ಭಾರತದಲ್ಲಿ ಮುಸ್ಲಿಂ ದ್ವೇಷ ಹರಡಲು AI ಚಿತ್ರ- ವಿಡಿಯೋಗಳ ವ್ಯಾಪಕ ಬಳಕೆ: ಅಧ್ಯಯನ ವರದಿ

Date:

Advertisements

ಭಾರತದ ಆನ್‌ಲೈನ್ ಇಕೋಸಿಸ್ಟಮ್‌ನ ಒಂದು ಮುಖ್ಯವಾದ ಅಂಶವೆಂದರೆ, ಮುಸ್ಲಿಮರು, ಕ್ರೈಸ್ತರು, ದಲಿತರು ಮತ್ತು ಪರಂಪರಾಗತವಾಗಿ ಅಂಚಿನಲ್ಲಿಡಲಾದ ಸಮುದಾಯಗಳನ್ನು, ಜೊತೆಗೆ ಪತ್ರಕರ್ತರು, ಶಿಕ್ಷಣತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಲಾಗುತ್ತಿದೆ!

ಭಾರತದಲ್ಲಿ ʼಮುಸ್ಲಿಮರ ಮೇಲೆ ದ್ವೇಷ ಹರಡಲುʼ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂಬ ಆಘಾತಕಾರಿ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ. ವಾಷಿಂಗ್‌ಟನ್‌ ಮೂಲದ -ಸಂಘಟಿತ ದ್ವೇಷ ಅಧ್ಯಯನ ಕೇಂದ್ರ (The Center for the Study of Organized Hate)ನಡೆಸಿದ ಅಧ್ಯಯನದಲ್ಲಿ ಭಾರತದಲ್ಲಿ ವಿಕೋಪಕ್ಕೆ ಹೋಗುತ್ತಿರುವ ಮುಸ್ಲಿಂ ದ್ವೇಷ, ಅದಕ್ಕೆ ಪೂರಕವಾಗಿ ಎಐ ತಂತ್ರಜ್ಞಾನ ಬಳಸಿ ತಯಾರಿಸಿದ ಇಮೇಜ್‌, ವಿಡಿಯೋಗಳನ್ನು ಬಳಸಲಾಗುತ್ತಿದೆ. ಆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮೋಫೋಬಿಯಾವನ್ನು ವ್ಯಾಪಕವಾಗಿ, ವೇಗವಾಗಿ ಹರಡಲಾಗುತ್ತಿದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ ಎಂದು ವರದಿ ಹೇಳಿದೆ.

ಮಿಡ್‌ ಜರ್ನಿ, ಸ್ಟೇಬಲ್‌ ಡಿಫ್ಯೂಷನ್‌ ಮತ್ತು ಡಲ್‌ ಇ (Midjourney Ai, Stable Diffusion AI Images, DALL·E) ನಂತಹ ಎಐ ಉಪಕರಣಗಳನ್ನು ಭಾರತದ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ತಪ್ಪು ಮಾಹಿತಿಗಳನ್ನು ಹಂಚುವ ಸಿಂಥೆಟಿಕ್‌ ಚಿತ್ರಗಳನ್ನು ಸೃಷ್ಟಿಸಲು ಬಳಸಲಾಗುತ್ತಿದೆ. ಮುಸ್ಲಿಮರನ್ನು ಅಮಾನವೀಯಗೊಳಿಸುವ, ಲೈಂಗಿಕವಾಗಿ ಚಿತ್ರಿಸುವ, ಅಪರಾಧೀಕರಣಗೊಳಿಸುವ, ಹಿಂಸೆಗೆ ಪ್ರಚೋದಿಸುವ ಎಐ ಜನರೇಟೆಡ್‌ ಚಿತ್ರಗಳನ್ನು ಪರಿಶೀಲಿಸಲಾಗಿದೆ. ಮೇ 2023ರಿಂದ ಮೇ 2025ರವರೆಗಿನ ಟ್ವಿಟರ್‌, ಈಗಿನ ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ನಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ 297 ಖಾತೆಗಳಲ್ಲಿ 1,326 ಎಐ ಜನರೇಟೆಡ್‌ ಚಿತ್ರಗಳು ಮತ್ತು ವಿಡಿಯೋಗಳನ್ನು ಗುರುತಿಸಲಾಗಿದೆ. 2024ರ ನಂತರ ದ್ವೇಷ ಹರಡಲು ಎಐ ಜನರೇಟೆಡ್‌ ವಿಷಯಗಳ ಬಳಕೆ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಸ್ಯಾಂಪಲ್‌ಗಾಗಿ 297 ಸಾರ್ವಜನಿಕ ಖಾತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇವು ಭಾರತದ ಇಂಟರ್ನೆಟ್‌ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧ್ವನಿಗಳನ್ನು ಪ್ರತಿನಿಧಿಸುತ್ತವೆ. ನಿರಂತರವಾಗಿ ದ್ವೇಷಪೂರಿತ ವಿಷಯಗಳ ಪೋಸ್ಟ್‌ ಹಾಕುವುದು, ಅಂತಹ ಖಾತೆಗಳಿಗೆ ಫಾಲೋವರ್‌ಗಳ ಸಂಖ್ಯೆ ಗಮನಾರ್ಹ ಹೆಚ್ಚಳವಾಗುವುದನ್ನು ಸಂಘಟಿತ ದ್ವೇಷ ಅಧ್ಯಯನ ಕೇಂದ್ರ ವರದಿ ಗಮನಿಸಿದೆ.

