ಉಪ ರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ: ಅನುಮಾನ – ವಿವಾದಗಳದೇ ಮೇಲುಗೈ!

Date:

Advertisements
ಧನಕರ್ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ರಾಜೀನಾಮೆಯೂ ಅನುಮಾನಗಳು ಮತ್ತು ವಿವಾದಗಳನ್ನು ಹುಟ್ಟುಹಾಕಿದೆ...

ಭಾರತದ 14ನೇ ಉಪ ರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಅವರು ಜುಲೈ 21ರಂದು ಸೋಮವಾರ, ಆರೋಗ್ಯ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ಆರೋಗ್ಯದ ಮೇಲೆ ಗಮನ ಹರಿಸಲು ಮತ್ತು ವೈದ್ಯಕೀಯ ಸಲಹೆಗಳನ್ನು ಪಾಲಿಸುವ ಉದ್ದೇಶದಿಂದ, ಯಾವುದೇ ಹುದ್ದೆಗಳನ್ನು ನಿರ್ವಹಿಸದೇ ಇರಲು ತೀರ್ಮಾನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಸಂವಿಧಾನದ 67(ಎ) ವಿಧಿಯ ಅಡಿಯಲ್ಲಿ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಸಂಸತ್‌ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಧನಕರ್ ಅವರು ರಾಜೀನಾಮೆ ನೀಡಿದ್ದು, ಈ ರಾಜೀನಾಮೆಯ ಹಿಂದೆ ಕೇವಲ ಆರೋಗ್ಯ ಕಾರಣಗಳಷ್ಟೇ ಅಲ್ಲದೆ, ಇತರ ಗಂಭೀರ ಕಾರಣಗಳಿರಬಹುದು ಎಂಬ ಬಲವಾದ ಅಭಿಪ್ರಾಯಗಳಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಧನಕರ್ ಅವರ ರಾಜೀನಾಮೆ ‘ಆಘಾತಕಾರಿ ಮತ್ತು ಅನಿರೀಕ್ಷಿತ’. ಬಹುಶಃ ಕೇಂದ್ರ ಸರ್ಕಾರದ ಜೊತೆಗಿನ ಕಿತ್ತಾಟ ಮತ್ತು ಒತ್ತಡದಿಂದ ಅವರು ರಾಜೀನಾಮೆ ನೀಡಿರಬಹುದು” ಎಂದು ಅನುಮಾನಿಸಿದ್ದಾರೆ. ಆದರೆ, ಧನಕರ್ ರಾಜೀನಾಮೆ ಕುರಿತು ಅವರ ಮಾತೃ-ಪಿತೃ-ಕರ್ಮ ಪಕ್ಷ ಬಿಜೆಪಿಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಜೆಪಿ ಮೌನಕ್ಕೆ ಜಾರಿಕೊಂಡಿದೆ. ಇದು, ರಾಜಕೀಯ ಅನುಮಾನಗಳಿಗೆ ಮತ್ತಷ್ಟು ಇಂಬು ನೀಡಿದೆ.

ಅಂದಹಾಗೆ, ಜಗದೀಪ್ ಧನಕರ್ ಅವರು ರಾಜಸ್ಥಾನ ಮೂಲದವರು. 1951ರಲ್ಲಿ ರಾಜಸ್ಥಾನದ ಜುಂಜುನು ಜಿಲ್ಲೆಯ ಕಿತಾನ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದವರು. ಚಿತ್ತೋರಗಢದ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಧನಕರ್, ನಂತರ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಜನತಾ ದಳ ಸೇರುವ ಮೂಲಕ ರಾಜಕೀಯ ಆರಂಭಿಸಿದ ಧನಕರ್, 1989ರ ಲೋಕಸಭಾ ಚುನಾವಣೆಯಲ್ಲಿ ಜನತಾ ದಳದಿಂದ ಜುಂಜುನು ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 1989-1991ರ ನಡುವಿನ ಅಂದಿನ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದ ‘ನ್ಯಾಷನಲ್ ಫ್ರಂಟ್‌’ ಮೈತ್ರಿ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದರು.

