ಜಾಗತಿಕ ಲಿಂಗ ಅಂತರ ಸೂಚ್ಯಂಕ ವರದಿಯಲ್ಲಿ ಬಾಂಗ್ಲಾದೇಶ(24), ಲಿಬೇರಿಯಾ(40), ಮದಗಸ್ಕರ್(58)ಗಿಂತ ಕಳಪೆ ಸ್ಥಾನದಲ್ಲಿ ಭಾರತವಿದೆ. 129ನೇ ಸ್ಥಾನದಿಂದ 131ನೇ ಸ್ಥಾನಕ್ಕೆ ಕುಸಿದಿದೆ. 'ಬೇಟಿ ಪಡಾವೋ, ಬೇಟಿ ಬಚಾವೋ' ಎಂಬ ಯೋಜನೆಗಳನ್ನು ಬರೀ ಹೆಸರಿಗಷ್ಟೇ ಘೋಷಿಸಿದ್ದಂತಿದೆ. ಹೀಗಾದರೆ ದೇಶ ಲಿಂಗ ಸಮಾನತೆ ವಿಚಾರದಲ್ಲಿ ಇನ್ನಷ್ಟೂ ಕಳಪೆ ಮಟ್ಟಕ್ಕೆ ಇಳಿಯುವುದು ಖಚಿತ.
ಭಾರತವು ಜಾಗತಿಕವಾಗಿ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಸರ್ಕಾರ ನಿರಂತರವಾಗಿ ಹೇಳಿಕೊಳ್ಳುತ್ತಿದೆ. ಅದರಲ್ಲೂ ಡಿಜಿಟಲ್ ಅಭಿವೃದ್ಧಿ ವಿಚಾರಕ್ಕೆ ಬಂದಾಗ ದೇಶ ಅತಿ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಆದರೆ, ವಿಶ್ವ ಆರ್ಥಿಕ ವೇದಿಕೆ ಇತ್ತೀಚೆಗೆ ಬಿಡುಗಡೆ ಮಾಡಿದ ಜಾಗತಿಕ ಲಿಂಗ ಅಂತರ ಸೂಚ್ಯಂಕ ವರದಿ (2025) ದೇಶಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಈ ವರದಿ ಪ್ರಕಾರ, ನಮ್ಮ ದೇಶ ಲಿಂಗ ಸಮಾನತೆಯಲ್ಲಿ ಕಳಪೆ ಸ್ಥಾನದಲ್ಲಿದೆ. ಲಿಂಗ ಸಮಾನತೆಗೆ ಅಗತ್ಯವಾದ ಆರ್ಥಿಕ, ಆರೋಗ್ಯ ಕ್ಷೇತ್ರದ ತುಲನೆ ಮಾಡಿ ನೋಡಿದಾಗ ದೇಶವು 148 ದೇಶಗಳಲ್ಲಿ 131ನೇ ಸ್ಥಾನದಲ್ಲಿದೆ. ಅದು ಕೂಡಾ 129ನೇ ಸ್ಥಾನದಿಂದ 131ನೇ ಸ್ಥಾನಕ್ಕೆ ಕುಸಿದಿದೆ.
ಜಾಗತಿಕವಾಗಿ ಭಾರತ ಆರ್ಥಿಕ ಶಕ್ತಿ, ಡಿಜಿಟಲ್ ಆಗಿ ಪ್ರಗತಿ ಕಾಣುತ್ತಿರುವ ದೇಶ. ಹಾಗೆಯೇ ವಿಶ್ವದ ಅತಿ ಹೆಚ್ಚು ಯುವ ಜನತೆ ಇರುವ ನೆಲೆಯಾಗಿದೆ. ಆದರೆ ಇಂದಿಗೂ ಲಿಂಗ ಸಮಾನತೆಯ ವಿಚಾರಕ್ಕೆ ಬಂದಾಗ ದೇಶ ಬಹಳ ಹಿಂದುಳಿದಿದೆ. ಆರ್ಥಿಕವಾಗಿ ಹಿಂದುಳಿದ ದೇಶಗಳಾದ ಬಾಂಗ್ಲಾದೇಶ(24), ಲಿಬೇರಿಯಾ(40), ಮದಗಸ್ಕರ್(58), ಇಥೋಪಿಯಾ(75), ಅಗೋಲಾ(117)ಗಿಂತ ಕಳಪೆ ಸ್ಥಾನದಲ್ಲಿ ಭಾರತವಿದೆ. ಇವು ಕೇವಲ ಸಾಮಾಜಿಕ ಸೂಚಕಗಳಲ್ಲ. ಇದು ದೇಶಕ್ಕೆ ಒಂದು ಎಚ್ಚರಿಕೆ ಕರೆಗಂಟೆ ಎಂದರೆ ತಪ್ಪಾಗದು. ಲಿಂಗ ಅಸಮಾನತೆ ದೇಶದ ಪ್ರಗತಿಯನ್ನು ತಡೆಯುವ ವೈಫಲ್ಯವೂ ಹೌದು.
ಶೈಕ್ಷಣಿಕವಾಗಿ ದೇಶದಲ್ಲಿ ಮಹಿಳೆಯರೂ ಪ್ರಗತಿ ಕಾಣುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣವೇ ಅಧಿಕ. ಆದರೆ ಮಹಿಳೆಯರ ಆರೋಗ್ಯ ಮತ್ತು ಸ್ವಾಯತ್ತತೆಯ ವಿಚಾರಕ್ಕೆ ಬಂದಾಗ ಇಂದಿಗೂ ದೇಶ ಹಿಂದುಳಿದಿದೆ. ದೇಶ ಲಿಂಗ ಅನುಪಾತವು(ಪುರುಷರು ಮತ್ತು ಮಹಿಳೆಯರ ನಡುವಿನ ಅನುಪಾತ) ವಿಶ್ವದಲ್ಲೇ ಅತಿ ಆತಂಕಕಾರಿ ಸ್ಥಿತಿಯಲ್ಲಿದೆ. ಮಹಿಳೆಯರ ಆರೋಗ್ಯಕರ ಜೀವಿತಾವಧಿ ಈಗ ಪುರುಷರಿಗಿಂತ ಕಡಿಮೆಯಾಗಿದೆ.
ಇದನ್ನು ಓದಿದ್ದೀರಾ? ಮಾಧ್ಯಮ ರಂಗದ ಲಿಂಗ ಅಸಮಾನತೆಯ ಆಳ ಅಗಲ; ಪ್ರಶಸ್ತಿ ನೀಡಿಕೆಯಲ್ಲೂ ಅನಾವರಣ
ಎಚ್ಚರಿಕೆ ನೀಡುವ ವರದಿಯಲ್ಲಿರುವ ಅಂಶಗಳು
ದೇಶ ಎಷ್ಟು ಪ್ರಗತಿ ಹೊಂದಿದೆ ಎಂದು ಸರ್ಕಾರ ಹೇಳಿಕೊಂಡರೂ “ನಮ್ಮ ಸರ್ಕಾರ ಬಂದ ಬಳಿಕ ಲಿಂಗ ಸಮಾನತೆಯಿದೆ” ಎಂದು ಎದೆ ಮುಟ್ಟಿ ಹೇಳಿಕೊಳ್ಳಬಲ್ಲದೆ? 148 ದೇಶಗಳಲ್ಲಿ 131ನೇ ಸ್ಥಾನದಲ್ಲಿ ಭಾರತ ಇರುವುದಾದರೆ ದೇಶದಲ್ಲಿ ಮಹಿಳೆಯರ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹೆರಿಕೆ ಬಳಿಕ ಅನಾರೋಗ್ಯ, ವಿಶೇಷವಾಗಿ ಕಡಿಮೆ ಆದಾಯದ ಮತ್ತು ಗ್ರಾಮೀಣ ಹಿನ್ನೆಲೆಯ ಮಹಿಳೆಯರಲ್ಲಿ ಇಂತಹ ಅನಾರೋಗ್ಯ, ನಿರ್ಲಕ್ಷ್ಯ ಹೆಚ್ಚಾಗಿ ಕಂಡುಬಂದಿದೆ. ಪ್ರಾಥಮಿಕವಾಗಿ ಮಹಿಳೆಯರ ಯೋಗಕ್ಷೇಮವನ್ನು ಸುಧಾರಿಸಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಮೂಲಭೂತ ಸೇವೆಗಳನ್ನು ಮಹಿಳೆಯರು ಪಡೆಯುವ ನಿಟ್ಟಿನಲ್ಲಿ ಅಧಿಕ ಬಜೆಟ್ ಹಂಚಿಕೆ ಮಾಡುವ ಅಗತ್ಯವಿದೆ ಎಂಬುದನ್ನು ಈ ಜಾಗತಿಕ ಲಿಂಗ ಅಂತರ ಸೂಚ್ಯಂಕ ವರದಿ ಸ್ಪಷ್ಟಪಡಿಸುತ್ತದೆ.
