ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-6 | ಕಷ್ಟ ಕಾರ್ಪಣ್ಯಗಳಲ್ಲಿ ಬೆಂದ ಜನರ ಬೇಡಿಕೆ ಬೆಂಬಲಿಸಿದ ನಿಯೋಗ: ಬಿಜೆಪಿಗೆ ಬಿಸಿ ತಟ್ಟಿದ್ದೇಕೆ?

Date:

Advertisements
ಲಡಾಖ್‌ನ ಜನರ ಬೇಡಿಕೆಗೆ ಬೆಂಬಲ ನೀಡಿ, ಕಾರ್ಪೋರೇಟ್ ದೊರೆಗಳ ವಿರುದ್ಧವಾಗಿ ನಿಯೋಗ ಹೇಳಿಕೆ ನೀಡಿದರೆ ನೇರವಾಗಿ ಬಿಜೆಪಿಗೆ ತಟ್ಟಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿದೆ. 'ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ' ಎಂಬಂತೆ ಬಿಜೆಪಿ ಪ್ರತಿಕ್ರಿಯಿಸಿದೆ.

“ಜಗತ್ತಿನ ಯಾವುದೇ ಮೂಲೆಯಲ್ಲಿ ಶೋಷಣೆಯ ವಿರುದ್ಧ ಧ್ವನಿ ಎತ್ತಿದರೆ ನೀನು ನನ್ನ ಸಂಗಾತಿ” ಎಂಬ ಕ್ರಾಂತಿಕಾರಿ ಚೆ ಗುವೆರಾ ಅವರ ಮಾತಿನಂತೆ ಲಡಾಖ್ ಜನರ ಬೇಡಿಕೆಗೆ ಬೆಂಬಲ ಸೂಚಿಸಲು ಹೊರಟ್ಟಿದ್ದು ನಮ್ಮ ನಿಯೋಗ. Understanding Ladakh ಎಂಬ ಕಾರ್ಯಕ್ರಮ ರೂಪಿಸಿಕೊಂಡು ಒಟ್ಟು ಎಂಟು ರಾಜ್ಯಗಳ 14 ಮಂದಿ ಲಡಾಖ್‌ನ ಬಗ್ಗೆ ತಿಳಿಯಲು ಮುಂದಡಿ ಇಟ್ಟೆವು. ನಾನು ಪತ್ರಕರ್ತೆಯಾಗಿ ಪ್ರತಿನಿಧಿಸಿದ್ದೆ, ಉಳಿದೆಲ್ಲರೂ ವಿವಿಧ ಜನಪರ ಸಂಘಟನೆಗಳ ಭಾಗವಾಗಿದ್ದವರು, ಹೋರಾಟಗಾರರು. ಈ ನಿಯೋಗವನ್ನು ಕಂಡು ಬಿಜೆಪಿ ಇರಿಸುಮುರಿಸುಗೊಂಡಿತು, ಆತಂಕಕ್ಕೆ ಒಳಗಾಗಿ ನಿಯೋಗದ ವಿರುದ್ಧ ಪತ್ರಿಕಾಗೋಷ್ಠಿಯನ್ನೂ ನಡೆಸಿತು.

