟು ಅವರಿಗೆ ಪರಿಷತ್‌ ಸ್ಥಾನ ಕೈತಪ್ಪಿದ್ದು ಹೇಗೆ?

Date:

Advertisements
ವಿಧಾನ ಪರಿಷತ್‌ ಸ್ಥಾನ ಕೈತಪ್ಪಿದ ನಂತರ ಮೌನಕ್ಕೆ ಜಾರಿದ್ದ ದಿನೇಶ್‌ ಅಮೀನ್‌ ಮಟ್ಟು ಅವರು ಈಗ ಮೌನ ಮುರಿದಿದ್ದಾರೆ. ಪರಿಷತ್‌ ಸ್ಥಾನ ಕೈತಪ್ಪಿಸಿರುವ ತೆರೆಮರೆಯ 'ನಾಟಕ'ವನ್ನು ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಇನ್ನು ಮುಂದೆ ಸರ್ಕಾರದಿಂದ ಯಾವುದೇ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂದು ಇದೇ ವೇಳೆ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಅವರನ್ನು ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ ಮಾಡಿಯೇ ಬಿಟ್ಟಿದೆ, ಇನ್ನೇನು ಅವರು ಪ್ರಮಾಣವಚನ ಸ್ವೀಕರಿಸುವುದೊಂದೇ ಬಾಕಿ ಎನ್ನುವ ಬೆಳವಣಿಗೆ ಬಲೂನಿನಂತೆ ಹಾರಿತ್ತು. ವಿಷಯ ಎಲ್ಲಡೆ ಹಬ್ಬಿ ಅವರ ಆಪ್ತವಲಯ ಮುಂಚಿತವಾಗಿಯೇ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೂರವಾಣಿ ಕರೆಗಳನ್ನು ಮಾಡಿ ಶುಭಾಶಯ ತಿಳಿಸಿತ್ತು. ಆದರೆ, ಕಡೆಗೆ ಆಗಿದ್ದೇ ಬೇರೆ. ಸ್ವತಃ ಅವರೇ ನಿರೀಕ್ಷಿಸಿರದ ಬೆಳವಣಿಗೆ ಏಕಾಏಕಿ ಸಂಭವಿಸಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

ವಿಧಾನ ಪರಿಷತ್‌ ಸ್ಥಾನ ಕೈತಪ್ಪಿದ ನಂತರ ಮೌನಕ್ಕೆ ಜಾರಿದ್ದ ದಿನೇಶ್‌ ಅವರು ಈಗ ಮೌನ ಮುರಿದಿದ್ದಾರೆ. ಪರಿಷತ್‌ ಸ್ಥಾನ ಕೈತಪ್ಪಿಸಿರುವ ತೆರಮರೆಯ ‘ನಾಟಕ’ವನ್ನು ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಇನ್ನು ಮುಂದೆ ಸರ್ಕಾರದಿಂದ ಯಾವುದೇ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂದು ಇದೇ ವೇಳೆ ಘೋಷಿಸಿದ್ದಾರೆ.

ಬಹಳಷ್ಟು ನಾಟಕೀಯ ಬೆಳವಣಿಗೆಯಲ್ಲಿ ವಿಧಾನ ಪರಿಷತ್‌ನಲ್ಲಿ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ಕೊನೆ ಕ್ಷಣದಲ್ಲಿ ದಿನೇಶ್‌ ಅವರ ಹೆಸರನ್ನು ಕೈಬಿಟ್ಟು, ಆರತಿ ಕೃಷ್ಣ, ರಮೇಶ್ ಬಾಬು, ಎಫ್.ಎಚ್‌. ಜಕ್ಕಪ್ಪನವರ್ ಹಾಗೂ ಮೈಸೂರು ಮೂಲದ ಪತ್ರಕರ್ತ ಶಿವಕುಮಾ‌ರ್ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಸೆ.7ರಂದು ಅಧಿಕೃತ ಆದೇಶ ಹೊರಡಿಸಿತು.