ಉತ್ತಮ ಆರೋಗ್ಯ ಇಲ್ಲದಿದ್ದರೆ, ಆರ್ಥಿಕವಾಗಿ ಮಹಿಳೆಯ ಭಾಗಿತ್ವವು ಸಾಮಾನ್ಯವಾಗಿಯೇ ಕಡಿಮೆಯಾಗುತ್ತದೆ. ದೇಶದಲ್ಲಿ 15ರಿಂದ 49 ವರ್ಷ ವಯಸ್ಸಿನ ಮಹಿಳೆಯರ ಪೈಕಿ ಸುಮಾರು ಶೇಕಡ 57ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-5 ವರದಿ ಹೇಳುತ್ತದೆ. ಇದು ಮಹಿಳೆಯ ಕಲಿಕೆ, ವೃತ್ತಿ ಮತ್ತು ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತಿದೆ. ಈ ಎಲ್ಲ ಅಂಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡು ಯೋಜನೆಗಳು ರೂಪಿಸುವುದು ಅತ್ಯಗತ್ಯ.
ಮಹಿಳೆಯರಿಗೆ ಇಂದಿಗೂ ಇಲ್ಲ ಆರ್ಥಿಕ ಸಮಾನತೆ, ಪ್ರಾತಿನಿಧ್ಯ
ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ ಉಪಸೂಚ್ಯಂಕದಲ್ಲಿ 148 ದೇಶಗಳಲ್ಲಿ ಭಾರತ 143ನೇ ಸ್ಥಾನದಲ್ಲಿದೆ. ಪುರುಷರ ಆದಾಯದ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮಹಿಳೆಯರು ಗಳಿಸುತ್ತಿದ್ದಾರೆ. 2015ರಲ್ಲಿ ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ಲಿಂಗ ಅಂತರವನ್ನು ನಿವಾರಿಸುವುದರಿಂದ 2025ರ ವೇಳೆಗೆ ಭಾರತದ ಜಿಡಿಪಿಗೆ $770 ಬಿಲಿಯನ್ ಸೇರ್ಪಡೆಯಾಗಬಹುದು ಎಂದು ಅಂದಾಜಿಸಿತ್ತು. ಆದರೆ ಇಂದಿನ ಲಿಂಗ ಸಮಾನತೆಯನ್ನು ನೋಡಿದಾಗ ಭಾರತವು ಈ ಅವಕಾಶವನ್ನು ಕಳೆದುಕೊಂಡಂತೆ ಕಾಣುತ್ತದೆ.
ಇದನ್ನು ಓದಿದ್ದೀರಾ? ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?
ಉದ್ಯೋಗ ಸ್ಥಳಗಳಲ್ಲಿ ಮಾತ್ರವಲ್ಲ ಮಹಿಳೆಯರಿಗೆ ಸಮಾಜದಿಂದ ಹಿಡಿದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸರ್ಕಾರದವರೆಗೆ ತೀರಾ ಕಡಿಮೆ ಪ್ರಾತಿನಿಧ್ಯವಿದೆ. ತರಬೇತಿ ನೆಪದಲ್ಲಿ ವೇತನವಿಲ್ಲದೆಯೇ ಮಹಿಳೆಯರನ್ನು ದುಡಿಸಲಾಗುತ್ತಿದೆ, ವೇತನ ಕೊಟ್ಟರೂ ಪುರುಷರಿಗಿಂತ ಕಡಿಮೆ ನೀಡಲಾಗುತ್ತಿದೆ. ಅದರಲ್ಲೂ ಮನೆ ಕೆಲಸಕ್ಕೆ ಬಂದಾಗ ಮಹಿಳೆಯರು ಪುರುಷರಿಗಿಂತ ಸುಮಾರು ಏಳು ಪಟ್ಟು ಹೆಚ್ಚು ಮನೆಕೆಲಸವನ್ನು ನಿರ್ವಹಿಸುತ್ತಾರೆ, ಅದು ಕೂಡಾ ಯಾವುದೇ ವೇತನವಿಲ್ಲದೆ.