ನಮ್ಮ ತಂಡದಲ್ಲಿ ಈ ಪೈಕಿ ಕರ್ನಾಟಕದಿಂದ ಈದಿನ ಸಂಸ್ಥೆಯ ಪ್ರತಿನಿಧಿಯಾಗಿ ನಾನು, ಎದ್ದೇಳು ಕರ್ನಾಟಕ ಸಂಘಟನೆ ಪ್ರತಿನಿಧಿ ಪೂರ್ಣಿಮಾ ಬಿಸಿನೀರ್, ಸಂವಿಧಾನ ರಕ್ಷಣಾ ಪಡೆಯ ಗಂಗಾಬಿಕಾ ಪ್ರಭಾಕರ್ ಇದ್ದೆವು. ಇದಲ್ಲದೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ(ಉತ್ತರ ಪ್ರದೇಶ), ನರ್ಮದಾ ಬಚಾವೋ ಆಂದೋಲನದ ಭಾಗವಾಗಿದ್ದ ಸದ್ಯ ಹಮ್‌ಸಫರ್ ಸಂಸ್ಥೆಯ(LGBTQ ಸಮುದಾಯದ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆ) ಭಾಗವಾಗಿರುವ ಅರುಂಧತಿ ದುರು(ಉತ್ತರ ಪ್ರದೇಶ), ಮಹಾರಾಷ್ಟ್ರ ಮೂಲದ ಸಾಮಾಜಿಕ ಕಾರ್ಯಕರ್ತೆ, ಯೂಸುಫೆ ಮೆಹಲ್ ಅಲಿ ಸೆಂಟರ್‌ನ ಸಹ ಕಾರ್ಯದರ್ಶಿ ಗುಡ್ಡಿ ಎಸ್‌ಎಲ್‌, ಮಲಯಾಳಂ ಮನೋರಮ, ಟೈಮ್ಸ್ ಆಫ್ ಇಂಡಿಯಾ, ಬಿಬಿಸಿಯಲ್ಲಿ ಅನುಭವ ಹೊಂದಿರುವ ಹಿರಿಯ ಪತ್ರಕರ್ತೆ ಮಣಿಮಾಲ(ದೆಹಲಿ), ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂಮೆಂಟ್ಸ್(ಎನ್‌ಎಪಿಎಂ) ನಾಯಕಿ ಮೀರಾ ಸಂಘಮಿತ್ರಾ(ತೆಲಂಗಾಣ), ಸಂದೀಪ್ ಪಾಂಡೆ ಅವರು ಸ್ಥಾಪಿಸಿರುವ ಆಶಾ ಫಾರ್ ಎಜುಕೇಷನ್ ಸಂಸ್ಥೆಯ ಭಾಗವಾಗಿರುವ ಮಹೇಶ್ ಪಾಂಡೆ(ಉತ್ತರ ಪ್ರದೇಶ), ಮುಟ್ಟು ಮೊದಲಾದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಯುವ ಸಾಮಾಜಿಕ ಕಾರ್ಯಕರ್ತೆ ಸುಮೀರಾ ಭಟ್(ಜಮ್ಮು), ಪಂಜಾಬ್‌ನ ಸರಬ್‌ಜೀತ್ ಸಿಂಗ್, ಸಂದೀಪ್ ಪಾಂಡೆ ಅವರೊಂದಿಗೆ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಡಾ. ಗುಂಜನ್ ಸಿಂಗ್(ಆಂಧ್ರ ಪ್ರದೇಶ), ಜಮ್ಮು ಕಾಶ್ಮೀರ ಭಾಗದ ಹಿರಿಯ ಪತ್ರಕರ್ತ ಮೀರ್ ಶಹೀದ್ ಸಲೀಮ್, ದೆಹಲಿಯ ಕುನಾಲ್ ಕೂಡಾ ಜೊತೆಗಿದ್ದರು. ಪ್ರಯಾಣದ ನಡುವೆ ಲೇಹ್‌ನಿಂದ ಸಂಶೋಧಕ, ಹವಾಮಾನ ವಿಜ್ಞಾನಿ ಸೌಮ್ಯ ದತ್ತಾ, ದೆಹಲಿ ವಿಶ್ವವಿದ್ಯಾನಿಲಯ ಪ್ರೊಫೆಸರ್ ಮಾಲತಿ ಜೊತೆಯಾದರು.

niyoga sonam
ಲೇಹ್‌ನಲ್ಲಿ ಸೋನಮ್ ಅವರೊಂದಿಗೆ ಉಪವಾಸ ಸತ್ಯಾಗ್ರಹ ಕುಳಿತ ನಮ್ಮ ನಿಯೋಗ Photo: Mahesh Pandey

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜೊತೆ ಸಭೆಯನ್ನು ನಡೆಸಲೆಂದು ಲಡಾಖ್ ಹೊರಟ್ಟಿದ್ದ ನಿಯೋಗಕ್ಕೆ ಕಾರ್ಗಿಲ್ ತಲುಪುತ್ತಿದ್ದಂತೆ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹ ಕುಳಿತಿರುವ ವಿಚಾರ ತಿಳಿದುಬಂದಿತು. ಬಳಿಕ ನಮ್ಮ ನಿಯೋಗ ಒಂದು ದಿನ ಸೋನಮ್ ಅವರೊಂದಿಗೆ ಉಪವಾಸ ಕುಳಿತು ಲಡಾಖ್ ಜನರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದೆವು. ಅಗತ್ಯ ಬಿದ್ದರೆ ಇನ್ನೂ ಹೆಚ್ಚುವರಿ ದಿನಗಳ ಕಾಲ ನಾವೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂದೀಪ್ ಪಾಂಡೆ ಘೋಷಿಸಿದರು. ಇವೆಲ್ಲವೂ ಲಡಾಖ್‌ನ ಬಿಜೆಪಿ ಸಮಿತಿಯ ಕಣ್ಣಿಗೆ ಮಾತ್ರ ಕುಟುಕುತ್ತಿತ್ತು ಎಂಬುದು ಒಂದೆರಡು ದಿನದಲ್ಲೇ ಬಹಿರಂಗವಾಯಿತು.