ಮುಸ್ಲಿಂ ದ್ವೇಷ ಸಂದೇಶ

ಭಾರತದಲ್ಲಿ ಮುಸ್ಲಿಂ ವಿರೋಧಿ ದ್ವೇಷ

ಎಐ ಜನರೇಟೆಡ್ ಚಿತ್ರಗಳ ದುರ್ಬಳಕೆಗೆ ಸಂಬಂಧಿಸಿದ ಜಾಗತಿಕ ಟ್ರೆಂಡ್‌ಗಳು ಆತಂಕಕಾರಿಯಾಗಿವೆ. ಕಳೆದ ಒಂದು ದಶಕದಲ್ಲಿ, ಭಾರತದಲ್ಲಿ ಮುಸ್ಲಿಂ ವಿರೋಧಿ ಭಾವನೆಯು ಬಲಗೊಂಡಿದೆ ಮತ್ತು ಇದು ಮುಖ್ಯವಾಹಿನಿಯ ರಾಜಕೀಯ ಚರ್ಚೆ, ಮಾಧ್ಯಮ ಕಥಾನಕಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಹೆಚ್ಚಾಗಿ ಕಾಣುತ್ತಿದೆ. ಮುಸ್ಲಿಂ ವಿರೋಧಿ ಭಾವನೆಗಳು ಧಾರ್ಮಿಕ ಹಿಂಸೆ, ಗುಂಪು ಹತ್ಯೆ, ದ್ವೇಷ ಭಾಷಣಗಳು, ಮುಸ್ಲಿಮರ ಬಲವಂತದ ಒಕ್ಕಲೆಬ್ಬಿಸುವಿಕೆ, ಮುಸ್ಲಿಮರ ಆಸ್ತಿಗಳು ಮತ್ತು ಪ್ರಾರ್ಥನಾ ಸ್ಥಳಗಳ ಧ್ವಂಸ, ಆರ್ಥಿಕ ಬಹಿಷ್ಕಾರ ಮತ್ತು ಮುಸ್ಲಿಮರನ್ನು ಅನ್ಯರನ್ನಾಗಿ ಕಾಣುವುದು, ದೇಶದ ಭದ್ರತೆಗೆ ಮುಸ್ಲಿಮರು ಮಾರಕ, ಮುಸ್ಲಿಂ ಜನಸಂಖ್ಯೆ ಅಪಾಯಕಾರಿಯಾಗಿ ಹೆಚ್ಚುತ್ತಿದೆ ಎಂದು ಸುಳ್ಳುಗಳ ಬಿಂಬಿಸುವುದು ಮುಂತಾದ ರೂಪಗಳಲ್ಲಿ ವ್ಯಕ್ತವಾಗಿವೆ.

ಭಾರತವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಸಕ್ರಿಯ ಡಿಜಿಟಲ್ ಪರಿಸರ ವ್ಯವಸ್ಥೆ(ಇಕೋ ಸಿಸ್ಟಂ)ಗಳಲ್ಲಿ ಒಂದು. ಈ ವಿಶಾಲ ಡಿಜಿಟಲ್ ಮೂಲಸೌಕರ್ಯವು ವಿಷಯವನ್ನು ವೇಗವಾಗಿ ತಲುಪಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಲು, ಹಂಚಿಕೊಳ್ಳಲು, ಬಹು ವೇದಿಕೆಗಳಲ್ಲಿ ಮತ್ತು ಬಹು ಭಾಷೆಗಳಲ್ಲಿ ಗ್ರಹಿಸಲು ಅನುವು ಮಾಡಿಕೊಡುತ್ತದೆ.

ಭಾರತದ ಆನ್‌ಲೈನ್ ಇಕೋಸಿಸ್ಟಮ್‌ನ ಒಂದು ಮುಖ್ಯವಾದ ಅಂಶವೆಂದರೆ, ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಪರಂಪರಾಗತವಾಗಿ ಅಂಚಿಗೆ ನೂಕಲಾಗಿರುವ ಸಮುದಾಯಗಳನ್ನು, ಜೊತೆಗೆ ಪತ್ರಕರ್ತರು, ಶಿಕ್ಷಣತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಲಾಗುತ್ತಿದೆ.

ಈ ಎಲ್ಲ ಅಂಶಗಳನ್ನು ಗಮನಿಸಿದರೆ, AI-ಜನರೇಟೆಡ್ ದ್ವೇಷ ವಿಷಯ ಮತ್ತು ತಿರುಚಿದ ಮಾಹಿತಿಯು ದೇಶದಲ್ಲಿ ಭದ್ರ ನೆಲೆಯನ್ನು ಕಂಡುಕೊಂಡಿದೆ. ಭಾರತದ ಸುಮಾರು 20 ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ನಿಯಮಿತವಾಗಿ ಗುರಿಯಾಗಿಸುತ್ತಿದೆ ಎಂದು ವರದಿ ಹೇಳಿದೆ.

fuger 1

ನಾಲ್ಕು ವಿಭಾಗಗಳಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಮುಸ್ಲಿಂ ಮಹಿಳೆಯರ ಲೈಂಗಿಕೀಕರಣ, ಬಹಿಷ್ಕಾರ ಮತ್ತು ಅಮಾನವೀಯ ಭಾಷಣ, ಷಡ್ಯಂತ್ರದ ಕಥಾನಕಗಳು, ಹಿಂಸೆಯ ವೈಭವೀಕರಣ. ಇಂತಹ ಕಂಟೆಂಟ್‌ ಇರುವ ಪೋಸ್ಟ್‌ಗಳು ಹಿಂದೂ ಬಲಪಂಥೀಯ ಮಾಧ್ಯಮ ಸಂಸ್ಥೆಗಳು ಮತ್ತು ಜಾಲತಾಣಗಳು ವಿವಿಧ ವೇದಿಕೆಗಳಲ್ಲಿ ಹೇಗೆ ಹೆಚ್ಚು ಹೆಚ್ಚು ಪಸರಿಸಿವೆ ಎಂಬುದನ್ನು ವರದಿ ಗಮನಿಸಿದೆ.

ಎರಡು ವರ್ಷಗಳ ಅವಧಿಯಲ್ಲಿ ನಿರ್ದಿಷ್ಟ ಗುಂಪಿನ ಖಾತೆಗಳಿಂದ ಪೋಸ್ಟ್‌ ಆಗುವ ವಿಷಯ ಯಾವ ಉದ್ದೇಶ ಹೊಂದಿದೆ ಎಂದು ಅಧ್ಯಯನ ತಂಡ ಪರಾಮರ್ಶೆ ನಡೆಸಿದೆ. ಕಡಿಮೆ ಸಂಖ್ಯೆಯ ಖಾತೆಗಳು ಸೀಮಿತ ಸಮಯದಲ್ಲಿ ಗಮನಾರ್ಹ ಪ್ರಮಾಣದ ದ್ವೇಷಪೂರಿತ ಕಂಟೆಂಟ್‌ಗಳನ್ನು ತಯಾರಿಸಿವೆ. ಈ ಕೆಟ್ಟ ಕೃತ್ಯವನ್ನು ಮರೆಮಾಚಲು ನಾನಾ ತಂತ್ರಗಳನ್ನು ಬಳಸಲಾಗಿದೆ. ಪರಿಣಾಮವಾಗಿ ಭಾರತೀಯ ಸಂದರ್ಭದಲ್ಲಿ ಚಾಟ್‌ಜಿಪಿಟಿಯ ವ್ಯಾಪಕ ಅಳವಡಿಕೆಯು ಭಾರತದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಯ, ಮಾನಸಿಕ ಆಘಾತ, ದೈಹಿಕ ಹಿಂಸೆಗೆ ದಾರಿ ಮಾಡಿಕೊಡಬಹುದು ಎಂದಿದೆ.

