"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ ಮುಟ್ಟು ಗುಟ್ಟಾಗಿ ಉಳಿದಿದೆ. ಅದರ ಹೆಸರೂ ಎತ್ತಬಾರದು. 'ಐದು ದಿನದ ರೋಗ' ಬಂದಿದೆ ಎಂದು ಕರೆಯುತ್ತಾರೆ. ನನಗೆ ಮುಟ್ಟದಾಗ ಕಾನ್ಸರ್ ಬಂದಿದೆ ಎಂದುಕೊಂಡಿದ್ದೆ. ಮುಟ್ಟಿನ ಬಗ್ಗೆ ಅರಿವು ಇರಲಿಲ್ಲ" ಎನ್ನುತ್ತಾರೆ 25ರ ಹರೆಯದ ಕಾಶ್ಮೀರ ಯುವತಿ ಸುಮೀರಾ ಭಟ್.
ಜಮ್ಮು ಮತ್ತು ಕಾಶ್ಮೀರ ಧಾರ್ಮಿಕ ಕಟ್ಟು ಕಟ್ಟಳೆಗಳ ರಾಜ್ಯ. ಈ ಸಂಪ್ರದಾಯಗಳನ್ನು ದಾಟಿ ಮಹಿಳೆಯರಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ಯುವತಿ ಸುಮೀರಾ ಭಟ್. ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದಲ್ಲಿ ಕಾಕೊತನ್ ಎಂಬ ಸಣ್ಣ ಗ್ರಾಮಕ್ಕೆ ಸೇರಿದ 25ರ ಯುವತಿ. ತಮ್ಮ 13ನೇ ವಯಸ್ಸಿನಲ್ಲಿಯೇ ಹಲವು ಸಂಘರ್ಷಗಳಿಗೆ ಎದುರಾಗಿ ಇಂದು ಕಾಶ್ಮೀರದ ಹಳ್ಳಿ ಹಳ್ಳಿಯಲ್ಲೂ ಬಾಲಕಿಯರ, ಮಹಿಳೆಯರ ನಡುವೆ ಮುಟ್ಟು ಮತ್ತು ನೈರ್ಮಲ್ಯ ಸಂಬಂಧಿತ ಜಾಗೃತಿಯನ್ನು ಮೂಡಿಸುತ್ತಾ ಬರುತ್ತಿದ್ದಾರೆ. ಆದರೆ ಈ ದಾರಿ ಖಂಡಿತವಾಗಿಯೂ ಸುಗಮವಾಗಿರಲಿಲ್ಲ, ಸಾಕಷ್ಟು ನಿಂದನೆಗೆ, ಅಪಪ್ರಚಾರಕ್ಕೆ ಒಳಗಾದೆ ಎನ್ನುತ್ತಾರೆ ಸುಮೀರಾ.
ತಮ್ಮ 11ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮುಟ್ಟು ಕಂಡ ಸುಮೀರಾ, ಮೈಯಲ್ಲಿ ಏನು ಬದಲಾವಣೆಯಾಗುತ್ತಿದೆ ಎಂಬ ಅರಿವಿಲ್ಲದೆ ಆತಂಕಕ್ಕೆ ಒಳಗಾದವರು. ಯೋನಿಯಿಂದ ರಕ್ತ ತೊಟ್ಟಿಕ್ಕುವುದನ್ನು ಕಂಡು ತನಗೆ ಏನೋ ಆಗಬಾರದ್ದು ಆಗಿದೆ ಅಂದುಕೊಂಡು ಹೆದರಿ ಮನೆಯವರಿಗೂ ಹೇಳದೆ ಸುಮ್ಮನಾದರಂತೆ. ಇನ್ನೂ ಮುಟ್ಟು ಕಾಣದ ತನ್ನಿಬ್ಬರು ಗೆಳತಿಯರ ಬಳಿ ಚರ್ಚಿಸಿ “ನನಗೆ ಕಾನ್ಸರ್ ಬಂದಿದೆ, ನಾನು ಸಾಯುತ್ತೇನೆ” ಎಂದು ಗಾಬರಿಗೊಂಡಿದ್ದರಂತೆ. “ಮುಟ್ಟಿನ ಬಗ್ಗೆ ತಿಳಿಯದೆ ನಾನು ಪಟ್ಟ ಪಾಡು, ಆತಂಕ ಅಷ್ಟಿಷ್ಟಲ್ಲ. ಆದ್ದರಿಂದ ಇಂದು ನಾನು ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಯತ್ನ ಮಾಡುತ್ತಿದ್ದೇನೆ. ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ ಮುಟ್ಟು ಗುಟ್ಟಾಗಿ ಉಳಿದಿದೆ. ಅದರ ಹೆಸರೂ ಎತ್ತಬಾರದು. ‘ಐದು ದಿನದ ರೋಗ’ ಬಂದಿದೆ ಎಂದು ಕರೆಯುತ್ತಾರೆ” ಎಂಬುದು ಸುಮೀರಾ ಮಾತು.