ಇವು ಸಾಮಾಜಿಕ ಸಮಸ್ಯೆ ಸರ್ಕಾರದ ಮೇಲೆ ಗೂಬೆ ಕೂರಿಸಲಾಗದು ಎಂಬವರೂ ಇದ್ದಾರೆ. ಆದರೆ ಈ ಸಮಸ್ಯೆಗಳನ್ನು ನಿವಾರಿಸಬೇಕಾದ ಕರ್ತವ್ಯ ನಮ್ಮ ಸರ್ಕಾರಗಳದ್ದು ಅಲ್ಲವೇ? ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂಬ ಯೋಜನೆಗಳನ್ನು ಘೋಷಿಸಿಕೊಂಡ ಸರ್ಕಾರ ಅದರ ಸರಿಯಾದ ನಿರ್ವಹಣೆ ಮಾಡಿದೆಯೇ? ಬರೀ ಹೆಸರಿಗಷ್ಟೇ ಮಹಿಳಾ ಸಬಲೀಕರಣ ಯೋಜನೆಗಳನ್ನು ಘೋಷಿಸಿಕೊಂಡರೆ ದೇಶ ಲಿಂಗ ಸಮಾನತೆ ವಿಚಾರದಲ್ಲಿ ಇನ್ನಷ್ಟೂ ಕಳಪೆ ಮಟ್ಟಕ್ಕೆ ಇಳಿಯುವುದು ಖಚಿತ.
ನಮ್ಮ ಸರ್ಕಾರ ಬಂದ ಬಳಿಕ ದೇಶವು ವೇಗವಾಗಿ ಪ್ರಗತಿ ಕಾಣುತ್ತಿದೆ ಎಂದು ಆಗಾಗೇ ತಮ್ಮ ಭಾಷಣಗಳಲ್ಲಿ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಕೊಂಚ ಈ ಲಿಂಗ ಸಮಾನತೆಯ ವರದಿಯತ್ತ ಮುಖ ಮಾಡಬೇಕಾಗುತ್ತದೆ. ಇನ್ನೊಂದೆಡೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದಾಳಿ, ಅತ್ಯಾಚಾರ, ಹಲ್ಲೆ ಮೊದಲಾದ ಅಪರಾಧ ಕೃತ್ಯಗಳೂ ಹೆಚ್ಚಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(NCRB) ಪ್ರಕಾರ 2011ರಿಂದ 2021ರ ವೇಳೆಗೆ ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ಶೇಕಡ 87ರಷ್ಟು ಏರಿಕೆಯಾಗಿದೆ. 2011ರಲ್ಲಿ 228,650 ಪ್ರಕರಣಗಳು ದಾಖಲಾಗಿದ್ದು, 2021ರ ವೇಳೆಗೆ 428,278ಕ್ಕೆ ತಲುಪಿದೆ. ಇದು ಬರೀ ದಾಖಲಾದ ಪ್ರಕರಣಗಳಷ್ಟೆ. ಇಂದಿಗೂ ಅದೆಷ್ಟೋ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯವನ್ನು ‘ಮಾನ-ಮರ್ಯಾದೆ’ ಎಂಬ ಸಮಾಜವೇ ಕಟ್ಟಿಕೊಂಡ ಕಟ್ಟಳೆಗೆ ಕಟ್ಟುಬಿದ್ದು ಹೇಳಿಕೊಳ್ಳುವುದಿಲ್ಲ, ದೂರು ನೀಡಲ್ಲ.
ಆದರೆ ಪ್ರಧಾನಿ, ಸಚಿವರುಗಳು ಮಾತ್ರ ನಾವು ಮಹಿಳೆಯರ ಯಾವ ಸಹಾಯಕ್ಕೂ ಬಾರದ ನಾಲ್ಕು ಯೋಜನೆಗಳ ಹೆಸರು ಪ್ರಚಾರ ಮಾಡಿ ಲಿಂಗ ಸಮಾನತೆಯ ಭಾಷಣ ಬಿಗಿಯುತ್ತಿದ್ದಾರೆ. ಈ ವರದಿ ಬಿಡುಗಡೆಯಾಗಿರುವ ನಿಟ್ಟಿನಲ್ಲಾದರೂ ಕೇಂದ್ರ ಸರ್ಕಾರ ಲಿಂಗ ಸಮಾನತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು. ವೃತ್ತಿ ಸ್ಥಳಗಳಲ್ಲಿ ಶಿಶುಪಾಲನಾ ಕೇಂದ್ರಕ್ಕೆ ಉತ್ತೇಜನ ನೀಡಬೇಕು, ಇದಕ್ಕಾಗಿ ಹೂಡಿಕೆ ಮಾಡಬೇಕು. ಕೆಲಸದ ಸ್ಥಳದಲ್ಲಿ ದೌರ್ಜನ್ಯ ತಡೆಗಟ್ಟಲು ಸಮತಿ ರಚಿಸಲಾಗುತ್ತಿದೆಯೇ ಎಂಬ ಪರಿಶೀಲನೆ ನಡೆಸಬೇಕು. ಹಾಗೆಯೇ ಇವೆಲ್ಲವುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾದ ಜವಾಬ್ದಾರಿಯೂ ಸರ್ಕಾರದ್ದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.