ಹೆಣ ಮುಂದಿಟ್ಟುಕೊಂಡು ಹಣ ಮಾಡುವ ಪತ್ರಿಕೋದ್ಯಮದ ಒಂದು ಸ್ಯಾಂಪಲ್

Date:

Advertisements
ಹಿರಿಯ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ಅವರು ನಮ್ಮನ್ನು ಅಗಲಿದ್ದಾರೆ. ಬರಹದ ಮೂಲಕ ಒಬ್ಬ ಲೇಖಕ ಎಷ್ಟುಜನಪ್ರಿಯತೆ ಗಳಿಸಬಹುದು ಎಂಬುದಕ್ಕೆ ಕನ್ನಡದ ಅಪರೂಪದ ಉದಾಹರಣೆಯಾಗಿದ್ದವರು ಭೈರಪ್ಪ. ಬಹುಶಃ ಕನ್ನಡದ ಮಟ್ಟಿಗೆ ಜನಪ್ರಿಯ ಬರವಣಿಗೆಯ ಕೊನೆಯ ಕೊಂಡಿಯೂ ಹೌದು. ಅವರಿಗೆ ನಮನಗಳು.

ಭೈರಪ್ಪನವರಿಗೆ ನುಡಿನಮನ ಸಲ್ಲಿಸುವುದು ಈ ಬರಹದ ಉದ್ದೇಶ ಅಲ್ಲ. ಭೈರಪ್ಪ ಅವರ ಸಾವಿನ ಸಂದರ್ಭದಲ್ಲಿ ಬಂದಿರುವ ಒಂದು ನುಡಿನಮನ ನನ್ನಲ್ಲಿ ಹುಟ್ಟಿಸಿದ ದಿಗ್ಭ್ರಮೆಯನ್ನು ಹಂಚಿಕೊಳ್ಳುವುದೇ ಈ ಬರಹದ ಉದ್ದೇಶ. ಅದು, ಸೆಪ್ಟೆಂಬರ್ 25ರಂದು ʼಕನ್ನಡಪ್ರಭʼ ಪತ್ರಿಕೆಯ ಮುಖಪುಟದಲ್ಲಿ ಲೇಖಕ, ಪತ್ರಕರ್ತ ಜೋಗಿ ಅವರು ಬರೆದಿರುವ ʼಕಾದಂಬರಿ ಜಗತ್ತಿನ ಅನಭಿಷಿಕ್ತ ಸಾಮ್ರಾಟ ಡಾ. ಎಸ್‌.ಎಲ್‌ ಭೈರಪ್ಪʼ ಎಂಬ ಶೀರ್ಷಿಕೆಯ ಲೇಖನ.

ಈ ಲೇಖನದ ಮೊದಲ ಪ್ಯಾರಾ ಓದುತ್ತಿದ್ದ ಹಾಗೆಯೇ ನನ್ನಲ್ಲಿ ಪಶ್ಚಾತ್ತಾಪದ ಭಾವನೆ ಹುಟ್ಟಿಕೊಂಡಿತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ಈ ಮೊದಲು ಜೋಗಿ ಅವರ ಬಗ್ಗೆ ಕೆಲವು ಕಥೆಗಳನ್ನು ಕೇಳಿದ್ದೆ: ʼಜೋಗಿ ಅವರು ರವಿ ಬೆಳಗೆರೆ ಅವರ ಬಾಯಲ್ಲಿ ಸಿಗರೇಟು ಇಟ್ಟು, ಲೈಟರ್‌ ಹಚ್ಚಿಕೊಡುತ್ತಿದ್ದರಂತೆʼ, ʼದಾಂಡೇಲಿಯ ಕಾಡುಗಳಲ್ಲಿ ಅಡ್ಡಡ್ಡ ಮಲಗಿರುವ ಬೆಳಗೆರೆ ಮೈಗೆ ಮಸಾಜ್‌ ಮಾಡುವ ಕೆಲಸವನ್ನೂ ಅವರು ಮಾಡಿದ್ದರಂತೆʼ, ʼಬೆಳಗೆರೆ ಸುರಿಯುವ ಮದ್ಯಕ್ಕೆ ಬೊಗಸೆಯೊಡ್ಡುತ್ತಾ, ಅವರ ತಲೆಯಲ್ಲಿ ಉಳಿದವರ ಬಗ್ಗೆ ವಿಷ ತುಂಬುವ ಕೆಲಸ ಮಾಡುತ್ತಿದ್ದರಂತೆ… ʼ

