ʼನಾನು ರೇವತಿʼ – ಅಸ್ತಿತ್ವಕ್ಕಾಗಿ ಹೋರಾಡಿದ ಟ್ರಾನ್ಸ್‌ಜೆಂಡರ್ ಜೀವನಗಾಥೆ

Date:

Advertisements

ಭಾರತೀಯ ಸಮಾಜ ತನ್ನ ವೈವಿಧ್ಯತೆಯ ಕಾರಣದಿಂದಲೇ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಧರ್ಮ, ಭಾಷೆ, ಸಂಸ್ಕೃತಿ, ಆಚರಣೆಗಳಲ್ಲಿರುವ ವೈವಿಧ್ಯತೆಯನ್ನು ಹೆಮ್ಮೆಯಿಂದ ಹೊಗಳಿಕೊಳ್ಳುತ್ತೇವೆ. ವಿವಿಧತೆಯಲ್ಲಿ ಏಕತೆ ಕಂಡ ನಾವೇ ಇನ್ನೂ ಲಿಂಗತ್ವ ಅಲ್ಪಸಂಖ್ಯಾತರು (ಟ್ರಾನ್ಸ್‌ಜೆಂಡರ್) ಅನ್ನೋ ಸಮುದಾಯವನ್ನು ಸಮಾಜದ ಅಂಚಿನಲ್ಲೇ ಬಿಟ್ಟು ಅವರನ್ನು ತಬ್ಬಲಿಗಳನ್ನಾಗಿ ಮಾಡಿರುವುದು ಇದೇ ನೆಲದಲ್ಲಿ ಎನ್ನುವುದನ್ನು ಮರೆಯಕೂಡದು. ಇವರು ಶತಮಾನಗಳಿಂದಲೇ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದರೂ, ಆಧುನಿಕ ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ, ನಿರಾಕರಣೆ ಮತ್ತು ಹಿಂಸೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಗುರುತು, ತನ್ನ ಅಸ್ತಿತ್ವದೊಂದಿಗೆ ಬದುಕುವ ಹಕ್ಕನ್ನು ಹೊಂದಿದ್ದರೂ, ‘ಟ್ರಾನ್ಸ್’ ಸಮುದಾಯಕ್ಕೆ ಅದು ಇನ್ನೂ ಸಂಪೂರ್ಣವಾಗಿ ಲಭಿಸಿಲ್ಲ. ಹೀಗಾಗಿಯೇ ಇವರ ಬದುಕು, ಹೋರಾಟ ಮತ್ತು ಭವಿಷ್ಯದ ಕುರಿತು ಚಿಂತನೆ ನಡೆಸುವುದು ಇಂದಿನ ಅಗತ್ಯವಾಗಿದೆ.

‘ಟ್ರಾನ್ಸ್‌ಜೆಂಡರ್ಸ್’ ಹೊಸದಾಗಿ ಉದ್ಭವಿಸಿದ ಸಮುದಾಯವಲ್ಲ. ಭಾರತೀಯ ಪುರಾಣಗಳಲ್ಲಿಯೂ ಸಮುದಾಯದ ಕುರಿತು ಉಲ್ಲೇಖವಿದೆ. ಮಹಾಭಾರತದ ಶಿಖಂಡಿ, ಬೃಹನ್ನಳೆ ಮತ್ತು ದಕ್ಷಿಣ ಭಾರತದ ದೇವಾಲಯಗಳ ಉತ್ಸವಗಳಲ್ಲಿ ಪಾಲ್ಗೊಳ್ಳುವ ಕಥೆಗಳು ಇವರ ಪುರಾತನ ಅಸ್ತಿತ್ವಕ್ಕೆ ಸಾಕ್ಷಿ. ಆಗ ಸಮಾಜದಲ್ಲಿ ಗೌರವ, ಧಾರ್ಮಿಕ ಅಂಗೀಕಾರ ಇತ್ತು. ಆದರೆ ಕಾಲ ಬದಲಾಗುತ್ತಿದ್ದಂತೆ, ಹೊಸ ಸಾಮಾಜಿಕ ಕಟ್ಟುಪಾಡುಗಳು ಇವರನ್ನು ಅಂಚಿಗೆ ತಳ್ಳಿಬಿಟ್ಟವು. ಅಂದು ಇದ್ದ ಬೃಹನ್ನಳೆ, ಶಿಖಂಡಿಗಳಂತಹ ಟ್ರಾನ್ಸ್‌ಗಳನ್ನು ಒಪ್ಪಿಕೊಂಡಿರುವ ನಾವು ಅದಾವ ಕಾರಣಕ್ಕೆ ಇಂದು ತೀರಾ ನಿಕೃಷ್ಟವಾಗಿ ನೋಡುತ್ತಿದ್ದೇವೆ ಎಂದು ಕೇಳಿಕೊಳ್ಳಬೇಕಿದೆ.

