ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೀತಾ ಇದೆ. ಈ ಮಧ್ಯೆ ಗೋದಿ ಮೀಡಿಯ ಜನರ ಮುಂದೆ ಛೀಮಾರಿ ಹಾಕಿಸಿಕೊಂಡಿದೆ. ಜನರು ಮೀಡಿಯಾ ಮೇಲಿನ ವಿಶ್ವಾಸ ಕಳೆದುಕೊಂಡು ವರ್ಷಗಳೇ ಉರುಳಿವೆ. ಜನರಿಗೆ ಇನ್ನೂ ಅಲ್ಪ ಸ್ವಲ್ಪ ನಂಬಿಕೆ ಇದ್ದರೆ ಅದು ನ್ಯಾಯಾಂಗದ ಮೇಲೆ ಮಾತ್ರ ಎನ್ನುವಂಥ ಸ್ಥಿತಿ ಇದೆ. ಅದರ ಬಗ್ಗೆಯೂ ಕೆಲವೊಮ್ಮೆ ಅನುಮಾನ ಮೂಡುವಂಥ ತೀರ್ಪುಗಳು ಬರುತ್ತವೆಯಾದರೂ ಒಟ್ಟಾರೆ ಸುಪ್ರೀಂಕೋರ್ಟ್ ಜನಸಾಮಾನ್ಯರ ಹಕ್ಕುಗಳ ರಕ್ಷಣೆ ವಿಚಾರ ಬಂದಾಗಲೆಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ 78 ವರ್ಷಗಳಲ್ಲಿನ ಸುಪ್ರೀಂ ತೀರ್ಪುಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುವುದಾದರೆ, ಎಲ್ಲೋ ಅಲ್ಲೊಂದು, ಇಲ್ಲೊಂದು ತೀರ್ಪುಗಳು ಪ್ರಭುತ್ವದ ಪರ ಅಥವಾ ಉಳ್ಳವರ ಪರ ಎನಿಸಿದರೂ ಸಮಗ್ರವಾಗಿ ನೋಡಿದಾಗ ಸುಪ್ರೀಂಕೋರ್ಟ್ ಹೆಚ್ಚಿನ ಸಂದರ್ಭಗಳಲ್ಲೆಲ್ಲಾ ನಾಗರಿಕ ಹಕ್ಕುಗಳು, ಸಂವಿಧಾನ, ಅರಣ್ಯ, ಪರಿಸರ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಧಾವಿಸಿದೆ.
ನೂರಾರು ಶವಗಳನ್ನ ಅಕ್ರಮವಾಗಿ ಹೂಳಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಏಪ್ರಿಲ್ 30 ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಕೆ ಮಾಡಿತ್ತು. ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ್ ಅವರು ಚಿನ್ನಯ್ಯ ಪರವಾಗಿ ಅರ್ಜಿ ಸಲ್ಲಿಸಿ, ವಾದ ಮಂಡಿಸಿದ್ದರು. ಮೇ 5ರಂದು ಸುಪ್ರೀಂಕೋರ್ಟ್‌ನ ಜಸ್ಟೀಸ್ ಬಿ.ವಿ.ನಾಗರತ್ನ ನೇತೃತ್ವದ ಪೀಠದಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯೂ ನಡೆದಿದೆ. ಮೂಲತಃ ಕರ್ನಾಟಕದವರೇ ಆದ ಜಸ್ಟೀಸ್ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠವು 20 ವರ್ಷ ಹಳೆಯ ಕೇಸ್ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಾಗಲೀ, ಕೋರ್ಟ್ ನಲ್ಲಾಗಲೀ ಕೇಸ್ ದಾಖಲಿಸದೇ, ಸೀದಾ ಸುಪ್ರೀಂಕೋರ್ಟ್ ಗೆ ಬಂದು ಪಿಐಎಲ್ ಸಲ್ಲಿಸಿದ್ದಕ್ಕೆ ಎಸ್‌ಐಟಿ ರಚನೆ ಮಾಡೋಕೆ ಆಗಲ್ಲ ಅಂತ ಹೇಳಿತ್ತು. ಅಷ್ಟೇ ಅಲ್ಲ ರಿಟ್ ಅರ್ಜಿಯಲ್ಲಿ 1995 ರಿಂದ 2004 ರವರೆಗಿನ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ, 2025 ರಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿಳಂಬದ ಕಾರಣಕ್ಕಾಗಿ ಈ ರಿಟ್ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ಅರ್ಜಿದಾರರೇ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಜಿದಾರರು ಕೋರಿರುವುದಕ್ಕೆ ಮನ್ನಣೆ ನೀಡುವುದಕ್ಕೆ ಸಾಧ್ಯವಿಲ್ಲ. ನಮಗೆ ಈ ಅರ್ಜಿಯನ್ನು ವಜಾಗೊಳಿಸದೇ ಬೇರೆ ಆಯ್ಕೆಗಳಿಲ್ಲ. ಪ್ರತಿವಾದಿಗಳ ವಿರುದ್ಧ ಯಾವುದೇ ರಿಲೀಫ್ ಅನ್ನು ಕೇಳಿಲ್ಲ. ಹೀಗಾಗಿ ಇಂಥ ಅರ್ಜಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಈ ರಿಟ್ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಸಲ್ಲಿಸಿರುವುದು, ಅದರ ಉದ್ದೇಶ, ಧ್ಯೇಯಕ್ಕೆ ಧಕ್ಕೆ ತಂದಂತೆ ಆಗತ್ತೆ. ಹೀಗಾಗಿ ಈ ರಿಟ್ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ಅರ್ಜಿದಾರರ ಗುರುತು ಅನ್ನು ಬಹಿರಂಗಪಡಿಸಬಾರದೆಂದು ಮನವಿ ಮಾಡಿದ್ದಾರೆ. ನಾವು ಆ ರೀತಿ ಗುರುತು ಅನ್ನು ಬಹಿರಂಗಪಡಿಸಿಲ್ಲ ಎಂದು ಸುಪ್ರೀಂಕೋರ್ಟ್ ಮೇ, 5, 2025ರ ತನ್ನ ಆದೇಶದಲ್ಲಿ ಹೇಳಿದೆ.
ವಾದ ಮಂಡಿಸಿದ ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ್, ಸ್ಥಳೀಯ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡೋಕೆ ಆಗಲ್ಲ, ಯಾಕಂದ್ರೆ ಅಲ್ಲಿ ಇರೋ ಪ್ರಭಾವಿಗಳು ಈ ಪ್ರಕರಕಣದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಅಂತ ಹೇಳ್ತಾರೆ. ಇದಕ್ಕೆ ಉತ್ತರ ಕೊಟ್ಟ ಸುಪ್ರೀಂ ಕೋರ್ಟ್, ಅಲ್ಲಿ ಎಫ್‌ಐಆರ್ ದಾಖಲು ಮಾಡಿಲ್ಲ ಅಂದ್ರೆ ಮತ್ತೆ ನೀವು ಸುಪ್ರೀಂ ಕೋರ್ಟ್‌ಗೆ ಬರಬಹುದು ಅನ್ನೋ ಕಾರಣವನ್ನ ನೀಡಿ ರಿಟ್ ಅರ್ಜಿಯನ್ನ ವಜಾ ಮಾಡಿತ್ತು. ನಂತರ ಧರ್ಮಸ್ಥಳ ಸ್ಥಳೀಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗತ್ತೆ. ಇದು ತಡವಾಗಿ ಬೆಳಕಿಗೆ ಬಂದ ಕಾರಣ ಸೋ ಕಾಲ್ಡ್ ಜನಪರ ಕನ್ನಡ ಮಾಧ್ಯಮಗಳು ಸುಪ್ರೀಂ ಕೋರ್ಟ್ ತೀರ್ಪನ್ನೇ ಉದ್ದೇಶಪೂರ್ವಕವಾಗಿ ತಿರುಚಿ ಸುದ್ದಿ ಮಾಡಿದ್ದವು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ತಪ್ಪಾಗಿ ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಿರುವ ಕೆಲವು ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲ ದೀಪಕ್ ಖೋಸ್ಲಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಮೇ 5, 2025 ರಂದು ಸುಪ್ರೀಂ ಕೋರ್ಟ್ W.P. (Crl.) ಸಂಖ್ಯೆ 184/2025 ಅರ್ಜಿಯನ್ನು ವಜಾಗೊಳಿಸಿತ್ತು. ವಿಳಂಬವಾಗಿ ಅರ್ಜಿ ಸಲ್ಲಿಕೆ, ದೂರು-ಎಫ್‌ಐಆರ್ ಕೊರತೆಯ ಆಧಾರದ ಮೇಲೆ ಮಾತ್ರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಅದರ ಹೊರತಾಗಿ ಪ್ರಕರಣವು ವಿಚಾರಣೆಗೆ ಸೂಕ್ತವಲ್ಲ ಎಂಬ ಯಾವುದೇ ತೀರ್ಪನ್ನು ನ್ಯಾಯಾಲಯ ನೀಡಿಲ್ಲ ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಖೋಸ್ಲಾ ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಕನ್ನಡ ವಾಹಿನಿಗಳು ಈ ತೀರ್ಪನ್ನು “ಪ್ರಕರಣವು ಸಂಪೂರ್ಣ ಮುಕ್ತಾಯಗೊಂಡಿದೆ”, “ಆರೋಪಗಳು ತಳ್ಳಿ ಹಾಕಲ್ಪಟ್ಟಿವೆ” ಎಂಬ ರೀತಿಯಲ್ಲಿ ಪ್ರಸಾರ ಮಾಡಿರುವುದು ವೀಕ್ಷಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆ ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ರಿಟ್ ಅರ್ಜಿಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವರದಿಗಳನ್ನು ದೀಪಕ್ ಖೋಸ್ಲಾ ಅವರು ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಖಂಡಿಸಿದ್ದಾರೆ. ಇವು ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಧಕ್ಕೆಯುಂಟುಮಾಡುತ್ತವೆ. ಈ ರೀತಿಯ ಸುದ್ದಿ ಹರಡಿರುವ ಸುದ್ದಿ ವಾಹಿನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದನ್ನು ಪರಿಗಣಿಸಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ತಪ್ಪು ನಿರೂಪಣೆಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳ ನಿಖರ ಪ್ರಸಾರದ ಕುರಿತಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಅವರು ಸಿಜೆಐಗೆ ಮನವಿ ಮಾಡಿದ್ದಾರೆ.
ಆದರೆ ಈಗ ಪ್ರಶ್ನೆ ಬರೋದು ಕೆಲವು ಮಾಧ್ಯಮಗಳು ಯಾಕೆ ಸುಳ್ಳು ಸುದ್ದಿಯನ್ನ ಹಬ್ಬಿಸತ್ತೆ? ಸುಳ್ಳು ಸುದ್ದಿ ಹಬ್ಬಿಸೋದರಿಂದ ಮಾಧ್ಯಮಗಳಿಗೆ ಆಗುವ ಲಾಭ ಆದ್ರು ಏನು? ಪ್ರಭಾವಿಗಳ ರಕ್ಷಣೆಗೆ ಕನ್ನಡದ ಕೆಲವು ಮಾಧ್ಯಮಗಳು ನಿಂತಿರೋದಾದ್ರೂ ಯಾಕೆ? ಮಾಧ್ಯಮಗಳು ಸುಖಾಸುಮ್ಮನೆ ಸುಳ್ಳು ಸುದ್ದಿ ಪ್ರಸಾರ ಮಾಡಿ ಸಂಬಂಧಿಸಿದವರ ಮುಂದೆ ಪ್ರಸಾದಕ್ಕಾಗಿ ಕೈವೂಡ್ಡಿ ನಿಲ್ಲೋದಾದರೂ ಯಾಕೆ? ಪ್ರಜಾಪ್ರಭುತ್ವದ ಇತರೆ ಅಂಗಗಳಿಗೆ ಹೋಲಿಸಿದರೆ ನ್ಯಾಯಾಂಗ ಖಂಡಿತಾ ಉತ್ತಮ ಸಾಧನೆ ಮಾಡಿದೆ. ಅದರಲ್ಲೂಸುಪ್ರೀಂ ಕೋರ್ಟ್ ತನ್ನೆಲ್ಲಾ ಪ್ಲಸ್ ಮೈನಸ್ ನಡುವೆಯೇ ನಾಗರಿಕರ ಹಿತ ಕಾಯುವಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಕೆಲವೊಮ್ಮೆ ನ್ಯಾಯಮೂರ್ತಿಗಳು ಸರಕಾರದ ಕಡೆ ಎನಿಸಬಹುದು. ಆದರೂ ವೈಯಕ್ತಿಕ ಹಕ್ಕು, ಸ್ವಾತಂತ್ರ್ಯ, ಸಮಾನತೆ ವಿಚಾರಗಳಲ್ಲಿಸದಾ ಜನ ಸಾಮಾನ್ಯರ ಪರ ಕಾರ್ಯನಿರ್ವಹಿಸುತ್ತಿದೆ. ಆದರೆ ಸತ್ಯ, ನ್ಯಾಯ ಅಂತ ಬಂದಾಗ ಪ್ರತಿಯೊಬ್ಬರನ್ನೂ ಪ್ರಶ್ನಿಸೋ ಅಧಿಕಾರ, ಹಕ್ಕನ್ನ ಹೊಂದಿರುವವರು ಅಂದ್ರೆ ಅದು ಪತ್ರಕರ್ತರು ಮಾತ್ರ. ಆದರೆ ಈಗ ಮಾಧ್ಯಮಗಳು ತಮ್ಮನ್ನು ತಾವೇ ಮಾರಿಕೊಂಡಿದೆ.
ಇನ್ನೂ ನಿನ್ನೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ ಹುಡುಗಿಯರ ನಾಪತ್ತೆ ಪ್ರಕರಣವನ್ನು SIT ಸಮಗ್ರ ತನಿಖೆ ಮಾಡಬೇಕು, ಧರ್ಮಸ್ಥಳದ ಭೂ ಅಕ್ರಮ, ಭೂ ಕಬಳಿಕೆ, ಬಡ್ಡಿ ವ್ಯವಹಾರಗಳನ್ನು ತನಿಖೆ ಮಾಡಬೇಕು, ಪದ್ಮಲತಾ ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಸಾವಿಗೆ ನ್ಯಾಯ ಆಗ್ರಹಿಸಿ, ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ಬೆಂಗಳೂರಿನಲ್ಲಿ ʻನ್ಯಾಯ ಸಮಾವೇಶʼ ಆಯೋಜಿಸಿತ್ತು. ಈ ವೇಳೆ ರಿಪಬ್ಲಿಕ್ ಕನ್ನಡ ಮಾಧ್ಯಮದವರು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡುವುದಕ್ಕೆ ಸುತ್ತಮುತ್ತಲಿದ್ದ ಜನ ಕೆರಳಿಕೆಂಡವಾದರು. ರಿಪಬ್ಲಿಕ್ ಕನ್ನಡ ವರದಿಗಾರನನ್ನ ಸಾಮಾನ್ಯ ಜನರು ತರಾಟೆಗೆ ತೆಗೆದುಕೊಂಡಿದ್ದ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಜನರು ವರದಿಗಾರನನ್ನ ತಾರಾಮಾರಾ ಉಗಿದು ಉಪ್ಪಿನಕಾಯಿ ಹಾಕಿದ್ದರು. ಆ ವರದಿಗಾರ “ಏನೇ ಇದ್ದರೂ ಆಫೀಸ್‌ಗೆ ಬಂದು ಮಾತನಾಡಿ, ನಾನು ಕೆಲಸಗಾರ ಅಷ್ಟೇ ” ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾನೆ. ಮಾಧ್ಯಮಗಳು ಸತ್ಯವನ್ನಷ್ಟೇ ಬಿತ್ತರಿಸಿ ಎಂದು ಕೈಮುಗಿದು ಮನವಿ ಮಾಡಿ, ಸೌಜನ್ಯಪರ ಹೋರಾಟಗಾರರನ್ನ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರ ವಿರುದ್ಧ ಬುರುಡೆ ಗ್ಯಾಂಗ್ ಅನ್ನೋ ಪದಗಳನ್ನ ಯಾಕೆ ಬಳಸ್ತೀರಾ ಅಂತ ಆಕ್ರೋಶಗೊಂಡ ಘಟನೆಯೂ ನಡೆದಿದೆ.
