ಲಡಾಖ್ ಎಂದರೆ ಉಸಿರಾಡುವ ಗಾಳಿಯಲ್ಲಿ ಆಮ್ಲಜನಕ ಕಡಿಮೆ ಇರುತ್ತದೆ, ಸಿಕ್ಕಾಪಟ್ಟೆ ಚಳಿ ಇರುತ್ತೆ ಎನ್ನುವುದು ನಿಜ. ಆದರೆ ಅದರ ಭಾರವನ್ನು ತಲೆಯಲ್ಲಿ ಹೊತ್ತುಕೊಳ್ಳದೆ, ಇತ್ತ ತಾತ್ಸಾರವೂ ಮಾಡದೆ ಮುಂಜಾಗರೂಕತೆಯಿಂದ ಸಾಗಿದರೆ ಶಿಖರಗಳ ನೋಟ ನಿಮ್ಮನ್ನು ಸೆಳೆಯುವುದು ಖಚಿತ. ಹಿಮ ಕಂಡು ನಿಮ್ಮ ಮನ ಕರಗುವುದು ನಿಶ್ಚಿತ.
ಗಿಡ-ಮರಗಳ, ಹಸಿರು ತುಂಬಿದ ಮಲೆನಾಡ ನೋಡುವುದು ಕಣ್ಣಿಗೆಷ್ಟು ತಂಪೋ, ಗಿರಿ ಶಿಖರಗಳ ತುದಿಯಲ್ಲಿ ಹೊಳೆಯುವ ಹಿಮರಾಶಿಯ ಕಾಣುವುದು ಅಷ್ಟೇ ಇಂಪು. ಆ ಪವರ್ತಗಳೆಲ್ಲವೂ ಒಂದೇ ರೀತಿ ಇದೆ ಅನಿಸಿದರೂ ಸೂರ್ಯನ ಬೆಳಕಿನ ತೀಕ್ಷ್ಣತೆ ಹೆಚ್ಚು ಕಡಿಮೆಯಾಗುತ್ತಿದ್ದಂತೆ ಬದಲಾಗುವ ಬಣ್ಣಗಳು ಅವರ್ಣನೀಯ. ಕಣ್ಣು ಮಿಟುಕಿಸಲೂ ಬಯಸದೆ, ಬಾಯಿ ತೆರೆದು ಉದ್ಗರಿಸಿ ಬಣ್ಣಿಸುವುದೂ ಬೇಡವೆನಿಸಿ, ಬರೀ ಆ ಪ್ರಕೃತಿಯ ಸೌಂದರ್ಯವ ಸವಿಯುವುದು ಬೇರೆಲ್ಲೂ ಸಿಗದ ಉತ್ಕರ್ಷ ನೆಮ್ಮದಿ. ಈ ಮನಃಶಾಂತಿ ನನಗೆ ಸಿಕ್ಕಿದ್ದು ಲಡಾಖ್‌ನಲ್ಲಿ. ವರ್ಷದ ಬಹು ತಿಂಗಳುಗಳ ಕಾಲ ದೇಶದ ಇತರೆ ಪ್ರದೇಶಗಳಿಂದ ರಸ್ತೆ ಸಂಚಾರ ಸಂಪರ್ಕವನ್ನು ಕಡಿದುಕೊಳ್ಳುವ ಲಡಾಖಿಗಳ ನಾಡಿನಲ್ಲಿ ತಿರುಗಾಡಿದ ಪ್ರವಾಸ ಕಥನವಿದು.
ಎತ್ತರದ ಸ್ಥಳದಿಂದ ಕೆಳಕ್ಕೆ ನೋಡಲು ಭಯ ಪಡುತ್ತಿದ್ದ, ‘heighto phobia‘ ಇದೆ ಎಂದು ತಮಾಷೆಯಾಗಿ ಹೇಳುತ್ತಿದ್ದ ನಾನು ಮೊದಲ ಬಾರಿಗೆ ವಿಮಾನ ಏರಿಯೂ ಆಯಿತು. (ಎತ್ತರ ಪ್ರದೇಶಗಳ ಕುರಿತ ಭಯವನ್ನು ಇಂಗ್ಲಿಷಿನಲ್ಲಿ Acrophobia ಎನ್ನುವುದುಂಟು). ವಿಮಾನದ ಕಿಟಕಿಯಿಂದ ಕೆಳಕ್ಕೆ ಹಣುಕಿದಾಗ ಒಂಚೂರೂ ಎದೆ ನಡುಗದಿದ್ದಾಗ ಈ ಫೋಬಿಯಾಗಳೆಲ್ಲವೂ ನಮ್ಮ ನಿಯಂತ್ರಣದಲ್ಲಿವೆ ಎಂಬುದು ಸ್ಪಷ್ಟವಾಯಿತು. “ಅಷ್ಟೊಂದು ಕಷ್ಟಪಟ್ಟು, ಪ್ರಾಣದ ಭಯಬಿಟ್ಟು, ನಿರಂತರವಾಗಿ ಮೈಕೊರೆಯುವ ಚಳಿ ಇರುವ, ಗುಡ್ಡ ಕುಸಿತ-ಮಣ್ಣು ಕುಸಿತ, ಮೇಘಸ್ಫೋಟ, ಭಯೋತ್ಪಾದಕ ದಾಳಿಯಿಂದಾಗಿ ಹೆಚ್ಚಾಗಿ ಸುದ್ದಿಯಾಗುವ ಅಂತಹ ಸ್ಥಳಕ್ಕೆ ನಾನು ಎಂದಿಗೂ ಹೋಗಲಾರೆ” ಎಂದು ಕೆಲವು ವರ್ಷಗಳ ಹಿಂದೆ ಹೇಳಿಕೊಳ್ಳುತ್ತಿದ್ದ ನಾನು, ಲಡಾಖ್‌ನ ಜನಜೀವನ, ಸುಖ-ದುಃಖ ತಿಳಿಯುವ ಅನಿವಾರ್ಯತೆ ಬಂದಾಗ, ಅವಕಾಶ ಸಿಕ್ಕಾಗ ‘ಒಲ್ಲೆ’ ಎನ್ನದೆ, ಆಗಿದ್ದಾಗಲಿ ಎನ್ನುತ್ತಾ ಸಕಲ ಸಿದ್ಧತೆಯೊಂದಿಗೆ ಮುಂದಡಿ ಇಟ್ಟೆ.
