ಇಸ್ಲಾಮೋಫೋಬಿಯ ಮತ್ತು ಬಾನು ಮುಷ್ತಾಕ್

Date:

ಕನ್ನಡದ ಮತ್ತು ಭಾರತದ ಸಾಹಿತ್ಯ ಲೋಕವೇ ಹೆಮ್ಮೆಪಟ್ಟು ಸಂಭ್ರಮಿಸುವಂತಹ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರೆತಾಗಲೂ ಬಲಪಂಥೀಯರು ಮತ್ತು ಇಸ್ಲಾಮೋಫೋಬಿಯಾ ಪ್ರಚಾರಕರು ಸಾಮಾಜಿಕ ಜಾಲತಾಣದಲ್ಲಿ ಬಾನು ಮುಷ್ತಾಕರ ಗೆಲುವನ್ನು ಸಂಭ್ರಮಿಸಲಿಲ್ಲ. ಅಷ್ಟ್ಯಾಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಮುಷ್ತಾಕ್‌ ಮತ್ತು ಭಾಸ್ತಿಯವರಿಗೆ ಶುಭಾಶಯ ಕೋರಲಿಲ್ಲ.

- Advertisement -


ಅದು ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕ್‌ ಅವರ ಇಂಗ್ಲೀಷ್‌ ಅನುವಾದಿತ ಕೃತಿ ಹಾರ್ಟ್‌ ಲ್ಯಾಂಪ್ ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಲಭಿಸಿದ ದಿನ. ಬೆಳ್ಳಂಬೆಳಿಗ್ಗೆ ಎದ್ದೊಡನೆ ಕನ್ನಡಾಂಬೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದ ಶುಭಸುದ್ದಿ ಕೇಳಿದ ದಿನ. ಸಾಮಾಜಿಕ ಜಾಲತಾಣದ ತುಂಬೆಲ್ಲ ಕೃತಿಯ ಅನುವಾದಕಿ ದೀಪಾ ಭಾಸ್ತಿಯವರು ಲಂಡನಿನಲ್ಲಿ ನಡೆದ ಪ್ರಶಸ್ತಿ ಸ್ವೀಕಾರ ಸಮಾರಂಭದ ಭಾಷಣದಲ್ಲಿ ಉಲ್ಲೇಖಿಸಿದ “ಜೇನಿನ ಹೊಳೆಯೋ, ಹಾಲಿನ ಮಳೆಯೋ” ಹಾಡು ಕನ್ನಡಿಗರಲ್ಲಿ ಹೊಸ ರೋಮಾಂಚನ ಉಂಟು ಮಾಡಿತು. ಕನ್ನಡ ಸಾಹಿತಿಗಳಿಂದ ಹಿಡಿದು, ರಾಜಕಾರಣಿಗಳವರೆಗೂ ಎಲ್ಲರೂ ಸಂಭ್ರಮಿಸಿದ್ದರು. ಕನ್ನಡದ ಕೃತಿಗಳು ಸಕಾಲದಲ್ಲಿ ಇಂಗ್ಲಿಷಿಗೆ ಹೆಚ್ಚೆಚ್ಚು ಅನುವಾದ ಆಗಿದಿದ್ದರೆ ರಾಷ್ಟ್ರಕವಿ ಕುವೆಂಪು ಮುಂತಾದ ಸಾಹಿತಿಗಳಿಗೆ ನೊಬೆಲ್‌ ಪ್ರಶಸ್ತಿಯೇ ಲಭಿಸುತ್ತಿತ್ತು ಹಾಗೂ ಜಾಗತಿಕ ಓದುಗರ ಸಂಖ್ಯೆಯೂ ಹೆಚ್ಚುತ್ತಿತ್ತು ಎಂದು ನೆಟ್ಟಿಗರು ಒಂದೊಳ್ಳೆಯ ಚರ್ಚೆಗೆ ನಾಂದಿ ಹಾಡಿದರು.

