"ಎಲ್ಲರಿಗೂ ಸಲ್ಲುವ ಅಥವಾ ಎಲ್ಲರಿಂದಲೂ ಸೈ ಅನ್ನಿಸಿಕೊಳ್ಳುವ, ಪತ್ರಿಕೆ ತರಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ಓದುಗರೆಲ್ಲರನ್ನೂ ಜಿಜ್ಞಾಸೆಯ ಕುಲುಮೆಗೆ ಎಳೆದು ತರಬೇಕೆಂಬ ಆಸೆ ನನಗಿತ್ತು" ಎಂದಿದ್ದರು ವಡ್ಡರ್ಸೆ.
“ನಾನು ತಮಗೆ ತಿಳಿಸಬೇಕಾದ ವಿಚಾರವೆಂದರೆ ‘ಮುಂಗಾರು’ ದೇಶದ ಇತರ ಪತ್ರಿಕೆಗಳಿಗಿಂತ ತೀರಾ ಭಿನ್ನವಾದುದು. ಈ ಪತ್ರಿಕೆಯ ಹುಟ್ಟಿಗೆ ಇತರ ಪತ್ರಿಕೆಗಳಂತೆ ಹಣದ ಬಲ ಮೂಲವಲ್ಲ. ಜನಜೀವನಕ್ಕೆ ನೇರವಾಗಿ ಸಲ್ಲುವ, ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುವ ಹಾಗೂ ಜನಪರವಾದ ಪತ್ರಿಕೆಯನ್ನು ಕಟ್ಟಬೇಕೆಂಬ ಹಂಬಲವೇ ‘ಮುಂಗಾರು’ವಿನ ಮೂಲ ಬಂಡವಾಳ.”
“ಧರ್ಮದ ಹೆಸರಿನಲ್ಲಿ, ಪರಂಪರೆಯ ಸೋಗಿನಲ್ಲಿ ಮುಗ್ಧ ಜನಸಮೂಹವನ್ನು ಮೂಢನಂಬಿಕೆಗಳ ಬಂಧನದಲ್ಲಿಟ್ಟು, ಅವರನ್ನು ದ್ವಿಪಾದ ಪಶುಗಳಾಗಿ ನಡೆಸಿಕೊಂಡು ಬಂದ ಭಾರತೀಯರ ಹೆಪ್ಪುಗಟ್ಟಿದ ಮನಸ್ಸನ್ನು ಒಮ್ಮೆ ಕರಗಿಸುವ ಆಸೆಯಿಂದ ಮುಂಗಾರು ಹುಟ್ಟಿದೆ. ಮಾನವ ಕುಲದ ಏಕತೆಯ ತತ್ವವನ್ನು ಎತ್ತಿ ಹಿಡಿವ ಸಂಕಲ್ಪದಿಂದ ತಲೆ ಎತ್ತಿದೆ. ಭಾರತೀಯ ಸಮಾಜವನ್ನು ಒಂದು ಕೊಚ್ಚೆಯಾಗಿ ಮಾಡಿದ ಸಾಮಾಜಿಕ ಅಂತಸ್ತನ್ನು ಮತ್ತು ಅದರ ಮೂಲವಾದ ಪ್ರತಿಷ್ಠೆಗಳಿಗೆ ಸವಾಲು ಹಾಕಲು ‘ಮುಂಗಾರು’ ಹುಟ್ಟಿದೆ. ಓದುಗ ಸಮೂಹದ ಮೇಲೆ ಚಿಂತನೆಯ ಮಳೆ ಸುರಿಸಿ ಸಮಾಜದಲ್ಲಿ ವಿಚಾರಗಳ ಹೊಳೆ ಹರಿಸಿ ಜನಶಕ್ತಿಯ ಬೆಳೆ ತೆಗೆವ ಗುರಿ ಹೊಂದಿದೆ. ಸಂಪ್ರದಾಯಕ್ಕೆ ವಿರೋಧವಾದ ಇಂತಹ ಒಂದು ಗುರಿ ಇರಿಸಿಕೊಂಡ ಮುಂಗಾರು ಸಾಮಾಜಿಕ ಪ್ರತಿಷ್ಠಿತರ ಕೆಂಗಣ್ಣನ್ನು ಎದುರಿಸಬೇಕಾಗುವುದೆಂಬ ಕಲ್ಪನೆ ನಮಗೆ ಮೊದಲೇ ಇತ್ತು. ಆದರೆ ಮುನ್ನಡೆಯ ಹಾದಿ ಹಿಡಿದಿರುವ ಅಥವಾ ಪರಿವರ್ತನೆಯ ಬಯಕೆಗಳಿಗೆ ಚಾಲನೆ ಸಿಕ್ಕಿರುವ ಒಂದು ಸಮಾಜದಲ್ಲಿ ಸಾಮಾಜಿಕ ಬಂಧನಗಳು ಸಡಿಲಾಗುವುದು ಸ್ವಾಭಾವಿಕವೆಂಬ ನಂಬಿಕೆಯೂ ನನಗಿತ್ತು. ಸುಮಾರು ಇಪ್ಪತ್ತೊಂಬತ್ತು ವರ್ಷಗಳ ಕಾಲ ಪತ್ರಕರ್ತನಾಗಿ ಶ್ರಮಿಸಿದ ನನಗೆ ಈ ದೇಶದ ಪತ್ರಿಕೆಗಳು ಜನಸಾಮಾನ್ಯರಿಗೆ ಮಾಡುತ್ತಲೇ ಬಂದಿರುವ ಮೋಸದ ಅರಿವು ಪೂರ್ಣವಾಗಿ ಇದೆ.”
ಈ ಸಾಲುಗಳು ಕರ್ನಾಟಕ ಕಂಡ ಅಪರೂಪದ ಸಮಾಜವಾದಿ, ಜೀವಪರ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರವು. ತಾವು ಕಟ್ಟಿದ ‘ಮುಂಗಾರು’ ಪತ್ರಿಕೆಯ ಆಶಯಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವಾಗ ಈ ಮಾತುಗಳನ್ನು ದಾಖಲಿಸುತ್ತಾರೆ. ವಡ್ಡರ್ಸೆಯವರು ಬದುಕಿದ್ದೇ ಹಾಗೆ..!
ಉಡುಪಿ ಜಿಲ್ಲೆಯ ವಡ್ಡರ್ಸೆಯ ಜಮೀನ್ದಾರ ಕುಟುಂಬದಲ್ಲಿ ಹುಟ್ಟಿದ್ದ ರಘುರಾಮ ಶೆಟ್ಟಿಯವರು ಒಂಬತ್ತನೇ ತರಗತಿಯಲ್ಲಿ ಓದು ನಿಲ್ಲಿಸಿ ಮುಂಬೈಗೆ ಹೋದವರು. ಹೋಟೆಲ್‌ಗಳಲ್ಲಿ ಕೆಲಸ ಮಾಡಿದ ಅವರಲ್ಲಿ ಜನರ ಬವಣೆಗಳನ್ನು ಕಂಡು ಬರೆಯುವ ತುಡಿತ ಹುಟ್ಟಿತು. ಹೀಗಾಗಿಯೇ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಮುಂಬೈಗೆ ಬಂದಿದ್ದ ಸಮಾಜವಾದಿ ರಾಮಮನೋಹರ ಲೋಹಿಯಾರ ಸಂಪರ್ಕಕ್ಕೆ ಸಿಲುಕಿ ಮತ್ತಷ್ಟು ಹೊಳಪು ಕಂಡು, ಸೈದ್ಧಾಂತಿಕ ದಾರಿ ಯಾವುದೆಂದು ಸ್ಪಷ್ಟಪಡಿಸಿಕೊಂಡರು. ಮಂಗಳೂರಿಗೆ ಹಿಂದಿರುಗಿ ಸ್ವಲ್ಪ ಕಾಲ ‘ನವಭಾರತ’ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದು ‘ತಾಯಿನಾಡು’, ‘ವಿಶ್ವವಾಣಿ’ಯಲ್ಲಿ ದುಡಿದು, ನಂತರ ‘ಪ್ರಜಾವಾಣಿ’ ಸೇರಿಕೊಂಡವರು. ಅಲ್ಲಿ ಒಳ್ಳೆಯ ಸಂಬಳವಿತ್ತು. ಮಕ್ಕಳನ್ನು ಓದಿಸುವ ಜವಾಬ್ದಾರಿ ಇತ್ತು. ವರದಿಗಳ ಮೂಲಕ ಖ್ಯಾತಿಯನ್ನೂ ಗಳಿಸಿದ್ದರು. ಆದರೆ ಇದೆಲ್ಲವನ್ನೂ ಬಿಟ್ಟು, ವಡ್ಡರ್ಸೆ ಹೊರಟಿದ್ದು ಬೇರೊಂದು ಸಾಹಸಕ್ಕೆ.
