ಮೋದಿ ಸರ್ಕಾರವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ಸೇರಿಸಿ ದೇಶವನ್ನು ಬಹುದೊಡ್ಡ ಅಪಾಯಕ್ಕೆ ಒಡ್ಡುತ್ತಿದೆ. ಇದು ಭಾರತದ ಜನತೆಗೆ ಮಾಡಿದ ಅತಿದೊಡ್ಡ ಅಪರಾಧ. ಭಾರತೀಯ ವಿದೇಶಾಂಗ ನೀತಿಯ ಪ್ರಮುಖ ಕಾರ್ಯತಂತ್ರವೆಂದರೆ ಪಾಕಿಸ್ತಾನ - ಚೀನಾ ಬೇರೆ ಬೇರೆಯಾಗಿಡುವುದು ಎಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದ್ದರು
ಪಹಲ್ಗಾಮ್ ಉಗ್ರರ ದಾಳಿ ಹಾಗೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಉಭಯ ರಾಷ್ಟ್ರಗಳು ಸೇನಾ ಸಂಘರ್ಷ ನಡೆಸಿದ್ದವು. ಸದ್ಯ ಎರಡು ರಾಷ್ಟ್ರಗಳಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಇದೇ ಸಂದರ್ಭದಲ್ಲಿ ಹಿಂದೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾಡಿದ ಭಾಷಣ ಹಾಗೂ ಇಂದಿರಾ ಗಾಂಧಿ 1971ರ ಪಾಕ್ ವಿರುದ್ಧದ ಯುದ್ಧದಲ್ಲಿ ಕೈಗೊಂಡ ದಿಟ್ಟ ನಿರ್ಧಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸೇನೆ ಮಿಲಿಟರಿ ಕಾರ್ಯಾಚರಣೆಯ ಮೂಲಕ ಪಾಕ್‌ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಪಾಕ್ ಕೂಡ ಪ್ರತಿಕ್ರಿಯೆ ನೀಡಿತ್ತು. ಎರಡೂ ದೇಶಗಳು ಅಣ್ವಸ್ತ್ರ ಹೊಂದಿರುವ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿತ್ತು. ಈ ಸಂದರ್ಭದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸಿ ಕದನ ವಿರಾಮವನ್ನು ಘೋಷಿಸಿತು. ಆದರೆ ಭಾರತ – ಪಾಕ್ ನಾಯಕರಿಗಿಂತ ಅಮೆರಿಕ ಕದನ ವಿರಾಮಕ್ಕೆ ಅಂಕಿತ ಹಾಕಿರುವುದು ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಅಮೆರಿಕ ನೇರ ಮಧ್ಯ ಪ್ರವೇಶವು ಭಾರತದ ರಾಜತಾಂತ್ರಿಕ ವೈಫಲ್ಯ ಎಂದು ಹೇಳಲಾಗುತ್ತಿದೆ.
ಇಲ್ಲಿನ ಪ್ರಧಾನಿ ಅಥವಾ ಸೇನಾ ಮುಖ್ಯಸ್ಥರು ಸಂದೇಶ ನೀಡುವ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ತಾನು ಯುದ್ಧವನ್ನು ತಡೆದು ಲಕ್ಷಾಂತರ ಅಮಾಯಕರ ಪ್ರಾಣವನ್ನು ಉಳಿಸಿದ್ದೇನೆಂದು ಬರೆದುಕೊಂಡಿದ್ದರು. ಎರಡೂ ದೇಶಗಳ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ವಿವಾದಕ್ಕೆ ಮೂರನೇಯವರ ಮಧ್ಯ ಪ್ರವೇಶ ಅಗತ್ಯವಿಲ್ಲ ಎಂಬುದು ಹಿಂದಿನ ಹಲವು ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ ಟ್ರಂಪ್ ಹೇಳಿಕೆಗಳನ್ನು ಗಮನಿಸಿದರೆ ತಾನು ಉಭಯ ದೇಶಗಳ ನಡುವೆ ನೇರವಾಗಿ ಮಧ್ಯಪ್ರವೇಶ ಮಾಡುತ್ತೇನೆ ಎಂದು ಹೇಳಿರುವುದು ಒಪ್ಪತಕ್ಕ ವಿಷಯವಲ್ಲದೆ, ಮುಂದಿನ ದಿನಗಳಲ್ಲಿ ಬೇರೆ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತದೆ ಎಂಬುದು ಇತಿಹಾಸವನ್ನು ಗಮನಿಸಿದವರಿಗೆ ಅರಿವಾಗುತ್ತದೆ. ಅಲ್ಲದೆ ಭಾರತದ ಸಾರ್ವಭೌಮತೆಗೆ ಹೇಗೆ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಕಂಟಕವಾಗುತ್ತದೆ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2022ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡಿದಾಗ ಎಚ್ಚರಿಸಿದ್ದರು. ತಮ್ಮ 44 ನಿಮಿಷದ ಭಾಷಣಗಳಲ್ಲಿ ಕೇಂದ್ರ ಸರ್ಕಾರದ ಹಲವು ದೌರ್ಬಲ್ಯಗಳನ್ನು ಪ್ರಸ್ತಾಪಿಸಿದ್ದರು.