ಇದನ್ನು ಓದಿದ್ದೀರಾ? ಹಿಂಸೆಗೆ ತಿರುಗಿದ ಲಡಾಖ್‌ನ ರಾಜ್ಯ ಸ್ಥಾನಮಾನದ ಕೂಗು; 5 ಸಾವು, 80ಕ್ಕೂ ಹೆಚ್ಚು ಗಾಯಾಳುಗಳು
ನಾವು ಹೊರಟ ಈ ಯಾತ್ರೆ ಮೋಜಿನ ಪ್ರವಾಸವೇನಲ್ಲ, ಲಡಾಖ್ ಜನರ ದೀರ್ಘ ಕಾಲದ ಸಂಘರ್ಷವನ್ನು ಸ್ಥಳೀಯರ ಜೊತೆ ಬೆರೆತು ಅರ್ಥೈಸಿಕೊಳ್ಳುವ ಒಂದು ಯತ್ನ. ಜೊತೆಗೆ ಲಡಾಖ್ ಜನರ ಬೇಡಿಕೆಗಳನ್ನು ಆಳದಿಂದ ತಿಳಿದು ದೇಶದ ಇತರೆ ರಾಜ್ಯಗಳ ಜನರಿಗೆ ಸ್ಥಳೀಯ ಭಾಷೆಯಲ್ಲಿ ತಲುಪಿಸುವ ಪ್ರಯತ್ನ. ಬೆಂಗಳೂರು ಸೇರಿ ದೇಶದ ಹಲವು ಭಾಗಗಳಿಂದ ಶ್ರೀನಗರ ತಲುಪಿ, ಅಲ್ಲಿ ಒಂದು ರಾತ್ರಿ ತಂಗಿ ಕಾರ್ಗಿಲ್ ಕಡೆ ಹೊರಟ ನಮ್ಮ ತಂಡದಲ್ಲಿದ್ದಿದ್ದು ಒಟ್ಟು 14 ಮಂದಿ. ಈ ಪೈಕಿ ಕರ್ನಾಟಕದಿಂದ ಈದಿನ ಸಂಸ್ಥೆಯ ಪ್ರತಿನಿಧಿಯಾಗಿ ನಾನು, ಎದ್ದೇಳು ಕರ್ನಾಟಕ ಸಂಘಟನೆ ಪ್ರತಿನಿಧಿ ಪೂರ್ಣಿಮಾ ಬಿಸಿನೀರ್, ಸಂವಿಧಾನ ರಕ್ಷಣಾ ಪಡೆಯ ಗಂಗಾಬಿಕಾ ಪ್ರಭಾಕರ್ ಇದ್ದೆವು. ಇದಲ್ಲದೆ ಜೊತೆಯಾದವರು- ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ(ಉತ್ತರ ಪ್ರದೇಶ), ನರ್ಮದಾ ಬಚಾವೋ ಆಂದೋಲನದ ಭಾಗವಾಗಿದ್ದ ಸದ್ಯ ಹಮ್‌ಸಫರ್ ಸಂಸ್ಥೆಯ(LGBTQ ಸಮುದಾಯದ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆ) ಭಾಗವಾಗಿರುವ ಅರುಂಧತಿ ದುರು(ಉತ್ತರ ಪ್ರದೇಶ), ಮಹಾರಾಷ್ಟ್ರ ಮೂಲದ ಸಾಮಾಜಿಕ ಕಾರ್ಯಕರ್ತೆ ಗುಡ್ಡಿ ತಿವಾರಿ, ಮಲಯಾಳಂ ಮನೋರಮ, ಟೈಮ್ಸ್ ಆಫ್ ಇಂಡಿಯಾ, ಬಿಬಿಸಿಯಲ್ಲಿ ಅನುಭವ ಹೊಂದಿರುವ ಹಿರಿಯ ಪತ್ರಕರ್ತೆ ಮಣಿಮಾಲ(ದೆಹಲಿ), ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂಮೆಂಟ್ಸ್(ಎನ್‌ಎಪಿಎಂ) ನಾಯಕಿ ಮೀರಾ ಸಂಘಮಿತ್ರಾ(ತೆಲಂಗಾಣ), ಸಂದೀಪ್ ಪಾಂಡೆ ಅವರು ಸ್ಥಾಪಿಸಿರುವ ಆಶಾ ಫಾರ್ ಎಜುಕೇಷನ್ ಸಂಸ್ಥೆಯ ಭಾಗವಾಗಿರುವ ಮಹೇಶ್ ಪಾಂಡೆ(ಉತ್ತರ ಪ್ರದೇಶ), ಮುಟ್ಟು ಮೊದಲಾದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಯುವ ಸಾಮಾಜಿಕ ಕಾರ್ಯಕರ್ತೆ ಸುಮೀರಾ ಭಟ್(ಜಮ್ಮು), ಪಂಜಾಬ್‌ನ ಸರಬ್‌ಜೀತ್ ಸಿಂಗ್, ಸಂದೀಪ್ ಪಾಂಡೆ ಅವರೊಂದಿಗೆ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಡಾ. ಗುಂಜನ್ ಸಿಂಗ್(ಆಂಧ್ರ ಪ್ರದೇಶ), ಜಮ್ಮು ಕಾಶ್ಮೀರ ಭಾಗದ ಹಿರಿಯ ಪತ್ರಕರ್ತ ಮೀರ್ ಶಹೀದ್ ಸಲೀಮ್, ದೆಹಲಿಯ ಕುನಾಲ್ ಕೂಡಾ ಜೊತೆಗಿದ್ದರು. ಪ್ರಯಾಣದ ನಡುವೆ ಲೇಹ್‌ನಿಂದ ಸಂಶೋಧಕ, ವಿಜ್ಞಾನಿ ಸೌಮ್ಯ ದತ್ತಾ, ದೆಹಲಿ ವಿಶ್ವವಿದ್ಯಾನಿಲಯ ಪ್ರೊಫೆಸರ್ ಮಾಲತಿ.

2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದು ಮಾಡಿದಾಗ ಹರ್ಷೋದ್ಗಾರ ಮೊಳಗಿಸಿತ್ತು ಲೇಹ್ (ಲಡಾಖ್ ನ ರಾಜಧಾನಿ).ಮತ್ತು ಅದೇ ದಿನವನ್ನು ಕಪ್ಪು ದಿನವಾಗಿ ಆಚರಿಸಿತ್ತು ಕಾರ್ಗಿಲ್. ಇವೆರಡನ್ನೂ ಸೇರಿಸಿ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶವನ್ನು ರೂಪಿಸಿತು ಮೋದಿ ಸರ್ಕಾರ.. ಪರಸ್ಪರ ತದ್ವಿರುದ್ಧವಾದ ನಿಲುವು ಹೊಂದಿದ್ದ ಈ ಜನರು ಇಂದು ಜೊತೆಯಾಗಿದ್ದಾರೆ, ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟು ಹಲವು ವರ್ಷಗಳಿಂದ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದ್ದಾರೆ. ಈ ಬೇಡಿಕೆಗೆ ಬೆಂಬಲ ನೀಡಲು ಹೊರಟ ದೇಶದ ಎಂಟು ರಾಜ್ಯಗಳ ನಿಯೋಗದ ಭಾಗವಾಗಿದ್ದವಳು ನಾನು.
ಲಡಾಖ್‌ಗೆ ಹೋಗುತ್ತಿದ್ದೇನೆ ಎಂದಾಕ್ಷಣ ಶೇಕಡ 90ರಷ್ಟು ಮಂದಿ ನಿಬ್ಬೆರಗಾಗಿದ್ದು ನಿಜ. ಅದಕ್ಕೆ ಕಾರಣ ನನಗೆ ಪದೇ ಪದೇ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು. “ಬೆಂಗಳೂರಿನ ಚಳಿಯೇ ನಿನಗೆ ಆಗದು ಇನ್ನು ಲಡಾಖ್! ಸಾಧ್ಯವೇ ಇಲ್ಲ ಬಿಡು” ಎಂದು ಹೇಳಿದವರು ಬೆರಳೆಣಿಕೆಯ ಮಂದಿಯೇನಲ್ಲ. ಇವೆಲ್ಲ ಮಾತುಗಳು ನನ್ನ ಕುಗ್ಗಿಸದೆ ಹಿಗ್ಗಿಸಿತು, ‘ಸಿಕ್ಕ ಅವಕಾಶವನ್ನು ಬಿಡಬೇಡ’ ಎಂಬ ನನ್ನ ಹಿತೈಷಿಗಳ ಸಲಹೆ ಸರಿಯೆನಿಸಿತು. ಮಾನಸಿಕವಾಗಿ ಗಟ್ಟಿಯಾಗಿದ್ದರೆ ಯಾವುದೇ ಸಮಸ್ಯೆಯನ್ನು ಎದುರಿಸಬಲ್ಲೆ ಎಂಬ ಧೈರ್ಯ ನನ್ನ ಕೈ ಹಿಡಿದಿದ್ದು ನಿಜ. ಅದಕ್ಕೂ ಹೆಚ್ಚು ಸ್ಪೂರ್ತಿಯಾಗಿದ್ದು ನನ್ನ ಪ್ರಯಾಣದ ಸ್ನೇಹಿತರು ಹಿರಿಯರಾದ ಡಾ. ಪೂರ್ಣಿಮಾ ಬಿಸಿನೀರ್ ಮತ್ತು ಗಂಗಾ. ಅವರಿಬ್ಬರ ಉತ್ಸಾಹ, ಕಾಳಜಿ, ಸಲಹೆ ನನಗೆ ಮಾರ್ಗದರ್ಶನವಾಯಿತು.

