ಸಣ್ಣ ಸರ್ಕಾರಿ ಶಾಲೆಗಳನ್ನು ಮುಚ್ಚಲು/ವಿಲೀನಗೊಳಿಸಲು ಹೇಳಿರುವ ಮುಖ್ಯ ಕಾರಣವೆಂದರೆ ಆರ್ಥಿಕ ದಕ್ಷತೆ ಹೊಂದಿಲ್ಲದ ಸಣ್ಣ ಶಾಲೆಗಳಲ್ಲಿ ಬೇಕಾದ ಸವಲತ್ತುಗಳನ್ನು ಪೂರೈಸಲು ಸಾಧ್ಯವಾಗದೆ ಶಿಕ್ಷಣದ ಗುಣಮಟ್ಟವು ಸೊರಗಿ ಮಕ್ಕಳು ಖಾಸಗಿ ಶಾಲೆಗೆ ಹೋಗುವಂತಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಳಿಯುತ್ತಿದೆ ಎನ್ನುವುದಾಗಿದೆ. ಹಾಗಾದರೆ, ಇಗಾಗಲೇ ಆರ್ಥಿಕ ದಕ್ಷತೆ ಇರುವ ದೊಡ್ಡ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಚೆನ್ನಾಗಿತ್ತೆ?
ಮಕ್ಕಳ ಮೂಲಭೂತ ಹಕ್ಕಾಗಿರುವ ಶಾಲಾ ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಅಡಿಪಾಯ ಮತ್ತು ರಾಷ್ಟ್ರ ನಿರ್ಮಾಣದ ಮೂಲಾಧಾರವಾಗಿದೆ. ಸ್ವಾತಂತ್ರ್ಯದ ನಂತರ ಖಾಲಿ ಹಲಗೆಯಿಂದ ಪ್ರಾರಂಭವಾದ ಈ ಶಿಕ್ಷಣ ವ್ಯವಸ್ಥೆಯು ವಿದ್ಯೆಯಿಂದ ವಂಚಿತರಾಗಿದ್ದ ಸಾಕಷ್ಟು ಜನರಿಗೆ ಅವಕಾಶ ಕಲ್ಪಿಸಿತು ಎಂದರೆ ತಪ್ಪಾಗದು. ಗುಣಮಟ್ಟದ ಕಲಿಕೆ, ಪಠ್ಯಗಳ ಪ್ರಸ್ತುತತೆ, ಕಲಿಕೆಯ ವಿಧಾನ, ಅವಿಷ್ಕಾರ ಹಾಗೂ ಅವಶ್ಯಕ ಸಂಪನ್ಮೂಲದ ಕೊರತೆಗಳು ಕಂಡುಬಂದರೂ, 2014-15ರ ವೇಳೆಗಾಗಲೇ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಕೋಟ್ಯಾಂತರ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದವು. ಶೇ.98ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಲ್ಲಿ 1 ಕಿ.ಮಿ. ಮಿತಿಯೊಳಗೆ ಪ್ರಾಥಮಿಕ ಶಾಲೆಗಳೂ, ಹಾಗೂ ಶೇ. 92% ರಷ್ಟು ಪ್ರದೇಶಗಳಲ್ಲಿ ಮೂರು ಕಿ.ಮಿ. ಒಳಗೆ ಹಿರಿಯ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಸರ್ಕಾರಿ ಮೂಲವು ತಿಳಿಸುತ್ತದೆ. ಹೀಗೆ ಸರ್ಕಾರಗಳು ವಿಸ್ತಾರವಾಗಿ ಕಟ್ಟಿ ಬೆಳೆಸಿದ ಈ ಶಾಲೆಗಳು ಬಡವರ ಜೀವನಾಡಿಯಾಗಿದ್ದು, ಇಂದು ಕಡಿಮೆ ದಾಖಲಾತಿ ಎಂಬ ನೆಪದಲ್ಲಿ ಅವುಗಳನ್ನು ಮುಚ್ಚುವ ಮೂಲಕ ಖಾಸಗಿ ಶಾಲೆಗಳಿಗೆ ದಿಡ್ಡಿ ಬಾಗಿಲನ್ನು ತೆರೆದಂತಾಗಿದೆ.
