ತರಕಾರಿ ಜೀವಿಯಾದ ನಾನು ಸಣಕಲು ದೇಹಿಯಾಗಿದ್ದು, ಜಿಡ್ಡನ್ನು ಬಳಸುವುದೇ ಅಪರೂಪವಾಗಿತ್ತು. ಕಳೆದ ತಿಂಗಳಷ್ಟೇ ನಡೆದ ಪರೀಕ್ಷೆಯಲ್ಲಿ ಕೊಲೆಸ್ಟ್ರಾಲ್ ಕೂಡ ಸರಿಯಾಗಿತ್ತು. ವೃತ್ತಿಯ ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಮನೆಯೊಳಗಿನ ಕೆಲಸಗಳನ್ನು ಸ್ವಯಂ ಮಾಡುತ್ತಿದ್ದೆ. ಹೀಗೆ ಚಟುವಟಿಕೆಯಿಂದಿದ್ದ ನನಗೆ ಈ ಹೃದಯ ಕೈಕೊಡಲು ಹೇಗೆ ಸಾಧ್ಯ? ಮತ್ತೆ ಮತ್ತೆ ಕಾಡುತ್ತಿರುವ ಈ ಆಲೋಚನೆಗಳ ನಡುವೆ ಬೆನ್ನಿನ ಎಡಭಾಗದ ನೋವು ಸಣ್ಣಗೆ ಕಾಣಿಸತೊಡಗಿತು…
ವೈಟ್‍ಫಿಲ್ಡ್‌ನಲ್ಲಿರುವ ಮಹಿಳಾ ವೃದ್ಧಾಶ್ರಮದಲ್ಲಿ ತರಬೇತಿ ನಡೆಸುವ ಸಲುವಾಗಿ ಮುಂಜಾನೆಯೇ ಆರು ಘಂಟೆಗೆ ಹೊರಟಿದ್ದೆ. ಆ ದಿನ ಮನೆಯಲ್ಲಿ ಯಾರೂ ಇಲ್ಲ, ಇನ್ನೇನು ಹೊರಡಬೇಕು, ಅಷ್ಟರಲ್ಲಿ ಏನೋ ಒಂದು ರೀತಿಯ ಸುಸ್ತು, ಎದೆಯಲ್ಲಿ ಏನೋ ಹಿಡಿದುಕೊಂಡಂತೆ, ಧಡ ಧಡ ಎದೆಯ ಬಡಿತ, ಅಸಿಡಿಟಿಯಾದಾಗ ಬರುವ ನೀರಿನಂತಹ ವಾಂತಿ, ರಾತ್ರಿ ಕಾಣಿಸಿಕೊಂಡಿದ್ದ ಎಡ ಬೆನ್ನಿನ ನೋವು ಮತ್ತೆ ಕಾಣಿಸಿಕೊಂಡಿದೆ. ಹೊರಗೆ ಹೋಗಲು ಸಾಧ್ಯವೇ ಇಲ್ಲವೆನಿಸಿ ಕಾಲ್ ಮಾಡಿ ಬರಲಾಗುವುದಿಲ್ಲವೆಂದೆ. ಮಲಗಿ ರೆಸ್ಟ್ ಮಾಡಲು ಹೋದರೆ ಎದೆಯಲ್ಲಿ ಹಿಡಿದುಕೊಂಡಂತಹ ನೋವು ಹೆಚ್ಚಾಗತೊಡಗಿತು. ಇದೇನು ತಡೆಯಲಾಗದ ನೋವಲ್ಲ, ಆದರೆ ಅತಿ ಸುಸ್ತು ಮತ್ತು ಏನೋ ದುಗುಡ.
ನಾಲ್ಕು ತಿಂಗಳ ಹಿಂದೊಮ್ಮೆ ಹೀಗೆಯೇ ಆದಾಗ, ಎಮರ್ಜೆನ್ಸಿಯಲ್ಲಿ ಅಕ್ಯೂಟ್ ಅಸಿಡಿಟಿ ಎಂದು ಇಂಜೆಕ್ಷನ್ ಪಡೆದ ನೆನಪಾಯಿತು. ಈಗಲೂ ಎಮರ್ಜೆನ್ಸಿಗೆ ಅಡ್ಮಿಟ್ ಆಗಿ ಇಂಜೆಕ್ಷನ್ ಪಡೆದು ಸ್ವಲ್ಪ ಲೇಟಾದರೂ ಆಟೋ ಹಿಡಿದು ತರಬೇತಿ ನಡೆಸಲು ಹೋಗಬಹುದು ಎನಿಸಿತು. ಆಟೋ ಬುಕ್ ಮಾಡಿ, ಎಂಟು ಕಿಮಿ ದೂರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಹೊರಟೆ. ಯಲಹಂಕದಲ್ಲಿರುವ ಅಕ್ಕನಿಗೊಂದು ಫೊನ್ ಮಾಡಿ ಹೀಗೆ ಹೋಗುತ್ತಿದ್ದೇನೆ, ಆದರೆ ಬರಬೇಕಾಗಿಲ್ಲ, ಸಮಸ್ಯೆ ಇದ್ದಲ್ಲಿ ತಿಳಿಸುತ್ತೇನೆ ಎಂದೆ. ಊರಿಗೆ ಹೋಗಿದ್ದ ಗಂಡನಿಗೆ ಗಾಬರಿಯಾಗುತ್ತದೆಂದು ತಿಳಿಸಲಿಲ್ಲ – ಬರಿ ಅಸಿಡಿಟಿ ಅಲ್ಲವೇ ಎಂಬ ಧೈರ್ಯ. ಸುಮಾರು 7.30ಕ್ಕೆ ಆಸ್ಪತ್ರೆ ತಲುವುವಷ್ಟರಲ್ಲಿ ಸ್ವಲ್ಪ ಆರಾಮ ಎನಿಸಿದರೂ ಬಂದಾಗಿದೆಯಲ್ಲ ಎಂದುಕೊಂಡು ಎಮರ್ಜೆನ್ಸಿಯೊಳಗೆ ಹೋದೆ. ಎರಡು ದಿನದ ಹಿಂದೆ ಹಲ್ಲನ್ನು ಕಿಳಿಸಿದ್ದು ಆಂಟಿಬಯೋಟಿಕ್ ಮಾತ್ರೆ ತೆಗೆದುಕೊಂಡ ಕಾರಣದಿಂದ ಅಸಿಡಿಟಿ ಆಗಿರಬಹುದೆಂದು ಊಹೆ ಮಾಡಿದ ಕಿರಿಯ ವೈದ್ಯರು ಹೇಗಾದರೂ ಇರಲಿ ಎಂದು ಇಸಿಜಿ ತೆಗೆದರು. ಅದನ್ನು ನೋಡಿದ ತಕ್ಷಣವೇ ಹೆಚ್ಚು ಕಡಿಮೆ ಎಳೆದೊಯ್ದು ಎಮರ್ಜೆನ್ಸಿ ವಾರ್ಡ್‍ಗೆ ಹಾಕಿ, ಔಷಧಿ ಏರಿಸಿದರು. ಮನೆಯವರಿಗೆ ಮೊದಲು ಫೋನ್ ಮಾಡಿ ಎಂಬ ಅವರ ಒತ್ತಾಯದ ನಡುವೆಯೂ ಫೋನ್ ಮಾಡಲಿಲ್ಲವಾದರೂ, ಸ್ವಲ್ಪ ಸಮಯದಲ್ಲಿಯೇ ಅಕ್ಕ ಅವಳ ಪಟಾಲಮ್‍ನೊಂದಿಗೆ ಬಂದಳು.

ನನ್ನ ಇಸಿಜಿಯಲ್ಲಿ ಸಮಸ್ಯೆ ಇದ್ದು, ತಕ್ಷಣವೇ ಆಂಜಿಯೋಗ್ರಾಮ್ ಮಾಡಬೇಕೆಂಬುದು ವೈದ್ಯರ ಸಲಹೆಯಾಗಿತ್ತು. ನನಗಾಗಲೇ ಬಹು ಆರಾಮವೆನಿಸಿದ ಕಾರಣ ಅದನ್ನು ನಂಬಲು ಸಿದ್ಧವಿರಲಿಲ್ಲ. ಮತ್ತೊಮ್ಮೆ ತೆಗೆದ ಇಸಿಜಿಯಲ್ಲಿಯೂ ಅದೇ ಸಮಸ್ಯೆ ಕಂಡಾಗ, ಅದು ಮೆಷಿನ್ ಸಮಸ್ಯೆ ಇರಬಹುದು ಎಂಬ ಅನುಮಾನ. ಕಳೆದ ತಿಂಗಳಷ್ಟೇ ಜಯದೇವ ಆಸ್ಪತ್ರೆಯಲ್ಲಿ ಮಾಡಿಸಿದ ಪರೀಕ್ಷೆಗಳೆಲ್ಲವು ಸರಿ ಇದ್ದ ಕಾರಣ ಎರಡನೇ ಸಲಹೆ ಪಡೆಯಲು ಮತ್ತೆ ಜಯದೇವಕ್ಕೆ ಹೋಗಬೇಕೆಂದು ನನ್ನ ಅಭಿಪ್ರಾಯ. ಅಕ್ಕ ಗಾಬರಿಯಾಗಿ ಎಲ್ಲರಿಗೂ ಪೋನು ಮಾಡುತ್ತಿದ್ದರೆ, ವೈದ್ಯರು ‘ಸಮಯ ಬಹಳ ಕಡಿಮೆ ಬೇಗ ತೀರ್ಮಾನಿಸಿ’ ಎನ್ನುತ್ತಿದ್ದರು. ಸಹಿ ಮಾಡಿ ಬೇರೆ ಕಡೆಗೆ ಹೋಗಬಹುದು ಆದರೆ, ಅಷ್ಟೊಂದು ಸಮಯವಿಲ್ಲದ ಕಾರಣ ನಿಮ್ಮ ತೀರ್ಮಾನ ಅಪಾಯಕಾರಿ ಎಂಬುದು ಅವರ ಅಭಿಪ್ರಾಯವಾಗಿತ್ತು. ನನ್ನ ಡಾಕ್ಟರ್ ಸ್ನೇಹಿತೆಗೆ ಕರೆ ಮಾಡಿದೆ. ವೈದ್ಯರೊಂದಿಗೆ ಮಾತಾಡಿ, ಇಸಿಜಿ ತರಿಸಿಕೊಂಡ ಅವರು, ಕಾಲು ಕೆಳಗಿಡದೆ, ಡಾಕ್ಟರ್ ಏನು ಹೇಳುತ್ತಾರೋ ಅದನ್ನು ಕೇಳಬೇಕೆಂದು ತಾಕೀತು ಮಾಡಿದರು. ಅಕ್ಕ ಕೂಡ ಇದು ಕೇವಲ ಅಂಜಿಯೋಗ್ರಾಮ್ ತಾನೇ ಎಂದು ಒಪ್ಪಿಸಿದಳು.
ನರ್ಸ್ ಮತ್ತು ಇತರೆ ಸಹಾಯಕರು ನನ್ನನ್ನು ಬೇಗ ಬೇಗನೆ ತಯಾರಿಗೊಳಿಸಿ ಆಪರೇಷನ್ ಕೊಠಡಿಗೆ ಕರೆದೊಯ್ದರು. ಬೇರೆ ಗ್ರಹಕ್ಕೆ ಹೋಗಲು ತಯಾರಾದಂತೆ ಕಾಣುವ ನಾಲ್ಕೈದು ಸಿಬ್ಬಂದಿಗಳು ಮೆಷಿನ್‌ಗಳ ಜೊತೆ ತಮ್ಮ ತಮ್ಮ ಕೆಲಸದಲ್ಲಿದ್ದರು. ಹೃದಯ ತಜ್ಞ ಡಾ ತಬಿತ್ ಅಹಮ್ಮದ್ ತಮ್ಮನ್ನು ಪರಿಚಯಿಸಿಕೊಂಡು, ನನ್ನನ್ನು ಮಾತನಾಡಿಸುತ್ತಲೇ ತಮ್ಮ ಕುಸುರಿ ಕೆಲಸ ಪ್ರಾರಂಭಿಸಿದರು. ಲೋಕಲ್ ಅನಸ್ತೇಷಿಯಾ ಕೊಟ್ಟ ಕಾರಣ, ಅವರ ಮಾತುಗಳು ಕೇಳಿಸುತ್ತಿದ್ದರೂ, ಅವರೇನು ಮಾಡುತ್ತಿದ್ದಾರೆಂದು ತಿಳಿಯಲಿಲ್ಲ. ಮುಖ್ಯವಾಗಿ ನೋವಿರಲಿಲ್ಲ.
ಬಹುಬೇಗನೆ ನನ್ನನ್ನು ಐಸಿಯುಗೆ ಕರೆತಂದರು. ಏನೂ ಆಗಿಯೇ ಇರಲಿಲ್ಲ, ಸುಮ್ಮನೆ ಆಂಜಿಯೋಗ್ರಾಮ್ ಮಾಡಿದರಲ್ಲ ಎಂದುಕೊಂಡೆ. ಮೈತುಂಬ ವೈರುಗಳ ಸರಮಾಲೆಗಳನ್ನು ತೋಡಿಸಿದರು – ಬಹುಶಃ ಇಂತಹ ಅಕ್ಸೇಸರಿಗಳು ಮುಂದೊಮ್ಮೆ ಫ್ಯಾಷನ್ ಆಗಬಹುದು. ಹೃದಯ ಬಡಿತ, ಬಿಪಿ, ಆಕ್ಷಿಜನ್ ಪ್ರಮಾಣ ಇತ್ಯಾದಿಗಳನ್ನು ತೋರಿಸುವ ಮೆಷಿನ್‌ಗಳಿಗೆ ಈ ವೈರುಗಳನ್ನು ತಗುಲಿಸಿದ ಕಾರಣ ಕೈಗಳನ್ನು ಮನಬಂದಂತೆ ಆಡಿಸುವಂತಿಲ್ಲ. ಬಲಗೈನ ರಕ್ತನಾಳದ ಮೂಲಕ ಹೃದಯದ ಸಂಪರ್ಕಕ್ಕೆ ಹಾಕಿದ್ದ ಮಣಿಕಟ್ಟಿನ ಮೇಲಿನ ತೆಳು ಕೊಳವೆ (ಕ್ಯಾಥೆಟರ್) ಹಾಗೆಯೇ ಇದ್ದು, ಅಲ್ಲಿ ಸ್ವಲ್ಪ ನೋವು ಕಾಣುತ್ತಿದೆ. ಆ ಕೈಯನ್ನು ಮಡಿಸದೆ ಹಸ್ತವನ್ನು ಮೇಲ್ಮುಖವಾಗಿ ಇಟ್ಟುಕೊಂಡಿರಬೇಕು.

ಸದಾ ಯಾವುದಾದರೊಂದು ಪರೀಕ್ಷೆಗಳನ್ನು ನಡೆಸುತ್ತಾ, ಅದರ ಫಲಿತಾಂಶ ದಾಖಲಿಸುವ ಜೊತೆಗೆ, ಮೃದು ಮಾತುಗಳೊಂದಿಗೆ ಔಷಧಿ ತಿನ್ನಿಸಿ, ಚಟಪಟ ಓಡಾಡಿಕೊಂಡಿರುವ ನರ್ಸ್‍ಗಳೇ ಈ ಐಸಿಯುನಲ್ಲಿರುವ ಬಂಧುಗಳು. ಚಾರ್ಟ್ ಪರೀಕ್ಷಿಸುತ್ತಾ ಆರೋಗ್ಯ ವಿಚಾರಿಸಲು ಬಂದ ಡ್ಯೂಟಿ ಡಾಕ್ಟರನ್ನು ನನಗೇನಾಗಿತ್ತು ಎಂದಾಗ, ಏನೂ ತೊಂದರೆ ಇಲ್ಲ. ನಿಮ್ಮ ಡಾಕ್ಟರ್ ಈಗ ಬರುತ್ತಾರೆ ಎಂದರು. ಸ್ವಚ್ಛತಾ ಸಹಾಯಕಿಯರು ಶೌಚವನ್ನು ಹಾಸಿಗೆಯಲ್ಲಿಯೇ ಮಾಡಿಸುವುದಾಗಿ ತಿಳಿಸುತ್ತಾ, ಉಸಿರನ್ನು ಬಿಗಿಹಿಡಿಯದೆ (ಮುಕ್ಕದೆ) ಮಲಮೂತ್ರ ಮಾಡಬೇಕೆಂಬ ತಿಳಿವಳಿಕೆ ನೀಡಿದರು. ಶೌಚಾಲಯ ಬಳಸುತ್ತೇನೆ ಎಂದು ಹಟ ಮಾಡಿದಾಗ, ನಡೆಯಲೇಬಾರದೆಂಬ ಗಂಭೀರ ಎಚ್ಚರಿಕೆ ನೀಡುತ್ತಾ, ಮೂತ್ರ ಬಾನಿಯನ್ನು ತಂದು ಕಾಯಕವೇ ಕೈಲಾಸವೆಂಬಂತೆ ತಮ್ಮ ಕೆಲಸ ಮುಗಿಸಿದರು. ಇವರ ಬದುಕಿನ ಪ್ರೇರಣೆಯಾದರೂ ಏನು? ನಮ್ಮ ಹೊಲಸನ್ನು ತೊಳೆಯುವ ಇವರ ಕೆಲಸ ಕೀಳಾಗಿದ್ದು ಹೇಗೆ? ಸಮಾಜದ ಈ ನ್ಯಾಯದಲ್ಲಿ ಹುರುಳಿದೆಯೇ? ಹೀಗೆ ಏನೇನೋ ಯೋಚನೆಗಳ ನಡುವೆ ಈ ಕಾರ್ಡಿಯಾಕ್ ಐಸಿಯು ತೆರೆದಿಟ್ಟ ಪ್ರಪಂಚವನ್ನು ಗಮನಿಸುವುದೇ ಕೆಲಸವಾಗಿತ್ತು.
ಮಧ್ಯಾಹ್ನದ ಊಟವು ಮುಗಿಯುತ್ತಿದ್ದಂತೆ, ಹೇಗಿದ್ದೀರಾ ಎನ್ನುತ್ತಲೇ ಬಂದ ಡಾ ತಬೀತ್, ಹೃದಯದ ಎರಡು ರಕ್ತನಾಳಗಳು (ಅಪಧಮನಿ – ಕರೋನರಿ ಆರ್ಟರೀಸ್) ಬ್ಲಾಕ್ ಆಗಿದ್ದು, ಬಲಬದಿಯದು 95% ಮುಚ್ಚಿದ್ದರೆ, ಎಡಭಾಗದ್ದು ಸುಮಾರು 80%ರಷ್ಟು ಮುಚ್ಚಿದೆಯೆಂದೂ, ಆಂಜಿಯೋಪ್ಲಾಸ್ಟಿ ಮಾಡಿ ಸದ್ಯಕ್ಕೆ ಬಲ ಅಪಧಮನಿಗೆ ಸ್ಟೆಂಟ್ (ಸಣ್ಣ ಲೋಹದ ಜಾಲರಿ) ಹಾಕುವ ಮೂಲಕ ಮುಚ್ಚಿರುವ ಜಾಗವನ್ನು ಬಿಡಿಸಿದ್ದು, ಎಡಭಾಗದಲ್ಲಿ ಮುಚ್ಚಿಕೊಂಡಿರುವ ರಕ್ತನಾಳಕ್ಕೆ ಇನ್ನು ಹತ್ತು ದಿನದೊಳಗೆ ಮತ್ತೊಂದು ಸ್ಟೆಂಟ್ ಹಾಕಬೇಕಿದೆ ಎಂದರು. ಅವರ ವಿವರಣೆ ಅರ್ಥವಾದರೂ, ಅದು ನನ್ನೊಳಗೆ ಇಳಿಯಲಿಲ್ಲ. ಅಕ್ಕ ಬಂದು ಸರಿಯಾಗಿ ಹೇಳುತ್ತಾಳೆ ಎಂದುಕೊಂಡು ಕಾಯತೊಡಗಿದೆ.
ತರಕಾರಿ ಜೀವಿಯಾದ ನಾನು ಸಣಕಲು ದೇಹಿಯಾಗಿದ್ದು, ಜಿಡ್ಡನ್ನು ಬಳಸುವುದೇ ಅಪರೂಪವಾಗಿತ್ತು. ಕಳೆದ ತಿಂಗಳಷ್ಟೇ ನಡೆದ ಪರೀಕ್ಷೆಯಲ್ಲಿ ಕೊಲೆಸ್ಟ್ರಾಲ್ ಕೂಡ ಸರಿಯಾಗಿತ್ತು. ವೃತ್ತಿಯ ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಮನೆಯೊಳಗಿನ ಕೆಲಸಗಳನ್ನು ಸ್ವಯಂ ಮಾಡುತ್ತಿದ್ದೆ. ಹೀಗೆ ಚಟುವಟಿಕೆಯಿಂದಿದ್ದ ನನಗೆ ಈ ಹೃದಯ ಕೈಕೊಡಲು ಹೇಗೆ ಸಾಧ್ಯ? ಮತ್ತೆ ಮತ್ತೆ ಕಾಡುತ್ತಿರುವ ಈ ಆಲೋಚನೆಗಳ ನಡುವೆ ಬೆನ್ನಿನ ಎಡಭಾಗದ ನೋವು ಸಣ್ಣಗೆ ಕಾಣಿಸತೊಡಗಿತು. ಅಕ್ಕ ಬಂದಳು, ಅವಳೂ ಡಾಕ್ಟರ್ ಹೇಳಿದ್ದನ್ನೇ ಹೇಳಿ, ನೀನು ಅದೃಷ್ಟವಂತಳು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದು ಬಚಾವಾದೆ ಎಂದಳು. ಸಮಯ ಹಾಳುಮಾಡದೇ ಅತಿ ಜವಾಬ್ದಾರಿಯಿಂದ ಬಹು ಬೇಗನೇ ವೈದ್ಯರು ನನ್ನ ಹೃದಯಕ್ಕೆ ತೊಡಿಸಿದ ಆಭರಣದ (ಸ್ಟೆಂಟ್) ಪರಿಯನ್ನು ವಿವರಿಸುತ್ತಾ, ಅದನ್ನು ಕಂಪ್ಯೂಟರಿನಲ್ಲಿ ನೋಡಿದ್ದಾಗಿಯೂ ಮತ್ತು ಬೇಗನೇ ಅಂಥದ್ದೆ ಇನ್ನೊಂದನ್ನು ಹಾಕಿಕೊಳ್ಳಬೇಕು ಎಂದಳು. ಆಸ್ಪತ್ರೆಗೆ ಬಂದಾಗ ಸರಿ ಇದ್ದೇನಲ್ಲ, ಇಷ್ಟೊಂದು ಅವಸರದಲ್ಲಿ ಇದನ್ನೆಲ್ಲ ಮಾಡುವ ಅಗತ್ಯವೇನಿತ್ತೆಂಬ ನನ್ನ ಮಾತಿಗೆ, ಇಸಿಜಿಯಲ್ಲಿ ಹೃದಯಾಘಾತದ ಸಂಕೇತಗಳು ಕಾಣಿಸಿದ್ದು, ಅದು ಮತ್ತೆ ಯಾವುದೇ ಕ್ಷಣದಲ್ಲಿ ಮರುಕಳಿಸುವ ಸಾಧ್ಯತೆ ಇತ್ತಂತೆ ಎಂದಳು. ಬೆಳಿಗ್ಗೆ ಬಂದ ನೋವು ಹೃದಯಾಘಾತವಾಗಿದ್ದರೆ, ನಾನೊಬ್ಬಳೇ ಆಟೋ ಮಾಡಿಕೊಂಡು ಬರಲಾಗುತ್ತಿತ್ತೇ ಎಂಬ ಅನುಮಾನ ಒಳಗೊಳಗೆ. ಯಾವಾಗಲೂ ಆಯುರ್ವೇದ, ಹೊಮಿಯೋಪಥಿ ಎಂದುಕೊಂಡು ಆಸ್ಪತ್ರೆಯ ಸಹವಾಸವೇ ಬೇಡವೆನ್ನುತ್ತಿದ್ದೆಯಲ್ಲ ಎಂದು ಅಕ್ಕನನ್ನು ಕುಟುಕಿದಾಗ, ನಿನಗೆ ಕಷಾಯ ಕುಡಿಸಬೇಕಿತ್ತೇನು ಎಂದು ನಕ್ಕಳು. ನಿನ್ನ ಪರಿಸ್ಥಿತಿ ನನಗೆ ಬಂದಿದ್ದರೆ ನೀನೇನು ಮಾಡುತ್ತಿದ್ದೆಯೋ ಅದನ್ನೇ ಮಾಡಿದ್ದೇನೆ ಎಂಬವಳ ಉತ್ತರ ಸರಿ ಅನಿಸಿತು.

ಅಲೋಪಥಿಯ ಕುರಿತು ಹಗುರವಾಗಿ ಮಾತನಾಡುತ್ತಾ, ಆರೋಗ್ಯವನ್ನು ಆಧ್ಯಾತ್ಮಿಕತೆಯೊಂದಿಗೆ ತಳುಕಿಸಿ ಬಹು ಘನವಾದ ಉಪದೇಶ ನೀಡುವ ಅನೇಕ ಮಹನೀಯರೂ ಸಹ ತಮ್ಮ ಆರೋಗ್ಯ ಸಮಸ್ಯೆಯ ಪರಿಹಾರಕ್ಕೆ ಇಂಗ್ಲಿಷ್ ವೈದ್ಯ ಪದ್ಧತಿಯ ಮೊರೆ ಹೋಗಿದ್ದು ನೆನಪಾಯಿತು; ಎಲ್ಲರಿಗೂ ಜೀವ ಭಯವೇ. ಈ ದೇಹ ಯಾವಾಗ ಹೇಗೆ ವರ್ತಿಸುತ್ತದೆಂದು ಯಾರಿಗೆ ತಾನೆ ಗೊತ್ತು? ಎಡಭಾಗದ ಬೆನ್ನಿನ ನೋವು ಸ್ವಲ್ಪ ಜಾಸ್ತಿಯೇ ಅನಿಸಿತು. ಮನಸ್ಸು ಒಪ್ಪುತ್ತಲೇ ಇಲ್ಲ. ನಿತ್ಯವೂ ಪ್ರಾಣಯಾಮ, ಯೋಗ ಮಾಡುವ ನನಗೆ ಹೀಗಾಗಲು ಸಾಧ್ಯವಾದರೂ ಹೇಗೆ? ಕೋವಿಡ್ ಲಸಿಕೆಯ ಕಾರಣವೇ, ಬೂಸ್ಟರ್ ಡೋಸ್ ಬೇರೆ ತೆಗೆದುಕೊಂಡಿದ್ದೆನಲ್ಲ. ಅಥವಾ, ಇದು ವಂಶವಾಹಿಯಿಂದ ಬಂದಿದ್ದೇ (ಮನೆಯ ಇಬ್ಬರು ಇಗಾಗಲೇ ಇದೇ ಕಾರಣಕ್ಕೆ ಸಾವನ್ನಪ್ಪಿದ್ದಾರೆ), ಅದಕ್ಕಿರಬಹುದೇ… ಇದಕ್ಕಿರಬಹುದೇ… ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸುಳಿಯಲ್ಲಿ ಸಿಲುಕಿದೆನೇ? ಛೇ, ಸುಡುಗಾಡು ಚಿಂತೆಗಳಿಂದ ನಿದ್ದೆಯೇ ಬರುತ್ತಿಲ್ಲ, ಯಾರೊಂದಿಗಾದರೂ ಮಾತನಾಡಲು ಪೋನ್ ಕೂಡ ಇಲ್ಲ, ಬೆನ್ನಿನ ನೋವು ಎಡಕೈಗೂ ಹರಿಯುತ್ತಿದೆ. ಹಿಂದೆ, ಇದೇ ಆಸ್ಪತ್ರೆಯ ಐಸಿಯುನಲ್ಲಿದ್ದ ಅಮ್ಮ ಇದೆಲ್ಲಾ ಕರ್ಮಫಲ, ಅನುಭವಿಸಿಯೇ ತೀರಬೇಕು ಎಂದುಕೊಂಡಿದ್ದು ನೆನಪಾಯಿತು.
