ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ಸ್ಥಿತಿಯಲ್ಲಿ RSS; ದೇವನೂರರ ಮನೋಜ್ಞ ವಿಶ್ಲೇಷಣೆ

Date:

Advertisements
“ನೂರು ವರ್ಷಗಳಾದರೂ ಆರ್‌ಎಸ್‌ಎಸ್ ಸಂಘಟನೆಯನ್ನು ರಿಜಿಸ್ಟ್ರೆಷನ್ ಮಾಡಿಸದೇ ಇರುವುದು ಹಾಗೂ ಸಾರ್ವಜನಿಕರಿಂದ ಶೇಖರಿಸುವ ಹಣಕ್ಕೆ ಲೆಕ್ಕಪತ್ರ ಬಹಿರಂಗ ಪಡಿಸದೇ ಇರುವುದು ಮತ್ತು ಸಂಘದ ಸಂಪತ್ತಿನ ವಿವರ ನೀಡದಿರುವುದು ಒಳ್ಳೆಯ ಸಂಸ್ಕೃತಿಯಲ್ಲ" ಎಂದು ದೇವನೂರ ಮಹಾದೇವ ಅವರು ಅಭಿಪ್ರಾಯಪಟ್ಟಿದ್ದಾರೆ.

“ಎಳೆತನದಲ್ಲೆ ಬುದ್ಧಿ ಸ್ಥಗಿತಗೊಂಡ, ದೇಹ ಮಾತ್ರ ಬೆಳವಣಿಗೆಯಾದ ದಢೂತಿ ದೇಹದಂತೆ ಆರ್‌ಎಸ್‌ಎಸ್‌ (RSS) ಗೋಚರಿಸುತ್ತಿದೆ” ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ವಿಶ್ಲೇಷಿಸಿದ್ದಾರೆ.

ಆರ್‌ಎಸ್‌ಎಸ್‌ಗೆ ನೂರು ವರ್ಷವಾದ ಹಿನ್ನೆಲೆಯಲ್ಲಿ ‘ಫ್ರಂಟ್‌ಲೈನ್- ದಿ ಹಿಂದೂ’ ಮ್ಯಾಗಸಿನ್‌ಗೆ ದೇವನೂರರು ಬರೆದಿರುವ ಲೇಖನದ ಕನ್ನಡ ಅವತರಣಿಕೆಯನ್ನು ಇಂದು (ಶುಕ್ರವಾರ) ‘ಪ್ರಜಾವಾಣಿ’ ದಿನಪತ್ರಿಕೆ ಪ್ರಕಟಿಸಿದೆ. ಈ ಹಿಂದೆ ‘ಆರ್‌ಎಸ್‌ಎಸ್‌ ಆಳ-ಅಗಲ’ ಕೃತಿ ಬರೆದು ಭಾರೀ ಸಂಚಲನ ಉಂಟು ಮಾಡಿದ್ದ ಅವರು, ಮತ್ತೊಮ್ಮೆ ಆರ್‌ಎಸ್‌ಎಸ್‌ನ ನಿಜಸ್ಥಿತಿಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

“ಆರ್.ಎಸ್.ಎಸ್.ಗೆ ನೂರು ವರ್ಷಗಳಂತೆ! ಹೌದಾ?” ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಲೇಖನವು “ಆರ್‌ಎಸ್‌ಎಸ್ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು” ಎಂಬ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ.

“ಆರ್‌ಎಸ್‌ಎಸ್ ಹುಟ್ಟಿ ನೂರು ವರ್ಷಗಳಾಗಿಬಿಟ್ಟಿತಂತೆ. ಇಂದು ಇದು ನೋಡುವುದಕ್ಕೆ ಹೇಗಿದೆ? ಹೇಗಿದೆ ಅಂದರೆ, ಆರ್‌ಎಸ್‌ಎಸ್ ತನ್ನ ಎಳೆತನದಲ್ಲೆ ಬುದ್ಧಿ ಸ್ಥಗಿತಗೊಂಡ ದೇಹ ಮಾತ್ರ ಬೆಳವಣಿಗೆಯಾದ ದಢೂತಿ ದೇಹದಂತೆ ಗೋಚರಿಸುತ್ತಿದೆ. ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದು ಹೊರಬೀಳುವವರೂ ಹಾಗೆಯೇ ಕಾಣುತ್ತಿದ್ದಾರೆ. ಈಗ ಅದು ಸಂಖ್ಯೆಯಲ್ಲಿ ಬಹಳ ದೊಡ್ಡದಾಗಿ ಬೆಳೆದಿರಬಹುದು. ಆದರೆ ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ನಂತರವೂ ಆಗುವ ದಢೂತಿ ದೇಹದ ಅಸಮತೋಲನ ಇದು. ನಮ್ಮ ಸಹಜೀವಿಗಳು ಹೀಗಾಗಿರುವುದನ್ನು ಕಂಡು ಸಂಕಟವಾಗುತ್ತಿದೆ” ಎಂದಿದ್ದಾರೆ.