ಮಕ್ಕಳ ದಾಖಲಾತಿ ಪ್ರಮಾಣವು ಕಡಿಮೆ ಆಗುತ್ತಿದ್ದು, ಆರ್ಥಿಕ ದಕ್ಷತೆ ಹೊಂದಿಲ್ಲವೆಂಬ ಕಾರಣದಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. 2017ರಿಂದ ಪ್ರಾರಂಭವಾದ ಸ್ಕೂಲ್ ರ‍್ಯಾಷನಲೈಸೆಷನ್ ನೀತಿ ಅಥವಾ ಶಾಲಾ ಸಮನ್ವಯ ನೀತಿಯಡಿ ಕಡಿಮೆ/ಶೂನ್ಯ ದಾಖಲಾತಿ ಮತ್ತು ಒಂದೇ ಶಿಕ್ಷಕರು ಇರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸಿ, ಅವಶ್ಯಕ ಸಂಪನ್ಮೂಲಗಳ ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಮೂಲಕ ಪ್ರವೇಶವನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಅಂದರೆ, ಮೊದಲು ಗುಣಮಟ್ಟ ಇಲ್ಲವಾಗಿಸಿ, ಖಾಸಗಿ ಶಾಲೆಗಳಿಗೆ ಬೇಡಿಕೆ ಹೆಚ್ಚಿಸುವುದು, ಅದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಮಾಡುವುದು, ನಂತರ ಅದನ್ನು ಮುಚ್ಚಿ ಮತ್ತೊಂದು ಶಾಲೆಗೆ ಸೇರಿಸಿ ಅಲ್ಲಿನ ಗುಣಮಟ್ಟ ಸುಧಾರಿಸುತ್ತೆವೆಂಬ ಈ ಚಕ್ರವ್ಯೂಹದೊಳಗೆ ಬಡ ಮಕ್ಕಳ ಭವಿಷ್ಯ ನಲುಗುತ್ತಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂಬುದು ಸರ್ಕಾರಕ್ಕೆ ಈ ಮೊದಲು ತಿಳಿದಿರಲಿಲ್ಲವೇ? ದಾಖಲಾತಿ ಇಲ್ಲದ ಶಾಲೆಗಳನ್ನು ಸುಧಾರಿಸಲು ಅದನ್ನು ಮುಚ್ಚುವ ಮಾರ್ಗವೊಂದೇ ಕಾಣಿಸಿತೆ?
ಸ್ಕೂಲ್ ರ‍್ಯಾಷನಲೈಸೆಷನ್(School Rationalization) ನೀತಿಯಡಿ ಬೇರೆ ಶಾಲೆಯೊಂದಿಗೆ ವಿಲೀನಗೊಳಿಸಲು ದಾಖಲಾತಿ ಎಷ್ಟು ಕಡಿಮೆ ಇರಬೇಕು ಎಂಬುದನ್ನು ಕೇಂದ್ರ ಸರ್ಕಾರದ ಮಾರ್ಗದರ್ಶಿಕೆಯಲ್ಲಿ ಹೇಳಿರುವುದಿಲ್ಲ, ಬದಲಿಗೆ ಆ ತೀರ್ಮಾನವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿರುತ್ತದೆ. ಈಗಾಗಲೇ ಅನೇಕ ರಾಜ್ಯಗಳು 30ಕ್ಕೂ ಕಡಿಮೆ ಮಕ್ಕಳು ಇರುವ ಅಥವಾ ಒಂದೇ ಶಿಕ್ಷಕರು ನಿರ್ವಹಿಸುತ್ತಿರುವ ಶಾಲೆಗಳನ್ನು ಗುರುತಿಸಿ, ಹಂತಹಂತವಾಗಿ ಬೇರೆ ಶಾಲೆಯೊಂದಿಗೆ ವಿಲೀನಗೊಳಿಸುತ್ತಿವೆ. ಈ ಪ್ರಕ್ರಿಯೆಯನ್ನು ಶಾಲೆ ‘ಮುಚ್ಚುವುದು’ ಎನ್ನದೆ ‘ವಿಲೀನತೆ’ ಎಂದು ಕರೆಯಲಾಗುತ್ತಿದೆ. (ಅಳಿಯ ಅಲ್ಲ ಮಗಳ ಗಂಡ ಎಂಬಂತೆ). ಇದೇ ಫೆಬ್ರುವರಿ 24ರ ಬೆಂಗಳೂರು ಮಿರರ್ ವರದಿಯು ಕರ್ನಾಟಕದಲ್ಲಿ ಹಿಂದಿನ ಸರ್ಕಾರವು 10 ಮಕ್ಕಳಿಗೂ ಕಡಿಮೆ ಇರುವ 3457 ಶಾಲೆಗಳನ್ನು ಗುರುತಿಸಿದ್ದು, ಅದನ್ನೇ ಇಂದಿನ ಸರ್ಕಾರವೂ ಮುಂದುವರೆಸಿದೆ ಎಂದು ಮತ್ತು ಇತ್ತಿಚಿನ ವರದಿಯೊಂದರ ಪ್ರಕಾರ ಕಡಿಮೆ ದಾಖಲಾತಿ ಶಾಲೆಗಳು 6000ಕ್ಕೆ ತಲುಪಿದ್ದು, ಇವುಗಳು ವಿಲೀನವಾದರೆ ಸುಮಾರು 50,000 ಮಕ್ಕಳ ಭವಿಷ್ಯವು ಅಪಾಯಕ್ಕೆ ಸಿಲುಕಬಹುದೆಂದು ತಿಳಿಸಿದೆ. ವಿಲೀನಗೊಂಡ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಮಾಡುವ ಯೋಜನೆ ಇದ್ದು, ಕುಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿರುವುದಾಗಿ ವರದಿಯಾಗಿದೆ.

