ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಎಲ್ಲಾ ಪಕ್ಷದವರು ಎತ್ತಿನಹೊಳೆ ಯೋಜನೆ ಮೂಲಕ ಈ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ತರುತ್ತೇವೆ ಎಂದು ಆಶ್ವಾಸನೆ ನೀಡಿದ್ದು ಇದುವರೆಗೂ ಈಡೇರಿಲ್ಲ. ಈ ಕಾರಣದಿಂದ ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಹೋರಾಟಕ್ಕೆ ಈಗ ಸಜ್ಜಾಗಿದೆ. ಹೊಸದಾಗಿ ಜಂಟಿ ಕ್ರಿಯಾ ಸಮಿತಿ ರೂಪಿಸಿಕೊಂಡು ನಾಳೆ (ಅ.2) ಜಲಾಗ್ರಹಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಬಯಲುಸೀಮೆ ಜಿಲ್ಲೆಗಳಾಗಿದ್ದು ಸ್ವಾತಂತ್ರ್ಯ ಬಂದು 78 ವರ್ಷಗಳು ಸವೆದರೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬಂದಿಲ್ಲ. ಸುಮಾರು ಏಳು ವರ್ಷಗಳ ಹಿಂದೆ ಕೋಲಾರದಲ್ಲಿ ಶಾಶ್ವತ ನೀರಾವರಿಗೆ ಆಗ್ರಹಿಸಿ ಒಂದು ವರ್ಷಗಳ ಕಾಲ ಹೋರಾಟ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 150 ದಿನಕ್ಕೂ ಹೆಚ್ಚು ದಿನ ಹೋರಾಟ ನಡೆಯಿತು. ಇದರ ಪ್ರತಿಫಲವಾಗಿ ಕೋಲಾರಕ್ಕೆ ಕೆ.ಸಿ ವ್ಯಾಲಿ, ಚಿಕ್ಕಬಳ್ಳಾಪುರಕ್ಕೆ ಹೆಚ್ ಎನ್ ವ್ಯಾಲಿ ಯೋಜನೆಯಂತೆ ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಣ ಮಾಡಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಿದರು. ಆದರೆ ಎಲ್ಲಾ ಪಕ್ಷದವರು ಎತ್ತಿನಹೊಳೆ ಯೋಜನೆ ಮೂಲಕ ಈ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ತರುತ್ತೇವೆ ಎಂದು ಆಶ್ವಾಸನೆ ನೀಡಿದ್ದು ಇದುವರೆಗೂ ಈಡೇರಿಲ್ಲ. ಈ ಕಾರಣದಿಂದ ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಈಗ ಶಾಶ್ವತ ನೀರಾವರಿ ಸಮಿತಿ ಹೋರಾಟಕ್ಕೆ ಈಗ ಸಜ್ಜಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, “ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದಲ್ಲಿ ತೆಲಂಗಾಣ ಮಾದರಿಯಲ್ಲಿ ಜಂಟಿ ಕ್ರಿಯಾ ಸಮಿತಿ ರೂಪಿಸಿಕೊಂಡು ಹೋರಾಟಕ್ಕೆ ಇಳಿಯುತ್ತಿದ್ದೇವೆ. ಸಹಕಾರ ನೀಡಿದರೆ ಸಾಲದು ಹೋರಾಟಕ್ಕೆ ಧುಮುಕಬೇಕು. ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಕುಡಿಯುವ ನೀರು ಪಡೆಯಲು ದೊಡ್ಡ ಹೋರಾಟ ಸರ್ಕಾರವನ್ನು ಬಗ್ಗಿಸಬೇಕಿದೆ ಎಂದರು. ಮುಂದಿನ ಪೀಳಿಗೆಯ ಅಳಿವು ಉಳಿವಿನ ಪ್ರಶ್ನೆ ಇದು. ಯುವ ಸಮುದಾಯ, ಬುದ್ದಿಜೀವಿಗಳು, ಪ್ರಗತಿಪರರು ಹಾಗೂ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಬರಬೇಕು. ಇದು ʼಮಾಡು ಇಲ್ಲವೇ ಮಡಿ ಹೋರಾಟʼ” ಎಂದು ಹೇಳಿದರು.