“ಆರ್‌ಎಸ್‌ಎಸ್‌ನ ಸ್ಥಗಿತ ಸ್ಥಿತಿಗೆ ಕಾರಣ ಎಲ್ಲಿದೆ? ಮೂಲ ಯಾವುದು? ನನ್ನ ಈ ಸಹಜೀವಿಗಳನ್ನು ಗುಣಮುಖರನ್ನಾಗಿಸುವುದು ಹೇಗೆ? ಹೇಗೆ ಎಂದು ಹುಡುಕುತ್ತಿರುವೆ- ನನ್ನ ಸಂಕಟಕ್ಕಾಗಿ” ಎಂದು ವಿವರಿಸುತ್ತಾ ಹೋಗಿರುವ ಅವರು, ಆರ್‌ಎಸ್‌ಎಸ್‌ ಸಂಸ್ಥಾಪಕರು ಆಡಿರುವ ಮಾತುಗಳನ್ನು ವಿಸ್ತೃತವಾಗಿ ಉಲ್ಲೇಖಿಸಿ ತಮ್ಮ ನಿಲುವುಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿರಿ: ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ

“ಕೆಲವರಿಗೆ ನೆನಪಿರಲೂಬಹುದು. ಸಾಮಾನ್ಯವಾಗಿ ಆರ್‌ಎಸ್‌ಎಸ್ ಜಪಿಸುವುದು ಅವರ ಸರಸಂಘ ಚಾಲಕ ಶ್ರೀ ಗೋಲ್ವಾಲ್ಕರ್ ಅವರ ನುಡಿಗಳು. ಈಗ ಒಂದಿಷ್ಟು ನೋಡೋಣ: ‘ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರುವುದಿಲ್ಲ. ಹೇಳಿದಂತೆ ಮಾಡಿ. ಕಬಡ್ಡಿ ಆಡಲು ಹೇಳಿದರೆ ಕಬಡ್ಡಿ ಆಡಿ. ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿ… ಉದಾಹರಣೆಗೆ ನಮ್ಮ ಕೆಲವು ಮಿತ್ರರಿಗೆ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಲಾಯಿತು. ಇದರರ್ಥ ಅವರಿಗೆ ರಾಜಕೀಯದಲ್ಲಿ ಭಾರೀ ಆಸಕ್ತಿ ಇದೆ ಅಥವಾ ಪ್ರೇರೇಪಣೆ ಇದೆ ಎಂದಲ್ಲ. ಅವರು ರಾಜಕೀಯಕ್ಕಾಗಿ ನೀರಿಲ್ಲದ ಮೀನಿನಂತೆ ಪ್ರಾಣತ್ಯಾಗ ಮಾಡುವುದಿಲ್ಲ. ರಾಜಕೀಯದಿಂದ ಹೊರಬರುವಂತೆ ಹೇಳಿದರೆ ಅದಕ್ಕೂ ಅವರ ಆಕ್ಷೇಪವಿಲ್ಲ. ಅವರ ವಿವೇಚನಾಶಕ್ತಿ ಬೇಕಾಗಿಯೇ ಇಲ್ಲ’ (ವಾರ್ಧಾದ ಸಿಂಡಿಯಲ್ಲಿ ಗೋಲ್ವಾಲ್ಕರ್ ಭಾಷಣ-ಮಾರ್ಚ್ 16, 1954). ಆರ್.ಎಸ್.ಎಸ್.ಗೆ ತಮ್ಮ ಸಂಘಟನೆಗೆ ಸೇರಿದವರಿಗೆ ವಿವೇಚನಾಶಕ್ತಿ ಬೇಕಾಗಿಯೇ ಇಲ್ಲವಂತೆ! ಆಯ್ಕೆಯೂ ಬೇಡವಂತೆ. ವಿವೇಚನೆ, ಆಯ್ಕೆ, ವಿವೇಕವಿಲ್ಲದ ಮನುಷ್ಯ ಏನಾಗುತ್ತಾನೆ? ರೋಬೋಟ್‌ನಂತೆ ಯಾರೋ ಎಲ್ಲೋ ಕಂಟ್ರೋಲ್ ಮಾಡುತ್ತಿರುವುದಕ್ಕೆ ತಕ್ಕಂತೆ ವರ್ತಿಸುತ್ತಾನೆ. ಆ ಮನುಷ್ಯನ ಒಳಗಿರುವ ಮನುಷ್ಯತನವೇ ಕಳೆದುಕೊಂಡಂತಾಗಿಬಿಟ್ಟಿರುತ್ತದೆ. ಆರ್‌ಎಸ್‌ಎಸ್ ಪಠ್ಯದಂತೆ ತರಬೇತಿ ಪಡೆದು ಪಳಗಿದ ಬಾಲಕರು ನೂರು ವರ್ಷ ಬದುಕಿದರೂ ರೋಬೋಟ್‌ನಂತೆಯೇ ಉಳಿದುಬಿಡಬಹುದು. ದೇಹ ಬೆಳೆದರೂ, ಸಂಘ ನೀಡುವ ತರಬೇತಿ ಕಾರಣವಾಗಿ ಬಹುತೇಕರ ಬುದ್ಧಿ ಸ್ಥಗಿತಗೊಳ್ಳಲೂಬಹುದು. ಇಂತವರು ಕಣ್ಣೆದುರು ಕಾಣುವ ಸತ್ಯದ ನಿರಾಕರಣೆ ಮಾಡುತ್ತಾರೆ. ತಮ್ಮ ಸ್ಥಗಿತ ಆಲೋಚನೆಗೆ ಪೂರಕವಾಗಿ ವಾದ ಹುಟ್ಟಿಸುತ್ತಾರೆ. ಅಂತಹ ವಾದ ಇಲ್ಲದಾಗ ಸುಳ್ಳುಗಳನ್ನು ಹೆಣೆಯುತ್ತಾ ಹೋಗುತ್ತಾರೆ. ತಮ್ಮ ಶಕ್ತಿ ಪ್ರದರ್ಶನಕ್ಕೆ ಪೆರೇಡ್ ಮಾಡುತ್ತಿರುತ್ತಾರೆ. ಆರ್‌ಎಸ್‌ಎಸ್ ಇದನ್ನು ಶಿಸ್ತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಮೇಲ್ನೋಟಕ್ಕೆ ಹಾಗೇ ಕಾಣಿಸುತ್ತದೆ. ಆದರೆ ಒಳಹೊಕ್ಕು ನೋಡಿದರೆ ಅದು- ಅರಳುವ ವ್ಯಕ್ತಿತ್ವವನ್ನು ಕಮರಿಸುವ ತರಬೇತಿ ಕೇಂದ್ರ ಅನ್ನಿಸುತ್ತದೆ” ಎಂದು ಟೀಕಿಸಿದ್ದಾರೆ.