ಈ ನೀತಿಯ ಪ್ರಕಾರ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳು ಆರ್ಥಿಕ ದಕ್ಷತೆ ಹೊಂದಿಲ್ಲದ ಕಾರಣ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ಶಿಕ್ಷಣದ ಆರ್ಥಿಕ ದಕ್ಷತೆಯು ತಕ್ಷಣದಲ್ಲಿ ಕಾಣುವಂತದ್ದಲ್ಲ, ಇದು ಧೀರ್ಘ ಕಾಲದ ಉತ್ಪಾದಕತೆ ಎಂಬುದನ್ನು ಗಮನಿಸಬೇಕಾಗಿದೆ. ಅಂದರೆ, ಒಂದು ವ್ಯಕ್ತಿಯು ಉತ್ತಮ ಪ್ರಜೆಯಾಗಿ ರೂಪುಗೊಂಡು ದೇಶಕ್ಕೆ ಕೊಡುಗೆ ನೀಡುವುದು ಎಂಬ ತರ್ಕದೊಂದಿಗೆ ವಿಸ್ತರಿಸಿ ನೋಡಬೇಕಿದೆ. ಈ ಲಾಭ ನಷ್ಟದ ಲೆಕ್ಕವನ್ನು ಖಾಸಗಿ ವ್ಯಾಪಾರಿಗಳು ಮಾಡಬಹುದೇ ಹೊರತು, ಸಂವಿಧಾನದ ಮೂಲಭೂತ ಹಕ್ಕನ್ನು ಒದಗಿಸುವ ಹೊಣೆಹೊತ್ತ ಸರ್ಕಾರವಲ್ಲ.
ಈ ನೀತಿಯ ಅನುಷ್ಠಾನದ ಸಮಯದಿಂದ ಅಂದರೆ, 2017-18 ರಿಂದ 21-22 ರ ಯುಡಿಐಎಸ್‍ಇ (UDISE)ಯ ಪೂರ್ವ-ಪ್ರಾಥಮಿಕ ಮತ್ತು ಹೈಯರ್ ಸೆಕೆಂಡರಿ ಶಾಲೆಗಳ ದಾಖಲಾತಿ ದತ್ತಾಂಶದ ವಿವರವು 4ನೇ ಡಿಸೆಂಬರ್ 2023ರಂದು ಪಾರ್ಲಿಮೆಂಟಿನಲ್ಲಿ ವರದಿಯಾಗಿದ್ದು, ಈ ದತ್ತಾಂಶದ ಆಧಾರದಲ್ಲಿ ಎಜುಕೇಷನ್ ಫಾರ್ ಆಲ್ ವಿಶ್ಲೇಷಣೆ ನಡೆಸಿ ಲೇಖನ ಪ್ರಕಟಿಸಿರುತ್ತದೆ. ಅದರಂತೆ, ಶಾಲಾ ಮಾಲೀಕತ್ವದಲ್ಲಿ ಆಗುತ್ತಿರುವ ವ್ಯವಸ್ಥಿತ ಬದಲಾವಣೆಯಿಂದ ಶಿಕ್ಷಣವು ಖಾಸಗಿ ವ್ಯವಸ್ಥೆಗೆ ಜಾರುತ್ತಿದ್ದು, ಸಮಾಜದ ಅಂಚಿನಲ್ಲಿರುವ ಅತಿ ಹಿಂದುಳಿದ ವರ್ಗಗಳಿಗೆ ಮಾರಕವಾಗಿದೆ ಎಂದು ಹೇಳಿದೆ. ಮೇಲಿನ ಅವಧಿಯಲ್ಲಿ ಒಟ್ಟು 72,157 (1,094,543 to 1,022,386) ಸರ್ಕಾರಿ ಶಾಲೆಗಳು ದೇಶದಲ್ಲಿ ಕಡಿಮೆಯಾಗಿದ್ದು, ಇದು ಶೇ.70.21ರಿಂದ 68.66ಕ್ಕೆ ಇಳಿದಿರುತ್ತದೆ. ಜೊತೆಗೆ, ಶೇ.6.6ರಷ್ಟು ಸಾರ್ವಜನಿಕ ಶಿಕ್ಷಣ ಸೌಲಭ್ಯಗಳಲ್ಲಿ ಕೊರತೆಯಾಗಿರುತ್ತದೆ. ಆದರೆ, ಇದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯತಿರಿಕ್ತವಾಗಿದ್ದು, ಅಲ್ಲಿ ಶಾಲೆಗಳು ಹೆಚ್ಚಾಗಿ, ಅವರ ಮಾರುಕಟ್ಟೆ ಶೇರು ಶೇ.29.44ರಿಂದ 32.85ಕ್ಕೆ ಏರಿದೆ. ಇದರೊಂದಿಗೆ ಅವರ ಶಿಕ್ಷಣ ಸೌಲಭ್ಯಗಳು ಶೇ.4.2ರಷ್ಟು ವಿಸ್ತರಣೆಯಾಗಿರುತ್ತದೆ.