1989ರ ಚುನಾವಣೆಯ ಹೊರತಾಗಿ ಬೇರಾವುದೇ ಚುನಾವಣೆಯಲ್ಲಿ ಧನಕರ್ ಸ್ಪರ್ಧಿಸಲಿಲ್ಲ. ಆದಾಗ್ಯೂ, 1993ರಿಂದ 1998ರವರೆಗೆ ರಾಜಸ್ಥಾನ ವಿಧಾನಸಭೆಯ ಸದಸ್ಯರೂ ಆಗಿದ್ದರು. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಆದಾದ ನಂತರವೂ ರಾಜಕೀಯವಾಗಿ ಸಕ್ರಿಯವಾಗಿದ್ದ ಧನಕರ್, ನಾನಾ ಹುದ್ದೆಗಳನ್ನು ಗಿಟ್ಟಿಸಿಕೊಂಡು, ಅಧಿಕಾರ ಅನುಭವಿಸಿದರು.

20 ವರ್ಷಗಳ ಕಾಲ ಜನತಾ ದಳದಲ್ಲಿ ಸಕ್ರಿಯ ರಾಜಕಾರಣ ನಡೆಸಿದ ಧನಕರ್, 2008ರಲ್ಲಿ ಜಾತ್ಯತೀತತೆಗೆ ತಿಲಾಂಜಲಿ ಇಟ್ಟು, ಜನತಾ ದಳ ತೊರೆದರು. ಕೋಮುವಾದವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಸೇರಿದರು.  

ಬಿಜೆಪಿ ಸೇರಿದ ನಂತರದ 10 ವರ್ಷಗಳ ಕಾಲ ಯಾವುದೇ ಹುದ್ದೆಗಳು ಧನಕರ್ ಅವರಿಗೆ ದೊರೆಯಲಿಲ್ಲ. ಬಿಜೆಪಿಯಲ್ಲಿ ನಿರುದ್ಯೋಗಿಯಾಗಿದ್ದ ಧನಕರ್ ಅವರಿಗೆ 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಹುದ್ದೆಯನ್ನು ಮೋದಿ ಸರ್ಕಾರ ಪ್ರಧಾನಿಸಿತು. ಅವರನ್ನು ರಾಜ್ಯಪಾಲರಾಗಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಿಸಿದರು.

2022ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧನಕರ್ ಅವರು ಭಾರತ 14ನೇ ಉಪರಾಷ್ಟ್ರಪತಿಯಾದರು. ಜೊತೆಗೆ, ರಾಜ್ಯಸಭೆಯ ಸಭಾಧ್ಯಕ್ಷ ಹುದ್ದೆಯನ್ನೂ ಹೊತ್ತುಕೊಂಡರು. ಇದೀಗ, ಈ ಹುದ್ದೆಗಳನ್ನು ತೊರೆದಿದ್ದಾರೆ ತಮ್ಮ ರಾಜೀನಾಮೆಗೆ ಆರೋಗ್ಯ ಸಮಸ್ಯೆಯೇ ಕಾರಣವೆಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, 2019ರಿಂದ 2022ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಮತ್ತು 2022ರಿಂದ 2025ರವರೆಗೆ ಉಪರಾಷ್ಟ್ರಪತಿಯಾಗಿದ್ದ ಧನಕರ್, ತಮ್ಮ ನಾಲಿಗೆ ಹರಿಬಿಡುವ ಮೂಲಕ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿಕೊಂಡಿದ್ದಾರೆ. ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯೂ ಆಗಿದ್ದಾರೆ.