ಅವರೆಂದರೆ ಕೇವಲ ಭಿಕ್ಷಾಟನೆ, ನೃತ್ಯ, ಸೆಕ್ಸ್‌ ವರ್ಕ್ ಎಂಬ ಸಮಾಜದ ಸಿದ್ಧ ಸೂತ್ರಗಳನ್ನು ಬದಿಗೊತ್ತಿ ಅದರಿಂದಾಚೆಯೂ ನಾವು ನಿಮ್ಮಂತೆಯೇ ಬದುಕುತ್ತೇವೆ ಎಂದು ದಿಟ್ಟತನದಿಂದ ಬದುಕಿ ತೋರಿಸುತ್ತಿರುವ ಹಲವು ಟ್ರಾನ್ಸ್‌ ಸಮುದಾಯದ ಕಣ್ಮಣಿಗಳು ನಮ್ಮ ನಡುವಿದ್ದಾರೆ. ಅವರಲ್ಲಿ ತಮಿಳುನಾಡು ಮೂಲದ ಲೇಖಕಿ, ಹೋರಾಟಗಾರ್ತಿ ಹಾಗೂ ನಟಿ ರೇವತಿ ಕೂಡ ಪ್ರಮುಖರು. ಪಿ ಅಭಿಜಿತ್‌ ನಿರ್ದೇಶಿಸಿರುವ, ರೇವತಿ ಅವರ ಆತ್ಮಕಥನ “The Truth About Me: A Hijra Life Story” ಆಧಾರಿತ I Am Revathi (ನಾನು ರೇವತಿ) ಎಂಬ ತಮಿಳು ಡಾಕ್ಯುಮೆಂಟರಿಯು ಆಕೆಯ ಬದುಕಿನ ಕಥೆಯನ್ನು ಹತ್ತಿರದಿಂದ ಪರಿಚಯಿಸುತ್ತದೆ.

Advertisements

ಕೇರಳದ 17ನೇ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವ (IDSFFK: International Documentary & Short Film Festival of Kerala)ದಲ್ಲಿ ಈ ಕಿರುಚಿತ್ರ ಪ್ರದರ್ಶನ ಕಂಡಿತು. ಅಂದಿನ ಕಾರ್ಯಕ್ರಮದ ಇಳಿಸಂಜೆಯಲ್ಲಿ ರೇವತಿ ಅವರ ಮಾತುಗಳು ಹೀಗೆ ಪ್ರತಿಧ್ವನಿಸಿದವು; “ʼನಾನು ರೇವತಿʼ ಎಂದು ಹೇಳಿಕೊಳ್ಳುವಾಗ, ನಾನು ಅಸ್ತಿತ್ವದಲ್ಲಿದ್ದೇನೆ ಎಂದು ಜಗತ್ತಿಗೆ ಹೇಳುತ್ತಿದ್ದೇನೆ ಎನಿಸುತ್ತದೆ. ಯಾರು ಎಷ್ಟೇ ಪ್ರಯತ್ನಿಸಿದರೂ ನನ್ನ ಅಸ್ತಿತ್ವನ್ನು ಅಳಿಸಲು ಸಾಧ್ಯವಿಲ್ಲ. ಜನರು ನಮ್ಮನ್ನು ತಿಳಿದಿದ್ದಾರೆಂದು ಭಾವಿಸುತ್ತಾರೆ. ಆದರೆ, ಅವರಿಗೆ ‘ಸ್ಟೀರಿಯೊಟೈಪ್‌’ಗಳು ಮಾತ್ರ ತಿಳಿದಿವೆ. ಇದು ನನ್ನ ಕಥೆ ಮಾತ್ರವಲ್ಲ; ಇದು ಎಂದಿಗೂ ಈ ಸಮಾಜ ಕಿವಿಯ ಮೇಲೆ ಹಾಕಿಕೊಳ್ಳದಿರುವ ಸಾವಿರಾರು ಜನರ ಕಥೆ.”

