'ಸೇತುವೆಗಾಗಿ ಐದು ದಶಕಗಳ ಕಾಲ ಹೋರಾಟ ಮಾಡಿದ ಆ ಭಾಗದ ಜನರನ್ನು ಕೇಳದೆ ಸಿಗಂದೂರು ಹೆಸರನ್ನು ಇಟ್ಟಿದ್ದು ಸರಿಯೇ? ಸಿಗಂದೂರಿಗೂ ಈ ಸೇತುವೆಗೂ ಸಂಬಂಧವೇನು?' ಎಂದು ಪ್ರಶ್ನಿಸುತ್ತಿದ್ದಾರೆ ಸ್ಥಳೀಯರು.
ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕರೂರು ಭಾಗಕ್ಕೆ ಹೋಗುವುದಕ್ಕೆ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ಸಿಗಂದೂರು ಶ್ರೀ ಕ್ಷೇತ್ರ ಚೌಡೇಶ್ವರಿ ಸೇತುವೆ ಎಂದು ಕರೆಯಲು ಹೊರಟಿರುವುದು ವಿವಾದಕ್ಕೆ ಗುರಿಯಾಗಿದೆ.
“ಈ ಸೇತುವೆಗೂ ಸಿಗಂದೂರಿಗೂ ಯಾವುದೇ ಸಂಬಂಧವಿಲ್ಲ, ಆದರೂ ಕೆಲವು ರಾಜಕಾರಣಿಗಳು ಸಿಗಂದೂರು ಹೆಸರನ್ನೇ ಪ್ರಸ್ತಾಪಿಸಿದ್ದಾರೆ” ಎಂದು ಅನೇಕ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
‘ಶರಾವತಿ ತೂಗು ಸೇತುವೆ’ ಎಂಬ ಹೆಸರನ್ನು ಇಡಬೇಕು ಎಂಬ ಆಗ್ರಹ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ. ಇದರ ಜೊತೆಗೆ ‘ಅಂಬಾರಗೋಡ್ಲು- ಕಳಸವಳ್ಳಿ ಸೇತುವೆ’ ಅಥವಾ ‘ಚೆನ್ನಭೈರಾದೇವಿ ಸೇತುವೆ’ ಎಂಬ ಹೆಸರುಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
“ಸಿಗಂದೂರು ಸೇತುವೆಯ ಉದ್ಘಾಟನೆಯನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಜುಲೈ 14ರಂದು ನೆರವೇರಿಸಲಿದ್ದಾರೆ” ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಚಾರ ಮಾಡಿದ್ದಾರೆ. ಸ್ಥಳೀಯರ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ ಸಂಸದರು ತರಾತುರಿ ತೋರಿದ್ದೇಕೆ? ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳೇನಾದರೂ ಇವೆಯೇ? ಎಂದು ಚರ್ಚಿಸಲಾಗುತ್ತಿದೆ.
“ರಾಘವೇಂದ್ರ ಅವರು ಹೆಸರು ಘೋಷಿಸುವ ಮುನ್ನಾ ದಿನ, ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದರು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಲು ಯತ್ನಿಸಿದ್ದನ್ನು ಮಧು ಬಂಗಾರಪ್ಪ ಸೂಚ್ಯವಾಗಿ ಪ್ರಸ್ತಾಪಿಸಿದ್ದರು. ಈಡಿಗ ಸಮುದಾಯದ ಉಪಜಾತಿಯಾದ ‘ದೀವರು’ ಹಿಡಿತ ಹೊಂದಿರುವ ಸಿಗಂದೂರು ಶ್ರೀ ಕ್ಷೇತ್ರವನ್ನು ಬಿಜೆಪಿ ಮತ್ತು ಸಂಘಪರಿವಾರ ಕಬ್ಜಾ ಮಾಡಲು ಹವಣಿಸಿವೆ ಎಂಬ ಹಳೆಯ ವಿವಾದವನ್ನು ಪ್ರಸ್ತಾಪಿಸಿದ ಕೂಡಲೇ ಸಂಸದರು ಜಾಗೃತರಾದರು. ತೇಪೆ ಹಾಕುವ ಕೆಲಸಕ್ಕೆ ಮುಂದಾದ ರಾಘವೇಂದ್ರ ಅವರು ‘ಸಿಗಂದೂರು ಶ್ರೀ ಕ್ಷೇತ್ರ ಚೌಡೇಶ್ವರಿ ಸೇತುವೆ’ ಹೆಸರನ್ನು ಘೋಷಿಸಿಯೇ ಬಿಟ್ಟರು” ಎನ್ನುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರಾದ ಜಿ.ಟಿ.ಸತ್ಯನಾರಾಯಣ ಕರೂರು.