ಇವೆಲ್ಲ ಜೋಗಿ ಅವರ ಬೆಳವಣಿಗೆಯ ದಾರಿಯ ಕುರಿತಾದ ಕಥೆಯಾದರೆ, ಈಗ ತಮ್ಮ ಸುತ್ತಲೂ ಅಂಥದ್ದೇ ಮನಸ್ಥಿತಿಯ ಒಂದಿಷ್ಟು ಚೇಲಾಗಳನ್ನು ಕೂಡಿಸಿಟ್ಟುಕೊಂಡು ತಾವು ರವಿ ಬೆಳಗೆರೆಗೆ ಮಾಡಿದ ಸೇವೆಯನ್ನೇ ಅವರಿಂದ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ಇನ್ನೊಂದು ಕಥೆ. ಅವರ ಕುರಿತಾದ ಕುರುಡು ಪ್ರೀತಿಯನ್ನೇ, ʼಕರಡಿ ಪ್ರೀತಿʼ ಅಂತಲೂ, ಅವರ ಮುನ್ನುಡಿ ಬೆನ್ನುಡಿಯ ಆಶೀರ್ವಚನಗಳ ಋಣಭಾರಕ್ಕೆ, ಅವರನ್ನು ಅಂತಾರಾಷ್ಟ್ರೀಯ ಲೇಖಕ ಎಂತಲೂ ಕೊಂಡಾಡುತ್ತಿರುವುದೂ ಇದೇ ಕಾರಣಕ್ಕೆ ಎಂಬ ಮಾತೂ ಕೇಳಿಸಿಕೊಂಡಿದ್ದೇನೆ.

ಹೀಗೆ ಕೇಳಿದ ಹಲವು ಕಥೆಗಳಲ್ಲಿ ಒಂದಿಷ್ಟು ನಿಜವೂ ಇರಬಹುದೇ ಎಂಬ ಅನುಮಾನ ನನ್ನ ಮನಸಲ್ಲಿಯೂ ಹುಟ್ಟಿತ್ತು. ಆದರೆ, ಈಗ ಜೋಗಿ, ಭೈರಪ್ಪನವರ ಬಗ್ಗೆ ಬರೆದ ಲೇಖನ ಓದಿದಾಗ ನಾನು ಜೋಗಿ ಅವರ ಕುರಿತ ಊಹಾಪೋಹಗಳನ್ನು ನಿಜವಿರಬಹುದು ಎಂದುಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪವಾಯ್ತು. ಯಾಕೆಂದರೆ ಇಂಥ ಊಹಾಪೋಹಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದರ ಕುರಿತು ಜೋಗಿ, ಭೈರಪ್ಪನವರ ಬಗ್ಗೆ ಬರೆದ ಲೇಖನವೇ ನನಗೆ ಅರಿವು ಮೂಡಿಸಿತು.

ಜೋಗಿ ಅವರ ಲೇಖನ ಶುರುವಾಗುವುದು ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿದೆ ಎಂದು ಅವರು ಹೇಳಿಕೊಳ್ಳುತ್ತಿರುವ ಒಂದು ಘಟನೆಯ ವಿವರಗಳಿಂದ. ಅವರ ಲೇಖನದ ಪ್ರಾರಂಭವಾಗುವುದು ಹೀಗೆ: “ಗಿರಡ್ಡಿ ಗೋವಿಂದರಾಜು ಸಾರಥ್ಯದಲ್ಲಿ ನಡೆಯುತ್ತಿದ್ದ ಧಾರವಾಡ ಸಾಹಿತ್ಯ ಸಂಭ್ರಮದ ಸಭಾಂಗಣದಲ್ಲಿ ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಪಾಟೀಲರು ಮುಂತಾದ ಹಿರಿಯ ಸಾಹಿತಿಗಳೆಲ್ಲ ಕುಳಿತಿದ್ದರು. ವೇದಿಕೆಯ ಮೇಲೆ ಮಾತನಾಡುತ್ತಿದ್ದವರ ಮಾತಿನ ನಡುವೆ ಎಸ್‌.ಎಲ್ ಭೈರಪ್ಪನವರ ಪ್ರಸ್ತಾಪ ಬಂತು. ಅಲ್ಲಿದ್ದವರಲ್ಲಿ ಬಹುತೇಕರು ನವ್ಯ ಚಳವಳಿಯಿಂದ ಬಂದ ಲೇಖಕರೇ ಆಗಿದ್ದರು. ಹೀಗಾಗಿ, ಭೈರಪ್ಪನವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅವರನ್ನು ಟೀಕಿಸಲು ಆರಂಭಿಸಿದರು. ವೇದಿಕೆಯ ಮೇಲಿದ್ದವರ ಜತೆ, ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಗಣ್ಯರೂ ಎಸ್.ಎಲ್ ಭೈರಪ್ಪನವರ ಬಗ್ಗೆ ಒಂದೆರಡು ಟೀಕೆಗಳನ್ನು ಮಾಡಿದರು. ಈ ಪ್ರಸಂಗ ನಡೆಯುತ್ತಿರುವಾಗಲೇ, ವೇದಿಕೆಯ ಸಮೀಪ ಇದ್ದ ಮುಖ್ಯದ್ವಾರದಿಂದ ಸ್ವತಃ ಎಸ್‌.ಎಲ್ ಭೈರಪ್ಪ ಸಭೆಗೆ ಪ್ರವೇಶಿಸಿದರು. ಭೈರಪ್ಪನವರು ಒಳಗೆ ಕಾಲಿಡುತ್ತಿದ್ದಂತೆ ವೇದಿಕೆಯ ಮೇಲೆ ಕುಳಿತವರು ಮಾತು ನಿಲ್ಲಿಸಿದರು. ಯು.ಆರ್ ಅನಂತಮೂರ್ತಿ ಎದ್ದು ಹೋಗಿ ಅವರ ಕೈ ಹಿಡಿದು ಕರೆದುಕೊಂಡು ಬಂದರು. ಭೈರಪ್ಪನವರನ್ನು ಅಷ್ಟೂ ಹೊತ್ತು ಟೀಕಿಸುತ್ತಿದ್ದವರು ಥಟ್ಟನೆ ಸುಮ್ಮನಾದರು. ಮಾತುಕತೆ ಬೇರೆಯೇ ದಿಕ್ಕಿನತ್ತ ಸಾಗಿತು.ʼʼ

-ಹೀಗೆ ಸಾಗುವ ಅವರ ಲೇಖನವನ್ನು ಓದಿ ಒಂದು ಕ್ಷಣ ದಿಗ್ಬ್ರಮೆಯಾಯಿತು ನನಗೆ. ಯಾಕೆಂದರೆ ಅವರು ಹೇಳುತ್ತಿರುವ ಘಟನೆ ನಡೆದಿದೆ ಎನ್ನುತ್ತಿರುವ ಜಾಗದಲ್ಲಿ ಅಂದು ನಾನೂ ಇದ್ದೆ. ಕನ್ನಡ ಸಾಹಿತ್ಯ ಜಗತ್ತಿನ ಹಲವು ಗಣ್ಯಮಾನ್ಯರು, ಪತ್ರಕರ್ತರು, ಓದುಗರು ಎಲ್ಲರೂ ಇದ್ದರು. ತುಂಬಿದ ಸಭಾಂಗಣದಲ್ಲಿ ನಡೆದ ಘಟನೆ ಅದು. ಆದರೆ, ಅಲ್ಲಿ ಜೋಗಿ ಲೇಖನದಲ್ಲಿ ಬರೆದ ಹಾಗೆ ಏನೂ ನಡೆದಿರಲಿಲ್ಲ!