ದಿನೇಶ್‌ ಅವರಿಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ಕೈತಪ್ಪಿರುವ ಬಗ್ಗೆ ನಾನಾ ಚರ್ಚೆಗಳು ಮುನ್ನೆಲೆಗೆ ಬಂದವು. ಕೋಮುವಾದದ ವಿರುದ್ಧ ಸೈದ್ಧಾಂತಿಕವಾಗಿ ಪ್ರಖರ ವಿಶ್ಲೇಷಣೆ ಮಾಡುತ್ತಿದ್ದ ಪತ್ರಕರ್ತ ದಿನೇಶ್‌ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ಕೈಯಾರೆ ಕಳೆದುಕೊಂಡಿತೇ ಎಂಬ ಪ್ರಶ್ನೆ ಮೂಡಿದೆ.

ಪರಿಷತ್‌ ಸ್ಥಾನ ಕೈಪ್ಪಿರುವ ಬೆಳವಣಿಗೆ ಬಗ್ಗೆ ದಿನೇಶ್‌ ಅಮೀನ್‌ ಮಟ್ಟು ಅವರನ್ನು ಈ ದಿನ.ಕಾಮ್ ಮಾತಿಗೆಳೆದಾಗ ಕಾಣದ ಕೈಗಳ ಕುತಂತ್ರ ಕುರಿತು ಕೆಲ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅವರೊಡನೆ ನಡೆದ ಚುಟುಕು ಪ್ರಶ್ನೋತ್ತರ ಹೀಗಿದೆ:

ಈ ದಿನ.ಕಾಮ್:‌ ವಿಧಾನ ಪರಿಷತ್‌ ಸ್ಥಾನ ಕಡೆಯ ಕ್ಷಣದಲ್ಲಿ ಕೈ ತಪ್ಪಿದೆ. ನೀವು ನಿರೀಕ್ಷಿಸಿರದ ಈ ಬೆಳವಣಿಗೆಯನ್ನು ಹೇಗೆ ನೋಡುತ್ತೀರಿ?

ದಿನೇಶ್‌ ಅಮೀನ್‌ ಮಟ್ಟು: ಈ ಬಾರಿ ಮಾಧ್ಯಮ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಬಂದಿತ್ತು, ಆಗ ನನ್ನ ಕೆಲವು ಹಿತೈಷಿಗಳು ನೀವು ಕೇಳಿ ಎಂದು ನನ್ನ ಮೇಲೆ ಒತ್ತಡ ಹೇರಿದರು. ನಾನು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ “ಮಾಧ್ಯಮ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವ ಯೋಚನೆ ಇದ್ದರೆ ನಾನು ಆಸಕ್ತಿ ಹೊಂದಿದ್ದೇನೆ’’ ಎಂದು ತಿಳಿಸಿದೆ. ಇದನ್ನು ನಾನು ಅವರಿಗೆ ತಿಳಿಸಿದ್ದು ಕಳೆದ ಜನವರಿ ಎರಡನೇ ವಾರದಲ್ಲಿ.. “ನಿಮ್ಮನ್ನು ಬಿಟ್ಟು ಬೇರೆ ಯಾರ ಬಳಿಯೂ ಹೋಗಿ ಕೇಳುವುದಿಲ್ಲ’’ ಎಂದೂ ಆಗ ಹೇಳಿದ್ದೆ. ಅದೇ ರೀತಿ ನಡೆದು ಕೊಂಡಿದ್ದೇನೆ.

ಅದರ ನಂತರ ಏನೇನೋ ಬೆಳವಣಿಗೆಗಳು ನಡೆಯಿತು. ನನ್ನ ವಿರುದ್ಧ ಹೈಕಮಾಂಡ್‌ ಬಳಿ ಆಳಿಗೊಂದು ಕಲ್ಲು ಎಸೆದು ಹೆಸರು ತೆಗೆಸುವ ಪ್ರಯತ್ನವೇ ನಡೆಯಿತು. ರಾಜ್ಯದ ಕೆಲವು ನಾಯಕರೂ ಇದರಲ್ಲಿ ಸೇರಿಕೊಂಡಿದ್ದರು. .