ಬಾನು ಮುಷ್ತಾಕ್‌ ಅವರಲ್ಲಿ ಸಮಾಜದ ಕುರಿತಾದ ಆಳವಾದ ನೋವಿಗೆ ಮತ್ತು ಸಿಟ್ಟಿಗೆ ಅಭಿವ್ಯಕ್ತಿ ವೇದಿಕೆಯನ್ನು ಕಲ್ಪಿಸಿಕೊಟ್ಟವರು ದಿವಂಗತ ಪತ್ರಕರ್ತ ಮತ್ತು ಸಾಹಿತಿ ಪಿ. ಲಂಕೇಶ್ ಅವರು. ಪೂರ್ಣಾವಧಿ ವಕೀಲಿ ವೃತ್ತಿಯನ್ನು ಆರಂಭಿಸುವ ಮುನ್ನ ಲಂಕೇಶ್‌ ಪತ್ರಿಕೆಯಲ್ಲಿ ಪತ್ರಕರ್ತೆ ಹಾಗೂ ಅಂಕಣಕಾರ್ತಿಯಾಗಿ ಕೆಲಸ ಮಾಡಿದ ಅವರಲ್ಲಿ ಸಮಾಜದ ಸೂಕ್ಷ್ಮತೆಗಳು ಮತ್ತು ಮಹಿಳೆಯ ಮೇಲಾಗುತ್ತಿರುವ ಶೋಷಣೆಗಳು ಅನಾವರಣಗೊಂಡಿವೆ. ಅವರ ಸಣ್ಣಕಥೆಗಳಲ್ಲಿ ಅನೇಕ ಪಾತ್ರಗಳಾಗಿ ಚಿತ್ರಿತವಾಗಿವೆ. ತಾವು ಸೇರಿದ ಮುಸ್ಲಿಮ್‌ ಸಮುದಾಯದಲ್ಲಿ ಮಹಿಳೆಯರಿಗೆ ಸಿಗದ ಧಾರ್ಮಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಬಗ್ಗೆ ಪ್ರಶ್ನಿಗಳನ್ನು ಎತ್ತಿದಾಗ, ಮುಸ್ಲಿಮ್‌ ಮೂಲಭೂತವಾದಿಗಳಿಂದ ವಿರೋಧ ಮತ್ತು ಬೆದರಿಕೆಗಳಿಗೆ ತುತ್ತಾಗುತ್ತಾರೆ. ಬಂಡಾಯ ಸಾಹಿತ್ಯದ ಕಾಲದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ ಬಾನು ಮುಷ್ತಾಕರ ಹರಿತ ಖಡ್ಗದಂತಹ ಬರವಣಿಗೆಗೆ ಬೆನ್ನೆಲುಬಾಗಿ ನಿಂತವರು ಅವರ ಪತಿ ಮುಷ್ತಾಕ್‌ ಮೊಹಿದ್ದೀನ್‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...
banu mishtak

