"ಭಾರತದ ತುಂಬೆಲ್ಲ ಬಲಿ ಕಥೆಗಳೇ ತುಂಬಿವೆ. ಅದಕ್ಕೆ ಇಲ್ಲಿ ಸೊಳ್ಳೆಯಷ್ಟು ಇರುವವರು ಆನೆಯಷ್ಟು ಇರುವವರ ಜುಟ್ಟು ಹಿಡಿದು ಆಳ್ವಿಕೆ ನಡೆಸುತ್ತಿದ್ದಾರೆ."
ಕರ್ನಾಟಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸೆಪ್ಟಂಬರ್ 22ರಿಂದ ಆರಂಭವಾಗಿದೆ. 2015ರಲ್ಲಿ ನಡೆದ ಮೊದಲ ಸಮೀಕ್ಷೆಯನ್ನು ಅದು ವೈಜ್ಞಾನಿಕವಾಗಿಲ್ಲ, ನಮ್ಮ ಮನೆಗೆ ಬಂದಿಲ್ಲ ಎಂತ ನೆಪಗಳನ್ನು ಹೇಳಿ ಕಸದ ಬುಟ್ಟಿಗೆ ಎಸೆಯುವಂತೆ ಮಾಡಿದ ಜನರು, ಈಗ ಮತ್ತೆ ಈ ವೈಜ್ಞಾನಿಕ ಸಮೀಕ್ಷೆಗೂ ತಕರಾರು ತೆಗೆದಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಮೀಕ್ಷೆ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಾನು ಮಾಹಿತಿ ಕೊಡುವುದಿಲ್ಲ ಅಂದಿದ್ದಾರೆ. ರಾಜ್ಯದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಮೀಕ್ಷೆಗೆ ಮಾಹಿತಿ ನೀಡಬೇಡಿ ಎಂದು ಕರೆ ಕೊಟ್ಟಿದ್ದಾರೆ. ಜಾತಿ – ಜಾತಿ ನಡುವೆ ಗಲಾಟೆ ತರಲು ಜಾತಿಗಣತಿ ಮಾಡ್ತಿದ್ದಾರೆ ಎಂದೆಲ್ಲ ಬಿಂಬಿಸುತ್ತಿದ್ದಾರೆ…
ಅಯ್ಯೋ ಕತೆಯೇ? ಈ ದೇಶದಲ್ಲಿ ಜಾತಿಗಳಿರುವುದು ವಾಸ್ತವ. ನೀವು ಎಷ್ಟೇ ದುಡ್ಡು ಕೊಡ್ತಿವಿ ಅಂದ್ರು ನಿಮಗೆ ಸುಲಭಕ್ಕೆ ಜಾತಿ ಹೇಳದೇ ಒಂದು ಬಾಡಿಗೆ ಮನೆ ಪಡೆಯಲು ಸಾಧ್ಯವಿಲ್ಲದ ಜಾತಿಗ್ರಸ್ಥ ಸಮಾಜ ನಮ್ಮದು. ದೇವಸ್ಥಾನಗಳಿಗೆ ಇಂದಿಗೂ ದಲಿತರಿಗೆ ಪ್ರವೇಶವಿಲ್ಲದ ದೇಶ ಇದು. ಇತರ ಜಾತಿಗಳಿಗೆ ಗರ್ಭಗುಡಿಗೆ ಪ್ರವೇಶವಿಲ್ಲ. ಜನಿವಾರ ನೋಡಲು ಬಟ್ಟೆ ಬಿಚ್ಚಿಸಿ ದೇಗುಲಕ್ಕೆ ಪ್ರವೇಶ ನೀಡುವ ದೇಶ ಇದು. ಅಪ್ಪಿ ತಪ್ಪಿ ಅಂತರ್ಜಾತಿ ವಿವಾಹವಾಗಿಬಿಟ್ಟರೆ ಮರ್ಯಾದೆ ಹೆಸರಿನಲ್ಲಿ ತಂದೆಯೇ ಮಗಳನ್ನು ಕೊಲ್ಲುತ್ತಿರುವ ಕ್ರೂರ ಸಮಾಜವಿದು. ಇಂದು ದಲಿತರ ಮೇಲೆ ಜಾತಿ ಕಾರಣಕ್ಕೆ ದೌರ್ಜನ್ಯಗಳು ನಡೆಯುತ್ತಿವೆ. ಮಾತ್ರವಲ್ಲ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇವುಗಳನ್ನು ಒಂದನ್ನೂ ಖಂಡಿಸದ, ಇದರ ವಿರುದ್ಧ ಕೆಲಸ ಮಾಡದೇ ಸ್ವಜಾತಿಯಲ್ಲಿಯೇ ಮದುವೆಯಾಗಿರುವ ಈ ಬಿಜೆಪಿ ಮುಖಂಡರು ಸಮೀಕ್ಷೆಯನ್ನು ಬಹಿಷ್ಕರಿಸಿ ಎನ್ನುವುದು ದೊಡ್ಡ ವ್ಯಂಗ್ಯವಲ್ಲವೇ? ದುರಂಹಕಾರವಲ್ಲವೇ?