ಅವರು ಹೇಳಿದ ಹಾಗೆ ವೇದಿಕೆಯ ಮೇಲೆಲ್ಲ ನವ್ಯರೇ ಕೂತಿರಲಿಲ್ಲ. ಅವರು ಹೇಳುವ ಹಾಗೆ ವೇದಿಕೆಯ ಮೇಲೆ, ಕೆಳಗೆ ಭೈರಪ್ಪನವರ ಟೀಕೆ ನಡೆಯುತ್ತಿರಲಿಲ್ಲ. ಯು.ಆರ್‌. ಅನಂತಮೂರ್ತಿ ಅವರು ಎದ್ದು ಹೋಗಿ ಭೈರಪ್ಪನವರನ್ನು ಕರೆದುಕೊಂಡು ಬರಲಿಲ್ಲ. ಅವರು ಬಂದ ಮೇಲೆ ಚರ್ಚೆ ಬೇರೆಯದೇ ದಿಕ್ಕಿನಲ್ಲಿ ಸಾಗುವ ಮಾತಂತೂ ಇಲ್ಲವೇ ಇಲ್ಲ ಬಿಡಿ.

ಎಸ್‌.ಎಲ್‌ ಭೈರಪ್ಪ
ಜೋಗಿ ಪ್ರಕಾರ, ಅನಂತಮೂರ್ತಿ ಅವರು ಎದ್ದು ಹೋಗಿಭೈರಪ್ಪ ಅವರನ್ನು ಕೈಹಿಡಿದು ಕರೆದುಕೊಂಡು ಬಂದು, ಎಲ್ಲಿ ತಮ್ಮ ಕುರ್ಚಿಯಲ್ಲಿ ಕೂತುಬಿಡ್ತಾರೆನೋ ಅನ್ನೋ ಭಯದಲ್ಲಿ ಬುಡುಕ್ಕನೆ ಕೂತುಕೊಂಡು ಮತ್ತೆ ಭೈರಪ್ಪ ಅವರ ಕೈ ಕುಲುಕುತ್ತಿರುವ ದೃಶ್ಯ… (ಗಮನಿಸಿ: ಇಲ್ಲಿ ಅನಂತಮೂರ್ತಿಯವರು ಭಯಭೀತರಾಗಿದ್ದಾರೆ ಮತ್ತು ಭೈರಪ್ಪ ಹಸನ್ಮುಖರಾಗಿದ್ದಾರೆ)

