ಒಂದು ಕಾಲದಲ್ಲಿ ಪಿ. ಲಂಕೇಶ್, ಎಂ.ಡಿ ನಂಜುಂಡಸ್ವಾಮಿ, ಹರ್ಡೇಕರ್ ಮಂಜಪ್ಪ, ಗಾಂಧಿ, ಬಸವ ಚಿಂತನೆಗಳಿಂದ ಹೆಚ್ಚು ಪ್ರಭಾವಿತರಾಗಿ, ಸಮಾಜಮುಖಿಯಾಗಿದ್ದ ಸ್ವಾಮೀಜಿ ಪ್ರಚಾರಪ್ರಿಯರಾದದ್ದು ಹೇಗೆ? ‘2ಎ ಮೀಸಲಾತಿ’ಯ ರಾಜಕೀಯ ಆಟದಲ್ಲಿ ಸ್ವಾಮೀಜಿಯನ್ನು ಹರಕೆಯ ಕುರಿ ಮಾಡಿದರೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು? ಇಲ್ಲಿದೆ ವಿವಾದದ ಹಿಂದಿನ ಅಸಲಿ ಕಥೆ…
ಭಾಗ-3
ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಸುತ್ತ ಎದ್ದಿರುವ ವಿವಾದಾತ್ಮಕ ವಿದ್ಯಮಾನ ಗಮನಿಸಿದಾಗ ‘2ಎ ಮೀಸಲಾತಿ’ ಹೋರಾಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪಂಚಮಸಾಲಿ ಸಮುದಾಯದ ನಾಯಕರು ತಮ್ಮ ರಾಜಕೀಯ ಮೇಲಾಟಕ್ಕೆ ಸ್ವಾಮೀಜಿಯನ್ನು ಅಗತ್ಯ ಮೀರಿ ಬಳಸಿಕೊಂಡು, ಕೊನೆಗೆ ಅವರನ್ನೇ ‘ಬಲಿಪಶು’ ಮಾಡಿದರೇ ಎನ್ನುವ ಪ್ರಶ್ನೆಗಳನ್ನು ಸ್ವಾಮೀಜಿಯ ಆಪ್ತ ವಲಯ ಎತ್ತುತ್ತಿದೆ.
ಸ್ವಾಮೀಜಿ ಅವರನ್ನು ತುಂಬ ಹತ್ತಿರದಿಂದ ನೋಡಿದವರು ಹೇಳುವಂತೆ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಜಗದ್ಗುರುಗಳಾಗಿ ಬಂದ ಮೃತ್ಯುಂಜಯ ಸ್ವಾಮೀಜಿಯ ಆರಂಭಿಕ ಆಲೋಚನಾ ಕ್ರಮವೇ ಅವರನ್ನು ಸಮಾಜದಲ್ಲಿ ವಿಭಿನ್ನರನ್ನಾಗಿ ಗುರುತಿಸಿತ್ತು. ಇದನ್ನು ಕಂಡ ರಾಜ್ಯದ ಬೇರೆ ಬೇರೆ ಮಠಾಧೀಶರೂ ಪ್ರಭಾವಿತರಾಗಿದ್ದಿದೆ.
ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ಕಂದಾಚಾರ, ಮೇಲು-ಕೀಳು ಭೇದಭಾವ ಹೋಗಲಾಡಿಸಲು ಬಸವಣ್ಣನವರ ಚಿಂತನೆಗಳ ಮೊರೆ ಹೋಗಿ, ಅವರ ತತ್ವಕ್ಕೆ ಬದ್ಧರಾಗಿ ನಡೆದುಕೊಂಡರು. ಪೀಠಾಧ್ಯಕ್ಷರಾದ ಹೊಸದರಲ್ಲಿ ಭಕ್ತರು ಮನೆ ಮನೆಗಳಿಗೆ ಕರೆದು ಸತ್ಕರಿಸುವಾಗ, “ಜಂಗಮರು ಸೃಷ್ಟಿಸಿರುವ ಪಾದಪೂಜೆ ತಮಗೆ ಬೇಡ, ನನಗೆ ಬಸವಣ್ಣನವರ ತತ್ವದಲ್ಲಿ ನಂಬಿಕೆ ಹೆಚ್ಚು” ಎಂದು ಸಾರಾಸಗಟಾಗಿ ‘ಪಾದಪೂಜೆ’ ತಿರಸ್ಕರಿಸಿದ್ದರಂತೆ. ಈ ನಡೆ ಪಂಚಪೀಠಗಳ ಕಣ್ಣು ಕೆಂಪಗಾಗುವಂತೆಯೂ ಮಾಡಿತ್ತು.