ಹಲವು ಹಳ್ಳಿಗಳಲ್ಲಿ ಮುಟ್ಟು ಎಂಬುದು ಬಾಯಿ ತೆರೆದು ಮಾತನಾಡಬಾರದಂತಹ, ಪಿಸುಗುಟ್ಟುವ ವಿಷಯ, ರೋಗ. ಒಂದೆಡೆ ಬಡತನ, ಇನ್ನೊಂದೆಡೆ ಮೂಢನಂಬಿಕೆಯಿಂದಾಗಿ ಇಂದಿಗೂ ಹಳ್ಳಿ ಭಾಗಗಳಲ್ಲಿ ಮುಟ್ಟಾದಾಗ ಹಳೆಯ ಬಟ್ಟೆಯನ್ನು ಬಳಸಲಾಗುತ್ತದೆ. ಅದನ್ನೂ ಸರಿಯಾಗಿ ತೊಳೆಯದೆ, ಬಿಸಿಲಿನಲ್ಲಿ ಒಣಗಿಸದೆ, ಗಂಡಸರ ಕಣ್ಣಿಗೆ ಬೀಳದಂತೆ ಹುದುಗಿಸಿಡಲಾಗುತ್ತಿದೆ. ಇದರಿಂದಾಗಿ ಹಲವು ಮಹಿಳೆಯರು ಸೋಂಕಿಗೆ ಒಳಗಾಗುತ್ತಿದ್ದಾರೆ. ಬಹುತೇಕರಿಗೆ ನ್ಯಾಪ್ಕಿನ್ ಖರೀದಿಗೆ ಬೇಕಾದಷ್ಟು ಹಣವೂ ಇರುವುದಿಲ್ಲ. ಬಡತನದಿಂದಾಗಿಯೇ ಪ್ರತಿ ತಿಂಗಳು ಮುಟ್ಟಿನ ವೇಳೆ ಬಟ್ಟೆಯ ಮೊರೆ ಹೋಗುತ್ತಾರೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ
ಇದು ಕೇವಲ ಜಮ್ಮು ಮತ್ತು ಕಾಶ್ಮೀರದ ಕಥೆಯಲ್ಲ. ದೇಶದ ಅದೆಷ್ಟೋ ಗ್ರಾಮಗಳಲ್ಲಿ ಮಹಿಳೆಯರು ಇದಕ್ಕೂ ಕೆಟ್ಟ ಸ್ಥಿತಿಯಲ್ಲಿದ್ದಾರೆ. ಇವೆಲ್ಲವುದಕ್ಕೂ ಮುಖ್ಯ ಕಾರಣ ‘ಮುಟ್ಟಿನ ಬಡತನ’ (ಹಣಕಾಸು ಸಮಸ್ಯೆಯಿಂದ ಮಹಿಳೆಯರು ಮುಟ್ಟಿನ ವೇಳೆ ಸ್ಯಾನಿಟರಿ ಪ್ಯಾಡ್‌ಗಳು, ಟ್ಯಾಂಪೂನ್‌ಗಳು, ಇತರೆ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದೆ ಇರುವುದು) ಎಂದರೆ ತಪ್ಪಾಗಲಾರದು. ಮಧ್ಯಮ ವರ್ಗದವರು ಹೇಗೋ ಹಣ ಕೊಟ್ಟು ನ್ಯಾಪ್ಕಿನ್ ಖರೀದಿಸುತ್ತಾರೆ, ಆದರೆ ಬಡ ವರ್ಗದವರಿಗೆ ಇದು ಖಂಡಿತವಾಗಿಯೂ ಹೊರೆ. ಜೊತೆಗೆ ತೆರಿಗೆ ಎಂಬ ಬರೆ.

