ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ (WCL) ಇಂದು (ಜುಲೈ 20) ನಡೆಯಬೇಕಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಪಾಕಿಸ್ತಾನ ವಿರುದ್ಧದ ಈ ಪಂದ್ಯದಿಂದ ಭಾರತೀಯ ಆಟಗಾರರು ಹಿಂದೆ ಸರಿದ ಹಿನ್ನಲೆಯಲ್ಲಿ ಪಂದ್ಡಯ ರದ್ದು ಮಾಡಲಾಗಿದೆ. ಇದಕ್ಕೂ ಮುನ್ನ ಜುಲೈ 19 ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ತಿಳಿಸಿದ್ದರು. ಇತ್ತ ಐವರು ಪ್ರಮುಖ ಆಟಗಾರರು ಪಂದ್ಯದಿಂದ ಹಿಂದೆ ಸರಿದ ಬೆನ್ನಲ್ಲೇ ಇತರೆ ಆಟಗಾರರು ಕೂಡ ಅಲಭ್ಯರಾಗುವ ಸೂಚನೆ ಲಭಿಸಿತ್ತು.
ಇದರ ಬೆನ್ನಲ್ಲೇ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆಯೋಜಕರು ಸಾಮಾಜಿಕ ಮಾಧ್ಯಮದಲ್ಲಿ ಇಂದು ನಡೆಯಲಿರುವ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ನಡುವಣ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಲೀಗ್ನಲ್ಲಿ ನಾವು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇವೆ. ನಮ್ಮ ಏಕೈಕ ಗುರಿ ಅಭಿಮಾನಿಗಳಿಗೆ ಕೆಲವು ಒಳ್ಳೆಯ, ಸಂತೋಷದ ಕ್ಷಣಗಳನ್ನು ನೀಡುವುದಾಗಿದೆ. ಈ ವರ್ಷ ಪಾಕಿಸ್ತಾನ ಹಾಕಿ ತಂಡ ಭಾರತಕ್ಕೆ ಬರಲಿದೆ ಎಂಬ ಸುದ್ದಿಯನ್ನು ಕೇಳಿದ ನಂತರ, ಭಾರತ-ಪಾಕಿಸ್ತಾನ ನಡುವಣ ವಾಲಿಬಾಲ್ ಪಂದ್ಯವನ್ನು ನೋಡಿದ ಬಳಿಕ, WCL ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯವನ್ನು ಮುಂದುವರಿಸಲು ನಾವು ಯೋಚಿಸಿದ್ದೆವು.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಈ ಮೂಲಕ ಪ್ರಪಂಚದಾದ್ಯಂತದ ಜನರಿಗೆ ಕೆಲವು ಸಂತೋಷಕರ ನೆನಪುಗಳನ್ನು ಸೃಷ್ಟಿಸಲು ಬಯಸಿದ್ದೆವು. ಆದರೆ ಬಹುಶಃ ಈ ಪ್ರಕ್ರಿಯೆಯಲ್ಲಿ, ನಾವು ಅನೇಕರ ಭಾವನೆಗಳನ್ನು ನೋಯಿಸಿದ್ದೇವೆ ಮತ್ತು ಕೆಲವರ ಭಾವನೆಗಳನ್ನು ಕಲಕಿದ್ದೇವೆ. ಹೀಗಾಗಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ನಡುವಣ ಪಂದ್ಯವನ್ನು ರದ್ದು ಮಾಡಲು ನಿರ್ಧರಿಸಿದ್ದೇವೆ ಎಂದು ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಆಯೋಜಕರು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಅನೇಕರು ಪಾಕಿಸ್ತಾನ ವಿರುದ್ಧ ಭಾರತೀಯರು ಯಾವುದೇ ಪಂದ್ಯವಾಡಬಾರದು ಸಾಮಾಜಿಕ ಮಾಧ್ಯಮದಲ್ಲಿ ಆಗ್ರಹಿಸಿದ್ದರು.
ಈ ಬಗ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುರೇಶ್ ರೈನಾ, ಶಿಖರ್ ಧವನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲು ನಿರಾಕರಿಸಿದ್ದರು. ಇದೀಗ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿರುವ ಆಟಗಾರರು ಕೂಡ ಪಾಕ್ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪಾಕಿಸ್ತಾನ ಚಾಂಪಿಯನ್ಸ್ ಹಾಗೂ ಇಂಡಿಯಾ ಚಾಂಪಿಯನ್ಸ್ ನಡುವಣ ಪಂದ್ಯವನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ.