ಏಷ್ಯಾ ಕಪ್ | ಟೀಮ್ ಇಂಡಿಯಾ ಅವಮಾನಿಸಿದ್ದು ನಮ್ಮನ್ನಲ್ಲ, ಕ್ರೀಡೆಯನ್ನು: ಪಾಕ್ ನಾಯಕ ಸಲ್ಮಾನ್ ಅಲಿ

Date:

Advertisements

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ 2025ನೇ ಸಾಲಿನ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕವಾಗಿ ಗೆದ್ದು, 9ನೇ ಬಾರಿಗೆ ಭಾರತ ತಂಡವು ಚಾಂಪಿಯನ್ ಆಗಿತ್ತು. ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಹಲವು ನಾಟಕೀಯ ಬೆಳವಣಿಗೆಗಳು ಮೈದಾನದಲ್ಲಿ ನಡೆದವು.

ನಾಯಕ ಸೂರ್ಯಕುಮಾ‌ರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಏಷ್ಯಾ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಪರಿಣಾಮ, ಸಮಾರಂಭವನ್ನು ಅರ್ಧದಲ್ಲಿ ಸ್ಥಗಿತಗೊಳಿಸಲಾಯಿತು.

ಟ್ರೋಫಿ ಹಸ್ತಾಂತರಕ್ಕಾಗಿ ವೇದಿಕೆ ಸಿದ್ಧವಾಗಿದ್ದರೂ, ನಖ್ವಿಯವರು ಸ್ವತಃ ಟ್ರೋಫಿ ನೀಡಬೇಕು ಎಂದು ಹಠ ಹಿಡಿದ ಕಾರಣ ಸಮಾರಂಭವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಭಾರತೀಯ ತಂಡವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿ ಪಡೆಯಲು ಸಿದ್ಧವಾಗಿದ್ದರೂ, ಮೊಹ್ಸಿನ್ ಅವರು ತಾನೇ ನೀಡುತ್ತೇನೆ ಎಂದು ಹಠ ಹಿಡಿದ ಪರಿಣಾಮ, ಟೀಮ್ ಇಂಡಿಯಾಗೆ ಟ್ರೋಫಿ ವಿತರಣೆ ನಡೆಯದೇ, ಆಟಗಾರರು ಕೇವಲ ವೈಯಕ್ತಿಕ ಪ್ರಶಸ್ತಿಗಳನ್ನು ಸ್ವೀಕರಿಸಿ ಮೈದಾನ ತೊರೆದರು.

ತಮ್ಮಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿದ ಬೆನ್ನಲ್ಲೇ ವೇದಿಕೆಯಿಂದ ಹೊರನಡೆದ ನಖ್ವಿ, ಟ್ರೋಫಿಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ.