“ಹಾಗಾದರೆ, ಇವರ ಬಯಕೆ ಏನು? ಮನುಷ್ಯರಲ್ಲಿ ಮನುಷ್ಯತನವನ್ನು ಕತ್ತರಿಸುತ್ತಿರುವ ಈ ಕ್ರೌರ್ಯ ಯಾಕಾಗಿ? ಯಾಕೆಂದರೆ, ಅವರ ದೇವರ ಸಾಕ್ಷಾತ್ಕಾರಕ್ಕಾಗಿ. ನೋಡಿ, ಅವರ ಗುರೂಜಿ ಗೋಲ್ವಾಲ್ಕರ್ ಹೇಳುತ್ತಾರೆ- “ನಮ್ಮಲ್ಲಿರುವ ಎಲ್ಲಾ ಶಕ್ತಿಗಳನ್ನು ಪ್ರಚೋದಿಸುವ ‘ಜೀವಂತ’ ಪರಮಾತ್ಮ ಬೇಕು. ಆದುದರಿಂದಲೇ ನಮ್ಮ ಹಿರಿಯರು ಹೇಳಿದರು: ‘ನಮ್ಮ ಸಮಾಜವೇ ನಮ್ಮ ದೇವರು… ಹಿಂದೂ ಜನಾಂಗವೇ ‘ವಿರಾಟ ಪುರುಷ’ ಸರ್ವಶಕ್ತನ ರೂಪ’ ಎಂದರು. ‘ಹಿಂದು’ ಎಂಬ ಪದವನ್ನು ಅವರು ಬಳಸದಿದ್ದರೂ ‘ಪುರುಷ ಸೂಕ್ತ’ದಲ್ಲಿ ಬರುವ ಈ ಕೆಳಗಿನ ವರ್ಣನೆಯಲ್ಲಿ ಈ ಮಾತು ಸ್ಪಷ್ಟವಾಗುತ್ತದೆ- ಬ್ರಾಹ್ಮಣನು ಆತನ ಶಿರ, ರಾಜನೇ ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರನು ಪಾದ ಎನ್ನುವ ಮಾತು ಬಂದಿದೆ. ಈ ಚತುರ್ವಿಧ(ಚಾತುರ್ವರ್ಣ) ವ್ಯವಸ್ಥೆಯನ್ನು ಹೊಂದಿದವರು ಎಂದರೆ ಹಿಂದೂ ಜನಾಂಗ, ಇದೇ ನಮ್ಮ ದೇವರು ಎಂಬುದೇ ಇದರ ಅರ್ಥ (ಉಲ್ಲೇಖ: ಗೋಲ್ವಾಲ್ಕರ್, ಚಿಂತನಗಂಗಾ, 3ನೇ ಮುದ್ರಣ, ಪುಟ 29, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)”. ಅಂದರೆ, ಹಿಂದೂ ಸಮಾಜದಲ್ಲಿ ಚಾತರ್ವರ್ಣ ಸಾಮಾಜಿಕ ಪದ್ಧತಿಯನ್ನು ಪ್ರತಿಷ್ಠಾಪಿಸುವುದೇ ಇವರಿಗೆ ಜೀವಂತ ದೇವರ ಸಾಕ್ಷಾತ್ಕಾರವಂತೆ! ಇಂತಹ ಸಮಾಜವೊಂದರಲ್ಲಿ, ತಲೆ ಅಂದರೆ ಮಿದುಳು ನಿರ್ಧರಿಸಿದಂತೆ ತೋಳು, ತೊಡೆ, ಪಾದಗಳು ನಡೆದುಕೊಳ್ಳುವುದಷ್ಟೆ ಅವುಗಳ ಕೆಲಸವಾಗಿರುತ್ತದೆ. ಅಂದರೆ, ಚಾತರ್ವರ್ಣದ ಸಾಮಾಜಿಕ ಪದ್ಧತಿಯಲ್ಲಿ ಪಾದ(ಶೂದ್ರ)ವಾದವರು ಅವರೂ ಸಾವಯವ ಮನುಷ್ಯರಾದರೂ, ಅವರೊಳಗೂ ಮಿದುಳಿದೆ ಎಂದು ಪರಿಗಣಿಸುವುದಿಲ್ಲ. ಪಾದಗಳದು ಮಾತ್ರವಲ್ಲ ಬಾಹು, ತೊಡೆಗಳ ಕತೆಯೂ ತಲೆಗೆ ಕೆಳಗಿನದೆ. ಅವರ ಮಿದುಳಿಗೆ ಮೌಢ್ಯ, ರೂಢಿ, ಆಚರಣೆ, ಪುರಾಣ ಕತೆಗಳನ್ನು ತುಂಬಿ ನಿಷ್ಕ್ರಿಯವಾಗಿಸುವ ವ್ಯವಸ್ಥೆ ಇದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಇದೆಲ್ಲಾ ಮಾಡುತ್ತಿರುವ ಅವರ ಒಳಬಯಕೆ ಏನೆಂದು ನೋಡಿದರೆ, ಸಾವರ್ಕರ್ ಅವರ ಬರೆಹಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ –‘ಹಿಂದೂ ರಾಷ್ಟ್ರದಲ್ಲಿ ವೇದಗಳ ನಂತರ ಮನುಸ್ಮೃತಿಯೇ ಅತ್ಯಂತ ಪೂಜನೀಯ ಮತಗ್ರಂಥವಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ-ಪದ್ಧತಿಗಳು, ಚಿಂತನೆ ಮತ್ತು ನಡವಳಿಕೆಗಳಿಗೆ ನಿರ್ಣಾಯಕ ತತ್ವ ಅದೇ ಆಗಿದೆ. ಈ ಗ್ರಂಥ ಶತಮಾನಗಳಿಂದಲೂ ನಮ್ಮ ದೇಶದ ಆಧ್ಯಾತ್ಮಿಕ ಹಾಗೂ ದೈವಿಕ ಪಯಣವನ್ನು ಕ್ರೋಢೀಕರಿಸಿ ಸಂಹಿತೆ ಆಗಿಸಿದೆ. ಕೋಟ್ಯಾಂತರ ಹಿಂದುಗಳು ಇಂದಿಗೂ ತಮ್ಮ ಬದುಕು ಹಾಗೂ ನಡೆನುಡಿಗಳಲ್ಲಿ ಅನುಸರಿಸುತ್ತಿರುವ ನೀತಿ ನಿಯಮಗಳಿಗೆ ಮನುಸ್ಮೃತಿಯೇ ಆಧಾರ. ಇವತ್ತು ಮನುಸ್ಮೃತಿಯೇ ಹಿಂದೂ ಕಾಯಿದೆ (ಉಲ್ಲೇಖ: ಡಿ.ವಿ.ಸಾವರ್ಕರ್, ‘Women in Manusmrithi’- Savarkar Samagra, ಸಂಪುಟ 4, ಪ್ರಭಾತ್ ಪ್ರಕಾಶನ, ದೆಹಲಿ. ಆಯ್ದ ಭಾಗದ ಅನುವಾದ: ಸುರೇಶ್ ಭಟ್, ಬಾಕ್ರಬೈಲು)’. ಅಂದರೆ ಚಾತುರ್ವರ್ಣ ಹಿಂದುತ್ವದವರಿಗೆ ಮನುಧರ್ಮಶಾಸ್ತ್ರವೇ ಕಾನೂನುಗಳಾಗಬೇಕಂತೆ. ನ್ಯಾಯದೊಳಗಿಂದಲೆ ನ್ಯಾಯವನ್ನೆ ಕೊಂದ ತಾರತಮ್ಯದ ನ್ಯಾಯಪದ್ಧತಿ ಇದು. ಹೀಗಿದ್ದೂ ಅದೇ ಸಂವಿಧಾನ ಆಗಬೇಕಂತೆ. ಇದೇನಿದು? ಗೊಲ್ವಾಲ್ಕರ್, ಸಾವರ್ಕರ್ ಅವರ ಈ ಎಲ್ಲಾ ಮಾತುಗಳು ಅಪಮೌಲ್ಯಗಳಲ್ಲವೆ? ಸೈದ್ಧಾಂತಿಕ ಭ್ರಷ್ಟತೆಯಲ್ಲವೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಬ್ರಾಹ್ಮಣ್ಯದ ಜನರು ಜಾತಿ ಗಣತಿಯನ್ನು ಯಾಕೆ ವಿರೋಧಿಸುತ್ತಾರೆ?