ಲಡಾಖ್ ಪ್ರವಾಸ ಅತಿ ಕಷ್ಟವೇ? ಖಂಡಿತವಾಗಿಯೂ ಇಲ್ಲ. ನಾವು ಆ ಹವಾಮಾನಕ್ಕೆ ತಕ್ಕುದಾದ ಮುನ್ನೆಚ್ಚರಿಕೆ ತೆಗೆದುಕೊಂಡರೆ, ನಮ್ಮ ದೇಹದ ಶಕ್ತಿಯನ್ನು ಹಿತಮಿತವಾಗಿ ಬಳಸಿಕೊಂಡರೆ ಪ್ರಕೃತಿಯ ಸೌಂದರ್ಯವನ್ನು ನಾವು ಯಾವುದೇ ಅಡೆತಡೆ ಇಲ್ಲದೆ ಸವಿಯಬಹುದು. ಅಷ್ಟಕ್ಕೂ ಸಾಹಸವಿದ್ದರೆ ಮಾತ್ರ ಪ್ರವಾಸ ಥ್ರಿಲ್ ಅಲ್ಲವೇ? ದಿನಕ್ಕೆ ಒಂದು ತಾಸು ಬಸ್, ಕಾರಿನಲ್ಲಿ ಕೂತು ಸಾಗಿದರೆ ಸುಸ್ತಾಗುತ್ತಿದ್ದ ನಾನು ಪ್ರತಿದಿನ 200-300 ಕಿಲೋ ಮೀಟರ್ ಪ್ರಯಾಣಿಸಿದೆ ಎಂಬುದನ್ನು ಬೆಂಗಳೂರಿಗೆ ವಾಪಸ್ ಬಂದ ಬಳಿಕ ಲೆಕ್ಕಾಚಾರ ಹಾಕಿಕೊಂಡು ನನ್ನ ಬಗ್ಗೆ ನಾನೇ ಬೆರಗು ಬಡಿದು ಹೋದೆ. ಇವೆಲ್ಲವುದಕ್ಕೂ ಕಾರಣ ನಮ್ಮ ಪ್ರಯಾಣದುದ್ದಕ್ಕೂ ಹಾಡು, ಹಾಸ್ಯದೊಂದಿಗೆ ರಂಜಿಸುತ್ತಿದ್ದ ಸಜ್ಜಾದ್ ಕಾರ್ಗಿಲಿ, ಗುಡ್ಡಿ ಮತ್ತು ಮಹೇಶ್ ಪಾಂಡೆ. ಜೊತೆಗೆ ನನ್ನನ್ನೂ ಸೇರಿಸಿಕೊಳ್ಳಬಹುದು ಎಂಬ ನಂಬಿಕೆ ನನ್ನದು!
ಮೊದಲ ದಿನ(ಸೆಪ್ಟೆಂಬರ್ 9) ಶ್ರೀನಗರ ತಲುಪಿ ಅಲ್ಲಿಂದ ಮರುದಿನ ಮುಂಜಾನೆ ಕಾರ್ಗಿಲ್ ಕಡೆ ಸಾಗಿದೆವು. ಲಡಾಖ್ ಹವಾಮಾನಕ್ಕೆ ದೇಹ ಹೊಂದಿಕೊಳ್ಳಬೇಕಾದರೆ ಹೋದ ತರುವಾಯ ದೀರ್ಘ ವಿಶ್ರಾಂತಿ ಮುಖ್ಯ. ಮೊದಲೇ ಅದಕ್ಕೆ ತಕ್ಕುದಾದ ಪ್ಲ್ಯಾನ್ ಅನ್ನು ತಂಡದ ಆಯೋಜಕಿ ಗುಡ್ಡಿ ಮತ್ತು ಕಾರ್ಗಿಲ್ ಡೆಮಾಕ್ರೆಟಿಕ್ ಅಲೆಯನ್ಸ್(ಕೆಡಿಎ) ನಾಯಕ ಸಜ್ಜಾದ್ ಮಾಡಿಕೊಂಡಿದ್ದರು. ಕಾರ್ಗಿಲ್‌ನತ್ತ ಸಾಗುತ್ತಿದ್ದಂತೆ ಆಮ್ಲಜನಕದ ಕೊರತೆಯ ಅನುಭವ ಉಂಟಾಗಿತ್ತು, ಅದಕ್ಕೂ ಮುನ್ನವೇ ಬಹುತೇಕರು ದೇಹದಲ್ಲಿ ಆಮ್ಲಜನಕ ಹೆಚ್ಚಿಸಲು ಮುನ್ನೆಚ್ಚರಿಕೆಗಾಗಿ ಮಾತ್ರೆ ತೆಗೆದುಕೊಂಡಿದ್ದೆವು. ಸೆಪ್ಟೆಂಬರ್ 10ರಂದು ರಾತ್ರಿ ಕಾರ್ಗಿಲ್‌ನಲ್ಲಿ ತಂಗಿ ಮರುದಿನ(ಸೆ.11) ಮುಂಜಾನೆ 215 ಕಿಮೀಗೂ ಅಧಿಕ ದೂರದಲ್ಲಿರುವ ಲೇಹ್‌ನತ್ತ ಸಾಗಿದೆವು.