ಇದನ್ನೂ ಓದಿರಿ: ಮೂಡಬಿದ್ರೆ | ಪಣಪಿಲದ ಜನರ ಕತ್ತಲೆಯ ಬದುಕು: ಮೂಲ ಸೌಕರ್ಯಕ್ಕಾಗಿ 50 ವರ್ಷಗಳಿಂದ ಹೋರಾಟ!
“ಸೇತುವೆ ಹೆಸರನ್ನು ತರಾತುರಿಯಲ್ಲಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರು ಇಡಬೇಕೆಂಬ ಆಗ್ರಹ ಬಹಳ ಹಿಂದಿನದ್ದು. ಆದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಹೀಗಿರುವ ಈ ವಿಚಾರದಲ್ಲಿ ಸಂಸದರಿಗೇಕೆ ಇಷ್ಟು ಅವಸರ?” ಎಂದು ಪ್ರಶ್ನಿಸುತ್ತಾರೆ ಅವರು.
ಸೇತುವೆಗಾಗಿ ಐದು ದಶಕಗಳ ಕಾಲ ಹೋರಾಟ ಮಾಡಿದ ಆ ಭಾಗದ ಯಾರನ್ನೂ ಕೇಳದೆ ಕೆಲವು ರಾಜಕಾರಣಿಗಳು ಯೋಜನಾಬದ್ಧವಾಗಿ ‘ಸಿಗಂದೂರು ಸೇತುವೆ’ ಎಂದು ಪ್ರಚಾರ ಮಾಡತೊಡಗಿದ್ದಾರೆ. ಆದರೆ ಸೇತುವೆಗೂ ಸಿಗಂದೂರಿಗೂ ಯಾವುದೇ ಸಂಬಂಧವಿಲ್ಲ. ಹಾಗೆ ಕರೆಯುವುದು ಸ್ಥಳೀಯರಿಗೆ ಮಾಡುವ ಅವಮಾನ ಎಂಬುದು ಹಲವರ ವಾದ.
ದ್ವೀಪದ ಜನರ ಗೋಳಿನ ಇತಿಹಾಸ
1942ರಿಂದ 1946ರ ನಡುವೆ ಹಿರೇಭಾಸ್ಕರ (ಮಡೇನೂರು) ಡ್ಯಾಮ್ ಕಟ್ಟಲಾಯಿತು. ಶರಾವತಿ ಕಣಿವೆಯಲ್ಲಿ ತಲೆ ಎತ್ತಿದ ಮೊದಲ ಜಲಾಶಯ ಅದಾಗಿತ್ತು. ನಂತರದಲ್ಲಿ 1963- 67ರ ನಡುವೆ ಎರಡನೇ ಡ್ಯಾಮ್ ಲಿಂಗನಮಕ್ಕಿಯಲ್ಲಿ ನಿರ್ಮಾಣವಾಯಿತು. ಮಡೇನೂರು ಡ್ಯಾಮ್ ಮುಳುಗಡೆಯಾಗಿ ಅದರ ಮೇಲೆ 20 ಅಡಿ ನೀರು ನಿಂತುಕೊಂಡಿತು. 1969ರಲ್ಲಿ ಲಾಂಚ್ ತೆರೆದು ದ್ವೀಪದ ಜನರ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು. ಇಲ್ಲಿಯತನಕ ಸುಮಾರು 56 ವರ್ಷಗಳಾಗಿದ್ದು, ಲಾಂಚ್‌ಗೆ ತಿಲಾಂಜಲಿ ಇಡುವ ಕಾಲ ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಸುಮಾರು 2.4 ಕಿಮೀ ಉದ್ದದ ಸೇತುವೆ ನಿರ್ಮಿಸಲಾಗಿದೆ. ಶರಾವತಿ ಹಿನ್ನೀರಿನ ದ್ವೀಪ ಪ್ರದೇಶದಲ್ಲಿರುವ ಸುಮಾರು 20,000 ಜನರಿಗಾಗಿಯೇ ಈ ಸೇತುವೆ ಕಟ್ಟಲಾಗಿದೆ. ಸಿಗಂದೂರು ಕ್ಷೇತ್ರದ ಹೆಸರು ಚಾಲ್ತಿಗೆ ಬಂದಿದ್ದು ಇತ್ತೀಚಿನ ವರ್ಷಗಳಲ್ಲಷ್ಟೇ ಎಂಬುದು ಸ್ಥಳೀಯರನೇಕರ ಅಭಿಪ್ರಾಯ.