ಮೇ 18ರ ಇಂಡಿಯಾ ಟುಡೆ ಪತ್ರಿಕೆಯು, ಕಳೆದ ವರ್ಷದಲ್ಲಿ 1 ರಿಂದ 8ನೇ ತರಗತಿಯಲ್ಲಿನ ದಾಖಲಾತಿಯು ದೇಶದ 23 ರಾಜ್ಯಗಳಲ್ಲಿ ಕಡಿಮೆ ಆಗಿದೆ ಎಂದು ವರದಿ ಮಾಡಿದೆ. ಮುಖ್ಯವಾಗಿ ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಆಂದ್ರಪ್ರದೇಶ, ತೆಲಂಗಾಣ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ದಾಖಲಾತಿ ಹೆಚ್ಚು ಇಳಿಕೆಯಾಗಿದ್ದು, ಕರ್ನಾಟಕದಲ್ಲಿಯೂ 2023-24ರಲ್ಲಿ ದಾಖಲಾತಿಯು ತೀವ್ರ ಇಳಿಕೆ ಕಂಡಿದೆ ಎನ್ನಲಾಗಿದೆ. ಖಾಸಗಿ ಶಾಲೆಗಳು ದೇಶದ ಒಟ್ಟು ವಿದ್ಯಾರ್ಥಿಗಳ ಶೆ.36ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದ್ದು, ಇದು ಸ್ಥಿರವಾಗಿ ಏರಿಕೆಯಾಗುತ್ತಿದೆ ಮತ್ತು ಪೋಷಕರು ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ ಎನ್ನುತ್ತದೆ ಮೇ 31ರ ಇದೇ ಪತ್ರಿಕೆಯ ಮತ್ತೊಂದು ವರದಿ.
ಸರ್ಕಾರ ಏನನ್ನೂ ಮಾಡಿಯೇ ಇಲ್ಲವೆಂದಲ್ಲ. 1986ರ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ 1992ರ ವಿಸ್ತರಿತ ಕ್ರಿಯಾ ಯೋಜನೆಯು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಆದ್ಯತೆ ನೀಡುತ್ತದೆ. 2001ರ ಸರ್ವಶಿಕ್ಷ ಅಭಿಯಾನವು ಎಲ್ಲಾ ಸ್ತರದ ಮಕ್ಕಳ ಸಾರ್ವತ್ರಿಕ ಪ್ರವೇಶ ಮತ್ತು ದಾಖಲಾತಿ ಕಡೆ ಗಮನ ಹರಿಸುವ ಸಂದರ್ಭದಲ್ಲಿ ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆತಂದ ಶಿಕ್ಷಕರ ಬದ್ಧತೆಯನ್ನು ಇನ್ನೂ ಮರೆಯಲಾಗದು. 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿ (ಆರ್ಟಿಕಲ್ 21 ರ ಸೇರ್ಪಡೆ) ಹಾಗೂ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು 2009ರ ಕಾಯ್ದೆಯನ್ನು ಜಾರಿಗೊಳಿಸಿ 6 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಖಾತ್ರಿಗೊಳಿಸುತ್ತದೆ. ಸಮಗ್ರ ಶಿಕ್ಷಣ ಅಭಿಯಾನವು ಸಮಾನ ಹಾಗೂ ಒಳಗೊಳ್ಳುವಿಕೆಯ ಶಿಕ್ಷಣ ಒದಗಿಸುವ ಉದ್ದೇಶ ಹೊಂದಿದ್ದು, ಹೊಸ ಶಿಕ್ಷಣ ನೀತಿ-2020ರ ಫಲಿತಾಂಶಗಳನ್ನು ಇನ್ನೂ ಕಾದು ನೋಡಬೇಕಿದೆ. ಆದರೆ, ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಮತ್ತು ತಮ್ಮ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪೋಷಕರು ಖಾಸಗಿ ಶಾಲೆಗಳತ್ತ ಒಲವು ತೋರುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸದೆ, ಇರುವ ಶಾಲೆಗಳನ್ನು ಮುಚ್ಚುತ್ತಿರುವ ಕ್ರಮವು ಆತಂಕದ ವಿಷಯವಾಗಿದೆ.
ಸಣ್ಣ ಸರ್ಕಾರಿ ಶಾಲೆಗಳನ್ನು ಮುಚ್ಚಲು/ವಿಲೀನಗೊಳಿಸಲು ಹೇಳಿರುವ ಮುಖ್ಯ ಕಾರಣವೆಂದರೆ ಆರ್ಥಿಕ ದಕ್ಷತೆ ಹೊಂದಿಲ್ಲದ ಸಣ್ಣ ಶಾಲೆಗಳಲ್ಲಿ ಬೇಕಾದ ಸವಲತ್ತುಗಳನ್ನು ಪೂರೈಸಲು ಸಾಧ್ಯವಾಗದೆ ಶಿಕ್ಷಣದ ಗುಣಮಟ್ಟವು ಸೊರಗಿ ಮಕ್ಕಳು ಖಾಸಗಿ ಶಾಲೆಗೆ ಹೋಗುವಂತಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಳಿಯುತ್ತಿದೆ ಎನ್ನುವುದಾಗಿದೆ. ಹಾಗಾದರೆ, ಇಗಾಗಲೇ ಆರ್ಥಿಕ ದಕ್ಷತೆ ಇರುವ ದೊಡ್ಡ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಚೆನ್ನಾಗಿತ್ತೆ? “ವಾರ್ಷಿಕ ಶಿಕ್ಷಣ ಸ್ಥಿತಿಯ ವರದಿ (ASER 2023)” 10ನೇ ತರಗತಿ ಮುಗಿಸಿದ 16 ರಿಂದ 18 ವರ್ಷದ ಮಕ್ಕಳ ಕಲಿಕಾ ಸಾಮರ್ಥ್ಯವು ನಿಜಕ್ಕೂ ಶೋಚನಿಯ ಸ್ಥಿತಿಯಲ್ಲಿದೆ ಎಂಬುದನ್ನು ಹೇಳುತ್ತದೆ. 26 ರಾಜ್ಯಗಳಲ್ಲಿ ಸಮೀಕ್ಷೆಗೆ ಒಳಪಟ್ಟ 34,745 ಮಕ್ಕಳಲ್ಲಿ ಶೇ.25ರಷ್ಟು ಮಕ್ಕಳಿಗೆ 2ನೇ ತರಗತಿ ಮಟ್ಟದ ತಮ್ಮ ಮಾತೃಭಾಷೆಯ ಪುಸ್ತಕವನ್ನು ಓದಲು ಬರುವುದಿಲ್ಲ. ಸುಮಾರು ಅರ್ಧಕ್ಕಿಂತ ಹೆಚ್ಚಿನವರಿಗೆ 3 ಮತ್ತು 4ನೇ ತರಗತಿ ಹಂತದಲ್ಲಿ ತಿಳಿದಿರಬೇಕಾದ ಭಾಗಿಸುವ ಲೆಕ್ಕವನ್ನು ಮಾಡಲಾಗಿಲ್ಲ. ಶೇ. 57.3 ವಿದ್ಯಾರ್ಥಿಗಳು ಮಾತ್ರ ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲರು ಮತ್ತು ಇವರಲ್ಲಿ ಮುಕ್ಕಾಲು ಪಾಲು ಮಾತ್ರ ಅದರ ಅರ್ಥವನ್ನು ಹೇಳಬಲ್ಲರು. ಅದರಂತೆ, ವಾರ್ಷಿಕ ಶಿಕ್ಷಣ ಸ್ಥಿತಿಯ ವರದಿ- 2022 ಪ್ರಕಾರ, 5ನೇ ತರಗತಿಯ ಶೆ.43.8 ಮಕ್ಕಳು ಮಾತ್ರ 2ನೇ ತರಗತಿ ಪಠ್ಯವನ್ನು ಓದಬಲ್ಲರು ಹಾಗೂ ಶೇ.25.9 ಮಕ್ಕಳು ಮಾತ್ರ ಕಳೆಯುವ ಲೆಕ್ಕ ಮಾಡಬಲ್ಲರು. ಎಂಟನೇ ತರಗತಿಯ ಶೇ.44 ಮಕ್ಕಳು ಮಾತ್ರ ಭಾಗಕಾರ ಲೆಕ್ಕ ಮಾಡಿದರೆ, ಮೂರನೇ ತರಗತಿಯ ಶೇ.67.3 ಮಕ್ಕಳು ಸರಳ ಪದಗಳನ್ನು ಓದಬಲ್ಲರು.

ಇದೇ ಸರ್ವೆಗಳು ಕಳಪೆ ಗುಣಮಟ್ಟಕ್ಕೆ ಕಾರಣಗಳನ್ನೂ ಸಹ ತಿಳಿಸಿವೆ. ಅವಶ್ಯವಿರುವಷ್ಟು ತರಬೇತಿ ಇಲ್ಲದ ಚೈತನ್ಯರಹಿತ ಶಿಕ್ಷಕರು, ಮತ್ತು ವಿದ್ಯುತ್, ಕಂಪ್ಯೂಟರ್, ಇಂಟರ್ನೆಟ್, ಪ್ರಯೋಗ ಶಾಲೆ, ಡಿಜಿಟಲ್ ತರಗತಿಗಳು, ತರಗತಿ ಕೊಠಡಿಗಳು, ಆಟದ ಮೈದಾನದ ಕೊರತೆಗಳು ಹಾಗೂ ಬಾಯಿಪಾಠ ಮತ್ತು ಪರೀಕ್ಷಾ ಕೇಂದ್ರಿತ ಕಲಿಕಾ ವಿಧಾನಗಳು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಜ್ಞಾನದ ಪ್ರಾಯೋಗಿಕ ಅನ್ವಯಗಳ ಕೊರತೆಯನ್ನು ಸೃಷ್ಟಿಸಿದೆ ಎನ್ನಲಾಗಿದೆ.
