ಪ್ರೀತಿ, ಆನಂದ ಮತ್ತು ಸೌಹಾರ್ದಯುತ ಸಮುದಾಯ ಕಟ್ಟದಿದ್ದರೆ ತಮ್ಮ ಯಾವ ಕನಸುಗಳು ಈಡೇರವು ಎಂಬ ಅರಿವು ಥಿಚ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ನಡುವಿನ ಪ್ರತಿ ಚರ್ಚೆಯ ವಸ್ತುವಾಗಿದ್ದವು...
ಮಾರ್ಟಿನ್ ಲೂಥರ್ ಕಿಂಗ್ ಅಹಿಂಸೆಯನ್ನು ಆಲಿಂಗಿಸಿದವರು. ಅಹಿಂಸಾತ್ಮಕ ಚಳವಳಿಗಳಿಗೆ, ಪ್ರತಿಭಟನೆಗಳಿಗೆ ಅಗಾಧ ಶಕ್ತಿಯಿದೆ ಎಂದು ಬಲವಾಗಿ ನಂಬಿದ್ದವರು. ಸಹಜವಾಗಿಯೇ ಅವರಿಗೆ ಬುದ್ಧ, ಮಹಾತ್ಮ ಗಾಂಧಿ ಆದರ್ಶವಾಗಿದ್ದರು. ಆದರೆ ಬುದ್ಧನ ಅನುಯಾಯಿಗಳು, ಬೌದ್ಧ ಬಿಕ್ಕುಗಳು ವಿಯೆಟ್ನಾಮ್ ದೇಶದಲ್ಲಿ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದುದು ಮಾರ್ಟಿನ್ ಲೂಥರ್ ಅವರನ್ನು ಗೊಂದಲಕ್ಕೀಡು ಮಾಡಿತ್ತು. ಅಹಿಂಸೆ ಪ್ರತಿಪಾದಿಸುತ್ತಿದ್ದ ಬಿಕ್ಕುಗಳೇ ಆತ್ಮಾಹುತಿ ಮಾಡಿಕೊಳ್ಳುವುದೇ ಎಂದು!
ಜೂನ್ 1, 1965, ವಿಯೆಟ್ನಾಮ್ ಮೂಲದ ಬೌದ್ಧ ಗುರು ಥಿಚ್ ನಾತ್ ಹಾನ್, ಮಾರ್ಟಿನ್ ಲೂಥರ್ ಅವರಿಗೆ ಆತ್ಮಾಹುತಿ ಕುರಿತು ಒಂದು ಪತ್ರ ಬರೆದರು. ವಿಯೆಟ್ನಾಮ್ ಬೌದ್ಧ ಬಿಕ್ಕುಗಳು ಆತ್ಮಾಹುತಿ ಮಾಡಿಕೊಳ್ಳುತ್ತಿರುವುದನ್ನು ಆತ್ಮಹತ್ಯೆ ಅಥವಾ ಹತಾಶೆಯ ಪ್ರತೀಕವೆಂದು ಪರಿಗಣಿಸಬಾರದು ಬದಲಾಗಿ ಬಿಕ್ಕುಗಳ ಆತ್ಮಾಹುತಿಯನ್ನು ಪ್ರೀತಿಯ ಪ್ರತೀಕವೆಂದು ಕಾಣಬೇಕು ಎಂದು ಥಿಚ್ ಆ ಪತ್ರದಲ್ಲಿ ತಮ್ಮಅನಿಸಿಕೆ ಮುಂದಿಟ್ಟಿದ್ದರು.
