ದಾದಾಜಿ ಖೋಬ್ರಗಡೆ: ಭತ್ತದ ಜೊತೆಗೆ ಬದುಕಿದ ಸಾಮಾಜಿಕ ಸಂತ

Date:

Advertisements
ಶೈಕ್ಷಣಿಕ ಅಧ್ಯಯನ, ತರಬೇತಿ, ಹಲವಾರು ಸೌಲಭ್ಯಗಳನ್ನು ಬಳಸಿಕೊಂಡು ಸಂಶೋಧನೆ ಮಾಡುವ ಸಾಂಪ್ರದಾಯಿಕ ವಿಜ್ಞಾನಿಯಷ್ಟೇ ಅವಿದ್ಯಾವಂತ ಶ್ರಮಿಕನೊಬ್ಬ ತನ್ನ ಅಪಾರ ದೇಸೀ ಜ್ಞಾನ, ಮೇಧಾವಿತನ ಮತ್ತು ಕೌಶಲ್ಯದಿಂದ ಅದ್ಭುತವನ್ನು ಸಾಧಿಸಬಹುದೆಂಬುದನ್ನು ತೋರಿಸಿದ ಸಾಮಾನ್ಯ ಕೃಷಿಕನ ಅಸಾಮಾನ್ಯ ಕಥೆ. ಅಂಬೇಡ್ಕರ್ ಜಯಂತಿಯ ನೆಪದಲ್ಲಿ, ದಾದಾಜಿ ನೆನಪು...

ಇದು ಭಾರತದ ಅಸಲೀ ವಿಜ್ಞಾನಿಯೊಬ್ಬನ ಸುಖ-ದುಃಖದ ಕತೆ. ಮಣ್ಣು, ಗಾಳಿ, ನೀರು ಮತ್ತು ಗಿಡಗಳೊಡನೆ ಮಾತುಕತೆಯಾಡುತ್ತಾ ತಾನು ಗಳಿಸಿದ ಅರಿವನ್ನು ಇತರರಿಗೂ ಹಂಚುತ್ತಾ, ಪ್ರಸಿದ್ಧಿಯಿಂದ ದೂರವುಳಿದ ಕಾಯಕಯೋಗಿಯೊಬ್ಬನ ಪವಾಡದ ಕತೆ. ತಾನು ಉಳುವ ಗದ್ದೆಯನ್ನೇ ಪಾಠಶಾಲೆ ಮಾಡಿಕೊಂಡು ಪಾಂಡಿತ್ಯ ಗಳಿಸಿದ ಸ್ವಯಮಾಚಾರ್ಯನ ಸಾಧನೆಯ ಕಥೆ. ಶೈಕ್ಷಣಿಕ ಅಧ್ಯಯನ, ತರಬೇತಿ, ಹಲವಾರು ಸೌಲಭ್ಯಗಳನ್ನು ಬಳಸಿಕೊಂಡು ಸಂಶೋಧನೆ ಮಾಡುವ ಸಾಂಪ್ರದಾಯಿಕ ವಿಜ್ಞಾನಿಯಷ್ಟೇ ಅವಿದ್ಯಾವಂತ ಶ್ರಮಿಕನೊಬ್ಬ ತನ್ನ ಅಪಾರ ದೇಸೀ ಜ್ಞಾನ, ಮೇಧಾವಿತನ ಮತ್ತು ಕೌಶಲ್ಯದಿಂದ ಅದ್ಭುತವನ್ನು ಸಾಧಿಸಬಹುದೆಂಬುದನ್ನು ತೋರಿಸಿದ ಸಾಮಾನ್ಯ ಕೃಷಿಕನ ಅಸಾಮಾನ್ಯ ಕಥೆ. ಕರ್ವಾಲೋ ನೆರವಿಲ್ಲದೆಯೇ ವಿಜ್ಞಾನಿಯಾಗಿ ಬೆಳೆದು ಯಶಸ್ವಿಯಾದ ಮಂದಣ್ಣನ ವಿಜಯದ ಕತೆ.

ದಾದಾಜಿ ರಾಮಾಜಿ ಖೋಬ್ರಗಡೆ ಎಂದರೆ ನಮ್ಮ ರಾಜ್ಯದಲ್ಲಿ ನೆನಪಿಗೆ ಬರುವುದು ಕಷ್ಟ. ಆದರೆ ಮಹಾರಾಷ್ಟ್ರ, ಆಂಧ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಢದ ಸಹಸ್ರಾರು ರೈತ ಕುಟುಂಬಗಳ ಅಭಿವೃದ್ಧಿಗೆ ಕಾರಣನಾದ ಸಂತ; ಆಪತ್ತಿಗೆ ಒದಗಿಬಂದ ನೆಂಟ. ಆತ ಅಭಿವೃದ್ಧಿಪಡಿಸಿದ ‘ಎಚ್‌ಎಂಟಿ-ಸೋನಾ’ ಎಂಬ ವಿಶಿಷ್ಟ ಭತ್ತದ ತಳಿಯು ಆ ರಾಜ್ಯಗಳ ಹತ್ತು ಲಕ್ಷ ಎಕರೆಯಲ್ಲಿ ಈಗ ಪ್ರತಿವರ್ಷ ಸಾಗುವಳಿಯಾಗುತ್ತಿದೆ. ಅಲ್ಲಿನ ರೈತರ ಉತ್ಪಾದನೆಯನ್ನು ಹೆಚ್ಚಿಸಿ, ಆರ್ಥಿಕ ಅಭಿವೃದ್ಧಿಗೆ ನೆರವಾದ ಈ ಪವಾಡ ಪುರುಷನ ಹೆಸರು ಆ ರಾಜ್ಯಗಳ ರೈತರ ಭಾವಭಿತ್ತಿಯಲ್ಲಿ ಅಳಿಸಲಾಗದ ಚಿತ್ರವಾಗಿ ಅರಳಿದೆ.