ಬಂಗಾಳದ ರಾಜ್ಯಪಾಲರಾಗಿದ್ದ ಸಮಯದಲ್ಲಿ, ಧನಕರ್ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಘ‍ರ್ಷಣೆಗಳು ನಡೆದಿವೆ. ರಾಜ್ಯ ಸರ್ಕಾರದ ಕೆಲವು ನಿರ್ಧಾರಗಳನ್ನು ಅವರು ನಿರಂತರವಾಗಿ ಟೀಕಿಸುತ್ತಲೇ ಇದ್ದರು. ಇದರಲ್ಲಿ ಕೇಂದ್ರ-ರಾಜ್ಯದ ನಡುವಿನ ತಿಕ್ಕಾಟವು ಪ್ರಧಾನ ಪಾತ್ರ ಹೊಂದಿತ್ತು.

ಈ ಲೇಖನ ಓದಿದ್ದೀರಾ?: ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?

ಧನಕರ್ ಅವರು ರಾಜ್ಯಪಾಲರಾಗಿಯೂ ಟ್ವಿಟರ್ ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಗಾಗ್ಗೆ ಟೀಕೆಗಳ ಸುರಿಮಳೆಗೈಯುತ್ತಿದ್ದರು. ಕಾನೂನು ಮತ್ತು ಸುವ್ಯವಸ್ಥೆ, ಭ್ರಷ್ಟಾಚಾರ, ಹಾಗೂ ಆಡಳಿತದ ವೈಫಲ್ಯಗಳ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದ್ದರು. ಇದನ್ನು ‘ರಾಜಕೀಯ ಪಕ್ಷಪಾತ’ವೆಂದು ಟಿಎಂಸಿ ಟೀಕಿಸಿತ್ತು. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಬೆಂಬಲಿಸುವ ಸಾಂವಿಧಾನಿಕ ಜವಾಬ್ದಾರಿ ಹೊಂದಿದ್ದಾರೆ. ಆದರೆ, ಅವರು ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡುವುದರಲ್ಲಿಯೇ ತೊಡಗಿದ್ದಾರೆ ಎಂದು ಆರೋಪಿಸಿತ್ತು.

ನಾಗರಿಕತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಗಳ ಸಮಯದಲ್ಲಿ, 2019ರ ಡಿಸೆಂಬರ್‌ನಲ್ಲಿ ಮಮತಾ ಬ್ಯಾನರ್ಜಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅದನ್ನು ಧನಕರ್ ‘ಅಸಾಂವಿಧಾನಿಕ’ ಎಂದು ಕರೆದಿದ್ದರು. ಅದೇ ಸಮಯದಲ್ಲಿ, ಧನಕರ್ ಮತ್ತು ಮಮತಾ ಬ್ಯಾನರ್ಜಿ ನಡುವೆ ಪತ್ರ ಸಮರಗಳು ನಡೆದವು. ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಮಮತಾ ಅವರು ಧನಕರ್‌ ಅವರ ಟ್ವೀಟ್‌ಗಳು ರಾಜ್ಯದಲ್ಲಿ ಶಾಂತಿ ಕದಡುತ್ತಿವೆ ಎಂದು ಗಂಭೀರ ಆರೋಪಿಸಿದ್ದರು.

ಧನಕರ್ ಅವರು ಬಿಜೆಪಿ ಕೈಗೊಂಬೆಯಾಗಿದ್ದಾರೆ. ಬಿಜೆಪಿ ತಾಳಕ್ಕೆ ತಕ್ಕಂತೆ ಧನಕರ್ ಕುಣಿಯುತ್ತಿದ್ದಾರೆ. ಧನಕರ್ ‘ಮೋದಿ/ಶಾ ಜೋಡಿ ಬರೆಯುತ್ತಿರುವ ಸ್ಕ್ರಿಪ್ಟ್‌ನ ಪಾತ್ರಧಾರಿ’ ಎಂದು ಟಿಎಂಸಿ ಟೀಕಿಸಿತ್ತು. 2020ರ ಡಿಸೆಂಬರ್‌ನಲ್ಲಿ, ಮಮತಾ ಬ್ಯಾನರ್ಜಿಯವರು ರಾಷ್ಟ್ರಪತಿಯವರಿಗೆ ಪತ್ರ ಬರೆದು, ಧನಕರ್‌ರನ್ನು ಬಂಗಾಳದಿಂದ ವಾಪಸ್ ಕರೆದುಕೊಳ್ಳುವಂತೆ ಮನವಿ ಮಾಡಿದ್ದರು.