ಕಾರ್ಗಿಲ್‌ಗಿಂತ ವಿಭಿನ್ನವಾದ ಅನುಭವ ಲೇಹ್‌ನದ್ದು. ದಾರಿ ಮುಂದೆ ಸಾಗುತ್ತಿದ್ದಂತೆ ನಮಗೆ ಸುಸ್ತು ಹೆಚ್ಚಾಗುತ್ತಾ ಹೋಗುತ್ತಿತ್ತು. ಒಂದಿಬ್ಬರ ಆರೋಗ್ಯ ಏರುಪೇರಾಯಿತು. ವಿಪರೀತ ತಲೆ ನೋವು ಎಂದು ಲೇಹ್ ಹೋಟೆಲ್ ಕೋಣೆಯಿಂದ ಅರ್ಧ ದಿನ ಹೊರಗೇ ಬರಲಿಲ್ಲ. ಪ್ರಾರಂಭದಿಂದಲೇ ಹಿರಿಯ ಪತ್ರಕರ್ತ, ಲೇಖಕರು ಡಿ. ಉಮಾಪತಿ ಸರ್ ಅವರ ಸಲಹೆ ಪಡೆದುಕೊಂಡಿದ್ದ ನಾನು ಕೊಂಚ ಜಾಗರೂಕಳಾಗಿ ಹಿತಮಿತವಾಗಿ ನನ್ನ ಶಕ್ತಿಯನ್ನು ಖರ್ಚು ಮಾಡುತ್ತಿದ್ದೆ. ಎಲ್ಲಿ ಓಡಾಡಿ ವಿಡಿಯೋ ಮಾಡಬೇಕೋ, ಚಿತ್ರ ತೆಗಿಯಬೇಕೋ ಅಲ್ಲಿಗೆ ಮಾತ್ರ ನನ್ನ ದೇಹದ ಬಲವನ್ನು ಒಟ್ಟುಗೂಡಿಸಿಕೊಳ್ಳುತ್ತಿದ್ದೆ, ಉಳಿದೆಡೆ ಹಾಡು ಗುನುಗುತ್ತಾ, ಅನುಭವಿಗಳ ಮಾತಿಗೆ ಕಿವಿಯಾಗುತ್ತಾ, ನನ್ನ ಪುಟ್ಟ ಪುಸ್ತಕದಲ್ಲಿ ಅಲ್ಲಲ್ಲಿ ಗೀಚಿಕೊಳ್ಳುತ್ತಾ ಕೂತೆ. ಅದರಿಂದಾಗಿ high altitude sicknessನ ಅತಿ ಕೆಟ್ಟ ಲಕ್ಷಣ ಎಂದು ಪರಿಗಣಿಸಲಾಗುವ ವಿಪರೀತ ತಲೆನೋವು ನನ್ನ ಕಾಡಲಿಲ್ಲ. ಸಣ್ಣಗೆ ಎಲ್ಲೋ ಒಂದು ತಲೆ ನೋವು ಬಂದಾಗಲೇ ದೇಹಕ್ಕೆ ವಿಶ್ರಾಂತಿ ಕೊಟ್ಟೆ. ಆದರೂ ಏದುಸಿರು ತಲೆ ಸುತ್ತು ಸಹಜವಾಗಿತ್ತು, ಶೀತ-ಜ್ವರ ಮಾತ್ರ ಹಿಂದಿರುಗಿ ಬರುವವರೆಗೂ ಬೆನ್ನಿಗೆ ಬಿದ್ದ ಬೇತಾಳನಂತೆ ಇತ್ತು ಮತ್ತು ಈಗಲೂ ಇದೆ.
ಲಡಾಖ್ ಸಂಸ್ಕೃತಿ ಭಿನ್ನವಾದುದ್ದು ಲೇಹ್‌ನಲ್ಲಿ ಕಂಡ ಆಚರಣೆ, ಪ್ರಾರ್ಥನೆ ನನ್ನ ಮನಸೆಳೆದಿದ್ದು ನಿಜ. ಸೋನಮ್ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬೌದ್ಧರ ವಿಶೇಷ ಪ್ರಾರ್ಥನೆ ನಡೆಯುತ್ತಲೇ ಇತ್ತು. ಪ್ರತಿ ಪ್ರಾರ್ಥನೆ ವೇಳೆ, ನಾಮ ಜಪ ಮಾಡುವುದನ್ನು ಲೆಕ್ಕ ಹಾಕಲು ಜಪಮಣಿಗಳ ಬದಲಾಗಿ ಒಂದು ವಿಭಿನ್ನ ವಸ್ತುವನ್ನು ಕೈಯಲ್ಲಿ ಹೊಂದಿದ್ದರು. ಅದನ್ನು ಎಷ್ಟು ಬಾರಿ ತಿರುವಿದರೋ ಅಷ್ಟು ಬಾರಿ ಪ್ರಾರ್ಥನೆ ಸಲ್ಲಿಸಿದ ಲೆಕ್ಕವೆಂದರು. ಆ ಲೆಕ್ಕ ಹೇಗೆ ಎಂದು ಪ್ರಶ್ನಿಸಿದರೆ ಅದು ಮನಸ್ಸಲ್ಲಿ ಅನ್ನುತ್ತಾರೆ ಅಲ್ಲಿನ ಜನರು.