ಈ ದೇಶದಲ್ಲಿ ಎಲ್ಲವೂ ಅಂದ್ರೆ ಎಲ್ಲವೂ ಜಾತಿ ಆಧಾರದಲ್ಲಿಯೇ ನಡೆಯುತ್ತಿದೆ. ಉಣ್ಣುವುದು, ಸ್ನೇಹ ಮಾಡುವುದು, ಮದುವೆಯಾಗುವುದು, ಮನೆ ಮಾಡುವುದು ಎಲ್ಲವನ್ನೂ ಜಾತಿಯೇ ನಿರ್ಧರಿಸುತ್ತಿರುವಾಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬೇಡ ಅನ್ನುವುದು ಆತ್ಮ ವಂಚನೆಯಲ್ಲವೇ? ಈ ದೇಶದಲ್ಲಿ ನಡೆದಿರುವ ಶೇ.95ರಷ್ಟು ಮದುವೆಗಳು ಸ್ವಜಾತಿ ಮದುವೆಗಳಾಗಿವೆ. ಅಂದರೆ ಅದೇ ಜಾತಿ, ಉಪಜಾತಿಯೊಳಗೆ ಮದುವೆಗಳು. ಹೀಗಿರುವಾಗ ಯಾರಾದರೂ ಈ ಸಮೀಕ್ಷೆ ಬೇಡ ಎಂದರೆ, ಅದರ ಹಿಂದೆ ಸಾರ್ವಜನಿಕ ಸೌಲಭ್ಯಗಳು ತಮಗೆ ಮಾತ್ರ ಸಿಗುವಂತೆ ನೋಡಿಕೊಳ್ಳುವ ಹುನ್ನಾರವಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
“ರೈಲು ಬಸ್ಸು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ
ಹೋಟೆಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ
ನೌಕರಿ ಕಾರಣಕ್ಕಾಗಿ ಒಟ್ಟಿಗೆ ಓಡಾಡಿದ್ದೇವೆ
ಅಲ್ಲಿ ಇಲ್ಲಿ ಒಂದೊಂದು ಮದುವೆಗಳೂ ಆಗಿವೆ
ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದ್ದವು
ಅಂತರಂಗ ಕತ್ತಲಲ್ಲೇ ಇದೆ..” ಎಂದು ನಾಡಿನ ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ ಅವರು ಬರೆದಿದ್ದಾರೆ. ಈ ಸಮೀಕ್ಷೆಗೆ ಬರುತ್ತಿರುವ ಆಕ್ಷೇಪಗಳು ಇದನ್ನೇ ಧ್ವನಿಸುತ್ತವೆ ಅಲ್ಲವೇ?