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಸಂದರ್ಭವನ್ನು ಗ್ರಹಿಸುವ ಯಾರಿಗಾದರೂ ತಿಳಿಯುತ್ತದೆ, Islamophobia (ಮುಸ್ಲಿಮ್‌ ಸಮುದಾಯದ ಮೇಲೆ ಅಕಾರಣ ಭಯ, ಪೂರ್ವಗ್ರಹ ಮತ್ತು ದ್ವೇಷ) ಎಂಬುದು ಎಷ್ಟರ ಮಟ್ಟಿಗೆ ನಮ್ಮ ಮನಸ್ಸುಗಳನ್ನು ಆವರಿಸಿದೆ ಎಂಬುದು. ಮನೆ, ಶಾಲೆ, ಕಾಲೇಜು, ಉದ್ಯಾನವನ ಕಡೆಗೆ ಉದ್ಯೋಗದ ಸ್ಥಳಗಳವರೆಗೂ ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಕಾಣಬಹುದು. “ಮುಸ್ಲಿಮರು ಗಲೀಜು ಜನ”, “ಕಾಫಿರರನ್ನು ಕೊಲ್ಲುತ್ತಾರೆ”, “ಹಿಂದೂಗಳು ಸೌಮ್ಯರು ಆದರೆ ಮುಸ್ಲಿಮರು ಕೊಲೆಪಾತಕರು”, “ಮುಸ್ಲಿಮರು ಕನ್ನಡ ಪ್ರಿಯರಲ್ಲ, ಭಾರತಕ್ಕೆ ಅವರೆಂದೂ ನಿಷ್ಠರಲ್ಲ”, “ಉದಾರವಾದಿಗಳು ತುರ್ಕರಿಗೆ ಹುಟ್ಟಿದೋರು”, “ನನಗೆ ಮುಸ್ಲಿಮರನ್ನು ಕಂಡರೆ ಆಗುವುದಿಲ್ಲ”… ಈ ಪಟ್ಟಿ ಪುಟಗಟ್ಟಲೇ ಸಾಗುತ್ತದೆ. ಈ ಎಲ್ಲ ವಿಷಜಾಲದಿಂದ ಬಿಡಿಸಿಕೊಂಡು ಬರುವಷ್ಟರಲ್ಲಿ ಅರ್ಧ ಆಯಸ್ಸೇ ಮುಗಿದು ಹೋಗಿರುತ್ತದೆ. ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಲ್ಲಂತೂ Islamophobiaದ contentಗೆ ಕೊರತೆಯೂ ಇಲ್ಲ, ಅಡೆತಡೆಯೂ ಇಲ್ಲ ಎನ್ನುವಂತಾಗಿದೆ. ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಜಾತಿ ದೌರ್ಜನ್ಯ, ಅತ್ಯಾಚಾರ, ಕಾರ್ಮಿಕರ ಶೋಷಣೆ, ಬಡತನ, ನಿರುದ್ಯೋಗ ಮತ್ತು ಪರಿಸರ ಮಾಲಿನ್ಯವು ಮತದ್ವೇಷ ಪಸರಿಸುವವರ ಆತ್ಮಸಾಕ್ಷಿಯನ್ನು ಕಲಕುವುದಿಲ್ಲ ಬದಲಿಗೆ ಇವೆಲ್ಲವು “ಸುಳ್ಳು” ಎಂಬಂತೆ ವಾದ ಮಂಡಿಸುತ್ತಾರೆ ಅಥವಾ ಆ ಬಗೆಗೆ ತುಟಿ ಬಿಚ್ಚುವುದಿಲ್ಲ.