ನಾವು ಅಲ್ಲಿನ high altitudeಗೆ ಒಗ್ಗಿಕೊಳ್ಳುತ್ತಿರುವಾಗ ಅಲ್ಲಿನ ಜನರ ಮೈ ಹುಟ್ಟಿನಿಂದಲೇ ಆ ತಾಪಮಾನಕ್ಕೆ ಹೊಂದಿಕೊಂಡಿರುವಂತದ್ದು. ಆ ಚಳಿಯಲ್ಲೂ ಸುಡುವ ಬಿಸಿಲು. ಚರ್ಮ ಸುಟ್ಟಂತ ಅನುಭವ. ಅವೆಲ್ಲವುದಕ್ಕೂ ಹೊಂದಿಕೊಳ್ಳುವ ರೀತಿಯಲ್ಲೇ ಇತ್ತು ಲೇಹ್ ಜನರ ಉಡುಗೆ. ಈ ತಾಪಕ್ಕೆ ಕುತ್ತಿಗೆ ಮುಚ್ಚಿಕೊಂಡರೆ ಮೈ ಬಿಸಿ ಏರುವುದಲ್ಲವೇ ಎಂದು ಆಲೋಚಿಸಿ ಸಮೀಪ ಇದ್ದವರ ಬಳಿ ನನ್ನ ಅನುಮಾನ ಬಿಚ್ಚಿಟ್ಟೆ. ಆಗ ಅವರು ಹೇಳಿದ್ದು ಹೀಗೆ, “ಮೈಯನ್ನು ಈ ತಾಪಕ್ಕೆ ಒಡ್ಡಿದರೆ ಸುಡುವುದು ಖಂಡಿತ. ಅದಕ್ಕಾಗಿ ಅವರ ಕುತ್ತಿಗೆ, ಮೈ-ಕೈ ಮುಚ್ಚುವಂತೆ ಬಟ್ಟೆ ಹಾಕಿಕೊಳ್ಳುತ್ತಾರೆ. ಹಗಲಲ್ಲಿ ಚಳಿಯ ನಡುವೆ ಸುಡು ಬಿಸಿಲಿದ್ದರೂ ಅವರು ಮೈತುಂಬಾ ಬಟ್ಟೆ ಹಾಕಿಕೊಳ್ಳುವುದು ತಾಪದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು”
ನೀರಿನ ಬಗ್ಗೆ ನಮ್ಮ ತಂಡದವರು ಮೊದಲೇ ಒಂದು ಸಣ್ಣ ಭಯ ಹುಟ್ಟಿಸಿದ್ದರು. ಕಳೆದ ಬಾರಿ ಶ್ರೀನಗರ ಬಂದವರಿಗೆ ಅಲ್ಲಿನ ನೀರು ಕುಡಿದು ಹೊಟ್ಟೆ ಕೆಟ್ಟು ಹೋಗಿತ್ತು. ಅದರ ಎಚ್ಚರಿಕೆಯನ್ನು ಮೊದಲೇ ನೀಡಿದ್ದರು. ಊರು ಬದಲಾದಾಗ ಇವೆಲ್ಲ ಸಾಮಾನ್ಯ ಅಂದುಕೊಂಡಿದ್ದ ನಾನು ಬಾಯಾರಿಕೆ ಆದಾಗ ಯಾವ ನೀರೆಂದು ನೋಡದೆ ಕುಡಿದೆ. ಒಂದೆರಡು ದಿನ ಕಳೆದರೂ ಏನೂ ಆಗದ್ದು ಗಮನಿಸಿ, ನಂತರ ನೀರಿನಲ್ಲಿ ಆಯ್ಕೆ ಮಾಡುವುದನ್ನು ನಿಲ್ಲಿಸಿದೆ. ಬೆಂಗಳೂರು ಎಂದರೆ ಜನಸಾಗರ. ಇಲ್ಲಿ ರಾತ್ರಿ ಹಗಲೆಂಬುದಿಲ್ಲ. ವಾರಾಂತ್ಯದಲ್ಲಿ ಹಗಲಿಗಿಂತ ಅಧಿಕ ಮಂದಿ ಹೊರ ಕಾಣುವುದು ರಾತ್ರಿ ವೇಳೆ. ಆದರೆ ಲೇಹ್, ಕಾರ್ಗಿಲ್ ಕೊಂಚ ಭಿನ್ನವಾದುದ್ದು. ಇಲ್ಲಿ ಪಟ್ಟಣಗಳಲ್ಲಿ ಕೊಂಚ ಜನ ಕಾಣುತ್ತಾರೆ. ಅದನ್ನು ಹೊರತುಪಡಿಸಿ ಪ್ರವಾಸಿ ತಾಣಗಳಲ್ಲಿ ಹೊರ ರಾಜ್ಯದ ಜನ ಸೇರಿರುತ್ತಾರೆ. ಆದರೆ ನಾವು ಕಾರ್ಗಿಲ್‌ನಿಂದ ಲೇಹ್, ಲೇಹ್‌ನಿಂದ ಕಾರ್ಗಿಲ್ ಪ್ರಯಾಣಿಸುವಾಗ ದಾರಿಯಲ್ಲಿ ಒಂದಿಬ್ಬರು ಸಿಕ್ಕಿದ್ದೂ ತೀರಾ ಅಪರೂಪ.
