ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಡಾಕ್ಟರ್‌ಸ ಸೆಲ್ ಉಪಾಧ್ಯಕ್ಷರೂ ಆದ, ಕರ್ನಾಟಕ ಕುಂಭ ಕುಲಾಲ ಸಂಘದ ಅಧ್ಯಕ್ಷರಾದ ಡಾ.ಶ್ರೀನಿವಾಸನ್ ವೇಲು ಅವರನ್ನು ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ.
ನನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಕ್ಕಾಗಿ 34 ಅಧ್ಯಕ್ಷರನ್ನು ಹಾಗೂ 10 ಮಂದಿ ಉಪಾಧ್ಯಕ್ಷರನ್ನು ನೇಮಿಸಿ ಆದೇಶಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು 34 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಿ ಅಂಕಿತ ಹಾಕಿದ್ದಾರೆ.
ಮೂಲತಃ ಬೆಂಗಳೂರಿನ ಕೊರಮಂಗಲದವರಾದ ಡಾ.ಶ್ರೀನಿವಾಸನ್ ವೇಲು ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಬೆಂಗಳೂರಿನಲ್ಲಿ ಶ್ರೀನಿವಾಸನ್ ಹೆಲ್ತ್ ಕೇರ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ತಥಾಗತ ಹೃದಯ ಆಸ್ಪತ್ರೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕುಂಭ ವೈದ್ಯರ ಕೂಟ, ಅಖಿಲ ಭಾರತ ಕುಂಬಾರರ ಮಹಾಸಭಾ, ಕರಾವಳಿ ಕುಂಬಾರರ ಯುವ ವೇದಿಕೆ ಸಂಘಟಿಸಿ ಕುಂಬಾರ ಸಮುದಾಯದ ಏಳಿಗೆಗಾಗಿ ದುಡಿದಿದ್ದಾರೆ.
ಸುಮಾರು ಒಂದೂವರೆ ದಶಕದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದು, ಕಳೆದ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2024ರಲ್ಲಿ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ವಾರ್ ರೂಂ ಆಡ್ಮಿನ್ ಆಗಿ ಕೆಲಸ ಮಾಡಿದ್ದಾರೆ.
ಕೆಪಿಸಿಸಿ ಆಯೋಜಿಸಿದ ಮೇಕೆ ದಾಟು ಪಾದಯಾತ್ರೆ ಹಾಗೂ ರಾಹುಲ್ ಗಾಂಧಿ ನೇತ್ರತ್ವದಲ್ಲಿ ಕರ್ನಾಟಕದಲ್ಲಿ ನಡೆದ ಭಾರತ್ ಜೋಡೊ ಪಾದಯಾತ್ರೆ ವೇಳೆ ಆಂಬ್ಯುಲೆನ್ಸ್ ಹಾಗೂ ತುರ್ತು ವೈದ್ಯಕೀಯ ಸೇವೆ ಜವಾಬ್ದಾರಿಯನ್ನು ನಿರ್ವಹಿಸಿದರು.
ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಕೆಪಿಸಿಸಿ ಡಾಕ್ಟರ್‌ಸ ಸೆಲ್ ಸಹಯೋಗದಲ್ಲಿ ಉಚಿತ ಆನ್‌ಲೈನ್ ಸಲಹೆ, ಸಹಾಯವಾಣಿ ಪ್ರಾರಂಭಿಸಿದರು. ಉಚಿತ ಔಷಧಿ ವಿತರಣೆ, ರಾಜ್ಯಾದ್ಯಂತ ಆರೋಗ್ಯ ಶಿಬಿರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : ಈದಿನ.ಕಾಮ್ ಗ್ರೌಂಡ್ ರಿಪೋರ್ಟ್ |ತೆವಳುತ್ತಿರುವ ಜಾತಿವಾರು ಸಮೀಕ್ಷೆ- ಸಮಸ್ಯೆಗಳ ಸುರಿಮಳೆ, ಶೇ.2ರಷ್ಟು ಗುರಿ ಮುಟ್ಟಲೂ ವಿಫಲ!
ʼಕುಂಬಾರ ಜನಾಂಗದಲ್ಲಿ ಕುಲಕಸುಬು ಮಾಡುವವರಿಗೆ ಸಾಲ, ಕೌಶಲ್ಯ ತರಬೇತಿ ನೀಡಿ ಉತ್ತೇಜಿಸುವ ಜೊತೆಗೆ ಅವರನ್ನು ಆರ್ಥಿಕವಾಗಿ ಬಲ ತುಂಬಲು ಸಹಾಯಧನ ಒದಗಿಸುವುದು. ಕುಂಬಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಗಾಗಿ ಶ್ರಮಿಸಲಾಗುವುದುʼ ಎಂದು ಡಾ.ಶ್ರೀನಿವಾಸನ್ ಅವರು ʼಈದಿನʼ ಜೊತೆ ಮಾತನಾಡಿ ತಿಳಿಸಿದ್ದಾರೆ.