ನನಗೆ ನೆನಪಿರುವ ಹಾಗೆ ಜೋಗಿ ಬರೆದ ಪ್ರಸಂಗದಲ್ಲಿ ಸತ್ಯಕ್ಕೆ ಹತ್ತಿರವಾಗಿ ಇರುವ ಒಂದೇ ಒಂದು ಸಾಲು ಎಂದರೆ, ಭೈರಪ್ಪನವರು ಸಭಾಂಗಣ ಪ್ರವೇಶಿಸಿದಾಗ ವೇದಿಕೆಯ ಮೇಲೆ ಮಾತಾಡುತ್ತಿದ್ದವರು ಒಂದು ಕ್ಷಣ ಸುಮ್ಮನಾಗಿದ್ದು. ಆದರೆ, ಅದಕ್ಕೆ ಕಾರಣ ಅವರು ಭೈರಪ್ಪನವರ ಕಾದಂಬರಿ ಟೀಕಿಸುತ್ತಿದ್ದುದು ಅಲ್ಲವೇ ಅಲ್ಲ. ಅಲ್ಲಿ ನಡೆಯುತ್ತಿದ್ದ ಗೋಷ್ಠಿಯೇ ಬೇರೆ; ಆಡುತ್ತಿದ್ದ ಮಾತುಗಳೇ ಬೇರೆ. ಆದರೆ, ಭೈರಪ್ಪ ಸಭಾಂಗಣದ ಒಳಗೆ ಬರುತ್ತಿದ್ದ ಹಾಗೇ ಜನರ ಗಮನವೆಲ್ಲ ಅತ್ತ ಹೋಗಿದ್ದರಿಂದ ವೇದಿಕೆಯ ಮೇಲೆ ಮಾತಾಡುತ್ತಿದ್ದವರು ಕ್ಷಣಕಾಲ ಮಾತು ನಿಲ್ಲಿಸಿದರು. ಭೈರಪ್ಪನವರು ತಾವಾಗಿಯೇ ನಡೆದುಕೊಂಡು ಅನಂತಮೂರ್ತಿ ಅವರು ಕೂತಿದ್ದ ಜಾಗದಲ್ಲಿ ಬಂದಾಗ ಅನಂತಮೂರ್ತಿ ನಗುತ್ತ ಕೈಕುಲುಕಿ ಎದ್ದು ನಿಂತರು. ಅದು ಸಜ್ಜನಿಕೆ.

ಆದರೆ, ಜೋಗಿ ಅವರ ಲೇಖನದಲ್ಲಿ ಈ ಘಟನೆಯು ಸಂಪೂರ್ಣ ಅವರ ಅನುಕೂಲಕ್ಕೆ ತಕ್ಕಂತೆ ರೆಕ್ಕೆ ಪುಕ್ಕ, ಬಗೆಬಗೆಯ ಬಣ್ಣ ಸುಣ್ಣಗಳನ್ನು ಕಟ್ಟಿಕೊಂಡು ಬೇರೆಯದೇ ಆಗಿ ಚಿತ್ರಿತವಾಗಿದೆ. ‘ಅಲ್ಲಿವರೆಗೆ ಭೈರಪ್ಪನವರನ್ನು ಟೀಕಿಸುತ್ತಿದ್ದ ನವ್ಯರೆಲ್ಲ ಭೈರಪ್ಪ ಒಳಗೆ ಬಂದ ತಕ್ಷಣ ಥಟ್ಟನೆ ಸುಮ್ಮನಾದರು’ ಎಂಬ ಸಾಲು… ಅದರ ನಂತರ ‘ಅನಂತಮೂರ್ತಿ ಹೋಗಿ ಕೈ ಹಿಡಿದು ಕರೆದುಕೊಂಡು ಬಂದರು’ ಎಂಬ ಸಾಲು ಇವೆಲ್ಲವೂ, ಭೈರಪ್ಪ ಅವರ ಹುಸಿ ವೈಭವೀಕರಣಕ್ಕಾಗಿ ಹಸಿ ಹಸಿಯಾಗಿ ಜೋಗಿ ಕಟ್ಟಿರುವ ಸುಳ್ಳುಗಳೇ ಹೊರತು ಬೇರೆ ಏನೂ ಅಲ್ಲ.

ಹೀಗೇ ಅಲ್ಲವೇ ಸುಳ್ಳು ಇತಿಹಾಸವು ರೋಚಕತೆಯ ಕಿರೀಟ ತೊಟ್ಟು ಮೆರೆಯತೊಡಗುವುದು? ಹೀಗೇ ಅಲ್ಲವೇ, ಬಹುಜನರನ್ನು ನಂಬಿಸಿ, ಭ್ರಮೆಯ ಸುಳಿಗೆ ಸಿಲುಕಿಸಿ, ಅವರ ಮನಸಲ್ಲಿ ಬೆಂಕಿ ಉರಿಸಿ ತಾವು ಚಳಿ ಕಾಯಿಸಿಕೊಳ್ಳುವುದು? -ಜೋಗಿ ಅವರ ಕುರಿತಾಗಿ ನಾನು ಕೇಳಿದ ಕಥೆಗಳೂ ಹೀಗೆಯೇ ಹುಟ್ಟಿಕೊಂಡಿದ್ದಿರಬಹುದಲ್ಲವೇ ಎಂಬ ಕಾರಣಕ್ಕೇ ನನಗೆ ಪಶ್ಚಾತ್ತಾಪ ಹುಟ್ಟಿಕೊಂಡಿದ್ದು!

ಈ ಲೇಖನ ಓದಿದ್ದೀರಾ?: ಲಂಕೇಶರು ಕಟ್ಟಿದ ಗೋಡೆಯಲ್ಲಿ ಬಿರುಕು ಮೂಡಿಸಿದ ‘ಗೃಹಭಂಗ’

ಕನ್ನಡದ ಮುಖ್ಯ ದಿನಪತ್ರಿಕೆಗಳಲ್ಲಿ ಒಂದಾಗಿರುವ ‘ಕನ್ನಡಪ್ರಭ’ದ ಮುಖಪುಟದಲ್ಲಿ ಪ್ರಕಟವಾದ ಈ ಲೇಖನ, ಅದರಲ್ಲಿ ಜೋಗಿ ಬರೆದಿರುವ ಕಟ್ಟುಕಥೆಯನ್ನು ಸಾವಿರಾರು ಜನರು ಓದುತ್ತಾರೆ. ಆ ಘಟನೆಯ ಬಗ್ಗೆ ಗೊತ್ತಿಲ್ಲದ ಬಹುತೇಕರು ಇದನ್ನೇ ನಿಜ ಎಂದು ನಂಬಿಯೂ ಬಿಡುತ್ತಾರೆ. ಆದರೆ, ಇದು ಒಬ್ಬ ಪತ್ರಕರ್ತ-ಲೇಖಕನ ಸೋಗು ಹಾಕಿಕೊಂಡಿರುವ, ಭಾಷೆಯನ್ನು ವಂಚನೆಯ ಇರಿತಕ್ಕೆ ಆಯುಧವಾಗಿ ಬಳಸಿಕೊಳ್ಳುವ, ಆತ್ಮಸಾಕ್ಷಿಹೀನ ವ್ಯಕ್ತಿಯೊಬ್ಬನ ಹೀನಕಾರ್ಯ ಅನ್ನುವುದು ಬಹುತೇಕರಿಗೆ ತಿಳಿಯುವುದೇ ಇಲ್ಲ.

ಇದು ಈ ಒಂದು ಲೇಖನಕ್ಕೆ ಸೀಮಿತಗೊಳಿಸಿ ನೋಡುವುದೂ ಕಷ್ಟ. ಇದು ಒಬ್ಬ ಪತ್ರಕರ್ತನ, ಒಬ್ಬ ಲೇಖಕನ ಪ್ರಾಮಾಣಿಕತೆಯ ಪ್ರಶ್ನೆ. ಸಾಹಿತ್ಯ ಜಗತ್ತಿನ ಹಲವು ಗಣ್ಯಮಾನ್ಯರು, ಪತ್ರಕರ್ತರು, ಓದುಗರು ಹೀಗೆ ನೂರಾರು ಜನರ ಮುಂದೆ ಕೆಲವೇ ವರ್ಷಗಳ ಹಿಂದೆ ನಡೆದ ಘಟನೆಯನ್ನು ಇಷ್ಟು ಸುಳ್ಳಾಗಿ ಪರಿವರ್ತಿಸಿ ಹೇಳುವ ಅವರ ಭಂಡಧೈರ್ಯ ಈ ಒಂದೇ ಲೇಖನಕ್ಕೆ ಸೀಮಿತವಾಗಿದೆ ಎಂದು ಹೇಗೆ ನಂಬುವುದು? ಸಿನಿಮಾ ಲೇಖಕನಾಗಿ, ಸಾಹಿತಿಯಾಗಿ, ಪತ್ರಕರ್ತನಾಗಿ ಜೋಗಿ ಇಂಥ ಹಲವು ಘಟನೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಎಷ್ಟು ನಿಜ? ಎಷ್ಟು ಹೀಗೆ ಅವರ ಕಲ್ಪನೆಯಲ್ಲಿ ಹುಟ್ಟಿಕೊಂಡಿದ್ದು? ಅದನ್ನು ವಿಭಾಗಿಸಿ ನೋಡುವುದು ಹೇಗೆ?