ಈ ವಿಜಯದ ಕತೆಯ ನಾಯಕ ದಾದಾಜಿ ರಾಮಾಜಿ ಖೋಬ್ರಗಡೆ ಅವರು ಹುಟ್ಟಿದ್ದು ಮಹಾರಾಷ್ಟ್ರ ರಾಜ್ಯದ ಚಂದ್ರಾಪುರ ಜಿಲ್ಲೆಯ ನಾಗಭಿಡ್ ತಾಲೂಕಿನ ನಾಂದೇಡ್ ಫಕೀರ್ ಎಂಬ ದಲಿತರೇ ಹೆಚ್ಚು ಸಂಖ್ಯೆಯಲ್ಲಿರುವ ಸಣ್ಣ ಹಳ್ಳಿಯೊಂದರ ಮಹರ್ ಕುಟುಂಬವೊಂದರಲ್ಲಿ. ಒಂದೂವರೆ ಎಕರೆಯಷ್ಟು ಸಣ್ಣ ಹಿಡುವಳಿಯಲ್ಲಿ ಬೇಸಾಯ ಮಾಡುತ್ತಿದ್ದ ಬಡ ಕುಟುಂಬದಲ್ಲಿ 1939ರಲ್ಲಿ ಜನಿಸಿದ ದಾದಾಜಿ ಖೋಬ್ರಗಡೆಯ ತಂದೆಯು ಬಾಬಾ ಸಾಹೇಬ ಅಂಬೇಡ್ಕರ್ ಅವರ ಅನುಯಾಯಿ. ಒಮ್ಮೆ ಎಳೆಯ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಅಂಬೇಡ್ಕರ್ ಅವರು ಭಾಷಣ ಮಾಡುತ್ತಿದ್ದ ಸಭೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಮತ್ತೆಂದೂ ಅವರು ಅಂಬೇಡ್ಕರ್ ಅವರನ್ನು ನೋಡಲಿಲ್ಲ. ಆದರೆ ಬೆಳೆಯುತ್ತಾ ಹೋದಂತೆ ಅಂಬೇಡ್ಕರ್ ಅವರು ದಲಿತ ಜನಾಂಗದಲ್ಲಿ ಆಶಿಸಿದ ಸ್ವಾಭಿಮಾನದಿಂದ ಬದುಕುವ ಮತ್ತು ಸದಾ ಕ್ರಿಯಾಶೀಲರಾಗಿರುವ ಗುಣಗಳನ್ನು ಮೈಗೂಡಿಸಿಕೊಂಡರು. 

ಜಾತಿಭೇದದ ಕಾರಣದಿಂದಾಗಿ ಹಳ್ಳಿಗಳಲ್ಲಿ ಮಹರ್ ಸಮುದಾಯದವರ ಬದುಕು ಅತ್ಯಂತ ಕಷ್ಟಕರವಾಗಿತ್ತು. ತನ್ನ ಹುಟ್ಟೂರಿನಲ್ಲಿ ಒಂದೂವರೆ ಎಕರೆ ಕಾಡಿನಂಚಿನ ಗದ್ದೆಯ ಒಡೆಯನಾಗಿದ್ದ ದಾದಾಜಿ ತಂದೆಯು ಕೃಷಿಯ ಜೊತೆಗೆ ಕೂಲಿಯನ್ನೂ ಮಾಡುತ್ತಿದ್ದರು. ಕಾಡಿನ ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವ ವಿಧಾನದಿಂದ ಹಿಡಿದು ಎಲ್ಲ ಬಗೆಯ ಜೀವನ ಸಂಘರ್ಷದ ಪರಿಚಯ ದಾದಾಜಿಗೆ ಬಾಲ್ಯದಿಂದಲೇ ಪರಿಚಯವಾಯಿತು. ದಾದಾಜಿಯ ತಂದೆಗೆ ಮಗನನ್ನು ವಿದ್ಯಾವಂತನನ್ನಾಗಿ ಮಾಡುವ ಬಯಕೆ. ದಾದಾಜಿಯು ತನ್ನೂರಿನ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ವ್ಯಾಸಂಗ ಮಾಡಿದ. ಮುಂದಿನ ಓದಿಗೆ ಬಹು ದೂರವಿದ್ದ ಶಾಲೆಗಳಿಗೆ ಹೋಗಬೇಕಿತ್ತು. ಆದರೆ ತಂದೆಯ ಸಾವು, ಅನಾರೋಗ್ಯ ಮತ್ತು ಜಾತೀಯತೆಯು ಒಡ್ಡಿದ್ದ ಸಾಮಾಜಿಕ ಅಡ್ಡಿಗಳಿಂದಾಗಿ ಆತನ ಓದು ಅಲ್ಲಿಗೇ ಕೊನೆಯಾಯಿತು, ಆದರೆ ಕಲಿಯುವ ಕುತೂಹಲ ಮುಕ್ಕಾಗಲಿಲ್ಲ. ಊರಿನ ದನಗಳನ್ನು ಕಾಯ್ದು ಹೊಟ್ಟೆ ಹೊರೆದ ಬಾಲಕ ದುಡಿಯುವ ಹಂತ ತಲುಪಿದಾಗ ಅಪ್ಪನ ಗದ್ದೆಯಲ್ಲಿ ಬೇಸಾಯವನ್ನು ಮುಂದುವರೆಸಿದ.

