‘ಮನೆ-ಮನೆಗೆ ಪೊಲೀಸ್’ ಯೋಜನೆಗೆ ಗೃಹ ಸಚಿವರಿಂದ ಚಾಲನೆ: ಏನಿದು ಯೋಜನೆ?

Date:

Advertisements
ಸದ್ಯ ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ 10 ರಿಂದ 15 ಸಾವಿರ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಈ ನಡುವೆಯೇ ಗೃಹ ಸಚಿವರು ದೇಶದಲ್ಲಿ ಇದೇ ಮೊದಲು ಎಂಬಂತೆ 'ಮನೆ-ಮನೆಗೆ ಪೊಲೀಸ್' ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದ್ದಾರೆ. ಇದು ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾಯಬೇಕಿದೆ.  

ಇನ್ನು ಮುಂದೆ ನಿಮ್ಮ ಮನೆಗೂ ಪೊಲೀಸರು ಬರಲಿದ್ದಾರೆ. ಹೌದು. ಹಾಗಂತ ನೀವು ಅದಕ್ಕೆ ಭಯ, ಆತಂಕಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಇಂದಿನಿಂದ(ಜುಲೈ 18) ಕರ್ನಾಟಕದಲ್ಲಿ ಅಧಿಕೃತವಾಗಿ ‘ಮನೆ-ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಗೆ ಪೊಲೀಸ್ ಇಲಾಖೆ ಚಾಲನೆ ನೀಡಿದೆ.

ಬೆಂಗಳೂರಿನ ಗೋವಿಂದರಾಜಪುರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಗೋವಿಂದರಾಜನಗರ ಶಾಸಕರಾದ ಪ್ರಿಯಕೃಷ್ಣ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಎಸ್‌ಪಿಗಳ ಜೊತೆಯೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ್ದಾರೆ.

mane 3

ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, “ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಇಡೀ ದೇಶದಲ್ಲಿ ಇದೇ ಮೊದಲು. ಈ ವಿನ್ಯಾಸದ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಸಹಾಯವಾಗಲಿದೆ” ಎಂದು ತಿಳಿಸಿದರು.

“ಪೊಲೀಸರು ಜನಸ್ನೇಹಿ ಆಗಬೇಕು ಎಂದು ಈ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದೇವೆ. ನಾವೇ ಜನರ ಮನೆ ಬಾಗಿಲಿಗೆ ಕಷ್ಟ ಕೇಳೋಣ ಅಂತ ತೀರ್ಮಾನ ಮಾಡಿದ್ದೇವೆ. ಪ್ರತಿ ಠಾಣೆಯ ವ್ಯಾಪ್ತಿಯಲ್ಲಿ ಈ ಕೆಲಸ ಆಗಬೇಕು. ಬೀಟ್ ಪೊಲೀಸರು ಈ ಕೆಲಸವನ್ನು ಮಾಡಬೇಕು. ಯಾರ ಮನೆಯಲ್ಲಿ ಯಾರಿದ್ದಾರೆ, ಹೊಸದಾಗಿ ಬಂದಿದ್ದಾರ, ಬಾಡಿಗೆಗೆ ಇದ್ದಾರೆಯೇ, ಅವರು ಏನ್ ಕೆಲಸ ಮಾಡ್ತಾರೆ ಎಂಬ ಮಾಹಿತಿ ಕಲೆಹಾಕಿದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲರ ಬಗ್ಗೆ ಡೇಟಾ ಬ್ಯಾಂಕ್ ನಮ್ಮ ಬಳಿ ಇರುತ್ತದೆ. ಪೊಲೀಸರು ಬಂದಾಗ ಜನರು ಕಷ್ಟಸುಖ ಹೇಳಬಹುದು. ಏನಾದ್ರೂ ತೊಂದರೆ ಆಗ್ತಾ ಇದ್ದರೆ ಹೇಳಬಹುದು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಬಹುದು. ಜನಸ್ನೇಹಿ ಪೊಲೀಸರ ಜೊತೆಗೆ ಶಾಂತಿ ಕಾಪಾಡಲು ಈ ಕಾರ್ಯಕ್ರಮ ಸಹಾಯ ಆಗುತ್ತದೆ. ನಿಮ್ಮ ಮನೆಗೆ ಬಂದಾಗ ನಿಮ್ಮ ಹೆಸರನ್ನು ನಮೂದಿಸಿಕೊಳ್ಳುತ್ತಾರೆ. ಬಳಿಕ ಅದನ್ನ ಡಿಜಿಟಲೈಸ್ ಮಾಡಿ ಇಟ್ಟುಕೊಳ್ಳುತ್ತಾರೆ” ಎಂದು ಮಾಹಿತಿ ನೀಡಿದರು.

police commissioner bangalore 1
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ ಜೊತೆ ನಗು ಹಂಚಿಕೊಂಡ ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್

ಸಿಬ್ಬಂದಿ ಕೊರತೆ ಮಧ್ಯೆಯೇ ಹೊಸ ಯೋಜನೆ!
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ 2025ರ ಮಾರ್ಚ್‌ನಲ್ಲಿ ನಡೆದಿದ್ದ ವಿಧಾನಸಭೆಯ ಅಧಿವೇಶನದಲ್ಲಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿಎನ್ ಅವರು ಗೃಹ ಸಚಿವ ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಉತ್ತರಿಸಿದ್ದ ಅವರು, 18,581 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ನೀಡಿದ್ದರು.

