ವಾಟ್ಸ್ಯಾಪ್ ಸಂದೇಶ ಹರಿದಾಡಿದ ಬಳಿಕ ಅಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿದೆ. ತಕ್ಷಣ ಪುರಸಭೆ ಮುಖ್ಯಾಧಿಕಾರಿ ಅಶೋಕ್, ಸರ್ಕಲ್ ಇನ್‌ಸ್ಪೆಕ್ಟರ್ ಸುಮಾರಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತ ವಿಗ್ರಹವನ್ನು ತೆರವುಗೊಳಿಸಲು ಸೂಚಿಸಿದ್ದಾರೆ.
“ದಯವಿಟ್ಟು ಗಣಪತಿ ಪೆಂಡಾಲ್ ಬಳಿ ಸ್ಥಳೀಯರು ಸೇರಿಕೊಳ್ಳಬೇಕಾಗಿ ವಿನಂತಿ. ವಿಷಯ: (ಕೆ.ಆರ್.ಪೇಟೆ) ಬಸ್‌ಸ್ಟ್ಯಾಂಡ್ ಪಕ್ಕದ ಜಾಗದಲ್ಲಿ ಶ್ರೀ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡುವ ಸಲುವಾಗಿ ಸ್ವಚ್ಛತಾ ಕಾರ್ಯ ಮಾಡುವಾಗ ಪುರಾತನ ಕಾಲದ ಶ್ರೀ (ಗಣಪತಿ) ವಿಗ್ರಹ ಸಿಕ್ಕಿದೆ. ಅದನ್ನು ಜೀರ್ಣೋದ್ಧಾರ ಮಾಡಿರುವ ಸಲುವಾಗಿ ಭಕ್ತಾದಿಗಳು ಎಲ್ಲರೂ ಸೇರಬೇಕಾಗಿ ವಿನಂತಿ”- ಇದು ಕೆ.ಆರ್.ಪೇಟೆ ನಾಗರಿಕರ ವೇದಿಕೆ ಎಂಬ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಇಂದು (ಭಾನುವಾರ) ಬೆಳಿಗ್ಗೆ ಹರಿದಾಡಿರುವ ಸಂದೇಶ.
ಸಂಘಪರಿವಾರದವರ ವಾಟ್ಸ್ಯಾಪ್ ಗುಂಪು ಇದೆಂದು ಹೇಳುವ ಮೂಲಗಳು, “ಕೆ.ಆರ್.ಪೇಟೆ ಪುರಸಭೆಗೆ ಸೇರಿದ ಜಾಗದಲ್ಲಿ ಮಣ್ಣು ತುಂಬಿಸಿ, ಅಲ್ಲಿ ಗಣೇಶನನ್ನು ಅನುಮತಿ ಇಲ್ಲದೆ ಕೂರಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಬೇಕಂತಲೇ ವಿವಾದ ಸೃಷ್ಟಿಸಲು ಪುರಾತನ ವಿಗ್ರಹದ ಕಥೆ ಕಟ್ಟಲಾಗುತ್ತಿದೆ” ಎಂದು ತಿಳಿಸಿವೆ.

“ಮಂಡ್ಯ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಕೋಮು ಪ್ರಯೋಗಗಳ ಭಾಗವಾಗಿ ಗಣಪತಿ ಉದ್ಭವ ಕಥೆ ಹುಟ್ಟಿದೆ ಎಂದು ಸ್ಥಳೀಯ ಜನಪರ ಸಂಘಟನೆಗಳ ಮುಖಂಡರು ಶಂಕಿಸುತ್ತಾರೆ. ಶ್ರೀರಂಗಪಟ್ಟಣ, ಕೆರಗೋಡು, ನಾಗಮಂಗಲ, ಮದ್ದೂರು- ಈ ಎಲ್ಲ ಕಡೆ ಧರ್ಮದ ಹೆಸರಲ್ಲಿ ಸಂಘರ್ಷ ಸೃಷ್ಟಿ ಮಾಡಲಾಗಿತ್ತು. ಈಗ ಕೆ.ಆರ್.ಪೇಟೆಯೇ ಮುಂದಿನ ಟಾರ್ಗೆಟ್ ಇದ್ದಂತೆ ತೋರುತ್ತದೆ” ಎಂದು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಾಮಾಜಿಕ ನ್ಯಾಯ ದಿನ | ದ್ರಾವಿಡ ಮಣ್ಣಲ್ಲಿ ‘ಸ್ವಾಭಿಮಾನ’ದ ಬೀಜ ಬಿತ್ತಿ ಫಸಲು ತೆಗೆದ ಪೆರಿಯಾರ್
ಕೆ.ಆರ್.ಪೇಟೆ ನಾಗರಿಕರ ವೇದಿಕೆಯಲ್ಲಿ ಮೆಸೇಜ್ ಫಾರ್ವರ್ಡ್ ಮಾಡಿರುವ ಮೊಬೈಲ್ ಸಂಖ್ಯೆಗೆ ‘ಈದಿನ ಡಾಟ್ ಕಾಮ್’ ಸಂಪರ್ಕಿಸಿದಾಗ, ನಟರಾಜ್ ಎಂಬವರು ಪ್ರತಿಕ್ರಿಯಿಸಿದ್ದಾರೆ. ಪುರಾತನ ಗಣಪತಿ ಕಥೆಯನ್ನು ಹೇಳುತ್ತಿರುವ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಅವರು, ಪುರಸಭಾ ಸದಸ್ಯರೆಂದು ತಿಳಿದುಬಂದಿದೆ.