ಮುಂದೆ ಸಮಾಜದಲ್ಲಿ ಗಮನ ಸೆಳೆಯುವ ಕಾರ್ಯಗಳನ್ನು ಮೃತ್ಯುಂಜಯ ಸ್ವಾಮೀಜಿ ಮಾಡಿದ್ದಾರೆ. 2012ರಲ್ಲಿ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ’ ಸ್ಥಾಪಿಸಿದ್ದು ಅವರ ಉನ್ನತ ಆಲೋಚನೆ. ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿಗೆ ಈವರೆಗೂ ಜಲತಜ್ಞ ರಾಜೇಂದ್ರ ಸಿಂಗ್, ಗಾಂಧಿವಾದಿ ಅಣ್ಣಾ ಹಜಾರೆ, ಪರಿಸರವಾದಿ ಮೇಧಾ ಪಾಟ್ಕರ್, ಡಾ.ಬಾಬಾ ಅಢಾವೆ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಡಾ.ಎಂ.ಎಸ್.ಸ್ವಾಮಿನಾಥನ್, ತೆಲಂಗಾಣದ ಮಿಷನ್ ಭಗೀರಥ ಕುಡಿಯುವ ನೀರಿನ ರುವಾರಿ ಪ್ರಕಾಶರಾವ್ ವೀರಮಲ್ಲ ಭಾಜನರಾಗಿರುವದು ಕಂಡಾಗ, ಸ್ವಾಮೀಜಿಯ ಸಾಮಾಜಿಕ-ರಾಜಕೀಯ ಪ್ರಬುದ್ಧತೆ ಪ್ರತಿಫಲಿಸುತ್ತದೆ.
ನಾಗರ ಪಂಚಮಿಯನ್ನು ‘ಬಸವ ಪಂಚಮಿ’ಯಾಗಿ ಆಚರಿಸುವ ಮೂಲಕ, ಕಲ್ಲು ನಾಗರಕ್ಕೆ ಹಾಲೆರೆಯದೇ, ಮಕ್ಕಳಿಗೆ ಹಾಲು ಕುಡಿಸಿ ಎಂಬ ಅಭಿಯಾನಕ್ಕೆ ಕರೆ ನೀಡಿದ್ದು, 2015ರಲ್ಲಿ ಬಿರುಸಾಗಿ ನಡೆದ ಮಹದಾಯಿ ಹೋರಾಟದಲ್ಲೂ ರೈತರ ಪರವಾಗಿ ನಿಂತಿದ್ದು, ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾದಾಗ ಆ ರಾಜ್ಯಕ್ಕೆ ಹೋಗಿ ಪ್ರತಿಭಟಿಸಿದ್ದು, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಖ್ಯಾತವಾಗಿರುವ ಗದಗ ಜಿಲ್ಲೆಯ ಕಪ್ಪತಗುಡ್ಡ ಉಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು ಹಾಗೂ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿನ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲೂ ಮುಂದಾಳತ್ವ ವಹಿಸಿದ್ದರ ಒಟ್ಟಾರೇ ಫಲವಾಗಿ ಸ್ವಾಮೀಜಿಗೆ ಜನಪ್ರಿಯತೆಯೂ ಹೆಚ್ಚಾಯಿತು.
ಇದರಿಂದ ಪಂಚಮಸಾಲಿ ಸಮುದಾಯದೊಳಗೆ ಮತ್ತು ಭಕ್ತ ಮಾನಸದೊಳಗೆ ವಿಶೇಷವಾದ ಘನತೆ, ಗೌರವ ಲಭಿಸಿತು. ಯಾವಾಗ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಒಡನಾಟ ಪೀಠದೊಂದಿಗೆ ಹೆಚ್ಚಾಯಿತೋ ಅಲ್ಲಿಂದ ಸ್ವಾಮೀಜಿ ಪ್ರಚಾರದ ಗೀಳಿಗೆ ಬಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರು ರಾಜಕೀಯವಾಗಿ ಬಳಸಿಕೊಂಡ ‘2ಎ ಮೀಸಲಾತಿ’ ಹೋರಾಟದಲ್ಲಿ ಸ್ವಾಮೀಜಿಯನ್ನು ಹರಕೆಯ ಕುರಿ ಮಾಡಿದರು ಎನ್ನುತ್ತಾರೆ ಅವರನ್ನು ಸಮೀಪದಿಂದ ಬಲ್ಲವರು.