ನಾನು ಕಾಂಗ್ರೆಸ್ ವಿರುದ್ದ, ಸೋನಿಯಾ ಗಾಂಧಿ ವಿರುದ್ಧ ಬರೆದಿದ್ದೇನೆ, ಹೈಕಮಾಂಡ್‌ ಅನ್ನು ಟೀಕಿಸಿದ್ದೇನೆ ಎಂದೆಲ್ಲ ದೂರು ನೀಡಿದ್ದರಂತೆ. ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಎರಡು ದಶಕಗಳಿಂದ ನನ್ನನ್ನು ಬಲ್ಲವರು. ನನ್ನ ಅಂಕಣಗಳನ್ನು ಓದಿ ಕರೆ ಮಾಡಿ ಚರ್ಚಿಸಿದ್ದವರು. ಇಂತಹವರು ಎಐಸಿಸಿ ಅಧ್ಯಕ್ಷರಾಗಿದ್ದಾಗ, ನಾನು ಕಾಂಗ್ರೆಸ್ ವಿರುದ್ದ ಬರೆದಿದ್ದೇನೆ ಎನ್ನುವ ಕಾರಣಕ್ಕೆ ನನಗೆ ಅವಕಾಶ ನಿರಾಕರಿಸಿದ್ದರೆ ಖಂಡಿತ ನನಗೆ ಬೇಸರವಾಗುತ್ತದೆ. ರಾಜ್ಯದ ಯಾರೋ ನಾಯಕರು ಸುಳ್ಳು ಹೇಳಿದ್ದನ್ನು ಅವರು ಕಣ್ಮುಚ್ಚಿ ಹೇಗೆ ಒಪ್ಪಿಕೊಂಡರು? ಪರಿಷತ್‌ ಸ್ಥಾನ ಕುತಂತ್ರಗಳಿಂದ ನನ್ನ ಕೈತಪ್ಪಿದೆ. ಯಾವ ಅನುಮಾನವೂ ಇಲ್ಲ. ಮಸಲತ್ತು ಹೆಣೆದವರ ಮುಖಗಳು ಕಣ್ಮುಂದಿವೆ.

ಈ ದಿನ.ಕಾಮ್: ಸಿಎಂ ಸಿದ್ದರಾಮಯ್ಯ ಅವರು ಹಠ ಹಿಡಿಯದಿರುವುದೇ ನಿಮಗೆ ಪರಿಷತ್‌ ಸ್ಥಾನ ಕೈತಪ್ಪಲು ಕಾರಣ ಅಂತ ಅನ್ನಿಸಲ್ವಾ?

ದಿನೇಶ್‌: ಮೇಲ್ನೋಟಕ್ಕೆ ಇದು ಹೌದು ಎಂದು ಅನಿಸುತ್ತದೆ. ಸಿದ್ದರಾಮಯ್ಯ ಅವರು ಕೆಲವು ವಿಚಾರದಲ್ಲಿ ಹೈಕಮಾಂಡ್‌ ಮುಂದೆ ಹಠ ಹಿಡಿದು ತಮಗೆ ಬೇಕಾದುದನ್ನು ಪಡೆಯುವವರು. ಯಾಕೋ ನನ್ನ ವಿಚಾರದಲ್ಲಿ ಹಾಗೆ ಮಾಡಿಲ್ಲ ಆದರೆ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಡುವಿನ ಇತ್ತೀಚಿನ ಸಂಬಂಧದ ಬಗ್ಗೆ ಯೋಚನೆ ಮಾಡಿದರೆ ಅವರು ಹಠ ಹಿಡಿದಿದ್ದರೂ ಸಾಧ್ಯವಾಗುತ್ತಿತ್ತೇ ಎನ್ನುವ ಪ್ರಶ್ನೆಕೂಡಾ ಇದೆ. ಕಾಂತರಾಜ್ ಆಯೋಗದ ವರದಿಯನ್ನು ಕೈಬಿಟ್ಟದ್ದು. ಆಪ್ತ ಸಚಿವರಾಗಿದ್ದ ಕೆ.ಎನ್ ರಾಜಣ್ಣ ಅವರನ್ನು ಉಳಿಸಿಕೊಳ‍್ಳಲು ಆಗದೆ ಇದ್ದದ್ದು ಇತ್ಯಾದಿ ಬೆಳವಣಿಗೆಗಳನ್ನು ಕೂಡಾ ಗಮನಿಸಬೇಕಾಗುತ್ತದೆ.