2004ರಿಂದೀಚೆಗೆ ಸಿಗಂದೂರು ದೇವಾಲಯ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು. ಆದರೆ ದ್ವೀಪಕ್ಕೆ ಸುಮಾರು 55 ವರ್ಷಗಳ ಇತಿಹಾಸವಿದೆ. ಇಲ್ಲಿನ ಲಾಂಚ್ ಕಾರಣಕ್ಕೂ, ಧಾರ್ಮಿಕ ಉದ್ದೇಶಗಳಿಗೂ ಜನ ಬರಲಾರಂಭಿಸಿದ್ದು ನಿಜ. ನೈಸರ್ಗಿಕ ಟೂರಿಸಂ ಬೆಳೆದು ಶ್ರೀಕ್ಷೇತ್ರವೂ ಅಭಿವೃದ್ಧಿಯಾಗಿದ್ದೂ ನಿಜ. ಆದರೆ ಧಾರ್ಮಿಕ ಕ್ಷೇತ್ರದ ಹೆಸರಿಗಿಂತ ನಮ್ಮ ಹೋರಾಟದ ಬದುಕನ್ನು ಸೇತುವೆ ಮಾರ್ಧನಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ತುಮರಿಯ ನಿವಾಸಿ ಅಕ್ಷಯ್ ಅವರು ‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿ, “ಈ ಸೇತುವೆಗಾಗಿ ಹತ್ತಾರು ವರ್ಷ ಕರೂರು ಭಾಗದ ಜನರು ಹೋರಾಟ ಮಾಡಿದ್ದಾರೆ. ಈ ಜನರ ನಿಟ್ಟುಸಿರು ಇಲ್ಲಿದೆ, ಗರ್ಭಿಣಿಯರ ಸಾವು-ನೋವಿದೆ, ವಿದ್ಯಾರ್ಥಿಗಳ ಪರದಾಟವಿದೆ. ರೋಗಪೀಡಿತರ ಅಸಹಾಯತೆ ನೆನಪಾಗುತ್ತದೆ. ಹೀಗಾಗಿ ಈ ಸೇತುವೆಗೆ ಶರಾವತಿ ತೂಗು ಸೇತುವೆ ಎಂದೇ ನಾಮಕರಣ ಮಾಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?
ಕರೂರು ಹೋಬಳಿಯ ಹೊಳಗೆರೆ ನಿವಾಸಿ ಭರತ್‌ಕುಮಾರ್ ವಿ.ಪಿ. ಪ್ರತಿಕ್ರಿಯಿಸಿ, “ಕಳಸವಳ್ಳಿ ಮತ್ತು ಅಂಬಾರಗೋಡ್ಲು ನಡುವೆ ಸೇತುವೆ ಇದೆ. ಸರ್ಕಾರಿ ದಾಖಲೆಯಲ್ಲೂ ಕಳಸವಳ್ಳಿ ಮತ್ತು ಅಂಬಾರಗೋಡ್ಲು ಸೇತುವೆ ಎಂದೇ ದಾಖಲಿಸಲಾಗಿದೆ. ಲಾಂಚ್ ಓಡಾಡುವಾಗಲೂ ಇದೇ ಹೆಸರು ಇತ್ತು. ಶರಾವತಿ ನದಿ ಇಲ್ಲಿ ಹರಿಯುತ್ತಿದೆ. ರಾಜ್ಯ ಸರ್ಕಾರಕ್ಕೆ ಶರಾವತಿಯಿಂದ ಕೋಟ್ಯಂತರ ಆದಾಯ ಬರುತ್ತಿದೆ. ಈ ಎಲ್ಲ ಕಾರಣಗಳಿಂದ ನಮ್ಮ ಸೇತುವೆಯ ಹೆಸರಲ್ಲಿ ಶರಾವತಿ ಅಸ್ಮಿತೆ ಇರಬೇಕು” ಎಂದರು.