2021ರ ಬಂಗಾಳ ವಿಧಾನಸಭಾ ಚುನಾವಣೆಯ ನಂತರದ ನಡೆದ ಹಿಂಸಾಚಾರದ ಸಂದರ್ಭದಲ್ಲಿ, ಧನಕರ್ ಅವರು ಕೂಚ್ ಬಿಹಾರ್‌ನ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದು ರಾಜಕೀಯ ಪ್ರೇರಿತ ಭೇಟಿಯಾಗಿದ್ದು, ಅವರ ಭೇಟಿಯನ್ನು ‘ಸಾಂವಿಧಾನಿಕ ಚೌಕಟ್ಟಿನ ಉಲ್ಲಂಘನೆ’ ಎಂದು ಟಿಎಂಸಿ ಖಂಡಿಸಿತು.

ಧನಕರ್ ಅವರು ರಾಜ್ಯದಲ್ಲಿ ‘ಕಾನೂನಿನ ಆಡಳಿತವಿಲ್ಲ, ಬದಲಾಗಿ ಆಡಳಿತಗಾರರ (ಮಮತಾ) ಕಾನೂನು ಇದೆ’ ಎಂದು ಆರೋಪಿಸಿ, ವಿವಾದ ಸೃಷ್ಟಿಸಿದ್ದರು. ವಿಶ್ವವಿದ್ಯಾಲಯಗಳ ಉಪಕುಲಪತಿ ನೆಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರಗಳನ್ನು ಧನಕರ್ ಟೀಕಿಸಿದ್ದರು. ‘ರಾಜ್ಯ ಸರ್ಕಾರವು ತಮ್ಮ ಸಮ್ಮತಿಯಿಲ್ಲದೆ 25 ಉಪಕುಲಪತಿಗಳನ್ನು ನೇಮಿಸಿದೆ. ಇದು ಸಾಂವಿಧಾನಿಕ ಅಧಿಕಾರದ ಉಲ್ಲಂಘನೆ’ ಎಂದು ಆರೋಪಿಸಿದ್ದರು. ಈ ಬೆನ್ನಲ್ಲೇ, 2022ರಲ್ಲಿ, ಮಮತಾ ಸರ್ಕಾರವು ರಾಜ್ಯಪಾಲರನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಿಂದ ಕಿತ್ತುಹಾಕಿತು, ಮುಖ್ಯಮಂತ್ರಿಯನ್ನೇ ಕುಲಪತಿಯಾಗಿ ನೇಮಿಸುವ ತಿದ್ದುಪಡಿ ಮಾಡಿತು. ಇದು ಸರ್ಕಾರ ಮತ್ತು ಧನಕರ್ ನಡುವಿನ ಕಿತ್ತಾಟಕ್ಕೆ ಕಾರಣವೂ ಆಯಿತು.

ಮಮತಾ ಸರ್ಕಾರದ ಜೊತೆಗಿನ ಕಿತ್ತಾಡುತ್ತಲೇ ನಾಲ್ಕು ವರ್ಷ ರಾಜ್ಯಪಾಲ ಹುದ್ದೆಯನ್ನು ನಿರ್ವಹಿಸಿದ ಧನಕರ್, ರಾಜ್ಯಪಾಲ ಹುದ್ದೆಯಿಂದ ನಿವೃತ್ತರಾಗಿ, 2022ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಜೊತೆಗೆ, ಭಾರತದ ಉಪ ರಾಷ್ಟ್ರಪತಿಯೂ ಆದರು. ಉಪ ರಾಷ್ಟ್ರಪತಿ ಹುದ್ದೆಯೊಂದಿಗೆ ಬರುವ ರಾಜ್ಯಸಭೆಯ ಸಭಾಪತಿ ಹುದ್ದೆಯ ಜವಾಬ್ದಾರಿಯನ್ನೂ ಹೊತ್ತರು.