ದ್ವೇಷಪೂರಿತ ಜನರೇಟೆಡ್‌ ಎಐ ವಿಷಯದ ದೊಡ್ಡ ಪ್ರಮಾಣದ ಪ್ರಸಾರವು ಸಮುದಾಯಗಳ ನಡುವಿನ ಸಾಮಾಜಿಕ ಸಂಬಂಧಗಳಿಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ. ಸಾಂವಿಧಾನಿಕ ಜಾತ್ಯತೀತತೆಯ ತತ್ವಗಳನ್ನು ದುರ್ಬಲಗೊಳಿಸುತ್ತದೆ. ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳು, ಪ್ರಜಾಪ್ರಭುತ್ವದ ಚೈತನ್ಯವನ್ನು ಉಡುಗಿಸುತ್ತವೆ. ದ್ವೇಷಪೂರಿತ ಎಐ ಜನರೇಟೆಡ್‌ ವಿಷಯದ ವ್ಯಾಪಕತೆಯು ಈಗಾಗಲೇ ತಪ್ಪು ಮಾಹಿತಿ, ಅಲ್ಪಸಂಖ್ಯಾತ ವಿರೋಧ ಮತ್ತು ವಿಶ್ವಾಸಾರ್ಹತೆಯ ಗಂಭೀರ ಕೊರತೆಯಿಂದ ಕೂಡಿರುವ ಭಾರತದ ಮಾಧ್ಯಮ ಕ್ಷೇತ್ರವನ್ನು ಮತ್ತಷ್ಟು ಗುಲಾಮಗಿರಿಗೆ ತಳ್ಳುವ ಭೀತಿಯಿದೆ ಎಂದು ವರದಿ ಹೇಳಿದೆ.

ಮುಸ್ಲಿಂ ದ್ವೇಷ ತಾಯಿ ಮಕ್ಕಳ ಸಂಬಂಧ

ಎಐ-ಚಾಲಿತ ಇಸ್ಲಾಮೋಫೋಬಿಕ್ ನ ಉದಾಹರಣೆಗಳು

ಮುಸ್ಲಿಮರನ್ನು ಹಿಂದೂ-ಬಹುಸಂಖ್ಯಾತ ಭಾರತದ ಅಸ್ತಿತ್ವಕ್ಕೆ ಅಪಾಯಕಾರಿ ಎಂದು ಚಿತ್ರಿಸುವ ಕಾಲ್ಪನಿಕ ಕಥಾವಸ್ತುಗಳನ್ನು ರಚಿಸಲು ಎಐ-ಉತ್ಪಾದಿತ ಚಿತ್ರಗಳನ್ನು ಬಳಸಲಾಗುತ್ತಿದೆ. ಮುಸ್ಲಿಮರು ಹಿಂದೂ ದೇವಾಲಯಗಳಿಗೆ ನುಗ್ಗುವ ಕಾಲ್ಪನಿಕ ದೃಶ್ಯಗಳನ್ನು ಪ್ರಕಟಿಸಲಾಗುತ್ತಿದೆ. ಉದಾಹರಣೆಗೆ, 2025 ಸೆಪ್ಟೆಂಬರ್‌ನಲ್ಲಿ, ಬಿಜೆಪಿಯ ಅಸ್ಸಾಂ ಘಟಕವು ಮುಸ್ಲಿಮರನ್ನು “ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು” ಎಂದು ಚಿತ್ರಿಸುವ ಎಐ-ಜನರೇಟೆಡ್‌ ವಿಡಿಯೋವನ್ನು ಹಂಚಿಕೊಂಡಿತ್ತು. ಅವರು ಜಮೀನು ಮತ್ತು ಇತರೆ ಆಸ್ತಿಪಾಸ್ತಿಯನ್ನು ಸ್ಥಳೀಯರಿಂದ ಕಸಿದುಕೊಳ್ಳುತ್ತಾರೆ ಎಂಬಂತೆ ಚಿತ್ರಿಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಶೇರ್‌ಗಳನ್ನು ಪಡೆದ ಈ ವಿಡಿಯೋ ಕ್ಲಿಪ್, ನೈಜವೆಂಬಂತೆ ಕಾಣುವ ಅಸಾಧ್ಯ ಸನ್ನಿವೇಶಗಳನ್ನು ಸೃಷ್ಟಿಸಿತು. ಈ ಸಂಯೋಜನೆಗೆ ಸಿಂಥೆಟಿಕ್ ದೃಶ್ಯಗಳನ್ನು ಬಳಸಿತು. ಉದಾಹರಣೆಗೆ ಹಿಜಾಬ್ ಧರಿಸಿದ ಮಹಿಳೆಯರ ಗುಂಪು ಗ್ರಾಮಗಳನ್ನು ಆಕ್ರಮಿಸುವಂತೆ ತೋರಿಸಲಾಯಿತು.