ಹಾಗಿದ್ದರೆ ಮುಸ್ಲಿಮ್‌ ಸಮುದಾಯದಲ್ಲಿ ಜಾತಿ ಇಲ್ಲವೆ? ಸ್ತ್ರೀ ಶೋಷಣೆ ಇಲ್ಲವೆ? ಮತೀಯತೆ ಇಲ್ಲವೆ? ಖಂಡಿತ ಇದೆ. ಭೂಮಿ ಮೇಲಿರುವ ಅನೇಕ ಧರ್ಮಗಳಲ್ಲಿ ಅನಿಷ್ಟಗಳು ನಾನಾ ರೂಪದಲ್ಲಿ ತಾಂಡವ ಆಡುತ್ತಿವೆ, ಈ ಸಮುದಾಯಗಳಲ್ಲಿರುವ ಬಲಾಢ್ಯರು ಮತ್ತು ರಾಜಕೀಯ-ಅಧಿಕಾರದಾಹಿಗಳು ಈ ಅನಿಷ್ಟಗಳನ್ನು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ನಿರ್ಮಿಸಿ ಬಳಸಿಕೊಂಡಿದ್ದಾರೆ. ಇವುಗಳನ್ನು ಸುಧಾರಿಸಲೆಂದೇ ಸಾಧು-ಸಂತರು, ಕವಿಗಳು, ಸಾಹಿತಿಗಳು ಹುಟ್ಟಿ ಬರುವುದನ್ನು ಎಲ್ಲಾ ದೇಶಕಾಲದಲ್ಲೂ ಕಾಣಬಹುದು. ಸಮುದಾಯದ ಕೊಳಕನ್ನು ಎತ್ತಿ ತೋರಿಸಿ, ಜನಮನಗಳಲ್ಲಿ ಸಂವೇದನೆ ಉಂಟು ಮಾಡುವ ಸಾಹಿತ್ಯ ರಚಿಸಿ, ಮನುಷ್ಯರ ನಡುವೆ ಬಂಧುತ್ವ ಸಾಧಿಸಲು ಪ್ರೇರೇಪಿಸುತ್ತಾರೆ. ಬಸವಣ್ಣ, ಅಕ್ಕಮಹಾದೇವಿ, ಗುರು ನಾನಕ್‌, ಮಹಾತ್ಮ ಗಾಂಧಿ, ಕನಕದಾಸರು, ಶಿಶುನಾಳ ಶರೀಫರು, ಕುವೆಂಪು ಮುಂತಾದವರು. ಆ ಪಟ್ಟಿಗೆ ಬಾನು ಮುಷ್ತಾಕರೂ ಸೇರುತ್ತಾರೆ. ಕವಿ ಮತ್ತು ಸಾಹಿತಿಯ ಕುರಿತಾಗಿ ಕುವೆಂಪುರವರು ತಮ್ಮ “ಸಾಹಿತ್ಯ ಪ್ರಚಾರ” ಕೃತಿಯಲ್ಲಿ ಹೀಗೆ ಹೇಳುತ್ತಾರೆ, “ಕವಿ ಜನಮನಸ್ಸಿನ ನಿಧಿಯಾಗಿ, ಪ್ರತಿನಿಧಿಯಾಗಿ, ಪಾರದರ್ಶಿಯಾಗಿರುವುದರಿಂದ ಕವಿಸೃಷ್ಟಿಯಾದ ಸಾಹಿತ್ಯವೂ ಜನಜೀವನದ ನಿಧಿಯೂ ಪ್ರತಿನಿಧಿಯೂ ಆಗುವುದಲ್ಲದೆ ಭವಿಷ್ಯತ್ತಿನ ಮಾರ್ಗದರ್ಶಿಯೂ ಆಗುತ್ತದೆ. ಲಕ್ಷೋಪಲಕ್ಷ ಹೃದಯಗಳ ಆಸೆಯ ಭಯದ ಆಕಾಂಕ್ಷೆಯ ಆನಂದದ ಕಷ್ಟ ಸಂಕಟದ ಸಾಹಸ ಪ್ರಯತ್ನದ ಸೋಲು ಗೆಲುವಿನ ಮೂಕಮೌನಕ್ಕೆ ಕವಿ ವಾಣಿಯಾಗುತ್ತಾನೆ. ಆ ವಾಣಿಯನ್ನು ಆಲಿಸಿದ ಜನಜೀವನದಲ್ಲಿ ಅದಕ್ಕೆ ಪ್ರತಿಕ್ರಿಯೆಯಾಗಿ ಮತ್ತೆ ಹೊಸ ಹೊಸ ಆಸೆ ಭಯ ಆಕಾಂಕ್ಷೆ ಸಾಹಸ ಪ್ರಯತ್ನಗಳು ಮೈದೋರುತ್ತವೆ. ಏಕೆಂದರೆ, ಸಾಹಿತ್ಯಕ್ಕೆ ಜನಜೀವನ ಪ್ರೇರಕಶಕ್ತಿಯಾಗುವಂತೆ ಜನಜೀವನಕ್ಕೆ ಸಾಹಿತ್ಯ ಪ್ರಚೋದಕಶಕ್ತಿಯಾಗುತ್ತದೆ.”

banu mushtaq

ಕನ್ನಡ ಮತ್ತು ಭಾರತ ಸಾಹಿತ್ಯ ಲೋಕವೇ ಹೆಮ್ಮೆಪಟ್ಟು ಸಂಭ್ರಮಿಸುವಂತ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರಕಿದಾಗಲೂ ಬಲಪಂಥಿಯರು ಮತ್ತು ಇಸ್ಲಾಮೋಫೋಬಿಯಾ ಪ್ರಚಾರಕರು ಸಾಮಾಜಿಕ ಜಾಲತಾಣದಲ್ಲಿ ಬಾನು ಮುಷ್ತಾಕರ ಗೆಲುವನ್ನು ಸಂಭ್ರಮಿಸಲಿಲ್ಲ. ಅಷ್ಟ್ಯಾಕೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಕೂಡ ಒಂದು ಶುಭಾಶಯವನ್ನು ಮುಷ್ತಾಕ್‌ ಮತ್ತು ಭಾಸ್ತಿಯವರಿಗೆ ಕೋರಲಿಲ್ಲ. ಅದು ಹಿಂದಿ ಯಜಮಾನಿಕೆಯ ಕನ್ನಡ ಕಡೆಗಣನೆ ಧೋರಣೆ ಮತ್ತು ಮತೀಯತೆಯಿಂದ ಉಂಟಾಗುವ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ. ಮುಷ್ತಾಕ್ ಇಸ್ಲಾಂ ಸಮುದಾಯದಲ್ಲಿ ಬೇರುಬಿಟ್ಟಿರುವ ಮತೀಯತೆ ಮತ್ತು ಪುರುಷಪ್ರಧಾನ ವ್ಯವಸ್ಥೆಯ ಕರಾಳತೆಯನ್ನು ಕಥಾರೂಪದಲ್ಲಿ ತೆರದಿಟ್ಟು ಜೊತೆಗೆ ಹೋರಾಟದ ಅಖಾಡಕ್ಕೂ ಇಳಿದವರು. ತನ್ನ ಸಮುದಾಯದ ಸುಧಾರಣೆಗೆ ಮತ್ತು ಮಹಿಳಾ ವಿಮೋಚನೆಗೆ ಹಾತೊರೆಯುವ ಬಾನು ಮುಷ್ತಾಕರ ಪಥಕ್ಕೂ ಮತ್ತು “ಜನಪ್ರಿಯ” ಬಲಪಂಥೀಯರ Islamophobiaಕ್ಕು ವ್ಯತ್ಯಾಸವಿದೆ ಗಮನಿಸಿ. ಕಾರಣ ಅವರು ಆ ಸಮುದಾಯದಲ್ಲಿ ಸುಧಾರಣೆ ಬಯಸುವವರಲ್ಲ ಬದಲಿಗೆ ಸಮುದಾಯವರ ಬಗ್ಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಹುಸಂಖ್ಯಾತರಲ್ಲಿ ಪೂರ್ವಾಗ್ರಹ ಬಿತ್ತುವುದಷ್ಟೇ ಅವರ ನಿತ್ಯಕಾಯಕ. ಇದು ಸುಳ್ಳು ಎಂದಾದರೆ, ಅವರು ಸಂಭ್ರಮಿಸಬೇಕಿತ್ತು. ಬಾನು ಅವರ ಧೈರ್ಯವನ್ನು ಮೆಚ್ಚಬೇಕಿತ್ತು ಅಲ್ಲವೇ?

ಇದನ್ನೂ ಓದಿ ಸಮಾಜದ ಫತ್ವಾ ಎದುರಿಸಿ ʼಬೆಂಕಿಮಳೆʼಯೇ ಆಗಿದ್ದರು ಬಾನು
ಇದನ್ನೂ ಓದಿ ಭಾರತದ ʼಬಾನುʼ ಬೆಳಗಿತು, ಕನ್ನಡದ ಹೃದಯ ʼದೀಪʼ ಬೆಳಗಿತು! ; ಲೇಖಕಿಯರ ಸಂಭ್ರಮ