ರಾಜ್ಯಸಭೆ ಸಭಾಧ್ಯಕ್ಷರಾಗಿ ವಿರೋಧ ಪಕ್ಷಗಳ ಸಂಸದರೊಂದಿಗೆ ನಿರಂತರ ತಿಕ್ಕಾಟ ನಡೆಸುತ್ತಲೇ, ವಿವಾದದ ಕೇಂದ್ರಬಿಂದುವಾದರು. ಅವರ ಕೆಲವು ನಿರ್ಧಾರಗಳು, ವಿಶೇಷವಾಗಿ ಚರ್ಚೆಗಳ ನಿರ್ವಹಣೆಯ ಬಗ್ಗೆ, ವಿರೋಧ ಪಕ್ಷಗಳು ಆಕ್ಷೇಪ-ಟೀಕೆ ವ್ಯಕ್ತಪಡಿಸಿದ್ದವು.

ಸಭಾಧ್ಯಕ್ಷ ಧನಕರ್ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಮಾತನಾಡಲು ಅವಕಾಶ ನೀಡುತ್ತಿಲ್ಲ. ವಿಪಕ್ಷಗಳ ದನಿಯನ್ನು ಹತ್ತಿಕ್ಕುತ್ತಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿಯ ರಾಜಕೀಯಕ್ಕೆ ತಕ್ಕಂತೆ ಸದನವನ್ನು ನಡೆಸುತ್ತಿದ್ದಾರೆ. ಅವರ ಕಾರ್ಯವೈಖರಿಯು ‘ಪಕ್ಷಪಾತ’ದಿಂದ ಕೂಡಿದೆ. ಅವರು ‘ಅಸಾಂವಿಧಾನಿಕ’ವಾಗಿ ವರ್ತಿಸುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದವು. 2024ರ ಡಿಸೆಂಬರ್‌ನಲ್ಲಿ ಧನಕರ್ ವಿರುದ್ಧ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದವು. ಆದರೆ, ಆ ನಿರ್ಣಯವನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಾರ್ಯವಿಧಾನದ ತೊಡಕುಗಳ ಕಾರಣ (14 ದಿನಗಳ ಪೂರ್ವ ಸೂಚನೆಯ ಕೊರತೆ ಮತ್ತು ಧನಕರ್‌ರ ಹೆಸರಿನ ತಪ್ಪು ಉಲ್ಲೇಖ) ನೀಡಿ ವಜಾಗೊಳಿಸಿದರು.

ಈ ಲೇಖನ ಓದಿದ್ದೀರಾ?: ಸಿದ್ದು-ಡಿಕೆ ಗುದ್ದಾಟವೆಷ್ಟು, ಸುದ್ದಿಯೆಷ್ಟು, ಇತಿಹಾಸದಿಂದ ಕಲಿಯಬೇಕಾದ ಪಾಠವೇನು?

ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ 2020-21ರಲ್ಲಿ ದೆಹಲಿ ಗಡಿಯಲ್ಲಿ ನಡೆದ ರೈತ ಆಂದೋಲನವನ್ನು ‘ರಾಜಕೀಯ ಪ್ರೇರಿತ’ವೆಂದು ಧನಕರ್ ಕರೆದಿದ್ದರು. ಅವರ ಹೇಳಿಕೆಯ ವಿರುದ್ಧ ರೈತರು ಮತ್ತು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಭಾರತದ ಇತಿಹಾಸವನ್ನು ಕೆಲವರು ಏಕಪಕ್ಷೀಯವಾಗಿ ತಿರುಚಿದ್ದಾರೆ ಎಂದಿದ್ದ ಧನಕರ್, ವಿವಾದ ಹುಟ್ಟುಹಾಕಿದ್ದರು.