“ಬೌದ್ಧಿಕ ಭ್ರಷ್ಟರಾದವರು ಮಾತ್ರ ಹೀಗೆಲ್ಲಾ ಯೋಚಿಸಬಲ್ಲರು! ಹೀಗಾದರೆ ಮಹಿಳೆಯರ ಗತಿ ಏನು? ಕ್ಷತ್ರೀಯರಿಗೆ ವೈಶ್ಯರಿಗೆ ಒಳ್ಳೆಯ ವಾತಾವರಣವಾದರೂ ಇದೆ. ಆದರೆ, ಈ ಹಿಂದೆ ಮೇಲಿನವರ ಸೇವಕರಾಗಿದ್ದ ಶೂದ್ರರು ಎನ್ನಿಸಿಕೊಂಡಿದ್ದವರ ಪಾಡೇನು? ಇನ್ನು ಊರಾಚೆಯ ಅಸ್ಪೃಶ್ಯರಂತು ಲೆಕ್ಕಕ್ಕೂ ಇಲ್ಲ, ಜಮಕ್ಕೂ ಇಲ್ಲ – ಹೀಗಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

“ಇಂದು ಚಾತುರ್ವರ್ಣ ಸಮಾಜ ಮರುಕಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರಲ್ಲಿದೆ. ನಮ್ಮ ಕಣ್ಣೆದುರು ನಡೆಯುತ್ತಿರುವುದು ನಮಗೆ ಕಾಣುತ್ತಿಲ್ಲ. ಆರ್‌ಎಸ್‌ಎಸ್‌ನ ಕಣ್ಸನ್ನೆಯ ಪಕ್ಷ- ಬಿಜೆಪಿ ನೇತೃತ್ವದ ಸರ್ಕಾರ EWS ಮೀಸಲಾತಿ ತಂದಿದ್ದು ಏನು? ಭಾರತದ ಸಮಾಜದಲ್ಲಿ ಯಾರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆದಿದ್ದಾರೊ ಹಾಗೂ ಯಾವ ಜಾತಿಗಳು ಉದ್ಯೋಗಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಾತಿನಿಧ್ಯ ಪಡೆದಿದ್ದಾರೊ, ಅಂತಹ ಮೇಲುಜಾತಿಗಳಿಗೆ ಸೇರಿದವರಿಗೆ ಆರ್ಥಿಕವಾಗಿ ಹಿಂದುಳಿದವರೆಂದು 10% ಮೀಸಲಾತಿ ನೀಡಲಾಗಿದೆ. ದೇಶದಲ್ಲಿ ಈ ಮೇಲುಜಾತಿಗಳ ಜನಸಂಖ್ಯೆ ಕೇವಲ 5%, ಇವರಿಗೆ 10% ಮೀಸಲಾತಿ ಸಿಕ್ಕಿದೆ. ಈ ರೀತಿ ತಮ್ಮ ಜನಸಂಖ್ಯೆಗಿಂತಲೂ ದ್ವಿಗುಣವಾಗಿ ಮೀಸಲಾತಿಯು ತಳಸಮುದಾಯಗಳಾದ ಆದಿವಾಸಿಗಳಿಗಾಗಲೀ, ಅಲೆಮಾರಿಗಳಿಗಾಗಲೀ, ಅಸ್ಪೃಶ್ಯರಿಗಾಗಲೀ ಯಾರಿಗೂ ದಕ್ಕಿಲ್ಲ. ಆದರೆ ಮುಂದುವರಿದ ಮೇಲುಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ಸಿಗಲು ಏನು ಕಾರಣ? ಮೇಲಿನವರಿಗೆ ಹೆಚ್ಚಿಗೆ ಪಾಲು ಎಂಬ ಮನುಧರ್ಮದ ಶಾಸ್ತ್ರದ ನೀತಿ ಕಾರಣವಲ್ಲವೆ? ಇದನ್ನು ನಮ್ಮ ನ್ಯಾಯಾಲಯವೂ ಎತ್ತಿ ಹಿಡಿಯಿತಲ್ಲ” ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

“ಬಾಬ್ರಿ ಮಸೀದಿ ಧ್ವಂಸದಲ್ಲಿ ನಮ್ಮ ಉಚ್ಛ ನ್ಯಾಯಾಲಯವು ಬಹುಜನರ ಭಾವನೆ ಪರಿಗಣಿಸಿ ತೀರ್ಪು ನೀಡುವುದಾದರೆ ನಮ್ಮ ಕಾನೂನು ಕಟ್ಟಳೆಗಳ ಸೂತ್ರ ಕಿತ್ತೆಸದಂತಾಗುವುದಿಲ್ಲವೆ? ಅಂದರೆ, ಈ ಹಿಂದೆ ಇದ್ದಂತಹ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂಬ ನೀತಿಯಿಲ್ಲದ ನ್ಯಾಯಪದ್ಧತಿಯತ್ತ ಹಿಂದಕ್ಕೆ ಚಲಿಸಿದಂತಾಯ್ತು. ಹೀಗೆಯೇ 1998ರಲ್ಲಿ ಕೇಂದ್ರ ಸಚಿವ ಡಾ.ಮುರಳಿ ಮನೋಹರ ಜೋಷಿಯವರು ಪಠ್ಯಪುಸ್ತಕಗಳಲ್ಲಿ, ಗಂಡು ಸಂತಾನ ಪಡೆಯಲು ಪುತ್ರಕಾಮೇಷ್ಠಿ ಯಜ್ಞ ನಡೆಸುವುದು ಹೇಗೆಂಬುದನ್ನು ಕಲಿಕೆಗೆ ಪಠ್ಯವಾಗಿಸುತ್ತಾರೆ. ವೈಜ್ಞಾನಿಕ ಖಗೋಳಶಾಸ್ತ್ರಕ್ಕೆ ಬದಲಾಗಿ ಜ್ಯೋತಿಷ್ಯ ಶಾಸ್ತ್ರದ ಕಲಿಕೆ, ಹಾಗೇ ‘ಪೌರೋಹಿತ್ಯ ಮತ್ತು ಕರ್ಮಕಾಂಡ’ ಪಠ್ಯ ವಿಷಯವಾಗುವುದಾದರೆ ಇವರು ಯಾವ ಕಾಲದಲ್ಲಿ ವಾಸಿಸುತ್ತಿದ್ದಾರೋ ತಿಳಿಯದು. ಇವರು ಹಿಂಚಲನೆಯವರು, ಇವರುಗಳ ಪಾದ ಹಿಂದಕ್ಕೆ ಇದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಆರ್‌ಎಸ್‌ಎಸ್‌ನಲ್ಲಿ ಪಳಗಿದವರು ಉನ್ನತ ಸ್ಥಾನಕ್ಕೇರಿದರೂ ಅವರ ಸಂಘದ ತರಬೇತಿಯ ಕಾರಣವಾಗಿ ಅವರ ಬುದ್ಧಿಮತ್ತೆ ಹೇಗಿರುತ್ತದೆಂದರೆ- ಹೀಗೇ ಒಂದು ಟಿವಿ ಸಂದರ್ಶನದಲ್ಲಿ ರೇಡಾರ್ ಬಗ್ಗೆ ಮಾತಾಡುತ್ತ, ‘ನಾನೇನೂ ಈ ವಿಚಾರದಲ್ಲಿ ಎಕ್ಸ್‌ಪರ್ಟ್ ಅಲ್ಲ. ಆದರೆ, ಪಾಕಿಸ್ತಾನದ ಮೇಲೆ ಏರ್‌ ಸ್ಟ್ರೈಕ್ ಮಾಡಲು ರೇಡಾರ್‌ನಿಂದ ಬಚಾವಾಗುವುದು ಹೇಗೆ ಎಂದು ವಾಯುಸೇನೆಯ ಅಧಿಕಾರಿಗಳು ಚಿಂತಿಸುತ್ತಿದ್ದರು. ಆಗ ನಾನು- ಮೋಡಗಳಿರುವಾಗ ಸ್ಟ್ರೈಕ್ ಮಾಡಿ ಬಿಡಿ, ರೇಡಾರ್‌ನಿಂದ ಬಚಾವಾಗಬಹುದು- ಎಂದೆ. ಕಡೆಗೆ ಹಾಗೆಯೇ ಮಾಡಿದರು’- ಹೀಗೆಲ್ಲಾ ಕಲ್ಪನಾವಿಲಾಸ ಬಾಲಲೀಲೆಯಲ್ಲವೆ? ಮಕ್ಕಳು ಹೀಗೆಲ್ಲಾ ಹೇಳಿದರೆ ಸಂತೋಷಪಡಬಹುದು. ಆದರೆ ದೊಡ್ಡವರೆ ಹೀಗೆಲ್ಲ ಹೇಳಿದರೆ ಭ್ರಮಾಧೀನ ಅನ್ನಿಸಿಕೊಳ್ಳುವುದಿಲ್ಲವೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಬಾಪೂ ಎಂಬ ಪವಾಡದ ಅನ್ವೇಷಣೆ…