ಜನಸಂಖ್ಯೆಯ ಬಗ್ಗೆ ಕಟ್ಟುಕಥೆಗಳ ಸೃಷ್ಟಿ: ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಕುಟುಂಬಗಳ ಚಿತ್ರಗಳನ್ನು ಸೃಷ್ಟಿಸಿ “ಜನಸಂಖ್ಯೆ ಜಿಹಾದ್” ಎಂಬ ಕಟ್ಟುಕಥೆಯನ್ನು ಹರಡುವುದು. ಜೂನ್ 2025 ರಲ್ಲಿ X (ಹಿಂದಿನ ಟ್ವಿಟರ್) ನಲ್ಲಿ ವೈರಲ್ ಆದ ಪೋಸ್ಟ್ ಒಂದು, ಏಳು ಮಕ್ಕಳೊಂದಿಗೆ ಮುಸ್ಲಿಂ ಮಹಿಳೆಯ ಎಐ-ಸಿಂಥೆಸೈಜ್ಡ್ ಫೋಟೋವನ್ನು NDTV ಇಂಡಿಯಾ ಶೇರ್ ಮಾಡಿತ್ತು. ಇದು ಜನಸಂಖ್ಯೆ ಹೆಚ್ಚಳದ ವಾಸ್ತವಾಂಶವನ್ನು ತಪ್ಪಾಗಿ ಚಿತ್ರಿಸುತ್ತದೆ ಮತ್ತು ಭೇದಭಾವಕ್ಕೆ ಎಡೆ ಮಾಡುತ್ತದೆ. ಈ ರೀತಿಯ ದೃಶ್ಯಗಳನ್ನು ವಾಟ್ಸ್ಯಾಪ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತದೆ. ಈ ಎರಡೂ ವೇದಿಕೆಗಳಲ್ಲಿ ಕಾಣಬರುವ ಪೋಸ್ಟ್ ಗಳಲ್ಲಿ ಸತ್ಯಾಂಶ ಇದೆಯೇ ಇಲ್ಲವೇ ಎಂದು ಫ್ಯಾಕ್ಟ್-ಚೆಕ್ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು ಕಡಿಮೆ.

muslim women

ಲೈಂಗಿಕತೆ ಮತ್ತು ಅಮಾನವೀಯ ಚಿತ್ರಣಗಳು: ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಅಥವಾ ವ್ಯಂಗ್ಯಾತ್ಮಕ ಚಿತ್ರಗಳನ್ನು ರಚಿಸುವುದು. ಉದಾಹರಣೆಗೆ ಬುರ್ಕಾ ಧರಿಸಿದ ಮಹಿಳೆ ಹಿಂದೂ ಪುರುಷನೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವಂತೆ ಸೂಪರ್‌ಇಂಪೋಸ್ ಮಾಡಿದ ಫೋಟೋಗಳು ಅಥವಾ “ಲವ್ ಜಿಹಾದ್” ಎಂಬ ಕಲ್ಪಿತ ಆರೋಪದೊಂದಿಗೆ, ಹಿಂದೂ ಮಹಿಳೆಯರನ್ನು ಮತಾಂತರಕ್ಕೆ ಆಕರ್ಷಿಸುವ ಮುಸ್ಲಿಂ ಪುರುಷರನ್ನು ಬಿಂಬಿಸುವ ಹುಸಿ ಚಿತ್ರಗಳನ್ನು ರಚಿಸಿ ಹಂಚುವುದು.

