ಏಷ್ಯಾಕಪ್ ಜಯಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಕೊನೆಗೆ ಇಡೀ ಟೂರ್ನಿಯ ಸಂಭಾವನೆಯನ್ನು ಭಾರತೀಯ ಸೇನೆಗೆ ಸಮರ್ಪಿಸುವುದಾಗಿ ಘೋಷಿಸಿದರು. ಜತೆಗೆ ಚಾಂಪಿಯನ್ನರ ಟ್ರೋಫಿ ಹಸ್ತಾಂತರಿಸಲು ನಿರಾಕರಿಸಿದ ಏಷ್ಯನ್ ಕ್ರಿಕೆಟ್ ಮಂಡಳಿಯ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ನಾನು ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಚಾಂಪಿಯನ್ ತಂಡಕ್ಕೆ ಟ್ರೋಫಿ ನಿರಾಕರಿಸಿದ್ದನ್ನು ಎಲ್ಲೂ ನೋಡಿರಲು ಸಾಧ್ಯವಿಲ್ಲ. ಅದು ಕೂಡಾ ಕಷ್ಟಪಟ್ಟು ಜಯಿಸಿದ್ದನ್ನು” ಎಂದು ಎಸ್ಕೆವೈ ಪಂದ್ಯದ ಬಳಿಕ ನುಡಿದರು. ಇಡೀ ಟೂರ್ನಿಯಲ್ಲಿ ಅಜೇಯ ಅಭಿಯಾನ ಮುಂದುವರಿಸಿದ ಭಾರತ, ಪಾಕಿಸ್ತಾನವನ್ನು ಟೂರ್ನಿಯಲ್ಲಿ ಮೂರು ಬಾರಿ ಸೋಲಿಸಿದೆ. ಆದರೆ ಭಾರತದ ಈ ಸಂಭ್ರಮಾಚರಣೆಯ ನಡುವೆ ಟ್ರೋಫಿ ಪ್ರದಾನ ಇರಲಿಲ್ಲ.
ನನ್ನ ಮಟ್ಟಿಗೆ ನಿಜವಾದ ಟ್ರೋಫಿಗಳು ಡ್ರೆಸ್ಸಿಂಗ್ ರೂಂನಲ್ಲಿವೆ. ನನ್ನ 14 ಮಂದಿ ಸಹ ಆಟಗಾರರು ಹಾಗೂ ಬೆಂಬಲ ಸಿಬ್ಬಂದಿ. ಅವರ ಕಾರಣದಿಂದ ನಾವು ಪ್ರಶಸ್ತಿ ಗೆದ್ದಿದ್ದೇವೆ. ಆದಾಗ್ಯೂ ಕಷ್ಟಪಟ್ಟು ಟೂರ್ನಿ ಜಯಿಸಿದರೂ ಟ್ರೋಫಿ ಪಡೆಯದೇ ಇರುವುದನ್ನು ನಾನು ಎಂದೂ ನೊಡಿಲ್ಲ” ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಏಪ್ಯಾ ಕಪ್ ಫೈನಲ್ : ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ರೋಚಕ ಜಯ; 9ನೇ ಬಾರಿ ಚಾಂಪಿಯನ್
ಆದರೆ ಇದರಿಂದ ತಮ್ಮ ನಾಯಕತ್ವದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಟ್ರೋಫಿ ಜಯಿಸುವುದು ಕಷ್ಟವಾಗಲಿಲ್ಲ. ಹುಡುಗರು ಬಹಳಷ್ಟು ಶ್ರಮ ವಹಿಸಿದರು. ಟೂರ್ನಿಯ ಸಾಧನೆ ಬಗ್ಗೆ ಎಲ್ಲರಿಗೂ ಸಂತಸವಿದೆ” ಎಂದು ಬಣ್ಣಿಸಿದರು.
“ಆರಂಭದಿಂದಲೇ ಮೈದಾನದಲ್ಲಿ ಕ್ರಿಕೆಟ್ ಬಗ್ಗೆ ಮಾತ್ರ ಗಮನ ಹರಿಸಿ ಎಂದು ಹೇಳಿದ್ದೆ. ಅಭ್ಯಾಸದ ವೇಳೆ ನಾವು ಏನು ಮಾಡಬೇಕೋ ಅದನ್ನು ಆಸ್ವಾದಿಸೋಣ ಮತ್ತು ಅದನ್ನು ಪಂದ್ಯದಲ್ಲೂ ಮಾಡಬೇಕು” ಎಂದರು.
