ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬಿನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಗಳಿಸಿರುವುದರಿಂದ ಮೂರನೇ ಪಂದ್ಯ ರೋಚಕತೆ ಹುಟ್ಟಿಸಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಮತ್ತೊಂದು ಗೆಲುವು ಸಾಧಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸುವ ಯೋಜನೆ ಮಾಡಿಕೊಂಡಿದೆ. ಎರಡನೇ ಪಂದ್ಯದಲ್ಲಿ ಜಯ ದಾಖಲಿಸಿರುವ ಭಾರತ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಲಾರ್ಡ್ಸ್ ಅಂಗಳದಲ್ಲಿ ಈಗಾಗಲೇ ಉಭಯ ತಂಡಗಳು ಒಟ್ಟು 19 ಬಾರಿ ಮುಖಾಮುಖಿ ಆಗಿದ್ದು, ಭಾರತ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋಲು ಕಂಡಿದೆ. 12 ಪಂದ್ಯಗಳು ಡ್ರಾ ಆಗಿವೆ. ಕಳೆದ ಕೆಲವು ವರ್ಷಗಳಲ್ಲಿ ಈ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಲು ಹೆಣಗಾಟ ನಡೆಸಿತ್ತು. ಅಲ್ಲದೆ ಭಾರತದ ಬೌಲಿಂಗ್ ವಿಭಾಗ ಸಹ ಎದುರಾಳಿಗಳ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಈ ಬಾರಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲಾಢ್ಯವಾಗಿದೆ
ಭಾರತದ ಯುವಪಡೆ ಸಂಘಟಿತ ಆಟದ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟಿಕೊಂಡಿದೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಯಶಸ್ವಿ ಜೈಸ್ವಾಲ್ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಎದುರಾಳಿ ತಂಡಕ್ಕೆ ಕಾಟ ನೀಡಬಲ್ಲರು. ಈ ಇಬ್ಬರೂ ಆಟಗಾರರು ನೆಲಕ್ಕೂರಿ ನಿಂತು ಬ್ಯಾಟ್ ಮಾಡಿದಲ್ಲಿ ಬಿಗ್ ಸ್ಕೊರ್ ಕನಸು ಕಾಣಬಹುದು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಕರುಣ್ ನಾಯರ್ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಇದು ಅವರಿಗೆ ಕೊನೆಯ ಅವಕಾಶವೆಂದು ರೀತಿ ತೋರುತ್ತಿದೆ. ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನಿಂಗ್ಸ್ನಲ್ಲಿ ಕರುಣ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಲಾರ್ಡ್ಸ್ನಲ್ಲಿ ಇವರಿಗೆ ಅವಕಾಶ ಸಿಕ್ಕಲ್ಲಿ ಉತ್ತಮ ಇನಿಂಗ್ಸ್ ಕಟ್ಟುವ ಅವಶ್ಯಕತೆ ಇದೆ.
ಶುಭಮನ್ ಮೇಲೆ ಕಣ್ಣು ಲೀಡ್ಸ್ ಹಾಗೂ ಬರ್ಮಿಂಗ್ ಹ್ಯಾಮ್ ಅಂಗಳದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇವರು ಕಳೆದ ಪಂದ್ಯದಲ್ಲಿ 269 ರನ್ ಹಾಗೂ 161 ರನ್ ಸಿಡಿಸಿ ಅಬ್ಬರಿಸಿದ್ದರು. ಲಾರ್ಡ್ಸ್ನಲ್ಲಿ ಪ್ರಿನ್ಸ್ ಹೇಗೆ ಬ್ಯಾಟಿಂಗ್ ನಡೆಸುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ರಿಷಭ್ ಪಂತ್ ಎದುರಾಳಿ ಬೌಲರ್ಗಳಿಗೆ ಕಾಟ ನೀಡಬಲ್ಲ ಬೌಲರ್.
ಇದನ್ನು ಓದಿದ್ದೀರಾ? ಲಾರಾ ಮೇಲಿನ ಗೌರವದಿಂದ 400ರ ಗಡಿ ಸಮೀಪಿಸಲಿಲ್ಲ; 367 ರನ್ ಸಿಡಿಸಿದ ವಿಯಾನ್ ಮುಲ್ಡರ್ ಮಾತು
ಆಲ್ರೌಂಡರ್ ರವೀಂದ್ರ ಜಡೇಜಾ, ಎರಡನೇ ಟೆಸ್ಟ್ನಲ್ಲಿ ಅಪಾಯದಲ್ಲಿದ್ದ ತಂಡಕ್ಕೆ ನೆರವಾಗಿದ್ದರು. ಹೀಗಾಗಿ ಇವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಬಹುತೇಕ ಖಚಿತ. ನಿತೀಶ್ ಕುಮಾರ್ ರೆಡ್ಡಿ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದಾಗಿದೆ. ಇನ್ನು ವಾಷಿಂಗ್ಟನ್ ಸುಂದರ್ ಬದಲಿಗೆ ಟೀಮ್ ಇಂಡಿಯಾ ಶಾರ್ದೂಲ್ ಅವರನ್ನು ಕಣಕ್ಕೆ ಇಳಿಸಿದರೂ ಅಚ್ಚರಿಯಿಲ್ಲ.
ಜಸ್ಪ್ರಿತ್ ಬುಮ್ರಾ, ಜೋಫ್ರಾ ಆರ್ಚರ್ ಆಗಮನ
ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಆಗಮನವಾಗಿದ್ದು, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಗೆ ಕೊಕ್ ನೀಡಲಾಗಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಆಕಾಶ್ ದೀಪ್ ಅವರ ಮೇಲೆ ಈ ಪಂದ್ಯದಲ್ಲೂ ಹೆಚ್ಚಿನ ನಿರೀಕ್ಷೆಗಳಿವೆ. ಮೊಹಮ್ಮದ್ ಸಿರಾಜ್ ಸಹ ತಂಡದಲ್ಲಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. ಆದರೆ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲು, ಅನುಭವಿ ಜೋಫ್ರಾ ಆರ್ಚರ್ ಅವರನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಆತಿಥೇಯ ತಂಡದ ಬೌಲಿಂಗ್ ವಿಭಾಗ ಮತ್ತುಷ್ಟು ಬಲಗೊಳ್ಳಲಿದೆ. ಇವರು ತಮ್ಮ ಕರಾರುವಾಕ್ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲೆಬು ಜೋ ರೂಟ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30