ನೂರುವರ್ಷಗಳು ತುಂಬುವ ಆರ್‌ಎಸ್‌ಎಸ್‌ಗೆ ಒಂದೆರಡು ಪ್ರಾರ್ಥನೆ ಸಲ್ಲಿಸಿರುವ ಅವರು, “ನೂರು ವರ್ಷಗಳಾದರೂ ಆರ್‌ಎಸ್‌ಎಸ್ ಸಂಘಟನೆಯನ್ನು ರಿಜಿಸ್ಟ್ರೆಷನ್ ಮಾಡಿಸದೇ ಇರುವುದು ಹಾಗೂ ಸಾರ್ವಜನಿಕರಿಂದ ಶೇಖರಿಸುವ ಹಣಕ್ಕೆ ಲೆಕ್ಕಪತ್ರ ಬಹಿರಂಗ ಪಡಿಸದೇ ಇರುವುದು ಮತ್ತು ಸಂಘದ ಸಂಪತ್ತಿನ ವಿವರ ನೀಡದಿರುವುದು ಒಳ್ಳೆಯ ಸಂಸ್ಕೃತಿಯಲ್ಲ. ನೂರುವರ್ಷ ತುಂಬಿದ ಈ ಸಂದರ್ಭದಲ್ಲಾದರೂ ಕಳಂಕರಹಿತರಾಗಿ ಎಂದು ಪ್ರಾರ್ಥಿಸುವೆ” ಎಂದಿದ್ದಾರೆ.