ಯಾವಾಗ ಎಸ್‌ಐಟಿ ರಚನೆ ಆಗತ್ತೋ ಆಗಿನಿಂದಲೇ ಬಿಜೆಪಿ ನಾಯಕರು ಹಾಗೂ ಒಂದಿಷ್ಟು ಕನ್ನಡ ಮಾಧ್ಯಮಗಳು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಎಂದು ಬೊಬ್ಬೆ ಹೊಡೆಯೋದಕ್ಕೆ ಶುರು ಮಾಡಿದ್ದವು. ಬಿಜೆಪಿಗರು ಒಂದು ಹೆಜ್ಜೆ ಮುಂದಡಿ ಇಟ್ಟು ಧರ್ಮಸ್ಥಳ ಚಲೋ ಮೂಲಕ ಮೆರವಣಿಗೆಯನ್ನೂ ಮಾಡಿದ್ದರು. ಕೊನೆಗೆ ಉತ್ಖನನದಲ್ಲಿ 17 ಸ್ಪಾಟ್‌ಗಳ ಪೈಕಿ 2 ಸ್ಪಾಟ್‌ಗಳಲ್ಲಿ ಮಾತ್ರ ಮಾನವನ ಮೂಳೆಗಳು ಸಿಗತ್ತೋ ಆಗ ಉತ್ಖನನವನ್ನೇ ನಿಲ್ಲಿಸಿ ಅಂತ ಎಸ್‌ಐಟಿ ಮೇಲೆ ಒತ್ತಡ ಹೇರೋ ಎಲ್ಲಾ ಪ್ರಯತ್ನಗಳನ್ನ ಮಾಡಿದ್ದರು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಅಕ್ರಮವಾಗಿ ಹೂಳಲಾಗಿದೆ ಎಂಬ ಪ್ರಕರಣಕ್ಕೆ ಯಾವಾಗ ಸೌಜನ್ಯ ಮಾವ ವಿಠಲ್ ಗೌಡ ಅವರ ಎಂಟ್ರಿ ಆಗತ್ತೋ, ಮಹಜರಿನ ವೇಳೆ 9 ತಲೆಬುರುಡೆಗಳು ಸಿಗತ್ತೋ ಆಗ ಅನ್ಯಾಯದ ಪರ ಧ್ವನಿಗೂಡಿಸಿದ್ದವರು ಸ್ವಲ್ಪ ಸೈಲೆಂಟ್ ಆದಂತೆ ಕಾಣಿಸಿತು. ಆದರೆ ಈಗ ಮತ್ತೆ ಇದೇ ವಿಚಾರವನ್ನ ಇಟ್ಕೊಂಡು ಹೇಗಾದ್ರೂ ಮಾಡಿ ತನಿಖೆಯ ಹಾದಿಯನ್ನ ತಪ್ಪಿಸಲೇ ಬೇಕು, ತನಿಖೆ ಇಲ್ಲಿಗೆ ನಿಲ್ಲಲೇ ಬೇಕು, ಪ್ರಭಾವಿಗಳ ಕೈವಾಡ ಇರೋದು ಯಾರಿಗೂ ಗೊತ್ತಾಗಬಾರದು ಅನ್ನೋ ದುರುದ್ದೇಶದಿಂದ ಮತ್ತೊಂದು ಷಡ್ಯಂತ್ರ ಮಾಡುವಲ್ಲಿ ಸೋ ಕಾಲ್ಡ್ ಜನಪರ ಮಾಧ್ಯಮಗಳು ನಿರತವಾಗಿದೆ.
ರಾಜ್ಯದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿರುವವ ಮೇಲೆ ನಿಗಾ ಇಡುವುದೇ ಬಹುದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೋಷಿಯಲ್ ಮೀಡಿಯಾ ಜೊತೆಗೆ ಮೀಡಿಯಾದ ಮೇಲೂ ಸರ್ಕಾರ ಕಣ್ಣಿಟ್ಟು ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಸುಳ್ಳು ಸುದ್ದಿ ಹರಡುವ ಇವರಿಗೆ ನ್ಯಾಯಾಲಯವೇ ಕಡಿವಾಣ ಹಾಕಬೇಕಾಗಿದೆ.