ಇದನ್ನೂ ಓದಿರಿ: ಸಾಮಾಜಿಕ ನ್ಯಾಯ ದಿನ | ದ್ರಾವಿಡ ಮಣ್ಣಲ್ಲಿ ‘ಸ್ವಾಭಿಮಾನ’ದ ಬೀಜ ಬಿತ್ತಿ ಫಸಲು ತೆಗೆದ ಪೆರಿಯಾರ್
‘ಪ್ರಜಾವಾಣಿ’ಯನ್ನು ತೊರೆದು, ಯುವ ಕ್ರಾಂತಿಕಾರಿ ಶೂದ್ರ ಬರೆಹಗಾರರ ನೆಚ್ಚಿಕೊಂಡು ಕರಾವಳಿಗೆ ಹೊರಟ ಶೆಟ್ಟರು ‘ಚಿಂತನೆಯ ಬೆಳೆ’ ತೆಗೆಯುವ ಕನಸು ಕಂಡರು. ಆಗ ಹುಟ್ಟಿದ್ದೇ ‘ಮುಂಗಾರು’ ಪತ್ರಿಕೆ. ಓದುಗರೇ ಷೇರುದಾರರಾಗಿದ್ದ ಅಪರೂಪದ ಪತ್ರಿಕೆ ಅದಾಗಿತ್ತು. ಹನ್ನೊಂದು ವರ್ಷ ನಡೆದ ಮುಂಗಾರು, ಆರ್ಥಿಕ ಸಂಕಷ್ಟಗಳನ್ನು ಎದುರಿಸಲಾಗದೆ ಮುಚ್ಚಿ ಹೋಗಿದ್ದು, ಕರ್ನಾಟಕ ಸಾಂಸ್ಕೃತಿಕ ಜಗತ್ತಿನ ದೊಡ್ಡ ಹಿನ್ನಡೆ. ‘ಮುಂಗಾರು’, ಪ್ರತಿಸ್ಪರ್ಧಿ ಪತ್ರಿಕೆಗಳ ಪಿತೂರಿಗಳನ್ನು ಎದುರಿಸುತ್ತಲೇ ಇತ್ತು. ಜಾಹೀರಾತುಗಳನ್ನು ಪಡೆಯಲು ಹೆಣಗಾಡಿತು. ಪತ್ರಿಕೆಯ ವಿರುದ್ಧ ಷಡ್ಯಂತ್ರಗಳು ಜರುಗುತ್ತಲೇ ಇದ್ದವು. ಕಚೇರಿಯೊಳಗೂ ಆಂತರಿಕ ಬೇಗುದಿ ಶುರುವಾಗಿದ್ದವು. ಅಂತೂ ಇಂತೂ ಎದುಸಿರು ಬಿಡುತ್ತಾ, 11 ವರ್ಷಗಳ ತ್ರಾಸದಾಯಕ ಪಯಣವನ್ನು ಮುಗಿಸಿ, ‘ಮುಂಗಾರು’ ಅಸುನೀಗಿತು.