ಇವು ಕೇವಲ ಕೆಲವೇ ಉದಾಹರಣೆಗಳು. ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್ (CSOH) ನ ಸೆಪ್ಟೆಂಬರ್ 2025ರ ಅಧ್ಯಯನವು, 2024ರ ಆರಂಭದಿಂದ ಭಾರತದಲ್ಲಿ 500ಕ್ಕೂ ಹೆಚ್ಚು ಎಐ-ಉತ್ಪಾದಿತ ಇಸ್ಲಾಮ್-ವಿರೋಧಿ ವಿಷಯದ ಉದಾಹರಣೆಗಳನ್ನು ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಶೇ 300ರಷ್ಟು ಏರಿಕೆಯಾಗಿದೆ. ಯಾಂತ್ರಿಕ  ಬುದ್ಧಿಮತ್ತೆಯಿಂದ ಸೃಷ್ಟಿಸಿದ ಚಿತ್ರಗಳ ಬಳಕೆಯು ದ್ವೇಷದ ಕಥನಗಳನ್ನು ಪ್ರಸ್ತುತಪಡಿಸಲು ಹಿಂದುತ್ವ ರಾಷ್ಟ್ರವಾದಿಗಳಿಗೆ ಅವಕಾಶ ನೀಡುತ್ತದೆ, ಅಲ್ಲಿ ಸತ್ಯಾಂಶ ಪರಿಶೀಲನೆ ಮಾಡುವ ಸಾಧ್ಯತೆಯೇ ಇಲ್ಲ.

‘ಲವ್ ಜಿಹಾದ್’, ‘ಪಾಪ್ಯುಲೇಷನ್ ಜಿಹಾದ್’, ಮತ್ತು ‘ರೈಲ್ ಜಿಹಾದ್’ ರೀತಿಯ ಷಡ್ಯಂತ್ರ ಸಿದ್ಧಾಂತಗಳನ್ನು AI-ಜನರೇಟೆಡ್ ಚಿತ್ರಗಳ ಮೂಲಕ ವ್ಯಾಪಕವಾಗಿ ಜನರ ಮನಸ್ಸಿಗೆ ತುಂಬಲಾಗಿದೆ. ಮುಸ್ಲಿಮರಿಂದ ಹಿಂದೂ ಸಮಾಜಕ್ಕೆ ಮತ್ತು ರಾಷ್ಟ್ರೀಯ ಭದ್ರತೆಗೆ ನಿರಂತರ ಅಪಾಯವಿದೆ ಎಂಬ ರೀತಿಯಲ್ಲಿ ಸುಳ್ಳು ಸುಳ್ಳೇ ಚಿತ್ರಿಸಲಾಗಿದೆ.

AI-ಜನರೇಟೆಡ್ ಚಿತ್ರಗಳು ಮುಸ್ಲಿಮರನ್ನು ಗುಂಡನೆಯ ಟೋಪಿ ಧರಿಸಿದ ಹಾವುಗಳಾಗಿ ಚಿತ್ರಿಸಿದವು. ಇದು ಅವರನ್ನು ವಂಚಕರು, ಅಪಾಯಕಾರಿಗಳು, ದೇಶದಿಂದ ಹೊರ ದಬ್ಬಲು ಯೋಗ್ಯವೆಂದು ಚಿತ್ರಿಸಿ ಅವಮಾನಿಸುವ ರೂಪಕಗಳಾಗಿವೆ.

looting

ಓಪ್‌ ಇಂಡಿಯಾ, ಸುದರ್ಶನ್ ನ್ಯೂಸ್ ಮತ್ತು ಪಾಂಚಜನ್ಯದಂತಹ ಹಿಂದುತ್ವ ರಾಷ್ಟ್ರವಾದಿ ಮಾಧ್ಯಮ ಸಂಸ್ಥೆಗಳು ದ್ವೇಷವನ್ನು ಹುಟ್ಟುಹಾಕುವಲ್ಲಿ ಮತ್ತು ಅದನ್ನು ತೀವ್ರಗೊಳಿಸಿ ಹೆಚ್ಚಿಸುವಲ್ಲಿ ಭಾರೀ ಪಾತ್ರ ವಹಿಸಿವೆ. ಇಂತಹ AI-ಜನರೇಟೆಡ್ ಇಸ್ಲಾಮೋಫೋಬಿಯಾವನ್ನು ಮುಖ್ಯವಾಹಿನಿಯ ಚರ್ಚೆಗಳಲ್ಲಿ ಬಳಸಲಾಗಿದೆ.

X, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಾದ್ಯಂತ 187 ಪೋಸ್ಟ್‌ಗಳನ್ನು ಕಮ್ಯುನಿಟಿ ಸ್ಟ್ಯಾಂಡರ್ಡ್‌ ಉಲ್ಲಂಘಿಸಿದವು ಎಂದು ವರದಿ ಮಾಡಲಾಯಿತು. ಇವುಗಳಲ್ಲಿ Xನಲ್ಲಿ ಕೇವಲ ಒಂದನ್ನು ಮಾತ್ರ ತೆಗೆದುಹಾಕಲಾಯಿತು. ಇದು ಇಂತಹ ಸಾಮಾಜಿಕ ವೇದಿಕೆಗಳು ಇಸ್ಲಾಮ್ ದ್ವೇಷದ ವಿರುದ್ಧ ತಮ್ಮ ಸಾಂಸ್ಥಿಕ ನೀತಿಸಂಹಿತೆಗಳನ್ನು ಜಾರಿಗೊಳಿಸುವಲ್ಲಿ ನಿರಂತರವಾಗಿ ವಿಫಲಗೊಂಡಿವೆ ಎಂಬುದನ್ನು ತೋರಿಸುತ್ತದೆ.

ಜನರೇಟಿವ್ AI, ಆನ್‌ಲೈನ್‌ನಲ್ಲಿ ದ್ವೇಷಕ್ಕೆ ಶಕ್ತಿ ತುಂಬುತ್ತಿದೆ ಎಂದು ರಾಯಲ್ ಯುನೈಟೆಡ್ ಸರ್ವೀಸಸ್ ಇನ್‌ಸ್ಟಿಟ್ಯೂಟ್‌ನ ಜೂನ್ 2025ರ ವರದಿ, ಆನ್‌ಲೈನ್ ಹೇಟ್‌ಸ್ಪೀಚ್ ಅಂಡ್ ಡಿಸ್ಕ್ರಿಮಿನೇಷನ್ ಇನ್ ದಿ ಏಜ್ ಆಫ್ ಎಐ, ಹೇಳಿದೆ ಎಂದು ಈ ವರದಿ ಉಲ್ಲೇಖಿಸಿದೆ.

islamaphobia

ವಿದೇಶಿ ಟ್ರಂಡ್‌ ಕೂಡಾ ಇದೇ ಆಗಿದೆ

ಪಶ್ಚಿಮ ಯುರೋಪ್‌ನಾದ್ಯಂತ ತೀವ್ರ ಬಲಪಂಥೀಯ ಪಕ್ಷಗಳು ಮತ್ತು ಕಾರ್ಯಕರ್ತರು ಟೆಕ್ಸ್ಟ್-ಟು-ಇಮೇಜ್ ತಂತ್ರಜ್ಞಾನವನ್ನು ಭಯ-ಆಧಾರಿತ ಕಥಾನಕಗಳನ್ನು ಉತ್ತೇಜಿಸಲು ಹೆಚ್ಚಾಗಿ ಬಳಸುತ್ತಿದ್ದಾರೆ. 2024ರ ಸೌತ್‌ಪೋರ್ಟ್ ಚಾಕು ಇರಿತ ಘಟನೆಯ ನಂತರ, ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಒಬ್ಬ ಟೀನೇಜ್‌ ಹುಡುಗ ಮೂವರು ಬಾಲಕಿಯರನ್ನು ಕೊಂದ ಘಟನೆಯಲ್ಲಿ, AI-ಜನರೇಟೆಡ್ ಚಿತ್ರಗಳನ್ನು ಬಳಸಿ ದಾಳಿಕೋರನ ಗುರುತಿನ ಬಗ್ಗೆ ತಪ್ಪು ಆರೋಪಗಳ ಆಧಾರದ ಮೇಲೆ ಗಲಭೆಯನ್ನು ಸೃಷ್ಟಿಸಲು, ಇಸ್ಲಾಮೋಫೋಬಿಕ್ ಮತ್ತು ವಲಸಿಗ ವಿರೋಧಿ ದ್ವೇಷವನ್ನು ಆನ್‌ಲೈನ್‌ನಲ್ಲಿ ಹರಡಲು ಬಳಸಲಾಯಿತು ಎಂಬುದನ್ನು ವರದಿ ಉದಾಹರಿಸಿದೆ.

