“ಡಿಸೆಂಬರ್ ೨೭ ರಂದು ಕಳೆದ ವರ್ಷ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ನೇತೃತ್ವದಲ್ಲಿ ಹೋರಾಟದ ನಡೆಸಿದ ಫಲವಾಗಿ ರಾಜ್ಯ ಸರ್ಕಾರ ೬೦ ಮತ್ತು ೪೦ ಅನುಪಾತದಲ್ಲಿ ಶೇಕಡ ೬೦ ರಷ್ಟು ಕನ್ನಡದಲ್ಲಿ ನಾಮಫಲಕಗಳನ್ನು ಹಾಕಬೇಕೆಂದು ಸರ್ಕಾರ ಆದೇಶ ಮಾಡಿದೆ. ಕೆಲವು ಕಾಲ ಆದೇಶ ಪಾಲಿಸುವಂತೆ ನಾಟಕ ಮಾಡಿದ ಕೆಲವು ಸಂಸ್ಥೆ, ವ್ಯಾಪಾರಿಗಳು ಮತ್ತು ಹೊಸ ಉದ್ದಿಮೆದಾರರು ಪುನಃ ಕನ್ನಡ ಕಡೆಗಣನೆ ಮಾಡಿ ಆಂಗ್ಲಫಲಕ ಹೆಚ್ಚಾಗಿ ಬಳಕೆ ಮಾಡಿದ್ದಾರೆ. ಮತ್ತೆ ತಲೆಯೆತ್ತಿದ ಆಂಗ್ಲ ನಾಮಫಲಕಗಳ ತೆರವುಗೊಳಿಸಿ, ಶೇ ೬೦ ಕನ್ನಡ ಬಳಸಬೇಕು. ಇಲ್ಲದಿದ್ದರೆ (ಕರವೇ) ಕರ್ನಾಟಕ ರಕ್ಷಣಾ ವೇದಿಕೆಯಿಂದಲೇ ನಾಮಫಲಕ ತೆರವು ಅಥವಾ ಕಿತ್ತು ಹಾಕುವ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಎಚ್ಚರಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ವರ್ಷಗಳಿಂದ ಆಂಗ್ಲ ನಾಮಫಲಕಗಳ ಮತ್ತು ಪರಭಾಷೆಗಳ ಫಲಕಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ. ಇದರ ಜೊತೆಗೆ ಕಳೆದ ವರ್ಷ ನಡೆಸಿದ ಹೋರಾಟದಿಂದ ಸರ್ಕಾರ ಕನ್ನಡಪರ ಆದೇಶ ಹೊರಡಿಸಿದೆ. ಅದರಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಆದೇಶ ನೀಡಿದ್ದರೂ ಸಹ ಕೆಲವು ಅಂಗಡಿಯ ನಾಮಫಲಕಗಳು, ಜಾಹೀರಾತು ಫಲಕಗಳು, ಬ್ಯಾಂಕು ಮತ್ತು ವಿಮಾ ಕಂಪನಿಗಳು ಆಂಗ್ಲ ನಾಮಫಲಕವನ್ನು ಹಾಕಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯು ಖಂಡಿಸುತ್ತದೆ” ಎಂದು ಕಿಡಿಕಾರಿದರು.
“ಮಹಾನಗರ ಪಾಲಿಕೆ ಆಯುಕ್ತರು ಕೂಡಲೇ ನಗರದಲ್ಲಿರುವ ಜಾಹೀರಾತು ಫಲಕಗಳು ಮತ್ತು ಅಂಗಡಿ, ಬ್ಯಾಂಕಿನ ನಾಮಫಲಕಗಳು ತೆರವುಗೊಳಿಸಿ ಶೇಕಡ ೬೦ ರಷ್ಟು ಕನ್ನಡದಲ್ಲಿ ನಾಮಫಲಕಗಳನ್ನು ಹಾಕಿಸಬೇಕು. ಇಲ್ಲವಾದರೆ ಶೀಘ್ರದಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಅಂತಹ ನಾಮಫಲಕಗಳನ್ನು ಕಿತ್ತು ಹಾಕಲು ಹೋರಾಟ ಹಮ್ಮಿಕೊಳ್ಳಲಾಗುವುದು” ಎಚ್ಚರಿಕೆ ನೀಡಿದ್ದಾರೆ.