ಮುಸ್ಲಿಮ್‌ ಮೂಲಭೂತವಾದಿಗಳು ಮೊದಲಿನಿಂದಲೂ ಮುಷ್ತಾಕರ ಸಾಹಿತ್ಯ ವಿರೋಧಿಸಿಕೊಂಡು ಬಂದವರೇ. ಆದ್ದರಿಂದ ಅವರು ಕೂಡ ಈ ಗೆಲುವನ್ನು ಸಂಭ್ರಮಿಸಿರಲಿಕ್ಕಿಲ್ಲ. ಇದರಿಂದ ಕಂಡುಬರುವುದೇನೆಂದರೆ, ಶೋಷಣೆ, ಹಿಂಸೆ ಮತ್ತು ತಾರತಮ್ಯವೆಂಬುದು ಎಲ್ಲಾ ಸಮುದಾಯಗಳಲ್ಲಿಯೂ ಇರುವಂತಹದ್ದು. ಅದರಿಂದ ಬೆಳೆದ, ಹೊಟ್ಟೆ ತುಂಬಿದವರು ಸದಾ ಬೇರೆಯವರ ಕಡೆ ಬೆರಳು ತೋರಿಸಿ, ತಮ್ಮಲ್ಲಿನ ಕೊಳಕನ್ನು ಮುಚ್ಚಿಕೊಳ್ಳುತ್ತಾರೆ. ಇಲ್ಲವಾದರೆ ತಾವು ಬೆತ್ತಲಾಗಬಹುದು ಎಂಬ ಭಯ ಅವರಲ್ಲಿ ನಿತ್ಯ ಕಾಡುತ್ತಿರುತ್ತದೆ. ಆದರೆ ಸಮಾನತೆ ಮತ್ತು ಬಂಧುತ್ವ ಆಶಿಸುವವರು ಎಂದೆಂದಿಗೂ ಈ ಮತೀಯತೆಯ ಬಲೆಗೆ ಬೀಳದೆ, ವಿಮರ್ಶಾತ್ಮಕ ಮನೋಭಾವದ ಜೊತೆಗೆ ಶೋಷಿತರ ಕುರಿತಾದ ಸಂವೇದನೆ ಬೆಳೆಸಿಕೊಳ್ಳಬೇಕು. ಆಗ ದೇಶವೆಂಬುದು ಮಣ್ಣಲ್ಲ, ಜನರೆಂದು ಅರ್ಥವಾಗುತ್ತದೆ. ಸೌಹಾರ್ದತೆ ಮತ್ತು ಪ್ರಗತಿ ದೇಶಕ್ಕೆ ಪ್ರಾಪ್ತಿಯಾಗುತ್ತದೆ.
ನನ್ನ ಕವಿತೆಯೊಂದಿಗೆ ಈ ಬರಹವನ್ನು ಇಲ್ಲಿಗೆ ಮುಗಿಸುತ್ತೇನೆ.

ಯಾರಿವರು?

ಯಾರಿವರು?
ಏನಿಹುದು ಇವರೆದೆಯಲ್ಲಿ?
ಟೊಂಕಕಟ್ಟಿ ನಿಂತಿರುವರು,
ದ್ವೇಷಕಥನಗಳ ಬಣ್ಣಿಸಲು.

ಯಾರಿವರು?
ಬಂಧುತ್ವದ ಭಾಷೆ ಇಲ್ಲದವರು.
ಎಂದೂ ಕಾಣದವರ ಮೇಲೆ,
ವಿಷವುಣಿಸುತ್ತಿರುವವರು.

ಯಾರಿವರು?
ಪುರಾಣಗಳ ಇತಿಹಾಸ ಮಾಡಿದವರು.
ಅಮಾನುಷ ಕಥನಗಳ,
ನಿಜವೆಂದು ಸಾರುತ್ತಿರುವವರು.

ಯಾರಿವರು?
ಮೌಢ್ಯತೆಯ ಬಿತ್ತಿ ಲಾಭವೆತ್ತುತ್ತಿರುವವರು.
ಸಹಜ ಚಿಂತನೆಯ,
ಮೊಟಕು ಮಾಡುತ್ತಿರುವವರು.

ಯಾರಿವರು?
ಸಿದ್ಧಸೂತ್ರರು, ಅಸಮಾನತೆಯಿಂದ ಮೇಲೆದ್ದವರು.
ಅಸಮಾನತೆ ಇಲ್ಲವೆಂದು,
ಎಂದೋ ಬಿಟ್ಟೆವೆಂದು, ಅಂಚಿನವರ ಚಿಕಿತ್ಸೆ ಸಹಿಸದವರು.

ಯಾರಿವರು?
ವರ್ಣಜಾತಿಯ ಸಮರ್ಥಕರು.
ಸಂತ್ರಸ್ತರೆಂದು ಸಾರುತ್ತಿರುವವರು.
ಕಣ್ಣುಕಿವಿ ಆತ್ಮಸಾಕ್ಷಿಗೆ ಬೆಡ್ಶೀಟ್ ಹೊದಿಸಿಕೊಂಡಿರುವವರು.

WhatsApp Image 2025 11 17 at 3.48.26 PM
ಚರಣ್‌ ಗೌಡ ಬಿ ಕೆ
+ posts

ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಚರಣ್‌ ಗೌಡ ಬಿ ಕೆ
ಚರಣ್‌ ಗೌಡ ಬಿ ಕೆ
ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ ಸಾಗಿದ ರೈತ ಹೋರಾಟ!

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ...

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...