ತನ್ನ ಈ ಅಭಿಯಾನದ ಬಗ್ಗೆಗಿನ ಆರಂಭಿಕ ಅನುಭವವನ್ನು ಈದಿನ ಡಾಟ್ ಕಾಮ್ ಜೊತೆ ಹಂಚಿಕೊಂಡಿರುವ ಸುಮೀರಾ, “ಮೊದಲು ಜಮ್ಮುವಿನಲ್ಲಿದ್ದ ನಮ್ಮ ಕುಟುಂಬ ಬಳಿಕ ಕಾಶ್ಮೀರದ ಒಂದು ಗ್ರಾಮಕ್ಕೆ ಸ್ಥಳಾಂತರಗೊಂಡೆವು. ಮುಟ್ಟಿನ ವಿಚಾರದಲ್ಲಿ ನನ್ನಂತೆ ಇತರೆ ಹೆಣ್ಣು ಮಕ್ಕಳು ಸಮಸ್ಯೆಗೆ ಒಳಗಾಗಬಾರದು ಎಂಬ ನಿಟ್ಟಿನಲ್ಲಿ 13ನೇ ವಯಸ್ಸಿನಲ್ಲೇ ನನ್ನ ಮನೆಯಲ್ಲಿಯೇ ಮಹಿಳೆಯರನ್ನು ಒಟ್ಟುಗೂಡಿಸಿ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಈ ವೇಳೆ ಗ್ರಾಮದ ಶ್ರೀಮಂತ ಕುಟುಂಬಕ್ಕೆ ಸೇರಿದ ಜನರು ಬಂದು ವಿರೋಧ ವ್ಯಕ್ತಪಡಿಸಿದರು. ಶ್ರೀಮಂತರು ಬಿಟ್ಟರೆ ಬೇರೆ ಯಾರೂ ನ್ಯಾಪ್ಕಿನ್ ಬಳಸಬಾರದು ಎಂಬ ಕೀಳು ಮನಸ್ಥಿತಿ ಅವರದ್ದು. ಬಳಿಕ ನನ್ನ ವಿರುದ್ಧ ಅಪಪ್ರಚಾರ ಆರಂಭಿಸಿದರು. ‘ಈ ಹುಡುಗಿ ಬೇರೆ ಎಲ್ಲಿಂದಲೋ ಬಂದು ನಮ್ಮ ಹೆಣ್ಣು ಮಕ್ಕಳ ದಿಕ್ಕು ತಪ್ಪಿಸುತ್ತಿದ್ದಾಳೆ’ ಎಂದು ಹೇಳಿದರು. ಆರಂಭದಲ್ಲಿ ಮನೆಯಲ್ಲಿ ಎಲ್ಲಾ ವಿಚಾರವನ್ನು ಹೇಳುವಂತಿರಲಿಲ್ಲ. ಆದರೆ ನನ್ನ ಕುಟುಂಬದ ಬೆಂಬಲವಿದ್ದ ಕಾರಣ ನಾನು ಈವರೆಗೂ ಜಾಗೃತಿ ಅಭಿಯಾನ ನಡೆಸುತ್ತಾ ಬರಲು ಸಾಧ್ಯವಾಗಿದೆ” ಎಂದಿದ್ದಾರೆ.
