"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು ಅನುಮಾನಿಸಬಹುದೇ? ಭೈರಪ್ಪನವರ ಮಕ್ಕಳು ಮುಂದೆ ತಕರಾರು ತೆಗೆದರೆ, ಕಾನೂನಾತ್ಮಕ ಸಮಸ್ಯೆಗಳು ಬರದಂತೆ ವಿಲ್ ಬರೆಸಲಾಗಿದೆಯೇ?"
ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಬರೆದಿಟ್ಟಿರುವ ವಿಲ್ (ಉಯಿಲು) ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅವರು ಮೈಸೂರು ನಿವಾಸವನ್ನು ತೊರೆದ ಮೇಲೆ, ಬೆಂಗಳೂರಿಗೆ ಬಂದು ಪತ್ರಕರ್ತ ವಿಶ್ವೇಶ್ವರ ಭಟ್ಟರ ಮನೆಯಲ್ಲಿ ಉಳಿದಿದ್ದರು. ಆನಂತರದಲ್ಲಿ ಏನೆಲ್ಲ ಬೆಳವಣಿಗೆಗಳಾದವು? ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಹುಟ್ಟಿಕೊಂಡಿದ್ದು ಹೇಗೆ? ಸಾಹಿತ್ಯ ಭಂಡಾರ ಪ್ರಕಾಶನದ ಎಂ.ಜಿ. ಅರುಣ ಅವರಿಗೆ ಇಡೀ ಆಸ್ತಿಯನ್ನು ಕೊಟ್ಟು, ಅದನ್ನು ಪ್ರತಿಷ್ಠಾನಕ್ಕೆ ಬಳಸುವಂತೆ ಸೂಚಿಸಿದ್ದು ಹೇಗೆ? ಈ ಎಲ್ಲ ವಿದ್ಯಮಾನಗಳು ಭೈರಪ್ಪನವರ ಹೆಂಡತಿ ಮಕ್ಕಳಿಗೆ ಮೊದಲೇ ತಿಳಿದಿತ್ತಾ? ಭೈರಪ್ಪನವರ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದು ನಿಜವೇ? ಭೈರಪ್ಪನವರು ಯಾವಾಗ ಮನೆ ತೊರೆದರು?- ಇತ್ಯಾದಿ ಪ್ರಶ್ನೆಗಳೆಲ್ಲ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹಬ್ಬುತ್ತಿವೆ.
ಭೈರಪ್ಪನವರ ಮೂಲ ವಿಲ್, ನಂತರದಲ್ಲಿ ಎರಡು ಸಲ ತಿದ್ದುಪಡಿಗಳನ್ನು ಕಂಡಿರುವುದು ಅನುಮಾನಗಳನ್ನು ಹೆಚ್ಚಿಸಿದೆ. ಭೈರಪ್ಪನವರ ಕೊನೆಗಾಲದ ಕೆಲವು ವಿಡಿಯೊ ತುಣುಕುಗಳನ್ನು ಗಮನಿಸಿದರೆ, “ಅವರು ಮಾತನಾಡಲು ಕಷ್ಟವಾದ ಸ್ಥಿತಿಯಲ್ಲಿ ಇರುವುದು, ಹೇಳುತ್ತಿರುವ ವಿಚಾರಗಳನ್ನು ಪುನರಾವರ್ತನೆ ಮಾಡುವುದು, ಮಗುವಿನಂತೆ ವರ್ತಿಸುವುದು, ಮುಗ್ಧವಾಗಿ ಮಾತನಾಡುವುದು, ಮಾತನಾಡಲು ಸಾಧ್ಯವಾಗದೆ ತೊದಲುವುದು, ವಯೋಸಹಜ ಬಳಲಿಕೆಯಿಂದ ಕೂಡಿರುವುದು, ನಡೆಯಲು ಆಗದ ಸ್ಥಿತಿಯಲ್ಲಿ ಇರುವುದು” ಇತ್ಯಾದಿ ಚಹರೆಗಳು ಅವರಲ್ಲಿ ಕಂಡು ಬರುತ್ತವೆ.
