ಎಚ್.ಆರ್.ರಂಗನಾಥ್ ಅವರು ಸರ್ಕಾರದ ಆದೇಶವನ್ನೇ ಸರಿಯಾಗಿ ಓದಿಕೊಂಡಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ವಿರುದ್ಧ ಹರಿಹಾಯ್ದಿರುವ ಪಬ್ಲಿಕ್ ಟಿ.ವಿ. ಸಂಪಾದಕ, ಮಾಲೀಕ ಎಚ್.ಆರ್. ರಂಗನಾಥ್ ತಪ್ಪು ಮಾಹಿತಿಗಳನ್ನು ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಗುರುವಾರ ರಾತ್ರಿಯ ‘ಬಿಗ್ ಬುಲೆಟಿನ್’ ವೇಳೆ ರಂಗನಾಥ್ ಮಾಡಿರುವ ಟೀಕೆಗಳು, ಎಸ್‌ಐಟಿ ತನಿಖೆಯ ವಿರುದ್ಧ ಅಸಹನೆಯನ್ನು ಹೊರಹಾಕಿವೆ. ರಂಗನಾಥ್ ಅವರು ಯಾರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದು ನೂರಾರು ಜನ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸಿದ್ದಾರೆ.
ಎಸ್‌ಐಟಿಗೆ ಆಜ್ಞೆ ಕೊಡುವ ರೀತಿಯಲ್ಲಿ ಮಾತನಾಡಿರುವ ರಂಗನಾಥ್, “ಎಸ್‌ಐಟಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಏನಿದೆ? ತನಿಖೆಯ ವ್ಯಾಪ್ತಿ ಏನು?” ಎಂಬುದನ್ನೇ ತಾನು ತಿಳಿದುಕೊಂಡಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ ನೋಡುಗರನ್ನು ತಪ್ಪು ದಾರಿಗೆ ಎಳೆಯುವಂತೆ, ಎಸ್‌ಐಟಿ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿಲ್ಲ ಎನ್ನುವಂತೆ ಬಿಂಬಿಸಲು ರಂಗನಾಥ್ ಯತ್ನಿಸಿದ್ದಾರೆ.
ರಂಗನಾಥ್ ಹೇಳಿದ್ದೇನು?
”ಧರ್ಮಸ್ಥಳದಲ್ಲಿನ ಕಥೆಯನ್ನು ಮುಂದುವರಿಸಿದರೆ, ನಮ್ಮ ಜೀವನ ನಡೆಯುತ್ತದೆ ಎಂದು ಕೆಲವರು ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಪೊಲೀಸರಲ್ಲಿ ಯಾರೋ ಈ ತನಿಖೆ ಮುಂದುವರಿಯಲಿ ಎಂದು ಬಯಸಿದ್ದಾರೆ. ಅದರಿಂದ ತಮ್ಮ ಲೆವೆಲ್ ಹೆಚ್ಚುತ್ತದೆ ಎಂದು ಯೋಚಿಸಿದ್ದಾರಾ? ನನಗೆ ಆ ರೀತಿಯ ಅನುಮಾನ ಅಧಿಕಾರಿಗಳ ಮೇಲೆ ಬರುತ್ತದೆ. ತನಿಖೆ ಇದ್ದಷ್ಟು ದಿನ ನನ್ನನ್ನು ಹೋಮ್ ಮಿನಿಸ್ಟರ್, ಚೀಫ್ ಮಿನಿಸ್ಟರ್ ಕರೆಯುತ್ತಾರೆ ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದಾರಾ?” ಎಂದು ರಂಗನಾಥ್ ಪ್ರಶ್ನಿಸುತ್ತಾರೆ.
ಮುಂದುವರಿದು, ”ಅವರದ್ದು ಬುರುಡೆ ಕಥೆಯಾಗಿದ್ದರೆ ಇವರ ತನಿಖೆಯೂ ಬುರುಡೆಯಾಗುತ್ತಿದೆ. ಹೂತು ಹಾಕಿರುವ ಪ್ರಕರಣಕ್ಕೆ ಹೋಗಿರುವ ಎಸ್‌ಐಟಿಯವರು, ಮೇಲ್ಮೈಯಲ್ಲಿ ಸಿಕ್ಕ ಬುರುಡೆಗಳನ್ನು ಯಾವ ಆಧಾರದಲ್ಲಿ ತಮ್ಮ ತನಿಖೆ ವ್ಯಾಪ್ತಿಗೆ ಹಾಕಿಕೊಳ್ಳುತ್ತಿದ್ದೀರಿ. ಇದನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿ. ಅದು ಅವರ ಜವಾಬ್ದಾರಿ. ಹೂತು ಹಾಕಿರುವುದಾದರೆ ಬೇರೆ ವಿಷಯ” ಎಂದು ಕಟ್ಟಾಜ್ಞೆ ಹೊರಡಿಸುತ್ತಾರೆ.