ಆ ಬಳಿಕ ಟೀಮ್ ಇಂಡಿಯಾ ಟ್ರೋಫಿ ಸ್ವೀಕರಿಸಿದಂತೆ ಅಣಕು ಪ್ರದರ್ಶನ ಮಾಡಿ, ಟ್ರೋಫಿ ಇಲ್ಲದೆಯೇ ಸಂಭ್ರಮಾಚರಣೆ ನಡೆಸಿ, ಗ್ರೂಪ್ ಫೋಟೋಗೆ ಪೋಸ್ ನೀಡಿದ್ದರು. ಅದಕ್ಕಿಂತಲೂ ಮುಂಚೆ, ಪಂದ್ಯವನ್ನು ಗೆದ್ದ ನಂತರ No Hand Shake Policyಯನ್ನು ಟೀಮ್ ಇಂಡಿಯಾ ಮುಂದುವರಿಸಿತ್ತು.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಫೈನಲ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ, “ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾ ನಡೆದುಕೊಂಡ‌ ನಡೆ ಒಳ್ಳೆಯ ಬೆಳವಣಿಗೆ ಅಲ್ಲ. ಅವರು ಪಾಕಿಸ್ತಾನ‌ ತಂಡವನ್ನು ಅವಮಾನಿಸಲು ಈ ರೀತಿಯಲ್ಲಿ ನಡೆದುಕೊಂಡಿರಬಹುದು. ಆದರೆ, ಅವರು ನಮ್ಮನ್ನಲ್ಲ, ಅವಮಾನಿಸಿರುವುದು ಕ್ರಿಕೆಟ್ ಮತ್ತು ಕ್ರೀಡಾ ಕ್ಷೇತ್ರವನ್ನು. ಕ್ರಿಕೆಟ್ ಅನ್ನು ಅರ್ಥಮಾಡಿಕೊಂಡವರು ಕ್ರಿಕೆಟ್ ಭಾಷೆಯಲ್ಲೇ ಮಾತನಾಡುತ್ತಿದ್ದರು. ಬಾಕಿ ವಿಚಾರಗಳು ಎರಡನೇ ವಿಚಾರ” ಎಂದು ಬೇಸರ ಹೊರಹಾಕಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಾಕ್ ನಾಯಕ ಸಲ್ಮಾನ್, “ನಾನು ಕೇವಲ ಪಾಕಿಸ್ತಾನ ತಂಡದ ನಾಯಕನಲ್ಲ, ನಾನು ಕ್ರಿಕೆಟ್ ಅಭಿಮಾನಿ ಕೂಡ. ಭಾರತ ಅಥವಾ ಪಾಕಿಸ್ತಾನದಲ್ಲಿ ಒಂದು ಮಗು ಏಷ್ಯಾ ಕಪ್ ಟೂರ್ನಿಯನ್ನು ನೋಡುತ್ತಿದ್ದರೆ, ನಾವು ಅವರಿಗೆ ಒಳ್ಳೆಯ ಸಂದೇಶವನ್ನು ಕಳುಹಿಸುತ್ತಿಲ್ಲ ಎಂದು ನನಗನಿಸುತ್ತಿದೆ. ಜನರು ನಮ್ಮನ್ನು ಮಾದರಿ ವ್ಯಕ್ತಿಗಳೆಂದು ಭಾವಿಸುತ್ತಾರೆ, ಆದರೆ ನಾವು ಈ ರೀತಿ ವರ್ತಿಸುತ್ತಿದ್ದರೆ, ನಾವು ಅವರಿಗೆ ಸ್ಫೂರ್ತಿ ನೀಡುತ್ತಿಲ್ಲ. ಏನೆಲ್ಲಾ ನಡೆದು ಹೋಯಿತು ಎಂಬುದನ್ನು ನನ್ನಲ್ಲಿ ಕೇಳಬಾರದಿತ್ತು. ಅದರ ಬದಲು, ಈ ಎಲ್ಲ‌ ಬೆಳವಣಿಗೆಗೆ ಕಾರಣರಾದ ಟೀಮ್ ಇಂಡಿಯಾದವರನ್ನು ನೀವು ಕೇಳಬೇಕು” ಎಂದು ಹೇಳಿದರು.

“ಖಾಸಗಿಯಾಗಿ ಭೇಟಿಯಾದಾಗ ಟೀಮ್ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ ನನಗೆ ಹಸ್ತಲಾಘವ ಮಾಡಿದ್ದರು. ಆದರೆ, ಅದನ್ನು ಮೈದಾನದಲ್ಲಿ ಅನುಸರಿಸಲು ನಿರಾಕರಿಸಿದ್ದಾರೆ. ಕ್ಯಾಮೆರಾಗಳು ಇರುವ ಕಾರಣಕ್ಕಾಗಿ ಅವರು ನೋ ಶೇಕ್ ಹ್ಯಾಂಡ್ ಪಾಲಿಸಿ ಅನುಸರಿಸಿರಬಹುದು” ಎಂದು ಸಲ್ಮಾನ್ ಅಲಿ ಆಘಾ ತಿಳಿಸಿದ್ದಾರೆ.