ಗುಣಮಟ್ಟದ ಶಿಕ್ಷಣವು ಅಗ್ಗವಲ್ಲ. ASER 2022ರ ಪ್ರಕಾರ, ಸರ್ಕಾರವು ವರ್ಷಕ್ಕೆ ಒಂದು ವಿದ್ಯಾರ್ಥಿಗೆ 5240 ರೂ ಖರ್ಚು ಮಾಡುತ್ತಿದ್ದು, ಅನುದಾನಿತ ಖಾಸಗಿ ಶಾಲೆಗಳು 9,112 ರೂ.ಗಳನ್ನು ಮತ್ತು ಸಂಪೂರ್ಣ ಖಾಸಗಿ ಶಾಲೆಗಳು 17,273 ರೂ.ಗಳನ್ನು ಖರ್ಚು ಮಾಡುತ್ತಿವೆ. ಆದರೆ, ವಾಸ್ತವದಲ್ಲಿ ಸಾಧಾರಣ ಖಾಸಗಿ ಶಾಲೆಗಳಿಗೆ ಬಡಕುಟುಂಬಗಳು ವರ್ಷಕ್ಕೆ 30 ಸಾವಿರದಿಂದ 1 ಲಕ್ಷದವರೆಗೆ ಶುಲ್ಕ ನೀಡುತ್ತಿದ್ದರೆ, ಪ್ರೀಮಿಯರ್ ಶಾಲೆಗಳಿಗೆ ಸಿರಿವಂತರ ಮಕ್ಕಳು 2 ರಿಂದ 4 ಲಕ್ಷದವರೆಗೆ ಶುಲ್ಕ ಕಟ್ಟುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತವೆ ಎಂಬ ಪೋಷಕರ ಗ್ರಹಿಕೆಯು ಹೆಚ್ಚಿನಂಶ ಭ್ರಮೆಯಾಗಿದೆ. ಸಾರ್ವಜನಿಕ ಶಿಕ್ಷಣದಡಿ ನಿಗದಿಪಡಿಸುವ ಬಜೆಟ್ ನಿರಂತರ ಅತಿ ಕಡಿಮೆ ಇದ್ದು, ಅದು ಸ್ಥಿರತಾ ಅಭಿವೃದ್ಧಿಯ ಗುರಿ (SDG ) ಉದ್ದೇಶಿತ ಶೇ.4ಕ್ಕೂ (ಒಟ್ಟು ಜಿಡಿಪಿಯ) ಕಡಿಮೆ ಇದ್ದು, ಹೊಸ ಶಿಕ್ಷಣ ನೀತಿಯು ಉದ್ದೇಶಿಸಿರುವ ಒಟ್ಟು ಜಿಡಿಪಿಯ ಶೇ.6ರ ಗುರಿಯು ಇನ್ನೂ ಕನಸಾಗಿಯೇ ಉಳಿದಿದೆ. ಸರ್ಕಾರದ ಈ ನಿರ್ಲಕ್ಷತೆಯು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತುಂಬಲಾರದ ನಷ್ಟವನ್ನು ಉಂಟುಮಾಡುತ್ತಿದೆ.
ಇಂಗ್ಲಿಷ್ ಕಲಿಕೆ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂಬ ಮತ್ತೊಂದು ಕಾರಣದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಕನ್ನಡದ ಜೊತೆಗೆ ಇಂಗ್ಲಿಷನ್ನು ಭಾಷೆಯಾಗಿ ಕಲಿಸುವ ಸಾಮರ್ಥ್ಯ ಸರ್ಕಾರಕ್ಕಿಲ್ಲವೇ? ಇತರೆ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಿ ಎಂಬ ಸಲಹೆ ಖಂಡಿತಾ ಇದಲ್ಲ. ಉಳ್ಳವರ ಮಕ್ಕಳು ಇಂಗ್ಲಿಷ್ ಕಲಿತು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದರೆ, ಬಡವರಿಗೂ ಅಂತಹ ಅವಕಾಶಗಳು ಸಿಗುವಂತಾಗಲಿ.
ಇದನ್ನೂ ಓದಿ ಕುದಿ ಕಡಲು | ಪ್ರವಾಸೋದ್ಯಮ ಎಂಬ ಬೇಕಾಬಿಟ್ಟಿ ಉದ್ಯಮ
ಹಳ್ಳಿ ಹಳ್ಳಿಗೆ ವಾಹನಗಳನ್ನು ಕಳುಹಿಸಿ ಮಕ್ಕಳನ್ನು ಕರೆತರುವುದು ಸಣ್ಣ ಖಾಸಗಿ ಶಾಲೆಗಳಿಗೆ ಸಾಧ್ಯವಾಗಿದ್ದರೆ, ಬೃಹತ್ ವ್ಯವಸ್ಥೆಯನ್ನು ಹೊಂದಿರುವ ಸರ್ಕಾರಕ್ಕೆ ಇದು ಸಾಧ್ಯವಾಗುತ್ತಿಲ್ಲವೇಕೆ? ಅಥವಾ ಬಡವರಿಗೇಕೆ ಈ ಸೌಲಭ್ಯಗಳು ಎಂಬ ತಾತ್ಸಾರವೇ? ಸೂಕ್ತ ಶಿಕ್ಷಣಾರ್ಹತೆ ಹೊಂದಿರುವ ಸರ್ಕಾರಿ ಶಿಕ್ಷಕರಿಗೆ ಮತ್ತಷ್ಟು ತರಬೇತಿ ನೀಡಿ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಆಗದ ಕೆಲಸವೇ? ತಮ್ಮ ಮಕ್ಕಳು ಹೋಗದ ಈ ಸರ್ಕಾರಿ ಶಾಲೆಗಳನ್ನು ರಾಜಕಾರಣಿಗಳು-ಅಧಿಕಾರಿವರ್ಗ-ಕಾರ್ಪೊರೇಟ್ ಕೂಟವು ಉಳಿಸುತ್ತದೆಯೇ? ಅದನ್ನು ಬಡವರೇ ಉಳಿಸಿಕೊಳ್ಳಬೇಕಿದೆ. ಶಿವಮೊಗ್ಗದ ಹಿಟ್ಟೂರು ಗ್ರಾಮಸ್ಥರು ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಬಿಡಿಸಿ ಮುಚ್ಚಲಿದ್ದ ತಮ್ಮೂರಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಂಡಿದ್ದಾರೆ! ಇಂತಹ ಪ್ರಯತ್ನಗಳು ಚಳುವಳಿಯಾಗಿ ದೇಶದೆಲ್ಲೆಡೆ ನಡೆಯಬೇಕಾಗಿದೆ.