ಎದುರಾಳಿಗಳ ಶಕ್ತಿ ಕಡಿಮೆ ಎಂದುಕೊಳ್ಳಬೇಡಿ ಎಂದಿದ್ದ ರಾಹುಲ್
2022ರಲ್ಲಿ ರಾಹುಲ್ ಸಂಸತ್ತಿನಲ್ಲಿ ಮುಕ್ಕಾಲು ಗಂಟೆ ಭಾಷಣ ಮಾಡಿ ಹೇಳಿದ್ದ ವಿಚಾರಗಳಿವು. “ನರೇಂದ್ರ ಮೋದಿ ಸರ್ಕಾರವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ಸೇರಿಸಿ ದೇಶವನ್ನು ಬಹುದೊಡ್ಡ ಅಪಾಯಕ್ಕೆ ಒಡ್ಡುತ್ತಿದೆ. ಇದು ಭಾರತದ ಜನತೆಗೆ ಮಾಡಿದ ಅತಿದೊಡ್ಡ ಅಪರಾಧ. ಚೀನಾಗೆ ಬಹಳ ಸ್ಪಷ್ಟವಾದ ದೃಷ್ಟಿಕೋನವಿದೆ. ಭಾರತೀಯ ವಿದೇಶಾಂಗ ನೀತಿಯ ಪ್ರಮುಖ ಕಾರ್ಯತಂತ್ರವೆಂದರೆ ಪಾಕಿಸ್ತಾನ ಮತ್ತು ಚೀನಾವನ್ನು ಬೇರೆ ಬೇರೆಯಾಗಿಡುವುದು. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನಾವು ತಪ್ಪುಗಳನ್ನು ಮಾಡಿದ್ದೇವೆ. ನಮ್ಮ ವಿದೇಶಾಂಗ ನೀತಿಯಲ್ಲಿ ಕೂಡ ನಾವು ದೊಡ್ಡ ಕಾರ್ಯತಂತ್ರದ ತಪ್ಪುಗಳನ್ನು ಮಾಡಿದ್ದೇವೆ. ಚೀನಿಯರು ಮತ್ತು ಪಾಕಿಸ್ತಾನಿಯರು ಯೋಜನೆ ರೂಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಖರೀದಿಸುತ್ತಿರುವ ಶಸ್ತ್ರಾಸ್ತ್ರಗಳನ್ನು ನೋಡಿ. ಅವರ ಚಟುವಟಿಕೆಗಳನ್ನು ನೋಡಿ. ಅವರು ಮಾತನಾಡುತ್ತಿರುವ ರೀತಿಯನ್ನು ನೋಡಿ. ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ನೋಡಿ. ನಾವು ದೊಡ್ಡ ತಪ್ಪು ಮಾಡಿದ್ದೇವೆ ಎಂದು ನಾನು ಸಂಸತ್ತಿನ ಸದನದಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಚೀನಾದಿಂದ ರಕ್ಷಿಸಿಕೊಳ್ಳುವಂತಹ ಸಾಮರ್ಥ್ಯವನ್ನು ನಾವು ಹೊಂದಬೇಕು. ಯಾವುದೇ ಭ್ರಮೆಗೊಳಗಾಗದೆ ನಿಮ್ಮ ಎದುರಿಗಿರುವ ಶಕ್ತಿಯನ್ನು ಕಡಿಮೆಯೆಂದು ಅಂದಾಜು ಮಾಡಬೇಡಿ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರ
ಇದೇ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೈಗೊಂಡ ದಿಟ್ಟ ನಡೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಒಳಪಡುತ್ತಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಇಂದಿರಾ ಗಾಂಧಿಯವರು ತೋರಿಸಿದ ದಿಟ್ಟ ನಾಯಕತ್ವ ಭಾರತೀಯ ರಾಜಕೀಯ ಹಾಗೂ ಸೇನಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಕಂಡು, ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರದ ಉದಯಕ್ಕೆ ಕಾರಣವಾಗಿತ್ತು. ಈ ಎಲ್ಲ ಹಿನ್ನಲೆಯಲ್ಲಿ ಇಂದಿರಾ ಗಾಂಧಿಯ ನಾಯಕತ್ವದ ಪಾತ್ರ ಬಹುಮೆಚ್ಚುಗೆಗೊಳಗಾಯಿತು.
ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಪಾಕಿಸ್ತಾನ ಸೇನೆ ಉರ್ದು ಭಾಷೆಯನ್ನು ಹೇರುವ ತನ್ನ ದಮನಕಾರಿ ನೀತಿಯಿಂದ ಲಕ್ಷಾಂತರ ಬಾಂಗ್ಲಾದೇಶದ ಪ್ರಜೆಗಳನ್ನು ಹತ್ಯೆ ಮಾಡಿತು. ಇದರಿಂದ ಸಾವಿರಾರು ನಿರಾಶ್ರಿತರು ಭಾರತಕ್ಕೆ ಹರಿದುಬಂದರು. ಇದನ್ನು ಮಾನವೀಯ ಬಿಕ್ಕಟ್ಟೆಂದು ಗಂಭೀರವಾಗಿ ಪರಿಗಣಿಸಿದ ಇಂದಿರಾ ಗಾಂಧಿಯವರು ನಿರಾಶ್ರಿತರಿಗೆ ಆಶ್ರಯ, ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಿದಷ್ಟೆ ಅಲ್ಲದೆ, ಪಾಕಿಸ್ತಾನದ ಈ ಕ್ರೌರ್ಯವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದರು. ಆದರೆ ಪಾಕಿಸ್ತಾನಕ್ಕೆ ಇದನ್ನು ಸಹಿಸಲು ಸಾಧ್ಯವಾಗದೆ ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
ನೆರೆಯ ರಾಷ್ಟ್ರಕ್ಕೆ ಪ್ರತ್ಯುತ್ತರ ನೀಡಬೇಕೆಂದು ಇಂದಿರಾ ಗಾಂಧಿಯವರು ಸೇನಾ ಮುಖ್ಯಸ್ಥರಾದ ಜನರಲ್ ಸ್ಯಾಮ್ ಮಾಣಿಕ್ ಶಾ ಅವರೊಂದಿಗೆ ಕಾರ್ಯತಂತ್ರಗಳನ್ನು ಹಣೆದು ಯುದ್ಧ ಘೋಷಿಸಿದರು. ಅವರ ದೃಢ ನಿರ್ಧಾರದಿಂದ ಭಾರತೀಯ ಸೇನೆಯು ಪೂರ್ವ ಮತ್ತು ಪಶ್ಚಿಮ ಎರಡೂ ಕದನಗಳಲ್ಲಿ ಯಶಸ್ವಿಯಾಯಿತು. ಕೇವಲ 13 ದಿನಗಳಲ್ಲಿ ಭಾರತೀಯ ಸೇನೆ ಢಾಕಾವನ್ನು ವಶಪಡಿಸಿಕೊಂಡಿತು. ಡಿಸೆಂಬರ್ 16, 1971ರಂದು ಪಾಕಿಸ್ತಾನದ 93,000 ಸೈನಿಕರು ಭಾರತೀಯ ಸೇನೆಗೆ ಶರಣಾದರು. ಬಾಂಗ್ಲಾದೇಶವು ಸ್ವತಂತ್ರ ರಾಷ್ಟ್ರವಾಯಿತು. ಇಂದಿರಾ ಗಾಂಧಿಯವರ ದಿಟ್ಟ ನಡೆಗಳಿಂದ ಭಾರತವು ದಕ್ಷಿಣ ಏಷ್ಯಾದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತು. ಬಾಂಗ್ಲಾದೇಶದ ಸ್ವಾತಂತ್ರ್ಯವು ಅವರ ಕಾರ್ಯತಂತ್ರದ ದೂರದೃಷ್ಟಿಯ ಫಲವಾಗಿತ್ತು ಮತ್ತು ಈ ಯುದ್ಧವು ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿತು. ಆಗಾಗ ನಡೆಯುವ ಮಿಲಿಟರಿ ಸಂಘರ್ಷವಲ್ಲದೆ ಭಾರತ ಪಾಕ್ ನಡುವೆ ಇಲ್ಲಿಯವರೆಗೂ ನಾಲ್ಕು ಯುದ್ಧಗಳು ಜರುಗಿವೆ.