ವಡ್ಡರ್ಸೆಯವರ ಬರೆಹಗಳನ್ನು ಸಂಪಾದಿಸಿ ‘ಬೇರೆಯೇ ಮಾತು’ ಕೃತಿಯಾಗಿ ಹೊರತಂದಿರುವ ವಡ್ಡರ್ಸೆಯವರ ಶಿಷ್ಯ ದಿನೇಶ್ ಅಮಿನ್ ಮಟ್ಟು ಅವರು ‘ಗುರು ನಮನ’ ಎಂಬ ಮುನ್ನುಡಿಯಲ್ಲಿ ಹೀಗೊಂದು ಘಟನೆಯನ್ನು ನೆನೆಯುತ್ತಾರೆ: “1984ರ ಸೆಪ್ಟೆಂಬರ್ 9ರಂದು ಮಂಗಳೂರಿನ ಪುರಭವನದಲ್ಲಿ ‘ಮುಂಗಾರು’ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ್ದ ಸಾಹಿತಿ ದೇವನೂರ ಮಹಾದೇವ ಅವರು, ‘ದಕ್ಷಿಣ ಕನ್ನಡ ಭೂತಗಳ ನಾಡು. ವಡ್ಡರ್ಸೆ ಎಂಬ ಭೂತ ಇಲ್ಲಿಗೆ ಬಂದು ಯಾವ ಮಾಯಕ ಮಾಡುತ್ತೋ ನೋಡೋಣ’ ಎಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಭೂತಗಳದ್ದು ಒಂದೊಂದು ದುರಂತ ಕತೆ. ಅವುಗಳು ‘ಮಾಯವಾದ’ ಮೇಲೆಯೇ ದೈವಗಳಾದದ್ದು. ಅಂತೆಯೇ ‘ಮುಂಗಾರು’ ಮತ್ತು ವಡ್ಡರ್ಸೆ.”
ನಮ್ಮ ಹಿರಿಯರು ಅವರ ವರ್ತಮಾನದಲ್ಲಿ ಮಾಡಿದ ಪ್ರಯೋಗಗಳು ಭವಿಷ್ಯದ ಪೀಳಿಗೆಗೆ ಸಾಹಸಗಾಥೆಯಾಗಿ ಕಾಣುತ್ತವೆ. ಆದರೆ ಯಾವುದೇ ವರ್ತಮಾನಕ್ಕೊಂದು ತುರ್ತು ಇರುತ್ತದೆ. ಆ ತುರ್ತಿನ ಕರೆಗೆ ಓಗೊಟ್ಟವರು ವಡ್ಡರ್ಸೆ. ಅವರು ಕಂಡ ಪತ್ರಿಕೋದ್ಯಮದ ಕನಸು ಎಷ್ಟರಮಟ್ಟಿಗೆ ನೆರವೇರಿದೆ ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ.
ಕರ್ನಾಟಕ ಸರ್ಕಾರ ಇಂತಹ ಧೀಮಂತ ಪತ್ರಕರ್ತನ ಹೆಸರಲ್ಲಿ ‘ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ‘ಯನ್ನು ಸ್ಥಾಪಿಸಿ, ಹಿರಿಯ ಪತ್ರಕರ್ತ ಡಿ ಉಮಾಪತಿ ಅವರಿಗೆ ಪ್ರದಾನ ಮಾಡಿದೆ. ಕೋಮುವಾದಿ, ಜಾತಿವಾದಿ ರಾಜಕಾರಣ ಉಚ್ಛ್ರಾಯ ಸ್ಥಿತಿಗೇರಿರುವ ಈ ಹೊತ್ತಿನಲ್ಲಿ, ಮಾಧ್ಯಮಗಳು ಬಿಕರಿಯಾಗುವ ಕಾಲದಲ್ಲಿ ವಡ್ಡರ್ಸೆಯವರನ್ನು ನೆನೆಯುವುದೆಂದರೆ ನಮ್ಮೊಳಗಿನ ಸಾಮಾಜಿಕ ನ್ಯಾಯ ಪ್ರಜ್ಞೆಯನ್ನು ಚೂರಾದರೂ ಜಾಗೃತಗೊಳಿಸಿದಂತೆಯೇ ಸರಿ.

ಇಂದಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಲಿತ, ದಮನಿತ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ. ಮೊದಲಿನಿಂದಲೂ ಪತ್ರಿಕೆಗಳು, ಮಾಧ್ಯಮಗಳು ಬ್ರಾಹ್ಮಣೀಯ ಮನಸ್ಥಿತಿಗಳ ಕೈಯಲ್ಲೇ ಇವೆ ಎಂಬುದು ಸತ್ಯ. ಆದರೆ ವಡ್ಡರ್ಸೆ ದನಿ ಇಲ್ಲದ ಸಮುದಾಯಗಳಿಗೆ ವೇದಿಕೆಯನ್ನು ಒದಗಿಸುತ್ತಾ ಬಂದರು. ವಡ್ಡರ್ಸೆಯವರ ಸಾಮಾಜಿಕ ನ್ಯಾಯ ಪ್ರಜ್ಞೆಯ ಗುರುತಾಗಿಯೋ ಅಥವಾ ಅವರನ್ನು ತಮಾಷೆ ಮಾಡಲೆಂದೋ ಒಂದು ಸಂಗತಿ ಅವರಿಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿತ್ತು. “ಯಾರಾದರೂ ಕರೆ ಮಾಡಿ, ದೈನೇಸಿ ದನಿಯಲ್ಲಿ, ‘ಸರ್, ನಾನು ಶತಮಾನಗಳಿಂದ ತುಳಿತಕ್ಕೊಳಗಾದವನು ಸರ್, ಕೆಲಸ ಬೇಕಿತ್ತು’ ಎಂದರೆ ಸಾಕು, ‘ಆಯ್ತು, ನಾಳೆ ಬಂದು ಕೆಲಸಕ್ಕೆ ಸೇರಿಕೋ’ ಎನ್ನುತ್ತಿದ್ದರಂತೆ.” ವಡ್ಡರ್ಸೆ ನೊಂದ ಸಮುದಾಯಗಳನ್ನು ನೋಡಿದ ಬಗೆ ಇದು.
ಬೆಂಗಳೂರು ಕೇಂದ್ರಿತವಾಗಿದ್ದ ಪತ್ರಿಕೆಗಳ ಕಾಲದಲ್ಲಿ ಕರಾವಳಿಯಿಂದ ವೈಚಾರಿಕ ಬಿತ್ತನೆ ಮಾಡಲು ಹೊರಟಿದ್ದ ವಡ್ಡರ್ಸೆಯವರ ನಿರೀಕ್ಷೆ ಹುಸಿಯಾಗಿತ್ತು. ರಾಜಕಾರಣದಲ್ಲಿ ಏಳುಬೀಳುಗಳು ಆರಂಭವಾಗಿದ್ದವು. ಕರಾವಳಿಯಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿತ್ತು. ಕೋಮುರಾಜಕಾರಣವನ್ನು ಕಟುವಾಗಿ ವಿರೋಧಿಸುತ್ತಿದ್ದ ವಡ್ಡರ್ಸೆಯವರ ಮುಂದೆ ಮಧ್ಯಮ ವರ್ಗದ ಓದುಗರಿದ್ದರು. ಅಂಥವರ ಮುಂದೆ ವಡ್ಡರ್ಸೆಯವರು ದಲಿತ, ದಮನಿತ, ಅಲ್ಪಸಂಖ್ಯಾತರ ಬವಣೆಗಳನ್ನು ಹೇಳಲು ಹೊರಟ್ಟಿದ್ದರು. ಪ್ರಚಾರಪ್ರಿಯತೆ ಬಯಸುವ ಕರಾವಳಿ ಜನತೆ, ಹೆಚ್ಚಿನ ಜಾಹೀರಾತುಗಳನ್ನು ನೀಡಿ ಪತ್ರಿಕೆಯನ್ನು ಸಾಕುತ್ತಾರೆಂಬ ಅವರ ಭ್ರಮೆ ಒಡೆದು ಹೋಯಿತು. ನಂಬಿದ ಕ್ರಾಂತಿಕಾರಿ ಶೂದ್ರ ಯುವಕರು ಕೈಕೊಟ್ಟರು. “ಇವರಿಗಿಂತ ಹೇಳಿದಂತೆ ಕೇಳುವ ಬ್ರಾಹ್ಮಣರೇ ಲೇಸು ಕಣಯ್ಯ” ಎಂದಿದ್ದರಂತೆ ವಡ್ಡರ್ಸೆ. ಆದರೆ ಅವರ ಸೈದ್ಧಾಂತಿಕ ನಿಲುವುಗಳಲ್ಲಿ, ಸಂಪಾದಕೀಯ ಬರೆಹಗಳಲ್ಲಿ ಎಂದಿಗೂ ರಾಜಿತನ ಕಾಣಲಿಲ್ಲ.