ಜೂನ್ 14ರಂದು ‘ಭೈರಪ್ಪ ಪ್ರತಿಷ್ಠಾನ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರ ದೈಹಿಕ ಸ್ಥಿತಿ ಮತ್ತು ಮಾತುಗಳನ್ನು ಗಮನಿಸಿದರೆ ಅನುಮಾನಗಳು ಉಂಟಾಗುತ್ತವೆ. ಇಂತಹ ಸ್ಥಿತಿಗೆ ಭೈರಪ್ಪನವರು ತಲುಪಿದ್ದು ಯಾವಾಗ? ಅವರು ಸಾಯುವ 6 ತಿಂಗಳ ಮುನ್ನ ವಿಲ್ ತಿದ್ದುಪಡಿಯಾಗಿದ್ದಾಗ ನಿಜಕ್ಕೂ ಅವರು ಮಾನಸಿಕವಾಗಿ ಸ್ಥಿರವಾಗಿದ್ದರೆ? ವಯೋಸಹಜ ನರಳಿಕೆಯನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡಿದ್ದಾರೆಯೇ? ನಿಜಕ್ಕೂ ಕಳೆದ ಆರು ತಿಂಗಳಿಂದ ಭೈರಪ್ಪನವರು ಏನಾಗಿದ್ದರು? ತಿದ್ದುಪಡಿಯನ್ನು ಕುಟುಂಬಸ್ಥರು ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ, ಭೈರಪ್ಪನವರು ಎಲ್ಲಿ ವಾಸವಿದ್ದರು? ಕೊನೆಯ ತಿದ್ದುಪಡಿಯ ಕಾಲಕ್ಕೆ ಅವರ ಸ್ಥಿತಿ ಹೇಗಿತ್ತು?” ಇತ್ಯಾದಿ ಅನುಮಾನಗಳು ಮೂಡುತ್ತಿವೆ.

“ಕೊನೆಗಾಲದಲ್ಲಿ ಭೈರಪ್ಪನವರ ಬ್ಯಾಂಕ್ ಖಾತೆಯಿಂದ ಸುಮಾರು 2 ಕೋಟಿ ರೂ. ಅನ್ಯವ್ಯಕ್ತಿಗಳಿಗೆ ವರ್ಗಾವಣೆಯಾಗಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭಸಿದ್ದು ಹೇಗೆ? ಹಾಗೇನಾದರೂ ಹಣ ಬೇರೊಬ್ಬರಿಗೆ ಜಮೆ ಆಗಿದ್ದರೆ, ಭೈರಪ್ಪನವರು ಯಾವ ಉದ್ದೇಶಕ್ಕೆ ಅಷ್ಟೊಂದು ದೊಡ್ಡ ಮೊತ್ತವನ್ನು ಕಳುಹಿಸಿಕೊಟ್ಟರು? ಈ ಹಣವನ್ನು ಪಡೆದವರು ಯಾರು? ನಿಜಕ್ಕೂ ಭೈರಪ್ಪನವರು ತಮ್ಮ ಸಂಪತ್ತನ್ನೆಲ್ಲ ಮತ್ತೊಬ್ಬರಿಗೆ ಕೊಡಲು ಸ್ವಇಚ್ಛೆಯಿಂದ ನಿರ್ಧರಿಸಿದ್ದರೆ? ಇಷ್ಟಾದರೂ ಕುಟುಂಬದ ಪ್ರತಿಕ್ರಿಯೆ ಏನು? ಕೌಟುಂಬಿಕ ಕಲಹವನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡರೆ?”- ಹೀಗೆ ಪ್ರಶ್ನೆಗಳ ಸರಮಾಲೆಗಳೇ ಭೈರಪ್ಪನವರ ವಿಲ್ ಸುತ್ತ ಹುಟ್ಟಿಕೊಂಡಿವೆ.