ಇನ್ನು, ರಾಷ್ಟ್ರಪತಿಗಳ ವಿವೇಚನಾ ನಿರ್ಧಾರಕ್ಕಾಗಿ ರಾಜ್ಯಗಳಿಂದ ರಾಜ್ಯಪಾಲರು ಕಳಿಸುವ ಮಸೂದೆಗಳನ್ನು ವಿಲೇವಾರಿ ಮಾಡಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್‌ ಸಮಯ ನಿಗದಿ ಮಾಡಿತ್ತು. ಆದರೆ, ಇದನ್ನು ಖಂಡಿಸಿದ್ದ ಧನಕರ್, ‘ಪ್ರಜಾಪ್ರಭುತ್ವದಲ್ಲಿ ಸಂಸತ್ತೇ ಸರ್ವೋಚ್ಚ. ರಾಷ್ಟ್ರಪತಿಗಳಿಗೆ ಸಮಯ ನಿಗದಿ ಮಾಡಲು ನ್ಯಾಯಾಲಯಕ್ಕೆ ಅವಕಾಶವಿಲ್ಲ’ ಎಂದು ನಿರಂತರ ಹೇಳಿಕೆ ನೀಡಿದ್ದರು. ಇದು, ಸುಪ್ರೀಂ ಕೋರ್ಟ್‌ ಮತ್ತು ಧನಕರ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು. ಧನಕರ್ ಹೇಳಿಕೆ ವಿರುದ್ಧ ದೇಶಾದ್ಯಂತ ಟೀಕೆಗಳು ವ್ಯಕ್ತವಾಗಿದ್ದವು. ಆದಾಗ್ಯೂ, ಪ್ರಜಾಪ್ರಭುತ್ವದಲ್ಲಿ ‘ಸಂವಿಧಾನವೇ ಸವೋಚ್ಚ’ ಎಂದ ಸುಪ್ರೀಂ ಕೋರ್ಟ್‌, ವಿವಾದಕ್ಕೆ ತೆರೆ ಎಳೆಯಿತು. ಆದರೂ, ಧನಕರ್ ತಮ್ಮ ‘ಸಂಸತ್ತು ಸರ್ವೋಚ್ಚ’ ಎಂಬ ಹೇಳಿಕೆಯನ್ನು ಮುಂದುವರೆಸಿದ್ದರು.

ಇದೆಲ್ಲದರ ನಡುವೆ, ಧನಕರ್ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ರಾಜೀನಾಮೆಯೂ ಅನುಮಾನಗಳು ಮತ್ತು ವಿವಾದಗಳನ್ನು ಹುಟ್ಟುಹಾಕಿದೆ ಎಂಬುದು ವಿಶೇಷ.

ಧನಕರ್ ರಾಜೀನಾಮೆಯಿಂದ ಉಪ ರಾಷ್ಟ್ರಪತಿ ಸ್ಥಾನ ಖಾಲಿಯಾಗಿದ್ದು, ಭಾರತದ ಸಂವಿಧಾನದ ಪ್ರಕಾರ, ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರಿಂದ ರಚಿತವಾದ ‘ಚುನಾವಣಾ ಕಾಲೇಜು’ ಹೊಸ ಉಪ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿದೆ. ಎನ್‌ಡಿಎ ಬಹುಮತವನ್ನು ಹೊಂದಿರುವುದರಿಂದ, ಎನ್‌ಡಿಎ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆಗಳಿವೆ. ಆದರೆ, ವಿರೋಧ ಪಕ್ಷಗಳು ಈ ಅವಕಾಶವನ್ನು ಬಳಸಿಕೊಂಡು ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

Download Eedina App Android / iOS

X