ಇದನ್ನೂ ಓದಿರಿ: ಹೆಸರಾಯಿತು ʼಕಲ್ಯಾಣ ಕರ್ನಾಟಕʼ ಹಸನಾಗದ ಜನರ ಬದುಕು
ತಾವು ಅಪಾರವಾಗಿ ಗೌರವಿಸುತ್ತಿದ್ದ ‘ಪ್ರಜಾವಾಣಿ’ಯನ್ನು ತೊರೆದು ಹೊರಬಂದಾಗ ವಡ್ಡರ್ಸೆಯವರ ವಯಸ್ಸು 55. ಆರಾಮವಾಗಿ ಇರಬಹುದಾಗಿದ್ದ ಅವರು, ಮುಂಗಾರು ಎಂಬ ಸಾಹಸಕ್ಕೆ ಕೈ ಹಾಕಿದ್ದರಲ್ಲಿ ಸಾಮಾಜಿಕ ಪರಿವರ್ತನೆಯ ತುಡಿತವಿತ್ತು. ವಡ್ಡರ್ಸೆಯವರು ಪತ್ರಿಕೋದ್ಯಮವನ್ನು ನೀಡಿದ ರೀತಿಯೇ ವಿಭಿನ್ನವಾಗಿತ್ತು. “ಎರಡು ವಾಕ್ಯಗಳನ್ನು ಸರಿಯಾಗಿ ಬರೆಯಲಾರದ ಪತ್ರಿಕಾ ಮಾಲೀಕರು ಈ ದೇಶದ ಅನೇಕ ಪತ್ರಿಕೆಗಳ ಸಂಪಾದಕರಾಗಿ ಘೋಷಿಸಿಕೊಂಡಿದ್ದಾರೆ. ಇಂತಹ ‘ಮಾಲೀಕ-ಸಂಪಾದಕರ’ ಪತ್ರಿಕೆಗಳಲ್ಲಿ ಹೆಸರಿಲ್ಲದ ಯಾವನೋ ಪತ್ರಕರ್ತ ಬರೆದುದನ್ನು ನಾವೆಲ್ಲ ತೀರ್ಥ ಪ್ರಸಾದವಾಗಿ ಅಂಗೀಕರಿಸಿಕೊಂಡು ಬಂದಿದ್ದೇವೆ. ಇಂತಹ ಪ್ರಚಾರ ಸಾಧನಗಳಾದ ಪತ್ರಿಕೆಗಳು ಮುಕ್ತ ವಿಚಾರಕ್ಕೆ ಮುಸುಕೆಳೆಯುತ್ತಲೇ ಬಂದಿವೆ. ಪತ್ರಿಕಾ ವೃತ್ತಿಯ ಗಂಧ ಗಾಳಿ ಇಲ್ಲದ ಉದ್ಯಮ ಪ್ರಭುಗಳು ತಮ್ಮ ಒಡೆತನದ ಪತ್ರಿಕೆಗಳಿಗೆ ಸಂಪಾದಕರೆಂದು ಘೋಷಿಸಿಕೊಳ್ಳುವ ಮಾನಗೇಡಿ ಸಂಪ್ರದಾಯ ಜಗತ್ತಿನ ಇನ್ನಾವ ದೇಶದಲ್ಲೂ ಇಲ್ಲ. ಇದೂ ಒಂದು ‘ವಿಶಿಷ್ಟ ಭಾರತೀಯ ಸಂಪ್ರದಾಯ’. ಸ್ವಾಭಿಮಾನಿ ಜನಸಮೂಹಕ್ಕೆ ಅಪಾಯ ಎಣಿಸಬಲ್ಲ ‘ಮಾಲೀಕ-ಸಂಪಾದಕ’ರ ಪತ್ರಿಕೆಗಳನ್ನೋದಿ ಮನಸ್ಸನ್ನು ಮುದುಡಿಸಿಕೊಂಡಿರುವ ಕೆಲವು ಓದುಗರಿಗೆ ‘ಮುಂಗಾರು’ ಸುರಿಸುತ್ತಿರುವ ಚಿಂತನೆಯ ಮಳೆ ಕಿರಿ-ಕಿರಿ ಉಂಟು ಮಾಡುವುದು ಸಹಜ. ಅವರ ಮನಸ್ಸು ಕೆರಳುವುದೂ ಸ್ವಾಭಾವಿಕ. ಕ್ರಮೇಣ ತಮಗಿದು ಹಿಡಿಸುವುದೆಂಬ ನಂಬಿಕೆ ನನಗಿದೆ. ಎಲ್ಲರಿಗೂ ಸಲ್ಲುವ ಅಥವಾ ಎಲ್ಲರಿಂದಲೂ ಸೈ ಅನ್ನಿಸಿಕೊಳ್ಳುವ, ಪತ್ರಿಕೆ ತರಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ಓದುಗರೆಲ್ಲರನ್ನೂ ಜಿಜ್ಞಾಸೆಯ ಕುಲುಮೆಗೆ ಎಳೆದು ತರಬೇಕೆಂಬ ಆಸೆ ನನಗಿತ್ತು. ಅದೀಗ ಈಡೇರುತ್ತಿದೆ” ಎಂದು ಓದುಗರಿಗೆ ಪ್ರತಿಕ್ರಿಯಿಸಿದ್ದರು ವಡ್ಡರ್ಸೆ.

ಹನ್ನೊಂದು ವರ್ಷ ತೆವಳುತ್ತಾ ಸಾಗಿದ ಮುಂಗಾರು, ತನ್ನ ಗುರಿಯನ್ನು ಮುಟ್ಟದೆ ಹೋದರೂ ಜನಪರ ಆಶಯಗಳನ್ನು ಉಳಿಸಿ ಹೋಗಿದೆ. ವಡ್ಡರ್ಸೆಯವರೊಂದಿಗೆ ಸೇರಿ ಮುಂಗಾರು ಪತ್ರಿಕೆಯನ್ನು ಕಟ್ಟಿದ ಕೈಗಳು ಅನೇಕ. ಇಂದೂಧರ ಹೊನ್ನಾಪುರ, ಎನ್.ಎಸ್.ಶಂಕರ್, ಕೆ.ಪುಟ್ಟಸ್ವಾಮಿ, ದಿವಂಗತ ಮಹಾಬಲೇಶ್ವರ ಕಾಟ್ರಹಳ್ಳಿ, ಕೆ.ರಾಮಯ್ಯ, ಮಂಗ್ಳೂರ ವಿಜಯ, ಹಸನ್ ನಯೀಂ ಸುರಕೋಡ, ಕೃಪಾಕರ (ಸೇನಾನಿ), ವಿ.ಮನೋಹರ, ಎಂ.ಬಿ.ಕೋಟಿ, ದಿವಂಗತ ಕೇಶವಪ್ರಸಾದ್, ರಾಮಮೂರ್ತಿ, ದಿವಂಗತ ಯಲಗುಡಿಗೆ ಮಂಜಯ್ಯ, ಜಿ.ಕೆ.ಮಧ್ಯಸ್ತ, ಪಂಜು ಗಂಗೊಳ್ಳಿ, ಪಿ.ಮಹಮ್ಮದ್, ಪ್ರಕಾಶ್ ಶೆಟ್ಟಿ, ಕೆ.ಮಕಾಳಿ, ದಿನೇಶ್ ಅಮಿನ್ ಮಟ್ಟು, ಎಚ್. ನಾಗವೇಣಿ, ಜೈನುಲ್ಲಾ ಬಳ್ಳಾರಿ, ಸುಧಾಕರ ಬನ್ನಂಜೆ, ಯಶವಂತ ಬೋಳೂರು, ಬಿ.ಎಂ.ಹನೀಫ್, ಮಂಜುನಾಥ್ ಚಾಂದ್ ತ್ರಾಸಿ, ಬಿ.ಬಿ. ಶೆಟ್ಟಿಗಾರ್, ದಾಮೋದರ ಶೆಟ್ಟಿಗಾರ್, ಹಿಲರಿ ಕ್ರಾಸ್ತಾ, ಅತ್ರಾಡಿ ಸಂತೋಷ್ ಹೆಗ್ಡೆ, ಬಿ.