“ಆಕ್ರಮಣ ಮಾಡುವವ ಅಥವಾ ಪ್ರಭುತ್ವ ಎಲ್ಲವನ್ನೂ ಸದಾ ನಿಯಂತ್ರಿಸಲು ಹವಣಿಸುತ್ತದೆ. ರೇಡಿಯೋ, ದೂರದರ್ಶನ, ದಿನಪತ್ರಿಕೆಗಳು ಅವರ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಅಂತಹ ಉಸಿರುಗಟ್ಟಿಸುವ ಸಂದರ್ಭ ಸೃಷ್ಟಿಯಾದಾಗ ದಮನಿತನ ದನಿ ಯಾರಿಗೂ ಕೇಳದಾಗುತ್ತದೆ. ಹೊರಗಿನ ಜಗತ್ತಿಗೆ ಏನು ತಿಳಿಯದಾಗುತ್ತದೆ. ಅಂತಹ ಸಮಯದಲ್ಲಿ ಆತ್ಮಾಹುತಿ ಅನಿವಾರ್ಯವಾಗುತ್ತದೆ. ವಿಯೆಟ್ನಾಮ್ ಜನರಿಗೆ ಯುದ್ಧ ಬೇಡ, ಕದನದ ಹಿಂಸೆ ಬೇಡ, ಆದರೆ ಈ ಶಾಂತಿ ಸಂದೇಶವನ್ನು ಹೊರ ಜಗತ್ತಿಗೆ ತಿಳಿಸುವುದಾದರು ಹೇಗೆ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾಬರಿ ಮಸೀದಿ ಕೆಡವಿದಾಗಲೇ ‘ಸಾಮರಸ್ಯ’ ಸಮಾಧಿಯಾಗಿತ್ತಲ್ಲವೇ?
ಆದ್ದರಿಂದ ಬಿಕ್ಕುಗಳ ಆತ್ಮಾಹುತಿ ಹಿಂಸೆಯ ಪ್ರಕ್ರಿಯೆಯಲ್ಲ. ಅದು ಕರುಣೆ, ಶಾಂತಿಯ ಸಂದೇಶ. ಹೇಗೆ ಏಸುಕ್ರಿಸ್ತ ಶಿಲುಬೆಯಲ್ಲಿ ಸಾಯುವಾಗ ಅವನ ಮನದಲ್ಲಿ ದ್ವೇಷ, ಕ್ರೋಧವಿರದೆ ಬರಿಯ ಕರುಣೆ, ಶಾಂತಿ, ಭ್ರಾತೃತ್ವದ ಕರೆಯಿತ್ತೋ ಹಾಗೆಯೇ ಆತ್ಮಾಹುತಿಗೆ ಶರಣಾದ ಬಿಕ್ಕುಗಳ ಮನದಲ್ಲೂ ಆಕ್ರೋಶವಿರದೆ ಬರಿಯ ಪ್ರೀತಿ ಅಕ್ಕರೆಯಿತ್ತಷ್ಟೇ ಇದೆ” ಎಂದು ಥಿಚ್ ವಿವರಿಸಿದರು.
ಈ ಪತ್ರ ಅವರಿಬ್ಬರ ನಡುವೆ ಹೊಸ ಬಾಂಧವ್ಯದ ಸೇತುವೆಯನ್ನೇ ನಿರ್ಮಿಸಿತ್ತು. ಮುಂದುವರೆದು ಥಿಚ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಮೊದಲ ಬಾರಿಗೆ ಚಿಕಾಗೊದಲ್ಲಿ ಭೇಟಿಯಾದರು. ಅದು ಜೂನ್ 1, 1966. ಮೊದಲ ಭೇಟಿಯಲ್ಲೇ ಥಿಚ್, ಮಾರ್ಟಿನ್ ಸೆಳೆತಕ್ಕೆ ಒಳಗಾದರು. ಮಾರ್ಟಿನ್ ಲೂಥರ್ ಕಿಂಗ್ ವ್ಯಕ್ತಿತ್ವವೇ ಎಲ್ಲವನ್ನೂ ನುಡಿಯುತಿತ್ತು. ಕಿಂಗ್ ನಡೆಯುತ್ತಿದ್ದ ರೀತಿ, ನಗುತ್ತಿದ್ದ, ಕುಳಿತುಕೊಳ್ಳುತ್ತಿದ್ದ ಪರಿಯೇ ಥಿಚ್‌ನನ್ನು ಆಕರ್ಷಿಸಿಬಿಟ್ಟಿತ್ತು. ಮಾರ್ಟಿನ್ ಲೂಥರ್ ಕಿಂಗ್‌ನನ್ನು ನೋಡಿಯೇ ಆತನೊಬ್ಬ ಬೋಧಿಸತ್ವನೆಂಬ ತೀರ್ಮಾನಕ್ಕೆ ಥಿಚ್ ಬಂದುಬಿಟ್ಟಿದ್ದರು. ಪ್ರಪಂಚದ ಎಲ್ಲಾ ಕಲಹಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ಸಮನ್ವಯ ಸಾಧ್ಯವಾಗಿಸುವ ಸಂಸ್ಥೆಯೊಂದಕ್ಕೆ ಥಿಚ್ ಮತ್ತು ಮಾರ್ಟಿನ್ ದುಡಿಯಲಾರಂಭಿಸಿದರು. ಲೂಥರ್ ಕಿಂಗ್ ಅರ್ಥಹೀನ ವಿಯೆಟ್ನಾಮ್ ಸಮರಕ್ಕೆ ಅಂತ್ಯವಾಡುವಂತೆ ಕರೆ ನೀಡಿದರೆ, ಥಿಚ್, ಅಮೆರಿಕಾದ ನಾಗರಿಕ ಹಕ್ಕುಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ಎರಡು ಹೋರಾಟಗಳ ನಡುವೆ ಅಷ್ಟೇನೂ ವ್ಯತ್ಯಾಸವಿದೆ ಎಂದು ಅವರಿಬ್ಬರಿಗೆ ಅನ್ನಿಸಿರಲಿಲ್ಲ.
“ಮಾನವನ ಸಂಕುಲದ ಪರಮ ವೈರಿಗಳು ಆತನ ಆಚೆಗೆಲ್ಲೊ ಇಲ್ಲ. ಅವು ಅವನ ಮನದಾಳದಲ್ಲಿಯೇ ಅಡಗಿವೆ. ಮನದಾಳದ ಕ್ರೋಧ, ಹಗೆ, ತರತಮಗಳೇ ಆತನ ನಿಜವಾದ ವೈರಿಗಳು. ನಮ್ಮೊಳಗೆ ಅಡಗಿರುವ ಈ ನಿಜ ವೈರಿಗಳನ್ನು ಗುರುತಿಸಿ ಅಹಿಂಸಾ ಮಾರ್ಗದಲ್ಲಿ ನಡೆದು ಆ ವೈರಿಗಳನ್ನು ನಿಗ್ರಹಿಸುವುದೇ ನಮ್ಮೆಲ್ಲರ ಧ್ಯೇಯವಾಗಿರಬೇಕು” ಎಂದು ಥಿಚ್ ಮತ್ತು ಕಿಂಗ್ ನಂಬಿದ್ದರು.

ಮೇ 1967, ಜಿನೀವಾದಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಅವರಿಬ್ಬರು ಮತ್ತೊಮ್ಮೆ ಭೇಟಿಯಾದರು. ಜೊತೆಜೊತೆಗೆ ಚಹಾ ಹೀರುತ್ತಿದ್ದರು. ಪತ್ರಿಕಾ ವರದಿಗಾರರು ಥಿಚ್ ಅವರನ್ನು ಸುತ್ತುವರೆದು ಅವರ ತಿಂಡಿಗೆ ತಡವಾದಾಗ ಕಿಂಗ್, ಥಿಚ್‌ಗಾಗಿ ಕಾಯುವುದು ಮಾತ್ರವಲ್ಲದೆ ತಿಂಡಿಯನ್ನು ಬಿಸಿಯಾಗಿರಿಸುತ್ತಿದ್ದರು! ಇಂತಹ ಆತ್ಮೀಯತೆ, ಗೆಳೆತನ ನೂರ್ಕಾಲ ಇರಬೇಕಿತ್ತು…
ಭೇಟಿಯಾದಾಗಲೆಲ್ಲ ಶಾಂತಿ, ಸ್ವಾತಂತ್ರ್ಯ, ಸಮಾನತೆಯಿರುವ ಸಮುದಾಯ ಹೇಗೆ ಕಟ್ಟುವುದು ಎಂಬ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದವು. ಪ್ರೀತಿ, ಆನಂದ ಮತ್ತು ಸೌಹಾರ್ದಯುತ ಸಮುದಾಯ ಕಟ್ಟದಿದ್ದರೆ ತಮ್ಮ ಯಾವ ಕನಸುಗಳು ಈಡೇರವು ಎಂಬ ಅರಿವು ಅವರಿಗಿದ್ದುದೇ ಈ ಚರ್ಚೆಗಳಿಗೆ ಕಾರಣವಾಗಿತ್ತು.
