ತವರು ನೆಲದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ನಗೆ ಬೀರಿದೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, 140 ರನ್‌ಗಳ ಅಂತರದಿಂದ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಮಣಿಸಿದೆ.
ಆತಿಥೇಯ ಟೀಂ ಇಂಡಿಯಾ ಮೊದಲ ಟೆಸ್ಟ್‌ನಲ್ಲೇ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ರವೀಂದ್ರ ಜಡೇಜಾ ಅವರ ಆಲ್ರೌಂಡ್ ಪ್ರದರ್ಶನ (ಅಜೇಯ 104 ರನ್ ಮತ್ತು 4 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತದ ಗೆಲುವು ಸುಲಭವಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆರೆಬಿಯನ್ ಪಡೆ ಸಿರಾಜ್ ಮತ್ತು ಬುಮ್ರಾ ಬೌಲಿಂಗ್ ದಾಳಿಗೆ ಸಿಲುಕಿ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 162 ರನ್‌ಗಳಿಗೆ ಆಲೌಟ್ ಅಯ್ತು. ವೇಗಿ ಸಿರಾಜ್ 14 ಓವರ್‌ಗಳಲ್ಲಿ 40 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಬುಮ್ರಾ 42 ರನ್ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಕಬಳಿಸಿದರು. ಕುಲ್ದೀಪ್ ಎರಡು ವಿಕೆಟ್, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದುಕೊಂಡರು.
ಮೊದಲ ದಿನವೇ ವೆಸ್ಟ್ ಇಂಡೀಸ್ಗೆ ಆಲೌಟ್ ಮಾಡಿ ಬ್ಯಾಟಿಂಗ್ಗೆ ಬಂದ ಭಾರತ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 121 ರನ್ಗಳನ್ನು ಕಲೆಹಾಕಿತು. ನಂತರ ಎರಡನೇ ದಿನದಂದು ಭಾರತದ ಪರ ಕೆಎಲ್ ರಾಹುಲ್ (100), ಧ್ರುವ್ ಜುರೇಲ್ (125), ರವೀಂದ್ರ ಜಡೇಜಾ (104*) ಶತಕ ಸಿಡಿಸಿದರೇ, ನಾಯಕ ಗಿಲ್ ಅರ್ಧಶತಕ ಸಿಡಿಸಿದರು. ಇದರಿಂದಾಗಿ ಭಾರತ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ 286 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ದಿನದಾಟ ಕೊನೆಗೊಳಿಸಿತು. ಮೂರನೇ ದಿನವಾದ ಇಂದು ಭಾರತ ಬ್ಯಾಟಿಂಗ್ ಮಾಡದೇ ಡಿಕ್ಲೇರ್ ಘೋಷಣೆ ಮಾಡಿತು.