ಸ್ವಾಮೀಜಿ ಆಗದೇ ಇದಿದ್ದರೆ ಹೋರಾಟಗಾರರು ಆಗಿರುತ್ತಿದ್ದರು!
ಮೃತ್ಯುಂಜಯ ಸ್ವಾಮೀಜಿಯ ಮೂಲ ಹೆಸರು ವೀರೇಶ್. ಮೂಲತಃ ದಾವಣಗೆರೆಯ ಬಸವರಾಜ್ ಪೇಟೆಯ ನಿವಾಸಿ. ದಾವಣಗೆರೆಯ ಮುರುಘಾಮಠ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಎಂಎಸ್‌ಬಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ. ಕಾಲೇಜು ಜೀವನದಲ್ಲೇ ಸಮಾಜಮುಖಿ ಹೋರಾಟದಲ್ಲಿ ತೊಡಗಿಸಿಕೊಂಡ ಅವರು ಮುಂದೆ ಕಮ್ಯುನಿಸ್ಟ್ ಪಾರ್ಟಿ ಹಿನ್ನೆಲೆಯ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್)ನಲ್ಲಿ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಇದು ದೇಶದ ಮೊದಲ ರಾಷ್ಟ್ರಮಟ್ಟದ ವಿದ್ಯಾರ್ಥಿ ಸಂಘಟನೆಯಾಗಿದೆ.
ಬಿ.ಕಾಂ ಮುಗಿದ ಮೇಲೆ ದಾವಣಗೆರೆಯ ಮುರುಘಾಮಠದ ಪ್ರದೇಶದಲ್ಲಿ ವೀರೇಶ್ ಕ್ರಿಯಾಶೀಲ ಗೆಳೆಯರ ಬಳಗ ಕಟ್ಟಿಕೊಂಡು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿದ್ದರು. ಮುರುಘಾ ಮಠದಲ್ಲಿ ವಿಶೇಷವಾಗಿ ‘ಬಸವ ಜಯಂತಿ‘ ಕಾರ್ಯಕ್ರಮ ನಡೆದರೆ ಮುಂದೆ ನಿಂತು ಅದನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಕಾರಣ ಬಸವಣ್ಣ ಅಂದರೆ ವೀರೇಶ್‌ಗೆ ಇನ್ನಿಲ್ಲದ ಅಭಿಮಾನವಂತೆ. ಶಿವಮೂರ್ತಿ ಮುರುಘಾ ಶರಣರು 1991ರಲ್ಲಿ ಚಿತ್ರದುರ್ಗದ ಮುರುಘಾ ಮಠದ ಮುಖ್ಯಸ್ಥರಾದ ಮೇಲೆ ದಾವಣಗೆರೆಯ ಮುರುಘಾ ಶಾಖಾ ಮಠದೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿರುತ್ತಾರೆ. ದಾವಣಗೆರೆಯ ಮಠದಲ್ಲಿ ನಡೆಯುತ್ತಿದ್ದ ಬಸವ ಜಯಂತಿ ದಿನ ಶ್ವೇತ ಬಟ್ಟೆ ಧರಿಸಿ ಓಡಾಡುತ್ತಿದ್ದ ವೀರೇಶ್‌ನ ಮೇಲೆ ಮುರುಘಾ ಶರಣರು ವಿಶೇಷ ನೋಟ ಹಾಯಿಸುತ್ತಾರೆ. ಬಳಿಕ ವೀರೇಶ್ ಬಗ್ಗೆ ಹೆಚ್ಚು ತಿಳಿದುಕೊಂಡು, ಅವರ ಕ್ರಿಯಾಶೀಲತೆಗೆ ಮಾರುಹೋದ ಮುರುಘಾ ಶರಣರು ಒಂದು ದಿನ ಸ್ವಾಮೀಜಿ ಆಗುತ್ತಿಯಾ ಎಂದು ವಿರೇಶ್‌ನನ್ನು ಕೇಳುತ್ತಾರೆ.
ಅಧ್ಯಾತ್ಮದ ಕಡೆ ಒಲವು ಹೊಂದಿದ್ದ ವೀರೇಶ್ ಸ್ವಾಮೀಜಿಯಾಗಲು ಒಪ್ಪಿಕೊಳ್ಳುತ್ತಾರೆ. ಆಗ ‘ಬಸವಜಯ ಮೃತ್ಯುಂಜಯ ಸ್ವಾಮೀಜಿ’ ಎಂದು ಇವರಿಗೆ ನಾಮಕರಣ ಮಾಡಿ ಇವರನ್ನು ದಾವಣಗೆರೆ ಮಠಕ್ಕೆ ಸ್ವಾಮೀಜಿಯನ್ನಾಗಿ ಮುರುಘಾ ಶರಣರು ಮಾಡುತ್ತಾರೆ. ಇದಿಷ್ಟು ವೀರೇಶ್ ಸ್ವಾಮೀಜಿಯಾಗಿ ಬದಲಾದ ಕಥೆ.
