ಜಪಾನ್ ಓಪನ್ ಟೂರ್ನಿಯಲ್ಲಿ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಅತ್ಯಂತ ರೋಮಾಂಚಕ ಫೈನಲ್ ಪಂದ್ಯದಲ್ಲಿ, ಸ್ಥಳೀಯ ಆಟಗಾರ್ತಿ, ಮೂರು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ವಿರುದ್ಧ ಸಿಂಧು ಭರ್ಜರಿ ಜಯ ಸಾಧಿಸಿದ್ದು, ತಮ್ಮ ಚೊಚ್ಚಲ ಜಪಾನ್ ಓಪನ್ (ಸೂಪರ್ 750) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಜಪಾನ್ ಓಪನ್ ಇತಿಹಾಸದಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಇತಿಹಾಸ ಬರೆದಿದ್ದಾರೆ.
ಟೋಕಿಯೋದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ 31 ವರ್ಷದ ಸಿಂಧು ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ್ದಾರೆ. ಎರಡು ನೇರ ಆಟದಲ್ಲಿ 21-17, 21-17 ಅಂತರದಿಂದ ಎದುರಾಳಿ ಯಮಗುಚಿ ಅವರನ್ನು ಸಿಂಧು ಮಣಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಎದುರಿಸುತ್ತಿದ್ದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದ್ದಾರೆ.
2019ರ ವಿಶ್ವ ಚಾಂಪಿಯನ್ಶಿಪ್ ಜಯಿಸಿದ ನಂತರ ಸಿಂಧು ಸಾಧಿಸಿದ ಅತ್ಯಂತ ದೊಡ್ಡ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಅವರು 2024ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಯಮಗುಚಿ ಅವರಿಗೆ ಇದು ಆರನೇ ಜಪಾನ್ ಓಪನ್ ಫೈನಲ್ ಪಂದ್ಯವಾಗಿದ್ದರೆ, ಸಿಂಧು ಕಳೆದ ನಾಲ್ಕು ವರ್ಷಗಳಲ್ಲಿ ಯಮಗುಚಿ ವಿರುದ್ಧ ಪೂರ್ಣ ಪ್ರಮಾಣದ ಪಂದ್ಯದಲ್ಲಿ ಗೆಲುವು ಸಾಧಿಸಿರಲಿಲ್ಲ. ಆದರೆ, ಭಾನುವಾರದ ಪಂದ್ಯದಲ್ಲಿ ಸಿಂಧು ತಮ್ಮ ಶಿಸ್ತು ಮತ್ತು ಅತ್ಯುತ್ತಮ ನೆಟ್ ಪ್ಲೇ ಮೂಲಕ ಪಂದ್ಯದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ ಗೇಮ್ನ ಆರಂಭದಲ್ಲಿ ಸಿಂಧು 3-0 ಮುನ್ನಡೆ ಸಾಧಿಸಿದರಾದರೂ, ಯಮಗುಚಿ ತಕ್ಷಣವೇ ತಿರುಗೇಟು ನೀಡಿ 3-3 ಸಮಬಲ ಸಾಧಿಸಿದ್ದರು. ಒಂದು ಹಂತದಲ್ಲಿ ಯಮಗುಚಿ 11-9ರ ಮುನ್ನಡೆಯಲ್ಲಿದ್ದರು. ಆದರೆ, ಬ್ರೇಕ್ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ ಸಿಂಧು 36 ಶಾರ್ಟ್ಗಳ 11-11ರ ಸಮಬಲ ಸಾಧಿಸಿದರು. ನಂತರದ 38 ಶಾರ್ಟ್ಗಳ ತೀವ್ರ ಹೋರಾಟದ ಬಳಿಕ 19-17 ಮುನ್ನಡೆ ಪಡೆದ ಸಿಂಧು, ಅಂತಿಮವಾಗಿ ಯಮಗುಚಿ ಅವರ ಬ್ಯಾಕ್ಹ್ಯಾಂಡ್ ಮೂಲೆಗೆ ಪ್ರಬಲ ಪುಶ್ ನೀಡುವ ಮೂಲಕ ಮೊದಲ ಗೇಮ್ ಅನ್ನು 21-17 ರಿಂದ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್ನಲ್ಲೂ ಇದೇ ವೇಗವನ್ನು ಕಾಯ್ದುಕೊಂಡ ಸಿಂಧು, ಸುದೀರ್ಘ 44 ಶಾರ್ಟ್ಗಳೊಂದಿಗೆ ಜಪಾನಿ ಆಟಗಾರ್ತಿಯನ್ನು ದಣಿಸಿ ಸತತ 6 ಅಂಕಗಳನ್ನು ಗಳಿಸಿ, 8-3ರ ಬೃಹತ್ ಮುನ್ನಡೆ ಸಾಧಿಸಿದರು. ಮಧ್ಯದಲ್ಲಿ ಯಮಗುಚಿ ಪಂದ್ಯಕ್ಕೆ ಮರಳಲು ಯತ್ನಿಸಿ ಅಂತರವನ್ನು 14-12ಕ್ಕೆ ತಗ್ಗಿಸಿದರು. ಆದರೂ, ಸಿಂಧು ತಮ್ಮ ತೀಕ್ಷ್ಣವಾದ ಕ್ರಾಸ್-ಕೋಲರ್ ಸ್ಮ್ಯಾಶ್ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಪಂದ್ಯದ ಕೊನೆಯ ಕ್ಷಣದಲ್ಲಿ ಯಮಗುಚಿ ಬಾರಿಸಿದ ಶಟಲ್, ಕೋರ್ಟ್ನಿಂದ ಹೊರಗೆ ಬೀಳುತ್ತಿದ್ದಂತೆ ವಿಡಿಯೋ ರಿವ್ಯೂ ಮೂಲಕ ಸಿಂಧು ಅವರ ವಿಜಯೋತ್ಸವ ಅಧಿಕೃತಗೊಂಡಿತು.