ಇದನ್ನು ಓದಿದ್ದೀರಾ?: ಟ್ಯಾರಿಫ್ ವಾರ್: ಅಮೆರಿಕಾದ ಕುತ್ತಿಗೆಗೇ ಕೈ ಹಾಕಿರುವ ಚೀನಾ, ಮುಂದೇನಾಗಲಿದೆ?

ದಾದಾಜಿ ಬೇಸಾಯ ಮಾಡುವ ವಿಧಾನವನ್ನು ತಂದೆಯನ್ನು ಅನುಸರಿಸಿ ಕಲಿತಿದ್ದರು. ಬೇಸಾಯವನ್ನು ಬಹಳ ಮುತುವರ್ಜಿಯಿಂದ ಮಾಡುತ್ತಿದ್ದ ತಂದೆ ರಾಮಾಜಿಯು ಮುಂದಿನ ಬಿತ್ತನೆಗೆ ಬೀಜದ ಕಾಳುಗಳಿಗಾಗಿ ತೆನೆಯನ್ನು ಆಯ್ಕೆ ಮಾಡುವಾಗ ಕೆಲವು ವಿಧಾನ ಅನುಸರಿಸುತ್ತಿದ್ದರು. ಆ ವರ್ಷ ಗದ್ದೆಯಲ್ಲಿ ಬೆಳೆದು ನಿಂತ ಪೈರುಗಳಲ್ಲಿ ಹೆಚ್ಚು ತೆಂಡೆ ಹೊಡೆದು, ಎತ್ತರಕ್ಕೆ ಬೆಳೆದು, ಹೆಚ್ಚು ಕಾಳು ಕಚ್ಚಿರುವ ನೀಳ ತೆನೆಗಳನ್ನೇ ಬೀಜದ ಕಾಳುಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ತಳಿ ಅಭಿವೃದ್ಧಿಯಲ್ಲಿ ‘ಆಯ್ಕೆ ವಿಧಾನ’ ಎಂದು ಕರೆಸಿಕೊಳ್ಳುವ ಈ ವಿಧಾನವನ್ನೇ ಸಾಮಾನ್ಯವಾಗಿ ಎಲ್ಲ ರೈತರು ಅನುಸರಿಸುತ್ತಾರೆ. ಆದರೆ ಹಿರಿಯ ಖೋಬ್ರಗಡೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಯ್ಕೆ ಮಾಡಿದ ಪೈರಿನ ತೆನೆಗಳಲ್ಲಿ ಒಂದನ್ನು ತೆಗೆದು ಅಂಗೈಯಲ್ಲಿ ಉಜ್ಜಿ ಕಾಳನ್ನ ಬೇರ್ಪಡಿಸಿ ಅದರ ಹೊಟ್ಟಿನ ಮಂದ ಮತ್ತು ಅಕ್ಕಿಯನ್ನು ಅಗಿದು ಅದರ ಗಡುಸಿನ ಗುಣಮಟ್ಟ, ಪರಿಮಳ ಮತ್ತು ಗಾತ್ರವನ್ನು ನೋಡಿ, ಕಡಿಮೆ ಹೊಟ್ಟಿನ, ಸಣ್ಣ ಗಾತ್ರದ, ಹೆಚ್ಚು ಪರಿಮಳವಿರುವ ಕಾಳನ್ನು ಹೊತ್ತ ತೆನೆಯನ್ನು ಆಯ್ದು, ಗುಣಮಟ್ಟ ಖಚಿತಪಡಿಸಿಕೊಂಡು, ಬಿತ್ತನೆ ಬೀಜವನ್ನು ಮತ್ತಷ್ಟು ಪರಿಷ್ಕರಿಸಿಕೊಳ್ಳುತ್ತಿದ್ದರು. ಹಾಗಾಗಿ ಅವರ ಗದ್ದೆಯಲ್ಲಿ ಸಾಮಾನ್ಯವಾಗಿ ಇತರರ ಇಳುವರಿಗಿಂತ ತುಸು ಹೆಚ್ಚೇ ಇರುತ್ತಿತ್ತು. ತಂದೆಯ ಈ ಆಯ್ಕೆ ವಿಧಾನದ ಆಸಕ್ತಿ ಮಗನಲ್ಲೂ ಮುಂದುವರೆಯಿತು.

ಬೇಸಾಯವನ್ನು ಆರಂಭದಿಂದಲೇ ಗಂಭೀರವಾಗಿ ಪರಿಗಣಿಸಿದ ದಾದಾಜಿ ಅವರಿಗೆ ಗದ್ದೆ ಸಂಗಾತಿಯಾಯಿತು. ಗದ್ದೆಗೆ ಹೋಗಲು ದಾದಾಜಿ ಬೆಳಗ್ಗೆ ಬೇಗನೆ ಏಳುತ್ತಿದ್ದರು. ಮಧ್ಯಾಹ್ನದ ಊಟದ ವೇಳೆಗೆ ಮನೆಗೆ ಹಿಂದಿರುಗುತ್ತಿದ್ದರು. ಊಟ ಮುಗಿಸಿ ಮತ್ತೆ ಜಮೀನಿಗೆ ಹೋಗುತ್ತಿದ್ದರು. ಬೇಸಗೆಯ ರಾತ್ರಿಗಳಲ್ಲಿ ಅವರು ತಮ್ಮ ಜಮೀನಿನಲ್ಲೇ ಮಲಗುತ್ತಿದ್ದರು. ನಕ್ಷತ್ರಗಳು ತುಂಬಿದ ರಾತ್ರಿಯ ಆಕಾಶವನ್ನು ನೋಡುತ್ತಾ ತಾರೆಗಳು ಆಕಾಶವೆಂಬ ಗದ್ದೆಯಲ್ಲಿ ಬಿತ್ತಿದ ಭತ್ತದ ಬೀಜಗಳೆಂದು ಕಲ್ಪಿಸಿಕೊಳ್ಳುತ್ತಿದ್ದರು. ಭೂಮಿ ಮತ್ತು ಆಕಾಶದ ಸಂಗದಲ್ಲಿ ಅವರು ಕಲಿಕೆಯನ್ನು ಆರಂಭಿಸಿದರು. ಅದರಿಂದ ಅವರಲ್ಲಿ ಸುರಕ್ಷತೆಯ ಮತ್ತು ನೆಮ್ಮದಿಯ ಭಾವ ಮೂಡಿತು.