ಹಲವು ಕಾರಣಗಳಿಂದಾಗಿ ಲೇಹ್ ಅಪೆಕ್ಸ್ ಬಾಡಿಯ ಎಲ್ಲಾ ನಾಯಕರುಗಳೊಂದಿಗೆ ಸಭೆ ನಡೆಸಲು ಸಾಧ್ಯವಾಗದಿದ್ದರೂ ಸೋನಮ್ ಜೊತೆ ಚರ್ಚೆಯೂ ನಡೆಸಲಾಯಿತು. ನಮ್ಮ ನಿಯೋಗವು ಕಾರ್ಗಿಲ್ ಡೆಮಾಕ್ರಟಕ್ ಅಲಯನ್ಸ್‌ನ ಪ್ರಮುಖ ನಾಯಕರುಗಳೊಂದಿಗೆ ದೀರ್ಘ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಬಹುತೇಕ ಎಲ್ಲಾ ಕ್ಷೇತ್ರದ ನಾಯಕರುಗಳಿದ್ದರು. ಸ್ಥಳೀಯವಾಗಿ ವ್ಯಾಪಾರಿಗಳ ಸಂಘದ ನಾಯಕ ಮೊಹಮ್ಮದ್ ಯಾಸೀನ್, ಸುನ್ನಿ ಸಮುದಾಯದ ನಾಯಕ ಮುಬಾರಕ್ ಶಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಸಿರ್ ಮುನ್ಶಿ, ನ್ಯಾಷನಲ್ ಕಾನ್ಫರೆನ್ಸ್‌ನ(ಎನ್‌ಸಿ) ಸಂಸದ ಹನೀಫಾ ಜಾನ್, ಕೆಡಿಎ ಸಹ-ಅಧ್ಯಕ್ಷ ಮತ್ತು ಮಾಜಿ ಶಾಸಕ ಅಸ್ಗರ್ ಅಲಿ ಕರ್ಬಲೈ, ಎನ್‌ಸಿ ಮಾಜಿ ಸಚಿವ ಮತ್ತು ಕೆಡಿಎ ಸಹ-ಅಧ್ಯಕ್ಷ ಕಮರ್ ಅಲಿ ಅಖ್ನೂನ್, ನೂರ್ ಬಕ್ಷಿಯಾ ಸಮುದಾಯದ ಅನ್ಸರ್ ಹುಸೇನ್, ಎಲ್‌ಎಎಚ್‌ಡಿಸಿ ಕೌನ್ಸಿಲರ್ ಸೈಯದ್ ಅಹ್ಮದ್ ರಿಜ್ವಿ, ಎಎಪಿ ಜಿಲ್ಲಾ ಸಂಚಾಲಕ ಅಶಾನ್ ಅಲಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾದಿಕ್ ಅಲಿ, ಗುತ್ತಿಗೆದಾರರ ಸಂಘದ ಅಲಿ ಮೊಹಮ್ಮದ್, ಲಕ್ನೋದ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ವಿದ್ವಾಂಸರ ವೇದಿಕೆ ಲಿಯಾಕತ್ ಅಲಿ, ಶಿಯಾ ಉಲಮಾ ಅಸೆಂಬ್ಲಿಯ ಮೌಲಾನಾ ಫಯಾಜ್ ಬಕಿರಿ, ಕೆಡಿಎ ಸಜ್ಜದ್ ಕಾರ್ಗಿಲಿ ಭಾಗವಹಿಸಿದ್ದರು.

ಇದನ್ನು ಓದಿದ್ದೀರಾ? ಲಡಾಖ್‌ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?

ನಿಯೋಗವು ಲೇಹ್‌ನಲ್ಲಿ ಮತ್ತು ಕಾರ್ಗಿಲ್‌ನಲ್ಲಿ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿದೆ. ಲೇಹ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸಂದೀಪ್ ಪಾಂಡೆ, “ಯಾವುದೇ ಸರ್ಕಾರ ಜನರ ಬೇಡಿಕೆಯನ್ನು ಅಷ್ಟು ಸುಲಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳದು. ರೈತರ ಆಂದೋಲನವು ದೆಹಲಿಯಲ್ಲಿ ಹಲವು ತಿಂಗಳುಗಳ ಕಾಲ ನಡೆಯಿತು. ಚುನಾವಣೆ ಬಂದ ಕಾರಣದಿಂದಾಗಿ ಸರ್ಕಾರ ರೈತರ ಬೇಡಿಕೆಯನ್ನು ಒಪ್ಪಿಕೊಂಡಿತು. ಬಿಜೆಪಿ ಸರ್ಕಾರ ಜನರ ಮಾತಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಆದರೆ ಆಂದೋಲನ ತೀವ್ರವಾದಂತೆ ಸರ್ಕಾರ ತಲೆಬಾಗಲೇ ಬೇಕಾಗುತ್ತದೆ” ಎಂದು ಹೇಳಿದ್ದರು.