“ಮೊದಲು ನನ್ನ ಉಳಿತಾಯದ ಹಣದಿಂದ ನ್ಯಾಪ್ಕಿನ್‌ಗಳನ್ನು ಖರೀದಿಸಿ ಗ್ರಾಮದಲ್ಲಿ ಹಂಚಲು ಆರಂಭಿಸಿದೆ. ಹೀಗೆ ಸುಮಾರು 13 ವರ್ಷಗಳಿಂದ ನನ್ನ ಶಿಕ್ಷಣದ ಜೊತೆಗೆ ನಿರಂತರವಾಗಿ ಜಾಗೃತಿ ಅಭಿಯಾನ ನಡೆಸುತ್ತಿರುವೆ. ಕೆಲವು ಸಂಸ್ಥೆಗಳಿಂದ ಉಚಿತ ನ್ಯಾಪ್ಕಿನ್ ಪಡೆದು ಹಂಚುತ್ತಿರುವೆ. ನನ್ನ ಬಗ್ಗೆ ಇಂದಿಗೂ ಪ್ರಬಲರೆನಿಸಿಕೊಂಡವರು ಕೆಟ್ಟದಾಗಿ ಮಾತನಾಡುತ್ತಾರೆ. ಆಕೆ ಎಷ್ಟೋ ಗಂಡಸರೊಂದಿಗೆ ಮಲಗಿರುವವಳು, ಏನೇನೋ ಕೆಲಸ ಮಾಡುತ್ತಾಳೆ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ನನ್ನ ಕುಟುಂಬ ನನ್ನೊಂದಿಗೆ ನಿಂತಿದೆ. ಕುಟುಂಬದ ಬೆಂಬಲ ಇಲ್ಲದಿದ್ದರೆ ಕಾಶ್ಮೀರದಂತಹ ಪ್ರದೇಶದಲ್ಲಿ ಜನಜಾಗೃತಿ ಮೂಡಿಸುವುದು ಕಷ್ಟಕರ” ಎನ್ನುತ್ತಾರೆ ಸುಮೀರಾ.

“ಶಾಲಾ ಕಾಲೇಜುಗಳಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುವುದು ಕಡ್ಡಾಯ. ಆದರೆ ನಮ್ಮಲ್ಲಿ ಹಲವು ಶಾಲಾ ಕಾಲೇಜುಗಳಲ್ಲಿ ಬರೀ ಫೋಟೋ ತೆಗೆದು ಕಾರ್ಯಕ್ರಮ ನಡೆಸಿರುವುದಾಗಿ ಸುಳ್ಳು ಹೇಳಲಾಗುತ್ತಿದೆ. ನಾವು ಸಮೀಕ್ಷೆಯನ್ನು ನಡೆಸಿದಾಗ ಈ ವಿಚಾರ ಬಹಿರಂಗವಾಗಿದೆ. ಆದ್ದರಿಂದಾಗಿ ನಾವು ಶಾಲಾ-ಕಾಲೇಜುಗಳಲ್ಲಿ ಒತ್ತಡ ಹೇರಿ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದೇವೆ” ಎನ್ನುತ್ತಾರೆ ಸದ್ಯ ತನ್ನೊಂದಿಗೆ ಹತ್ತು ಯುವತಿಯರನ್ನು ಜೊತೆಗೂಡಿಸಿರುವ ಸುಮೀರಾ.
2022ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಭಾರತದಲ್ಲಿ 15-24 ವರ್ಷದ ಯುವತಿಯರ ಪೈಕಿ ಶೇಕಡ 64.4ರಷ್ಟು ಮಂದಿ ಸ್ಯಾನಿಟರಿ ನ್ಯಾಪ್ಕಿನ್, ಶೇಕಡ 49.6ರಷ್ಟು ಮಂದಿ ಬಟ್ಟೆ, ಶೇಕಡ 15ರಷ್ಟು ಮಂದಿ ಸ್ಥಳೀಯವಾಗಿ ತಯಾರಿಸಲ್ಪಟ್ಟ ನ್ಯಾಪ್ಕಿನ್‌ಗಳು ಮತ್ತು ಬರೀ 0.3ರಷ್ಟು ಮಹಿಳೆಯರು ಮುಟ್ಟಿನ ಬಟ್ಟಲು (menstrual cups) ಬಳಸುತ್ತಿದ್ದಾರೆ. ಹೀಗಿರುವಾಗ ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳ ಬಗ್ಗೆಯೂ ಮಾಹಿತಿ ಕಡಿಮೆ. ಮುಟ್ಟಿನ ಬಟ್ಟಲುಗಳ ಬಗ್ಗೆ ಅರಿವೇ ಇಲ್ಲ. ಜೊತೆಗೆ ಆರ್ಥಿಕ ಸ್ಥಿತಿ ದೊಡ್ಡ ಅಡೆತಡೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?