“ಶಾಲೆಯಲ್ಲಿ, ನನ್ನನ್ನು ಕೀಟಲೆ ಮಾಡಲಾಗುತ್ತಿತ್ತು. ಶಿಕ್ಷಕರು ನನ್ನನ್ನು ನಿರ್ಲಕ್ಷಿಸುತ್ತಿದ್ದರು. ನನ್ನ ಸ್ವಂತ ಕುಟುಂಬ ನನ್ನ ಅಸ್ಮಿತೆಯನ್ನೇ ನಿರಾಕರಿಸುತ್ತಿತ್ತು. ‘ನೀನು ಯಾರು? ನೀನು ಪುರುಷನೋ ಅಥವಾ ಮಹಿಳೆಯೋ? ನೀನು ಯಾಕೆ ಹಾಗೆ ನಡೆಯುತ್ತೀಯಾ? ನೀನು ಯಾಕೆ ಹೀಗೆ ಮಾತನಾಡುತ್ತೀಯಾ?’ ಎಂದು ಜನರು ಎಲ್ಲೆಡೆ ನನ್ನನ್ನು ಕೇಳುತ್ತಿದ್ದರು. ನನ್ನ ಪಾಡಿಗೆ ನನ್ನನ್ನು ಬಿಡುತ್ತಿರಲಿಲ್ಲ. ನನಗೆ ನಾನು ರೇವತಿ ಎಂಬ ಹೆಸರನ್ನು ಆರಿಸಿಕೊಂಡಾಗ, ಅದು ನನ್ನ ಮರುಹುಟ್ಟಿನಂತೆ ಭಾಸವಾಯಿತು. ಆ ಹೆಸರು ನನ್ನ ಅಂತರಾಳದ ನೋವನ್ನು ಮಾತ್ರವಲ್ಲದೆ, ನನ್ನ ಶಕ್ತಿಯ ಅಭಿವ್ಯಕ್ತಿಯೂ ಆಗಿತ್ತು. ನಾನು ನಾನಾಗಲು ಹೋರಾಡಿದ ವ್ಯಕ್ತಿಯ ಹೆಸರು ಅದು. ಕೇರಳವು ವಿದ್ಯಾವಂತ ಮತ್ತು ಮುಂದಾಲೋಚನೆಯುಳ್ಳ ರಾಜ್ಯ ಎಂದು ಜನರು ಹೇಳುತ್ತಾರೆ. ಆದರೆ ಟ್ರಾನ್ಸ್‌ಜೆಂಡರ್ ಜನರ ವಿಷಯಕ್ಕೆ ಬಂದಾಗ, ಅದೇ ಸಮಾಜ ಕಣ್ಣು ಮುಚ್ಚುತ್ತದೆ. ಅವರು ವೇದಿಕೆಯಲ್ಲಿ ನಮಗಾಗಿ ಚಪ್ಪಾಳೆ ತಟ್ಟಲು ಇಷ್ಟಪಡುತ್ತಾರೆ. ಆದರೆ ನಿಜ ಜೀವನದಲ್ಲಿ, ನಾವು ಅವರ ಹತ್ತಿರ ಇರುವುದನ್ನೂ ಅವರು ಬಯಸುವುದಿಲ್ಲ.”

“ನೈತಿಕತೆಯನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಂಡವರಿಂದಲೇ ನಾವು ಉದ್ಯೋಗ ನಿರಾಕರಿಸಲ್ಪಟ್ಟ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳಕ್ಕೊಳಗಾದ ಮತ್ತು ಹಿಂಸೆಯನ್ನು ಎದುರಿಸಿದ ಅನುಭವಗಳು ಸಾಕಷ್ಟಿವೆ. ಪ್ರತಿದಿನ ನಗುವುದು ಎಂದರೆ ಏನು ಎಂದು ನಿಮಗೆ ತಿಳಿದಿದೆಯೇ? ಬಸ್ಸುಗಳಿಂದ ಹೊರಹಾಕಲ್ಪಡುವುದು? ಬಾಡಿಗೆ ಮನೆ ನಿರಾಕರಿಸುವುದು? ಆಸ್ಪತ್ರೆಗಳಲ್ಲಿ ಅವಮಾನಿಸಲ್ಪಡುವುದು…? ಜನರು ನಮ್ಮನ್ನು ಕೋಡಂಗಿಗಳಂತೆ ಮನರಂಜನೆಯಾಗಿ ಮಾತ್ರ ನೋಡುತ್ತಾರೆ, ಮನುಷ್ಯರಂತೆ ಅಲ್ಲ. ಚಲನಚಿತ್ರಗಳು ನಮ್ಮನ್ನು ಅಪಹಾಸ್ಯ ಅಥವಾ ದುರಂತಗಳಾಗಿ ಮಾತ್ರ ತೋರಿಸಿದಾಗ, ಸಮಾಜವು ನಾವು ʼಅಷ್ಟೇʼ ಎಂದು ನಂಬುತ್ತದೆ. ಈ ಚಿತ್ರವು ಆ ಅಮಾನುಷ ಮಾದರಿಯನ್ನು ಮುರಿಯಬೇಕೆಂದು ನಾನು ಬಯಸುತ್ತೇನೆ.”

“ಪ್ರತಿಯೊಬ್ಬರೂ ತಮ್ಮ ಗುರುತು, ತಮ್ಮ ಸ್ವಾತಂತ್ರ್ಯ ಮತ್ತು ತಮ್ಮ ಮಾನವೀಯ ಹಕ್ಕುಗಳನ್ನು ಕಳೆದುಕೊಳ್ಳದೆ ಬದುಕುವ ಹಕ್ಕನ್ನು ಹೊಂದಿದ್ದಾರೆ. ಲಿಂಗ, ಧರ್ಮ, ವರ್ಣಗಳನ್ನು ಮುಂದಿಟ್ಟುಕೊಂಡು ಯಾರಿಗೂ ಬಾಳಿನ ಸಮಾನ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಹೀಗಾಗಿ ‘I Am Revathi'” ಕೇವಲ ಒಂದು ಡಾಕ್ಯುಮೆಂಟರಿಯಲ್ಲ; ಅದು ಮಾನವೀಯ ಹಕ್ಕುಗಳ ಘೋಷಣೆ, ಅಸ್ತಿತ್ವದ ಹೋರಾಟದ ಪ್ರತಿಧ್ವನಿಯ ನಿಖರ ದಾಖಲೆ. ಈ ಚಿತ್ರದ ಮೂಲಕ ರೇವತಿಯ ಧ್ವನಿ ತಮಿಳುನಾಡಿನ ಗಡಿಗಳನ್ನು ಮೀರಿ ಭಾರತವನ್ನೂ ಜಗತ್ತನ್ನೂ ತಲುಪುತ್ತದೆ” ಎಂದು ಅವರು ಹೇಳಿರುವುದಾಗಿ ‘The New Indian Express’ ವರದಿ ಮಾಡಿದೆ.

ಲೇಖಕಿ ದು ಸರಸ್ವತಿ ಅವರು ರೇವತಿ ಅವರ ಆತ್ಮಕತೆ ‘The Truth About Me: A Hijra Life Story’ಯನ್ನು ‘ಬದುಕು-ಬಯಲು; ಹಿಜ್ರಾ ಒಬ್ಬಳ ಆತ್ಮಕತೆ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶ್‌ ಪ್ರಕಾಶನದಿಂದ ಹೊರಬಂದ ಈ ಪುಸ್ತಕವು ರೇವತಿಯವರ ಕತೆಯೊಂದಿಗೆ ಇಡೀ ಸಮುದಾಯದ ಆತ್ಮಕತೆಯನ್ನೇ ತೆರೆದಿಡುತ್ತದೆ.