1947ರಲ್ಲಿ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲು ಮೊದಲ ಬಾರಿಗೆ ಎರಡು ದೇಶಗಳ ನಡುವೆ ಯುದ್ಧ ನಡೆಯಿತು. ಈ ಕದನದಲ್ಲಿ ಭಾರತವು ಮೂರನೇ ಎರಡರಷ್ಟು ಕಾಶ್ಮೀರವನ್ನು ತನ್ನ ವಶದಲ್ಲಿಟ್ಟುಕೊಂಡರೆ ಉಳಿದ ಭಾಗ ಪಾಕಿಸ್ತಾನ ಆಕ್ರಮಿತ ಪ್ರದೇಶವಾಗಿ ಉಳಿಯಿತು. 1965ರಲ್ಲಿ ಪಾಕ್ ”ಆಪರೇಷನ್ ಜಿಬ್ರಾಲ್ಟರ್” ಎಂಬ ಹೆಸರಿನಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯತ್ನಿಸಿತ್ತು. ಕೊನೆಗೆ ತಾಷ್ಕೆಂಟ್ ಒಪ್ಪಂದದ ಮೂಲಕ ಯುದ್ಧ ಕೊನೆಗೊಂಡಿತು. 1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ಹಾಗೂ 1999ರಲ್ಲಿ ಕಾಶ್ಮೀರದ ಕಾರ್ಗಿಲ್ ವಶಪಡಿಸಿಕೊಳ್ಳುವ ಸಲುವಾಗಿ ಯುದ್ಧ ನಡೆದಿದೆ. ಇಷ್ಟು ಯುದ್ಧಗಳಲ್ಲಿ ಅಮೆರಿಕ ಒಳಗೊಂಡು ಬೇರೆ ಯಾವ ರಾಷ್ಟ್ರವು ಹಸ್ತಕ್ಷೇಪ ನಡೆಸಿರಲಿಲ್ಲ. ಆದರೆ ಈಗ ಅಮೆರಿಕ ತಾನು ಮಧ್ಯಸ್ಥಿಕೆ ವಹಿಸುವುದಾಗಿ ಹೇಳುತ್ತಿದೆ. ಉಭಯ ದೇಶಗಳ ವಿಚಾರದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಗೆ ಅವಕಾಶ ಇಲ್ಲ ಎಂದು ಹಿಂದಿನ ಪ್ರಧಾನಿಗಳು ಹೇಳಿದ್ದಾರೆ. ಶಿಮ್ಲಾ ಒಪ್ಪಂದ ಕೂಡ ಇದನ್ನೆ ತಿಳಿಸುತ್ತದೆ. ಪ್ರಸ್ತುತ ಕದನ ವಿರಾಮದಲ್ಲಿ ಅಮೆರಿಕ ಮೂಗು ತೂರಿಸಿರುವ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನ ಅಧಿವೇಶನ ಕರೆದು ರಾಷ್ಟ್ರದ ಜನಕ್ಕೆ ಬಹಿರಂಗವಾಗಿ ಉತ್ತರಿಸಬೇಕಿದೆ. ಇಲ್ಲದಿದ್ದರೆ ಅನುಮಾನಗಳು ಸುಳಿದಾಡುತ್ತಲೆ ಇರುತ್ತದೆ.
“You have brought China and Pakistan together.”
— Amock (@Politicx2029) May 10, 2025
— Rahul Gandhi warned us 3 years ago.
He told us China would backstab India.
He was mocked.
He was trolled.
But today, this man is proving right — again🇮🇳#ceasefire pic.twitter.com/YwLz2s61en