ಈ ಸ್ಟೋರಿ ಓದಿದ್ದೀರಾ? : ಭಾಗ – 1 ಪಂಚಮಸಾಲಿ ಪೀಠವೇ ರಾಜಕೀಯ ಆಡುಂಬೊಲ: ಇದು ಸ್ವಾಮೀಜಿಯಿಂದಾದ ಸ್ವಯಂಕೃತ ಅಪರಾಧ
ಮೃತ್ಯುಂಜಯ ಸ್ವಾಮೀಜಿ ಜೊತೆ ಬಿ.ಕಾಂ ಒದಿದ ಸಹಪಾಠಿಯೊಬ್ಬರು ಈ ದಿನ.ಕಾಮ್ ಜೊತೆ ಮಾತನಾಡುತ್ತ, “ದಾವಣಗೆರೆ ಮುರುಘಾ ಮಠಕ್ಕೆ ಇವರು ಸ್ವಾಮೀಜಿಯಾದ ಮೇಲೆ ಬಹಳಷ್ಟು ವಿಶೇಷ ಕಾರ್ಯಕ್ರಮಗಳನ್ನು ಆರಂಭದಲ್ಲಿ ಆಯೋಜಿಸಿದರು. ಮುರುಘಾ ಮಠ ವಿರಕ್ತ ಮಠವಾಗಿದ್ದರೂ ಬಸವ ತತ್ವಕ್ಕೆ ನಿಷ್ಠರಾಗಿ ನಡೆದುಕೊಳ್ಳುತ್ತಾರೆ. ಬೆಳಿಗ್ಗೆ ಎದ್ದು ಸಂಸ್ಕೃತ ಶ್ಲೋಕಗಳನ್ನು ಹೇಳುವ ಬದಲು ವಚನಗಳನ್ನು ಹೇಳಿ ಎಂದು ಭಕ್ತರಿಗೆ ಕರೆ ನೀಡಿದರು. ‘ಶರಣ ಸಂಗಮ‘ ಇವರು ನಡೆಸಿಕೊಂಡು ಬಂದ ವಿಶೇಷ ಕಾರ್ಯಕ್ರಮ. ಅದೇ ವೇಳೆಗೆ ದಿನಪತ್ರಿಕೆಗಳು ಜಿಲ್ಲಾವಾರು ಆವೃತ್ತಿಯನ್ನು ಆರಂಭಿಸಿರುತ್ತವೆ. ಇವರ ಪ್ರಗತಿಪರ ನಿಲುವಿಗೆ ಮಾಧ್ಯಮಗಳು ಸಹ ಇವರಿಗೆ ಪ್ರಚಾರ ನೀಡುತ್ತವೆ. ಒಂದೇ ದಿನ 34 ಫೋಟೋಗಳ ಸಮೇತ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಾರೆ. ಬಹುಬೇಗನೇ ಪ್ರವರ್ಧಮಾನಕ್ಕೆ ಬರುತ್ತಾರೆ” ಎಂದು ಒಡನಾಟ ನೆನಪಿಸಿಕೊಂಡರು.