ಏಪ್ರಿಲ್ 2025ರಲ್ಲಿ, ಇಟಲಿಯ ವಿರೋಧ ಪಕ್ಷಗಳು ಉಪಪ್ರಧಾನಿ ಮ್ಯಾಟಿಯೊ ಸಾಲ್ವಿನಿಯ ಲೀಗ್ ಪಕ್ಷದ ವಿರುದ್ಧ, ಘಟನೆಗೆ ಸಂಬಂಧವಿಲ್ಲದ ಜನರು ಮಹಿಳೆಯರು ಮತ್ತು ಪೊಲೀಸರನ್ನು ದಾಳಿ ಮಾಡುವ AI-ಜನರೇಟೆಡ್ ಚಿತ್ರಗಳನ್ನು ವಿತರಿಸಿದ್ದಕ್ಕಾಗಿ ದೂರು ದಾಖಲಿಸಿದವು. ವಲಸಿಗರು ಕೆಟ್ಟವರು ಎಂದು ಬಿಂಬಿಸಲು ಜಾಗತಿಕ ಮಟ್ಟದಲ್ಲಿ ತೀವ್ರ ಬಲಪಂಥೀಯರು ಇಂತಹ AI-ಜನರೇಟೆಡ್ ಚಿತ್ರಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಯುರೋಪಿಯನ್ ಡಿಜಿಟಲ್ ಮೀಡಿಯಾ ಒಬ್ಸರ್ವೇಟರಿ (EDMO)ತನಿಖೆ ಯುರೋಪಿನಾದ್ಯಂತ, ಜರ್ಮನಿಯ ಆಲ್ಟರ್ನೇಟಿವ್ ಫರ್ ಡಾಯ್ಚ್‌ಲ್ಯಾಂಡ್ (AfD)ನಿಂದ ಪೋಲೆಂಡ್‌ನ ʼಸಾವರಿನ್ ಪೋಲೆಂಡ್ʼ, ಫ್ರಾನ್ಸ್‌ನ ʼರಿಕಾಂಕ್ವೆಸ್ಟ್ʼ, ಇಟಲಿಯ ʼಲೀಗ್ʼ ಮತ್ತು ಐರ್ಲೆಂಡ್‌ನ ʼದಿ ಐರಿಷ್ ಪೀಪಲ್‌ʼವರೆಗೆ ತೀವ್ರ ಬಲಪಂಥೀಯ ಪಕ್ಷಗಳು ಮತ್ತು ಪ್ರಭಾವಿಗಳು, ಬಿಳಿಯರನ್ನು ಕಪ್ಪು ವರ್ಣದ ವಲಸಿಗರ ಜೊತೆಗೆ ಹೋಲಿಸುವ AI-ಜನರೇಟೆಡ್ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಕ್ಸೆನೊಫೋಬಿಯಾ (ಭಿನ್ನ ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ, ಆಚಾರಗಳ ದ್ವೇಷ) ಉಂಟುಮಾಡಿವೆ ಎಂದು ವರದಿ ಗುರುತಿಸಿದೆ.

ದ್ವೇಷವನ್ನು ಬಿತ್ತಿ ಹೆಚ್ಚು ದ್ವೇಷವನ್ನು ಬೆಳೆಯುವ ಈ ಪ್ರವೃತ್ತಿಗೆ ಬಲಪಂಥೀಯ ಸರ್ಕಾರಗಳು ನೀರು ಗೊಬ್ಬರ ನೀಡತೊಡಗಿವೆ. ಸಮಾಜವನ್ನು ಹರಿದು ಹಂಚಿ ತಮ್ಮ ಅಧಿಕಾರದ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕರಿವರು. ಈ ಬೆಂಕಿ ಒಮ್ಮೆ ಹೊತ್ತಿಕೊಂಡಿತೆಂದರೆ ಎಲ್ಲ ಧರ್ಮೀಯರನ್ನೂ ಸುಟ್ಟು ಹಾಕಲಿದೆ ಎಂಬ ಎಚ್ಚರ ಮೂಡುವುದು ತುರ್ತು ಅಗತ್ಯವಾಗಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

Download Eedina App Android / iOS

X