ರಾತ್ರಿ ಎಂಟು ಗಂಟೆಗೆ ಶಿಪ್ಟ್ ಬದಲಾಗಿ, ಹಿಂದಿನ ಶಿಪ್ಟ್‌ನಲ್ಲಿದ್ದ ನರ್ಸ್ ಹೊಸಬರಿಗೆ ನನ್ನ ಕೇಸ್ ಬಗ್ಗೆ ವಿವರಿಸಿ, ರಾತ್ರಿಯಲ್ಲಿ ಏನೇನು ಮಾಡುವುದಿದೆ ಎಂಬುದನ್ನು ಹೇಳಿ ಹೋದರು. ಈಗ ಬಂದ ನರ್ಸ್ ಸಹ ಸರಾಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನುಭವ ಮತ್ತು ಪರಿಣಿತಿ ಹೊಂದಿದ್ದಾರೆಂದು ಇವರುಗಳ ದಕ್ಷ ಕೆಲಸಗಳಿಂದಲೇ ತಿಳಿಯುತ್ತದೆ. ಇಷ್ಟರಲ್ಲಾಗಲೇ, ನನ್ನ ಬಲಗೈ ರಕ್ತನಾಳದ ಕೊಳವೆ ತೆಗೆದು ರಕ್ತಸ್ರಾವ ಆಗದಂತೆ ಮಣಿಕಟ್ಟಿಗೆ ಭದ್ರವಾಗಿ ಬ್ಯಾಂಡೇಜ್ ಬಿಗಿದಿದ್ದಾರೆ. ಆ ಬಿಗಿತದಿಂದಾಗಿ ಬಲಗೈ ಕೂಡ ನೋಯುತ್ತಿದೆ. ಬಾರಿ ಬಾರಿಗೂ ನರ್ಸ್ ಕರೆದು ನೋವಿರುವುದಾಗಿ ಹೇಳುತ್ತಲೇ ಇದ್ದೇನೆ. ಅವರು ದಿಂಬನ್ನು ಬದಲಿಸಿ ಬೇರೆ ಬೇರೆ ಕೋನಗಳಲ್ಲಿ ಮಲಗಿಸುತ್ತಾರೆ. ರಾತ್ರಿ ಕರಗುತ್ತಿದೆ, ಆದರೆ ನಿದ್ರೆ ಸುಳಿಯುತ್ತಿಲ್ಲ, ನೋವು ಹೆಚ್ಚಾಗುತ್ತಿದೆ, ನಿದ್ರೆ ಮಾತ್ರೆ ಕೊಡಲೊಪ್ಪದ ಡ್ಯೂಟಿ ಡಾಕ್ಟರ್, ಎಲ್ಲಾ ಸರಿಹೋಗುತ್ತದೆ ಎನ್ನುತ್ತಾ, ಬೇರಾವುದೋ ಮಾತ್ರೆ ಕೊಟ್ಟು ನೋವು ಕಡಿಯಾಗುತ್ತದೆ ಎಂದರು. ನನಗೋ ನಿದ್ರೆಯೇ ಹತ್ತುತ್ತಿಲ್ಲ. ಎಲ್ಲಾ ಪೇಷೆಂಟ್‌ಗಳು ಮಲಗಿದಂತೆ, ಲೈಟ್ ಮಂದಗೊಳಿಸಿ ನರ್ಸ್ ಮತ್ತು ವೈದ್ಯರು ಕಾಫಿ ಕುಡಿಯುತ್ತಾ ಮೆಲ್ಲಗೆ ಮಾತಾಡಿಕೊಳ್ಳುತ್ತಿದ್ದಾರೆ. ಬೆಳದಿಂಗಳ ರಾತ್ರಿಯಲ್ಲಿ ಆರಾಮವಾಗಿ ಕುಳಿತು ಕಷ್ಟ ಸುಖ ಮಾತಾಡಿಕೊಳ್ಳುವ ಹಳ್ಳಿಗರ ನೆನಪಾಯಿತು. ಪಾಪ, ಇವರಿಗಾವ ಆರಾಮ? ಅದಾವ ಬೆಳದಿಂಗಳು? ಮಹಿಳೆಯೊಬ್ಬರು ಶಂಕರಾ… ಶಂಕರಾ… ಎಂದು ತಮ್ಮ ಮಗನನ್ನು ಕರೆಯುತ್ತಿದ್ದಾರೆ. ಐಸಿಯುನಲ್ಲಿದ್ದೇನೆಂದು ಅವರಿಗೆ ಗೊತ್ತಾಗುತ್ತಿಲ್ಲ. ಅರೆ ನಿದ್ರೆಯಲ್ಲಿರುವ ಅಜ್ಜನೊಬ್ಬ ತಮ್ಮ ಅಂಗಳದಲ್ಲಿ ಮಲಗಿದ್ದೇನೆಂದುಕೊಂಡು ಮಂಚದ ಕೆಳಕ್ಕೆ ಕಫ ಉಗಿಯುತ್ತಲೇ ಇದ್ದಾನೆ, ಇವರು ಬಳಿಯುತ್ತಲೇ ಇದ್ದಾರೆ. ಇನ್ನಾರಿಗೋ ಔಷಧಿ ಮುಗಿದಿದ್ದು ಮತ್ತೆ ಏರಿಸಬೇಕಿದೆ. ಮತ್ತಾರಿಗೋ ಬಿಪಿ ಏರುಪೇರಾಗಿ ಅಲ್ಲಿಗೆ ದೌಡಾಯಿಸಿದ್ದಾರೆ. ಈ ಐಸಿಯುಗೆ ಅಡ್ಮಿಟ್ ಆಗಿದ್ದು ನನ್ನ ಕರ್ಮಫಲವೇ? ಹಾಗಾದರೆ, ಇದರೊಳಗೆಯೇ ಜೀವನ ಸವೆಸುವ ಇವರದು ಕೇವಲ ಕರ್ಮವೇ (ಕೆಲಸ) ಅಥವಾ ಕರ್ಮಫಲವೇ?