ಕುದ್ರೂರು ನಿವಾಸಿ ಸುನೀಲ್ ಕುಮಾರ್ ಅವರು ಪ್ರತಿಕ್ರಿಯಿಸಿ, “ಕಳಸವಳ್ಳಿ- ಅಂಬಾರಗೋಡ್ಲು ಬಂದರು ಒಳನಾಡು ಜಲಸಾರಿಗೆ ಎಂದೇ ಲಾಂಚ್‌ಗೆ ಹೆಸರಿದೆ. ಶರಾವತಿ ಹೆಸರಾದರೂ ಇಡಬಹುದು. ಅಥವಾ ಕಳಸವಳ್ಳಿ- ಅಂಬಾರಗೋಡ್ಲು ಎಂದಾದರೂ ಉಳಿಸಿಕೊಳ್ಳಬಹುದು. ಯಡಿಯೂರಪ್ಪನವರು ತಮ್ಮ ಬಜೆಟ್‌ನಲ್ಲಿ ಯೋಜನೆಯನ್ನು ಘೋಷಿಸುವಾಗಲೂ ಕಳಸವಳ್ಳಿ-ಅಂಬಾರಗೋಡ್ಲು ಎಂದೇ ನಮೂದಿಸಿದ್ದರು” ಎಂದು ವಿವರಿಸಿದರು.
ತುಮರಿಯ ಜಿ.ಟಿ.ಸತ್ಯನಾರಾಯಣ ಅವರು, “ಶಿವಮೊಗ್ಗ ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯಕ್ಕೆ ಶಿವಪ್ಪ ನಾಯಕರ ಹೆಸರು ಇಟ್ಟಿದ್ದಾರೆ. ಶಿವಪ್ಪ ನಾಯಕರಂತೆಯೇ ಕೇಳಿ ಬರುವ ಮತ್ತೊಂದು ಹೆಸರು ಚೆನ್ನಭೈರಾದೇವಿ. ಶರಾವತಿ ದಂಡೆಯ ಶೇ. 75ರಷ್ಟು ಭಾಗವನ್ನು 55 ವರ್ಷಗಳ ಕಾಲ ಆಳ್ವಿಕೆ ನಡೆಸಿದವರು ಭೈರಾದೇವಿ. ಐತಿಹಾಸಿಕ ಹೆಸರನ್ನು ಇಡುವುದಾದರೆ ಚೆನ್ನಭೈರಾದೇವಿ ಹೆಸರನ್ನು ಪರಿಗಣಿಸಬಹುದು. ಅಥವಾ ಪ್ರಾಚೀನ ಕಾಲದಿಂದಲೂ, ಮಡೇನೂರು ಡ್ಯಾಮ್ ಬರುವ ಮುಂಚಿನಿಂದಲೂ ಅಂಬಾರಗೋಡ್ಲು- ಕಳಸವಳ್ಳಿಯ ಮಾರ್ಗವಿದೆ. ಇದನ್ನು ಅಂಬಾರಗೋಡ್ಲು ದೋಣಿಕಡವು ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ ಇದೇ ಹೆಸರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಯಾವುದೇ ಚರ್ಚೆಯನ್ನು ಏಕೆ ಮಾಡಿಲ್ಲ ಎಂಬುದೇ ಸದ್ಯದ ಪ್ರಶ್ನೆ” ಎಂದರು.
ಸಿಗಂದೂರು ಕ್ಷೇತ್ರದ ಮೇಲೆ ಬೇಸರವಿದೆಯೇ?