ನಾವು ಲಡಾಖ್ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ಲೇಹ್, ಕಾರ್ಗಿಲ್‌ಗೆ ಭೇಟಿ ನೀಡಿದ್ದ ಕಾರಣ ನಮಗೆ ಹೆಚ್ಚಾಗಿ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಲೇಹ್‌ನಲ್ಲಿ ಅರ್ಧ ದಿನ ಬಿಡುವು ಮಾಡಿಕೊಂಡು ಶಾಂತಿ ಸ್ತೂಪ ಮತ್ತು ಲೇಹ್ ಪ್ಯಾಲೆಸ್‌ಗೆ ಭೇಟಿ ನೀಡಿದೆವು. ಅಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದಿದ್ದರೂ ಒಂದೆರಡು ಸ್ಥಳವಾದರೂ ನೋಡಲಾಯಿತು ಎಂಬ ತೃಪ್ತಿಯಿದೆ. ಶಾಂತಿ ಸ್ತೂಪದಲ್ಲಿ(ಬೌದ್ಧ ಬಿಳಿ ಗುಮ್ಮಟದ ಸ್ತೂಪ) ಒಂದು ಅರ್ಧ ತಾಸು ಹಾಗೆಯೇ ಕೂತಿರಬೇಕೆನಿಸಿದರೂ ನಮ್ಮ ಸಮಯದ ಮಿತಿ ಅವಕಾಶ ನೀಡಲಿಲ್ಲ. ಇದನ್ನು 1991ರಲ್ಲಿ ಜಪಾನಿನ ಬೌದ್ಧ ಸನ್ಯಾಸಿ ಗ್ಯೋಮಿಯೊ ನಕಮುರಾ ಅವರು 2500 ವರ್ಷಗಳ ಬೌದ್ಧಧರ್ಮದ ಆಚರಣೆಯ ಭಾಗವಾಗಿ ವಿಶ್ವ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಿರ್ಮಿಸಿದರು. ಅಲ್ಲಿಂದ ನೇರವಾಗಿ ನಮ್ಮ ವಾಹನ ಸಾಗಿದ್ದು ಲೇಹ್ ಪ್ಯಾಲೆಸ್‌ಗೆ. ಪ್ಯಾಲೆಸ್ ಒಳಗಡೆ ಮೆಟ್ಟಿಲು ಹತ್ತಬೇಕು ಎಂದಾಕ್ಷಣ ನನ್ನಿಂದ ಸಾಧ್ಯವಿಲ್ಲ ಎಂದು ನಿಂತುಬಿಟ್ಟೆ. ಆದರೆ 70ರ ಆಸುಪಾಸಿನ ಗಂಗಾ ಅವರು ಉತ್ಸಾಹದಿಂದ ಮುಂದುವರಿದಿದ್ದು ನೋಡಿ ನಾನೂ ಸ್ಪೂರ್ತಿಗೊಂಡು ಮುಂದೆ ಸಾಗಿದೆ. ಒಳಗೆ ಎಲ್ಲ ಸ್ಥಳಗಳಲ್ಲಿ ಚಿತ್ರ ತೆಗೆಯಲು ಅವಕಾಶವಿರಲಿಲ್ಲ.

ಲೇಹ್‌ನಿಂದ ಕಾರ್ಗಿಲ್ ಸಾಗುವ ದಾರಿ ಮಧ್ಯದಲ್ಲಿ ಗುರುದ್ವಾರ ಶ್ರೀ ಪತ್ತರ್ ಸಾಹಿಬ್ ನೋಡಲು 15 ನಿಮಿಷಗಳ ಅವಕಾಶವನ್ನು ನಮ್ಮ ತಂಡದ ಸಮಯ ನಿರ್ವಾಹಕಿ ಗುಡ್ಡಿ ನೀಡಿದ್ದರು. ಗುರುದ್ವಾರ ಶ್ರೀ ಪತ್ತರ್ ಸಾಹಿಬ್ ಲಡಾಖ್‌ನ ಲೇಹ್‌ನಲ್ಲಿ ಇರುವ ಒಂದು ಪ್ರಸಿದ್ಧ ಸಿಖ್ ಗುರುದ್ವಾರವಾಗಿದ್ದು ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. 1517ರಲ್ಲಿ ಸಿಖ್ ಧರ್ಮಗುರು ಗುರು ನಾನಕ್ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಓರ್ವ ರಾಕ್ಷಸ ನಾನಕರನ್ನು ಕೊಲ್ಲಲು ಯತ್ನಿಸುತ್ತಾನೆ. ಒಂದು ದೊಡ್ಡ ಶಿಲೆಯನ್ನು ಅವರ ಮೇಲೆ ಎಸೆಯುತ್ತಾನೆ. ಆದರೆ ಆ ಶಿಲೆ ನಾನಕರನ್ನು ಸ್ಪರ್ಶಿಸುತ್ತಿದ್ದಂತೆ ಮೃದುವಾಗುತ್ತದೆ. ಅವರು ಕುಳಿತ ಅಚ್ಚು ಶಿಲೆಯಲ್ಲಿ ಮೂಡುತ್ತದೆ ಎಂಬ ಕಥೆಯಿದೆ.

