ತಾತನೇ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ತಾತನೇ ಮೊಮ್ಮಗಳ ಮೇಲೆ ಅತ್ಯಾಚಾರದ ಹೇಯ ಕೃತ್ಯವೆಸಗಿದ್ದಾನೆ. ಅಲ್ಲದೇ, ಈ ಬಗ್ಗೆ ಯಾರಿಗೂ ಹೇಳದಂತೆ ಸೊಸೆ ಮತ್ತು ಮಗನಿಗೆ ಆಸ್ತಿ, ಮನೆ, ಹಣದ ಆಮಿಷವೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಗುವಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ, ಆರೋಪಿ ತಾತ ಮನೆಯಿಂದ ಪರಾರಿಯಾಗಿದ್ದಾನೆ. ಈತ ಪರಾರಿಯಾಗಲು ಸಂತ್ರಸ್ತ ಬಾಲಕಿಯ ತಂದೆ ಸಹಕಾರ ನೀಡಿದ್ದಾನೆ ಎನ್ನಲಾಗಿದೆ.
ಈ ಕುಟುಂಬದವರು ಮೂಲತಃ ತಮಿಳುನಾಡಿನವರಾಗಿದ್ದು, ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ನೆಲೆಸಿದ್ದರು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಏಳು ದಿನ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಅತ್ಯಾಚಾರಕ್ಕೆ ಒಳಗಾದ ವಿಚಾರದ ಬಗ್ಗೆ ದೂರು ನೀಡದೇ ಮುಚ್ಚಿಟ್ಟಿದ್ದ ಹಾಗೂ ಆರೋಪಿ ಪರಾರಿಯಾಗಲು ಸಹಕಾರ ನೀಡಿದ್ದ ಸಂತ್ರಸ್ತ ಬಾಲಕಿಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಬಾಲಕಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೃತ್ಯ ಸಂಬಂಧ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.