ಸಿಗಂದೂರು ಹೆಸರನ್ನು ಇಡುವುದಕ್ಕೆ ಬೇರೆ ಬೇರೆ ಜನವರ್ಗದಿಂದ ಬರುತ್ತಿರುವ ಆಕ್ಷೇಪಗಳಿಗೆ ಇನ್ನಷ್ಟು ಕಾರಣಗಳಿವೆ. ಸಿಗಂದೂರು ಕ್ಷೇತ್ರವು ಒಂದು ಕುಟುಂಬದ ಹಿಡಿತದಲ್ಲಿದ್ದರೂ, ಒಳ್ಳೆಯ ಆದಾಯ ಹೊಂದಿದ್ದರೂ ದೇವಾಲಯದ ಟ್ರಸ್ಟ್‌ನ ವತಿಯಿಂದ ಸಾರ್ವಜನಿಕ ಚಟುವಟಿಕೆಗಳು ಕಳೆದ 50 ವರ್ಷಗಳಲ್ಲಿ ನಿರ್ಣಾಯಾತ್ಮಕವಾಗಿ ನಡೆದಿಲ್ಲ ಎಂಬ ಅಸಮಾಧಾನವು ಅನೇಕ ಮುಳುಗಡೆ ಸಂತ್ರಸ್ತರಲ್ಲಿ ಇದೆ.
ಇದನ್ನೂ ಓದಿರಿ: ಆಫ್ರಿಕಾದಿಂದ ಉತ್ತರ ಕರ್ನಾಟಕದವರೆಗೆ ‘ಅಳ್ಳಿ ಬವ್ವ’ ಸಂಸ್ಕೃತಿ ಪಥ; ಇದು ಮೊಹರಂ ವಿಶೇಷ
ಈ ಸೇತುವೆಯು ಸಿಗಂದೂರಿಗೆ ಬರುವ ಭಕ್ತರಿಗಾಗಿ ಆದದ್ದಲ್ಲ; ಇಲ್ಲಿನ ಜನರಿಗಾಗಿ ಆಗಿದೆ. ನಮ್ಮ ಹೋರಾಟದ ನೆನಪುಗಳು ಈ ಸೇತುವೆಯೊಂದಿಗೆ ಸದಾ ಇರಬೇಕು. ಸೇತುವೆಯ ಹೆಸರು ನೆನೆದಾಗಲೆಲ್ಲ ನಮ್ಮ ಸಂಕಟದ ಧ್ವನಿ ಹೊಮ್ಮುತ್ತಿರಬೇಕು ಎಂದು ಯೋಚಿಸುತ್ತಿರುವುದರಲ್ಲಿ ಅರ್ಥವಿದೆ. ಸ್ಥಳೀಯರ ಆಗ್ರಹಕ್ಕೆ ಸರ್ಕಾರ ಕಿವಿಯಾಗುತ್ತದೆಯೇ ಎಂಬುದಷ್ಟೇ ಸದ್ಯದ ಕುತೂಹಲ. ಯಾಕೆಂದರೆ ಜುಲೈ 14ಕ್ಕೆ ಸೇತುವೆಯನ್ನು ಉದ್ಘಾಟಿಸಲಾಗುತ್ತಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
ಇದರಲ್ಲಿ ಯಾವುದೇ ಸ್ಥಳೀಯರ ವಿರೋಧ ಖಂಡಿತ ಇರಲಿಲ್ಲ ಯಾರೋ ಒಬ್ಬ ಮುಖಂಡರು ಹೇಳಿದ್ರು ರಾಜಕೀಯ ಮುಖಂಡರು ಅಂತ ಹೇಳಿದ ತಕ್ಷಣ ಇದನ್ನು ವರದಿ ಮಾಡುವುದು ಸರಿಯಲ್ಲ ನಿಮ್ಮ ಪತ್ರಿಕೆ ಘನತೆ ಯನ್ನು ಕಳೆದುಕೊಳ್ಳುತ್ತಿದೆ ಅಷ್ಟೇ
ಯಾವುದೇ ಸುದ್ದಿಯನ್ನು ವಿಮರ್ಶೆ ಮಾಡದೆ ಪ್ರಚಾರ ಮಾಡುವುದು ಪ್ರಚುರಪಡಿಸುವುದು ಸುದ್ದಿಯ ನಿಖರತೆಗೆ ಮಾಡಿದ ದ್ರೋಹ