sandeep pandey
ಕಾರ್ಗಿಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ (ಚಿತ್ರ: ಈದಿನ ಡಾಟ್‌ ಕಾಮ್)

ಇನ್ನು ಎನ್‌ಎಪಿಎಂ ನಾಯಕಿ ಮೀರಾ ಸಂಘಮಿತ್ರಾ ಮಾತನಾಡಿ, “ರಾಷ್ಟ್ರೀಯ ಭದ್ರತೆ ಮಾತ್ರವಲ್ಲ ನೈಸರ್ಗಿಕ ಸಂಪನ್ಮೂಲಗಳ ಭದ್ರತೆಯೂ ಅತಿ ಮುಖ್ಯ. ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆಯ ಚಿಂತೆಯೂ ಇಲ್ಲ, ನೈಸರ್ಗಿಕ ಸಂಪನ್ಮೂಲಗಳ ಭದ್ರತೆಯ ಚಿಂತೆಯೂ ಇಲ್ಲ. ಜನರು ತಮ್ಮ ನೈಸರ್ಗಿಕ ಸಂಪನ್ಮೂಲದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

meera
ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂಮೆಂಟ್ಸ್(ಎನ್‌ಎಪಿಎಂ), ಲಿಂಗತ್ವ ಅಲ್ಪಸಂಖ್ಯಾತ ನಾಯಕಿ ಮೀರಾ ಸಂಘಮಿತ್ರಾ ಚಿತ್ರ: ಈದಿನ ಡಾಟ್ ಕಾಮ್

“ಇಂದಿನ ಸರ್ಕಾರ ವೈವಿದ್ಯತೆಯಲ್ಲಿ ಏಕತೆಯನ್ನು ಕಾಣುವ ಬದಲಾಗಿ ಏಕರೂಪತೆಯನ್ನು ಪ್ರಚಾರ ಮಾಡುತ್ತಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಟ್ಟು ಜನರು ಏಕರೂಪತೆಯನ್ನು ಕಾಣಲು ಹೇಗೆ ಸಾಧ್ಯ? ಈಶಾನ್ಯ ರಾಜ್ಯಗಳನ್ನು ಆರನೇ ಪರಿಚ್ಚೇದಕ್ಕೆ ಸೇರಿಸಲಾಗಿದೆ. ಅದರಂತೆ ಲಡಾಖ್ ಕೂಡಾ ವಿಭಿನ್ನ ಸಂಸ್ಕೃತಿ ಇರುವ ಪ್ರದೇಶ. ಇಲ್ಲಿಯೂ ಆರನೇ ಪರಿಚ್ಚೇದ ಅವಶ್ಯಕ” ಎಂದಿದ್ದಾರೆ ವಿಜ್ಞಾನಿ ಸೌಮ್ಯ ದತ್ತಾ.

Soumya Dutta
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಂಶೋಧಕ, ಹವಾಮಾನ ವಿಜ್ಞಾನಿ ಸೌಮ್ಯ ದತ್ತಾ ಚಿತ್ರ: ಈದಿನ ಡಾಟ್ ಕಾಮ್

“ಲಡಾಖ್‌ ಚೀನಾ ಮತ್ತು ಪಾಕಿಸ್ತಾನ ಗಡಿಭಾಗವಾದ ಕಾರಣ ಇಲ್ಲಿ ರಾಜ್ಯತ್ವ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಸಿಕ್ಕಿಂ ಇರುವುದು ಚೀನಾದ ಗಡಿ ಭಾಗದಲ್ಲಿ ಹಾಗಿದ್ದಾಗ ಸಿಕ್ಕಿಂಗೆ ಹೇಗೆ ರಾಜ್ಯತ್ವ ನೀಡಲಾಗಿದೆ? ಇಂತಹ ತರ್ಕ ಸರಿಯಲ್ಲ, ಈ ವಾದಗಳು ಸುಳ್ಳೆಂದು ಸ್ಪಷ್ಟವಾಗಿ ತಿಳಿಯುತ್ತಿದೆ. ಲಡಾಖ್‌ನಲ್ಲಿ ಜಮೀನು ಹೆಚ್ಚಾಗಿದೆ, ನೈಸರ್ಗಿಕ ಸಂಪನ್ಮೂಲ ಅಧಿಕವಾಗಿದೆ, ಇವೆಲ್ಲವನ್ನೂ ಲೂಟಿ ಮಾಡುವ ಹುನ್ನಾರ ಎದ್ದು ಕಾಣುತ್ತಿದೆ. ದೇಶ ಗಣತಂತ್ರವಾದುದ್ದು, ಕಾಂಗ್ರೆಸ್, ಬಿಜೆಪಿ, ಎಎಪಿ, ಎಸ್‌ಪಿ ಯಾವುದೇ ಪಕ್ಷದ ಸಿದ್ಧಾಂತ ದೇಶದ ಸಿದ್ಧಾಂತವಾಗದು. ಶೇಕಡ 98-99ರಷ್ಟು ಆದಿವಾಸಿ ಜನಸಂಖ್ಯೆ ಇರುವ ಪ್ರದೇಶಕ್ಕೆ ಈ ರಕ್ಷಣೆ ಸಿಗಲೇಬೇಕು, ಇದು ಸಂವಿಧಾನವೇ ನೀಡಿರುವ ಹಕ್ಕು” ಎಂದು ವಿಜ್ಞಾನಿ ಸೌಮ್ಯ ದತ್ತಾ ಹೇಳಿದ್ದಾರೆ.

ಲೇಹ್‌ನಲ್ಲಿ ನಡೆದ ಪತ್ರಿಕಾಗೋಷ್ಠಿ ಬೆನ್ನಲ್ಲೇ ಬಿಜೆಪಿಗೆ ಏನಾಯಿತೋ ತಿಳಿಯದು, ನೇರವಾಗಿ ನಿಯೋಗದ ವಿರುದ್ಧವಾಗಿ, ಸಂದೀಪ್ ಪಾಂಡೆ ವಿರುದ್ಧವಾಗಿ ಪತ್ರಿಕಾಗೋಷ್ಠಿ ನಡೆಸಿತು. “ಪ್ರಜಾಪ್ರಭುತ್ವದಲ್ಲಿ ಸಮಸ್ಯೆ ಇರುತ್ತದೆ, ಅದು ಸಾಮಾನ್ಯ” ಎಂಬ ಬಾಲಿಶ ಹೇಳಿಕೆಯನ್ನೂ ನೀಡಿತು. ಇದಕ್ಕೆ ನಿಯೋಗವೂ ಕಾರ್ಗಿಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದೆ. ಅಷ್ಟಕ್ಕೂ ಲಡಾಖ್‌ನ ಜನರ ಬೇಡಿಕೆಗೆ ಬೆಂಬಲ ನೀಡಿ, ಕಾರ್ಪೋರೇಟ್ ದೊರೆಗಳ ವಿರುದ್ಧವಾಗಿ ನಿಯೋಗ ನೀಡಿದ ಹೇಳಿಕೆ ನೇರವಾಗಿ ಬಿಜೆಪಿಗೆ ತಟ್ಟಿರುವುದು ಯಾಕೆ?. ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ’ ಎಂಬಂತೆ ಬಿಜೆಪಿ ಪ್ರತಿಕ್ರಿಯಿಸಿದೆ.

ಮಯೂರಿ ಬೋಳಾರ್
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೈರಪ್ಪ ಮತ್ತು ಕುತರ್ಕದ ಉರುಳು

ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ...

ಲೇಖಕಿಯರ ಸಂಘ | ಪದಾಧಿಕಾರಿಗಳ ರಾಜೀನಾಮೆಗೆ ಕಾರಣವೇನು? ಅಧ್ಯಕ್ಷರು ಏನಂತಾರೆ?

ಕರ್ನಾಟಕ ಲೇಖಕಿಯರ ಸಂಘದಿಂದ ಕೆಟ್ಟ ಸುದ್ದಿಯೊಂದು ಬಂದಿದೆ. ಸಂಘದ ಅಧ್ಯಕ್ಷೆ ಡಾ...

ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ

ಮೋದಿ ಅವರು ಏಷ್ಯಾ ಕಪ್ ಫೈನಲ್ ಗೆಲುವನ್ನು 'ಆಪರೇಷನ್ ಸಿಂಧೂರ್'ಗೆ ಹೋಲಿಸಿದ್ದಾರೆ....

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ...

Download Eedina App Android / iOS

X