Untitled design 25 1 1
ತಾವು ಶೋಧಿಸಿದ ಭತ್ತದ ತಳಿ ತೋರುತ್ತಿರುವ ದಾದಾಜಿ

ಎಲ್ಲ ಸಂಕಷ್ಟಗಳನ್ನು ಮರೆಸುತ್ತಿದ್ದ ಅವರಿಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ನೆನಪಿಟ್ಟುಕೊಳ್ಳುವ ಕೌಶಲ್ಯ ಸಿದ್ಧಿಸಿತ್ತು. ತಮ್ಮೆಲ್ಲ ಸಂಕಟಗಳನ್ನು ಮರೆಸುತ್ತಿದ್ದ ಜಮೀನು ಅವರ ಬದುಕಿನ ದೊಡ್ಡ ಪಾಠಶಾಲೆಯಾಯಿತು. ಅವರು ತಮ್ಮ ಜಮೀನಿನ ಸುತ್ತಲೂ ಇದ್ದ ಮರಗಳಲ್ಲಿ, ಸಸ್ಯಗಳಲ್ಲಿ, ಮಣ್ಣಿನಲ್ಲಿ ಮತ್ತು ಪರಿಸರದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸತೊಡಗಿದರು. ಹಾಗೆ ಗಮನಿಸುತ್ತಾ ಬದುಕು ಉಲ್ಲಾಸಮಯವಾಗಿರುವುದನ್ನು ಅವರು ಸಸ್ಯಗಳನ್ನು ಕಂಡು ಅರಿತರು. ವರ್ಷಗಳ ಕಾಲ ಅವರು ಋತುಮಾನಗಳನ್ನು, ಹವಾಮಾನದಲ್ಲಿನ ಪರಿವರ್ತನೆಗಳನ್ನು ಮತ್ತು ರಸಗೊಬ್ಬರಗಳ ಪರಿಣಾಮಗಳನ್ನು ಗಮನಿಸಿದರು. ಆ ಪರಿವರ್ತನೆಗಳಿಂದ ಬದುಕು ಸಹ ನಿರಂತರವಾಗಿ ಬದಲಾಗುತ್ತಿರುವುದನ್ನು ಕಂಡರು. ಬದಲಾವಣೆಗಳಿಂದ ವಿಚಲಿತಗೊಳ್ಳದೆ ವ್ಯಕ್ತಿ ಬದುಕಿನಲ್ಲಿ ಮುಂದೆ ಸಾಗಬೇಕೆಂಬ ತತ್ವವನ್ನು ತಿಳಿದರು. ತಮ್ಮ ಜಮೀನಿನ ಮಣ್ಣಿನಿಂದ ಅವರು ಜಗತ್ತನ್ನು ಪ್ರೀತಿ ಮತ್ತು ಅನುಕಂಪದಿಂದ ನೋಡುವುದನ್ನು, ಅಲ್ಲಿಗೆ ಹಾರಿಬರುವ ಪಕ್ಷಿಗಳ ಕಲರವದಿಂದ ನಿಸರ್ಗದ ಜೀವಸಂಬಂಧಗಳನ್ನು ಅರಿತು ಬದುಕನ್ನು ಸಹನೀಯವಾಗಿ ಸ್ವೀಕರಿಸುವುದನ್ನು ಕಲಿತರು (ಮೇಲಿನ ಎರಡೂ ಪ್ಯಾರಾಗಳು ಅವರು ಬೇರೆ ಬೇರೆ ಸಂದರ್ಶನಗಳಲ್ಲಿ ತಮ್ಮ ಬದುಕಿನ ದರ್ಶನದ ಬಗ್ಗೆ ಹೇಳಿಕೊಂಡ ಮಾತುಗಳನ್ನು ಆಧರಿಸಿದೆ).

ಹೀಗೆ ತನ್ನ ಜಮೀನಿನಲ್ಲಿ ನೆಲೆಯಾದ ಈ ನೇಗಿಲಯೋಗಿಯು ಒಂದೇ ಮನಸ್ಸಿನಿಂದ ಕೃಷಿಯಲ್ಲಿ ತೊಡಗಿಸಿಕೊಂಡರು. ಸಮಯ ಸಿಕ್ಕಾಗ ಕೂಲಿಗೂ ಹೋಗುತ್ತಿದ್ದರು. ಹುಟ್ಟಿದ ಮಗ ಹರೆಯದಲ್ಲೇ ರೋಗವೊಂದರಿಂದ ನರಳಲು ಆರಂಭಿಸಿದ ಮೇಲೆ ಪತ್ನಿ ಮಗ, ಸೊಸೆ, ಮೂವರು ಮೊಮ್ಮಕ್ಕಳ ಸಂಸಾರದ ಹೊಣೆ ಸಂಪೂರ್ಣ ದಾದಾಜಿಯ ಮೇಲೆ ಬಿತ್ತು. ಸೊಸೆಯ ತವರಿನಿಂದ ಮಗನಿಗೆ ಬಂದ ಮೂರು ಎಕರೆ ಆಸ್ತಿಯಲ್ಲಿ ಆತನ ಚಿಕಿತ್ಸೆಗೆ ಎರಡು ಎಕರೆ ಮಾರಾಟವಾಯ್ತು. ಆದರೂ ಬದುಕನ್ನು ನಿರ್ಭಾವುಕವಾಗಿ ಸ್ವೀಕರಿಸಿದ ದಾದಾಜಿ ಅವರಿಗೆ ಬೇಸಾಯ ನೆಮ್ಮದಿಯನ್ನು ನೀಡುವ ಕಾಯಕವಾಗಿತ್ತು.

ಇದನ್ನು ಓದಿದ್ದೀರಾ?: ಎಂಪುರಾನ್ | ಮುನ್ನಾ ಮತ್ತು ಜೂಡಾಸ್; ಮೋಸದ ನವ ವಿದ್ಯಮಾನಗಳು

ಬಿತ್ತನೆ ಬೀಜದ ಆಯ್ಕೆ ವಿಧಾನದಲ್ಲಿ ದಾದಾಜಿ ಸಾಧಿಸಿದ್ದ ಪರಿಣತಿಯು ಸಾಧನೆಯೊಂದರ ಹಾದಿಯನ್ನು ತೆರೆದದ್ದು 1983ರಲ್ಲಿ. ಜಬಾಲ್ಪುರ ಕೃಷಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿ ಡಾ. ಜೆ.ಪಿ. ಪಟೇಲ್ ಅವರು ಅಭಿವೃದ್ಧಿಪಡಿಸಿದ್ದ, ಹೆಚ್ಚು ಇಳುವರಿ ನೀಡುವ ತಳಿಯೆಂದೇ ಖ್ಯಾತವಾಗಿದ್ದ ‘ಪಟೇಲ್-3’ ಭತ್ತದ ತಳಿಯನ್ನು ಆ ವರ್ಷ ದಾದಾಜಿ ನಾಟಿ ಮಾಡಿದ್ದರು. ಗದ್ದೆಯ ಕೆಲವು ಬಾಗದಲ್ಲಿ ಇತರ ಪೈರುಗಳಿಗಿಂತ ಎತ್ತರಕ್ಕೆ ಬೆಳೆದ ಹಲವು ಭತ್ತದ ಪೈರು ಅವರ ಗಮನ ಸೆಳೆದವು. ಹೆಚ್ಚು ತೆಂಡೆ ಹೊಡೆದಿದ್ದ ಅಂಥ ಪೈರುಗಳನ್ನು ಗಮನಿಸುತ್ತಾ ಹೋದ ಹಾಗೆ ಅವು ಹೊಂಬಣ್ಣದ ಕಾಳುಗಳ ನೀಳವಾದ ತೆನೆಯನ್ನು ಬಿಟ್ಟಿರುವುದನ್ನು ಗಮನಿಸಿದರು. ಬೀಜಗಳು ಬಲಿತಂತೆ ತೆನೆಗಳು ಇತರ ತಳಿಗಳಿಗಿಂತ ಉದ್ದವಾಗಿ ಮತ್ತು ನಯವಾಗಿರುವುದು ಕಂಡುಬಂತು. ಸುಮಾರು ಒಂದು ತಿಂಗಳ ಕಾಲ, ಅವರು ವಿಭಿನ್ನವಾಗಿ ಕಾಣುವ ಭತ್ತದ ತೆನೆಗಳನ್ನು ಪೋಷಿಸಿ ಜಾಗೃತೆಯಿಂದ ನೋಡಿಕೊಂಡರು.

ಆಸಕ್ತಿಯಿಂದ, ಅವರು ಈ ಬೀಜಗಳನ್ನು ಮರುಬಿತ್ತನೆ ಮಾಡುವ ಮೂಲಕ ಪ್ರಯೋಗ ಆರಂಭಿಸಿದರು. ಬೀಜಗಳನ್ನು ಹಂದಿಗಳು ಮತ್ತು ಇತರ ಕಾಡು ಪ್ರಾಣಿಗಳಿಂದ ರಕ್ಷಿಸಲು ಮುಳ್ಳಿನ ಪೊದೆಗಳ ಬೇಲಿಯನ್ನು ಹಾಕಿ ಗದ್ದೆಯ ಮಧ್ಯದಲ್ಲಿ ಪ್ರತ್ಯೇಕವಾಗಿ ಬಿತ್ತಿದರು. ಭತ್ತವನ್ನು ಕೊಯ್ಲು ಮಾಡಿದಾಗ ಅಚ್ಚರಿಯ ಫಲಿತಾಂಶ ಹೊರಬಿತ್ತು. ಹೊಸ ತಳಿಯ ಪ್ರಯೋಗದಿಂದ ಸುಮಾರು ಹತ್ತು ಕೆ.ಜಿ.ಯಷ್ಟು ಬೀಜ ಸಿಕ್ಕಿತ್ತು. ಹೊಸ ತಳಿಯ ಭತ್ತದ ಅಕ್ಕಿಯ ಕಾಳುಗಳು ಸಣ್ಣದಾಗಿ, ಉದ್ದವಾಗಿರುವುದು ಮಾತ್ರವಲ್ಲ, ಬೇಯಿಸಿದಾಗ ಅವು ವಿಶಿಷ್ಟ ಪರಿಮಳವನ್ನು ಬೀರಿ ಸ್ವಾದಿಷ್ಟಕರವಾಗಿದ್ದವು.