ಈ ದಿನ.ಕಾಮ್: ನಿಮಗೆ ಪರಿಷತ್‌ ಸ್ಥಾನ ಕೈತಪ್ಪುವಲ್ಲಿ ಅಂತಿಮ ಆಯ್ಕೆ ಪಟ್ಟಿ ‘ಪ್ರಹಸನ’ವೂ ಕಾರಣವಾಯಿತು ಅಂತ ಅನ್ನಿಸುತ್ತದೆಯಾ?

ದಿನೇಶ್‌: ಖಂಡಿತ ಹೌದು. ಜೂನ್ ಐದರಂದು ನಾಲ್ಕು ಹೆಸರಿನ ಪಟ್ಟಿಯನ್ನು ಹೈಕಮಾಂಡ್ ಮುಖ್ಕಮಂತ್ರಿಗಳಿಗೆ ಕಳಿಸಿತ್ತು. ಅದೇದಿನ ಅದು ರಾಜಭವನಕ್ಕೆ ಹೋಗಿದ್ದರೆ ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ. ನಾಲ್ಕು ಖಾಲಿ ಸ್ಥಾನಗಳಲ್ಲಿ ಒಂದರ ಅವಧಿ ಹನ್ನೊಂದು ತಿಂಗಳಿನದ್ದಾಗಿತ್ತು. ಅದು ಶಾಸಕ ಯೋಗೇಶ್ವರ್ ರಾಜೀನಾಮೆಯಿಂದ ತೆರವಾದ ಸ್ಥಾನ. ಆ ಸ್ಥಾನಕ್ಕೆ ಆರತಿ ಕೃಷ್ಣ ಅವರ ಹೆಸರನ್ನು ಸೂಚಿಸಲಾಗಿತ್ತು. ಇದು ಗೊತ್ತಾದ ಕೂಡಲೇ ಅವರು ಹೈಕಮಾಂಡ್ ಅಂತಿಮಪಟ್ಟಿಯನ್ನು ತಡೆಹಿಡಿಯುವಂತೆ ಮಾಡಿದರು. ಅದರ ನಂತರದ ದಿನಗಳಲ್ಲಿ ಬಹಳಷ್ಟು ನಾಟಕೀಯ ಬೆಳವಣಿಗೆಗಳಾದವು. ನನ್ನ ಹೆಸರನ್ನು ಪಟ್ಟಿಯಿಂದ ದೂರವಿಡಲು ಅದೇ ಸಮಯದಲ್ಲಿ ಪ್ರಯತ್ನಗಳು ನಡೆದವು.‌

ನಾನು ಮಾಧ್ಯಮ ಸಲಹೆಗಾರನ ಹುದ್ದೆಯನ್ನೂ ಸ್ವಇಚ್ಛೆಯಿಂದ ಬಿಟ್ಟುಕೊಟ್ಟವನು. ಅದರ ನಂತರ ಕೆಲವು ಆಫರ್‌ಗಳಿದ್ದರೂ ಅದನ್ನು ನಿರಾಕರಿಸುತ್ತಾ ಬಂದವನು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಸರ್ಕಾರದ ಯಾವ ಹುದ್ದೆಗಳನ್ನೂ ಸ್ವೀಕರಿಸುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ.

ಈ ದಿನ.ಕಾಮ್: ಒಳಮೀಸಲಾತಿ ನಿರ್ಣಯ ಸಹ ತಮಗೆ ಪರಿಷತ್‌ ಸ್ಥಾನ ಕೈತಪ್ಪಲು ಕಾರಣವಾಯಿತೇ?