ಮುಂದುವರಿದು, “ಭಾರತದ ಬಹುತೇಕ ಕುಟುಂಬಗಳಲ್ಲಿ ಪಿತೃಪಕ್ಷ ಆಚರಿಸುತ್ತಾರೆ. ಗತಿಸಿದ ತಮ್ಮ ಪೂರ್ವಿಕರಿಗೆ ಅವರ ಇಷ್ಟಾರ್ಥಗಳನ್ನು ಎಡೆ ಇಟ್ಟು, ಪೂಜೆ ಸಲ್ಲಿಸುತ್ತಾರೆ. ಈ ಪಿತೃಪೂಜೆ ಆಚರಣೆಗೆ, ಹಂಸ-ಕ್ಷೀರ ನ್ಯಾಯದ ನೀತಿ ಅಳವಡಿಸಿಕೊಂಡು ಗುಣಾತ್ಮಕ ಮಾಡುವುದಾದರೆ, ಉದಾಹರಣೆಗೆ- ನಾನು, ನನ್ನ ಗತಿಸಿದ ಜೈವಿಕ ಪಿತೃಗಳಿಗೂ ಜೊತೆಗೆ ನನ್ನನ್ನು ಪ್ರಭಾವಿಸಿದ ಸೈದ್ಧಾಂತಿಕ ಪಿತೃಗಳಿಗೂ ಪೂಜೆ ಸಲ್ಲಿಸುತ್ತೇನೆ. ‘ಕೂಡಿಸುವುದು ದೈವ; ವಿಭಜಿಸುವುದು ದೆವ್ವ’ ಎಂಬ ಭಾರತೀಯ ಸುಪ್ತಮನಸ್ಸಿನ ವಿವೇಕಕ್ಕೆ ಶರಣಾಗಿ ನನ್ನ ಜೈವಿಕ ಮತ್ತು ಸೈದ್ಧಾಂತಿಕ ಪಿತೃಗಳಲ್ಲಿದ್ದ ಕೂಡಿಸುವ ಅಂಶಗಳನ್ನು ಸೇವಿಸುತ್ತೇನೆ; ವಿಭಜಿಸುವ ಅಂಶಗಳನ್ನು ವಿಸರ್ಜಿಸುತ್ತೇನೆ. ಹೀಗೆಯೇ ಆರ್‌ಎಸ್‌ಎಸ್ ಕೂಡ ತನ್ನ ಸೈದ್ಧಾಂತಿಕ ಪೂರ್ವಿಕರಾದ ಗೋಲ್ವಾಲ್ಕರ್ ಮತ್ತು ಸಾವರ್ಕರ್ ಮತ್ತಿತರರಲ್ಲಿ ಇರಬಹುದಾದ ಒಳ್ಳೆಯ ಸ್ವಭಾವಗಳನ್ನು ಸೇವಿಸಿ, ಅವರ ವಿಭಜಿಸುವ, ತಾರತಮ್ಯದ, ಅಪಮೌಲ್ಯದ ಆಲೋಚನೆಗಳನ್ನು ವಿಸರ್ಜಿಸುವುದಾದರೆ ಅದರಲ್ಲಿ ಕಳೆದುಕೊಳ್ಳುವುದು ಏನೂ ಇರುವುದಿಲ್ಲ, ಅದು ವಿಷಕಾರಿ ವಿಸರ್ಜನೆ ಅಷ್ಟೆ! ಆಗ ಆರ್‌ಎಸ್‌ಎಸ್‌ನ ದೇಹ, ಮನಸ್ಸಿನಲ್ಲಿರುವ ವಿಷಕಾರಿ ಕೊಳಕು ನಿವಾರಣೆಯಾಗುತ್ತದೆ. ಇದರಿಂದ ಸಮಾಜದಲ್ಲಿರುವ ವಿಷಕಾರಿ ಕೊಳಕೂ ನಿವಾರಣೆಯಾಗುತ್ತದೆ. ಆರ್‌ಎಸ್‌ಎಸ್ ಬಂಧಿಸಿಟ್ಟಿದ್ದ ವಿವೇಚನೆ, ಆಯ್ಕೆ, ವಿವೇಕ ಬಿಡುಗಡೆಯಾಗುತ್ತವೆ. ಆಗ ಭಾರತದಲ್ಲಿ ಸಹನೆ ಮತ್ತು ಪ್ರೀತಿ ವೃದ್ಧಿಸುತ್ತದೆ. ಇದು ಮುಂದೆ ‘ಗೌರವೀ ಸಹಬಾಳ್ವೆ’ಯಾಗಿ ಬೆಳೆಯುತ್ತದೆ. ಇದೂ ಬೆಳೆದರೆ ‘ವಿಕೇಂದ್ರೀಕೃತ ಸಹಭಾಗಿ’ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಸಹಜವಾಗುತ್ತದೆ. ಇದಕ್ಕಾಗಿ ಆರ್‌ಎಸ್‌ಎಸ್ ತನ್ನ ಗುರುವಾಕ್ಯಗಳ ನೇಣುಹಗ್ಗದಿಂದ ಬಿಡಿಸಿಕೊಂಡು ವಿವೇಕ, ವಿವೇಚನೆ, ಆಯ್ಕೆಯನ್ನು ಪಡೆದುಕೊಳ್ಳಬೇಕಾಗಿದೆ. ಪಡೆದುಕೊಂಡು ಹೊಸಹುಟ್ಟು ಪಡೆಯುವ ಆರ್‌ಎಸ್‌ಎಸ್‌ಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಕೋರಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಎಲ್ಲ 9 ಆರೋಪಿಗಳು ಖುಲಾಸೆ

ಒಂದು ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ...

ಸಮೀಕ್ಷೆಯ ಸಮೀಕ್ಷೆ; ನಗರವಾಸಿಗಳ ಜಾತಿ ಮನಸ್ಥಿತಿ ಅನಾವರಣ

ಸಮೀಕ್ಷೆಯ ಸಮೀಕ್ಷೆ ಮಾಡಿದರೆ ಜಾತಿ ವ್ಯವಸ್ಥೆಯ ಕರಾಳತೆ ಅನಾವರಣವಾಗುತ್ತದೆ. ಇಷ್ಟೆಲ್ಲ ತೊಡಕುಗಳ...

ಕಾಂಗ್ರೆಸ್ ಸರಕಾರ ಸಂವೇದನೆ ಕಳೆದುಕೊಂಡಿದೆ: ಸಿ ಟಿ ರವಿ ಟೀಕೆ

ರಾಜ್ಯದ ಕಾಂಗ್ರೆಸ್ ಸರಕಾರ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ...

Download Eedina App Android / iOS

X