1992ರಲ್ಲಿ ಮಂಡಲ್ ಜಡ್ಜ್‌ಮೆಂಟ್ ಎಂದು ಪ್ರಸಿದ್ದವಾಗಿರುವ ಇಂದ್ರ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ಪ್ರತಿ ರಾಜ್ಯಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸಬೇಕು ಎಂದಿದೆ. ಅಲ್ಲದೇ, 50% ಮೀಸಲಾತಿಯ ಮಿತಿ ಮೀರಬೇಕಾದರೆ ಅಗತ್ಯ ಡೇಟಾ ಬೇಕು ಎಂದು ಷರತ್ತು ವಿಧಿಸಿದೆ. ಆನಂತರ ಬಂದ ಕಾಯ್ದೆಗಳು ಪ್ರತಿ 10 ವರ್ಷಗಳಿಗೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಿರುವಾಗ ನಮ್ಮ ರಾಜ್ಯದಲ್ಲಿ ಕನಿಷ್ಟ 3 ಜಾತಿಗಣತಿಗಳು ನಡೆಯಬೇಕಿತ್ತು. ಆದರೆ ನಡೆಯಲಿಲ್ಲ. 2015ರಲ್ಲಿ ಕಾಂತರಾಜ್‌ರವರ ಆಯೋಗ ಮಾಡಿದ ಸಮೀಕ್ಷೆ ಅಂಗೀಕಾರವಾಗಲಿಲ್ಲ ಏಕೆ? ಏಕೆಂದರೆ ಈಗ ಯಾರು ಸಮೀಕ್ಷೆ ವಿರೋಧಿಸುತ್ತಿದ್ದಾರೋ ಅವರೇ ಅಂದು ಸಹ ವಿರೋಧಿಸಿದರು. ಪಟ್ಟುಹಿಡಿದರು. ಪಟ್ಟಭದ್ರ ಹಿತಾಸಕ್ತಿಗಳ ಮುಂದೆ ಹಿಂದುಳಿದ ವರ್ಗಗಳ ಹಿತಾಸಕ್ತಿ ಮಂಡಿಯೂರಿತು.
ಹೌದು, ಅವರು ತಾವು ಹೆಚ್ಚಿಗೆ ಪಡೆದ ಪಾಲನ್ನು ಕಳೆದುಕೊಳ್ಳಬಾರದೆಂದು ವಿರೋಧಿಸಿದರು. ಆದರೆ, ನಾವು ಹಿಂದುಳಿದ ಸಮುದಾಯಗಳು ಆಗ ಏನು ಮಾಡುತ್ತಿದ್ದೆವು? ನಾವು ಅದನ್ನು ಜಾರಿ ಮಾಡಿ ಎಂದು ಏಕೆ ಕೇಳಲಿಲ್ಲ? ನಮ್ಮ ಪಾಲು ನಮಗೆ ಕೊಡಿ ಎಂದು ಕೇಳಲು ನಮಗಿರುವ ಅಡ್ಡಿ ಯಾವುದು? ತಮಿಳುನಾಡಿನಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ 69% ಇದ್ದು, ಹಿಂದುಳಿದ ಸಮುದಾಯಗಳಿಗೆ 50% ಮೀಸಲಾತಿ ಸಿಗುತ್ತಿದೆ. ತೆಲಂಗಾಣದಲ್ಲಿ ಒಟ್ಟು 67% ಮೀಸಲಾತಿ ಇದ್ದು ಹಿಂದುಳಿದ ವರ್ಗಗಳಿಗೆ 42% ಮೀಸಲಾತಿ ಸಿಗುತ್ತಿದೆ. ಆದರೆ, ಕರ್ನಾಟಕದಲ್ಲಿ 56% ಮೀಸಲಾತಿ ಮಾತ್ರ ಇದೆ ಮತ್ತು ಹಿಂದುಳಿದ ವರ್ಗಗಳಿಗೆ ಕೇವಲ 32% ಸಿಗುತ್ತಿದೆ. ಯಾಕೆ ಈ ಅನ್ಯಾಯ?
45%ಗಿಂತಲೂ ಹೆಚ್ಚಿರುವ ಹಿಂದುಳಿದ ವರ್ಗಗಳು ಕಡಿಮೆ ಪಾಲು ಪಡೆಯುತ್ತಿರುವುದು ಏಕೆ? ಏಕೆಂದರೆ ನಾವು ಒಗ್ಗಟ್ಟಾಗಿಲ್ಲ. ನಮಗೇನು ಬೇಕು ಎಂದು ಕೇಳುತ್ತಿಲ್ಲ. ಹಾಗಾಗಿ ನಮಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ಈಗಲೂ ಸಮೀಕ್ಷೆಗೆ ಅಡ್ಡಿ ಎಂಬ ಅಪಸ್ವರ ಬರುತ್ತಿದೆಯೇ ಹೊರತು, ಭಾರೀ ದೊಡ್ಡ ದನಿಯಲ್ಲಿ ಸಮೀಕ್ಷೆ ನಡೆಯಲೇಬೇಕು, ಅದು ನಮ್ಮ ಸಂವಿಧಾನಬದ್ಧ ಹಕ್ಕು ಎಂದು ಕೇಳದಿರುವುದು ದುರಂತ.