ಈ ಎಲ್ಲಾ ಸಮಸ್ಯೆಗಳ ನಡುವೆ ಕಾಶ್ಮೀರದಲ್ಲಿ ಮುಟ್ಟಿನ ಬಗ್ಗೆ, ಆರ್ಥಿಕ ಸ್ವಾವಲಂಬಿತನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಸುಮೀರಾ ಭಟ್. ಸಮಾಜಶಾಸ್ತ್ರ ವಿಷಯದಲ್ಲಿ ಬಿಎ ಪದವಿ ಪಡೆದ ಸುಮೀರಾ ಬಳಿಕ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಗ್ರಾಮೀಣ ಅಭಿವೃದ್ಧಿ ವಿಷಯದಲ್ಲಿ ಪ್ರತ್ಯೇಕ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತನ್ನ ವಿದ್ಯಾಭ್ಯಾಸದ ನಡುವೆಯೇ ಹಿಮಾಚಲ ಸೇರಿದಂತೆ ಹಲವೆಡೆ ಆನ್‌ಲೈನ್ ಫೆಲೋಶಿಪ್ ಕೋರ್ಸ್‌ಗಳನ್ನು ಸಮೀರಾ ಮುಗಿಸಿದ್ದಾರೆ. ಮಾನಸಿಕ ಆರೋಗ್ಯ ವಿಚಾರದಲ್ಲಿ ಒಂದು ವರ್ಷದ ಕೋರ್ಸ್, ಜತೆಗೆ ಸಂವಿಧಾನ ಪ್ರಚಾರಕದಲ್ಲಿ ಮತ್ತು ಕ್ರೆಯಾ(CREA) ಸ್ತ್ರೀವಾದ ಮಾನವ ಹಕ್ಕುಗಳ ಸಂಸ್ಥೆಯಲ್ಲಿ ಒಂದು ವರ್ಷದ ಕೋರ್ಸ್ ಅನ್ನು ಪೂರೈಸಿದ್ದಾರೆ.

“ನ್ಯಾಪ್ಕಿನ್ ಖರೀದಿಸಲು ಆರ್ಥಿಕವಾಗಿ ಸಬಲರಾಗಿ”
“ಮಹಿಳೆಯರು ನ್ಯಾಪ್ಕಿನ್ ಖರೀದಿಸಲಾದರೂ ಆರ್ಥಿಕವಾಗಿ ಸಬಲರಾಗಿರುವುದು ಮುಖ್ಯ. ಆದ್ದರಿಂದ ಮುಟ್ಟು ಮಾತ್ರವಲ್ಲದೆ ಆರ್ಥಿಕ ಶಿಕ್ಷಣದ ಬಗ್ಗೆಯೂ ಜಾಗೃತಿ ಮೂಡಿಸಲೂ ಆರಂಭಿಸಿದೆ. ಜೊತೆಗೆ ಜೊತೆಗೆ ಹವಾಮಾನ, ಮಕ್ಕಳ ಹಕ್ಕು, ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಮೊದಲಾದ ವಿಚಾರದಲ್ಲಿ ಜಾಗೃತಿ ಮೂಡಿಸಲು ಆರಂಭಿಸಿರುವೆ. ಇವೆಲ್ಲವುದಕ್ಕೂ ನಾನು ಕೋರ್ಸ್‌ಗಳನ್ನು ಮಾಡಿ ಕಲಿತು ಜಾರಿ ಮಾಡುವ ಪ್ರಯತ್ನ ಮಾಡುತ್ತಿರುವೆ” ಎಂದು ವಿವರಿಸಿದರು.