“ನಾವು ನೋಡಿದಂತೆ ದಾವಣಗೆರೆಯಲ್ಲಿದ್ದಾಗ ಸ್ವಾಮೀಜಿ ತೀಕ್ಷ್ಣಮತಿಯಾಗಿದ್ದರು. ನಮ್ಮೊಂದಿಗೆ ಪಿ. ಲಂಕೇಶ್, ಎಂ.ಡಿ ನಂಜುಂಡಸ್ವಾಮಿ, ಹರ್ಡೇಕರ್ ಮಂಜಪ್ಪ, ಗಾಂಧಿ, ಬಸವ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಸಮಾಜದಲ್ಲಿ ಬದಲಾವಣೆ ತರಬೇಕು. ನಾನು ಅವರ ಸಾಲಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆಯೂ ಸ್ವಾಮೀಜಿಗೆ ಇತ್ತು. ಕಾರ್ಲ್ ಮಾರ್ಕ್ಸ್ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಇವರ ಬೆಳವಣಿಗೆ ನೋಡಿದ ಮುರುಘಾ ಶರಣರೇ ಆಶ್ಚರ್ಯ ಪಟ್ಟಿದ್ದಿದೆ. ಪಂಚಮಸಾಲಿ ಪೀಠ ಕಟ್ಟಬೇಕು ಎನ್ನುವ ಯೋಚನೆ 1999ರಲ್ಲಿ ಮುರುಘಾ ಶರಣರಿಗೆ ಬರುತ್ತದೆ. 2004ರಲ್ಲಿ ಬೆಳಗಾವಿಯ ಎಸ್.ಪಿ ಸಿದ್ನಾಳ್ ಮನೆಯಲ್ಲಿ ಪಂಚಮಸಾಲಿ ಪೀಠ ಸ್ಥಾಪಿಸುವ ಯೋಚನೆ ಹರಳುಗಟ್ಟಿ 50 ಎಕರೆ ಭೂಮಿ ನೀಡಿ ಹಾವೇರಿಯಲ್ಲಿ ಸ್ಥಾಪಿಸಬೇಕು ಎಂದು ಮುರುಘಾ ಶರಣರು ಸಲಹೆ ನೀಡಿದಾಗ ‘ತಮಗೆ ಯಾವ ಆಸ್ತಿಯೂ ಬೇಡ. ಕೂಡಲಸಂಗಮದಲ್ಲಿ ಪೀಠ ಸ್ಥಾಪಿಸಿ, ನಾನು ಅಲ್ಲಿಗೆ ಸ್ವಾಮೀಜಿಯಾಗಿ ಹೋಗುವೆ’ ಎಂದು ಮುರುಘಾ ಶರಣರ ಬಳಿ ಮೃತ್ಯುಂಜಯ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಅವರಿಗೆ ಆಸ್ತಿ ಮಾಡಬೇಕು ಎನ್ನುವ ಯಾವ ದುರಾಸೆಯೂ ಇರಲಿಲ್ಲ. ಸಮಾಜದಲ್ಲಿ ಬದಲಾವಣೆ ತರಬೇಕು. ಮಹಾತ್ಮರ ಸಾಲಿಗೆ ನಾನು ಸೇರಿಕೊಳ್ಳಬೇಕು. ನಾನು ಮಾಡಿದ ಕಾರ್ಯ ಸಮಾಜಕ್ಕೆ ಗೊತ್ತಾಗಬೇಕು. ಹೀಗಾಗಿ ಅವರು ಹೆಚ್ಚು ಪ್ರಚಾರವನ್ನು ಬಯಸುತ್ತಿದ್ದರು” ಎಂದು ಹೇಳಿದರು.
ಇದರಾಚಗೆ ಇನ್ನೊಂದು ವಾದವೂ ಇದೆ. ದಾವಣಗೆರೆಯ ಮಠ ನೂರಾರು ಎಕರೆ ಜಮೀನು ಹೊಂದಿದೆ. ಆಪಾರ ಆಸ್ತಿ ಇದೆ. ಸ್ವಂತ ಟ್ರಸ್ಟ್ ಇದೆ. ಹೋರಾಟದ ಮನೋಭಾವ ಇರುವ ಮೃತ್ಯುಂಜಯ ಸ್ವಾಮೀಜಿ ಮುಂದೆ ಚಿತ್ರದುರ್ಗದ ಮೂಲ ಮಠದಿಂದ ಅಂತರ ಕಾಯ್ದುಕೊಂಡು ಪ್ರತ್ಯೇಕವಾಗಿ ಇರುತ್ತಾರೋ ಎನ್ನುವ ಅನುಮಾನದಿಂದ ಅವರನ್ನು ದಾವಣಗೆರೆಯಿಂದ ಸಾಗಹಾಕಲಾಗಿದೆ ಎನ್ನುವ ಆರೋಪಗಳು ಸಹ ಇವೆ. ಇದಿಷ್ಟು ಕೂಡಲಸಂಗಮಕ್ಕೆ ಸ್ವಾಮೀಜಿ ಬಂದ ಹಿನ್ನೆಲೆ.