“ಎತ್ತಿನಹೊಳೆ ಯೋಜನೆಯಲ್ಲಿ ಮೋಸವಾಗುತ್ತಿದೆ, ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ದೀಕರಣ ನಡೆಯುತ್ತಿಲ್ಲ ಎಂಬ ನಮ್ಮ ಹೋರಾಟದ ಕಾರಣ ಸರ್ಕಾರ ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದೆ ಎಂದು ದೂರಿದರು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ 30 ವರ್ಷಗಳಿಂದ ನೀರಿನ ಹಾಹಾಕಾರ ಅನುಭವಿಸುತ್ತಿದ್ದು, ಹೋರಾಟಗಳು ನಡೆಯುತ್ತಿವೆ.
ಎತ್ತಿನಹೊಳೆ ಯೋಜನೆಯಿಂದ ನೀರು ಬರಲ್ಲ ಎಂದು ಗೊತ್ತಿದ್ದರೂ ಅನುದಾನ ಹೆಚ್ಚಿಸುತ್ತಲೇ ಇದ್ದಾರೆ. 30 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ. ಆದರೂ ಈ ಭಾಗದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಂಧ್ರಪ್ರದೇಶ ಸರ್ಕಾರದ ಬದ್ಧತೆಯಿಂದ ಕುಪ್ಪಂಗೆ ನೀರು ಬಂದಿದೆ. ನಮ್ಮ ಸರ್ಕಾರಕ್ಕೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ತರಲು ಸಾಧ್ಯವಾಗಿಲ್ಲ. ಸಾವಿರಾರು ಕೆರೆಗಳಿದ್ದು, ಪುನರುಜ್ಜೀವನಗೊಳಿಸಲು ಪ್ಯಾಕೇಜ್ ಘೋಷಿಸಬೇಕು” ಎಂದು ಆಗ್ರಹಿಸಿದರು.

ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ ರೈತ ಮುಖಂಡರಾದ ರಾಮು ಶಿವಣ್ಣ, ಶಾಶ್ವತ ನೀರಾವರಿಗೆ ಸುಮಾರು ಒಂದು ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲೂ ಹೋರಾಟವನ್ನು ಸುಮಾರು ದಿನಗಳ ಕಾಲ ಮಾಡಿದ್ದೇವೆ. ಅದರ ಪರಿಣಾಮವೇ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಕೆ.ಸಿ. ವ್ಯಾಲಿ ಹಾಗೂ ಹೆಚ್‌ಎನ್ ವ್ಯಾಲಿ ನೀರನ್ನು 2 ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸುತ್ತಿದ್ದು, 3ನೇ ಹಂತದ ಶುದ್ದೀಕರಣ ಮಾಡಿ ನೀರು ಬಿಡಬೇಕು. ಸುಮಾರು ವಿಜ್ಞಾನಿಗಳು ಸಹ 3ನೇ ಹಂತದಲ್ಲಿ ಶುದ್ಧೀಕರಣ ಆಗ್ಬೇಕು ಎಂದು ಹೇಳಿದ್ದು ನಾವು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದೇವೆ.
ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡುವಾಗ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎಂದು ಯೋಜನೆ ತಯಾರು ಮಾಡಿದ್ದು, ಆದರೆ ಈಗ 7 ಜಿಲ್ಲೆಗಳಿಗೆ ನೀರು ಹರಿಸುತ್ತೇವೆ ಎಂದು ಯೋಜನೆ ಜಾರಿ ಮಾಡಿದ್ದಾರೆ. ಇದುವರೆಗೂ ನಮ್ಮ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಬರಲಿಲ್ಲ. ಕೃಷ್ಣ ನದಿಯ ನೀರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪಕ್ಕದಲ್ಲಿ ಕುಪ್ಪಂವರೆಗೂ ನೀರು ತಂದು ಬಿಟ್ಟಿದ್ದಾರೆ. ಪಕ್ಕದ ರಾಜ್ಯದಲ್ಲಿ ನೀರಾವರಿ ಯೋಜನೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ಸಿಗುತ್ತಿಲ್ಲ ಎಂದು ಬೇಸರವಾಗಿದೆ. ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣದಲ್ಲಿ ಯಾವ ರೀತಿ ಹೋರಾಟ ನಡೆಯಿತು. ಅದೇ ಮಾದರಿಯಲ್ಲಿ ನಾವು ನೀರಾವರಿಗಾಗಿ ಹೋರಾಟ ಮಾಡುತ್ತೇವೆ” ಎಂದರು.