ದಿನೇಶ್‌: ನನಗೆ ಹಾಗೆ ಅನ್ನಿಸುವುದಿಲ್ಲ. ಈಗಲೂ ಇಬ್ಬರು ಬಲಗೈ ಅವರಿಗೆ ಅವಕಾಶ ಕೊಟ್ಟಿದ್ದಾರೆ. ನಾಮ ನಿರ್ದೇಶನಗೊಂಡ ಇಬ್ಬರೂ ಬಲಗೈಯವರೇ ಅಲ್ಲವೇ? ಶಿವಕುಮಾರ್ ನನ್ನ ಸ್ನೇಹಿತರು, ಅವರು ಪ್ರಯತ್ನ ಪಟ್ಟು ಯಶಸ್ಸು ಕಂಡಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ. ಆದರೆ ಮೇಲ್ಮನೆ ಇರುವುದು ಹಿರಿಯರಿಗಾಗಿ. ನನಗೆ ತಿಳಿದ ಹಾಗೆ ಅವರಿಗೆ ಇನ್ನೂ 60 ಆಗಿಲ್ಲ. ದಲಿತರಲ್ಲಿಯೇ ಪತ್ರಕರ್ತರನ್ನು ಮಾಡುವುದಿದ್ದರೆ ಹಿರಿಯರಾದ ಡಿ.ಉಮಾಪತಿ, ಶಿವಾಜಿ ಗಣೇಶನ್, ಇಂದೂಧರ ಹೊನ್ನಾಪುರ, ಕೋಟಿಗಾನ ಹಳ್ಳಿ ರಾಮಯ್ಯ ಮೊದಲಾದವರಲ್ಲಿ ಯಾರನ್ನಾದರೂ ಮಾಡಬಹುದಿತ್ತು, ಇಲ್ಲದೆ ಇದ್ದರೆ ಮಾವಳ್ಳಿ ಶಂಕರ್ ಇದ್ದರು. ಒಳ ಮೀಸಲಾತಿಯಲ್ಲಿ ಅನ್ಯಾಯಕ್ಕೊಳಗಾಗಿರುವ ಅಲೆಮಾರಿಗಳನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಸಾಹಿತಿ ದೇವನೂರ ಮಹದೇವ ನನ್ನೊಡನೆ ಇತ್ತೀಚೆಗೆ ಹೇಳಿದ್ದರು. ಈ ಬಾರಿಯೇ ಮಾಡಲು ಮುಖ್ಯಮಂತ್ರಿಗಳಿಗೆ ಹೇಳಿ ಎಂದು ನಾನೇ ದೇವನೂರಿಗೆ ಹೇಳಿದ್ದೆ.

ಈ ದಿನ.ಕಾಮ್: ಸಿದ್ದರಾಮಯ್ಯ ಅವರ ಬಗ್ಗೆ ಏನು ಅನ್ನಿಸುತ್ತದೆ?

ದಿನೇಶ್‌:‌ ಸ್ವಲ್ಪ ಮೆತ್ತಗಾಗಿದ್ದಾರೆ, ಇದಕ್ಕೆ ವಯಸ್ಸಿನ ಕಾರಣವೂ ಇರಬಹುದು. ಹಿಂದಿನ ಸರ್ಕಾರದ ಕಾಲದಲ್ಲಿ ಆಡಳಿತದ ಮೇಲೆ ಇದ್ದ ಬಿಗಿ ಈಗ ಇಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಪನ್ಮೂಲದ ಕೊರತೆಯ ಅಸಹಾಯಕತೆಯೂ ಕಾರಣ ಇರಬಹುದು ಎಂದು ನನಗನಿಸುತ್ತಿದೆ. ಹೈಕಮಾಂಡ್ ಕೂಡಾ ಹಿಂದಿನಂತೆ ಬೆಂಬಲವನ್ನು ನೀಡುತ್ತಿರುವ ಹಾಗೆ ಕಾಣುತ್ತಿಲ್ಲ. ಇದರಿಂದಾಗಿ ಎರಡನೇ ಅವಧಿಯಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಇದು ಅವರ ಸ್ಟೈಲ್ ಅಲ್ಲ. ಅವರದ್ದೇನಿದ್ದರೂ ನೇರ ಮತ್ತು ದಿಟ್ಟ ನಡವಳಿಕೆ, ಅದು ಕಾಣುತ್ತಿಲ್ಲ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Download Eedina App Android / iOS

X