ಅದೇ ಮೂಲಬೀಜವನ್ನು ಬಳಸಿ ಮುಂದಿನ ವರ್ಷ ಅವರು ಬೀಜಗಳನ್ನು ಪ್ರತ್ಯೇಕವಾಗಿ ಹೆಚ್ಚಿನ ಜಾಗದಲ್ಲಿ ಬೆಳೆಸಿದರು. ಪೈರುಗಳು ಚೆನ್ನಾಗಿ ಬೆಳೆದು ಇಳುವರಿಯೂ ಅಧಿಕವಾಗಿರುವುದನ್ನು ಖಚಿತಪಡಿಸಿಕೊಂಡರು. ಭತ್ತವನ್ನು ಅಕ್ಕಿ ಮಾಡಿಸಿದಾಗ ಹೊಟ್ಟಿನ ಪ್ರಮಾಣ ಕಡಿಮೆಯಿದ್ದು ಅನ್ನವು ಪಟೇಲ್ ತಳಿಗಿಂತ ಅಧಿಕ ರುಚಿಕರವಾಗಿರುವ ಸಂಗತಿಯೂ ತಿಳಿಯಿತು. ಹೀಗೆ ತಮ್ಮ ತಂದೆಯಿಂದ ಕಲಿತ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಅನುಸರಿಸಿ, ಹಲವು ವರ್ಷಗಳ ಕಾಲ ಸೂಕ್ಷ್ಮ ಆಯ್ಕೆ ಮತ್ತು ತಳಿ ಸಂವರ್ಧನೆಯ ಮೂಲಕ ಪ್ರಯೋಗ ನಡೆಸುತ್ತಾ ಬಂದ ಅವರು 1990ರ ಹೊತ್ತಿಗೆ ಹೊಸ ತಳಿಯನ್ನು ಸ್ಥಿರಗೊಳಿಸಿದರು. ಆ ವೇಳೆಗೆ ಹೊಸ ತಳಿಯ ಭತ್ತವನ್ನು ಬೀಜದ ಕಾಳುಗಳಾಗಿ ಮಾರುವಷ್ಟು ಇಳುವರಿ ಬಂದಿತ್ತು. ಅದಕ್ಕೂ ಮುನ್ನ ತಾವು ಅಭಿವೃದ್ಧಿಪಡಿಸಿದ ಹೊಸ ತಳಿಯ ಭತ್ತವನ್ನು ಗ್ರಾಮದ ಇತರ ರೈತರ ಜೊತೆ ಹಂಚಿಕೊಂಡು ಅವರೂ ಬೆಳೆಯಲು ಪ್ರೋತ್ಸಾಹ ನೀಡಿದರು. ರೈತರ ಗದ್ದೆಗಳಲ್ಲಿ ಈ ಹೊಸ ತಳಿಯ ಇಳುವರಿಯ ಫಲಿತಾಂಶ ಪುನರಾವರ್ತನೆಯಾಯಿತು. ಈ ಗುಣಮಟ್ಟ ಬೀಜಗಳಿಗೆ ಬಾಯಿ ಪ್ರಚಾರ ದೊರೆತು ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿತು. ಇದರ ಪ್ರಸಿದ್ಧಿಯನ್ನು ಕೇಳಿದ ಭೀಮರಾವ್ ಶಿಂಧೆ ಎಂಬ ದೊಡ್ಡ ಹಿಡುವಳಿಯ ರೈತನೊಬ್ಬ 150 ಕೆ.ಜಿ ಬಿತ್ತನೆ ಬೀಜ ಕೊಂಡು ನಾಲ್ಕು ಎಕರೆಯಲ್ಲಿ ಬೆಳೆದಾಗ, ಎಕರೆಗೆ ಹನ್ನೆರಡು ಕ್ವಿಂಟಾಲ್ ಬಂಪರ್ ಇಳುವರಿ ಪಡೆದ. ಆಗ ಹೊಸ ತಳಿಗೆ ಮತ್ತಷ್ಟು ಪ್ರಚಾರ ದೊರೆಯಿತು. ಆ ಕಾಲದಲ್ಲಿ ಭತ್ತದ ರಾಷ್ಟ್ರೀಯ ಗರಿಷ್ಠ ಇಳುವರಿ ಎಕರೆಗೆ 9 ಕ್ವಿಂಟಾಲ್ ಇತ್ತು. ಸಾಮಾನ್ಯ ಸರಾಸರಿಗಿಂತ ಶೇ.33ರಷ್ಟು ಅಧಿಕ ಇಳುವರಿ ಬಂದದ್ದು ಪವಾಡವೇ ಆಗಿತ್ತು. ಭೀಮರಾವ್ ಶಿಂಧೆ ತಾನು ಬೆಳೆದ ಭತ್ತವನ್ನು ಚಂದ್ರಾಪುರ ಜಿಲ್ಲೆಯ ತಲೋಡಿ ಪಟ್ಟಣದ ವ್ಯಾಪಾರಿಗೆ ಮಾರಿದರು. ಮಾರುಕಟ್ಟೆಯಲ್ಲಿ ರೈತರು ಈ ತಳಿಯ ಬೀಜಕ್ಕೆ ಮುಗಿಬಿದ್ದರು. ಮಾರಲು ಈ ಹೊಸ ತಳಿಗೊಂದು ಹೆಸರು ಬೇಕಿತ್ತು. ಆ ಕಾಲದಲ್ಲಿ ಎಚ್‌ಎಂಟಿ ಗಡಿಯಾರದ ಹೆಸರು ಜನಸಾಮಾನ್ಯರಲ್ಲಿ ಚಿರಪರಿಚಿತವೂ ಮತ್ತು ಅದನ್ನು ಧರಿಸುವುದು ಎಲ್ಲರ ಹಂಬಲವೂ ಆಗಿತ್ತು. ಆ ವ್ಯಾಪಾರಿಯು ಈ ಹೊಸ ತಳಿಗೆ ‘ಎಚ್‌ಎಂಟಿ -ಸೋನಾ’ ಎಂಬ ಹೆಸರಿಟ್ಟು ಮಾರತೊಡಗಿದ. ದಾದಾಜಿ ಕಂಡುಹಿಡಿದ ಎಚ್.ಎಂ.ಟಿ. ಭತ್ತದ ತಳಿಯು ನಾಮಕರಣಗೊಂಡದ್ದು ಹೀಗೆ.