WhatsApp Image 2025 09 24 at 2.53.52 PM 1

ರೇವತಿಯ ಬಾಲ್ಯದ ದಿನಗಳಿಂದ ಕತೆ ತೆರೆದುಕೊಳ್ಳುತ್ತದೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಆಕೆ ಬಾಲ್ಯದಲ್ಲಿಯೇ ತನ್ನೊಳಗಿನ ಹೆಣ್ಣಿನ ಅಸ್ತಿತ್ವವನ್ನು ಅರಿತುಕೊಂಡಿದ್ದರು. ಆದರೆ, ಕುಟುಂಬ ಹಾಗೂ ಸಮಾಜ ಅವರ ಗುರುತನ್ನು ಒಪ್ಪಿಕೊಳ್ಳಲಿಲ್ಲ. ಶಾಲೆಯ ಮಕ್ಕಳಿಂದ ಹಾಸ್ಯ, ನೆರೆಹೊರೆಯವರ ನಿರಾಕರಣೆ, ಮನೆತನದಿಂದ ಬಂದ ಅಸಹನೆ—ಇವೆಲ್ಲವೂ ಅವರನ್ನು ಮೌನದಲ್ಲಿಟ್ಟುಬಿಟ್ಟವು. ತನ್ನನ್ನು ಹುಡುಗನೆಂದು ಬಲವಂತವಾಗಿ ಬದುಕಿಸುವ ಒತ್ತಾಯದ ನಡುವೆಯೂ ತನ್ನನ್ನು ತಾನು ಕಂಡುಕೊಳ್ಳುವ, ಬದುಕುವ ಹಕ್ಕು ಹೊಂದಿದ್ದೇನೆ ಎಂಬ ಅರಿವು ಅವರೊಳಗೆ ಗಾಢವಾಗಿ ಬೆಳೆದು ನಿಂತಿತ್ತು.

ರೇವತಿಯವರ ಹೃದಯವಿದ್ರಾವಕ ಕತೆ ಟ್ರಾನ್ಸ್‌ಜೆಂಡರ್ಸ್ ಸಮುದಾಯವು ಮುಖ್ಯವಾಹಿನಿಯಿಂದ ಅದೆಷ್ಟು ದೂರ ನೂಕಲ್ಪಟ್ಟಿದೆ ಎಂಬುದನ್ನು ಬಿಚ್ಚಿಡುತ್ತದೆ. ಭಿಕ್ಷೆ ಬೇಡುವುದನ್ನು ಅಪರಾಧವೆನ್ನುವಂತೆ ನೋಡುವ, ಅವರು ಮಾಡುವ ಕೆಲಸಗಳ ಕಾರಣಕ್ಕೆ ಅವರ ಮುಖಕ್ಕೆ ಹೊಡೆದಂತೆ ಹೀಯಾಳಿಸುವ ನಾವು; ಕನಿಷ್ಟ ಅವರೂ ಮನುಷ್ಯರು ಎಂದೂ ಸ್ವೀಕರಿಸಲಾಗದ ಸಮಾಜದಲ್ಲಿ, ಉದ್ಯೋಗವಕಾಶಗಳು ದೂರದ ಮಾತು ಎನ್ನುವುದನ್ನು ಯೋಚಿಸುವುದೇ ಇಲ್ಲ.

ಸಮಾಜದ ಈ ಪರಿ ತಿರಸ್ಕಾರದಿಂದ ಬೇಸತ್ತು, ಇದರಿಂದ ಪಾರಾಗಲು ರೇವತಿ ನಗರಗಳತ್ತ ಹೊರಡುತ್ತಾರೆ. ದೆಹಲಿ, ಮುಂಬೈ, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬದುಕಿನ ಹೊಸ ಅಧ್ಯಾಯ ಆರಂಭಿಸಿದರು. ಅಲ್ಲಿಯೂ ನಿರ್ಲಕ್ಷ್ಯ, ಹಿಂಸೆ ಮತ್ತು ಶೋಷಣೆ ಅವರನ್ನು ಹಿಂಬಾಲಿಸದೇ ಬಿಡಲಿಲ್ಲ. ನಗರ ಜೀವನದಿಂದಲೇ ಬದುಕಿಗಾಗಿ ಹೋರಾಡುವ ಹೊಸ ಹೊಸ ಪಾಠಗಳನ್ನು ಕಲಿತರು. ಆಕೆಯೇ ಹೇಳಿಕೊಳ್ಳುವಂತೆ, ಹಿಜ್ರಾ ಸಮುದಾಯದೊಳಗಿನ ಒಗ್ಗಟ್ಟು ಮತ್ತು ಸಹೋದರತ್ವ ಆಕೆಯ ಬಲವನ್ನು ನೂರ್ಮಡಿಗೊಳಿಸಿತು. ತನ್ನ ಬದುಕನ್ನು ಸಮುದಾಯದ ಬದುಕಿನೊಂದಿಗೆ ಸೇರಿಸಿ ನೋಡಿದ ರೇವತಿ, ಹೋರಾಟಗಾರ್ತಿಯಾಗಿ ರೂಪಾಂತರಗೊಂಡರು.