ರಾತ್ರಿ ಕಳೆದು ಬ್ರಹ್ಮ ಮುಹೂರ್ತದ ಕಾಲ ಸಮೀಪಿಸುತ್ತಲೇ ದೀಪಗಳು ಬೆಳಗಿವೆ. ಸಿಬ್ಬಂದಿಗಳು ಚುರುಕಾಗಿ ತಮ್ಮ ಕೆಲಸ ಪ್ರಾರಂಭಿಸಿದ್ದಾರೆ; ಪ್ರತಿಯೊಬ್ಬರ ಶೌಚಕ್ರಿಯೆಗಳು, ಬಿಸಿನೀರಿನ ಸ್ಪಾಂಜ್ ಸ್ನಾನ, ತಲೆಬಾಚುವುದು, ಚಾದರ ಬದಲಾವಣೆ, ಪೆಶೆಂಟ್ ಬಳಕೆ ವಸ್ತುಗಳನ್ನು ಸ್ಯಾನಿಟೈಸ್‍ಗೊಳಿಸುವುದು, ಸಂಪೂರ್ಣ ವಾರ್ಡ್ ಸ್ವಚ್ಛತೆ, ಪರೀಕ್ಷೆಗಾಗಿ ಮೂತ್ರ ಮತ್ತು ರಕ್ತ ಸಂಗ್ರಹಣೆ, ಬಿಪಿ, ಶುಗರ್ ಇತ್ಯಾದಿ ಪರೀಕ್ಷೆಗಳು, ಅವುಗಳ ದಾಖಲಾತಿ – ಒಂದೇ ಎರಡೇ, ಎಲ್ಲವನ್ನೂ ಪರಸ್ಪರ ಸಹಾಯದಿಂದ ಬಹು ಅಚ್ಚುಕಟ್ಟಾಗಿ ಆರು ಗಂಟೆಯೊಳಗೆ ಮುಗಿಸಿ, ಸಿಬ್ಬಂದಿಗಳು ಚಹ ಮುಗಿಸುವಷ್ಟರಲ್ಲಿ, ನಮಗೂ ಚಹಾ ಬರುತ್ತದೆ. ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದರೂ, ಲವಲವಿಕೆಯಿಂದಿರುವ ಈ ಹುಡುಗಿಯರು, ಅವರ ಚಟಪಟ ಕೆಲಸಗಳು, ದೇಹ ಮತ್ತು ಪರಿಸರದ ಸ್ವಚ್ಛತೆ, ಕಿಟಕಿಯಿಂದ ಚೆಲ್ಲುತ್ತಿರುವ ಸೂರ್ಯನ ಬೆಳಕು ಮನಸ್ಸಿಗೆ ಖುಷಿ ಕೊಟ್ಟಿದೆ. ಬೆನ್ನು ನೋವು ಕಡಿಮೆಯಾಗಿದ್ದು, ಸುಖವಾದ ನಿದ್ದೆಗೆ ಜಾರಿದ್ದೇನೆ. ಮೆಲ್ಲಗೆ ಕರೆದು ತಿಂಡಿ ತಿನ್ನುವಂತೆ ಹೇಳುತ್ತಿದ್ದಾರೆ, ಗೋಡೆಯ ಗಡಿಯಾರ ಆಗಲೇ ಎಂಟು ದಾಟಿರುವುದನ್ನು ಹೇಳುತ್ತಿದೆ. ತಿಂಡಿ ತಿನ್ನಿಸಿ, ಚಾರ್ಟ್ ನೋಡಿಕೊಂಡು ಒಂದೊಂದಾಗಿ ಮಾತ್ರೆ ಕೊಟ್ಟರು. ಪ್ರತಿ ದಿನದ ಒಂದೇ ರೀತಿಯ ಈ ಕೆಲಸಗಳು ಇವರಿಗೆ ಬೇಸರಿಕೆ ತರುವುದಿಲ್ಲವೇ?

ಸುಮಾರು ಹತ್ತರ ಸಮಯಕ್ಕೆ ಬಂದ ಡಾ ತಬೀತ್, ಪರೀಕ್ಷೆಗಳ ದಾಖಲೆಗಳನ್ನು ನೋಡಿ, “ವೆರಿ ಗುಡ್ ನೀವು ನಾಳೆ ಮನೆಗೆ ಹೋಗಬಹುದು” ಎಂದರು. ಬ್ಲಾಕ್ ಆಗಿರುವ ಹೃದಯದ ಎಡ ರಕ್ತನಾಳಕ್ಕೆ ಈಗಲೇ ಸ್ಟೆಂಟ್ ಹಾಕಿಲ್ಲದ ಕಾರಣ ವಿವರಿಸುತ್ತಾ, ಮನೆಗೆ ಹೋದ ನಂತರ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ತಿಳಿಸಿದರು. ನನಗೇನು ಆಗಿಯೇ ಇರಲಿಲ್ಲ ಎಂಬ ಭ್ರಮೆ ಇಷ್ಟರಲ್ಲಾಗಲೇ ಕರಗಿದ ಕಾರಣ ಅವರ ಮಾತುಗಳು ಮನಸ್ಸಿಗಿಳಿದವು. ಡಾಕ್ಟರ್ ಮತ್ತು ರೋಗಿಯ ನಡುವೆ ಧರ್ಮ, ಜಾತಿ, ಮೇಲು ಕೀಳಿನ ಗೊಡವೆಗಳು ಸುಳಿಯದಿರುವುದು ನೆಮ್ಮದಿಯ ವಿಷಯ.
ಡಾಕ್ಟರ್‌ಗಳು ತಮ್ಮ ರೌಂಡ್ಸ್ ಮುಗಿಸಿ ಹೋದರು. ಮಧ್ಯ ವಯಸ್ಸಿನ ಒಬ್ಬ ಪೇಶೆಂಟ್ ತನ್ನ ಕಷ್ಟಗಳನ್ನು ಜೋರಾಗಿಯೇ ಸ್ಟುಡೆಂಟ್ ನರ್ಸ್‍ಗೆ (ತರಬೇತಿಯಲ್ಲಿರುವ ನರ್ಸಿಂಗ್ ವಿದ್ಯಾರ್ಥಿಗಳು) ಹೇಳಿಕೊಳ್ಳುತ್ತಿದ್ದರೆ, ಚಿಕ್ಕ ವಯಸ್ಸಿನ ಆ ಹುಡುಗಿ ಅವನು ಹೇಳುವುದನ್ನು ತದೇಕಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದಾಳೆ. ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಡ್ಯೂಟಿ ನರ್ಸ್‍ಗಳಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ಅವರ ಮಾರ್ಗದರ್ಶನದಲ್ಲಿ ಪರೀಕ್ಷೆಗಳನ್ನು ನಡೆಸುವುದು, ಔಷಧಿ ಏರಿಸುವುದು, ಸ್ವಚ್ಛತೆ ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕೊನೆಗೆ, ಇವರೆಲ್ಲರೂ ತಾವು ಮಾಡಿದ ಮತ್ತು ಕಲಿತ ವಿಷಯವನ್ನು ನೋಟ್ ಬುಕ್ಕಿನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಬಹುಶಃ, ನರ್ಸಿಂಗ್ ಮುಗಿಸುವಷ್ಟರಲ್ಲಿ ಇವರೆಲ್ಲಾ ಹೆಚ್ಚು ಕಡಿಮೆ ಕೆಲಸದ ಪರಿಣಿತಿ ಹೊಂದಿರುತ್ತಾರೆ.
