ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದ 2ನೇ ದಿನದಲ್ಲಿ ಉಭಯ ತಂಡಗಳಿಂದ 15 ವಿಕೆಟ್ ಉರುಳಿಬಿದ್ದವು. ಭಾರತ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 9 (ಕ್ರಿಸ್ ವೋಕ್ಸ್ ಬ್ಯಾಟ್ ಮಾಡಲಿಲ್ಲ) ಹಾಗೂ ಭಾರತ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡಿತು. ಉಭಯ ತಂಡಗಳು ಎರಡನೇ ದಿನದಾಟದಲ್ಲಿ ವಿಕೆಟ್ ಉಳಿಸಿಕೊಳ್ಳುವಲ್ಲಿ ಪರದಾಟ ನಡೆಸಿದವು.
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜಾಕ್ ಕ್ರಾಲಿ (64), ಹ್ಯಾರಿ ಬ್ರೂಕ್ (53) ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಭಾರತದ ಪರ ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ 23 ರನ್‌ಗಳ ಮುನ್ನಡೆ ಸಾಧಿಸಿತು. ಭಾರತ ಎರಡನೇ ಇನಿಂಗ್ಸ್ ಆಟವನ್ನು ಆರಂಭಿಸಿತು.
ಟೀಮ್ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಸಮಯೋಚಿತ ಆಟವನ್ನು ಆಡಿದರು. ಒಂದು ತುದಿಯಲ್ಲಿ ಕೆಎಲ್ ರಾಹುಲ್ ತಮ್ಮ ನೈಜ ಧಾಟಿಯಲ್ಲಿ ಬ್ಯಾಟಿಂಗ್ ನಡೆಸಿದರೆ, ಇನ್ನೊಂದು ತುದಿಯಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಮಾಡಿದರು. ಇವರು ಇಂಗ್ಲೆಂಡ್ ಬೌಲರ್‌ಗಳ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಅಲ್ಲದೆ ಇಂಗ್ಲೆಂಡ್ ಬ್ಯಾಟರ್‌ಗಳ ರೀತಿಯಲ್ಲೇ ಆಡಿದರು.
ಮೊದಲ ವಿಕೆಟ್‌ಗೆ ಭಾರತ 46 ರನ್‌ಗಳನ್ನು ಸೇರಿಸಿತು. ಈ ವೇಳೆ ಕೆಎಲ್ ರಾಹುಲ್ (7) ಜೋಶ್ ಟಂಗ್ ಎಸೆತದಲ್ಲಿ ಸ್ಲಿಪ್‌ನಲ್ಲಿ ರೂಟ್‌ಗೆ ಕ್ಯಾಚ್ ನೀಡಿದರು. ಟೀಮ್ ಇಂಡಿಯಾದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಸೂಚನೆ ನೀಡಿದರು. ಆದರೆ ಇವರು ಗಸ್ ಅಟ್ಕಿನ್ಸನ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ವೇಳೆಗೆ ಸಾಯಿ ಸುದರ್ಶನ್ ಹಾಗೂ ಜೈಸ್ವಾಲ್ ಜೊತೆಗೂಡಿ 45 ಎಸೆತಗಳಲ್ಲಿ 24 ರನ್ ಸಿಡಿಸಿದರು.
ಇದನ್ನು ಓದಿದ್ದೀರಾ? ಮೂರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗಳಿಗೆ ಇಂಗ್ಲೆಂಡ್ ಆತಿಥ್ಯ
ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ಆಕ್ರಮಕಾರಿ ಆಟವನ್ನು ಮುಂದುವರೆಸಿದರು. ದಿನದಾಟದಂತ್ಯಕ್ಕೆ ಯಶಸ್ವಿ ಜೈಸ್ವಾಲ್ ಅಜೇಯ 51 ರನ್ ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳಿದ್ದವು. ಮೂರನೇ ದಿನಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಆಕಾಶ್ ದೀಪ್ ಜೋಡಿ ಬ್ಯಾಟಿಂಗ್ ಕಾಯ್ದುಕೊಂಡಿದೆ.
ರೂಟ್-ಪ್ರಸಿದ್ಧ್ ವಾಗ್ವಾದ
ಎರಡನೇ ದಿನದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಟೀಮ್ ಇಂಡಿಯಾ ಬೌಲರ್‌ಗಳ ಕಾಟ ನೀಡಿದರು. ಇದೇ ವೇಳೆ ಜೋ ರೂಟ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಮಾತಿನ ಚಕಮಕಿ ನಡೆದರೆ, ಬೆನ್ ಡಕೇಟ್ ವಿಕೆಟ್ ಪಡೆದ ಆಕಾಶ್ ದೀಪ್ ಅವರ ಹೆಗಲ ಮೇಲೆ ಕೈ ಹಾಕಿ ಪೆವಿಲಿಯನ್ ಹಾದಿ ತೋರಿಸಿದರು.
ಓವಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಮಾತಿನ ಚಕಮಕಿ ಕಾಣಿಸಿಕೊಂಡಿತು. ಪ್ರಸಿದ್ಧ್ ಕೃಷ್ಣ ಮತ್ತು ಜೋ ರೂಟ್ ನಡುವೆ ಬಿಸಿ ವಾಗ್ವಾದ ಕಂಡುಬಂದಿತು. ಇಂಗ್ಲೆಂಡ್ ಜಾಕ್ ಕ್ರಾಲಿ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮೈದಾನಕ್ಕೆ ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್ ಜೋ ರೂಟ್ ಇನಿಂಗ್ಸ್ ಆರಂಭಿಸಿದರು.
22ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ರೂಟ್‌ಗೆ ಪ್ರಸಿದ್ಧ್ ಏನು ಹೇಳಿದಂತೆ ಕಂಡು ಬಂದಿತು. ಪ್ರಸಿದ್ಧ್ ಅವರ ಮಾತುಗಳನ್ನು ಕೇಳಿದ ರೂಟ್ ಕೋಪಗೊಂಡರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ರೂಟ್ ಗಲ್ಲಿ ಕಡೆಗೆ ಚೆಂಡನ್ನು ತಳ್ಳಿ ಬೌಂಡರಿ ಬಾರಿಸಿದರು. ಈ ವೇಳೆ ಮತ್ತೆ ಪ್ರಸಿದ್ಧ್ ಕೃಷ್ಣ ಮತ್ತು ಜೋ ರೂಟ್ ನಡುವೆ ಮತ್ತೆ ವಾಗ್ವಾದ ಪ್ರಾರಂಭವಾಯಿತು. ಫೀಲ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ಆಟಗಾರರನ್ನು ಸಮಾಧಾನ ಪಡಿಸಬೇಕಾಯಿತು. ಈ ಮಾತಿನ ಚಕಮಕಿಗೂ ಮೊದಲು ಆಕಾಶ್ ದೀಪ್ ಬೆನ್ ಡಕೆಟ್ ಅವರಿಗೆ ಸೆಂಡಾಫ್ ನೀಡಿದ ರೀತಿ ಎಲ್ಲರ ಗಮನ ಸೆಳೆಯಿತು.
Joe Root and Prasidh Krishna interaction #ENGvsIND pic.twitter.com/5zOGWj84QQ
— ascii13 (@zeracast) August 1, 2025