‘2ಎ ಮೀಸಲಾತಿ’ ಹೋರಾಟ ಕೈಗೆತ್ತಿಕೊಂಡು, ಮೀಸಲಾತಿ ಸಿಗುವವರೆಗೂ ನಾನು ಪೀಠಕ್ಕೆ ಮರಳುವುದಿಲ್ಲ ಎಂದು ಸಮುದಾಯಕ್ಕೆ ವಾಗ್ದಾನ ಮಾಡಿರುವ ಮೃತ್ಯುಂಜಯ ಸ್ವಾಮೀಜಿಗೆ ಈಗ ಕೂಡಲಸಂಗಮ ಪೀಠವೇ ಅತಂತ್ರವಾಗಿದೆ!

ಕೂಡಲಸಂಗಮ ಪೀಠಕ್ಕೆ ಸ್ವಾಮೀಜಿ ಕೊಡುಗೆ ಶೂನ್ಯ ಎನ್ನುತ್ತಾರೆ ಟ್ರಸ್ಟ್ ಸದಸ್ಯರು
ಕೂಡಲಸಂಗಮದ ಪಂಚಮಸಾಲಿ ಪೀಠದ ಸಂಸ್ಥಾಪಕರು ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಸದಸ್ಯರೊಬ್ಬರು, ಹೆಸರು ಹೇಳಲು ಇಚ್ಚಿಸದೆ ಈ ದಿನ.ಕಾಂ ಜೊತೆ ಮಾತನಾಡಿ, “ಈಗಲೂ ನಮಗೆ ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ನಮಗೆ ಈ ಪಕ್ಷ ಆಧಾರಿತ ರಾಜಕೀಯ ಸಾಕಾಗಿದೆ. ಸಮುದಾಯದ ಏಳಿಗೆ ಬೇಕು. ನಾವು ಪೀಠ ಸ್ಥಾಪಿಸುವ ಉದ್ದೇಶವೇ ಹಳ್ಳ ಹಿಡಿದಿದೆ. ಇದಕ್ಕೆ ಬರೀ ಸ್ವಾಮೀಜಿ ಮಾತ್ರ ಕಾರಣವಲ್ಲ. 2ಎ ಮೀಸಲಾತಿ ಹೋರಾಟವು ಆಯಾ ಪಕ್ಷಗಳ ರಾಜಕೀಯ ಆಟಕ್ಕೆ ಬಲಿಯಾಗಿ ಈಗ ಸ್ವಾಮೀಜಿ ಖಳನಾಯಕ ಸ್ಥಾನದಲ್ಲಿ ಕಾಣುತ್ತಿದ್ದಾರೆ. ರಾಜಕೀಯ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವ ಮುನ್ನ ಸ್ವಾಮೀಜಿ ಮುಂದಿನ ಅಪಾಯದ ಬಗ್ಗೆ ಮೊದಲೇ ಯೋಚಿಸಬೇಕಿತ್ತು” ಎಂದು ಹೇಳಿದರು.
“ಬೇರೆ ಬೇರೆ ಮಠಗಳನ್ನು ನೋಡಿದಾಗ ನಮ್ಮ ಮಠ ಕಂಡು ನಮಗೇ ಬೇಸರವಾಗುತ್ತದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ನಾವು 2ಎ ಮೀಸಲಾತಿ ಕೇಳುತ್ತಿದ್ದೇವೆ. ಆದರೆ ಇದೇ ಅಂತಿಮವಲ್ಲ. ಪೀಠದಿಂದ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. 2008ರಲ್ಲಿ ಪೀಠ ಸ್ಥಾಪನೆಯಾಗಿದೆ. ಈವರೆಗೂ ಮಠದಲ್ಲಿ ಏನು ಅಭಿವೃದ್ಧಿಯಾಗಿದೆ? ನಮ್ಮ ಸಮುದಾಯದ ವಿದ್ಯಾರ್ಥಿಗಳಿಗಾಗಿ ಎಷ್ಟು ವಸತಿ ಶಾಲೆ ತೆರೆದಿದ್ದಾರೆ? ಎಷ್ಟು ಶಿಕ್ಷಣ ಸಂಸ್ಥೆಗಳು ಇವರಿಂದ ಸ್ಥಾಪಿತವಾಗಿವೆ? ಸಮುದಾಯ ಏಳಿಗೆಗಾಗಿ ಬ್ಯಾಂಕ್ ಸ್ಥಾಪಿಸುವ ಗುರಿ ಏನಾಗಿದೆ? ಎಲ್ಲವೂ ಶೂನ್ಯ. ಬರೀ ಕೂಡಲಸಂಗಮ ಪೀಠದ ಕಟ್ಟಡ ಮತ್ತು ಅದಕ್ಕೆ ಸ್ವಾಮೀಜಿ ಇದ್ದರೆ ಸಾಕೆ? ನಮಗೆ ಈ ವಿಚಾರದಲ್ಲಿ ಸ್ವಾಮೀಜಿ ಬಗ್ಗೆ ಅಸಮಾಧಾನವಿದೆ” ಎಂದು ತಿಳಿಸಿದರು.
“ಪೀಠಕ್ಕೆ ಬಂದ ಮೃತ್ಯುಂಜಯ ಸ್ವಾಮೀಜಿ ಬರೀ ಸಂಚಾರ ಸ್ವಾಮೀಜಿ ಆದರೆ ಹೇಗೆ? ಅವರಿಗೆ ಆರಂಭದಲ್ಲಿ ಸಿಕ್ಕ ಜನಮನ್ನಣೆ ನೋಡಿದರೆ ಪಂಚಮಸಾಲಿ ಪೀಠ ಇಂದು ಕರ್ನಾಟದಲ್ಲಿ ಎಲ್ಲೋ ದೊಡ್ಡ ಸ್ಥಾನದಲ್ಲಿ ಇರಬೇಕಿತ್ತು. ಆದರೆ ಹಾಗಾಗಲಿಲ್ಲ. ಪೀಠ ಸ್ಥಾಪನೆಯಾಗಿ 17 ವರ್ಷವಾಗಿದೆ. ವರ್ಷಕ್ಕೆ ಒಂದು ಕೋಟಿಯಂತೆ ಸರ್ಕಾರದಿಂದ ಅನುದಾನ ತಂದಿದ್ದರೆ ಇಂದಿಗೆ ಮಠದ ಆಸ್ತಿ 17 ಕೋಟಿ ರೂ. ಆಗುತ್ತಿತ್ತು. ಈ ಬಗ್ಗೆ ಸ್ವಾಮೀಜಿ ಯೋಚಿಸಲೇ ಇಲ್ಲ. ಬರೀ ಯತ್ನಾಳ್, ಕಾಶಪ್ಪನವರ, ನಿರಾಣಿ, ಶಿವಾನಂದ ಪಾಟೀಲ್ ಹೀಗಂದ್ರು ಹಾಗಂದ್ರು ಅಂತ ವೇದಿಕೆ ಭಾಷಣ ಮಾಡುತ್ತಾರೆ. ಮುಂದುವರಿದು ಅವರ ವಕಾಲತ್ತು ವಹಿಸಿಕೊಂಡು ಮಾತನಾಡುತ್ತಾರೆ. ಇದು ಸ್ವಾಮೀಜಿ ಅವರ ಘನತೆಗೆ ತಕ್ಕ ನಡೆಯಲ್ಲ” ಎಂದರು.
ಈ ಸ್ಟೋರಿ ಓದಿದ್ದೀರಾ? ಭಾಗ- 2 ಪಂಚಮಸಾಲಿ ಪೀಠ ಫಜೀತಿ | ಸಮುದಾಯದ ‘2ಎ ಮೀಸಲಾತಿ’ ಹೋರಾಟ ಬಲಿ ಕೊಟ್ಟರೇ ಸ್ವಾಮೀಜಿ?
“ಪ್ರಧಾನಿ ಮೋದಿಯಾಗಲಿ, ಸಿಎಂ ಸಿದ್ದರಾಮಯ್ಯ ಆಗಲಿ, ಯಡಿಯೂರಪ್ಪ ಆಗಲಿ ಯಾರೇ ಆಗಲಿ ಅವರ ಹತ್ತಿರ ನಾವಾಗಿಯೇ ಹೋಗುವುದಲ್ಲ. ಅವರೇ ನಮ್ಮ ಪೀಠಕ್ಕೆ ಬರುವಂತಾಗಬೇಕು. ಇದನ್ನು ಸ್ವಾಮೀಜಿ ಮಾಡಬೇಕು ಎಂದು ನಾವು ಬಯಸುತ್ತೇವೆ. ರಾಜ್ಯದಲ್ಲಿ ನಮ್ಮ ಸಂಘಟನೆಯ ಮಾಹಿತಿ ಪ್ರಕಾರ ಸುಮಾರು 70-80 ಲಕ್ಷ ಜನರು ಪಂಚಮಸಾಲಿ ಸಮುದಾಯದವರಿದ್ದಾರೆ. ನಮಗೂ ರಾಜಕೀಯ ಶಕ್ತಿ ಇದೆ ಎಂಬುದನ್ನು ಕೂಡಲಸಂಗಮದಲ್ಲಿ ನಿಂತು ತೋರಿಸಬೇಕಿತ್ತು. ಅದನ್ನು ಬಿಟ್ಟು ಪ್ರಚಾರದ ಗೀಳಿಗೆ ಒಳಗಾಗಿ ಊರ ಉಸಾಬರಿ ಮಾಡುತ್ತ ತಿರುಗಾಡಿದರೆ ಮಠದ ಘನತೆ ಹಾಳಾಗುವುದಿಲ್ಲವೇ” ಎಂದು ಪ್ರಶ್ನಿಸಿದರು.