ಏನೋ ಗಲಾಟೆ, ಬಹುಶಃ ಮಧ್ಯಾಹ್ನ ಕಳೆದಿರಬಹುದು. ಸಿಬ್ಬಂದಿಗಳು ಬೇಗಬೇಗನೆ ಬೆಡ್ಡನ್ನು ತಯಾರಿ ಮಾಡುತ್ತಿರುವಾಗಲೇ ಗಂಭೀರ ಪರಿಸ್ಥಿತಿಯ 35ರ ಆಸುಪಾಸಿನ ಧಡೂತಿ ವ್ಯಕ್ತಿಯೊಬ್ಬರನ್ನು ಸ್ಟ್ರೆಚರ್‌ನಲ್ಲಿ ಕರೆತಂದಿದ್ದಾರೆ. ಹಿರಿಯ ವೈದ್ಯರುಗಳು ಅಲ್ಲಿನ ಸಿಬ್ಬಂದಿಗಳೊಂದಿಗೆ ಸೇರಿ ಆ ವ್ಯಕ್ತಿಯನ್ನು ಉಳಿಸುವ ಒಂದೇ ಧ್ಯೇಯದೊಂದಿಗೆ ಎನೆಲ್ಲಾ ಪ್ರಯತ್ನ ನಡೆಸಿದ್ದಾರೆ. ಉಳಿದ ಪೆಷೆಂಟ್‌ಗಳು ತಮ್ಮ ನೋವನ್ನು ಮರೆತು ಅತ್ತ ಕಡೆಯೇ ನೋಡುತ್ತಿದ್ದಾರೆ. ಪರದೆ ಎಳೆದಿರುವ ಕಾರಣ ಎನೂ ಕಾಣಿಸುತ್ತಿಲ್ಲ. ಸುಮಾರು ಅರ್ಧ ಗಂಟೆಯ ಬಿಡದ ಪ್ರಯತ್ನದ ನಂತರವೂ ಆ ವ್ಯಕ್ತಿ ಕೊನೆಯುಸಿರೆಳೆದಾಗ ನಗುವಿಲ್ಲದ ವೈದ್ಯರ ಮುಖದಲ್ಲಿ ಹತಾಶ ಭಾವ ಕಾಣುತ್ತಿದೆ. ಬಹುಶಃ ಸುದ್ಧಿ ಮುಟ್ಟಿರಬೇಕು – ಐಸಿಯು ಹೊರಗಡೆ ಚಿಟ್ಟನೆ ಚೀರಿಕೊಂಡು ಅಳುವ ಶಬ್ದ, ಜೊತೆಗೆ ಯಾರೋ ಬಯ್ಯುತ್ತಿದ್ದಾರೆ.
ವೈದ್ಯರನ್ನೇಕೆ ದೂರುತ್ತೇವೆ? ಇನ್ನೆಷ್ಟು ಪ್ರಯತ್ನ ಮಾಡಬೇಕಿತ್ತು? ಕುಟುಂಬದವರ ಅಸಹಾಯಕ ಸ್ಥಿತಿಯೇ? ಪ್ರೀತಿ ಪಾತ್ರರನ್ನು ಕಳೆದುಕೊಂಡ ದುಃಖವೇ? ಜೊತೆಗೆ, ಅಚಾನಕ್ಕಾಗಿ ಸ್ಥಗಿತಗೊಳ್ಳುವ ದೈನಂದಿನ ಕೆಲಸಗಳು, ಕೈಬಿಡುವ ದೊಡ್ಡ ಖರ್ಚು…, ಈ ಎಲ್ಲಾ ಮಾನಸಿಕ ತುಮುಲಗಳನ್ನು ಹೊರಹಾಕುವ ಬಗೆಯೇ? ನಿಜಕ್ಕೂ ಆಸ್ಪತ್ರೆಗಳು ಮತ್ತು ವೈದ್ಯರು ಶೋಷಣೆ ಮಾಡುತ್ತಾರೆಯೇ? ಇಲ್ಲವೆನ್ನಲಾಗದು; ಸಾರ್ವಜನಿಕ ಆರೋಗ್ಯ ಸೇವೆಗಳು ಕಳಪೆಯಾಗಿರುವ ಈ ದುಃಸ್ಥಿತಿಯಲ್ಲಿ, ಆರೋಗ್ಯವನ್ನು ವಾಣಿಜ್ಯೀಕರಣ ಮಾಡಿಕೊಂಡು ರೋಗಿ ಮತ್ತು ಕುಟುಂಬದವರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಹಲವು ಉದಾಹರಣೆಗಳಿವೆ. ಅದೃಷ್ಟವಶಾತ್ ಇಲ್ಲಿನ ನನ್ನ ಅನುಭವ ಬೇರೆಯದಾಗಿದೆ. ಇಲ್ಲಿನ ಸೇವೆ ಮತ್ತು ಸೌಲಭ್ಯಗಳ ಗುಣಮಟ್ಟ ಯಾವುದೇ ಕಾರ್ಪೋರೆಟ್ ಆಸ್ಪತ್ರೆಗೂ ಕಮ್ಮಿ ಇಲ್ಲ, ಜೊತೆಗೆ ಆಸ್ಪತ್ರೆ ಖರ್ಚು ಹಲವು ದೊಡ್ಡ ಆಸ್ಪತ್ರೆಗಳಿಗಿಂತ ಕಡಿಮೆ ಇದೆ.
ಮರುದಿನ ನಾನು ಆಸ್ಪತ್ರ್ರೆಯಿಂದ ಬಿಡುಗಡಯಾದೆ. ಮುಂದಿನ ಹತ್ತು ದಿನದಲ್ಲಿ ಮತ್ತೊಂದು ಸ್ಟೆಂಟ್‍ನ್ನು ಎಡನಾಳಕ್ಕೆ ಕೂರಿಸಿ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತೆ ಮಾಡಿದರು. ನಡೆಯುವುದು ಮತ್ತು ಸರಳ ವ್ಯಾಯಾಮದ ಜೊತೆಗೆ ಜಿಡ್ಡಿನ ಆಹಾರವನ್ನು ಸಾಕಷ್ಟು ಕಡಿಮೆ ಮಾಡುವುದು ಹಾಗೂ ಔಷಧಿಯನ್ನು ಬಿಡದೆ ತೆಗೆದುಕೊಳ್ಳುವುದು ಅತಿ ಮುಖ್ಯವೆಂದು ಹೇಳಿದರು. ಹೆಚ್ಚಿನಂಶ ಇದನ್ನೆಲ್ಲಾ ಪಾಲಿಸುತ್ತಿದ್ದೆ.

ಈ ನಡುವೆ, ನನ್ನನ್ನು ಅತಿ ಪ್ರೀತಿಯಿಂದ ಜತನ ಮಾಡಿದ ಅಕ್ಕ ಒಂದು ರಾತ್ರಿ ಹಠಾತ್ ಹೃದಯ ಸ್ತಂಭನದಿಂದ ಕಾಣೆಯಾದಳು!? ಅಯ್ಯೋ… ಹೃದಯ ಹಿಂಡುವ ಈ ನೋವು ಹೃದಯ ನಿಜಕ್ಕೂ ಒಡೆದುಕೊಂಡಾಗ, ಆಗಿದ್ದಕ್ಕಿಂತ ಆಳ ಮತ್ತು ನಿರಂತರ. ಆಗಾಗ್ಗೆ ಬೆನ್ನು, ಕುತ್ತಿಗೆ, ಎದೆ ನೋವು ಕಾಣಿಸಿಕೊಳ್ಳುತ್ತಲೇ ಇದ್ದು, ನಿದ್ರೆ ಇಲ್ಲದೆ ಮನಸ್ಸು ಆತಂಕಕ್ಕೊಳಗಾಗಿ ಆಸ್ಪತ್ರೆಗೆ ಅಲೆಯುವುದು ಹೆಚ್ಚಾಯಿತು. ಎಲ್ಲವೂ ಸರಿಯಾಗಿದೆ ಎಂದು ಪರೀಕ್ಷೆಗಳು ಹೇಳುತ್ತವೆ, ಆದರೂ ಈ ನೋವೇಕೆ? ಮೂಳೆ ತಜ್ಞರನ್ನು ನೋಡಿದಾಗ, ಇದು ಫೈಬ್ರೊಮಯಾಲ್ಜಿಯಾ ಎಂದರು. ಅಂದರೆ, ಹಿಂದಿನ ಸರ್ಜರಿ ಅಥವಾ ದುರ್ಘಟನೆಗಳ ನೋವುಗಳನ್ನು ಮಿದುಳು ನೆನಪಿಸಿಕೊಂಡಾಗ ಮತ್ತು ಅನಿಸಿದ್ರೆ, ಒತ್ತಡ ಇತ್ಯಾದಿಗಳಿಂದ ಕಾಣಿಸುವ ನೋವಂತೆ ಇದು! ಈ ದೇಹದ ಮರ್ಮ ತಿಳಿದವರಾರು? ಜೊತೆಗೆ, ಎಣ್ಣೆ, ಬೆಣ್ಣೆ, ತುಪ್ಪವನ್ನು ಕಡಿತಗೊಳಿಸಿದ ಕಾರಣ ವಯಸ್ಸಾಗುತ್ತಿರುವ ದೇಹದ ಮಾಂಸಖಂಡಗಳು ಮತ್ತೂ ಸೊರಗುತ್ತವೆ. ಹಲವು ವೈಟಮಿನ್ ಮಾತ್ರೆಗಳನ್ನು ನೀಡಿ, ಕುತ್ತಿಗೆ ಮತ್ತು ಬೆನ್ನು ನೋವಿಗೆ ವ್ಯಾಯಾಮಗಳನ್ನು ಹೇಳಿಕೊಟ್ಟರು. ಎಲ್ಲವನ್ನು ಒಪ್ಪಿಕೊಳ್ಳಲು ಸಮಯ ಬೇಕಾಗುತ್ತದೆ; ಒಪ್ಪಿಕೊಳ್ಳದೆ ಬೇರೆ ದಾರಿ ಏನಿದೆ?. ಮಿತ ಆದರೆ ಪೌಷ್ಟಿಕ ಆಹಾರ ಸೇವನೆ, ಮಿತವಾದ ಯೋಗ-ಪ್ರಣಾಯಾಮ, ಹೆಚ್ಚು ನಡಿಗೆಯ ಜೊತೆಗೆ ನಿರಂತರ ಕೆಲಸ/ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಬಹು ಮುಖ್ಯವೆಂದು ಅರ್ಥವಾಗಿದೆ.
ಇದನ್ನೂ ಓದಿ ಅಮೆರಿಕಕ್ಕೆ ವಾಪಸಾಗುತ್ತಿರುವ ಭಾರತೀಯರ ವಿರುದ್ದ ‘Clog The Toilet’ ವರ್ಣಭೇದ ಅಭಿಯಾನ; ಏನಿದು?
ಹೃದಯ ಕೇವಲ ರಕ್ತವನ್ನು ಪಂಪ್ ಮಾಡುವ ಒಂದು ಅಂಗ ಮಾತ್ರವೇ? ಅಥವಾ, ಆನಂದ, ನೋವು, ಪ್ರೀತಿ, ಪ್ರೇಮ, ಕರುಣೆ, ಭಯ, ಜಿಗುಪ್ಸೆ ಇವೆಲ್ಲವನ್ನು ಮಿಡಿಯುವ ಸಾಮರ್ಥ್ಯದ ನೆಲೆಯೇ? ಈ ಸಾಮರ್ಥ್ಯಗಳ ಭಾರದಿಂದ ಹಿಗ್ಗಿ, ಜಗ್ಗಿ, ಕುಗ್ಗಿ ಆಗಾಗ್ಗೆ ‘ಒಡೆದು’ ನೋವು ನಲಿವುಂಟು ಮಾಡುವ ಇದು, ಅವುಗಳ ಒಜ್ಜೆ ಹೆಚ್ಚಾಗಿ ನಿಜಕ್ಕೂ ಒಡೆದುಕೊಂಡಿತೋ ಅಥವಾ ವೈದ್ಯರು ಹೇಳಿದಂತೆ ಇದು ವಂಶಪಾರಂಪರ್ಯವಾಗಿ ಬಂದಿದ್ದೇ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ವ್ಯರ್ಥವೇ ಸರಿ.
ಯಾವುದಕ್ಕಾದರೂ ಬಂದಿರಲಿ, ನಾನಿನ್ನೂ ಬದುಕಿದ್ದೇನೆಂದು ಮಿಡಿಯುತ್ತಿದೆಯಲ್ಲ, ಈ ಹಿಡಿ ಹೃದಯ! ಅಷ್ಟು ಸಾಕು; ಅಬ್ಬಾ ಬದುಕಿರುವುದೇ ದೊಡ್ಡದಿರುವಾಗ, ಮತ್ತೆಲ್ಲದರ ಚಿಂತೆಯಾಕೆ? ಇದು ಇನ್ನೊಂದಿಷ್ಟು ಕಾಲ ಮಿಡಿಯುವಂತೆ ಮಾಡಿದ ಡಾ ತಬೀತ್ ಮತ್ತವರ ಎಲ್ಲಾ ಸಿಬ್ಬಂದಿಗೂ ಈ ‘ವಿಶ್ವ ಹೃದಯ ದಿನ’ ದಂದು ಮನದಾಳದ ನಮನಗಳು ಎಂದಷ್ಟೇ ಹೇಳಬಹುದು.

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.