ಪೊಲೀಸ್ ಇಲಾಖೆಯಲ್ಲಿ 1,11,330 ಅನುಮೋದಿತ ಹುದ್ದೆ ಇದ್ದು, ಅವುಗಳ ಪೈಕಿ ಶೇಕಡಾ 16.69ರಷ್ಟು ಸಿಬ್ಬಂದಿ ಕೊರತೆ ಇದೆ. ಕರ್ನಾಟಕದಲ್ಲಿ ಪೊಲೀಸ್-ಸಾರ್ವಜನಿಕ ಅನುಪಾತವು 1 ಲಕ್ಷ ಜನಸಂಖ್ಯೆಗೆ 165.04 ರಷ್ಟಿದೆ. ಇದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR and D) ಪ್ರಕಾರ ರಾಷ್ಟ್ರೀಯ ಸರಾಸರಿ 196.88 ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.

ಇದನ್ನು ಓದಿದ್ದೀರಾ? ಕುರ್ಚಿ ಉಳಿಸಿಕೊಳ್ಳಲು ಮೈಸೂರು ಸಮಾವೇಶ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕೆ

ಪ್ರಸ್ತುತ, ಪೊಲೀಸ್ ಪಡೆಯಲ್ಲಿ ಅನುಮೋದಿತ ಹುದ್ದೆ 1,11,330 ರಷ್ಟಿದ್ದು, ವಾಸ್ತವಿಕ ಬಲ 92,749 ರಷ್ಟಿದೆ. ಅಧಿಕೃತ ಮಾಹಿತಿಯ ಪ್ರಕಾರ, 6,591 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಮತ್ತು 819 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಉಳಿದಿವೆ. ಹೆಚ್ಚುವರಿಯಾಗಿ, 2,107 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ನಗರ ಸಶಸ್ತ್ರ ಮೀಸಲು/ಜಿಲ್ಲಾ ಸಶಸ್ತ್ರ ಮೀಸಲು) ಮತ್ತು 3,830 ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಹುದ್ದೆಗಳು ಭರ್ತಿಯಾಗಿಲ್ಲ.

ಪರಮೇಶ್ವರ್ 16

ಈ ನಡುವೆ ಇತ್ತೀಚೆಗೆ ಕರಾವಳಿ ಜಿಲ್ಲೆಗಳ ಪ್ರವಾಸದ ವೇಳೆ ಮಾತನಾಡಿದ್ದ ಗೃಹ ಸಚಿವರು, “ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ನೇಮಕಾತಿ ನಡೆಯುತ್ತಿದೆ. 515 ಎಸ್​​​ಐಗಳಿಗೆ ಆದೇಶ ನೀಡಲಾಗಿದ್ದು, ಅವರು ತರಬೇತಿಗೆ ಹೋಗಿದ್ದಾರೆ. ಇನ್ನೂ 402 ಹುದ್ದೆಗೆ ಆದೇಶವಾಗಲಿದೆ. 10 ರಿಂದ 15 ಸಾವಿರ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದರು. ಈ ಎಲ್ಲ ಕೊರತೆಗಳ ನಡುವೆಯೇ ಗೃಹ ಇಲಾಖೆಯು ಈ ಹೊಸ ಯೋಜನೆಯನ್ನು ಪರಿಚಯಿಸಿದೆ.

ಯಾಕೆ ಈ ಹೊಸ ಯೋಜನೆ?
ಕರ್ನಾಟಕದಲ್ಲಿ ಜಾರಿಗೆ ತರಲಾಗಿರುವ “ಮನೆ ಮನೆಗೆ ಪೊಲೀಸ್” ಯೋಜನೆಯು ದೇಶದಲ್ಲೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಿಂದ ಜನಸಾಮಾನ್ಯರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸುವ ಒಂದು ವಿನೂತನ ಕಾರ್ಯಕ್ರಮವಾಗಿದೆ.

ಈ ಯೋಜನೆಯ ಉದ್ದೇಶವು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧ ತಡೆಗಟ್ಟುವುದು, ಮತ್ತು ಜನರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳುವುದಾಗಿದೆ. ಈ ಕಾರ್ಯಕ್ರಮವು ಪೊಲೀಸರನ್ನು ಜನಸ್ನೇಹಿಯಾಗಿಸಿ, ಅವರ ಮೇಲಿನ ಭಯವನ್ನು ಕಡಿಮೆ ಮಾಡಿ, ವಿಶ್ವಾಸವನ್ನು ಮೂಡಿಸುವ ಗುರಿಯನ್ನು ಹೊಂದಿದೆ.