WhatsApp Image 2025 09 24 at 2.59.38 PM 1

ಅವರ ಈ ಹೋರಾಟದ ಹಾದಿಯಲ್ಲಿ ಬರಹವೇ ಆಕೆಗೆ ದೊಡ್ಡ ಅಸ್ತ್ರವಾಯಿತು. ತನ್ನ ಅನುಭವಗಳನ್ನು ಸಾಹಿತ್ಯದ ರೂಪದಲ್ಲಿ ಹೊರತರುವ ಮೂಲಕ ಆಕೆ ಟ್ರಾನ್ಸ್ ಸಮುದಾಯದ ಅಳಿವು-ಉಳಿವುಗಳನ್ನು ಸಮಾಜದ ಮುಂದೆ ತೆರೆದಿಟ್ಟರು. ‘The Truth About Me’ ಕೃತಿಯ ಮೂಲಕ ಭಾರತದ ಸಾಹಿತ್ಯದಲ್ಲಿ ಟ್ರಾನ್ಸ್ ಆತ್ಮಕತೆಗಳಿಗೆ ಹೊಸ ಆಯಾಮ ನೀಡಿದರು. ಅದೇ ಶಕ್ತಿಯ ಧ್ವನಿ ‘I Am Revathi’ ಡಾಕ್ಯುಮೆಂಟರಿಯಲ್ಲೂ ಪ್ರತಿಧ್ವನಿಸುತ್ತದೆ. ಚಿತ್ರದಲ್ಲಿ ರೇವತಿ ಅವರು ತಾನೇ ತನ್ನ ಬದುಕಿನ ಬಗ್ಗೆ ಹೇಳಿಕೊಂಡಿರುವುದು ಅದಕ್ಕೆ ನಿಜವಾದ ನಿಷ್ಠೆ ಮತ್ತು ಭಾವನಾತ್ಮಕ ತೀವ್ರತೆಯನ್ನು ನೀಡುತ್ತದೆ. ʼಬದುಕು-ಬಯಲುʼ ಕೃತಿಯೂ ಕೂಡ ಶಿಕ್ಷಣ, ಉದ್ಯೋಗ, ಆರೋಗ್ಯ, ವಾಸಸ್ಥಳ ಮೊದಲಾದ ಮೂಲಭೂತ ಹಕ್ಕುಗಳಲ್ಲಿ ಟ್ರಾನ್ಸ್ ಜನರು ಎದುರಿಸುವ ಅನ್ಯಾಯವನ್ನು ಹೊರಹಾಕುತ್ತದೆ. ಕಾನೂನು ಮಟ್ಟದಲ್ಲಿ ಸ್ವಲ್ಪ ಬದಲಾವಣೆಗಳಾದರೂ, ಸಾಮಾಜಿಕ ಮಟ್ಟದಲ್ಲಿ, ಜನರ ಮನಸಿನಲ್ಲಿ ಸಾಕಷ್ಟು ಹಿನ್ನಡೆಗಳಿವೆ ಎಂಬುದನ್ನು ಇದು ತೋರಿಸುತ್ತದೆ.

“ಸಾಮಾನ್ಯ ಮಹಿಳೆಯರಿಗೆ ಮತದಾನದ ಹಕ್ಕು ನಿರಾಕರಿಸಿದ್ದ ಈ ಸಮಾಜ ಆ ಹಕ್ಕನ್ನು ನೀಡೋಕೆ ಎಷ್ಟೊಂದು ವರ್ಷ ತೆಗೆದುಕೊಂಡಿದೆ. ಅಂತಹದರಲ್ಲಿ ನಮ್ಮ ಸಮುದಾಯ ಮೂಲಭೂತ ಹಕ್ಕುಗಳು ಬೇಕು ಎಂದು ಇನ್ನೂ ಎಷ್ಟು ವರ್ಷಗಳು ಹೋರಾಟ ನಡೆಸಬೇಕೋ!. ಯಾವುದೇ ಜಾತಿ, ಧರ್ಮಗಳನ್ನು ಪರಿಗಣಿಸದೆ 18 ವಯಸ್ಸಿನ ಬಳಿಕ ಒಪ್ಪಿದವರನ್ನು ಮದುವೆಯಾಗುವ, ಅಂಥವರಿಗೆ ಪೊಲೀಸರೇ ರಕ್ಷಣೆ ನೀಡಬೇಕು ಎನ್ನುವ ಸಾಕಷ್ಟು ಕಾನೂನುಗಳು ಜಾರಿಯಲ್ಲಿವೆ. ಆದರೆ ಅವೆಲ್ಲ ಎಷ್ಟು ಪ್ರಮಾಣದಲ್ಲಿ ಜಾರಿಯಲ್ಲಿವೆ? ಸಮಾಜ ನಮ್ಮನ್ನು ಇತ್ತೀಚೆಗೆ ನಮ್ಮಂತೆಯೇ ಒಪ್ಪಿಕೊಳ್ಳಲು ಮೊದಲು ಮಾಡಿದೆ. ಅಲ್ಲೊಂದು ಇಲ್ಲೊಂದು ಎನ್ನುವಂತೆ ನಮ್ಮವರು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಅಂತಹ ಸ್ಥಾನ-ಮಾನಗಳನ್ನು ಸಮುದಾಯದ ಪ್ರತಿಯೊಬ್ಬರೂ ಪಡೆಯುವಂತಾಗಬೇಕು. ಅದು ಸಾಧ್ಯವಾಗಲು ಸಮುದಾಯ ಶಿಕ್ಷಣದ ಅವಕಾಶವನ್ನು ಮುಕ್ತವಾಗಿ ಬಳಸಿಕೊಳ್ಳಬೇಕು. ಬದಲಾವಣೆ ಚಿಕ್ಕದ್ದರಿಂದ ಶುರುವಾದರೂ ಅದು ದೊಡ್ಡ ಸಾಮಾಜಿಕ ಕ್ರಾಂತಿಗೆ ನಾಂದಿಯಾಗಬೇಕು. ಸಮಾಜದಲ್ಲಿ ಜೆಂಡರ್‌ ಡಿಸ್ಕ್ರಿಮಿನೇಷನ್‌ ಎನ್ನುವುದು ಆಳವಾಗಿ ಬೇರೂರಿದೆ. ಹೆಣ್ಣಿಗೂ, ಗಂಡಿಗೂ, ನಮಗೂ ಇದು ಹೊರತಾಗಿಲ್ಲ. ಸಮಾಜದಲ್ಲಿರುವ ಜಾತಿ, ಧರ್ಮ, ಲಿಂಗಗಳ ಆಧಾರದಲ್ಲಿ ತಾರತಮ್ಯ ಮಾಡುವ ಪದ್ಧತಿ ಕೊನೆಗಾಣಬೇಕಾಗಿದೆ. ಟ್ರಾನ್ಸ್‌ ಎಂದರೆ, ಕೇವಲ ಭಿಕ್ಷೆ ಬೇಡುವವರು, ಸೆಕ್ಸ್‌ ವರ್ಕರ್‌ಗಳು ಎನ್ನುವ ಸಂಕುಚಿತ ಮನೋಭಾವಗಳುಳ್ಳವರು ನಮ್ಮನ್ನೂ ಎಲ್ಲರಂತೆ ನೋಡುವ ವಿಶಾಲ ಭಾವ ಬೆಳೆಸಿಕೊಳ್ಳಬೇಕಿದೆ. ನನ್ನನ್ನು ಮುಖ್ಯವಾಹಿನಿ ಗೌರವಿಸಲು ಸಾಕಷ್ಟು ವರ್ಷಗಳೇ ತೆಗೆದುಕೊಂಡವು. ಅದಕ್ಕೆ ಮೊದಲು ನನ್ನ ಕತೆ ಕೇಳಲು ಒಂದು ಕಿವಿಯಾದರೂ ದಿಕ್ಕಿರಲಿಲ್ಲ. ಇದ್ದಿದ್ದರೆ ನಾನೂ ಚೆನ್ನಾಗಿ ಓದ್ತಾ ಇದ್ದೆನೇನೋ! ಈಗಲಾದರೂ ನಮ್ಮ ಸಮುದಾಯ ಒಳ್ಳೆಯ ಶಿಕ್ಷಣ ಪಡೆಯಬೇಕು. ಘನತೆಯಿಂದ ಬದುಕು ರೂಪಿಸಿಕೊಳ್ಳಬೇಕು. ಆಗಮಾತ್ರ ಸಮಾಜ ನಮ್ಮನ್ನು ಎಲ್ಲರಂತೆ ಒಪ್ಪಿಕೊಳ್ಳುವಷ್ಟು ಬದಲಾವಣೆ ಸಾಧ್ಯವಾಗಬಹುದು” ಎನ್ನುತ್ತಾರೆ ಕಥಾ ನಾಯಕಿ ಎ. ರೇವತಿ.