“ಮುಂದಿನ ಪೀಳಿಗೆಗೆ ನಾವು ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಸಮಿತಿ, ಯುವ ಶಕ್ತಿ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಸೇರಿ ಚಿಕ್ಕಬಳ್ಳಾಪುರ ನಾಳೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಬಹಳಷ್ಟು ನಿವೃತ್ತ ನ್ಯಾಯಾಧೀಶರು ಮೇಧಾವಿಗಳು, ಪರಿಸರದ ಬಗ್ಗೆ ಕಾಳಜಿ ವಹಿಸಿರುವಂತವರು ಹಾಗೂ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹೋರಾಟಗಾರರು ಹಾಗೂ ಪಕ್ಷಾತೀತ ನಾಯಕರನ್ನು ಕರೆಸಿ ನೀರಾವರಿ ಬಗ್ಗೆ ಮನವರಿಕೆ ಮಾಡುತ್ತೇವೆ.

ಕಾರ್ಯಕ್ರಮದಲ್ಲಿ ಜಂಟಿ ಕ್ರಿಯಾ ಸಮಿತಿ ಚಾಲನೆ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಎಲ್ಲಾ ಪಕ್ಷದ ಸರ್ಕಾರಗಳಲ್ಲಿಗೂ ಹೋರಾಟ ಮಾಡಿ ಮನವಿ ಸಲ್ಲಿಸಿದ್ದೇವೆ. ಕೋಲಾರ ಚಿಕ್ಕಬಳ್ಳಾಪುರ ಜನರು ಬರಿ ವೋಟ್ ಮಾಡಲು ಮಾತ್ರ ಇದೀವಾ ಎಂದು ಪ್ರಶ್ನೆ ಮಾಡ್ಬೇಕು. ಕೆ.ಸಿ. ವ್ಯಾಲಿ, ಹೆಚ್ಎನ್ ವ್ಯಾಲಿ ನೀರಿನಿಂದ ನಮಗೆ ಆತಂಕವಾಗುತ್ತಿದೆ. ಯಾಕಂದ್ರೆ ಮುಂದಿನ ದಿನಗಳಲ್ಲಿ ಹಲವಾರು ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ 3ನೇ ಹಂತದ ಶುದ್ದೀಕರಣ ಮಾಡಬೇಕು ಹಾಗೂ ಶಾಶ್ವತ ಕುಡಿಯುವ ನೀರು ಕೊಡಬೇಕು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಕೆರೆಗಳು ಇದೆ, ಅದನ್ನು ಉಳಿಸಿಕೊಳ್ಳಬೇಕು. ಶಾಶ್ವತ ನೀರಾವರಿ ಯೋಜನೆ ಮೂಲಕ ಕೆರೆಗಳು ತುಂಬಿದರೆ ನಮ್ಮ ಬಯಲು ಸೀಮೆ ಜಿಲ್ಲೆಗಳು ಸಮೃದ್ದವಾಗಿರುತ್ತದೆ. ಈ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ತಿಳಿಸಿದರು.
“ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ತರುತ್ತೇವೆ ಎಂದು ಹೇಳಿದರು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಒಂದು ವರ್ಷದಲ್ಲಿ ನೀರು ತರುತ್ತೇವೆ ಎಂದು ಗುದ್ದಲಿ ಪೂಜೆ ಮಾಡಿದ್ರು. ಆದ್ರೆ ಇದುವರೆಗೂ ಎತ್ತಿನಹೊಳೆ ಯೋಜನೆ ನೀರು ಬರಲಿಲ್ಲ. ಸರ್ಕಾರದಲ್ಲಿರುವವರಿಗೂ ಹಾಗೂ ವಿಪಕ್ಷದಲ್ಲಿರುವವರಿಗೂ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ತರುವ ಇಚ್ಛಾಶಕ್ತಿ ಇಲ್ಲ. ಕೊಳಚೆ ನೀರು ಕೆರೆಗಳಲ್ಲಿ ಹರಿಯುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಆದರಿಂದ ಶೀಘ್ರದಲ್ಲೇ ಕೆ.ಸಿ. ವ್ಯಾಲಿ ನೀರು 3ನೇ ಹಂತದ ಶುದ್ಧೀಕರಣ ಆಗಬೇಕು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರು ನೀರಾವರಿ ಹೋರಾಟಗಳಿಗೆ ಬೆಂಬಲ ನೀಡಬೇಕು. ಬೆಂಗಳೂರು ಇಷ್ಟು ಮಟ್ಟದ ಅಭಿವೃದ್ಧಿ ಆಗಿದೆ ಅಂದ್ರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆ ಇದೆ. ಬೆಂಗಳೂರಿಗೆ ಹಣ್ಣು, ತರಕಾರಿ, ಹಾಲು ಕೊಟ್ಟಿದ್ದು ಇದೇ ಬಯಲು ಸೀಮೆ ಜಿಲ್ಲೆಗಳು, ನೀರಾವರಿ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲುವುದಿಲ್ಲ” ಎಂದು ಕೋಲಾರ ಸಿಪಿಎಂ ನಾಯಕಿ ಗೀತಾ ಹೇಳಿದರು.
“ಕೋಲಾರ ಮತ್ತು ಚಿಕ್ಕಬಳ್ಳಾಪುರ ಬಯಲುಸೀಮೆ ಜಿಲ್ಲೆಗಳಾಗಿದ್ದು, ಸುಮಾರು ವರ್ಷಗಳಿಂದ ಈ ಜಿಲ್ಲೆಗಳಿಗೆ ನೀರು ಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಹೋರಾಟದ ಪ್ರತಿಫಲವಾಗಿ ಕೋಲಾರಕ್ಕೆ ಕೆ.ಸಿ. ವ್ಯಾಲಿ ನೀರು, ಚಿಕ್ಕಬಳ್ಳಾಪುರಕ್ಕೆ ಹೆಚ್.ಎನ್. ವ್ಯಾಲಿ ನೀರು ಬಂತು. ಆದರೆ ಗುಣಮಟ್ಟವಾಗಿ ಕೆರೆಗಳಿಗೆ ಹರಿಸುತ್ತಿಲ್ಲ, ಕೊಳಚೆ ನೀರನ್ನೇ ಬಿಡುತ್ತಿದ್ದಾರೆ. ಕೆ.ಸಿ. ವ್ಯಾಲಿ ನೀರು 3ನೇ ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸಬೇಕು.

ಕೋಲಾರದ ಪಕ್ಕ ಇರುವ ಆಂಧ್ರಪ್ರದೇಶದ ಕುಪ್ಪಂಗೆ ಅಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಕೃಷ್ಣ ನೀರು ತಂದಿದ್ದಾರೆ. ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಗೆ ಯಾಕೆ ಕೃಷ್ಣ ನದಿ ನೀರು ಹರಿಸಲಿಕ್ಕೆ ನಮ್ಮ ರಾಜ್ಯದ ರಾಜಕಾರಣಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. ನಮಗೆ ಕೆ.ಸಿ. ವ್ಯಾಲಿ ಹಾಗೂ ಹೆಚ್. ಎನ್. ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಹಾಗೂ ಕೃಷ್ಣ ನದಿ ನೀರು ನಮ್ಮ ಜಿಲ್ಲೆಗಳಿಗೆ ತರಬೇಕು ಎಂದು ಆಗ್ರಹಿಸಿ ಶಾಶ್ವತ ನೀರಾವರಿ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ನಾಳೆ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಕೋಲಾರದ ರೈತ ಹೋರಾಟಗಾರ್ತಿ ನಳಿನಿ ಗೌಡ ಈ ದಿನಕ್ಕೆ ಪ್ರತಿಕ್ರಿಯೆ ನೀಡಿದರು.