ಮಾಹಿತಿ ಸಂಗ್ರಹದ ಕಾರ್ಯ

ಮನೆಯಲ್ಲಿ ಯಾರಿದ್ದಾರೆ, ಬಾಡಿಗೆದಾರರು, ಹೊಸದಾಗಿ ಬಂದವರು, ಮನೆಯ ಸದಸ್ಯರು ವಿದೇಶದಲ್ಲಿದ್ದರೆ ಅವರ ವಿವರ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವೂ ನಡೆಯಲಿದೆ. ಇದರಿಂದ ಬೆಂಗಳೂರು ಮತ್ತು ಇತರೆ ಎಲ್ಲ ಪ್ರದೇಶಗಳ ‘ಡೇಟಾ ಬ್ಯಾಂಕ್’ ರಚನೆ ಸಾಧ್ಯವಾಗುತ್ತದೆ.

parameshwar 3

ಅಪರಾಧ ತಡೆಗಟ್ಟುವಿಕೆಗೆ ನೆರವು

ಸೈಬರ್ ಅಪರಾಧ, ಮಾದಕ ವಸ್ತುಗಳ ಬಳಕೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಪೊಲೀಸ್ ಇಲಾಖೆಯನ್ನು ಜನರಿಗೆ ಸ್ನೇಹಿಯಾಗಿ ಮಾಡುವುದು ಮತ್ತು ಜನರ ಸಹಭಾಗಿತ್ವದೊಂದಿಗೆ ಸಮಾಜದಲ್ಲಿ ಶಾಂತಿ ಕಾಪಾಡುವುದು. ಮತ್ತು ಆಪತ್ತಿನ ಸಂದರ್ಭಗಳಲ್ಲಿ ಅಥವಾ ತುರ್ತು ಸನ್ನಿವೇಶಗಳಲ್ಲಿ ಜನರ ಸಹಕಾರದೊಂದಿಗೆ ಶೀಘ್ರ ಸಹಾಯ ಒದಗಿಸಲು ಈ ಯೋಜನೆ ಜಾರಿಗೆ ತರಲಾಗಿದೆ.

ಕಾರ್ಯ ವಿಧಾನ ಹೇಗೆ?

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಗದಿತ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಭೇಟಿಯ ಸಂದರ್ಭದಲ್ಲಿ ಪೊಲೀಸರಿಗೆ ನೀಡಲಾಗಿರುವ ಟ್ಯಾಬ್‌ನಲ್ಲಿ ಮನೆಯವರ ಹೆಸರು, ವಿಳಾಸ, ಮತ್ತು ಇತರೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.

ಅಲ್ಲದೇ, ಈ ಬಗ್ಗೆ ನಗರ, ಹಳ್ಳಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ, ಶಾಲೆ-ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರಗಳು, ಮತ್ತು ಯುವಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಕೂಡ ಈ ಯೋಜನೆಯ ಭಾಗವಾಗಿದೆ.

ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಸಬ್-ಬೀಟ್‌ಗಳಾಗಿ ವಿಂಗಡಿಸಿ, ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ, ಇದರಿಂದ ಪ್ರತಿ ಪ್ರದೇಶಕ್ಕೂ ತ್ವರಿತ ಸೇವೆ ಒದಗಿಸಲು ಸಾಧ್ಯವಾಗುತ್ತದೆ.

ಜನರಿಗೆ ಪೊಲೀಸರೆಂದರೆ ಭಯವಲ್ಲ, ಭರವಸೆ ಎಂಬ ವಿಶ್ವಾಸ ಮೂಡಿಸುವುದು, ಜನರಿಗೆ ಸೈಬರ್ ಅಪರಾಧ ಮತ್ತು ನಕಲಿ ಮಾಹಿತಿಯ ಬಗ್ಗೆ ಶಿಕ್ಷಣ ನೀಡುವುದು. ಜನರ ದೂರುಗಳಿಗೆ ಮೂಲದಲ್ಲೇ ಪರಿಹಾರ ಕಂಡುಕೊಳ್ಳುವುದು. ಸಾರ್ವಜನಿಕರ ಸಹಕಾರದೊಂದಿಗೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವುದು ಕೂಡ ಮನೆ ಮನೆಗೆ ಪೊಲೀಸ್ ಭೇಟಿಯ ಕಾರ್ಯಕ್ರಮಗಳಲ್ಲಿ ಒಂದು.

polce 1

ಈ ಯೋಜನೆಯಡಿ ಜನರು ತಮ್ಮ ದೂರುಗಳನ್ನು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು, ಅಥವಾ ತಮ್ಮ ಕಷ್ಟ-ಸುಖಗಳನ್ನು ಕೂಡ ಪೊಲೀಸರೊಂದಿಗೆ ಹಂಚಿಕೊಳ್ಳಬಹುದು. ಸಾರ್ವಜನಿಕರ ಸಹಕಾರವಿಲ್ಲದೆ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ, ಜನರು ಸಕ್ರಿಯವಾಗಿ ಭಾಗವಹಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಗುರುತರವಾದ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ. ಪೊಲೀಸ್ ಸೇವೆಗಳ ಪ್ರತಿಯೊಂದು ಸ್ತರದಲ್ಲೂ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ. ಆ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣಾ ಸರಹದ್ದುಗಳನ್ನು ಸಬ್-ಬೀಟ್‌ಗಳಿಗೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

Download Eedina App Android / iOS

X