ಕೆಲವು ಸಲ ಉತ್ಸಾಹದ ಕೆಲಸದಿಂದ ತಲೆ ಸುತ್ತಿ ಬಿದ್ದು ಎದ್ದಿದ್ದು ಆಯಿತು. ಇದು ನಡೆದಿದ್ದು ಚೀನಾ-ಭಾರತ ಗಡಿ ಭಾಗವಾದ ರೆಝಾಗ್‌ಲಾದಲ್ಲಿ. ಸಮುದ್ರಮಟ್ಟಕ್ಕಿಂತ 16,000 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಹೇಗಾದರೂ ನಾನು ಮಾತನಾಡಿ ವಿಡಿಯೋ ಮಾಡಲೇಬೇಕು ಎಂಬ ಹಠದಲ್ಲಿ, ತಡವರಿಸಿ ಮಾತಾಡಿ ಓಡಾಡಿ ಇರುವ ಒಂದಿಷ್ಟು ಶಕ್ತಿಯನ್ನು ವಿನಿಯೋಗಿಸಿಬಿಟ್ಟಿದ್ದೆ. ಎಲ್ಲರೂ ನನಗಾಗಿ ಕಾಯುವಾಗ ನಾನು ಶೌಚಾಲಯಕ್ಕೆ ಅವಸರದಲ್ಲಿ ಹೋದೆ. ಕಿರುದಾಗಿದ್ದ ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ತಲೆ ತಿರುಗಿ, ಕಾಲು ಜಾರಿ ಕೆಳಗೆ ಬಿದ್ದುಬಿಟ್ಟೆ. ಎದ್ದು ಸುತ್ತ ನೋಡಿ ಧೂಳು ಕೊಾಡವಿ ಬಂದೆ. ಬೆಂಗಳೂರಿಗೆ ಹೋಗುವವರೆಗೂ ಯಾರಿಗೂ ಹೇಳುವುದು ಬೇಡ ಎಂದುಕೊಂಡ ನಾನು ಕಾಲು ನೋವು ಕಾಣಿಸಿಕೊಂಡಾಗ ಪ್ರಯಾಣದಲ್ಲಿ ನನ್ನ ನೆಚ್ಚಿನ ಗೆಳತಿಯಾದ ಸುಮೀರಾ ಬಳಿ ಮೆಲ್ಲನೆ ವಿಷಯ ತಿಳಿಸಿದೆ.
ಭಯಬಿದ್ದ ಸುಮೀರಾ ಅಲ್ಲೇ ಇದ್ದ ಮಹೇಶ್‌ಗೆ ವಿಷಯ ತಿಳಿಸಿಬಿಟ್ಟಳು. ಯಾರ ಬಳಿಯೂ ಹೇಳಬೇಡಿ, ನನಗೇನೂ ಆಗಿಲ್ಲ ಅಂತ ಇಬ್ಬರಿಗೂ ತಿಳಿಸಿ ಮುಂದೆ ಸಾಗಿದೆವು. ಆದರೆ ಸುಮೀರಾ ಬಿಡಬೇಕಲ್ಲ, ತನ್ನ ಜವಾಬ್ದಾರಿ ಎಂಬಂತೆ ಸಜ್ಜಾದ್‌ಗೂ ಟಿಪ್ಪಣಿ ಒಪ್ಪಿಸಿದಳು. ಅವರ ಉಪಚಾರವಾಯಿತು, ನನಗೇನೂ ಆಗಿಲ್ಲ ಎಂದು ಖಾತರಿಪಡಿಸಿದೆ. ಪೂರ್ಣಿಮಾ ಅವರಿಗೆ ನಾನೇ ತಿಳಿಸುವುದಾಗಿಯೂ ಹೇಳಿ ಮನವೊಲಿಸಿ ಪ್ರಯಾಣ ಮುಂದುವರೆಸಿದೆವು. ಅಷ್ಟರಲ್ಲಿ ನನ್ನ ಜ್ವರ ಇನ್ನಷ್ಟೂ ಹೆಚ್ಚಾಗಿತ್ತು, ಇತ್ತ ಚಳಿ-ಉರಿ ಬಿಸಿಲು ಜೊತೆ ಸೇರಿ ನಾನು ಅನಿವಾರ್ಯವಾಗಿ ರಾತ್ರಿ ಗುಳಿಗೆ ನುಂಗಿ ಮಲಗುವಂತೆ ಮಾಡಿತು. ಆದರೆ ಶಿಖರಗಳ ಸೌಂದರ್ಯ ಮಾತ್ರ ನನ್ನ ಕನಸಲ್ಲೂ ಕಾಡಿದ್ದು ನಿಜ. ಲೇಹ್ ಪ್ರವಾಸ ಮುಗಿಯಿತು, ಮತ್ತೆ ಕಾರ್ಗಿಲ್‌ನತ್ತ ಮುಖ ಮಾಡಿದೆವು. ಅಲ್ಲಿ ಮತ್ತೆ ಒಂದು ರಾತ್ರಿ ತಂಗಿ(ಸೆ.14) ಶ್ರೀನಗರ ವಿಮಾನ ನಿಲ್ದಾಣಕ್ಕೆ ಮರುದಿನ ತಲುಪಿದೆವು. ಅಷ್ಟರಲ್ಲಿ ಶಿಖರದ ನಡುವೆ ಯಾರೋ “ಅಭೀ ನಾ ಜಾವೋ ಛೋಡ್ ಕರ್, ಕೆ ದಿಲ್ ಅಭೀ ಭರಾ ನಹೀ” (ಅಗಲಿ ಹೋಗದಿರು ನಲ್ಲೆ ಈಗಲೇ, ಮನಸು ತಣಿದು ತುಂಬಿಲ್ಲ ಇನ್ನೂ ಇನ್ನೂ..) ಎಂದು ಹಾಡಿದಂತಾಯಿತು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.