ಶಾಲೆ ಮುಚ್ಚುವ ಕೆಲಸವೇಕೆ?
ಬಡವರ ಮನೆ ಉರುಳಿಸುವ, ಅವರ ಶಾಲೆ ಮುಚ್ಚುವಂತಹ ಕಾರ್ಯಗಳನ್ನು ಭರದಿಂದ ನಡೆಸುವ ಈ ಕೂಟವು ಬಡವರಿಗೆ ಅರೆಬರೆ ಅಕ್ಷರ, ಅರೆಬರೆ ಕೌಶಲ್ಯಗಳನ್ನು ಯೋಜಿಸುವ ಮೂಲಕ ಹೊಟ್ಟೆ ತುಂಬಿಸದ ಅಗ್ಗದ ಕೂಲಿ ಕೆಲಸಗಳಿಗೆ ಯುವ ಜನಾಂಗವನ್ನು ತಯಾರಿಗೊಳಿಸುತ್ತಿದೆ. ಸಂಪನ್ಮೂಲಗಳ ತ್ವರಿತ ಬಿಡುಗಡೆ, ಶಿಕ್ಷಣದ ಗುಣಮಟ್ಟ ಸುಧಾರಣೆ, ಸಾರಿಗೆ ವ್ಯವಸ್ಥೆ (ಕೇವಲ ಕುಗ್ರಾಮಗಳಿಗಲ್ಲ, ದೂರದಿಂದ ಬರುವ ಎಲ್ಲಾ ಮಕ್ಕಳಿಗೂ) ಇತ್ಯಾದಿಗಳನ್ನು ಮೊದಲು ಒದಗಿಸಿ ನಂತರ ಇರುವ ಶಾಲೆಗಳನ್ನು ಮುಚ್ಚಲಿ. ಶಿಕ್ಷಣವನ್ನು ಬಿಕರಿಗಿಟ್ಟಿರುವ ಈ ಕೂಟಕ್ಕೆ ಶಾಲೆ ಮುಚ್ಚುವಲ್ಲಿ ಇರುವ ಅವಸರ, ಗುಣಮಟ್ಟದ ಸುಧಾರಣೆಯಲ್ಲಿ ಇಲ್ಲವಾಗಿದೆ. ಶಾಲೆ ಮುಚ್ಚಿದ ನಂತರ, ಸುಧಾರಣೆ ಆಗುವುದೆಂಬ ಗ್ಯಾರಂಟಿ ಏನು? ಸ್ವಾತಂತ್ರ್ಯ ಬಂದಂದಿನಿಂದ ತರಲಾಗದ ಗುಣಮಟ್ಟವನ್ನು ಸದ್ಯದಲ್ಲಿ ಸಾಧಿಸಲಾಗುವುದೇ? ಹೆಚ್ಚಿನಂಶ ರಾಜಕೀಯ ನಾಯಕರೇ ಖಾಸಗಿ ಶಾಲೆಗಳ ಮಾಲೀಕರಾಗಿರುವ ಸಂದರ್ಭದಲ್ಲಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಸಾಧಿಸುವ ರಾಜಕೀಯ ಇಚ್ಛಾಶಕ್ತಿ ಇವರಲ್ಲಿದೆಯೇ? ತೋರಿಕೆಗಾಗಿ ಅಲ್ಲೊಂದು ಇಲ್ಲೊಂದು ಮಾದರಿ ಶಾಲೆಗಳನ್ನು ತೆರೆದು ಎಲ್ಲರನ್ನು ತಲುಪುವ ವೇಳೆಗೆ, ಸರ್ಕಾರಿ ಶಿಕ್ಷಣ ವ್ಯವಸ್ಥೆಯೇ ಕುಸಿದು, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಪೋಷಕರೇ ತಿರಸ್ಕರಿಸುವಂತಹ ಒತ್ತಡದ ಸ್ಥಿತಿಯನ್ನು ಉಂಟುಮಾಡುವ ಮೂಲಕ ಸಂಪೂರ್ಣ ಖಾಸಗಿ ಶಿಕ್ಷಣ ವ್ಯವಸ್ಥೆಗೆ ದಾರಿ ಮಾಡುವುದು ಈ ಶಿಕ್ಷಣ ನೀತಿಗಳ ಒಳ ಉದ್ದೇಶವಾಗಿದೆ.