ಈಗಿನ ಆತ್ಮಸಾಕ್ಷಿಹೀನ, ನೀಚ ಕಾಲಗುಣಕ್ಕೆ ಮುಖ ಅಂತೇನಾದರೂ ಇದ್ದರೆ ಅದು ಜೋಗಿಯದೇ ಮುಖ ಅನಿಸುತ್ತದೆ. ಹೆಣ ಮುಂದಿಟ್ಟುಕೊಂಡು ಹಣ ಮಾಡುವ ಪತ್ರಿಕೋದ್ಯಮದ ಇನ್ನೊಂದು ಮುಖ ಇದು. ಆದರೆ, ಹೀಗೆ ಲಜ್ಜೆಯಿಲ್ಲದೇ ʼಕಾಗದದ ಮೇಲೆಲ್ಲ ಕಾರಿಕೊಂಡʼ ಸುಳ್ಳನ್ನು ಯಾರೂ ಗುರ್ತಿಸದೇ ಇರುವುದು, ಅದು ಸುಳ್ಳು ಎಂದು ಹೇಳುವ ಧೈರ್ಯ ತೋರದೇ ಇರುವುದು ಕನ್ನಡ ಸಾಹಿತ್ಯ ಲೋಕದ, ಒಟ್ಟಾರೆ ಸಮಾಜದ ಆತ್ಮಸಾಕ್ಷಿಗೆ ಹಿಡಿದ ಅರ್ಬುದರೋಗದ ಲಕ್ಷಣವೂ ಹೌದಲ್ಲವೇ?

(ಸಭಿಕರೊಬ್ಬರು ಖುದ್ದಾಗಿ ಕಂಡದ್ದು!)

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕ ಪ್ರವಾಹ: ಭಾರೀ ಅನಾಹುತ-ಅವ್ಯವಸ್ಥೆ; ರೈತರ ನೆರವಿಗೆ ನಿಲ್ಲುವುದೇ ಸರ್ಕಾರ?

ಭಾರೀ ಮಳೆಯಿಂದ ಭೀಮಾ ಮತ್ತು ಕೃಷ್ಣಾ ನದಿ ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ...

ಶಾಲೆಗಾಗಿ ಕೊಠಡಿ, ಮಕ್ಕಳಿಗಾಗಿ ಆಟೋ ರಿಕ್ಷಾ; ಹಳ್ಳಿಯ ಹಳೆ ವಿದ್ಯಾರ್ಥಿಯಿಂದ ಸರ್ಕಾರಿ ಶಾಲೆಗೆ ಹೊಸ ಜೀವ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕಚಂಗಾವಿ ಗ್ರಾಮದ ಸುಮಾರು ಅರವತ್ತು ವರ್ಷಗಳ...

ಜಾತಿ ಸಮೀಕ್ಷೆ; ಬಿಜೆಪಿಯೊಳಗೆ ಭಿನ್ನಮತ

ಜಾತಿ ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯೊಳಗೆ ಭಿನ್ನಮತ ವ್ಯಕ್ತವಾಗಿದೆ. ಸಮೀಕ್ಷೆಗೆ ಬಂದಾಗ ಮಾಹಿತಿ...

ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿ: ಹೆಚ್ ಡಿ ಕುಮಾರಸ್ವಾಮಿ ಆಗ್ರಹ

ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು...

Download Eedina App Android / iOS

X