”ರೇಪ್ ಮತ್ತು ಮರ್ಡರ್ ಮಾಡಿ ಯಾರಿಗೂ ಗೊತ್ತಾಗಬಾರದೆಂದು ಹೂತು ಹಾಕಿದರು ಎಂಬುದರ ತನಿಖೆ ಇದು” ಎಂದು ಪ್ರತಿಪಾದಿಸುವ ರಂಗನಾಥ್, ”ಮೇಲ್ಮೈಯಲ್ಲಿ ಸಿಕ್ಕಿರುವುದನ್ನೆಲ್ಲ ತನಿಖೆಗೆ ಹಾಕುತ್ತಿರುವ ನೀವು ಯಾವ ರೀತಿಯ ಅಧಿಕಾರಿಗಳು? ಇಲಾಖೆಯಲ್ಲಿ ಯಾರು ಹೇಳೋರು ಕೇಳೋರು ಇಲ್ಲವಾ? ಹೋಮ್ ಮಿನಿಸ್ಟರ್ ಪೋಸ್ಟ್ ಮ್ಯಾನ್ ಟೈಪ್ ವರ್ತಿಸುತ್ತಿದ್ದಾರೆ. ಗೃಹ ಇಲಾಖೆಯ ಪಿಆರ್‌ಒ ರೀತಿ ಪರಮೇಶ್ವರ್ ಇದ್ದಾರೆ. ಅವರನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇದು ಅತಿಯಾಯಿತು. ಐದು ಸ್ಥಳದಲ್ಲಿ ಬುರುಡೆ ಸಿಕ್ಕಿದೆಯಂತೆ, ಅದು ಒಳಗಡೆ ಸಿಕ್ಕಿತಾ, ಹೊರಗಡೆ ಸಿಕ್ಕಿತಾ ಎಂಬುದಷ್ಟೇ ಪ್ರಶ್ನೆ. ಇದನ್ನು ತೆಗೆದುಕೊಂಡು ಹೋಗಿ ಸ್ಥಳೀಯ ಪೊಲೀಸರಿಗೆ ಕೊಡಿ. ಒಳಗೆ ಹೋಗಿರುವುದು ಸೌಜನ್ಯ, ಅನನ್ಯಾ. ಇದನ್ನೆಲ್ಲ ಬಿಟ್ಟು ಉಳಿದೆಲ್ಲದ್ದನ್ನು ಮಾಡುತ್ತಾ ಕೂತಿದ್ದೀರಲ್ಲ? ಐವತ್ತು ವರ್ಷಗಳಲ್ಲಿ ಹತ್ತು ಸಾವಿರ ಮೂಳೆ ಸಿಗುತ್ತದೆ. ಭಾರತದ ಒಬ್ಬನೇ ಒಬ್ಬ ಮೂಳೆ ಮ್ಯಾನ್ ಅಧಿಕಾರಿ ಅಂತ ನಿನ್ನ ಫೋಟೋ ಹಾಕಿಸಿ, ಪಬ್ಲಿಷ್ ಮಾಡಿಸುತ್ತೇನೆ. ಏನ್ರೀ, ಟೂ ಮಚ್ ಇದು. ಕೆಲವು ಅಧಿಕಾರಿಗಳು ಆಟ ಆಡುತ್ತಿದ್ದಾರೆ ಅನಿಸುತ್ತದೆ” ಎಂದು ಅಸಹನೆ ಹೊರಹಾಕುತ್ತಾರೆ.
”ವಿಠಲ್ ಗೌಡ ಏನೋ ಹೇಳಿಕೆ ನೀಡಿದ್ದಾರೆ. ಅವರಿಗೆ ಹೇಳುವ ಹಕ್ಕಿದೆ. ಆದರೆ ಮೂಲ ಕೇಸ್‌ನಲ್ಲಿ ಮೂಳೆ ತಂದಿದ್ದು ಏಕೆ ಎಂದು ಮೊದಲು ಹೇಳಿ. ಅದೇ ಬುರುಡೆಯನ್ನು ಚಿನ್ನಯ್ಯನ ಮೂಲಕ ತಂದು ಕೋರ್ಟ್‌ಗೆ ಸಲ್ಲಿಸಿದ್ದು ಏಕೆ? ಇಲ್ಲಿ ಕ್ರಮ ಆಗಬೇಕು. ಇದನ್ನು ಎಸ್‌ಐಟಿ ಮಾಡ್ತಾ ಇಲ್ಲ. ಎಸ್ಐಟಿ ಇನ್‌ಫಿಲ್‌ಟ್ರೇಟ್ ಆದಂತೆ ಕಾಣುತ್ತಿದೆ. ಆಲ್ ರೈಟ್, ನಿಮ್ಮದು ಎಷ್ಟು ದಿನ ಜೀವ ಇದೆ ನೋಡೋಣ” ಎಂದು ಹೇಳಿ ಮುಂದಿನ ವಿಷಯಕ್ಕೆ ಹೋಗುತ್ತಾರೆ.
ರಂಗನಾಥ್ ಪ್ರತಿಪಾದನೆಯಲ್ಲಿ ನಿಜವಿದೆಯೇ?
ಎಚ್.ಆರ್.ರಂಗನಾಥ್ ಅವರು ಸರ್ಕಾರದ ಆದೇಶವನ್ನೇ ಸರಿಯಾಗಿ ಓದಿಕೊಂಡಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ.
“ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರಗಳಿಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ, ನಿಷ್ಪಕ್ಷಪಾತ ತನಿಖೆಗಾಗಿ ಎಸ್‌ಐಟಿ ರಚಿಸಬೇಕು” ಎಂದು ಮಹಿಳಾ ಆಯೋಗ ಕೋರಿತ್ತು. ಇದರ ಜೊತೆಗೆ ಜನರ ಆಗ್ರಹಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಣಬ್ ಮೊಹಂತಿಯವರ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಯಿತು. ಆದರೆ ಈ ಎಸ್‌ಐಟಿ ಕೇವಲ ಚಿನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದ್ದಾಗಿಲ್ಲ. ಕೇವಲ ಅಗೆಯುವುದಷ್ಟೇ ಎಸ್‌ಐಟಿ ವ್ಯಾಪ್ತಿಗೆ ಬರುವುದಿಲ್ಲ. ಎಸ್‌ಐಟಿಗೆ ಪೊಲೀಸ್ ಠಾಣೆಯ ವ್ಯಾಪ್ತಿ ನೀಡಲಾಗಿದೆ. ಹೀಗಾಗಿ ಎಸ್‌ಐಟಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೂ ಈಗ ಸಾಧ್ಯವಿಲ್ಲ. ಹೀಗೆಯೇ ನಡೆದುಕೊಳ್ಳಬೇಕೆಂದು ಸರ್ಕಾರ ಆದೇಶಿಸಲೂ ಆಗದು. ”ಈಗಾಗಲೇ ದಾಖಲಾಗಿರುವ, ಮುಂದೆ ರಾಜ್ಯದಲ್ಲಿ ದಾಖಲಾಗುವ ಯಾವುದೇ ದೂರಿನ ತನಿಖೆಯನ್ನು ಮಾಡಬೇಕು” ಎಂದು ಆದೇಶ ಹೇಳುತ್ತದೆ. ಚಿನ್ನಯ್ಯನ ದೂರಿನ ಆಧಾರದಲ್ಲಿ ಎಸ್‌ಐಟಿ ರಚನೆಯಾದರೂ, ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ ಕೊಲೆ ಪ್ರಕರಣಗಳು, ಅತ್ಯಾಚಾರಗಳಿಗೆ ಈ ತನಿಖೆ ಸಂಬಂಧಿಸಿದೆ.
ಮೇಲ್ಮೈಯಲ್ಲಿ ಸಿಕ್ಕ ಬುರುಡೆಗಳನ್ನು ಸ್ಥಳೀಯ ಪೊಲೀಸರಿಗೆ ಕೊಟ್ಟುಬಿಡಿ ಎಂದು ಆಜ್ಞೆ ಮಾಡುವ ರಂಗನಾಥ್ ಅವರಿಗೆ, ಕಳೆದ ಹಲವು ದಶಕಗಳಿಂದ ಬೆಳ್ತಂಗಡಿ ಠಾಣೆ ಪೊಲೀಸರು ಹಲವಾರು ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದನ್ನು ನೆನಪಿಸಬೇಕಾಗುತ್ತದೆ. ಒಂದು ಠಾಣಾ ವ್ಯಾಪ್ತಿಯನ್ನು ಎಸ್‌ಐಟಿ ಪಡೆದಿರುವಾಗ, ಅದನ್ನು ಸ್ಥಳೀಯರಿಗೆ ವರ್ಗಾಯಿಸಿ ಎನ್ನುವುದು ರಂಗನಾಥ್ ಅವರ ಉದ್ದೇಶವನ್ನು ಪ್ರಶ್ನಿಸಲು ಕಾರಣವಾಗುತ್ತದೆ.
”ಏನ್ರೀ ಇದು ಟೂ ಮಚ್” ಎನ್ನುತ್ತಾರೆ ರಂಗನಾಥ್. ತನಿಖೆ ಪಾಡಿಗೆ ತನಿಖೆ ನಡೆಯುತ್ತಿದೆ. ಸತ್ಯ ಹೊರಬೀಳುತ್ತದೆ. ಅದನ್ನು ಎಸ್‌ಐಟಿ ಮಾಡಿದರೇನು? ಇನ್ಯಾರೋ ಸ್ಥಳೀಯ ಪೊಲೀಸರು ಮಾಡಿದರೇನು? ಎಂದು ಯೋಚಿಸುವುದು ಪತ್ರಕರ್ತನ ಕರ್ತವ್ಯ. ಉನ್ನತ ಅಧಿಕಾರಿಗಳ ಮೇಲೆಯೇ ಓರ್ವ ಪತ್ರಕರ್ತನಿಗೆ ವಿಶ್ವಾಸ ಇಲ್ಲವೇ ಎಂದು ಕೇಳಬೇಕಾಗುತ್ತದೆ ಅಥವಾ ರಂಗನಾಥ್ ಯಾರದೋ ಪಕ್ಷಪಾತಿಯಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಬೇಕಾಗುತ್ತದೆ.