“13 ವರ್ಷದಲ್ಲಿ ಹಲವು ಬದಲಾವಣೆಗಳನ್ನು ನೋಡಿರುವೆ. ಮೊದಮೊದಲು ಹೆಣ್ಣು ಮಕ್ಕಳು ತಮ್ಮ ಮುಖವನ್ನು ಮುಚ್ಚುತ್ತಿದ್ದರು, ಫೋಟೋ ತೆಗೆಯಲು ಒಪ್ಪಿಗೆ ನೀಡುತ್ತಿರಲಿಲ್ಲ. ಆದರೆ ಈಗ ಹಾಗಲ್ಲ ಕೈಯಲ್ಲಿ ನ್ಯಾಪ್ಕಿನ್ ಹಿಡಿದು ಫೋಟೋ ತೆಗೆದು ತಾವೂ ಜಾಗೃತಿ ಅಭಿಯಾನಕ್ಕೆ ಕೈಜೋಡಿಸುತ್ತಾರೆ. ಇಂದು ನ್ಯಾಪ್ಕಿನ್ ಬದಲಾಗಿ ಮುಟ್ಟಿನ ಕಪ್ ಬಗ್ಗೆ ಅರಿವು ಮೂಡಿಸಬೇಕು, ಆದರೆ ನಮ್ಮ ಮಹಿಳೆಯರು ನ್ಯಾಪ್ಕಿನ್ ಒಪ್ಪಿಕೊಳ್ಳುವುದೇ ಕಷ್ಟ” ಎನ್ನುತ್ತಾರೆ ಸುಮೀರಾ.
ಸುಮೀರಾ ತಾವು ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಯುವತಿಯರನ್ನು ಜೊತೆ ಮಾಡಿಕೊಂಡು ಮುಟ್ಟಿನ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಇಂತಹ ತೆರೆಮರೆಯ ನಾಯಕಿಯರು ಹಲವು ಮಂದಿ. ಕೆಲವರಿಗೆ ಕುಟುಂಬದ ಬೆಂಬಲವಿದ್ದರೆ, ಇನ್ನು ಕೆಲವರು ಏಕಾಂಗಿ ಹೋರಾಟ ನಡೆಸಿದ್ದಾರೆ..
2018ರವರೆಗೆ ನ್ಯಾಪ್ಕಿನ್ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಸಾಕಷ್ಟು ಒತ್ತಡದ ಬಳಿಕ ಸರ್ಕಾರ ತೆರಿಗೆ ಹಿಂಪಡೆದಿದ್ದು, ಸದ್ಯ ನ್ಯಾಪ್ಕಿನ್‌ಗೆ ಯಾವುದೇ ತೆರಿಗೆಯಿಲ್ಲ. ಆದರೆ ನ್ಯಾಪ್ಕಿನ್ ತಯಾರಿಕೆಗೆ ಬಳಸುವ ಬಹುತೇಕ ಎಲ್ಲಾ ವಸ್ತುಗಳೂ ಶೇಕಡ 12-18ರಷ್ಟು ತೆರಿಗೆಗೆ ಒಳಪಡುತ್ತವೆ. ಇದರಿಂದಾಗಿ ಉತ್ಪಾದನೆ ವೆಚ್ಚ ಅಧಿಕವಾಗಿ ನ್ಯಾಪ್ಕಿನ್ ತಯಾರಿಕಾ ಸಂಸ್ಥೆಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ. ಪರೋಕ್ಷವಾಗಿ ತೆರಿಗೆ ಹೊರೆ ಖಂಡಿತವಾಗಿಯೂ ಮಹಿಳೆಯರ ಮೇಲೆ ಬೀಳುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುವುದು ಅನಿವಾರ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.