ಭಾರತ ಕ್ರಿಕೆಟ್ ತಂಡದ ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ಭಾನುವಾರ ಆಡಲಿರುವ ಮೂರನೇ ಏಕದಿನ ಪಂದ್ಯವೇ ಅವರ ಪಾಲಿನ ಕೊನೆಯ ಪಂದ್ಯವಾಗಲಿದೆ ಎಂಬ ವರದಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾರಾಸಗಟಾಗಿ ತಳ್ಳಿಹಾಕಿದೆ.
2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಮುಂಚಿತವಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಆಯ್ಕೆದಾರರು ರೋಹಿತ್ ಅವರನ್ನು ಕೈಬಿಡಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಈ ಬಗ್ಗೆ ರೋಹಿತ್ ಜೊತೆ ಯಾವುದೇ ರೀತಿಯ ಸಂವಹನ ನಡೆದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಟೆಸ್ಟ್ ಮತ್ತು ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿರುವ 39 ವರ್ಷದ ರೋಹಿತ್, ಪ್ರಸ್ತುತ ಕೇವಲ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಈ ವದಂತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಮಾಧ್ಯಮಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಭಾನುವಾರ ಲಾರ್ಡ್ಸ್ನಲ್ಲಿ ನಡೆಯಲಿರುವ ಪಂದ್ಯವೇ ರೋಹಿತ್ ಪಾಲಿನ ಕೊನೆಯ ಪಂದ್ಯ ಎಂಬ ಬಗ್ಗೆ ಮಂಡಳಿಯಾಗಲಿ, ಆಯ್ಕೆ ಸಮಿತಿಯಾಗಲಿ ಅಥವಾ ಆಟಗಾರನ ಜೊತೆಯಾಗಲಿ ಯಾವುದೇ ಚರ್ಚೆ ನಡೆಸಿಲ್ಲ ಎಂಬುದನ್ನು ನಾನು ದೃಢವಾಗಿ ಸ್ಪಷ್ಟಪಡಿಸುತ್ತೇನೆ” ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಭಾರತದ ಏಕದಿನ ತಂಡದಲ್ಲಿ ರೋಹಿತ್ ಅವರ ಸ್ಥಾನವನ್ನು ಸೈಕಿಯಾ ಪುನರುಚ್ಚರಿಸಿದ್ದಾರೆ. “ರೋಹಿತ್ ಭಾರತೀಯ ಏಕದಿನ ತಂಡದ ಕಾಯಂ ಸದಸ್ಯರಾಗಿದ್ದಾರೆ. ಅವರು ತಂಡದ ಯೋಜನೆಯಲ್ಲಿರುವವರೆಗೂ ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಲಾರ್ಡ್ಸ್ ಏಕದಿನ ಪಂದ್ಯವು ಅವರ ಅಂತಿಮ ಪಂದ್ಯವಾಗುವುದಿಲ್ಲ” ಎಂದು ಅವರು ಖಚಿತಪಡಿಸಿದ್ದಾರೆ.
2027ರ ಏಕದಿನ ವಿಶ್ವಕಪ್ ಆಡುವ ತಮ್ಮ ಮಹತ್ವಾಕಾಂಕ್ಷೆಯನ್ನು ರೋಹಿತ್ ಶರ್ಮಾ ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ, ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರ ಬ್ಯಾಟಿಂಗ್ ಫಾರ್ಮ್ ತೀವ್ರ ವಿಮರ್ಶೆಗೆ ಗುರಿಯಾಗಿದೆ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅವರು ಕೇವಲ 11 ಮತ್ತು 26 ರನ್ ಗಳಿಸಿದ್ದಾರೆ.
ಈ ವರ್ಷ ಆಡಿದ ಎಂಟು ಪಂದ್ಯಗಳಲ್ಲಿ ಅವರು 30.12ರ ಸರಾಸರಿಯಲ್ಲಿ ಕೇವಲ 241 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 79 ಆಗಿದೆ. ಕಳೆದ ಒಂದು ದಶಕದಿಂದ ಅವರು ಕಾಯ್ದುಕೊಂಡಿದ್ದ ಗುಣಮಟ್ಟಕ್ಕೆ ಹೋಲಿಸಿದರೆ ಈ ಸಾಧನೆ ತೀರಾ ಕಳಪೆಯಾಗಿದೆ. ಈ ಸಾಧಾರಣ ಅಂಕಿ-ಅಂಶಗಳೇ ಮುಂದಿನ ವಿಶ್ವಕಪ್ ದೃಷ್ಟಿಯಿಂದ ಅವರ ಭವಿಷ್ಯದ ಬಗ್ಗೆ ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿದ್ದವು.




