ಕಾರ್ಕಳ ಪರಶುರಾಮನ ಮೂರ್ತಿಯ ಕಳಚಿ ಬಿದ್ದ ಕಂಚಿನ ಸತ್ಯ! ಬಿಜೆಪಿ ನಾಯಕರಿಗೆ ಮುಖಭಂಗ

Date:

Advertisements
ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತ, ಜನರಿಗೆ ಟೋಪಿ ಹಾಕುವುದು ಬಿಜೆಪಿಗೆ ಹೊಸದಲ್ಲ. 2023ರಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ತರಾತುರಿಯಲ್ಲಿ ನಕಲಿ ಪರಶುರಾಮನ ಪ್ರತಿಮೆ ಉದ್ಘಾಟಿಸಿ, ಜನರ ಎದುರು ಬಿಜೆಪಿ ಬೆತ್ತಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾದ ಪರಶುರಾಮನ ಪ್ರತಿಮೆ ಕಾಮಗಾರಿಯಲ್ಲಿನ ಅಕ್ರಮದ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಬಿಜೆಪಿ ಸರ್ಕಾರ ಮತ್ತು ಪ್ರತಿಮೆ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮುಖವಾಡ ಕಳಚಿ ಬಿದ್ದಿದೆ.

ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ 2023 ಜನವರಿ 27ರಂದು ಪರಶುರಾಮ್ ಥೀಂ ಪಾರ್ಕ್ ಉದ್ಘಾಟಿಸಿ,‌ ಪರಶುರಾಮ ಕಂಚಿನ ಪ್ರತಿಮೆ ಅನಾವರಣ ಮಾಡಿರುವುದಾಗಿ ಘೋಷಿಸಿ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದರು. ಬಳಿಕ ಪರಶುರಾಮನ ಪ್ರತಿಮೆ ಕಂಚಿನದ್ದೋ ಅಥವಾ ಫೈಬರ್‌ನದ್ದೋ ಎಂಬ ನೈಜತೆಯ ಬಗ್ಗೆ ಸಂಶಯ ವ್ಯಕ್ತವಾಗಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹಗಳು ಸಹ ನಡೆದವು.

ಪ್ರತಿಮೆ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಕಾಂಗ್ರೆಸ್‌ ನಾಯಕರು ತೀವ್ರ ವಾಗ್ದಾಳಿ ನಡೆಸಿ, “ಫೈಬರ್ ಮೂರ್ತಿಯನ್ನು ಕಂಚು ಎಂದು ಇಡೀ ಕರ್ನಾಟಕದ ಜನರ ಕಿವಿ ಮೇಲೆ ಫ್ಲವರ್ ಇಟ್ಟಿರುವ ಬಿಜೆಪಿ ತಾನು ಲೂಟಿ ಹೊಡೆಯಲು ಯಾವ ಕೆಳ ಮಟ್ಟಕ್ಕೆ ಬೇಕಿದ್ದರೂ ಇಳಿಯಬಲ್ಲದು ಎಂದು ತೋರಿಸಿಕೊಟ್ಟಿದೆ. ಪರಶುರಾಮನ ಮೂರ್ತಿಯೊಂದಿಗೆ ಕಾರ್ಕಳದ ಬಿಜೆಪಿ ಶಾಸಕ ಸುನಿಲ್‌ ಕಾರ್ಕಳ ಕೂಡ ಕಾಣೆಯಾಗಿದ್ದಾರೆ!” ಎಂದು ಕಾಂಗ್ರೆಸ್‌ ಟೀಕಿಸಿತ್ತು.

1,231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಪೊಲೀಸರು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ ಹಿತ್ತಾಳೆಯಿಂದ ನಿರ್ಮಿಸಿರುವುದು ತಜ್ಞರ ಪರಿಶೀಲನಾ ವರದಿ ಮತ್ತು ತನಿಖೆಯಿಂದ ಸಾಬೀತಾಗಿದೆ. ಇದರಿಂದ ಕಾಂಗ್ರೆಸಿಗರು ಮಾಡಿದ್ದ ಫೈಬರ್ ಪ್ರತಿಮೆ ವಾದಕ್ಕೂ ಹಿನ್ನಡೆ ಆಗಿದೆ.

ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಪರಶುರಾಮ ಪ್ರತಿಮೆ ವಿಚಾರ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ವಿಷಯವಾಗಿ ಮಾರ್ಪಟ್ಟಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ, ಪ್ರತಿಮೆ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಕಂಚಿನ ಪ್ರತಿಮೆಯ ಬದಲು ಫೈಬ‌ರ್‌ನಲ್ಲಿ ಪ್ರತಿಮೆ ನಿರ್ಮಾಣ ಮಾಡಿಸಿದ್ದರು ಎಂದು ಸುನೀಲ್ ಕುಮಾರ್ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದ್ದರು.

ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರ ಪೊಲೀಸ್‌ ತನಿಖೆಗೆ ಒಪ್ಪಿಸಿತ್ತು. ಈಗ, ಸರ್ಕಾರವೇ ರಚಿಸಿರುವ ತನಿಖಾ ಆಯೋಗದ ಪ್ರಕಾರ, ಫೈಬರ್‌ನಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪವೂ ಸತ್ಯಕ್ಕೆ ದೂರವಾಗಿದೆ. ಪ್ರತಿಮೆ ಕಂಚಿನಿಂದ ನಿರ್ಮಿತಗೊಳ್ಳುವ ಬದಲು ಹಿತ್ತಾಳೆಯಿಂದ ನಿರ್ಮಾಣಗೊಂಡಿದೆ. ಕಂಚಿನ ಬದಲು, ಹಿತ್ತಾಳೆಯಲ್ಲಿ ಏಕೆ ನಿರ್ಮಾಣಗೊಂಡಿದೆ ಎನ್ನುವ ಅಂಶ ಬಯಲಾಗಬೇಕಿದೆ. ಕಂಚಿನ ಮತ್ತು ಹಿತ್ತಾಳೆ ಪ್ರತಿಮೆ ನಿರ್ಮಾಣಕ್ಕೆ ಒಟ್ಟಾರೆ ವೆಚ್ಚದಲ್ಲಿ ಏನಾದರೂ ವ್ಯತ್ಯಾಸ ಆಗಲಿದೆಯಾ? ಹಿತ್ತಾಳೆಯಿಂದ ಪ್ರತಿಮೆ ನಿರ್ಮಾಣ ಮಾಡಲು ಅವಕಾಶ ನೀಡಿದವರು ಯಾರು? ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರು ಬಳಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಗೊಂಡಿದೆ. ಕರಾವಳಿ ಭಾಗವನ್ನು ಪರಶುರಾಮನ ಸೃಷ್ಟಿ ಎಂದು ಕರೆಯುವುದು ರೂಢಿಯಲ್ಲಿದೆ. ಪರಶುರಾಮನ ಬೃಹತ್ ಪ್ರತಿಮೆ ಸ್ಥಾಪಿಸಲು, ಶಾಸಕ ವಿ.ಸುನಿಲ್ ಕುಮಾರ್ ಮುಂದಾಗಿ, ಇದಕ್ಕೆ 15 ಕೋಟಿ ರೂ. ವಿಶೇಷ ಅನುದಾನವನ್ನು ಅಂದಿನ ಸಿಎಂ ಬಸವಾರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡಿದ್ದರು. ಭಾರೀ ಪ್ರಚಾರದೊಂದಿಗೆ ಈ ಪಾರ್ಕ್ ಅನ್ನು ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು.

ಪರಶುರಾಮ್ 2

ಆದರೆ, ಕಾಮಗಾರಿ ಶುರುವಾದಾಗಿನಿಂದ, ಒಂದಲ್ಲಾ ಒಂದು ಕಾರಣಕ್ಕೆ ಇದು ವಿವಾದವಾಗುತ್ತಲೇ ಬಂದಿದೆ. ಶಿಲ್ಪಿ ಕೃಷ್ಣ ನಾಯ್ಕ ಕ್ರಿಷ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಒಪ್ಪಂದದಂತೆ 1.25 ಕೋಟಿ ರೂ. ಹಣ ಪಡೆದು ಕಾಮಗಾರಿ ನಡೆಸುತ್ತಿದ್ದರು. ಆದರೆ, ಕೃಷ್ಣ ನಾಯ್ಕ ಕಂಚಿನ ಮೂರ್ತಿ‌ ಮಾಡದೇ ಹಿತ್ತಾಳೆಯಿಂದ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿ ಸರಕಾರಕ್ಕೆ ವಂಚಿಸಿದ್ದಾನೆ.

ಶಿಲ್ಪಿ ಕೃಷ್ಣ ನಾಯ್ಕ ವಿರುದ್ಧ ನಕಲಿ ವಿಗ್ರಹ ಸಿದ್ಧಪಡಿಸಿ ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪದ ಮೇಲೆ 2024ರ ಜೂ.21ರಂದು ಕಾರ್ಕಳದ ಕೃಷ್ಣ ಶೆಟ್ಟಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಾಗೆಯೇ ಇವರಿಂದ ಪರಶುರಾಮನ ಪ್ರತಿಮೆ ಕಳುವಾಗಿದೆ ಎಂದು ಇನ್ನೊಂದು ದೂರು ದಾಖಲಾಗಿತ್ತು.

ಎಫ್‌ಐಆರ್‌ ದಾಖಲಾದ ಬಳಿಕ ಬಂಧನ ಭೀತಿಯಲ್ಲಿದ್ದ ಕೃಷ್ಣ ನಾಯ್ಕ ನೀರಿಕ್ಷಣಾ ಜಾಮೀನು ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು. ನ್ಯಾಯಾಲಯ ಅವರ ನಿರೀಕ್ಷಣಾ ಜಾಮೀನು ರದ್ದು ಮಾಡುತ್ತಿದ್ದಂತೆ ಕೃಷ್ಣ ನಾಯ್ಕ ತಲೆಮರೆಸಿಕೊಂಡಿದ್ದ. ಹುಡುಕಾಟ ಆರಂಭಿಸಿದ್ದ ಕಾರ್ಕಳ ಪೊಲೀಸರು ಕೇರಳದ ಕ್ಯಾಲಿಕಟ್‌ ಎಂಬಲ್ಲಿ ಕೃಷ್ಣ ನಾಯ್ಕನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದರು. ತನಿಖೆ ವೇಳೆ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯ ಬದಲು ಹಿತ್ತಾಳೆ ಲೋಹದಿಂದ ನಿರ್ಮಾಣ ಮಾಡಿರುವುದು ಒಪ್ಪಿಕೊಂಡಿದ್ದಾನೆ.

ಅದೇ ರೀತಿ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ವರ್ಕ್ ಆರ್ಡರ್‌ನಲ್ಲಿದ್ದ ಷರತ್ತುಗಳನ್ನು ಪಾಲಿಸದೆ, 2023ರ ಅ.12ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿರುವ ಶೆಡ್‌ನಲ್ಲಿ ಇರಿಸಿಕೊಂಡಿದ್ದ ಎಂಬುದು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವನಹಳ್ಳಿ ಐತಿಹಾಸಿಕ ಗೆಲುವಿಗೆ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಕಾರಣ

ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಇವರುಗಳು ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುತ್ತಾರೆ. ಅವರ ವಿರುದ್ದ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿಯಂತೆ 1,231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಕಾರ್ಕಳದ ನ್ಯಾಯಾಲಯಕ್ಕೆ ನೀಡಲಾಗಿದೆ.

ಪರಶುರಾಮ ಪ್ರಾಜೆಕ್ಟ್ ಅನ್ನು ವಹಿಸಿಕೊಂಡಿದ್ದ ಕಂಪೆನಿಯು ಕೆಲವೊಂದು ವರ್ಕ್ ಆರ್ಡರ್ ಷರತ್ತುಗಳನ್ನು ಪಾಲಿಸಿಲ್ಲ ಎಂದು ಹೇಳಲಾಗುತ್ತಿದೆ. ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಬೆಂಗಳೂರಿಗೆ ಸಾಗಿಸಲಾಗಿದೆ ಎನ್ನುವ ತಪ್ಪು ಮಾಹಿತಿಯನ್ನು ಯಾಕಾಗಿ ನೀಡಿದೆ? ವರ್ಕ್ ಆರ್ಡರ್ ಬಿಡುಗಡೆ ಆಗುವ ಮುನ್ನವೇ ಹಣ ಬಿಡುಗಡೆ ಮಾಡಿದ್ದು ಯಾಕೆ? ಮೂರ್ತಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟಿದ್ದು ಏಕೆ? ಈ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ವರದಿಯಲ್ಲಿನ ಅಂಶದ ಬಗ್ಗೆ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದು, “ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ.
ಪ್ರತಿಮೆ ಫೈಬರ್‌ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ” ಎಂದಿದ್ದಾರೆ.

“ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ‌‌ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಪ್ರತಿಮೆ ಫೈಬರ್‌ದು ಎಂಬ ವ್ಯವಸ್ಥಿತ ಪಿತೂರಿಗೆ ಸೋಲಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕು” ಎಂದು ಒತ್ತಾಯಿಸಿದ್ದಾರೆ.

ಆದರೆ, ಪರಶುರಾಮ ಪ್ರತಿಮೆ ಕಂಚಿನದ್ದು ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಇದೇ ಶಾಸಕ ಸುನಿಲ್ ಕುಮಾರ್ ಹಿತ್ತಾಳೆಯಿಂದ ನಿರ್ಮಿತವಾಗಿರುವ ಬಗ್ಗೆ ತುಟಿ ಬಿಚ್ಚದಿರುವುದು ಅನುಮಾನಕ್ಕೂ ಕಾರಣವಾಗಿದೆ.

ಪರಶುರಾಮನ ಮೂರ್ತಿ ಕಂಚಿನದೋ ಹಿತ್ತಾಳೆಯದೋ ಎನ್ನುವುದನ್ನು ನಿಂತ ನಿಲುವಿನಲ್ಲಿಯೇ ಪಾತ್ರೆ ಅಂಗಡಿಯವನು ಹೇಳಬಲ್ಲ. ಈ ಒಂದು ಸಣ್ಣ ವಿಚಾರವನ್ನು ಬಯಲು ಮಾಡಲು ತನಿಖಾ ತಂಡ ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿದೆ. ಕಂಚು ಹೌದೋ ಅಲ್ಲವೋ ಎನ್ನಲು ಇಷ್ಟು ಅವಧಿ ಬೇಕಾ? ಇದು ನಿಜಕ್ಕೂ ನಾಚಿಕೆಗೇಡು.

ರಾಜ್ಯದಲ್ಲಿ ಐತಿಹಾಸಿಕ ನಾಯಕರ, ಸಾಮಾಜಿಕ ಸುಧಾರಕರ ಪ್ರತಿಮೆ ಸ್ಥಾಪನೆ ಮಾಡುವುದು ಹೊಸದಲ್ಲ. ರಾಜ್ಯದ ಜಾತಿ ಮತ್ತು ಧಾರ್ಮಿಕ ಸಮುದಾಯಗಳ ಜನರು, ಆ ಸಮುದಾಯಗಳ ನಾಯಕರ ಅಥವಾ ನಾಯಕಿಯರ ಪ್ರತಿಮೆ ಸ್ಥಾಪನೆಗೆ ಸದಾ ಆಗ್ರಹಗಳು ಕೇಳಿಬರುತ್ತಲೇ ಇರುತ್ತವೆ. ಕಾಲ ಕಾಲಕ್ಕೆ ಆಯಾ ಸರ್ಕಾರಗಳು ಮತಕ್ಕಾಗಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸುತ್ತಲೇ ಬಂದಿವೆ.

ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತ, ಜನರಿಗೆ ಟೋಪಿ ಹಾಕುವುದು ಬಿಜೆಪಿಗೆ ಹೊಸದಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ತರಾತುರಿಯಲ್ಲಿ ನಕಲಿ ಪರಶುರಾಮನ ಪ್ರತಿಮೆ ಉದ್ಘಾಟನೆ ಮಾಡಿ, ಜನರ ಎದುರು ಬಿಜೆಪಿ ಬೆತ್ತಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನರಿಂದ ಪಡೆದ ಹೆಚ್ಚಿನ ಜಿಎಸ್ ಟಿಯನ್ನು ಕೇಂದ್ರ ಸರ್ಕಾರ ಮರಳಿ ನೀಡುವುದೇ: ಸಿಎಂ ಪ್ರಶ್ನೆ

ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್ ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ...

ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?

ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ...

ಕೊಪ್ಪಳ | ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಎಲ್ಲ 9 ಆರೋಪಿಗಳು ಖುಲಾಸೆ

ಒಂದು ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ...

Download Eedina App Android / iOS

X