ವರ್ಷಗಳು ಉರುಳಿದಂತೆ ಎಚ್‌ಎಂಟಿ ತಳಿಯ ಜನಪ್ರಿಯತೆ ಹೆಚ್ಚಾಯಿತು. ಅದನ್ನು ಬೆಳೆಯುವ ವಿಸ್ತೀರ್ಣ ಕೂಡ ವಿಸ್ತರಿಸಿತು. ರೈತನೊಬ್ಬ ಅಭಿವೃದ್ಧಿಪಡಿಸಿದ ಭತ್ತದ ತಳಿಯ ಜನಪ್ರಿಯತೆಯು ಮಹಾರಾಷ್ಟ್ರದ ಅಕೋಲದಲ್ಲಿರುವ ಕೃಷಿ ವಿಶ್ವವಿದ್ಯಾಲಯವಾದ ಪಂಜಾಬ್‌ರಾವ್ ಕೃಷಿ ವಿದ್ಯಾಪೀಠಕೂ (ಪಿಕೆವಿ) ತಲುಪಿತು. ಪಿಕೆವಿ ವ್ಯಾಪ್ತಿಯಲ್ಲಿರುವ ಸಿಂದೇವಾಹಿ ಭತ್ತದ ಸಂಶೋಧನಾ ಕೇಂದ್ರದಿಂದ ವಿಜ್ಞಾನಿಯೊಬ್ಬರು 1994ರಲ್ಲಿ ಖೋಬ್ರಗಡೆ ಅವರನ್ನು ಭೇಟಿ ಮಾಡಿ ಐದು ಕೆ.ಜಿ ಎಚ್‌ಎಂಟಿ ಭತ್ತವನ್ನು ಪ್ರಯೋಗಕ್ಕಾಗಿ ತೆಗೆದುಕೊಂಡು ಹೋದರು. ಮುಂದೆ ಸಂಶೋಧನಾ ಕೇಂದ್ರದಲ್ಲಿ ಅದನ್ನು ಅಭಿವೃದ್ಧಿ ಪಡಿಸಿದ ತಳಿಕಾರರು 1998ರಲ್ಲಿ ಪಿಕೆವಿ-ಎಚ್‌ಎಂಟಿ ಎಂಬ ತಳಿಯನ್ನು ಬಿಡುಗಡೆ ಮಾಡಿದರು. ಆದರೆ ಈ ತಳಿಯ ಅಭಿವೃದ್ದಿಗೆ ಮೂಲ ಸಂಪನ್ಮೂಲ ಒದಗಿಸಿದ ದಾದಾಜಿ ರಾಮಾಜಿ ಖೋಬ್ರಗಡೆ ಅವರ ಕೊಡುಗೆಯನ್ನು ಸ್ಮರಿಸಲಿಲ್ಲ. ಪಿವಿಕೆ ಹೊಸ ತಳಿಯು ಅದು ತಾನು ಅಭಿವೃದ್ಧಿಪಡಿಸಿದ ತಳಿ ಎಂದೇ ಹಕ್ಕು ಸಾಧಿಸಿತು. ಮೂಲ ಬಿತ್ತನೆಯನ್ನು ಖೋಬ್ರಗಡೆಯವರಿಂದ ತಂದದ್ದು ನಿಜವಾದರೂ ಅವು ‘ಅಶುದ್ಧ’ ತಳಿಯಾದ ಕಾರಣ, ತಾವು ವೈಜ್ಞಾನಿಕ ವಿಧಾನಗಳ ಮೂಲಕ ಮೂಲ ತಳಿಯಲ್ಲಿದ್ದ ಕೆಲವು ಅನಪೇಕ್ಷಣೀಯ ಅಂಶಗಳನ್ನು ತೆಗೆದು, ಹೆಚ್ಚು ಇಳುವರಿ ಬರುವಂತೆ ಅಭಿವೃದ್ಧಿಪಡಿಸಿರುವುದರಿಂದ ತಮ್ಮ ತಳಿಯನ್ನು ‘ಶುದ್ಧೀಕರಿಸಿದ್ದೇವೆ’ ಎಂದು ಹೇಳಿಕೊಂಡರು. ಖೋಬ್ರಗಡೆ ಅವರನ್ನು ಮೂಲ ತಳಿಕಾರರೆಂದು ಗುರುತಿಸಲಿಲ್ಲ. ಯಾವುದೇ ಆರ್ಥಿಕ ಪ್ರಯೋಜನವನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದರು. ಆದರೆ ಈ ಹೊಸ ತಳಿ ಮತ್ತು ದಾದಾಜಿ ಅವರ ತಳಿಗೂ ಗುಣಮಟ್ಟದಲ್ಲಿ ಯಾವುದೇ ಗಣನೀಯ ವ್ಯತ್ಯಾಸ ಇರಲಿಲ್ಲ. ಆಗಿನ್ನೂ ಬೌದ್ಧಿಕ ಆಸ್ತಿಯ ಹಕ್ಕುಗಳು ಜಾರಿಯಲ್ಲಿರಲಿಲ್ಲ.