ಈ ಲೇಖನ ಓದಿದ್ದೀರಾ?: ಪತ್ರಕರ್ತರು ಕೋಮುವಾದಿ ಜ್ವಾಲೆಯನ್ನು ಭುಗಿಲೆಬ್ಬಿಸುತ್ತಿದ್ದಾರೆ ಎಂದಿದ್ದ ಭಗತ್ ಸಿಂಗ್
ಇನ್ನು, ರಾಜಕೀಯವಾಗಿ ನೋಡಿದರೆ ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ 224 ಶಾಸಕರಲ್ಲಿ ಒಬಿಸಿಗಳು ಎಷ್ಟಿದ್ದಾರೆ ಗೊತ್ತಾ? ಕೇವಲ 32 ಜನರು ಮಾತ್ರ…. ಅದೇ 56 ಲಿಂಗಾಯಿತರು, 46 ಒಕ್ಕಲಿಗರು, 10 ಬ್ರಾಹ್ಮಣರು, 7 ರೆಡ್ಡಿಗಳು, 5 ಬಂಟ ಸಮುದಾಯವರು ಇದ್ದು ಒಟ್ಟು ಪ್ರಬಲ ಸಮುದಾಯಗಳ ಶಾಸಕರ ಸಂಖ್ಯೆ 122 ಇದೆ. ಅಂದ್ರೆ, ಪ್ರಬಲ ಸಮುದಾಗಳು ಕೇವಲ 20-25% ಜನಸಂಖ್ಯೆ ಮಾತ್ರ ಇದ್ದರೂ ಅವರಿಗೆ ರಾಜಕೀಯವಾಗಿ ದುಪ್ಪಟ್ಟು, ಮೂರು ಪಟ್ಟು ಪಾಲು ಸಿಕ್ಕಿದೆ. ಅದು ಯಾರದು? ಅಂದರೆ ನಮ್ಮದು.. ಆದರೆ ನಾವು ಅದನ್ನು ಕೇಳುತ್ತಿದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ.
ಈ ಸಂದರ್ಭದಲ್ಲಿ ದೇವನೂರು ಮಹಾದೇವರವರ ಒಂದು ಮಾತು ನೆನಪಾಗುತ್ತದೆ; “ಭಾರತದ ತುಂಬೆಲ್ಲ ಬಲಿ ಕಥೆಗಳೇ ತುಂಬಿವೆ. ಅದಕ್ಕೆ ಇಲ್ಲಿ ಸೊಳ್ಳೆಯಷ್ಟು ಇರುವವರು ಆನೆಯಷ್ಟು ಇರುವವರ ಜುಟ್ಟು ಹಿಡಿದು ಆಳ್ವಿಕೆ ನಡೆಸುತ್ತಿದ್ದಾರೆ.”
ಇಲ್ಲಿ ಸೊಳ್ಳೆಯಷ್ಟು ಇರುವ ಜೋಶಿಗಳು, ತೇಜಸ್ವಿಗಳು ಆನೆಯಷ್ಟು ಇರುವ ನಮ್ಮನ್ನು ಆಳುತ್ತಿದ್ದಾರೆ. ನಾವು ಅವರ ಮನೆಯ ಗೇಟ್ ಕೀಪರ್‌ಗಳಾಗಿ ಆಳಿಸಿಕೊಳ್ಳುತ್ತಿದ್ದೇವೆ. ಪದೇ ಪದೇ ಅವರನ್ನು ಆರಿಸಿ ಅಧಿಕಾರಕ್ಕೇರಿಸುತ್ತಿದ್ದೇವೆ. ಈಗ ಜಾತಿ ಗಣತಿ ನಡೆದಿದ್ದೆ ಆದರೆ ಅಸಲಿ ಅಂಕಿ ಸಂಖ್ಯೆಗಳು ಗೊತ್ತಾದರೆ ತಮ್ಮ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂದು ಅವರು ಜಾತಿ ಗಣತಿ ವಿರೋಧಿಸುತ್ತಿದ್ದಾರೆ. ಆ ಮೂಲಕ ಜಾತಿ ಗಣತಿ ನಡೆದರೂ ಅದು ವೈಜ್ಞಾನಿಕವಲ್ಲ, ನಮ್ಮ ಗಣತಿ ಆಗಿಲ್ಲ ಎಂದು ಕ್ಯಾತೆ ತೆಗೆಯಲು ಯತ್ನಿಸುತ್ತಿದ್ದಾರೆ.
ಇದನ್ನು ಹಿಂದುಳಿದ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ನಿಮಗೆ ಈಗ ಸಿಕ್ಕಿರುವ ಸಣ್ಣ ಮಟ್ಟದ ಅಧಿಕಾರ ಸ್ಥಾನಮಾನ ಮುಖ್ಯವೋ ಅಥವಾ ನಿಮ್ಮ ಇಡೀ ಸಮುದಾಯಗಳ ಸಮಗ್ರ ಏಳಿಗೆ ಮುಖ್ಯವೋ ಎಂದು ನಿರ್ಧರಿಸಿ. ನಿಜಕ್ಕೂ ನಿಮಗೆ ನಿಮ್ಮ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಗೆ ರಾಜೀನಾಮೆ ನೀಡಿ ಹೊರಬನ್ನಿ. ಜಾತಿಗಣಿತಿ ಬೆಂಬಲಿಸಿ. ಮೀಸಲಾತಿ ಹೆಚ್ಚಳ ಸೇರಿದಂತೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಪಡೆಯಿರಿ. ನಿಮ್ಮ ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಿ.
ಇನ್ನು ಎರಡನೇಯದಾಗಿ, ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ್ ವರದಿಯನ್ನು ವಿರೋಧಿಸಿದ್ದು ಇದೇ ಬಿಜೆಪಿ. ಮಂಡಲ್ ಕಮಂಡಲ್ ಯಾತ್ರೆ ನಡೆಸಿದ್ದು, ವೈದ್ಯಕೀಯ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಗಲಭೆ ಮಾಡಿಸಿದ್ದು ಇವರೇ. ಅಲ್ಲದೆ, ಈಗಲೂ ಜಾತಿ ಜಾತಿಗಳ ನಡುವೆ ವೈಮನುಷ್ಯ ಸೃಷ್ಟಿಸುವುದು ಇದೇ ಬಿಜೆಪಿ. ಗುಜರಾತ್ ಗಲಭೆಯಲ್ಲಿ ಭಾಗವಹಿಸಿ ಜೈಲು ಸೇರಿದವರಲ್ಲಿ 80% ಮಂದಿ ಒಬಿಸಿ ಸಮುದಾಯಗಳಿಗೆ ಸೆರಿದವರು. ಕರ್ನಾಟಕದ ಕರಾವಳಿಯಲ್ಲಿ ಕೋಮುಗಲಭೆಗಳಲ್ಲಿ ಭಾಗವಹಿಸಿ ಜೈಲು ಸೇರುತ್ತಿರುವವರಲ್ಲಿ ಅಥವಾ ಕೊಲೆಯಾಗುತ್ತಿರುವವರಲ್ಲಿ ಒಬ್ಬನೂ ಭಟ್, ಅಯ್ಯರ್, ಹೆಗಡೆ ಇಲ್ಲ. ಆದರೆ ಮಡಿವಾಳ, ಬಿಲ್ಲವ, ಮೊಗವೀರ ರೀತಿಯ ಒಬಿಸಿ ಸಮುದಾಯಗಳಿಗೆ ಸೇರಿದವರು ಮಾತ್ರ ಇದ್ದಾರೆ. ‘ಅಧಿಕಾರದ ಫಲ ಅನುಭವಿಸುತ್ತಿರುವವರು ಮಾತ್ರ ಮೇಲ್ಜಾತಿಗಳು. ಕೊಲೆಯಾಗಲು, ಜೈಲು ಸೇರಲು ನಮ್ಮ ಮಕ್ಕಳು ಬೇಕೆ?’ ಇದನ್ನು ಹಿಂದುಳಿದ ವರ್ಗಗಳು ಅರ್ಥ ಮಾಡಿಕೊಳ್ಳಬೇಕು.
ಅಷ್ಟು ಮಾತ್ರವಲ್ಲ.. ಮೊನ್ನೆ ಹಾಸನದಲ್ಲಿ ಗಣೇಶ ಉತ್ಸವದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವಕರಲ್ಲಿ ಮೂವರು ಕುರುಬ ಸಮುದಾಯದವರು. ಮೂವರು ಪರಿಶಿಷ್ಟ ಜಾತಿ ಸಮುದಾಯದವರು ಹಾಗೂ ತಲಾ ಒಬ್ಬ ಬೋವಿ, ವಿಶ್ವಕರ್ಮ, ಈಡಿಗ ಎನ್ನಲಾಗಿದೆ. ಇದು ನಮ್ಮ ಹಿಂದುಳಿದವರಿಗೆ, ದಲಿತರಿಗೆ ಅರ್ಥವಾಗುವುದು ಯಾವಾಗ?
ಅಂದರೆ ಇಡೀ ರಾಜ್ಯದಲ್ಲಿ ಓಬಿಸಿಗಳ ಕೈಗೆ ಕತ್ತಿ, ತಲವಾರುಗಳನ್ನು ಕೊಟ್ಟು ಬಡಿದಾಟಕ್ಕೆ, ಹಿಂಸೆಗೆ ಹಚ್ಚಿ, ರೌಡಿ ಶೀಟರುಗಳನ್ನು ತಯಾರು ಮಾಡಲು ಬಿಜೆಪಿ-ಆರೆಸ್ಸೆಸ್ ಪ್ರಯತ್ನಿಸುತ್ತಿದೆ. ಬದಲಿಗೆ ಓಬಿಸಿಗಳಿಗೆ ಅಕ್ಷರ, ಅನ್ನ, ಅಧಿಕಾರ ಕೊಡಲು ಹೊರಟಿರುವವರು ಯಾರು ಎಂಬುದನ್ನು ಗಮನಿಸಿ. ಯಾವ ಪಕ್ಷ ದೇವರಾಜ ಅರಸು, ಎಸ್ ಬಂಗಾರಪ್ಪ, ವೀರಪ್ಪ ಮೋಯ್ಲಿ, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯನವರರನ್ನು ಸಿಎಂ ಮಾಡಿದೆ ಗಮನಿಸಿ. ಯಾವ ಪಕ್ಷ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದೆ ನೋಡಿ. ಆಗ ನಿಮಗೆ ಬಿಜೆಪಿಯ ಈ ಹುನ್ನಾರ ಅರ್ಥವಾಗುತ್ತದೆ.
ಇನ್ನು ಕರ್ನಾಟಕದಲ್ಲಿ ಮಾತ್ರ ಈ ಸಮೀಕ್ಷೆ ಮಾಡುತ್ತಿಲ್ಲ. ಬಿಹಾರದಲ್ಲಿ ಇದೇ ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಅಲ್ಲಿ ಜಾತಿಗಣತಿ ಯಶಸ್ವಿಯಾಗಿ ನಡೆದಿದೆ. ಅತಿ ಹಿಂದುಳಿದ ಸಮುದಾಯಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದು ಜಗಜ್ಜಾಹೀರಾಗಿದೆ. ಅಲ್ಲಿಯ ಮಾಹಿತಿಯ ದುರ್ಬಳಕೆ ಆಗಿಲ್ಲ. ಅಂದಮೇಲೆ ನಮ್ಮಲ್ಲಿ ದುರ್ಬಳಕೆ ಆಗುತ್ತದೆಯೇ? ತೆಲಂಗಾಣದಲ್ಲಿ ಜಾತಿಗಣತಿ ಯಶಸ್ವಿಯಾಗಿ ನಡೆದಿದೆ. ಅಷ್ಟೇ ಏಕೆ ಮುಂದಿನ ಜನಗಣತಿ ಜೊತೆ ಜಾತಿಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರವೇ ಘೋಷಿಸಿದೆ. ಹೀಗಿರುವಾಗ ಕರ್ನಾಟಕದಲ್ಲಿ ಮಾತ್ರ ವಿರೋಧ ಏಕೆ?
ದಲಿತರಿಗೆ ಇಂದು ಒಂದಷ್ಟು ಹಕ್ಕುಗಳು ಸಿಕ್ಕಿರುವುದು ಸಂವಿಧಾನ, ಮೀಸಲಾತಿ ಹಾಗೂ ಹೋರಾಟದಿಂದ ಮಾತ್ರ. ಆದರೆ ಹಿಂದುಳಿದವರು ಒಂದಾಗಿ ಈಗ ದೊಡ್ಡ ದನಿಯಲ್ಲಿ ಮಾತಾಡದಿದ್ದರೆ, ಈಗ ಈ ಸಮೀಕ್ಷೆ ನಡೆಯದಿದ್ದರೆ ಇನ್ನೆಂದೂ ಸಹ ನಡೆಯಲು ಸಾಧ್ಯವಿಲ್ಲ. ಅಂತಹ ಚಾರಿತ್ರಿಕ ಪ್ರಮಾದಕ್ಕೆ ನಾವು ಬಿಡಬಾರದು. ಎದ್ದೇಳಿ ಇಂದೇ ಮಾತನಾಡಿ. ನೀವು ಕಳೆದುಕೊಳ್ಳುವುದು ಏನು ಇಲ್ಲ. ಏಕೆಂದರೆ ಕಳೆದುಕೊಳ್ಳಲು ನಾವು ಏನನ್ನೂ ಪಡದೇ ಇಲ್ಲ ಎಂಬುದನ್ನು ಮರೆಯಬೇಡಿ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?
ಕೇವಲ ಹಿಂದುಳಿದವರು ಮಾತ್ರ ಒಂದಾದರೂ ಅಷ್ಟೂ ಪ್ರಯೋಜನವಿಲ್ಲ. ಶೋಷಿತರೆಲ್ಲ ಒಂದಾಗಬೇಕು. ದಲಿತರು, ಅಲ್ಪಸಂಖ್ಯಾತರು ನಮ್ಮ ಜೊತೆ ಬರುತ್ತಾರೆ. ಅಷ್ಟು ಮಾತ್ರವಲ್ಲ, ಪ್ರಬಲ ಜಾತಿಗಳ ಪ್ರಜ್ಞಾವಂತರೂ ಜೊತೆಗೂಡುತ್ತಾರೆ. ಏಕೆಂದರೆ ಇವನಾರವ ಇವನಾರವ ಅನ್ನದಿರಿ, ಇವ ನಮ್ಮವ, ಇವ ನಮ್ಮವ ಅನ್ನಿ ಎಂದ ಅಣ್ಣ ಬಸವಣ್ಣನ ಅನುಯಾಯಿಗಳು ಈ ಸಮೀಕ್ಷೆ ಬೇಡ ಅನ್ನುವುದಿಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸರ್ವಜನಾಂಗದ ಶಾಂತಿಯ ತೋಟ ಎಂಬ ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅನುಯಾಯಿಗಳು ಇದಕ್ಕೆ ವಿರೋಧಿಸುವುದಿಲ್ಲ. ಅಷ್ಟು ಮಾತ್ರವಲ್ಲ ಕುದ್ಮುಲ್ ರಂಗರಾವ್ ಎಂಬ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದ ಸಂತರೊಬ್ಬರು ಒಂದು ಮಾತು ಹೇಳಿದ್ದಾರೆ.
“ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ದೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ” ಎಂದು ಹೇಳಿದ್ದರು. ಅಂದರೆ ಯಾರು ನಮಗಿಂತ ಶೋಷಿತರು, ಬಡವರು ಇದ್ದಾರೆ ಅವರು ಮೇಲೆ ಬರಬೇಕು ಎಂಬುದನ್ನು ಅವರು ಸಾರಿದ್ದಾರೆ. ಇದೇ ಸಾಮಾಜಿಕ ನ್ಯಾಯ. ಹಾಗಾಗಿ ಸಾಮಾಜಿಕ ನ್ಯಾಯದ ಪರವಾಗಿರುವವರೆಲ್ಲ ಒಂದಾಗಬೇಕು. ನಾವು ಸೈದ್ಧಾಂತಿಕವಾಗಿ ಒಂದಾಗಬೇಕು. ಮಾನವೀಯತೆ ಆಧಾರದಲ್ಲಿ ಒಂದಾಗಬೇಕೆ ಹೊರತು ಅಸಮಾನತೆಯ ಆಧಾರದಲ್ಲಿ ಅಲ್ಲ.
ಇದುವರೆಗೂ ಬಿಜೆಪಿಗೆ ಅತಿ ಹೆಚ್ಚು ಮತ ಹಾಕಿದ ಒಬಿಸಿ ಸಮುದಾಯಗಳ ಹಿತಾಸಕ್ತಿಗಾಗಿ ಒಂದು ಸಮೀಕ್ಷೆ ನಡೆದರೆ ಅದನ್ನು ಸಹಿಸಲು ಬಿಜೆಪಿ ಮುಖಂಡರಿಗೆ ಆಗುತ್ತಿಲ್ಲ. ಏಕೆಂದರೆ ಅವರು ಬ್ರಾಹ್ಮಣ್ಯ ಅಧಿಕಾರವನ್ನು ಪ್ರತಿಪಾದಿಸುವವರು. ಹಾಗಾಗಿ ಇದನ್ನು ಎಲ್ಲರೂ ಮುಕ್ತವಾಗಿ ಅವಲೋಕನ ಮಾಡಿ, ನಮ್ಮ ಮುಂದಿನ ಪೀಳಿಗೆಯ ದೃಷ್ಟಿಯಿಂದ ಒಂದಾಗೋಣ. ಯಾರ ಪಾಲೂ ನಮಗೆ ಬೇಡ. ನಮ್ಮ ಹಕ್ಕು ನಮಗೆ ಸಾಕು. ಸಮೀಕ್ಷೆಯಲ್ಲಿ ಭಾಗವಹಿಸಬೇಕು, ವರದಿ ಜಾರಿಗೆ ಒತ್ತಾಯಿಸಬೇಕು. ಒತ್ತಾಸೆಯಾಗಿ ಕೆಲಸ ಮಾಡೋಣ.
ಇನ್ನು ತೇಜಸ್ವಿ ಸೂರ್ಯ, ಪ್ರಹ್ಲಾದ್ ಜೋಶಿ, ಆರ್ ಅಶೋಕ್ ಮಾತು ಕೇಳಿಕೊಂಡು ಯಾರಾದರೂ ಸಮೀಕ್ಷೆಯಲ್ಲಿ ಭಾಗವಹಿಸದಿದ್ದರೆ ನಷ್ಟವಾಗುವುದು ನಿಮಗೆ ಮತ್ತು ನಿಮ್ಮ ಸಮುದಾಯಕ್ಕೆ ಮಾತ್ರ. ಇವರೇನೊ ಇಷ್ಟು ವರ್ಷ ರಾಜಕೀಯದಲ್ಲಿದ್ದು ಚೆನ್ನಾಗಿದ್ದಾರೆ. ಆದರೆ ಆ ಸಮುದಾಯಗಳ ಬಡವರ ಕತೆಯೇನು? ಅವರಿಗೂ ಹಕ್ಕುಗಳು, ಸರ್ಕಾರಿ ಯೋಜನೆಗಳು ಸಿಗಬೇಕಾದರೆ ತಪ್ಪದೇ ಸಮೀಕ್ಷೆಯಲ್ಲಿ ಭಾಗವಹಿಸಿ. ಇಲ್ಲಿ ಜಾತಿ ಜಾತಿಗಳು ಕಿತ್ತಾಡುವ ಬದಲು ಹಂಚಿಕೊಂಡು ತಿನ್ನೋಣ. ಒಂದುಗುಳ ಕಂಡರೆ ತನ್ನ ಬಳಗವನ್ನೇಲ್ಲ ಕರೆಯುವದು ಕಾಗೆ ಅನ್ನುವ ಗಾದೆ ಇದೆ. ನಾವು ಮನುಷ್ಯರು. ಹಂಚಿಕೊಂಡು ತಿನ್ನೋಣ.. ಒಗ್ಗಟ್ಟಾಗಿ ಸಾಗೋಣ…