“ಮೈದಾನದಲ್ಲಿ ನೋ ಶೇಕ್ ಹ್ಯಾಂಡ್ ಪಾಲಿಸಿ ಅನುಸರಿಸುವ ಮೂಲಕ ಟೀಮ್ ಇಂಡಿಯಾ ನಮಗೆ ಅವಮಾನಿಸಿದ್ದಾರೆ ಎಂದು ತಿಳಿದಿರಬಹುದು‌. ಆದರೆ ಅವರು ಕ್ರಿಕೆಟ್ ಅನ್ನು ಅವಮಾನಿಸಿದ್ದಾರೆ ಎಂದು ಕ್ರೀಡಾಭಿಮಾನಿಗಳಿಗೆ ತಿಳಿದಿದೆ. ಹಸ್ತಲಾಘವ ಮಾಡದಂತೆ ಅವರಿಗೆ ನಿರ್ದೇಶನ ನೀಡಿರಬಹುದು‌.‌ ಕ್ರೀಡಾ ಸ್ಫೂರ್ತಿ ಇರುವ ಯಾವುದೇ
ಒಂದು ಉತ್ತಮ ತಂಡವು ಇಂಥದ್ದನ್ನು ಅನುಸರಿಸುವುದಿಲ್ಲ” ಎಂದು ಪಾಕ್ ನಾಯಕ‌ ಟೀಮ್ ಇಂಡಿಯಾ ನಡೆಯನ್ನು ಟೀಕಿಸಿದರು.

“ಒಳ್ಳೆಯ ತಂಡವು ಟೀಮ್ ಇಂಡಿಯಾ ಮಾಡಿದ್ದನ್ನು ಮಾಡುವುದಿಲ್ಲ. ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಾವು ಟ್ರೋಫಿಯೊಂದಿಗೆ ನಾವೇ ಪೋಸ್ ನೀಡಲು ಹೋದೆವು. ನಾವು ಅಲ್ಲಿ ನಿಂತು ನಮ್ಮ ಪದಕಗಳನ್ನು ತೆಗೆದುಕೊಂಡೆವು. ಈ ಬಗ್ಗೆ ನಾನು ಕಠಿಣ ಪದಗಳನ್ನು ಬಳಸಲು ಬಯಸುವುದಿಲ್ಲ, ಆದರೆ ಅವರು ತುಂಬಾ ಅಗೌರವದಿಂದ ವರ್ತಿಸಿದ್ದಾರೆ.‌ ಮೊದಲ ಬಾರಿಗೆ ಈ ರೀತಿಯ ಬೆಳವಣಿಗೆ ಆಗುವುದನ್ನು ನೋಡಿದ್ದೇನೆ. ಏಷ್ಯಾ ಕಪ್ ಟೂರ್ನಿಯಲ್ಲಿ ಈವರೆಗೆ ಏನೆಲ್ಲಾ ನಡೆಯಿತೋ, ಅದು ತುಂಬಾ ಕೆಟ್ಟದಾದ ಬೆಳವಣಿಗೆ‌. ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಸರಿಯಾದ ಸಂದೇಶವನ್ನು ಕಳುಹಿಸಲು ಟೀಮ್ ಇಂಡಿಯಾ ವಿಫಲವಾಗಿದೆ” ಎಂದು ಪಾಕಿಸ್ತಾನ ನಾಯಕ ಭಾರತದ ನಡೆಯನ್ನು ದೂಷಿಸಿದರು.

ಪಾಕಿಸ್ತಾನ ಕ್ರಿಕೆಟ್ ತಂಡವು ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಪಾಕಿಸ್ತಾನದ ನಾಗರಿಕರಿಗೆ ಪಂದ್ಯದ ಶುಲ್ಕವನ್ನು ದೇಣಿಗೆ ನೀಡುವುದಾಗಿ ತಿಳಿಸುತ್ತಾ, ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಪತ್ರಿಕಾಗೋಷ್ಠಿಯನ್ನು ಮುಕ್ತಾಯಗೊಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Asia CUP2025 | ‘ಸೂಪರ್ ಓವರ್’ ಪಂದ್ಯದಲ್ಲಿ ಲಂಕಾ ಮಣಿಸಿ, ಫೈನಲ್‌ಗೆ ಭಾರತ ಲಗ್ಗೆ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್‌ ಕ್ರಿಕೆಟ್‌...

ಭಾರತ – ವೆಸ್ಟ್ ಇಂಡೀಸ್ ಟೆಸ್ಟ್ | ಬಿಸಿಸಿಐಯಿಂದ 15 ಸದಸ್ಯರ ತಂಡ ಘೋಷಣೆ

ಏಷ್ಯಾಕಪ್ ಮುಕ್ತಾಯವಾಗುತ್ತಿದ್ದಂತೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡು ಪಂದ್ಯಗಳ...

Download Eedina App Android / iOS

X