ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಶತಕಗಳ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್‌ನ ಸರಣಿ ಗೆಲುವಿನ ಕನಸು ಭಗ್ನಗೊಂಡಿದೆ.
ಕೊನೆಯ ದಿನದಾಟವನ್ನು ಭಾರತ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 174 ರನ್‌ಗಳಿಂದ ಆರಂಭಿಸಿತು. ನಾಲ್ಕನೇ ದಿನದಾಟದಲ್ಲಿ 87 ರನ್ ಬಾರಿಸಿದ್ದ ಕೆಎಲ್ ರಾಹುಲ್, ಭಾನುವಾರ ಕೇವಲ 3 ರನ್ ಸೇರಿಸಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಒಟ್ಟು 421 ಎಸೆತಗಳಲ್ಲಿ 188 ರನ್ ಸಿಡಿಸಿದ ರಾಹುಲ್ ಮಿಂಚಿದರು. ಇನ್ನು, ನಾಯಕ ಶುಭಮನ್ ಗಿಲ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಗಿ, 238 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 103 ರನ್ ಬಾರಿಸಿ ಈ ಸರಣಿಯ ನಾಲ್ಕನೇ ಶತಕ ಗಳಿಸಿದರು. ಆದರೆ, ಜೋಫ್ರಾ ಆರ್ಚರ್ ಎಸೆತವನ್ನು ತಪ್ಪಾಗಿ ಗ್ರಹಿಸಿ ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ವಿಕೆಟ್ ಒಪ್ಪಿಸಿದರು.
ಟೀಮ್ ಇಂಡಿಯಾದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ 5ನೇ ವಿಕೆಟ್‌ಗೆ 185 ಎಸೆತಗಳಲ್ಲಿ 100 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ ಈ ಜೋಡಿ, ಬೆನ್ ಸ್ಟೋಕ್ಸ್‌ನ ಕ್ಲೋಸ್ ಫೀಲ್ಡಿಂಗ್ ತಂತ್ರವನ್ನು ಮೀರಿ ಬೌಂಡರಿಗಳ ಮೂಲಕ ರನ್ ಕಲೆಹಾಕಿತು. ಉತ್ತಮ ರಕ್ಷಣಾತ್ಮಕ ಆಟದೊಂದಿಗೆ ಎಲ್ಲರ ಗಮನ ಸೆಳೆದ ಈ ಜೋಡಿ, ಚಹಾ ವಿರಾಮದ ವೇಳೆಗೆ 4 ವಿಕೆಟ್‌ಗೆ 322 ರನ್ ಗಳಿಸಿತು.
ಇದನ್ನು ಓದಿದ್ದೀರಾ? ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಜಯಗಳಿಸಿದ್ದು ಹೇಗೆ? ಗೆಲುವಿಗೆ ತಂತ್ರ ರೂಪಿಸಿದ್ದು ಹೇಗಿತ್ತು?
ಜಡೇಜಾ ಮತ್ತು ಸುಂದರ್ ತಮ್ಮ ಅಮೋಘ ಬ್ಯಾಟಿಂಗ್‌ನಿಂದ ತಂಡವನ್ನು ಸೋಲಿನಿಂದ ಪಾರು ಮಾಡಿದರು. 334 ಎಸೆತಗಳಲ್ಲಿ ಅಜೇಯ 203 ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ಶತಕ ಬಾರಿಸಿ ಮಿಂಚಿದರು. ಜಡೇಜಾ 185 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 107 ರನ್ ಗಳಿಸಿದರೆ, ಸುಂದರ್ 206 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ ಅಜೇಯ 101 ರನ್ ಸಿಡಿಸಿದರು. 143ನೇ ಓವರ್‌ನಲ್ಲಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇಂಗ್ಲೆಂಡ್ ಕೊನೆಯ ದಿನ 80 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಪಡೆಯಿತು. ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಇಂಗ್ಲೆಂಡ್‌ನ ಯಶಸ್ವಿ ಬೌಲರ್‌ಗಳಾಗಿ ಗುರುತಿಸಿಕೊಂಡರು.