ಟಿ. ರಂಜನ್, ವಿಶ್ವ ಕುಂದಾಪುರ, ಪ್ರಕಾಶ್ ಅಟ್ಟೂರು, ಬಿ.ಗಣಪತಿ, ಮಂಜುನಾಥ್ ಭಟ್, ಚಿದಂಬರ ಬೈಕಂಪಾಡಿ, ದಿವಂಗತ ರವಿ ರಾ ಅಂಚನ್, ವಿಜು ಪೂಣಚ್ಚ, ಗಂಗಾಧರ ಹಿರೇಗುತ್ತಿ, ಟಿ.ಕೆ.ರಮೇಶ್ ಶೆಟ್ಟಿ, ಲೋಲಾಕ್ಷ, ನೆತ್ತರಕೆರೆ ಉದಯಶಂಕರ್, ಜೆ.ಎ.ಪ್ರಸನ್ನಕುಮಾರ್, ಬಿ.ಬಿ.ಶೆಟ್ಟಿಗಾರ್, ಭೀಮ ಭಟ್, ದಿವಂಗತ ಪ್ರಭಾಕರ್ ಕಿಣಿ, ರಾಜಾರಾಂ ತಲ್ಲೂರು, ನಿಕಿಲ್ ಕೊಲ್ಪೆ, ಶಿವಸುಬ್ರಹ್ಮಣ್ಯ…- ಹೀಗೆ ಹೆಸರುಗಳು ಬೆಳೆಯುತ್ತಲೇ ಹೋಗುತ್ತವೆ.
ಇದನ್ನೂ ಓದಿರಿ: ‘ಧರ್ಮಸ್ಥಳದಲ್ಲಿ ಕೊಂದವರು ಯಾರು?’; ನೊಂದವರ ಜೊತೆ ನಿಂತ ಮಹಿಳಾ ಶಕ್ತಿ
ವಡ್ಡರ್ಸೆಯವರು ಓದುಗ ಮಾಲಿಕತ್ವದ ಪತ್ರಿಕೋದ್ಯಮ ಬೆಳೆಸುವ ಸಾಹಸ ಮಾಡಿ, ಸೋತರು. ಆದರೆ ಅವರು ಮಾಡಿದ ಪ್ರಯೋಗ ಕನ್ನಡ ಪತ್ರಿಕಾ ಜಗತ್ತಿನಲ್ಲಿ ಎಂದಿಗೂ ಅಜರಾಮರ. ಅವರು ಕಂಡ ಸಾಮಾಜಿಕ ನ್ಯಾಯದ ಕನಸು ನನಸು ಮಾಡುವ, ಪತ್ರಿಕೋದ್ಯಮದ ನಿಜ ಆಶಯಗಳನ್ನು ಕಾಪಿಟ್ಟುಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಪರ್ಯಾಯ ಮಾಧ್ಯಮಗಳು ವಡ್ಡರ್ಸೆಯವರ ಆಶಯಗಳನ್ನು ಉಸಿರಾಡುತ್ತಿವೆ. ನಾಡಿನ ಪ್ರಜ್ಞಾವಂತ ಜನ ಸಮೂಹ ನಿಜ ಪತ್ರಿಕೋದ್ಯಮದ ಪರ ನಿಲ್ಲಬೇಕಿದೆ.
(ಮಾಹಿತಿ ಕೃಪೆ: ‘ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳು- ಬೇರೆಯೇ ಮಾತು’, ಸಂಪಾದನೆ- ದಿನೇಶ್ ಅಮಿನ್ ಮಟ್ಟು)

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.