ಇದೆಲ್ಲವೂ ಹೀಗೆ ಅನಾಯಾಸವಾಗಿ ಮತ್ತು ಆಕಸ್ಮಿಕವಾಗಿ ಘಟಿಸುತ್ತಿದೆಯೇ? ಅಥವಾ ಯೋಜಿತ ಕುತಂತ್ರವೇ? ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ದೊರೆತ ಶಿಕ್ಷಣದ ಅವಕಾಶದಿಂದ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಹೆಣ್ಣು ಮಕ್ಕಳು – ಹೀಗೆ ಅನೇಕರು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಂದ ಹೊರಬಂದು, ಆತ್ಮ ಸಮ್ಮಾನದಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇದು ಹೀಗೆ ಮುಂದುವರೆಯುವುದು ಕೂಟವು ಬೆಳೆಸಿರುವ ವ್ಯವಸ್ಥೆಗೆ ಬೇಕಾಗಿಲ್ಲ. ಅದ್ದರಿಂದಲೇ ಬಡವರ ಅಕ್ಷರಗಳನ್ನು ವ್ಯವಸ್ಥಿತವಾಗಿ ಮರಳಿ ಕಸಿದುಕೊಂಡು ಅವರನ್ನು ಅಗ್ಗದ ಕೂಲಿಕಾರರನ್ನಾಗಿಸುವ ಹುನ್ನಾರವು ಯೋಜಿತವಾಗಿ ನಡೆಯುತ್ತಿದೆ.
ನವದೆಹಲಿ | ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಣೀಕರಣ ಮಂಡಳಿಯ ಅಧ್ಯಕ್ಷರಾಗಿ ಕನ್ನಡಿಗ ಡಾ. ಎಂ ಕೆ ರಮೇಶ್ ನೇಮಕ
ಬೃಹತ್ ಉದ್ಯಮವಾಗಿ ಬೆಳೆದಿರುವ ಖಾಸಗಿ ವ್ಯವಸ್ಥೆ ಇರುವ ತನಕ ಪ್ರಸ್ತುತದ ಯಾವುದೇ ನೀತಿಗಳಿಂದ ಗುಣಮಟ್ಟದ ಶಿಕ್ಷಣ ತಂದು ಸರ್ಕಾರಿ ಶಾಲೆಗಳನ್ನು ಉಳಿಸುವುದು ಸಾಧ್ಯವಿಲ್ಲ. ಮೂಲ ಸ್ವರೂಪದ ತೀವ್ರಗಾಮಿ ಬದಲಾವಣೆಯಿಂದ ಮಾತ್ರ ಉಚಿತ ಹಾಗೂ ಕಡ್ಡಾಯ ಶಾಲಾ ಶಿಕ್ಷಣವನ್ನು ಸಾರ್ವತ್ರಿಕವಾಗಿ ನೀಡಬಹುದಾಗಿದೆ. ಪೂರ್ವ ಪ್ರಾಥಮಿಕದಿಂದ ಹನ್ನೆರಡನೇ ತರಗತಿಯವರೆಗೆ ಸಂಪೂರ್ಣ ಸರ್ಕಾರಿ ಶಿಕ್ಷಣ ಎಂಬುದು ಮಾತ್ರ ಅಂತಿಮ ಮಾರ್ಗವಾಗಿದೆ. ಈ ಹಂತದ ತರಗತಿಗಳಲ್ಲಿ ಸಮಾಜದ ಎಲ್ಲಾ ವರ್ಗದ ಮಕ್ಕಳೂ ಸರ್ಕಾರಿ ಶಾಲೆಯಲ್ಲಿಯೇ ಕಲಿಯುವಂತಾದರೆ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಸಮಾನ ಅವಕಾಶಗಳ ಸಾಧ್ಯತೆ ಸಹಜವಾಗಿಯೇ ಜರುಗುತ್ತದೆ. ಜನರ ಒತ್ತಾಯ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಇಂತಹ ಬದಲಾವಣೆ ತರಬಹುದಾಗಿದೆ. ಈ ನಿಟ್ಟಿನಲ್ಲಿ, ಸಂಪೂರ್ಣ ಸರ್ಕಾರಿ ಶಾಲಾ ಶಿಕ್ಷಣದ ಬೇಡಿಕೆಯನ್ನು ಸಾಧಿಸುವ ಪಕ್ಷಕ್ಕೆ ಮಾತ್ರ ಮತ ಎಂಬುದು ಜನರ ಒಕ್ಕೊರಲಾಗಬೇಕು.

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.
ಮೊದಲು ಸರಕಾರಿ ಶಿಕ್ಷಕರ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದುವ ಕಾನೂನು ಮಾಡಿ ಆವಾಗ ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸಂಕೆ ಜಾಸ್ತಿ ಆಗುತ್ತೆ MA Bed ಓದಿ ಸರಕಾರಿ ನೌಕರಿ ತಗೊಂಡು ತಮ್ಮ ಮಕ್ಕಳನ್ನ puc SSLC ಓದೀರೋ I ಪ್ರವೆಟ್ ಶಿಕ್ಷಕರಿಗೆ ನಮ್ಮ ಮಗು ಚೆನ್ನಾಗಿ ಓದುತ್ತಾ ಅಂತ ಕೇಳುವಾಗ ಸರಕಾರಿ ಶಾಲೆ ಗಳೂ ಮುಂದೆ ಒಂದು ದಿನ ಮುಚುವದರಲ್ಲಿ ಸಂಶಯವೇ ಬೇಡ
Right sir 👍