ಇದನ್ನೂ ಓದಿರಿ: ಹೆಂಡತಿಗೂ ನಯಾಪೈಸೆ ಕೊಡದೆ ಹೋದ ಭೈರಪ್ಪ; ‘ವಿಲ್’ ಬಗ್ಗೆ ಭಾರೀ ಟೀಕೆ!
ಭೈರಪ್ಪನವರು ಜೀವಂತವಾಗಿರುವಾಗಲೇ ಅವರ ಮಕ್ಕಳು ತಿದ್ದುಪಡಿ ವಿಲ್ ಸಂಬಂಧ ಕೋರ್ಟ್ ಮೆಟ್ಟಿಲೇರಿರುವ ಸಂಗತಿಯೂ ನಿಧಾನಕ್ಕೆ ಬೆಳಕಿಗೆ ಬರುತ್ತಿದೆ. “ಭೈರಪ್ಪನವರು ವಯೋಸಹಜ ಮರೆವು, ನೆನಪಿನ ಶಕ್ತಿಯ ಕೊರತೆ, ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ತಿದ್ದುಪಡಿ ಉಯಿಲನ್ನು ಪರಿಗಣಿಸಬಾರದು ಎಂಬ ಅಂಶಗಳನ್ನು ಪ್ರಸ್ತಾಪಿಸಿ, ಕುಟುಂಬಸ್ಥರು ಮೊದಲೇ ಕೋರ್ಟ್ ಮೆಟ್ಟಿಲೇರಿದ್ದರು” ಎನ್ನಲಾಗಿದೆ. ಈ ಎಲ್ಲ ವಿಚಾರಗಳನ್ನು ಭೈರಪ್ಪನವರ ಕುಟುಂಬದ ಆಪ್ತ ಮೂಲಗಳೇ ಹೇಳುತ್ತಿವೆ.
ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ. ಭೈರಪ್ಪನವರ ಮಕ್ಕಳು ಮುಂದೆ ತಕರಾರು ತೆಗೆದರೆ, ಕಾನೂನಾತ್ಮಕ ಸಮಸ್ಯೆಗಳು ಬರದಂತೆ ಚಾಣಾಕ್ಷತೆಯಿಂದ ವಿಲ್ ಮಾಡಿಸಿರುವುದು ಕಂಡುಬರುತ್ತದೆ ಎಂಬ ಅನುಮಾನಗಳು ದಟ್ಟವಾಗಿವೆ. “ಈ ಉಯಿಲಿನ ತಿದ್ದುಪಡಿ ಪತ್ರವನ್ನು ಬರೆಸುತ್ತಿರುವ ಸಮಯದಲ್ಲಿ ನನ್ನ ಪಂಚೇಂದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ನನ್ನ ಯೋಚನಾ ಶಕ್ತಿ ಹಾಗೂ ಬುದ್ಧಿಶಕ್ತಿ ಸಂಪೂರ್ಣವಾಗಿ ನನ್ನ ಹತೋಟಿಯಲ್ಲಿದೆ. ಇತರರಿಂದ ಯಾವುದೇ ರೀತಿಯ ಒತ್ತಾಯ ಅಥವಾ ಒತ್ತಡಕ್ಕೆ ಒಳಗಾಗದೆ ನನ್ನ ಆತ್ಮ ಸಂತೋಷದಿಂದ ಈ ಉಯಿಲಿನ ತಿದ್ದುಪಡಿ ಪತ್ರವನ್ನು ಮಾಡಿಸುತ್ತಿದ್ದೇನೆ” ಎಂಬ ಅಂಶ ಭೈರಪ್ಪನವರ ವಿಲ್‌ನಲ್ಲಿ ಸೇರಿದೆ. ಇದಕ್ಕೆ ಕುಟುಂಬಸ್ಥರು ಏನು ಹೇಳುತ್ತಾರೆ? ಎಂಬುದು ಸದ್ಯದ ಪ್ರಶ್ನೆ.