101950589 dadaji khobragade 8 photo deonath gandate
ಭತ್ತದ ತಳಿ ಕುರಿತು ಅನುಭವವನ್ನು ಹಂಚಿಕೊಳ್ಳುತ್ತಿರುವ ದಾದಾಜಿ

ಇದು ಖೋಬ್ರಗಡೆಯವರಿಗೆ ಆಘಾತವನ್ನುಂಟು ಮಾಡಿತು. ತಮ್ಮ ಏಳು ವರ್ಷಗಳ ಪರಿಶ್ರಮವನ್ನು ಸರ್ಕಾರದ ಸಂಸ್ಥೆಯೊಂದು ತನ್ನದೆಂದು ಹೇಳಿಕೊಂಡದ್ದು ಅವರಿಗೆ ಮೋಸವೆಂದೇ ಅನಿಸಿತು. ಪಿಕೆವಿ ವಿಶ್ವವಿದ್ಯಾಲಯವು ಖೋಬ್ರಗಡೆಯವರನ್ನು ತಳಿಕಾರರೆಂದು ಮಾನ್ಯತೆ ಮಾಡದ ಕ್ರಮವು ಈ ದೇಶದಲ್ಲಿ ಬೀಜವನ್ನು ಸಂರಕ್ಷಿಸಿಕೊಂಡು, ಜೀವವೈವಿಧ್ಯವನ್ನು ಕಾಪಾಡುತ್ತಾ ಕೃಷಿ ಬೆಳವಣಿಗೆಗೆ ಮೂಲ ಕಾರಣಕರ್ತರಾದ ರೈತರನ್ನು ವಿಜ್ಞಾನಿ ವೃಂದ ಮತ್ತು ವೈಜ್ಞಾನಿಕ ಸಂಸ್ಥೆಗಳು ಅವಗಣನೆ ಮಾಡುತ್ತಿರುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು.

ಇದನ್ನು ಓದಿದ್ದೀರಾ?: ಯುಗಧರ್ಮ | ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಷ್ಟು ಭಾರತೀಯ?

ಹಸಿರು ಕ್ರಾಂತಿಯು ನಮ್ಮ ಕೃಷಿ ವ್ಯವಸ್ಥೆಗೆ ಆಳವಾಗಿ ಇಳಿಯುವವರೆಗೂ ರೈತರು ತಮ್ಮ ಬಿತ್ತನೆ ಬೀಜವನ್ನು ತಾವೇ ಉತ್ಪಾದಿಸಿ ಸಂರಕ್ಷಿಸಿಕೊಂಡು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಮಾರುಕಟ್ಟೆಯಿಂದ ಬಿತ್ತನೆ ಬೀಜ ಕೊಳ್ಳುವ ಪದ್ಧತಿ ಆರಂಭವಾದದ್ದು ಮಿಶ್ರತಳಿ ಮತ್ತು ಸುಧಾರಿತ ಬೇಸಾಯ ಪದ್ಧತಿ ಆರಂಭವಾದ ನಂತರವೇ. ಖೋಬ್ರಗಡೆಯರಂಥ ಕೋಟ್ಯಂತರ ರೈತರು ನಮ್ಮ ದೇಶದ ಬೀಜದ ಸಂಪತ್ತನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆಯೇ ಸಂರಕ್ಷಿಸುವ ಪರಂಪರೆಯ ಕೊಂಡಿಯಾಗಿದ್ದರು. ಒಂದು ವೇಳೆ ಖೋಬ್ರಗಡೆಯವರಿಗೆ ಬೀಜದ ಹಕ್ಕಿನ ಬಗ್ಗೆ ತಿಳಿವಳಿಕೆ ಇದ್ದರೂ ಅದಕ್ಕೆ ಪೇಟೆಂಟ್ ಮಾಡಲು ಒಪ್ಪುತ್ತಿರಲಿಲ್ಲ. ಮುಂದೆ ಬೌದ್ಧಿಕ ಆಸ್ತಿಗಳ ಹಕ್ಕು ಜಾರಿಯಾದ ನಂತರವೂ ಅನಾದಿಕಾಲದಿಂದಲೂ ಭಾರತದಲ್ಲಿ ರೈತರು ಸಂಶೋಧನೆಗಳ ಫಲಿತಗಳನ್ನು/ಆವಿಷ್ಕಾರಗಳನ್ನು ಸಮುದಾಯದ ಒಳಿತಿಗಾಗಿ ಮುಕ್ತವಾಗಿ ಹಂಚಿಕೊಂಡು ಬರುತ್ತಿರುವುದರಿಂದ ಅವು ಸಮುದಾಯದ ಒಡೆತನಕ್ಕೆ ಸೇರಬೇಕಾದವು ಎಂದೇ ಅವರು ನಂಬಿದ್ದರು. ಆದರೂ ಬೌದ್ಧಿಕ ಹಕ್ಕಿನ ಪ್ರಯೋಜನ ದೊರೆತಿದ್ದರೆ ಖೋಬ್ರಗಡೆ ಅವರಿಗೆ ಆಗುತ್ತಿದ್ದ ಅನ್ಯಾಯವಾದರೂ ನಿಲ್ಲುತ್ತಿತ್ತು.

(ನಾಳೆ ಮುಂದಿನ ಭಾಗ)

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

Download Eedina App Android / iOS

X