ಟೀಂ ಇಂಡಿಯಾ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್, ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಸಮಿತ್ ಹಿಂದಿನ ಟಿ20 ಪಂದ್ಯಾವಳಿಯಲ್ಲಿ ಆಡಿದ್ದರು. ಆದರೆ ಈ ಬಾರಿ ಯಾವುದೇ ತಂಡವೂ ಅವರನ್ನು ಖರೀದಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
ಸಮಿತ್ ದ್ರಾವಿಡ್ ಅವರು ಕರ್ನಾಟಕದ ಪರವಾಗಿ ಜೂನಿಯರ್ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ. 2024 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತದ ಅಂಡರ್19 ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಗಾಯದ ಕಾರಣದಿಂದಾಗಿ ಅವರು ಆ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಅವರು ಮೈಸೂರು ವಾರಿಯರ್ಸ್ ತಂಡದಲ್ಲಿದ್ದರು. ಆದರೆ, ಆ ಆವೃತ್ತಿಯಲ್ಲಿ ಕೇವಲ 82 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅವರು ಬೌಲಿಂಗ್ ಮಾಡಲಿಲ್ಲ.
ಕಳೆದ ವರ್ಷ ಪ್ರತಿಷ್ಠಿತ ಕೊಚ್ ಬೆಹಾರ್ ಟ್ರೋಫಿಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ಕಾಣಿಸಿಕೊಂಡಿದ್ದ ಸಮಿತ್ ಅವರು ಫೈನಲ್ ನಲ್ಲಿ ಮುಂಬೈ ವಿರುದ್ಧ ಎರಡು ವಿಕೆಟ್ ಪಡೆದು ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಒಟ್ಟಾರೆ ಟೂರ್ನಿಯಲ್ಲಿ 8 ಪಂದ್ಯಗಳಿಂದ 362 ರನ್ ಹಾಗೂ 16 ವಿಕೆಟ್ ಪಡೆದು ಮಿಂಚಿದ್ದರು. ಎರಡು ವರ್ಷಗಳ ಹಿಂದೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ಅವರ ಪತ್ನಿ ವಿಜೇತಾ ಅವರು ಮೈಸೂರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಪುತ್ರನ ಆಟವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.
ಹೆಚ್ಚು ಬೆಲೆ ಮಾರಾಟವಾದ ದೇವದತ್ ಪಡೀಕಲ್
ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಹರಾಜಿನ ನಾಲ್ಕನೇ ಆವೃತ್ತಿಯಲ್ಲಿ ರಾಜ್ಯದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾಗಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ಇವರನ್ನು 13.20 ಲಕ್ಷ ರೂಪಾಯಿಗೆ ಖರೀದಿಸಿದೆ. ಅಭಿನವ್ ಮನೋಹರ್ ಮತ್ತು ಮನೀಶ್ ಪಾಂಡೆ ನಂತರದ ಸ್ಥಾನದಲ್ಲಿದ್ದು, 12.20 ಲಕ್ಷಕ್ಕೆ ಇವರನ್ನು ಕ್ರಮವಾಗಿ ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ಖರೀದಿಸಿದ್ದಾರೆ.
ಬೌಲರ್ ಗಳ ಪೈಕಿ ಶಿವಮೊಗ್ಗ ಲಯನ್ಸ್ ತಂಡ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರನ್ನು 10.80 ಲಕ್ಷ ರೂಪಾಯಿಗೆ ಖರೀದಿಸಿದ್ದರೆ, ಬೆಂಗಳೂರು ಬ್ಲಾಸ್ಟರ್ಸ್ ವಿದ್ಯಾಧರ ಪಾಟೀಲ್ ಅವರನ್ನು 8.30 ಲಕ್ಷ ರೂಪಾಯಿಗೆ ಖರೀದಿಸಿದೆ ಎಂದು ಕೆಎಸ್‍ಸಿಎ ಪ್ರಕಟಣೆ ಹೇಳಿದೆ.
ಇದನ್ನು ಓದಿದ್ದೀರಾ? Wimbledon 2025: 23 ವರ್ಷದ ಯಾನಿಕ್ ಸಿನರ್ ಚೊಚ್ಚಲ ವಿಂಬಲ್ಡನ್ ಚಾಂಪಿಯನ್
ಕಿರಿಯ ಆಟಗಾರರಿಗಾಗಿ ಇರುವ ಸಿ ವರ್ಗದಲ್ಲಿ ಹರಾಜಿಗೆ ಇದ್ದ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಮಾರಾಟವಾದ ಆಟಗಾರರ ಅಂತಿಮ ಪಟ್ಟಿಯಲ್ಲಿ ಸೇರಿಲ್ಲ.
ಮೈಸೂರು ವಾರಿಯರ್ಸ್ ಕೆ.ಗೌತಮ್ ಅವರನ್ನು 4.40 ಲಕ್ಷಕ್ಕೆ ಖರೀದಿಸುವ ಮೂಲಕ ಆಲ್‍ರೌಂಡರ್ ಗಳಿಗೆ ಆಸಕ್ತಿ ತೋರಿದೆ. ಯಶೋಧರನ್ ಪರಂತಪ 2 ಲಕ್ಷ ರೂಪಾಯಿಗೆ ಮೈಸೂರು ಪಾಲಾಗಿದ್ದಾರೆ.
ಕಳೆದ ವರ್ಷ ಅತಿಹೆಚ್ಚು ವಿಕೆಟ್ ಪಡೆದ ಕಮಾರ್ ಅವರನ್ನು 1.50 ಲಕ್ಷ ರೂಪಾಯಿಗೆ ಮೈಸೂರು ಸೇರಿಸಿಕೊಂಡಿದ್ದು, ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ 4.70 ಲಕ್ಷ, ವೇಗಿ ವೆಂಕಟೇಶ್ ಎಂ 2 ಲಕ್ಷ, ಗೌತಮ್ ಮಿಶ್ರಾ 2.25 ಲಕ್ಷ ಪಡೆದು ಮೈಸೂರು ವಾರಿಯರ್ಸ್ ತಂಡ ಸೇರಿದ್ದಾರೆ. ಭರವಸೆಯ ವಿಕೆಟ್ ಕೀಪರ್ ಹರ್ಷಿಲ್ ಧರ್ಮಣಿಯವರನ್ನು 3.20 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ.