“ಈ ಜಾಗವು ಮೊದಲಿಗೆ ಚೆನ್ನಪ್ಪನ ಕಟ್ಟೆ ಎಂದು ಹೆಸರಾಗಿತ್ತು. ಏರಿ ಮೇಲೆ ಇದ್ದ ಗುಡಿ ಶಿಥಿಲವಾಗಿತ್ತು. ಅದೆಲ್ಲವೂ ಮುಚ್ಚಿ ಹೋಗಿತ್ತು. ಅರಳಿಕಟ್ಟೆಯೂ ಇತ್ತು. ಅಲ್ಲಿ ಸ್ವಚ್ಛತಾ ಕಾರ್ಯ ಮಾಡುವಾಗ ವಿಗ್ರಹ ಸಿಕ್ಕಿತು” ಎಂದು ಪ್ರತಿಪಾದಿಸುತ್ತಾರೆ ನಟರಾಜ್.
“ಆರು ಎಕರೆ ಮೂವತ್ತೆರಡು ಗುಂಟೆ ಇದ್ದ ಕೆರೆ ಈಗ ಇಲ್ಲವಾಗಿದೆ. ಇಲ್ಲಿ ಪಾರ್ಕ್ ಮಾಡಬೇಕೇ ಹೊರತು ಬೇರೆಯ ಉದ್ದೇಶಗಳಿಗೆ ಬಳಸಬಾರದು. ಇದು ನೀರಾವರಿ ಇಲಾಖೆಗೆ ಸೇರುವ ಪ್ರದೇಶವಾಗಿದೆ. ಆದರೆ ಇಲ್ಲಿ ಪುರಸಭೆಯವರು ಡಿಸಿಸಿ ಬ್ಯಾಂಕ್ ಮತ್ತು ಪಿಎಲ್‌ಡಿ ಬ್ಯಾಂಕ್‌ನವರಿಗೆ ಜಾಗ ಕೊಟ್ಟಿದ್ದಾರೆ” ಎಂದು ಆರೋಪಿಸಿದರು.
“ಯಾವುದೇ ರೀತಿಯ ಪಿತೂರಿ ನಡೆಯುತ್ತಿಲ್ಲ. ಊರು ಶಾಂತಿಯುತವಾಗಿದೆ. ಗಣಪತಿ ಕೂರಿಸಿ, ಹತ್ತು ಹದಿನೈದು ದಿನಗಳಲ್ಲಿ ಗಣಪತಿ ಬಿಟ್ಟುಬಿಡುತ್ತಾರೆ. ಜಾಗವನ್ನು ಕಬಳಿಸುವ ಉದ್ದೇಶವಿಲ್ಲ. ಆ ರೀತಿ ಜಟಾಪಟಿ ಆಗಬಾರದು, ರಾಜಕೀಯ ಉದ್ದೇಶ ಬರಬಾರದೆಂದು ನಮ್ಮೆಲ್ಲರ ಆಲೋಚನೆ. ಪುರಸಭೆಯಲ್ಲಿ ಅನುಮತಿ ಕೋರುತ್ತೇವೆ. ಅವರು ಜಾಗ ಬಿಟ್ಟುಕೊಡಲು ಆಗುವುದಿಲ್ಲ ಎಂದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಚಿಂತನೆ ಇದೆ ಹೊರತು, ಪ್ರತಿಭಟನೆಯನ್ನು ಮಾಡಿ, ಸರ್ಕಾರವನ್ನು ದೂಷಣೆ ಮಾಡುವುದಿಲ್ಲ. ರಾಜಕೀಯ ವ್ಯಕ್ತಿಗಳನ್ನು ಎಳೆದು ತರುವ ಉದ್ದೇಶವಿಲ್ಲ” ಎಂದರು.
ನಟರಾಜ್ ಅವರ ಹೇಳಿಕೆಗಳು ಅರ್ಧ ಸತ್ಯದಿಂದ ಕೂಡಿವೆ ಎಂದು ಹೆಸರು ಹೇಳಲಿಚ್ಛಿಸದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. “ಆ ಜಾಗದಲ್ಲಿ ದೇವಸ್ಥಾನ ಇದ್ದಿದ್ದೇ ಸುಳ್ಳು. ಚೆನ್ನಪ್ಪನ ಕಟ್ಟೆ ಇದ್ದದ್ದು ನಿಜ. ಆದರೆ ಅದು ಮಳೆ ನೀರು ತುಂಬಿಕೊಳ್ಳುತ್ತಿದ್ದ ಜಾಗವಷ್ಟೇ. ಅದು ಪಾರ್ಕ್‌ಗೆ ಅಂತ ಸೀಮಿತಗೊಳಿಸಿರುವ ಜಾಗ ಅಲ್ಲವೇ ಅಲ್ಲ. ಅಲ್ಲೊಂದು ಕಾಲುವೆ ಇತ್ತಷ್ಟೇ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸ್ಥಳೀಯ ನಿವಾಸಿ.
ವಾಟ್ಸ್ಯಾಪ್ ಸಂದೇಶ ಹರಿದಾಡಿದ ಬಳಿಕ ಅಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿದೆ. ತಕ್ಷಣ ಪುರಸಭೆ ಮುಖ್ಯಾಧಿಕಾರಿ ಅಶೋಕ್, ಸರ್ಕಲ್ ಇನ್‌ಸ್ಪೆಕ್ಟರ್ ಸುಮಾರಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತ ವಿಗ್ರಹವನ್ನು ತೆರವುಗೊಳಿಸಲು ಸೂಚಿಸಿದ್ದಾರೆ.

ಇದನ್ನೂ ಓದಿರಿ: ವಡ್ಡರ್ಸೆ ನೆನಪು; ಬೆಳೆ ನೀಡದೆ ಹೋಯಿತೆ ‘ಮುಂಗಾರು’?
‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿರುವ ಸುಮಾರಾಣಿ, “ಅನುಮತಿ ಇಲ್ಲದೆ ವಿಗ್ರಹವನ್ನು ತಂದು ಇಟ್ಟಿದ್ದವರೇ ಸ್ವಯಂಪ್ರೇರಿತವಾಗಿ ತೆರವು ಮಾಡುತ್ತಿದ್ದಾರೆ. ಪುರಸಭಾ ಮುಖ್ಯಾಧಿಕಾರಿ ಅಶೋಕ್ ಅವರು ಮುಂದೆ ನಿಂತು ಕ್ರಮ ಜರುಗಿಸಿದ್ದಾರೆ. ಅಲ್ಲಿ ಮೊದಲಿನಿಂದಲೂ ಗಣಪತಿ ಇತ್ತು ಎಂಬುದು ಸುಳ್ಳು. ರಾತ್ರೋರಾತ್ರಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂಬುದು ನಮ್ಮ ಗಮನಕ್ಕೆ ಬಂದಿದೆ” ಎಂದು ಸ್ಪಷ್ಟಪಡಿಸಿದರು.


ಪುರಾತನ ಗಣಪತಿಯ ಕಥೆ ಸದ್ಯಕ್ಕೆ ತಣ್ಣಗಾದರೂ ಗಣಪತಿ ಹೆಸರಲ್ಲಿ ಕೆ.ಆರ್.ಪೇಟೆಯಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇವೆ ಎಂದು ಸ್ಥಳೀಯರೊಬ್ಬರು ‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿದ್ದಾರೆ. “ಇಲ್ಲಿನ ಮಸೀದಿ ಮುಂದೆ ಕಲ್ಲುಗಳನ್ನು ಸಂಗ್ರಹಿಸಿಕೊಂಡಿದ್ದಾರೆ, ಗಣಪತಿ ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ, ಸಂಘಪರಿವಾರದ ಕೆಲವರು ಮೌಖಿಕ ದೂರನ್ನು ಕೊಟ್ಟಿದ್ದರು. ಆದರೆ ಮಸೀದಿಯ ಕಾಮಗಾರಿಗೆ ಸಂಗ್ರಹಿಸಿದ್ದ ಸಾಮಗ್ರಿ ಅವಾಗಿದ್ದವು. ಉಭಯ ಸಮುದಾಯಗಳ ನಡುವೆ ಶಾಂತಿ ಸಭೆಗಳೂ ನಡೆದಿವೆ. ಮುಸ್ಲಿಮರು ಸೌಹಾರ್ದ ಕೂಟಗಳನ್ನು ನಡೆಸಿ, ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿರುವ ಸೌಹಾರ್ದತೆಯ ಸಂದೇಶ ಸಾರಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿ ಧರ್ಮವನ್ನು ಎಳೆದು ತರುವ ಕೆಲಸಗಳು ಆಗುತ್ತಲೇ ಇವೆ. ಮಂಡ್ಯ ಜಿಲ್ಲೆಯಲ್ಲಿ ತುರ್ತಾಗಿ ಕೋಮು ನಿಗ್ರಹ ದಳ ಸ್ಥಾಪನೆಯಾಗಬೇಕಿದೆ” ಎಂದು ಆಗ್ರಹಿಸಿದರು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.