“ಮಾರ್ಟಿನ್ ನಿಮಗಿದು ಗೊತ್ತೇ? ವಿಯೆಟ್ನಾಮ್ ದೇಶದ ಜನರು ನಿಮ್ಮನ್ನು ಬೋಧಿಸತ್ವರೆಂದು ಗೌರವಿಸುತ್ತಾರೆಂದು? ಹೌದು ನೀವು ಪ್ರತಿ ಜೀವಿಯನ್ನು ಕರುಣೆ ಮತ್ತು ಪ್ರೀತಿಯಡೆಗೆ ಕರೆದೊಯ್ಯುವ ಬೋಧಿಸತ್ವ” ಎಂದು ಒಮ್ಮೆ ಥಿಚ್, ಕಿಂಗ್ ಅವರಿಗೆ ಹೇಳಿದ್ದರು. ಹೀಗೆ ಹೇಳಿದ ಕೆಲವೇ ತಿಂಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮೆಂಫಿಸ್ ನಗರದಲ್ಲಿ ಹಂತಕನ ಗುಂಡಿಗೆ ಬಲಿಯಾದರು!
ಇದನ್ನು ಓದಿದ್ದೀರಾ?: ದೇಶ ಕಂಡ ಪರಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್
ನ್ಯೂಯಾರ್ಕ್‌ನಲ್ಲಿದ್ದ ಥಿಚ್ ಅವರಿಗೆ ಈ ಹತ್ಯೆಯ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಥಿಚ್ ಅವರಿಗೆ ಹಲವು ದಿನ ಆಹಾರ ಸೇವಿಸಲಾಗಲಿಲ್ಲ, ನಿದ್ದೆ ಬರಲಿಲ್ಲ. ಆದರೆ ಮಾರ್ಟಿನ್ ಲೂಥರ್ ಕಿಂಗ್ ಕಂಡಿದ್ದ ಸಮುದಾಯ ಕಟ್ಟುವ ಮಾತು ಮಾತ್ರ ಪದೇ ಪದೇ ಮರುಕಳಿಸುತ್ತಿತ್ತು, ನಡೆಸಿದ ಆಳವಾದ ಚರ್ಚೆಗಳು ಕಣ್ಮುಂದೆ ಬರುತ್ತಿದ್ದವು. ಅಂದು ಥಿಚ್ ಪ್ರೀತಿಯ ಸಮುದಾಯವೊಂದನ್ನು ಕಟ್ಟುವ ಪಣ ತೊಟ್ಟರು. ಅಪರೂಪದ ಸಮುದಾಯವನ್ನು ಯಶಸ್ವಿಯಾಗಿ ಕಟ್ಟಿದರು ಕೂಡ. ಸಾವಿರಾರು ಮಂದಿಗೆ ಕರುಣೆ, ಮನೋಮಗ್ನತೆಯನ್ನು ಕಲಿಸಿಕೊಟ್ಟರು. ಈ ಪ್ರಯತ್ನದಲ್ಲಿ ಬೋಧಿಸತ್ವ ಮಾರ್ಟಿನ್ ಲೂಥರ್ ಕಿಂಗ್ ಅವರ ಬೆಂಬಲ ಸದಾ ಇತ್ತು ಎಂಬುದು ಥಿಚ್ ಅವರ ಅಚಲವಾದ ನಂಬಿಕೆಯಾಗಿತ್ತು.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