WhatsApp Image 2025 09 24 at 2.41.33 PM 1

2014ರಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ‘ನಾಲ್ಸಾ ತೀರ್ಪು’ ಟ್ರಾನ್ಸ್‌ಜೆಂಡರ್ಸ್‌ನ್ನು ಭಿನ್ನ ಲಿಂಗಿಗಳನ್ನಾಗಿ ಗುರುತಿಸಿತು. ಇದರಿಂದ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆ, ರಾಜಕೀಯ ಹಕ್ಕುಗಳಲ್ಲಿ ಅವರಿಗೆ ಹೊಸ ದಾರಿಯೇನೇ ತೆರೆದುಕೊಂಡಿತು. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯರೂಪದಲ್ಲಿದೆ ಎನ್ನುವುದೂ ಮುಖ್ಯ. ಕರ್ನಾಟಕ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಟ್ರಾನ್ಸ್‌ಜೆಂಡರ್ ಕಲ್ಯಾಣ ನೀತಿಗಳು ಜಾರಿಯಾಗಿವೆ. 2019ರಲ್ಲಿ ಜಾರಿಯಾದ ಟ್ರಾನ್ಸ್‌ಜೆಂಡರ್ (ಹಕ್ಕುಗಳ ರಕ್ಷಣೆ) ಕಾಯ್ದೆ ಸಮಾಜದಲ್ಲಿ ಇವರ ಹಕ್ಕುಗಳನ್ನು ಕಾನೂನಾತ್ಮಕವಾಗಿ ಗಟ್ಟಿಗೊಳಿಸಿದೆ.

ಸಿನಿಮಾ, ಸಾಹಿತ್ಯ ಮತ್ತು ಮಾಧ್ಯಮಗಳಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಪ್ರತಿನಿಧಿತ್ವವೂ ಹೆಚ್ಚುತ್ತಿದೆ. ಇದೇ ವೇಳೆ ಬ್ಯೂಟಿಪಾರ್ಲರ್, ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಟ್ರಾನ್ಸ್ ವ್ಯಕ್ತಿಗಳು, ರಾಜಕೀಯದಲ್ಲಿ ಆಯ್ಕೆಯಾಗುತ್ತಿರುವ ನಾಯಕಿಯರು, ಸಮಾಜದ ದೃಷ್ಟಿಕೋನವನ್ನು ನಿಧಾನವಾಗಿ ಬದಲಿಸುತ್ತಿದ್ದಾರೆ. ಆದರೆ ಈ ದಾರಿ ಇನ್ನೂ ದೀರ್ಘವಾಗಿದೆ. ಕುಟುಂಬದ ಒಪ್ಪಿಗೆ, ಸಮಾಜದ ಸ್ವೀಕಾರ, ಸಮಾನ ಅವಕಾಶಗಳು, ಆರೋಗ್ಯದ ಸೌಲಭ್ಯಗಳು ಎಲ್ಲರಿಗೂ ಲಭ್ಯವಾಗಬೇಕು. ʼಪ್ರತಿಯೊಬ್ಬರೂ ತಮ್ಮ ಸ್ವಂತ ಗುರುತಿನಲ್ಲಿಯೇ ಬದುಕುವ ಹಕ್ಕು ಹೊಂದಿದ್ದಾರೆʼ ಎಂಬುದನ್ನು ನಮ್ಮ ಸಮಾಜ ನಿಜವಾಗಿ ಅಳವಡಿಸಿಕೊಳ್ಳುವ ದಿನವೇ ಟ್ರಾನ್ಸ್ ಸಮುದಾಯದ ಜಯದ ದಿನ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

Download Eedina App Android / iOS

X