“ಈಗಲೂ ಕಾಲಮಿಂಚಿಲ್ಲ. ಸಮುದಾಯದ ಜನ ಸ್ವಾಮೀಜಿಯ ಹಿಂದಿದ್ದಾರೆ. ಎಲ್ಲ ಉಸಾಬರಿ ಬಿಟ್ಟು, ಕೂಡಲಸಂಗಮ ಪೀಠದಲ್ಲಿ ಕೂರಬೇಕು. ಪೀಠ ಅಭಿವೃದ್ಧಿ ಪಡಿಸುವತ್ತ ಯೋಚಿಸಬೇಕು. ಆಗ ನಾವೂ ಸಹಕಾರ ಕೊಡುತ್ತೇವೆ. ಆಗ ಯಾವ ನಾಯಕರು ಪೀಠಕ್ಕೆ ಸಹಾಯ ಮಾಡಲ್ಲ ನೋಡುತ್ತೇವೆ. ನಮ್ಮ ಸಮುದಾಯ ಒಗ್ಗಟ್ಟನ್ನು ಬೇರೆ ಬೇರೆ ಪಕ್ಷದಲ್ಲಿರುವ ನಾಯಕರೇ ಒಡೆಯುತ್ತಿದ್ದಾರೆ. ಇದನ್ನು ಸ್ವಾಮೀಜಿ ಅರ್ಥಮಾಡಿಕೊಂಡು ಅವರ ಜೊತೆ ಅಂತರ ಕಾಪಾಡಿಕೊಂಡರೆ ಅವರಿಗೂ ಕ್ಷೇಮ. ಪೀಠಕ್ಕೂ ಒಳ್ಳೆಯ ಹೆಸರು” ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ಬಗ್ಗೆಯೂ ಇದೆ ಆರೋಪ
“ಸ್ವಾಮೀಜಿ ಬಗ್ಗೆ ಆರೋಪಿಸುತ್ತಿರುವವರು ಟ್ರಸ್ಟ್ ಬಗ್ಗೆಯೂ ಮಾತನಾಡಬೇಕಲ್ವಾ? ನಮಗೆ ಗೊತ್ತಿರುವ ಹಾಗೇ ಯಡಿಯೂರಪ್ಪ ಪೀಠಕ್ಕೆ ಕಟ್ಟಡ ಕಟ್ಟಲು 1 ಕೋಟಿ ರೂ. ಅನುದಾನವನ್ನು ಒದಗಿಸಿದ್ದಾರೆ. ಡಿ ವಿ ಸದಾನಂದಗೌಡು ಮುಖ್ಯಮಂತ್ರಿಯಾದಾಗ ಅನುದಾನ ನೀಡಿದ್ದಾರೆ. ಪಂಚಮಸಾಲಿ ರಾಜಕೀಯ ನಾಯಕರು ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ. ಅದೆಲ್ಲ ಸೇರಿಸಿದರೆ 4-5 ಕೋಟಿ ಹಣವಾಗುತ್ತದೆ. ಕೂಡಲಸಂಗಮದಲ್ಲಿನ ಪೀಠದ ಕಟ್ಟಡ ನೋಡಿದರೆ ನಿರ್ಮಾಣಕ್ಕೆ 50 ಲಕ್ಷವೂ ಖರ್ಚಾಗಿಲ್ಲ. ಉಳಿದ ಹಣ ಏನಾಯಿತು? ಟ್ರಸ್ಟ್‌ನವರು ಈ ಬಗ್ಗೆ ಸಮುದಾಯಕ್ಕೆ ಹಣದ ಖರ್ಚಿನ ವಿವರದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಎಲ್ಲರ ನಾಟಕಗಳು ಬಯಲಾಗಲಿ” ಎನ್ನುತ್ತಾರೆ ಮೀಸಲಾತಿ ಹೋರಾಟದಲ್ಲಿ ಸಕ್ರಿಯರಾಗಿರುವ ಸ್ವಾಮೀಜಿಯ ಆಪ್ತರು.
(ಮುಂದುವರಿಯುವುದು…)

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.